ನಂಬಿಕೆಯಲ್ಲಿ ದೃಢರಾಗಿ ನಿಲ್ಲುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು?
1 ನಾವು ಯೆಹೋವನ ಸಂಸ್ಥೆಯೊಂದಿಗೆ ಸಹವಾಸಿಸಲು ಆರಂಭಿಸಿದಂದಿನಿಂದ, ನಮ್ಮ ಆತ್ಮಿಕ ಪ್ರಗತಿಯು ನಮಗೆ ಆನಂದವನ್ನೀಡುವ ಮೂಲವಾಗಿ ಪರಿಣಮಿಸಿದೆ! ಆದರೂ, ‘ನಂಬಿಕೆಯಲ್ಲಿ ಬೇರೂರಿ, ಬಲಹೊಂದಿ, ದೃಢವಾಗಿ’ ನೆಲೆಗೊಳ್ಳಲು, ನಿರಂತರವಾದ ಆತ್ಮಿಕ ಬೆಳವಣಿಗೆಯು ತೀರ ಅಗತ್ಯವಾಗಿದೆ. (ಕೊಲೊ. 2:6, 7, NW) ಹೆಚ್ಚಿನವರು ಆತ್ಮಿಕ ಅಭಿವೃದ್ಧಿಯನ್ನು ಮಾಡಿದ್ದರೂ, ಕೆಲವರು ‘ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು’ ತಪ್ಪಿಹೋದ ಕಾರಣ ಸತ್ಯದಿಂದ ದೂರ ಸರಿದುಹೋಗಿದ್ದಾರೆ. (1 ಕೊರಿಂ. 16:13) ಇದು ನಮಗೆ ಸಂಭವಿಸದಂತೆ ನಾವು ನೋಡಿಕೊಳ್ಳಬಹುದು. ಅದು ಹೇಗೆ?
2 ನಿರಂತರ ಆತ್ಮಿಕ ಚಟುವಟಿಕೆ: ಯೆಹೋವನ ಸಂಸ್ಥೆಯೊಳಗೆ ಒಳ್ಳೆಯ ಆತ್ಮಿಕ ನಿಯತಕ್ರಮವನ್ನು ಇಟ್ಟುಕೊಳ್ಳಿರಿ. ನಮ್ಮ ಆತ್ಮಿಕ ಆವಶ್ಯಕತೆಗಳ ಪೂರೈಕೆಗೆ ಅಲ್ಲಿ ಕೊರತೆಯೇ ಇರುವುದಿಲ್ಲ. ಸಭಾ ಕೂಟಗಳು, ಸಮ್ಮೇಳನಗಳು, ಮತ್ತು ಅಧಿವೇಶನಗಳು, ನಾವು ಹೆಚ್ಚಿನ ಆತ್ಮಿಕ ಬೆಳವಣಿಗೆಯನ್ನು ಮಾಡಿ, ದೃಢರಾಗಿರುವಂತೆ ಹುರಿದುಂಬಿಸುತ್ತವೆ; ಆದರೆ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಕ್ರಮವಾಗಿ ಅವುಗಳಿಗೆ ಹಾಜರಾಗಬೇಕು. (ಇಬ್ರಿ. 10:24, 25) ಬೈಬಲನ್ನು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಮತ್ತು ದೇವರ ವಾಕ್ಯದಲ್ಲಿ ಅಡಕವಾಗಿರುವ ಗಟ್ಟಿಯಾದ ಆಹಾರದ ಕುರಿತು ಚರ್ಚಿಸುವ ಪುಸ್ತಕಗಳನ್ನು ಕ್ರಮವಾಗಿ ಓದುವ ಮೂಲಕ, ನಮ್ಮ ಆತ್ಮಿಕ ಬೇರುಗಳು ಆಳವಾಗಿ ಮತ್ತು ಬಲವುಳ್ಳವುಗಳಾಗಿ ಬೆಳೆಯಲು ಸಹಾಯವಾಗುತ್ತದೆ. (ಇಬ್ರಿ. 5:14) ವೈಯಕ್ತಿಕವಾದ ಆತ್ಮಿಕ ಗುರಿಗಳನ್ನಿಟ್ಟು, ಅವುಗಳನ್ನು ಪೂರೈಸಲು ಶ್ರದ್ಧಾಪೂರ್ವಕವಾಗಿ ಪ್ರಯಾಸಪಡುವುದರಿಂದಲೂ, ಅನಂತ ಪ್ರಯೋಜನಗಳು ಸಿಗುವವು.—ಫಿಲಿ. 3:16.
3 ಪ್ರೌಢ ಸಾಕ್ಷಿಗಳಿಂದ ನೆರವು: ಸಭೆಯಲ್ಲಿ ಆತ್ಮಿಕ ಪ್ರೌಢತೆಯನ್ನು ಪಡೆದಿರುವವರೊಂದಿಗೆ ಸಹವಾಸ ಮಾಡಲು ಪ್ರಯತ್ನಿಸಿರಿ. ನಮ್ಮನ್ನು ಬಲಪಡಿಸಸಾಧ್ಯವಿರುವವರಲ್ಲಿ ಪ್ರಮುಖರಾದ ಹಿರಿಯರ ಪರಿಚಯವನ್ನು ಮಾಡಿಕೊಳ್ಳಿರಿ. (1 ಥೆಸ. 2:11, 12) ಅವರು ನೀಡಬಹುದಾದ ಯಾವುದೇ ಸಲಹೆಸೂಚನೆಯನ್ನು ಸಂತೋಷದಿಂದ ಸ್ವೀಕರಿಸಿರಿ. (ಎಫೆ. 4:11-16) ನಂಬಿಕೆಯಲ್ಲಿ ದೃಢರಾಗಿರುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಶುಶ್ರೂಷಾ ಸೇವಕರು ಸಹ ಆಸಕ್ತರಾಗಿದ್ದಾರೆ. ಆದುದರಿಂದ, ಉತ್ತೇಜನಕ್ಕಾಗಿ ಈ ಸಹೋದರರ ಕಡೆಗೂ ನೋಡಿರಿ.
4 ಶುಶ್ರೂಷೆಯಲ್ಲಿ ನಿಮಗೆ ನೆರವಿನ ಅಗತ್ಯವಿದೆಯೊ? ಹಿರಿಯರೊಂದಿಗೆ ಮಾತಾಡಿ, ಸಹಾಯವನ್ನು ಕೋರಿರಿ. ಬಹುಶಃ, ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಎಂಬ ಕಾರ್ಯಕ್ರಮದಲ್ಲಿ ನಿಮ್ಮನ್ನು ಸೇರಿಸಸಾಧ್ಯವಿದೆ. ನೀವು ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡಿದ್ದೀರೊ? ನಮ್ಮ ಶುಶ್ರೂಷೆ ಎಂಬ ಪುಸ್ತಕವನ್ನು ಅಭ್ಯಾಸಿಸಿ, ಅದರಲ್ಲಿರುವುದನ್ನು ಅನ್ವಯಿಸಿಕೊಳ್ಳುವುದರಿಂದ, ಆತ್ಮಿಕ ಪ್ರೌಢತೆಯ ಕಡೆಗೆ ನೀವು ಪ್ರಗತಿಮಾಡುವಂತೆ ಪ್ರಚೋದಿಸಲ್ಪಡುವಿರಿ. ನೀವು ಹೆತ್ತವರಾಗಿದ್ದೀರೊ? ನಿಮ್ಮ ಮಕ್ಕಳ ಆತ್ಮಿಕತೆಯನ್ನು ಎಡೆಬಿಡದೆ ಬಲಪಡಿಸಿರಿ.—ಎಫೆ. 6:4.
5 ನಾವು ನಂಬಿಕೆಯಲ್ಲಿ ಬೇರೂರಿ ದೃಢಗೊಳಿಸಲ್ಪಟ್ಟಿರುವುದರಿಂದ, ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಮತ್ತು ನಮ್ಮ ಸಹೋದರರೊಂದಿಗೆ ಸ್ನೇಹಪರ ಸಹವಾಸವನ್ನು ಅನುಭವಿಸುತ್ತೇವೆ. ಇದು ಸೈತಾನನ ದಾಳಿಗಳನ್ನು ಎದುರಿಸುವಂತೆ ನಮ್ಮನ್ನು ಶಕ್ತಗೊಳಿಸಿ, ನಮ್ಮಲ್ಲಿರುವ ಅನಂತ ಭವಿಷ್ಯತ್ತಿನ ನಿರೀಕ್ಷೆಯನ್ನು ಬಲಪಡಿಸುತ್ತದೆ.—1 ಪೇತ್ರ 5:9, 10.