ಸುವಾರ್ತೆಯನ್ನು ಎಲ್ಲೆಡೆಯೂ ಸಾರಿರಿ
1 ಆದಿ ಕ್ರೈಸ್ತರು ಸುವಾರ್ತೆಯನ್ನು ಎಲ್ಲೆಡೆಯೂ ಸಾರಿದರು. ಅವರು ಎಷ್ಟು ಹುರುಪುಳ್ಳವರಾಗಿದ್ದರೆಂದರೆ, ಯೇಸು ಕ್ರಿಸ್ತನ ಪುನರುತ್ಥಾನದ ನಂತರ 30 ವರ್ಷಗಳೊಳಗೆ ರಾಜ್ಯ ಸಂದೇಶವು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪ”ಟ್ಟಿತ್ತು.—ಕೊಲೊ. 1:23.
2 ಯೆಹೋವನ ಇಂದಿನ ಹುರುಪಿನ ಸೇವಕರಿಗೆ ಅದೇ ಉದ್ದೇಶವಿದೆ—ರಾಜ್ಯ ಸುವಾರ್ತೆಯೊಂದಿಗೆ ಸಾಧ್ಯವಿರುವ ಪ್ರತಿಯೊಬ್ಬರನ್ನು ತಲಪುವುದು. ಈ ಗುರಿಯನ್ನು ಸಾಧಿಸಲು ನಮಗೆ ಯಾವುದು ಸಹಾಯಮಾಡಬಲ್ಲದು? ಹೆಚ್ಚೆಚ್ಚು ಜನರು ಪೂರ್ಣ ಸಮಯ ಕೆಲಸಮಾಡುತ್ತಿದ್ದಾರೆ ಮತ್ತು ನಾವು ಸಂದರ್ಶಿಸುವಾಗ ಅನೇಕವೇಳೆ ಮನೆಯಲ್ಲಿರುವುದಿಲ್ಲ. ಇದು ಮನೆಯಲ್ಲಿಲ್ಲದವರ ಒಂದು ಒಳ್ಳೆಯ ರೆಕಾರ್ಡನ್ನು ಇಡುವ ಮತ್ತು ಅವರನ್ನು ಪುನಃ ಸಂದರ್ಶಿಸುವುದರಲ್ಲಿ ಆತ್ಮನಿಷ್ಠೆಯುಳ್ಳವರಾಗಿರುವ ಅಗತ್ಯಕ್ಕೆ ಒತ್ತುಹಾಕುತ್ತದೆ. ಆದರೂ ಕೆಲವೊಮ್ಮೆ, ಪದೇ ಪದೇ ಸಂದರ್ಶಿಸುವ ಹೊರತೂ, ನಿರ್ದಿಷ್ಟ ಮನೆಗಳಲ್ಲಿ ನಾವು ಯಾರನ್ನೂ ಕಂಡುಕೊಳ್ಳಲು ಶಕ್ತರಾಗಿರುವುದಿಲ್ಲ. ಅವರು ಎಲ್ಲಿದ್ದಾರೆ? ಅವರು ಕೆಲಸ ಮಾಡದೇ ಇರುವಾಗ, ಅವರು ಪ್ರಯಾಣಿಸುತ್ತಿರಬಹುದು, ಶಾಪಿಂಗ್ ಮಾಡುತ್ತಿರಬಹುದು, ಅಥವಾ ಯಾವುದೊ ರೀತಿಯ ಮನೋರಂಜನೆಯನ್ನು ಬೆನ್ನಟ್ಟುತ್ತಿರಬಹುದು. ಅವರ ಮಧ್ಯೆ ಇರುವ ಅರ್ಹ ವ್ಯಕ್ತಿಗಳನ್ನು ರಾಜ್ಯ ಸಂದೇಶದೊಂದಿಗೆ ಹೇಗೆ ತಲಪಲಾಗುತ್ತಿದೆ?—ಮತ್ತಾ. 10:11.
3 ಕೆಲವರು ಅವರ ಉದ್ಯೋಗದ ಸ್ಥಳದಲ್ಲಿ ಸಂಪರ್ಕಿಸಲ್ಪಡುತ್ತಿದ್ದಾರೆ. ಚಿಕ್ಕ ಪಟ್ಟಣಗಳಲ್ಲೂ, ಅನೇಕ ಜನರು ದಿನದ ಹೆಚ್ಚಿನ ಭಾಗವನ್ನು ಎಲ್ಲಿ ಕಳೆಯುತ್ತಾರೊ ಅಂತಹ ವ್ಯಾಪಾರದ ವಿಭಾಗವೊಂದಿರುತ್ತದೆ. ನಗರಗಳಲ್ಲಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಅಥವಾ ಆಫೀಸ್ ಕಟ್ಟಡಗಳಲ್ಲಿ ಕೆಲಸಮಾಡುತ್ತಿರುವ ಮತ್ತು ಉಚ್ಚ ಭದ್ರತೆಯ ವಾಸದಕೋಣೆಗಳಲ್ಲಿ ಅಥವಾ ಕಾಲನಿಗಳಲ್ಲಿ ಜೀವಿಸುತ್ತಿರುವ ಜನರು—ಅನೇಕರು ಪ್ರಥಮ ಸಲ—ಒಂದು ಸಾಕ್ಷಿಯನ್ನು ಪಡೆಯುತ್ತಿದ್ದಾರೆ. ವಾರಾಂತ್ಯಗಳಲ್ಲಿ, ಉದ್ಯಾನವನಗಳಲ್ಲಿ, ಸಮುದ್ರ ತೀರದಲ್ಲಿ, ಸಿನಿಮಾ ಮಂದಿರಗಳ ಹೊರಗೆ ವಿಶ್ರಮಿಸುತ್ತಿರುವಾಗ ಅಥವಾ ವಾಹನ ನಿಲ್ಲಿಸುವ ಜಾಗಗಳು ಅಥವಾ ಖರೀದಿ ಕ್ಷೇತ್ರಗಳಲ್ಲಿ ಕಾಯುತ್ತಿರುವಾಗ ಸಂಪರ್ಕಿಸಲ್ಪಟ್ಟಿರುವ ಕೆಲವರು, ಸುವಾರ್ತೆಗೆ ಅನುಕೂಲವಾದ ಪ್ರವೃತ್ತಿಯುಳ್ಳವರಾಗಿರುವುದನ್ನು ಕಂಡುಕೊಳ್ಳಲಾಗಿದೆ.
4 ವೃದ್ಧಿಯಾಗುತ್ತಿರುವ ಸಂಖ್ಯೆಯ ಪ್ರಚಾರಕರು, ಎಲ್ಲೆಲ್ಲಿ ಜನರು ಕಂಡುಬರುತ್ತಾರೊ ಅಲ್ಲಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷಿನೀಡಲು ಒಂದು ವಿಶೇಷ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮನೆಯಿಂದ ಮನೆಯಂತಹ, ಹೆಚ್ಚು ಔಪಚಾರಿಕ ಸನ್ನಿವೇಶಗಳಲ್ಲಿ ಸಾರುವ ಅಭ್ಯಾಸವಾಗಿದ್ದುದರಿಂದ ಆರಂಭದಲ್ಲಿ, ಈ ಸಾಕ್ಷಿಗಳಿಗೆ ಹಿಂಜರಿಕೆ ಮತ್ತು ಕೊಂಚಮಟ್ಟಿಗೆ ಭಯದ ಅನಿಸಿಕೆಯಾಯಿತು. ಈಗ ಅವರಿಗೆ ಹೇಗನಿಸುತ್ತದೆ?
5 “ಅದು ನನ್ನ ಶುಶ್ರೂಷೆಯನ್ನು ಪುನಚೈತನ್ಯಗೊಳಿಸಿದೆ!” ಎಂದು ಒಬ್ಬ ಅನುಭವಿ ಸಹೋದರನು ಉದ್ಗರಿಸುತ್ತಾನೆ. ಇನ್ನೊಬ್ಬನು ಕೂಡಿಸುವುದು: “ಅದು ನನಗೆ ಕೇಂದ್ರೀಕರಿಸುವಂತೆ ಮಾಡುತ್ತದೆ.” ಒಬ್ಬ ವೃದ್ಧ ಪಯನೀಯರನು ಅವಲೋಕಿಸುವುದು: “ಅದು ಮಾನಸಿಕವಾಗಿ, ಶಾರೀರಿಕವಾಗಿ, ಮತ್ತು ಆತ್ಮಿಕವಾಗಿ ಚೇತನಗೊಳಿಸುವಂತಹದ್ದಾಗಿರುತ್ತದೆ, . . . ಮತ್ತು ನಾನು ಇನ್ನೂ ಬೆಳೆಯುತ್ತಾ ಇದ್ದೇನೆ.” ಯುವ ಜನರು ಸಹ ಈ ಆನಂದದಾಯಕ ಕೆಲಸದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಒಬ್ಬ ಯುವಕನು ತನ್ನನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿಕೊಳ್ಳುತ್ತಾನೆ: “ಅಷ್ಟೊಂದು ಜನರೊಂದಿಗೆ ನನಗೆ ಮಾತಾಡಲು ಸಿಗುವುದರಿಂದ ಅದು ವಿನೋದವಾಗಿದೆ.” ಇನ್ನೊಬ್ಬನು ಹೇಳುವುದು: “ನಾನು ಹಿಂದೆಂದಿಗಿಂತಲೂ ಹೆಚ್ಚು ಸಾಹಿತ್ಯವನ್ನು ನೀಡುತ್ತಿದ್ದೇನೆ!” ಇದೆಲ್ಲವು, ಯಾವ ಟೆರಿಟೊರಿಯು ಪದೇ ಪದೇ ಆವರಿಸಲ್ಪಡುತ್ತದೊ ಅಲ್ಲಿ ಸಂಭವಿಸುತ್ತಿದೆ.
6 ಸಂಚರಣ ಮೇಲ್ವಿಚಾರಕರು ಮುಂದಾಳುತ್ವವನ್ನು ವಹಿಸುತ್ತಿದ್ದಾರೆ: “ಈ ಲೋಕದ ದೃಶ್ಯವು ಬದಲಾಗುತ್ತಿ”ರುವುದನ್ನು (NW) ಗ್ರಹಿಸುತ್ತಾ, ಸಾಧ್ಯವಿರುವಷ್ಟು ಹೆಚ್ಚು ಜನರನ್ನು ಸುವಾರ್ತೆಯೊಂದಿಗೆ ತಲಪಲು ಸಾಧ್ಯವಾಗುವಂತೆ ಸಂಚರಣ ಮೇಲ್ವಿಚಾರಕರು ವಾರದಿಂದ ವಾರಕ್ಕೆ ತಮ್ಮ ಕ್ಷೇತ್ರ ಸೇವಾ ಕಾರ್ಯತಖ್ತೆಯನ್ನು ಸರಿಹೊಂದಿಸಿಕೊಳ್ಳುವಂತೆ ಸೊಸೈಟಿಯು ಇತ್ತೀಚೆಗೆ ಸಲಹೆ ಕೊಟ್ಟಿತು. (1 ಕೊರಿಂ. 7:31) ಅನೇಕ ವರ್ಷಗಳಿಂದ, ಸರ್ಕಿಟ್ ಮೇಲ್ವಿಚಾರಕರು ವಾರದ ದಿನದ ಮುಂಜಾನೆಗಳನ್ನು ಮನೆಯಿಂದ ಮನೆಯ ಕೆಲಸದಲ್ಲಿ ಒಳಗೂಡಲು ಬದಿಗಿರಿಸುತ್ತಿದ್ದಾಗ, ಮಧ್ಯಾಹ್ನಗಳು ಪುನರ್ಭೇಟಿಗಳನ್ನು ಮಾಡಲು ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಲು ಮೀಸಲಾಗಿಡಲ್ಪಡುತ್ತಿದ್ದವು. ಈ ದೇಶದ ಹೆಚ್ಚಿನ ಭಾಗಗಳಲ್ಲಿ, ಆ ಕಾರ್ಯತಖ್ತೆಯು ಇನ್ನೂ ವ್ಯಾವಹಾರಿಕವಾಗಿರಬಹುದು. ಇತರ ಕ್ಷೇತ್ರಗಳಲ್ಲಿ, ವಾರದ ದಿನಗಳ ನಿರ್ದಿಷ್ಟ ಮುಂಜಾನೆಗಳಂದು ಮನೆಯಿಂದ ಮನೆಗೆ ಕೆಲಸ ಮಾಡುವುದರಿಂದ ಏನೂ ಸಾಧಿಸಲ್ಪಡದಿರಬಹುದು. ಅಂತಹ ವಿದ್ಯಮಾನಗಳಲ್ಲಿ, ಆ ದಿನದ ಆದಿ ಭಾಗದಲ್ಲಿ ಅಂಗಡಿಯಿಂದ ಅಂಗಡಿಯ ಕಾರ್ಯ ಅಥವಾ ಬೀದಿ ಸಾಕ್ಷಿಕಾರ್ಯದಲ್ಲಿ ಒಳಗೂಡುವುದು ಒಳ್ಳೇದೆಂದು ಸಂಚರಣ ಮೇಲ್ವಿಚಾರಕನು ನಿರ್ಣಯಿಸಬಹುದು. ಅಥವಾ, ಆಫೀಸ್ ಕಟ್ಟಡಗಳಲ್ಲಿ, ಶಾಪಿಂಗ್ ಕ್ಷೇತ್ರಗಳಲ್ಲಿ, ವಾಹನ ನಿಲುಗಡೆಯ ಸ್ಥಳಗಳಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಚಿಕ್ಕ ಗುಂಪುಗಳು ಸಾಕ್ಷಿ ನೀಡುವಂತೆ ಅವನು ಏರ್ಪಡಿಸಬಹುದು. ಕ್ಷೇತ್ರ ಸೇವೆಗಾಗಿ ಲಭ್ಯವಿರುವ ಸಮಯದ ಹೆಚ್ಚು ಪರಿಣಾಮಕಾರಿಯಾದ ಉಪಯೋಗವನ್ನು ಪ್ರಚಾರಕರು ಮಾಡುವ ಮೂಲಕ, ಇನ್ನೂ ಹೆಚ್ಚು ಜನರು ಸಂಪರ್ಕಿಸಲ್ಪಡುವರು.
7 ಈ ಅಳವಡಿಸುವಿಕೆಯು ಸಂಚರಣ ಮೇಲ್ವಿಚಾರಕರು ಮತ್ತು ಪ್ರಚಾರಕರಿಂದ ಒಂದೇ ರೀತಿಯಲ್ಲಿ ಚೆನ್ನಾಗಿ ಸ್ವೀಕರಿಸಲ್ಪಟ್ಟಿದೆಯೆಂದು ವರದಿಗಳು ಸೂಚಿಸುತ್ತವೆ. ಸ್ಥಳಿಕವಾಗಿ ಗಮನದ ಅಗತ್ಯವಿರುವ ಕೆಲಸದ ವೈಶಿಷ್ಟ್ಯಗಳಲ್ಲಿ ಕೆಲವು ಪ್ರಚಾರಕರನ್ನು ತರಬೇತಿಗೊಳಿಸಲು ಹಲವಾರು ಹಿರಿಯರ ಮಂಡಲಿಗಳು ಸರ್ಕಿಟ್ ಮೇಲ್ವಿಚಾರಕನನ್ನು ಆಮಂತ್ರಿಸಿವೆ. ಸಂಚರಣ ಮೇಲ್ವಿಚಾರಕರು ಈ ಚಟುವಟಿಕೆಗಳಲ್ಲೊಂದರಲ್ಲಿ ಭಾಗವಹಿಸುವಾಗ ಅವನೊಂದಿಗೆ ಜೊತೆಗೂಡುವುದು ಈ ಪ್ರಚಾರಕರಿಗೆ ಸಹಾಯಕಾರಿಯಾಗಿರುತ್ತದೆ. ಪ್ರತಿಯಾಗಿ, ಅವರು ಇತರರಿಗೆ ತರಬೇತಿ ನೀಡಲು ಶಕ್ತರಾಗಿರುತ್ತಾರೆ. (2 ತಿಮೊ. 2:2) ಫಲಿತಾಂಶವಾಗಿ, ಈಗ ಹೆಚ್ಚಿನ ಜನರು ಸುವಾರ್ತೆಯಿಂದ ತಲಪಲ್ಪಡುತ್ತಿದ್ದಾರೆ.
8 ಸಾರುವಿಕೆಯ ಈ ಇತರ ವಿಧಗಳಲ್ಲಿ ಕೆಲವನ್ನು ಪ್ರಯತ್ನಿಸಿ ನೋಡಲು ನೀವು ಸರ್ಕಿಟ್ ಮೇಲ್ವಿಚಾರಕನು ಭೇಟಿಕೊಡುವಂತೆ ಕಾಯಬೇಕಾಗಿಲ್ಲ, ನಿಶ್ಚಯ. ನಿಮ್ಮ ಟೆರಿಟೊರಿಯಲ್ಲಿ ವ್ಯಾವಹಾರಿಕವೆಂದು ನೀವು ಕಂಡುಕೊಳ್ಳಬಹುದಾದ ವಿವಿಧ ವಿಚಾರಗಳು ಇಲ್ಲಿವೆ:
9 ಬೀದಿ ಸಾಕ್ಷಿಕಾರ್ಯ: ವಾರದ ದಿನದ ಮುಂಜಾನೆಯಂದು ನಿರ್ಜನವಾದ ಒಂದು ನಿವಾಸಿ ಕ್ಷೇತ್ರವನ್ನು ನಾವು ಸಂದರ್ಶಿಸುತ್ತಿರುವಾಗ ‘ಜನರೆಲ್ಲರು ಎಲ್ಲಿದ್ದಾರೆ?’ ಎಂದು ನಾವು ಕೆಲವೊಮ್ಮೆ ಕುತೂಹಲಪಡುತ್ತೇವೆ. ಕೆಲವರು ಹೊರಗಿನ ಕೆಲವು ಕೆಲಸಗಳನ್ನು ಅಥವಾ ಶಾಪಿಂಗ್ ಮಾಡುತ್ತಿರುವುದನ್ನು ಕಂಡುಕೊಳ್ಳಬಹುದು. ಬೀದಿ ಸಾಕ್ಷಿಕಾರ್ಯದ ಮೂಲಕ ನೀವು ಅವರನ್ನು ತಲಪಲು ಪ್ರಯತ್ನಿಸಿದ್ದೀರೊ? ಅದು ಸರಿಯಾಗಿ ಮಾಡಲ್ಪಡುವಾಗ, ಶುಶ್ರೂಷೆಯ ಈ ವೈಶಿಷ್ಟ್ಯವು ಬಹಳ ಉತ್ಪನ್ನದಾಯಕವಾಗಿರಬಲ್ಲದು. ಪತ್ರಿಕೆಗಳೊಂದಿಗೆ ಒಂದೇ ಸ್ಥಳದಲ್ಲಿ ನಿಲ್ಲುವ ಬದಲಿಗೆ, ಜನರನ್ನು ಸಮೀಪಿಸಿ, ಒಂದು ಸ್ನೇಹಮಯ ಸಂಭಾಷಣೆಯನ್ನು ಆರಂಭಿಸುವುದು ಅತ್ಯುತ್ತಮ. ಪ್ರತಿಯೊಬ್ಬ ದಾರಿಹೋಕನಿಗೂ ಸಾಕ್ಷಿಕೊಡುವ ಅಗತ್ಯವಿಲ್ಲ. ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟಿರುವ ವಸ್ತುಗಳನ್ನು ನೋಡುತ್ತಿರುವವರು, ನಿಂತಿರುವ ಕಾರ್ಗಳಲ್ಲಿರುವವರು, ಅಥವಾ ಸಾರ್ವಜನಿಕ ಸಾರಿಗೆಗಾಗಿ ಕಾಯುತ್ತಿರುವ ಜನರಂತಹ, ತರಾತುರಿಯಲ್ಲಿಲ್ಲದವರೊಂದಿಗೆ ಮಾತಾಡಿರಿ. ಆರಂಭದಲ್ಲಿ, ನೀವು ಕೇವಲ ಒಂದು ಸ್ನೇಹಮಯ ವಂದನೆಯನ್ನು ನೀಡಿ, ಪ್ರತಿಕ್ರಿಯೆಗಾಗಿ ಕಾಯಬಹುದು. ವ್ಯಕ್ತಿಯು ಮಾತಾಡಲು ಸಿದ್ಧಮನಸ್ಕನಾಗಿರುವುದಾದರೆ, ಅವನಿಗೆ ಆಸಕ್ತಿಯನ್ನು ಉಂಟುಮಾಡಬಹುದು ಎಂದು ನಿಮಗನಿಸುವ ಒಂದು ವಿಷಯದ ಮೇಲೆ ಅವನ ಅಭಿಪ್ರಾಯವನ್ನು ಕೇಳಿರಿ.
10 ಒಬ್ಬ ಸಂಚರಣ ಮೇಲ್ವಿಚಾರಕನು, ತನ್ನನ್ನೂ ತನ್ನ ಹೆಂಡತಿಯನ್ನೂ ಬೀದಿ ಸಾಕ್ಷಿಕಾರ್ಯದಲ್ಲಿ ಜೊತೆಗೂಡುವಂತೆ ಆರು ಮಂದಿ ಪ್ರಚಾರಕರನ್ನು ಆಮಂತ್ರಿಸಿದನು. ಯಾವ ಫಲಿತಾಂಶಗಳೊಂದಿಗೆ? “ನಮ್ಮ ಮುಂಜಾನೆಯು ಅದ್ಭುತಕರವಾಗಿತ್ತು!” ಎಂದು ಅವನು ವರದಿಸುತ್ತಾನೆ. “ಅಲ್ಲಿ ಜನರನ್ನು ಮನೆಯಲ್ಲಿ ಕಂಡುಕೊಳ್ಳದಿರುವ ಸಮಸ್ಯೆ ಇರಲಿಲ್ಲ. ಎಂಬತ್ತು ಪತ್ರಿಕೆಗಳು ಮತ್ತು ಅನೇಕ ಕಿರುಹೊತ್ತಗೆಗಳು ನೀಡಲ್ಪಟ್ಟವು. ನಾವು ಹಲವಾರು ಪ್ರಚೋದಕ ಸಂಭಾಷಣೆಗಳನ್ನು ನಡೆಸಿದೆವು. ಪ್ರಥಮ ಸಲ ಬೀದಿ ಕೆಲಸದಲ್ಲಿ ಒಳಗೂಡುತ್ತಿದ್ದ ಪ್ರಚಾರಕರಲ್ಲಿ ಒಬ್ಬರು, ಉದ್ಗರಿಸಿದ್ದು: ‘ನಾನು ಅನೇಕ ವರ್ಷಗಳಿಂದ ಸತ್ಯದಲ್ಲಿದ್ದೇನೆ ಮತ್ತು ನಾನು ಏನನ್ನು ತಪ್ಪಿಸಿಕೊಳ್ಳುತ್ತಿದ್ದೆನೆಂಬುದನ್ನು ಗ್ರಹಿಸಿರಲಿಲ್ಲ!’ ಆ ವಾರದ ಅಂತ್ಯದೊಳಗೆ, ಸಭೆಯ ಪತ್ರಿಕೆಗಳ ಮಿತಿಮೀರಿದ ದಾಸ್ತಾನು ಬರಿದಾಗಿಹೋಯಿತು.”
11 ಮುಂದಿನ ಸಭೆಯಲ್ಲಿ ಸೇವೆಸಲ್ಲಿಸುತ್ತಿದ್ದಾಗ, ಹಲವಾರು ಪ್ರಚಾರಕರು ಒಂದು ಬೆಳಗ್ಗೆ ಬೇಗನೆ ಬೀದಿ ಸಾಕ್ಷಿಕಾರ್ಯದಲ್ಲಿ ಭಾಗವಹಿಸಿದರಾದರೂ ಕೇವಲ ಸೀಮಿತವಾದ ಯಶಸ್ಸನ್ನು ಗಳಿಸಿದ್ದರೆಂಬುದನ್ನು, ಅದೇ ಸಂಚರಣ ಮೇಲ್ವಿಚಾರಕನಿಗೆ ತಿಳಿದುಬಂತು. ಒಬ್ಬ ಸಹೋದರಿಯು ಇಡೀ ಸಾಕ್ಷಿಕಾರ್ಯದ ಅವಧಿಯಲ್ಲಿ ಕೇವಲ ಇಬ್ಬರು ವ್ಯಕ್ತಿಗಳೊಂದಿಗೆ ಮಾತಾಡಿದ್ದಳು, ಯಾಕಂದರೆ ಬೇರೆಲ್ಲರೂ ಕೆಲಸಕ್ಕೆ ಹೋಗಲು ಅವಸರದಲ್ಲಿದ್ದರು. ಅವರೆಲ್ಲರೂ ಬೆಳಗ್ಗೆ ಸ್ವಲ್ಪ ತಡವಾಗಿ ಅದೇ ಬೀದಿಗೆ ಹಿಂದಿರುಗುವಂತೆ ಆ ಸಂಚರಣ ಮೇಲ್ವಿಚಾರಕನು ಸಲಹೆಯಿತ್ತನು. ಅವರು ಹಾಗೆ ಮಾಡಿದರು, ಮತ್ತು ಮಧ್ಯಾಹ್ನದ ವರೆಗೆ ಅವರು ಅಲ್ಲಿ ಉಳಿದರು. ಆ ಬೆಳಗ್ಗಿನ ಪ್ರಾರಂಭದಲ್ಲಿ ಕೇವಲ ಎರಡು ಸಂಭಾಷಣೆಗಳನ್ನು ನಡೆಸಿದ್ದ ಆ ಸಹೋದರಿಯು, ಹಿಂದಿರುಗಿ ಹೋದಾಗ ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆದಳು. ಅವಳು 31 ಪತ್ರಿಕೆಗಳನ್ನು ಮತ್ತು 15 ಬ್ರೋಷರುಗಳನ್ನು ನೀಡಿ, ಏಳು ವ್ಯಕ್ತಿಗಳ ಹೆಸರು ಮತ್ತು ವಿಳಾಸಗಳನ್ನು ಪಡೆದು, ಎರಡು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಿದಳು! ಗುಂಪಿನಲ್ಲಿದ್ದ ಇತರರೂ ಅದೇ ರೀತಿಯ ಪ್ರೋತ್ಸಾಹದಾಯಕ ಫಲಿತಾಂಶಗಳನ್ನು ಪಡೆದರು.
12 ಆಸಕ್ತಿಯನ್ನು ತೋರಿಸುವ ಯಾವ ವ್ಯಕ್ತಿಯನ್ನಾದರೂ ನೀವು ಕಂಡುಹಿಡಿಯುವಾಗ, ಆ ವ್ಯಕ್ತಿಯ ಹೆಸರು ಮತ್ತು ವಿಳಾಸ ಅಥವಾ ಟೆಲಿಫೋನ್ ನಂಬರನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಮಾಹಿತಿಯನ್ನು ನೇರವಾಗಿ ಕೇಳುವ ಬದಲಿಗೆ, ನೀವು ಹೀಗೆ ಹೇಳಬಹುದು: “ನಾನು ಈ ಸಂಭಾಷಣೆಯನ್ನು ಆನಂದಿಸಿದ್ದೇನೆ. ನಾವು ಅದನ್ನು ಇನ್ನೊಂದು ಸಲ ಮುಂದುವರಿಸಸಾಧ್ಯವಿರುವ ಯಾವುದಾದರೂ ಮಾರ್ಗವಿದೆಯೊ?” ಅಥವಾ, “ನಾನು ನಿಮ್ಮನ್ನು ಮನೆಯಲ್ಲಿ ಸಂಪರ್ಕಿಸುವ ಯಾವದೇ ಮಾರ್ಗವಿದೆಯೊ?” ಎಂದು ಕೇಳಿರಿ. ಈ ರೀತಿಯಲ್ಲಿ ಸಂಪರ್ಕಿಸಲ್ಪಡುವ ಅನೇಕರು ಒಂದು ಪುನರ್ಭೇಟಿಗಾಗಿ ಒಪ್ಪಿಕೊಳ್ಳುತ್ತಾರೆ. ಉಪಯೋಗಕ್ಕಾಗಿ ಕಿರುಹೊತ್ತಗೆಗಳ ಸಾಕಷ್ಟು ಸರಬರಾಯಿಯನ್ನು ಪಡೆದಿರಲು ನಿಶ್ಚಯ ಮಾಡಿಕೊಳ್ಳಿರಿ ಮತ್ತು ಆಸಕ್ತಿಯನ್ನು ತೋರಿಸುವ ಯಾರಿಗಾದರೂ ನಮ್ಮ ಕೂಟಗಳಿಗೆ ಹಾಜರಾಗುವಂತೆ ನೀವು ಆಮಂತ್ರಿಸುತ್ತಿರುವಾಗ, ಅತಿ ಹತ್ತಿರವಿರುವ ಕೂಟದ ಸ್ಥಳ ಮತ್ತು ಕೂಟದ ಸಮಯವನ್ನು, ಪ್ರಾಯಶಃ ಒಂದು ಕಿರುಹೊತ್ತಗೆಯ ಮೇಲೆ ಬೇಗನೆ ಬರೆಯಲು ತಯಾರಾಗಿರಿ.
13 ಇನ್ನೊಂದು ಸಭೆಗೆ ನೇಮಕವಾಗಿರುವ ಟೆರಿಟೊರಿಯಲ್ಲಿ ಜೀವಿಸುತ್ತಿರುವ ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ನೀವು ಮಾತಾಡುವಲ್ಲಿ, ಅಲ್ಲಿರುವ ಸಹೋದರರು ಆಸಕ್ತಿಯನ್ನು ಅನುಸರಿಸಿ ಹೋಗಸಾಧ್ಯವಾಗುವಂತೆ ನೀವು ಆ ಮಾಹಿತಿಯನ್ನು ದಾಟಿಸಬೇಕು. ನಿಮ್ಮ ಕ್ಷೇತ್ರದಲ್ಲಿ ಸುವಾರ್ತೆಯನ್ನು ಹಬ್ಬಿಸಲು ಬೀದಿ ಸಾಕ್ಷಿಕಾರ್ಯವು ಒಂದು ಪರಿಣಾಮಕಾರಿ ರೀತಿಯಾಗಿರಬಹುದೊ? ಹಾಗಿರುವಲ್ಲಿ, ನಮ್ಮ ರಾಜ್ಯದ ಸೇವೆಯ ಜುಲೈ 1994ರ ಸಂಚಿಕೆಯಲ್ಲಿ “ಪರಿಣಾಮಕಾರಿಯಾದ ರಸ್ತೆಯ ಸಾಕ್ಷಿಕಾರ್ಯದ ಮೂಲಕ ಆಸಕ್ತರನ್ನು ಕಂಡುಕೊಳ್ಳುವುದು” ಎಂಬ ಲೇಖನವನ್ನು ಪುನರ್ವಿಮರ್ಶಿಸಿರಿ. ಅನಂತರ, ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪಲು ನಿಮ್ಮನ್ನು ಶಕ್ತರನ್ನಾಗಿ ಮಾಡುವ ದಿನದ ಒಂದು ಸೂಕ್ತ ಸಮಯದಲ್ಲಿ ಬೀದಿ ಸಾಕ್ಷಿಕಾರ್ಯದಲ್ಲಿ ಒಳಗೂಡಲು ಏರ್ಪಡಿಸಿರಿ.
14 ಸಾರ್ವಜನಿಕ ಸಾರಿಗೆಯಲ್ಲಿ ಸಾಕ್ಷಿನೀಡುವುದು: ಒಂದು ಬೆಳಗ್ಗೆ ಹಲವಾರು ಪಯನೀಯರರು, ಸ್ಥಳಿಕ ಕಾಲೇಜೊಂದರ ಬಳಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಜನರಿಗೆ ಸಾಕ್ಷಿನೀಡಲು ನಿರ್ಣಯಿಸಿದರು. ಅವರು ಕೆಲವು ಹಿತವಾದ ಸಂಭಾಷಣೆಗಳನ್ನು ನಡಸಿದರಾದರೂ, ಒಂದು ಸಮಸ್ಯೆಯಿತ್ತು. ಚರ್ಚೆಯು ಚೆನ್ನಾಗಿ ಮುಂದುವರಿಯುವ ಸಮಯದಷ್ಟಕ್ಕೆ, ಬಸ್ ಬರುತ್ತಿತ್ತು; ಹೀಗೆ ಸಂಭಾಷಣೆಯು ಥಟ್ಟನೆ ನಿಲ್ಲುತ್ತಿತ್ತು. ಬಸ್ಸನ್ನು ಹತ್ತಿ, ಅವರು ಪಟ್ಟಣದಾಚೆ ಪ್ರಯಾಣಿಸಿದಂತೆ ಪ್ರಯಾಣಿಕರಿಗೆ ಸಾಕ್ಷಿಕೊಡುವುದನ್ನು ಮುಂದುವರಿಸುವ ಮೂಲಕ ಪಯನೀಯರರು ಸಮಸ್ಯೆಯನ್ನು ಬಗೆಹರಿಸಿದರು. ಮಾರ್ಗದ ಅಂತ್ಯದಲ್ಲಿ, ಪಯನೀಯರರು ಹಿಂದಿರುಗಿ ಬರುವಾಗಿನ ಬಸ್ ಪ್ರಯಾಣವನ್ನು ಮಾಡುತ್ತಾ, ಪ್ರಯಾಣಿಸಿದಂತೆ ಸಾಕ್ಷಿನೀಡುತ್ತಿದ್ದರು. ಹೋಗಿ ಬರುವ ಹಲವಾರು ಪ್ರಯಾಣಗಳನ್ನು ಮಾಡಿದ ನಂತರ, ಅವರ ಪ್ರಯತ್ನಗಳ ಫಲಿತಾಂಶಗಳನ್ನು ಅವರು ಒಟ್ಟುಮಾಡಿ ನೋಡಿದರು: 200ಕ್ಕಿಂತಲೂ ಹೆಚ್ಚು ಪತ್ರಿಕೆಗಳು ನೀಡಲ್ಪಟ್ಟವು ಮತ್ತು ಆರು ಬೈಬಲ್ ಅಭ್ಯಾಸಗಳು ಆರಂಭಿಸಲ್ಪಟ್ಟವು. ಕೆಲವು ಪ್ರಯಾಣಿಕರು ತಮ್ಮನ್ನು ಮನೆಯಲ್ಲಿ ಸಂದರ್ಶಿಸಲಾಗುವಂತೆ ಸಿದ್ಧಮನಸ್ಸಿನಿಂದ ತಮ್ಮ ವಿಳಾಸ ಮತ್ತು ಟೆಲಿಫೋನ್ ನಂಬರನ್ನು ಕೊಟ್ಟರು. ಮುಂದಿನ ವಾರ, ಪಯನೀಯರರು ಆ ಬಸ್ ನಿಲ್ದಾಣಕ್ಕೆ ಹಿಂದಿರುಗಿ ಹಿಂದಿನಂತಹದ್ದೇ ವಿಧಾನವನ್ನು ಅನುಸರಿಸಿದರು. ಅವರು 164 ಪತ್ರಿಕೆಗಳನ್ನು ನೀಡಿ, ಇನ್ನೊಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದರು. ಒಂದು ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕನು ಬಸ್ಸನ್ನು ಹತ್ತಿ, ಲಭ್ಯವಿದ್ದ ಒಂದೇ ಆಸನದಲ್ಲಿ—ಒಬ್ಬ ಪಯನೀಯರನ ಪಕ್ಕದಲ್ಲಿ—ಕುಳಿತುಕೊಂಡನು. ಅವನು ಸಹೋದರನೆಡೆಗೆ ನೋಡಿ, ನಸುನಗುವಿನೊಂದಿಗೆ ಹೇಳಿದ್ದು: “ನನಗೆ ಗೊತ್ತಿದೆ, ನನಗಾಗಿ ನಿಮ್ಮಲ್ಲಿ ಒಂದು ಕಾವಲಿನಬುರುಜು ಇದೆ.”
15 ಅನೇಕ ಪ್ರಚಾರಕರು ಬಸ್ ಅಥವಾ ರೈಲಿನ ಮೂಲಕ ಪ್ರಯಾಣಿಸುತ್ತಿರುವಾಗ ಒಂದು ಪರಿಣಾಮಕಾರಿ ಸಾಕ್ಷಿಯನ್ನು ನೀಡುತ್ತಾರೆ. ನಿಮ್ಮ ಪಕ್ಕದಲ್ಲಿ ಕುಳಿತುಕೊಂಡಿರುವ ಒಬ್ಬ ಪ್ರಯಾಣಿಕನೊಂದಿಗೆ ನೀವು ಒಂದು ಸಂಭಾಷಣೆಯನ್ನು ಹೇಗೆ ಆರಂಭಿಸಬಲ್ಲಿರಿ? ಒಬ್ಬ 12 ವರ್ಷ ಪ್ರಾಯದ ಪ್ರಚಾರಕನು, ತನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದ ಒಬ್ಬ ಹದಿವಯಸ್ಕ ಹುಡುಗಿಯ ಕುತೂಹಲವನ್ನು ಕೆರಳಿಸಲು ನಿರೀಕ್ಷಿಸುತ್ತಾ, ಎಚ್ಚರ! ಪತ್ರಿಕೆಯ ಒಂದು ಪ್ರತಿಯನ್ನು ಬಸ್ಸಿನಲ್ಲಿ ಕೇವಲ ಓದುವುದರಿಂದ ಆರಂಭಿಸಿದನು. ಅದು ಕೆಲಸಮಾಡಿತು. ಅವನು ಏನು ಓದುತ್ತಿದ್ದಾನೆಂದು ಆ ಹುಡುಗಿ ಅವನನ್ನು ಕೇಳಿದಳು, ಮತ್ತು ಯುವಜನರು ಎದುರಿಸಬೇಕಾದ ಸಮಸ್ಯೆಗಳಿಗಿರುವ ಪರಿಹಾರಗಳ ಕುರಿತಾಗಿ ತಾನು ಓದುತ್ತಿದ್ದೇನೆಂಬುದನ್ನು ಆ ಯುವಕನು ಉತ್ತರಿಸಿದನು. ತಾನು ಆ ಲೇಖನದಿಂದ ತುಂಬಾ ಪ್ರಯೋಜನವನ್ನು ಪಡೆದಿದ್ದೇನೆಂದು, ಅದು ಅವಳಿಗೂ ಸಹಾಯ ಮಾಡಬಲ್ಲದೆಂದೂ ಅವನು ಕೂಡಿಸಿದನು. ಅವಳು ಸಂತೋಷದಿಂದ ಆ ಪತ್ರಿಕೆಗಳನ್ನು ಸ್ವೀಕರಿಸಿದಳು. ಅವರ ಸಂಭಾಷಣೆಯು ಇತರ ಇಬ್ಬರು ಯುವ ವ್ಯಕ್ತಿಗಳಿಂದ ಕೇಳಿಸಿಕೊಳ್ಳಲ್ಪಟ್ಟಿತು ಮತ್ತು ಅವರೂ ಪತ್ರಿಕೆಗಳ ಪ್ರತಿಗಳಿಗಾಗಿ ಕೇಳಿದರು. ಆಗ, ಬಸ್ ಚಾಲಕನು ರಸ್ತೆಯ ಪಕ್ಕಕ್ಕೆ ಬಸನ್ನು ನಿಲ್ಲಿಸಿ, ಈ ಪತ್ರಿಕೆಗಳಲ್ಲಿ ಇಷ್ಟೊಂದು ಆಸಕ್ತಿ ಏಕೆ ತೋರಿಸಲ್ಪಟ್ಟಿದೆಯೆಂದು ಕೇಳಿದನು. ಅವನು ಕಂಡುಹಿಡಿದಾಗ, ಅವನೂ ಪ್ರತಿಗಳನ್ನು ಸ್ವೀಕರಿಸಿದನು. ಆಸಕ್ತಿಯನ್ನು ತೋರಿಸಿದ ಎಲ್ಲರಿಗೂ ಹಂಚಲು ಪತ್ರಿಕೆಗಳ ಸಾಕಷ್ಟು ಸರಬರಾಯಿಯನ್ನು ಆ ಯುವ ಪ್ರಚಾರಕನು ಹೊಂದಿರದಿದ್ದಲ್ಲಿ, ಇದರಲ್ಲಿ ಯಾವುದು ಶಕ್ಯವಾಗುತ್ತಿರಲಿಲ್ಲವೆಂಬುದು ನಿಶ್ಚಯ!
16 ಉದ್ಯಾನವನಗಳಲ್ಲಿ ಮತ್ತು ವಾಹನ ನಿಲುಗಡೆಯ ಕ್ಷೇತ್ರಗಳಲ್ಲಿ ಸಾಕ್ಷಿನೀಡುವುದು: ಉದ್ಯಾನವನಗಳಲ್ಲಿ ಮತ್ತು ವಾಹನ ನಿಲ್ಲಿಸುವ ಕ್ಷೇತ್ರಗಳಲ್ಲಿ ಸಾಕ್ಷಿನೀಡುವುದು ಜನರನ್ನು ತಲಪುವ ಒಂದು ಉತ್ಕೃಷ್ಟ ವಿಧವಾಗಿದೆ. ಒಂದು ಶಾಪಿಂಗ್ ಸೆಂಟರ್ನ ವಾಹನನಿಲುಗಡೆಯ ಕ್ಷೇತ್ರದಲ್ಲಿ ಸಾಕ್ಷಿನೀಡುವುದನ್ನು ನೀವು ಪ್ರಯತ್ನಿಸಿದ್ದೀರೊ? ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅವಲೋಕಿಸಲು ಯಾವಾಗಲೂ ಕೆಲವೊಂದು ಕ್ಷಣಗಳನ್ನು ತೆಗೆದುಕೊಳ್ಳಿರಿ. ತರಾತುರಿಯಲ್ಲಿರದ ಒಬ್ಬರನ್ನು ಅಥವಾ ನಿಂತಿರುವ ಕಾರೊಂದರಲ್ಲಿ ಕಾಯುತ್ತಿರುವ ಅಥವಾ ಒಂದು ಸ್ಕೂಟರಿನ ಪಕ್ಕದಲ್ಲಿ ನಿಂತಿರುವ ಒಬ್ಬರಿಗಾಗಿ ಹುಡುಕಿ, ಒಂದು ಸ್ನೇಹಮಯ ಸಂಭಾಷಣೆಯನ್ನು ಆರಂಭಿಸಲು ಪ್ರಯತ್ನಿಸಿರಿ. ಸಂಭಾಷಣೆಯು ಮುಂದುವರಿಯುವಲ್ಲಿ, ರಾಜ್ಯ ಸಂದೇಶವನ್ನು ಒಳತನ್ನಿರಿ. ಒಬ್ಬರೇ ಕೆಲಸಮಾಡಲು ಪ್ರಯತ್ನಿಸಿರಿ, ಆದರೆ ಹತ್ತಿರದಲ್ಲೇ ಇನ್ನೊಬ್ಬ ಪ್ರಚಾರಕನಿರಲಿ. ಒಂದು ದೊಡ್ಡ, ದಪ್ಪವಾದ ಚೀಲವನ್ನು ಹೊರುವುದರಿಂದ ಅಥವಾ ಇತರ ವಿಧಗಳಲ್ಲಿ ನಿಮ್ಮ ಕೆಲಸಕ್ಕೆ ಗಮನವನ್ನು ಸೆಳೆಯುವುದರಿಂದ ದೂರವಿರಿ. ವಿವೇಚನೆಯುಳ್ಳವರಾಗಿರಿ. ವಾಹನನಿಲ್ಲಿಸುವ ಒಂದು ಕ್ಷೇತ್ರದಲ್ಲಿ ಸ್ವಲ್ಪವೇ ಸಮಯವನ್ನು ಕಳೆದು, ಅನಂತರ ಇನ್ನೊಂದಕ್ಕೆ ಮುಂದುವರಿಯುವುದು ಅತ್ಯುತ್ತಮವಾಗಿರಬಹುದು. ಯಾರಾದರೂ ನಿಮ್ಮೊಂದಿಗೆ ಸಂಭಾಷಿಸಲು ಬಯಸದಿದ್ದಲ್ಲಿ, ಸೌಮ್ಯಭಾವದಿಂದ ಹೊರಟುಹೋಗಿ, ಸಮೀಪಿಸಲು ಬೇರೆ ಯಾರನ್ನಾದರೂ ಹುಡುಕಿರಿ. ಈ ವಿಧಾನಗಳನ್ನು ಉಪಯೋಗಿಸುತ್ತಾ, ಒಬ್ಬ ಸಹೋದರನು ವಾಹನನಿಲ್ಲಿಸುವ ಜಾಗಗಳಲ್ಲಿ ಒಂದು ತಿಂಗಳಲ್ಲಿ 90 ಪತ್ರಿಕೆಗಳನ್ನು ನೀಡಿದನು.
17 ಕೆಲವು ಜನರು ವಿಶ್ರಮಿಸಲು ಉದ್ಯಾನವನಕ್ಕೆ ಹೋಗುತ್ತಾರೆ; ಇತರರು ಅಲ್ಲಿ ಒಂದು ಆಟವನ್ನು ಆಡಲು ಅಥವಾ ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಹೋಗುತ್ತಾರೆ. ಅವರ ಚಟುವಟಿಕೆಗಳಲ್ಲಿ ಅನುಚಿತವಾಗಿ ಅಡ್ಡಬರದೇ, ಸಾಕ್ಷಿಕೊಡಲು ಒಂದು ಅವಕಾಶಕ್ಕಾಗಿ ನೋಡಿರಿ. ಒಬ್ಬ ಸಹೋದರನು ಒಂದು ಉದ್ಯಾನವನದ ತೋಟಗಾರನೊಂದಿಗೆ ಒಂದು ಸಂಭಾಷಣೆಯನ್ನು ಆರಂಭಿಸಿದನು ಮತ್ತು ಅವನು ಅಮಲೌಷಧಗಳು ಮತ್ತು ತನ್ನ ಮಕ್ಕಳ ಭವಿಷ್ಯತ್ತಿನ ಕುರಿತಾಗಿ ಚಿಂತಿತನಾಗಿದ್ದನೆಂಬುದನ್ನು ಕಂಡುಹಿಡಿದನು. ಒಂದು ಮನೆ ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟು, ಕ್ರಮವಾಗಿ ಉದ್ಯಾನವನದಲ್ಲಿ ನಡೆಸಲ್ಪಟ್ಟಿತು.
18 ಶಾಪಿಂಗ್ ಕ್ಷೇತ್ರಗಳಲ್ಲಿ ಅನೌಪಚಾರಿಕ ಸಾಕ್ಷಿನೀಡುವಿಕೆ: ಇಂತಹ ಚಟುವಟಿಕೆಗಳ ಮೇಲಿನ ನಿರ್ಬಂಧಗಳ ಕಾರಣದಿಂದ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಅಂಗಡಿಯಿಂದ ಅಂಗಡಿಗೆ ಔಪಚಾರಿಕವಾಗಿ ಸಾರುವುದು ಯಾವಾಗಲೂ ಸಾಧ್ಯವಿಲ್ಲದಿದ್ದರೂ, ಅನೌಪಚಾರಿಕವಾಗಿ ಸಾಕ್ಷಿಯನ್ನು ನೀಡಲಿಕ್ಕಾಗಿ ಕೆಲವು ಪ್ರಚಾರಕರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಅವರು ಒಂದು ಬೆಂಚಿನ ಮೇಲೆ ಕುಳಿತುಕೊಂಡು, ವಿಶ್ರಮಿಸಲು ನಿಲ್ಲುವ ಇತರರೊಂದಿಗೆ ಒಂದು ಸ್ನೇಹಮಯ ಸಂಭಾಷಣೆಯನ್ನು ಆರಂಭಿಸುತ್ತಾರೆ. ಆಸಕ್ತಿಯು ತೋರಿಸಲ್ಪಡುವಾಗ, ಅವರು ವಿವೇಕಯುತವಾಗಿ ಒಂದು ಕಿರುಹೊತ್ತಗೆ ಅಥವಾ ಒಂದು ಪತ್ರಿಕೆಯನ್ನು ನೀಡಿ, ಒಂದು ಪುನರ್ಭೇಟಿಗಾಗಿ ಏರ್ಪಾಡುಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಶಾಪಿಂಗ್ ಕ್ಷೇತ್ರದ ಒಂದು ಸ್ಥಳದಲ್ಲಿ ಸಾಕ್ಷಿನೀಡುತ್ತಾ ಕೆಲವು ನಿಮಿಷಗಳನ್ನು ಕಳೆದ ನಂತರ, ಅವರು ಇನ್ನೊಂದು ಸ್ಥಳಕ್ಕೆ ಮುಂದುವರಿದು, ಬೇರೆ ಯಾರನ್ನಾದರೂ ಸಂಭಾಷಣೆಯಲ್ಲಿ ತೊಡಗಿಸುತ್ತಾರೆ. ನಿಶ್ಚಯವಾಗಿಯೂ, ಈ ರೀತಿಯಲ್ಲಿ ಅನೌಪಚಾರಿಕವಾಗಿ ಸಾಕ್ಷಿನೀಡುವಾಗ ಅನುಚಿತವಾದ ಗಮನವನ್ನು ಸೆಳೆಯದಂತೆ ಕಾಳಜಿ ವಹಿಸಲ್ಪಡಬೇಕು.
19 ಒಬ್ಬ ವ್ಯಕ್ತಿಯನ್ನು ವಂದಿಸುವಾಗ, ಸಂಭಾಷಣೆಯನ್ನು ಒಂದು ಸ್ನೇಹಮಯ ಸ್ವರದೊಂದಿಗೆ ಆರಂಭಿಸಿರಿ. ನಿಮ್ಮ ಕೇಳುಗನು ಪ್ರತಿಕ್ರಿಯಿಸುವಲ್ಲಿ, ಒಂದು ಪ್ರಶ್ನೆಯನ್ನು ಕೇಳಿ, ಅವನು ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತಿರುವಾಗ ಗಮನವಿಟ್ಟು ಕಿವಿಗೊಡಿರಿ. ಅವನು ಏನನ್ನು ಹೇಳುತ್ತಿದ್ದಾನೊ ಅದರಲ್ಲಿ ಒಂದು ವೈಯಕ್ತಿಕ ಆಸಕ್ತಿಯನ್ನು ವಹಿಸಿರಿ. ಅವನ ಅಭಿಪ್ರಾಯವನ್ನು ನೀವು ಅಮೂಲ್ಯವೆಂದೆಣಿಸುತ್ತೀರೆಂಬುದನ್ನು ತೋರಿಸಿರಿ. ಸಾಧ್ಯವಿರುವಲ್ಲೆಲ್ಲಾ, ಅವನೊಂದಿಗೆ ಸಮ್ಮತಿಸಿರಿ.
20 ಜೀವನದ ವೆಚ್ಚವು ಎಷ್ಟು ಏರಿದೆಯೆಂಬುದನ್ನು ತಿಳಿಸುವ ಮೂಲಕ ಒಬ್ಬ ಸಹೋದರಿಯು ಒಬ್ಬ ವಯಸ್ಸಾದ ಸ್ತ್ರೀಯೊಂದಿಗೆ ಒಂದು ಹರ್ಷದಾಯಕ ಮಾತುಕತೆಯನ್ನು ನಡೆಸಿದಳು. ಆ ಸ್ತ್ರೀಯು ಸಿದ್ಧಮನಸ್ಕಳಾಗಿ ಒಪ್ಪಿದಳು, ಮತ್ತು ಒಂದು ಸ್ವಾರಸ್ಯಕರ ಸಂಭಾಷಣೆಯು ಪರಿಣಮಿಸಿತು. ಆ ಸಹೋದರಿಯು ಆ ಸ್ತ್ರೀಯ ಹೆಸರು ಮತ್ತು ವಿಳಾಸವನ್ನು ಪಡೆಯಲು ಶಕ್ತಳಾದಳು ಮತ್ತು ಅದೇ ವಾರದಲ್ಲಿ ಒಂದು ಪುನರ್ಭೇಟಿಯು ಮಾಡಲ್ಪಟ್ಟಿತು.
21 ಅಂಗಡಿಯಿಂದ ಅಂಗಡಿಗೆ ಕೆಲಸಮಾಡುವುದು: ಹೆಚ್ಚಿನ ಸಭೆಗಳು ತಮ್ಮ ನೇಮಿತ ಟೆರಿಟೊರಿಯ ಭಾಗವಾಗಿ ವ್ಯಾಪಾರ ಕ್ಷೇತ್ರಗಳನ್ನು ಪಡೆದಿರುತ್ತವೆ. ಟೆರಿಟೊರಿಯ ಕಾಳಜಿ ವಹಿಸುತ್ತಿರುವ ಸಹೋದರನು, ವಿಪರೀತವಾಗಿ ಕೇಂದ್ರೀಕೃತವಾಗಿರುವ ಈ ವ್ಯಾಪಾರ ಮತ್ತು ಶಾಪಿಂಗ್ ಕ್ಷೇತ್ರಗಳ ವಿಶೇಷ ನಕ್ಷಾ ಕಾರ್ಡುಗಳನ್ನು ತಯಾರಿಸಬಹುದು. ವ್ಯಾಪಾರದ ವಿಭಾಗಗಳನ್ನು ವ್ಯಾಪಿಸುವ ಯಾವುದೇ ನಿವಾಸಗಳ ಟೆರಿಟೊರಿ ನಕ್ಷಾ ಕಾರ್ಡುಗಳು, ಆ ವ್ಯಾಪಾರ ಕ್ಷೇತ್ರಗಳನ್ನು ಟೆರಿಟೊರಿಯ ಭಾಗವಾಗಿ ಆವರಿಸಲ್ಪಡಬಾರದೆಂಬುದನ್ನು ಸ್ಪಷ್ಟವಾಗಿ ಸೂಚಿಸತಕ್ಕದ್ದು. ಇತರ ಟೆರಿಟೊರಿಗಳಲ್ಲಿ, ವ್ಯಾಪಾರ ಸ್ಥಳಗಳು ನಿವಾಸಗಳೊಂದಿಗೆ ಆವರಿಸಲ್ಪಡಸಾಧ್ಯವಿದೆ. ಅಂಗಡಿಯಿಂದ ಅಂಗಡಿ ಕೆಲಸವು ಅಲಕ್ಷಿಸಲ್ಪಡದಂತೆ, ಕ್ರಮವಾಗಿ ವ್ಯಾಪಾರ ಟೆರಿಟೊರಿಗಳನ್ನು ಆವರಿಸುವಂತೆ ಹಿರಿಯರು ಅರ್ಹರಾದ ಪ್ರಚಾರಕರನ್ನು ಆಮಂತ್ರಿಸಬಹುದು.
22 ಈ ಕೆಲಸದಲ್ಲಿ ಪಾಲು ತೆಗೆದುಕೊಳ್ಳುವಂತೆ ನೀವು ಆಮಂತ್ರಿಸಲ್ಪಡುವಲ್ಲಿ ಮತ್ತು ನೀವು ಅದನ್ನು ಹಿಂದೆಂದೂ ಮಾಡಿರದಿದ್ದಲ್ಲಿ ‘ಧೈರ್ಯ ತೆಗೆದುಕೊಳ್ಳುವ’ ಒಂದು ಉತ್ತಮ ವಿಧವು, ಮೊದಲು ಕೆಲವು ಚಿಕ್ಕ ಅಂಗಡಿಗಳನ್ನು ಆವರಿಸುವುದು ಆಗಿದೆ; ಅನಂತರ, ನಿಮಗೆ ಹೆಚ್ಚು ಆತ್ಮವಿಶ್ವಾಸದ ಅನಿಸಿಕೆಯಾಗುವಾಗ ದೊಡ್ಡ ಅಂಗಡಿಗಳನ್ನು ಆವರಿಸಿರಿ. (1 ಥೆಸ. 2:2) ಅಂಗಡಿಯಿಂದ ಅಂಗಡಿಗೆ ಕೆಲಸಮಾಡುವಾಗ, ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕೆ ಹಾಜರಾಗುತ್ತಿರುವಲ್ಲಿ ನೀವು ಹೇಗೆ ಉಡುಪನ್ನು ಧರಿಸುತ್ತಿದ್ದಿರೊ ಹಾಗೆ ಉಡುಪನ್ನು ಧರಿಸಿರಿ. ಸಾಧ್ಯವಿರುವಲ್ಲಿ, ಸೇವೆಪಡೆಯಲಿಕ್ಕಾಗಿ ಯಾವುದೇ ಗಿರಾಕಿಗಳು ಕಾಯದೆಯಿರುವಾಗ ಅಂಗಡಿಯನ್ನು ಪ್ರವೇಶಿಸಿರಿ. ಮ್ಯಾನೇಜರ್ನೊಂದಿಗೆ ಅಥವಾ ಉಸ್ತುವಾರಿಯಲ್ಲಿರುವ ವ್ಯಕ್ತಿಯೊಂದಿಗೆ ಮಾತಾಡಲು ಕೇಳಿಕೊಳ್ಳಿರಿ. ಉತ್ಸಾಹದಿಂದಿರಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಸಂಕ್ಷಿಪ್ತವಾಗಿ ಮಾತಾಡಿರಿ. ಕ್ಷಮೆಯಾಚಿಸುವ ಅಗತ್ಯವಿಲ್ಲ. ಅನೇಕ ವ್ಯಾಪಾರಗಳು ಗಿರಾಕಿ ಅಭಿಮುಖವಾಗಿವೆ ಮತ್ತು ಅಡ್ಡಬರುವಿಕೆಗಳನ್ನು ನಿರೀಕ್ಷಿಸುತ್ತವೆ.
23 ಒಬ್ಬ ಅಂಗಡಿಯವನನ್ನು ವಂದಿಸಿದ ನಂತರ, ನೀವು ಇದನ್ನು ಹೇಳಬಹುದು: “ವ್ಯಾಪಾರಸ್ಥರು ಎಷ್ಟು ಕಾರ್ಯಮಗ್ನರಿರುತ್ತಾರೆಂದರೆ, ನಾವು ಅವರನ್ನು ಮನೆಯಲ್ಲಿ ಕಂಡುಕೊಳ್ಳುವುದು ವಿರಳ, ಆದುದರಿಂದ ನಾವು ನಿಮಗೆ ಓದಲಿಕ್ಕಾಗಿ ತುಂಬಾ ವಿಚಾರ ಪ್ರೇರಕವಾದೊಂದು ಲೇಖನವನ್ನು ಕೊಟ್ಟುಹೋಗಲು ನಿಮ್ಮ ವ್ಯಾಪಾರದ ಸ್ಥಳದಲ್ಲಿ ನಿಮ್ಮನ್ನು ಭೇಟಿಮಾಡುತ್ತಿದ್ದೇವೆ.” ಅನಂತರ ನೀಡಲ್ಪಡುತ್ತಿರುವ ಪತ್ರಿಕೆಯ ಕುರಿತಾಗಿ ಒಂದು ಅಥವಾ ಎರಡು ಹೇಳಿಕೆಗಳನ್ನು ಮಾಡಿರಿ.
24 ಅಥವಾ ಒಬ್ಬ ಮ್ಯಾನೇಜರ್ ಅನ್ನು ಸಮೀಪಿಸುತ್ತಿರುವಾಗ ನೀವು ಇದನ್ನು ಪ್ರಯತ್ನಿಸಬಹುದು: “ವ್ಯಾಪಾರಸ್ಥರು ಒಳ್ಳೇ ಮಾಹಿತಿಯುಳ್ಳವರಾಗಿರಲು ಪ್ರಯತ್ನಿಸುತ್ತಾರೆಂಬುದನ್ನು ನಾವು ಗಮನಿಸಿದ್ದೇವೆ. ಕಾವಲಿನಬುರುಜು (ಅಥವಾ ಎಚ್ಚರ!) ಪತ್ರಿಕೆಯ ಇತ್ತೀಚಿನ ಸಂಚಿಕೆಯು, ನಮ್ಮೆಲ್ಲರನ್ನು ವೈಯಕ್ತಿಕವಾಗಿ ಬಾಧಿಸುವ ಒಂದು ಲೇಖನವನ್ನು ಪ್ರದರ್ಶಿಸುತ್ತದೆ.” ಅದೇನೆಂಬುದನ್ನು ವಿವರಿಸಿರಿ, ಮತ್ತು ಹೀಗೆ ಹೇಳುತ್ತಾ ಸಮಾಪ್ತಿಗೊಳಿಸಿರಿ: “ಅದನ್ನು ಓದುವುದರಲ್ಲಿ ನೀವು ಆನಂದಿಸುವಿರೆಂದು ನಮಗೆ ನಿಶ್ಚಯವಿದೆ.”
25 ಉದ್ಯೋಗಿಗಳಿರುವಲ್ಲಿ, ಮತ್ತು ಅದು ಸೂಕ್ತವೆಂದು ತೋರುವಲ್ಲಿ, ನೀವು ಹೀಗೆ ಕೂಡಿಸಬಹುದು: “ಇದೇ ಸಂಕ್ಷಿಪ್ತ ನಿರೂಪಣೆಯನ್ನು ನಾನು ನಿಮ್ಮ ಉದ್ಯೋಗಿಗಳಿಗೆ ಕೊಡುವಲ್ಲಿ ನಿಮಗೆ ಅಭ್ಯಂತರವಿಲ್ಲ ತಾನೇ?” ಅನುಮತಿ ಕೊಡಲ್ಪಡುವಲ್ಲಿ, ನೀವು ಸಂಕ್ಷಿಪ್ತವಾಗಿ ಮಾತಾಡುವಿರೆಂದು ಮಾತುಕೊಟ್ಟಿದ್ದೀರೆಂಬುದನ್ನು ನೆನಪಿನಲ್ಲಿಡಿರಿ, ಮತ್ತು ನೀವು ನಿಮ್ಮ ಮಾತನ್ನು ಪಾಲಿಸುವಿರೆಂಬುದನ್ನು ಮ್ಯಾನೇಜರನು ನಿರೀಕ್ಷಿಸುವನು. ಉದ್ಯೋಗಿಗಳಲ್ಲಿ ಯಾರಾದರೂ ಒಂದು ದೀರ್ಘವಾದ ಚರ್ಚೆಯನ್ನು ಆರಂಭಿಸಲು ಬಯಸುವಲ್ಲಿ, ಅವರ ಮನೆಯಲ್ಲಿ ಅವರನ್ನು ಸಂದರ್ಶಿಸುವುದು ಅತ್ಯುತ್ತಮವಾಗಿರುವುದು.
26 ಇತ್ತೀಚೆಗೆ, ಒಂದು ಚಿಕ್ಕ ಪಟ್ಟಣದಲ್ಲಿನ ಕೆಲವೊಂದು ಪ್ರಚಾರಕರು ಅಂಗಡಿಯಿಂದ ಅಂಗಡಿಯ ಕೆಲಸದಲ್ಲಿ ಸರ್ಕಿಟ್ ಮೇಲ್ವಿಚಾರಕನನ್ನು ಜೊತೆಗೂಡಿದರು. ಪ್ರಚಾರಕರಲ್ಲಿ ಕೆಲವರು, ಈ ಕೆಲಸವನ್ನು ಹಿಂದೆಂದೂ ಮಾಡದಿದ್ದರಿಂದ, ಆರಂಭದಲ್ಲಿ ಅಂಜಿದರು; ಆದರೆ ಅವರು ಬೇಗನೆ ಆರಾಮಗೊಂಡು, ಅದರಲ್ಲಿ ಆನಂದಿಸಲು ಆರಂಭಿಸಿದರು. ಒಂದು ತಾಸಿಗಿಂತ ಕಡಮೆ ಸಮಯದಲ್ಲಿ, ಅವರು 37 ಜನರೊಂದಿಗೆ ಮಾತಾಡಿ, 24 ಪತ್ರಿಕೆಗಳನ್ನು ಮತ್ತು 4 ಬ್ರೋಷರುಗಳನ್ನು ನೀಡಿದರು. ಆ ಅಲ್ಪಾವಧಿಯಲ್ಲಿ ಅಂಗಡಿಯಿಂದ ಅಂಗಡಿಯಲ್ಲಿ ಕೆಲಸ ಮಾಡುವಾಗ ಅವರು ಸಂಪರ್ಕಿಸಿದಷ್ಟು ಜನರನ್ನು ಅವರು ಒಂದು ತಿಂಗಳಿನ ಮನೆಯಿಂದ ಮನೆಯ ಕೆಲಸದಲ್ಲಿ ಸಾಧಾರಣವಾಗಿ ಸಂಪರ್ಕಿಸಲು ಶಕ್ತರಾಗಿರಲಿಕ್ಕಿಲ್ಲವೆಂದು ಒಬ್ಬ ಸಹೋದರನು ಅವಲೋಕಿಸಿದನು.
27 ಸಾರಲಿಕ್ಕಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು: ಯೇಸು ತನ್ನ ಸಾರುವಿಕೆಯನ್ನು ಔಪಚಾರಿಕ ಸನ್ನಿವೇಶಗಳಿಗೆ ಸೀಮಿತಗೊಳಿಸಲಿಲ್ಲ. ಪ್ರತಿಯೊಂದು ಸೂಕ್ತ ಸಂದರ್ಭದಂದು ಅವನು ಸುವಾರ್ತೆಯನ್ನು ಹಬ್ಬಿಸಿದನು. (ಮತ್ತಾ. 9:9; ಲೂಕ 19:1-10; ಯೋಹಾ. 4:6-15) ಕೆಲವು ಪ್ರಚಾರಕರು ಸಾರಲಿಕ್ಕಾಗಿ ಹೇಗೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆಂಬುದನ್ನು ಗಮನಿಸಿರಿ.
28 ಶಾಲೆಯೊಂದರ ಪ್ರವೇಶದ್ವಾರದಲ್ಲಿ ತಮ್ಮ ಮಕ್ಕಳಿಗಾಗಿ ಕಾಯುತ್ತಿರುವ ಹೆತ್ತವರಿಗೆ ಸಾಕ್ಷಿನೀಡುವುದನ್ನು ಕೆಲವರು ಒಂದು ರೂಢಿಯನ್ನಾಗಿ ಮಾಡುತ್ತಾರೆ. ಅನೇಕ ಹೆತ್ತವರು 20 ನಿಮಿಷಗಳು ಬೇಗನೆ ಬರುವುದರಿಂದ, ಒಂದು ಶಾಸ್ತ್ರೀಯ ವಿಷಯದ ಮೇಲೆ ಒಂದು ಪ್ರಚೋದಕ ಸಂಭಾಷಣೆಯಲ್ಲಿ ಅವರನ್ನು ಒಳಗೂಡಿಸಲು ಸಮಯವಿರುತ್ತದೆ.
29 ನಮ್ಮ ಪತ್ರಿಕೆಗಳಲ್ಲಿ ಚರ್ಚಿಸಲ್ಪಟ್ಟಿರುವ ಒಂದು ನಿರ್ದಿಷ್ಟ ವಿಷಯದಲ್ಲಿ ವಿಶೇಷ ಆಸಕ್ತಿಯು ಇರಬಹುದಾದ ಜನರನ್ನು ತಲಪುವುದರ ಕುರಿತಾಗಿ ಅನೇಕ ಪಯನೀಯರರು ಪ್ರಜ್ಞೆಯುಳ್ಳವರಾಗಿದ್ದಾರೆ. ಉದಾಹರಣೆಗಾಗಿ, ಒಬ್ಬ ಸಹೋದರಿಯು ತನ್ನ ಸಭೆಯ ಟೆರಿಟೊರಿಯಲ್ಲಿನ ಆರು ಶಾಲೆಗಳನ್ನು, ಎಚ್ಚರ! ಪತ್ರಿಕೆಯ ಡಿಸೆಂಬರ್ 22, 1995 (ಇಂಗ್ಲಿಷ್)ರ “ಶಾಲೆಗಳು ಬಿಕ್ಕಟ್ಟಿನಲ್ಲಿ” ಎಂಬ ಸರಣಿಯೊಂದಿಗೆ ಸಂದರ್ಶಿಸಿದಾಗ ಒಂದು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಳು. ಕುಟುಂಬ ಜೀವನ ಮತ್ತು ಮಗುವಿನ ದುರ್ಬಳಕೆಯ ವಿಷಯದ ಮೇಲಿನ ಪತ್ರಿಕೆಗಳೊಂದಿಗೆ ಅವಳು ಆರೋಗ್ಯ ಕೇಂದ್ರಗಳನ್ನೂ ಭೇಟಿಮಾಡಿದಳು ಮತ್ತು ತದ್ರೀತಿಯ ವಿಷಯಗಳನ್ನು ಚರ್ಚಿಸುವ ಮುಂದಿನ ಸಂಚಿಕೆಗಳೊಂದಿಗೆ ಹಿಂದಿರುಗಲು ಆಮಂತ್ರಿಸಲ್ಪಟ್ಟಳು. ನಿರುದ್ಯೋಗದ ಕುರಿತಾದ ಮಾರ್ಚ್ 8, 1996ರ ಎಚ್ಚರ! ಪತ್ರಿಕೆಗಾಗಿ ಅವಳು ಉದ್ಯೋಗ ಆಫೀಸಿನಲ್ಲಿ ಪಡೆದ ಪ್ರತಿಕ್ರಿಯೆಯು “ಭಾವಪರವಶಗೊಳಿಸುವಂತಹ”ದ್ದಾಗಿ ವರ್ಣಿಸಲ್ಪಟ್ಟಿತು.
30 ಒಬ್ಬ ಜಿಲ್ಲಾ ಮೇಲ್ವಿಚಾರಕನು, ತಾನು ಮತ್ತು ತನ್ನ ಹೆಂಡತಿಯು ತಮ್ಮ ಕಿರಾಣಿ ವಸ್ತುಗಳ ಖರೀದಿಯನ್ನು ಮಾಡುವಾಗ ಕ್ರಮವಾಗಿ ಅನೌಪಚಾರಿಕವಾಗಿ ಸಾಕ್ಷಿನೀಡುತ್ತೇವೆಂದು ವರದಿಸುತ್ತಾನೆ. ಅಂಗಡಿಗಳಲ್ಲಿ ತೀರ ಹೆಚ್ಚು ಜನಜಂಗುಳಿ ಇಲ್ಲದಿರುವಾಗ, ಮತ್ತು ಗಿರಾಕಿಗಳು ಆಚೆಈಚೆ ಆರಾಮವಾದ ಗತಿಯಲ್ಲಿ ನಡೆದಾಡುತ್ತಿರುವಾಗ, ದಿನದ ಆ ಸಮಯದಲ್ಲಿ ಅವರು ಖರೀದಿ ಮಾಡುತ್ತಾರೆ. ಅವರು ಅನೇಕ ಉತ್ತಮ ಸಂಭಾಷಣೆಗಳನ್ನು ವರದಿಸುತ್ತಾರೆ.
31 ಅನೇಕ ಪ್ರಚಾರಕರು ಸಿನಿಮಾ ಮಂದಿರಗಳು, ಲಾಂಡ್ರಿಗಳು ಮತ್ತು ಚಿಕಿತ್ಸಾಲಯಗಳು ಅಥವಾ ಆಸ್ಪತ್ರೆಗಳ ಹೊರಗೆ ಅಥವಾ ಹತ್ತಿರದಲ್ಲಿರುವ ಜನರಿಗೆ ಸಾಕ್ಷಿನೀಡುವಾಗ ಒಳ್ಳೆಯ ಫಲಿತಾಂಶಗಳನ್ನು ವರದಿಸುತ್ತಾರೆ. ಆಸ್ಪತ್ರೆಗಳು ಮತ್ತು ಔಷಧಾಲಯಗಳ ವಿಷಯದಲ್ಲಿ, ಅವರು ಸ್ವಾಗತದ ಕೊಠಡಿಯ ಕ್ಷೇತ್ರದಲ್ಲಿ ಕಿರುಹೊತ್ತಗೆಗಳನ್ನು ಅಥವಾ ಹಳೆಯ ಪತ್ರಿಕೆಗಳನ್ನು ಕೇವಲ ಬಿಟ್ಟುಬರುವುದಿಲ್ಲ. ಅವರ ಗುರಿಯು ಜನರನ್ನು ಸುವಾರ್ತೆಯೊಂದಿಗೆ ತಲುಪುವುದು ಆಗಿದೆ, ಆದುದರಿಂದ ಸೂಕ್ತವಾಗಿರುವಲ್ಲಿ, ಕಾರ್ಯಮಗ್ನರಾಗಿರದ ಮತ್ತು ಸಂಭಾಷಿಸಲು ಸಿದ್ಧಮನಸ್ಸುಳ್ಳವರೊಂದಿಗೆ ವೈಯಕ್ತಿಕವಾಗಿ ಮಾತಾಡಲು ಅವರು ಪ್ರಯತ್ನಿಸುತ್ತಾರೆ.
32 ಕೆಲವು ಕಾರ್ಯಸ್ಥಾನಗಳಲ್ಲಿ, ಪ್ರಚಾರಕರು ರೈಲ್ವೇ ನಿಲ್ದಾಣಗಳು ಅಥವಾ ಬಸ್ ತಂಗುದಾಣಗಳ ಹತ್ತಿರವಿರುವ ಜನರೊಂದಿಗೆ ಮಾತಾಡುತ್ತಾರೆ. ಅಂತಹ ಸ್ಥಳಗಳಲ್ಲಿ ಅನಾವಶ್ಯಕವಾದ ಪ್ರವೇಶ ಅಥವಾ ದೀರ್ಘವಾದ ತಂಗುವಿಕೆಗಳನ್ನು ನಿಯಮಗಳು ನಿರ್ಬಂಧಿಸುವುದರಿಂದ ಅಥವಾ ಪ್ಲ್ಯಾಟ್ಫಾರ್ಮ್ಗಳ ಮೇಲೆ ಪತ್ರಿಕೆಗಳನ್ನು ನೀಡುವುದು ಕಾನೂನುಬಾಹಿರವಾಗಿರುವುದರಿಂದ, ಒಂದು ರೈಲು ಬರುವಾಗ ಪ್ರಾಯಶಃ ಯಾರನ್ನೊ ಭೇಟಿಯಾಗಲು ಸುಮ್ಮನೇ ಕಾಯುತ್ತಿರುವ ಮತ್ತು ಇದರಿಂದಾಗಿ ಆರಾಮದಿಂದಿರುವ ಮತ್ತು ಕಾರ್ಯಮಗ್ನರಾಗಿರದಿರುವ ಜನರನ್ನು ಜಾಣ್ಮೆಯಿಂದ ಸಮೀಪಿಸಲು ಪ್ರಚಾರಕರು ಪ್ರಯತ್ನಿಸುತ್ತಾರೆ.
33 ಸಭೆಯ ಟೆರಿಟೊರಿಯಲ್ಲಿರುವ ಉಚ್ಚ ಭದ್ರತೆಯ ವಾಸದಕೋಣೆಗಳು ಮತ್ತು ಕಾಲನಿಗಳ ನಿವಾಸಿಗಳಿಗೆ ವೈಯಕ್ತಿಕವಾಗಿ ಸಾಕ್ಷಿನೀಡಲು ಅನುಮತಿಸಲ್ಪಡದಿರುವಲ್ಲಿ, ಕೆಲಸದಲ್ಲಿರುವ ಭದ್ರತಾ ಕಾವಲುಗಾರರು ಅಥವಾ ಕಾಲನಿಯ ಮ್ಯಾನೇಜರುಗಳಿಗೆ ಜಾಣ್ಮೆಯಿಂದ ಸಾಕ್ಷಿನೀಡುವ ರೂಢಿಯನ್ನು ಕೆಲವರು ಮಾಡಿಕೊಂಡಿದ್ದಾರೆ. ಭದ್ರತಾ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಪ್ರವೇಶವು ನಿರ್ಬಂಧಿಸಲ್ಪಟ್ಟಿರುವ, ಖಾಸಗಿ ಅಥವಾ ಸಂರಕ್ಷಿತ ಕಂಪನಿ ವಸತಿ ಕ್ಷೇತ್ರಗಳಲ್ಲಿ ಅದೇ ವಿಧಾನವು ಉಪಯೋಗಿಸಲ್ಪಟ್ಟಿದೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಮತ್ತು ಕೆಲವು ಪ್ರಚಾರಕರು ಈ ರೀತಿಯಲ್ಲಿ ಏಳು ಕಾಂಪ್ಲೆಕ್ಸ್ಗಳಿಗೆ ಭೇಟಿಯನ್ನಿತ್ತರು. ಪ್ರತಿಯೊಂದು ಸಂದರ್ಭದಲ್ಲಿ, ನಮ್ಮ ಸಾಮಾನ್ಯ ರೀತಿಯಲ್ಲಿ ಮನೆಗಳನ್ನು ಸಂದರ್ಶಿಸಲು ತಮಗೆ ಅನುಮತಿ ನೀಡಲ್ಪಡದಿದ್ದಾಗ್ಯೂ, ಇತ್ತೀಚಿನ ಪತ್ರಿಕೆಗಳಲ್ಲಿರುವ ಮಾಹಿತಿಯನ್ನು ಅವನು ಪಡೆದುಕೊಳ್ಳದಿರಬಾರದೆಂಬುದು ತಮ್ಮ ಬಯಕೆಯಾಗಿತ್ತೆಂದು ಅವರು ಮ್ಯಾನೇಜರ್ಗೆ ಹೇಳಿದರು. ಎಲ್ಲಾ ಏಳು ಕಾಂಪ್ಲೆಕ್ಸ್ಗಳಲ್ಲಿರುವ ಮ್ಯಾನೇಜರ್ಗಳು ಸಂತೋಷದಿಂದ ಪತ್ರಿಕೆಗಳನ್ನು ಸ್ವೀಕರಿಸಿ, ಮುಂದಿನ ಸಂಚಿಕೆಗಳಿಗಾಗಿಯೂ ಕೇಳಿಕೊಂಡರು! ಅಂತಹ ಕಾಂಪ್ಲೆಕ್ಸ್ಗಳ ನಿವಾಸಿಗಳು ಅನಂತರ ಪತ್ರ ಅಥವಾ ಟೆಲಿಫೋನಿನ ಮೂಲಕ ಸಂಪರ್ಕಿಸಲ್ಪಡುತ್ತಾರೆ.
34 ಎಲ್ಲೆಡೆಯೂ ಸಾರುವಂತೆ ನಿಮ್ಮನ್ನೇ ಪ್ರಯಾಸಪಡಿಸಿಕೊಳ್ಳಿರಿ: ನಮ್ಮ ಸಮರ್ಪಣೆಗನುಸಾರವಾಗಿ ಜೀವಿಸುವುದು, ರಾಜ್ಯ ಸಂದೇಶವನ್ನು ಸಾರಲಿಕ್ಕಾಗಿರುವ ನಮ್ಮ ನೇಮಕದ ಕುರಿತಾಗಿ ಒಂದು ತುರ್ತಿನ ಪ್ರಜ್ಞೆಯ ಭಾವನೆಯನ್ನು ಒಳಗೂಡುತ್ತದೆ. ಈ ದೇಶದಲ್ಲಿ ನಾವು ಇನ್ನೂ ಅನೇಕ ಜನರನ್ನು ಅವರ ಮನೆಗಳಲ್ಲಿ ಕಂಡುಕೊಳ್ಳುತ್ತೇವಾದರೂ, ಅವರಿಗೆ ಅನುಕೂಲವಾಗಿರುವ ಒಂದು ಸಮಯದಲ್ಲಿ ಹೆಚ್ಚಿನ ಜನರನ್ನು ತಲಪಲಿಕ್ಕಾಗಿ, “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸ”ಲು ಸಾಧ್ಯವಾಗುವಂತೆ, ನಾವು ನಮ್ಮ ವೈಯಕ್ತಿಕ ಇಷ್ಟಗಳನ್ನು ಬದಿಗಿರಿಸುವ ಅಗತ್ಯವಿದೆ. ಯೆಹೋವನ ಎಲ್ಲಾ ಸಮರ್ಪಿತ ಸೇವಕರು, ಅಪೊಸ್ತಲ ಪೌಲನಂತೆ ಹೇಳಲಿಕ್ಕಾಗಿ ಶಕ್ತರಾಗುವಂತೆ ಬಯಸುತ್ತಾರೆ: “ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.”—1 ಕೊರಿಂ. 9:22, 23.
35 ಪೌಲನು ಮುಂದೆ ಬರೆದುದು: “ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. . . . ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂ. 12:9, 10) ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮಲ್ಲಿ ಯಾರೂ ಈ ಕೆಲಸವನ್ನು ನಮ್ಮ ಸ್ವಂತ ಬಲದಲ್ಲಿ ಸಾಧಿಸಲು ಸಾಧ್ಯವಿಲ್ಲ. ನಾವೆಲ್ಲರೂ ಯೆಹೋವನಿಗೆ ಆತನ ಶಕ್ತಿಶಾಲಿ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವ ಅಗತ್ಯವಿದೆ. ಬಲಕ್ಕಾಗಿ ನಾವು ದೇವರಿಗೆ ಪ್ರಾರ್ಥಿಸುವಲ್ಲಿ, ಆತನು ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುವನೆಂದು ನಾವು ಭರವಸೆಯಿಂದಿರಸಾಧ್ಯವಿದೆ. ಆಗ ಜನರಿಗಾಗಿರುವ ನಮ್ಮ ಪ್ರೀತಿಯು, ಅವರು ಎಲ್ಲಿಯೇ ಕಂಡುಬರಲಿ, ಸುವಾರ್ತೆಯನ್ನು ಅವರಿಗೆ ಸಾರಲು ಅವಕಾಶಗಳಿಗಾಗಿ ಹುಡುಕುವಂತೆ ನಮ್ಮನ್ನು ಪ್ರಚೋದಿಸುವುದು. ಬರುವ ವಾರದಲ್ಲಿ, ಈ ಪುರವಣಿಯಲ್ಲಿ ಕೊಟ್ಟಿರುವ ಸಲಹೆಗಳಲ್ಲಿ ಒಂದನ್ನು ಏಕೆ ಪ್ರಯತ್ನಿಸಿ ನೋಡಬಾರದು?