ನಾವು ಶುಭ ವಾರ್ತೆಯನ್ನು ಸಾರುತ್ತೇವೆ
1 ನಮಗೆ “ಶುಭದ ಸುವಾರ್ತೆಯನ್ನು” ಕೊಂಡೊಯ್ಯುವವರಾಗಿರುವಂತಹ ಒಂದು ಅದ್ಭುತ ಸುಯೋಗವಿದೆ! (ರೋಮಾ. 10:15) ಗಲಭೆ ಮತ್ತು ಹತಾಶೆಯಿಂದ ಸುತ್ತುವರಿಯಲ್ಪಟ್ಟಿರುವ ಜನರಿಗೆ ಹಂಚಸಾಧ್ಯವಿರುವ ಚೈತನ್ಯದಾಯಕ ಸಂದೇಶ ನಮ್ಮಲ್ಲಿದೆ. ನಾವು “ಒಳ್ಳೆಯ ಶುಭವರ್ತಮಾನವನ್ನು” ತಿಳಿಯಪಡಿಸುತ್ತಿದ್ದೇವೆ ಎಂಬುದನ್ನು ಆ ಜನರು ಗ್ರಹಿಸುವಂತೆ ನಾವು ಅವರಿಗೆ ಹೇಗೆ ಸಹಾಯ ಮಾಡಸಾಧ್ಯವಿದೆ? (ಓರೆ ಅಕ್ಷರಗಳು ನಮ್ಮವು.)—ಯೆಶಾ. 52:7.
2 ಒಂದು ಸಕಾರಾತ್ಮಕ ಸಂದೇಶವನ್ನು ಸಿದ್ಧಪಡಿಸಿಕೊಳ್ಳಿರಿ: ಕ್ಷೇತ್ರ ಸೇವೆಯಲ್ಲಿನ ನಮ್ಮ ಸಂಭಾಷಣೆಗಳನ್ನು ನಾವು ಭಕ್ತಿವೃದ್ಧಿಮಾಡುವಂತಹ ವಿಚಾರಗಳ ಮೇಲೆ ಕೇಂದ್ರೀಕರಿಸುವುದಾದರೆ, ಅವು ಹಿತಕರವಾದ ಪರಿಣಾಮವನ್ನು ಬೀರುವವು. ಆದುದರಿಂದ, ನಮ್ಮ ನಿರೂಪಣೆಯನ್ನು ತಯಾರಿಸುವಾಗ ಮತ್ತು ನಾವು ನೀಡಲಿರುವ ಪ್ರಕಾಶನವನ್ನು ಪರಿಗಣಿಸುವಾಗ, ನಮ್ಮ ಸಂದೇಶದ ಸಕಾರಾತ್ಮಕ ಅಂಶಗಳನ್ನು ನಾವು ಎತ್ತಿತೋರಿಸುವ ಅಗತ್ಯವಿದೆ. ನಮ್ಮ ಬೈಬಲಾಧಾರಿತ ನಿರೀಕ್ಷೆಯನ್ನು ದೃಢಭರವಸೆಯಿಂದ ಹಾಗೂ ಹುರುಪಿನಿಂದ ತಿಳಿಯಪಡಿಸುವ ಮೂಲಕ, ಉತ್ತೇಜನದಾಯಕ ಫಲಿತಾಂಶಗಳನ್ನು ನಾವು ಎದುರುನೋಡಸಾಧ್ಯವಿದೆ.—ಜ್ಞಾನೋ. 25:11.
3 ತೀರ ಹದಗೆಡುತ್ತಿರುವ ಲೋಕದ ಪರಿಸ್ಥಿತಿಗಳಿಂದ ತಾವು ಹೇಗೆ ಬಾಧಿಸಲ್ಪಟ್ಟಿದ್ದೇವೆ ಎಂಬುದನ್ನು ಜನರು ವ್ಯಕ್ತಪಡಿಸುವಾಗ ನಾವು ಸಹಾನುಭೂತಿಯನ್ನು ತೋರಿಸುತ್ತೇವಾದರೂ, ಮಾನವನ ಸಮಸ್ಯೆಗಳಿಗೆ ದೇವರ ರಾಜ್ಯವೊಂದೇ ನಿಜವಾದ ಪರಿಹಾರವಾಗಿದೆ ಎಂಬುದನ್ನು ನಾವು ಅವರಿಗೆ ತಿಳಿಸಬೇಕು. ಯೆಹೋವನ ಬರಲಿರುವ “ಮುಯ್ಯಿತೀರಿಸುವ ದಿನ”ದ ಕುರಿತು ಚರ್ಚಿಸುತ್ತಿರುವಾಗಲೂ, ಇದು ಹೇಗೆ “ದೀನರಿಗೆ ಶುಭ ವಾರ್ತೆ”ಯಂತಿದೆ ಎಂಬುದನ್ನು ನಾವು ಅವರಿಗೆ ತೋರಿಸಲು ಬಯಸುತ್ತೇವೆ. (ಯೆಶಾ. 61:1, 2, NW) ಯೆಹೋವನು ಮಾಡುವ ಪ್ರತಿಯೊಂದು ಏರ್ಪಾಡು, ಅತ್ಯಾನಂದವನ್ನು ಹಾಗೂ ಸಾಧ್ಯವಿರುವಷ್ಟು ಅತ್ಯುತ್ತಮ ಪರಿಣಾಮವನ್ನು ತರುವುದು ಎಂಬ ಪುನರಾಶ್ವಾಸನೆಯನ್ನು ನಾವು ನಮ್ಮ ಕೇಳುಗರಿಗೆ ಕೊಡಸಾಧ್ಯವಿದೆ.
4 ನಿಜವಾದ ಆನಂದದಿಂದ ಸತ್ಯವನ್ನು ತಿಳಿಯಪಡಿಸಿರಿ: ಜನರು ನಮ್ಮ ಹರ್ಷಚಿತ್ತ ಮುಖಭಾವವನ್ನು ನೋಡುತ್ತಾ, ದೃಢನಿಶ್ಚಿತ ಧ್ವನಿಯನ್ನು ಕೇಳಿಸಿಕೊಳ್ಳುವಾಗ, ಅವರು ನಮ್ಮ ಸಂದೇಶಕ್ಕೆ ಕಿವಿಗೊಡಲು ಹೆಚ್ಚು ಮನಸ್ಸುಮಾಡುತ್ತಾರೆ. ನಮಗೆ ಆಶಾವಾದದ ಹೊರನೋಟವಿರುವಲ್ಲಿ, ‘ನಿರೀಕ್ಷೆಯಲ್ಲಿ ಉಲ್ಲಾಸಿಸುತ್ತೇವೆ’ ಎಂಬುದನ್ನು ನಮ್ಮ ಕೇಳುಗರು ಗ್ರಹಿಸುವರು. (ರೋಮಾ. 12:12) ಆಗ ಅವರು ಸುವಾರ್ತೆಗೆ ಪ್ರತಿಕ್ರಿಯಿಸುವ ಮನೋಭಾವವುಳ್ಳವರಾಗಬಹುದು. ಖಂಡಿತವಾಗಿಯೂ, ನಮ್ಮ ಶುಶ್ರೂಷೆಯ ಪ್ರತಿಯೊಂದು ಕ್ಷೇತ್ರದಲ್ಲಿ ಒಂದು ಸಕಾರಾತ್ಮಕವಾದ, ಹರ್ಷಚಿತ್ತ ಮನೋಭಾವವನ್ನು ತೋರಿಸಲು ನಮಗೆ ಯಾವಾಗಲೂ ಸಕಾರಣವಿದೆ.
5 ಸುವಾರ್ತೆಯ ಶುಶ್ರೂಷಕರೋಪಾದಿ ನಾವು ಕೇವಲ ಮಾಹಿತಿಯನ್ನು ಕೊಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತೇವೆ. ನಮ್ಮ ಸಾರುವಿಕೆಯು, ಈಗ ಹಾಗೂ ಭವಿಷ್ಯತ್ತಿನಲ್ಲಿ ಹೆಚ್ಚು ಉತ್ತಮವಾದ ಜೀವಿತದ ನಿರೀಕ್ಷೆಯನ್ನು ನೀಡುತ್ತದೆ. (1 ತಿಮೊ. 4:8) ಪ್ರತಿಯೊಬ್ಬ ವ್ಯಕ್ತಿಯನ್ನು ನಾವು ಎದುರುಗೊಳ್ಳುವಾಗ, ನಾವು ಹೇಳುವಂತಹ ವಿಷಯದಲ್ಲಿ ನಮ್ಮ ಸಕಾರಾತ್ಮಕ ಮನೋಭಾವವು ವ್ಯಕ್ತಪಡಿಸಲ್ಪಡುವುದು ಮತ್ತು ಸುವಾರ್ತೆಯನ್ನು ಅಂಗೀಕರಿಸುವಂತೆ ಜನರಿಗೆ ಸಹಾಯ ಮಾಡುವುದು. ನಾವು ಏನು ಹೇಳುತ್ತೇವೆ ಮತ್ತು ಅದನ್ನು ಹೇಗೆ ಹೇಳುತ್ತೇವೆ ಎಂಬ ವಿಷಯಕ್ಕೆ ಗಮನ ಕೊಡುವ ಮೂಲಕ, ನಾವು ಸಾರುವ ರೋಮಾಂಚಕವಾದ ಶುಭ ವಾರ್ತೆಯನ್ನು ಪ್ರಾಮಾಣಿಕ ಹೃದಯದ ಜನರು ಸ್ವೀಕರಿಸುವಂತೆ ನಾವು ಅವರನ್ನು ಪ್ರಚೋದಿಸೋಣ!