ನೀವು ಒಬ್ಬ ಕ್ರಮದ ರಾಜ್ಯ ಘೋಷಕರಾಗಿದ್ದೀರೊ?
1 ಭಾರತವು 1999ರ ಆಗಸ್ಟ್ ತಿಂಗಳಿನಲ್ಲಿ 21,212 ಪ್ರಚಾರಕರನ್ನು ವರದಿಸುವ ಮೂಲಕ ಇದುವರೆಗಿನ ವರದಿಗಳಲ್ಲೇ ಉಚ್ಚಾಂಕವನ್ನು ಮುಟ್ಟಿತು ಎಂಬುದನ್ನು ತಿಳಿದುಕೊಂಡಾಗ ನಮಗೆಲ್ಲರಿಗೆ ಸಂತೋಷವಾಯಿತು. ಇದು ನಿಜವಾಗಿಯೂ ಒಂದು ಐಕ್ಯ ಮತ್ತು ನಿಶ್ಚಿತವಾದ ಪ್ರಯತ್ನವೇ ಆಗಿತ್ತು! ಆದರೆ ತದನಂತರದ ತಿಂಗಳುಗಳಲ್ಲಿ ಈ ಪ್ರಚಾರಕರಲ್ಲಿ ಕೆಲವರಿಗೆ ಕ್ರಮದ ರಾಜ್ಯ ಘೋಷಕರಾಗಿರುವುದು ಕಷ್ಟಕರವಾಗಿ ತೋರಿತು, ಅಂದಿನಿಂದ ಪ್ರತಿ ತಿಂಗಳಿನ ಸರಾಸರಿಯು ಸುಮಾರು 20,095ಕ್ಕೆ ಇಳಿಯಿತು. ಹೀಗೆ, 19 ಪ್ರಚಾರಕರಲ್ಲಿ ಒಬ್ಬನು ಶುಶ್ರೂಷೆಯಲ್ಲಿ ಪ್ರತಿ ತಿಂಗಳು ಭಾಗವಹಿಸಲು ಏರ್ಪಾಡು ಮಾಡಿಲ್ಲವೆಂಬುದನ್ನು ಇದು ತೋರಿಸುತ್ತದೆ. ಕೆಳಗೆ ನೀಡಲ್ಪಟ್ಟಿರುವ ಈ ಉತ್ತೇಜನವು ಸನ್ನಿವೇಶವನ್ನು ಸರಿಪಡಿಸುವುದರಲ್ಲಿ ಸಹಾಯಮಾಡುವುದೆಂಬುದು ನಮ್ಮ ಆಶಯ.
2 ಸುಯೋಗವನ್ನು ಗಣ್ಯಮಾಡಿರಿ: ರಾಜ್ಯದ ಸುವಾರ್ತೆಯನ್ನು ಇತರರಿಗೆ ಹಂಚುವ ಸುಯೋಗಕ್ಕಾಗಿ ನಮಗೆ ಆಳವಾದ ಗಣ್ಯತೆಯಿರಬೇಕು. ಈ ಚಟುವಟಿಕೆಯು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತದೆ ಮತ್ತು ಪ್ರಾಮಾಣಿಕ ಹೃದಯದ ಜನರು ಜೀವದ ದಾರಿಯನ್ನು ಕಂಡುಕೊಳ್ಳುವಂತೆ ಸಹಾಯಮಾಡುತ್ತದೆ. (ಜ್ಞಾನೋ. 27:11; 1 ತಿಮೊ. 4:16) ಸಾಕ್ಷಿಕಾರ್ಯದಲ್ಲಿ ಕ್ರಮವಾಗಿ ಭಾಗವಹಿಸುವುದರಿಂದ ಶುಶ್ರೂಷೆಯಲ್ಲಿ ನಮಗಿರುವ ಅನುಭವವು ಹೆಚ್ಚಾಗುತ್ತದೆ ಮತ್ತು ಇದು ಆನಂದ ಹಾಗೂ ದೇವರ ಸೇವೆಯಲ್ಲಿ ಕಾರ್ಯಮಾಡಿದ್ದೇನೆಂಬ ಸಂತೃಪ್ತಿಯ ಭಾವನೆಯನ್ನು ಉಂಟುಮಾಡುತ್ತದೆ.
3 ಸೇವಾ ಚಟುವಟಿಕೆಯ ವರದಿಯನ್ನು ಹಾಕಿರಿ: ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವ ಕೆಲವರು ತಮ್ಮ ಸೇವಾ ಚಟುವಟಿಕೆಯನ್ನು ಸಮಯಕ್ಕೆ ಸರಿಯಾಗಿ ವರದಿಸುವ ವಿಷಯದಲ್ಲಿ ಉದಾಸೀನರಾಗಿರುತ್ತಾರೆ. ನಮ್ಮ ಪ್ರಯಾಸವು ವರದಿಸುವಷ್ಟು ಯೋಗ್ಯವಲ್ಲವೆಂದು ನಾವು ಎಂದಿಗೂ ನೆನಸಬಾರದು. (ಮಾರ್ಕ 12:41-44ನ್ನು ಹೋಲಿಸಿರಿ.) ನಾವು ಸೇವೆಯಲ್ಲಿ ಮಾಡಿರುವುದನ್ನು ಖಂಡಿತವಾಗಿಯೂ ವರದಿಸಬೇಕು! ಹೀಗೆ, ಶುಶ್ರೂಷೆಯಲ್ಲಿ ನಾವು ಕಳೆದ ಸಮಯವನ್ನು ಒಂದು ಕ್ಯಾಲೆಂಡರಿನ ಮೇಲೆ ಬರೆದಿಡುವ ವ್ಯವಸ್ಥೆ ಮನೆಯಲ್ಲಿರುವುದಾದರೆ, ನಾವು ಪ್ರತಿ ತಿಂಗಳಿನ ಕೊನೆಯಲ್ಲಿ ಸರಿಯಾದ ವರದಿಯನ್ನು ತಡಮಾಡದೆ ಹಾಕುವಂತೆ ಇದು ಕ್ರಮವಾದ ಮರುಜ್ಞಾಪನವಾಗಿ ಕಾರ್ಯಮಾಡುವುದು.
4 ಅಗತ್ಯವಾಗಿರುವ ಸಹಾಯವನ್ನು ಕೊಡಿರಿ: ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸಲು ಸಹಾಯದ ಅಗತ್ಯವಿರುವವರಿಗೆ ನೆರವು ನೀಡಲು, ಸ್ಥಳಿಕ ಏರ್ಪಾಡುಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಬೇಕಾಗಬಹುದು. ಅನುಭವೀ ಪ್ರಚಾರಕರು ಇಂತಹವರಿಗೆ ಸಹಾಯದ ಹಸ್ತವನ್ನು ನೀಡುವಂತೆ ಸಭೆಯ ಸೆಕ್ರಿಟರಿ ಮತ್ತು ಪುಸ್ತಕ ಅಭ್ಯಾಸ ಚಾಲಕರು ಏರ್ಪಾಡುಗಳನ್ನು ಮಾಡಬೇಕು. ನಿಮಗೆ ಮಕ್ಕಳು ಅಥವಾ ಅಸ್ನಾನಿತ ಪ್ರಚಾರಕರಾಗಿರುವ ಇತರ ಬೈಬಲ್ ವಿದ್ಯಾರ್ಥಿಗಳು ಇರುವುದಾದರೆ, ಅವರು ಪ್ರತಿ ತಿಂಗಳು ತಮ್ಮ ಸೇವಾ ಚಟುವಟಿಕೆಯ ವರದಿಯನ್ನು ಹಾಕುವಂತೆ ತರಬೇತಿನೀಡಿರಿ.
5 ಅಕ್ಟೋಬರ್ 1, 1997ರ ಕಾವಲಿನಬುರುಜು ಪತ್ರಿಕೆಯಲ್ಲಿ ಬಂದಿರುವ “ಯೆಹೋವನ ಸೇವೆಯಲ್ಲಿನ ದೀರ್ಘಾಯುಷ್ಯಕ್ಕಾಗಿ ಕೃತಜ್ಞಳು” ಎಂಬ ಶೀರ್ಷಿಕೆಯ ಜೀವನ ಕಥೆಯನ್ನು ನೆನಪಿಸಿಕೊಳ್ಳಿರಿ. ನಾರ್ವೆಯಲ್ಲಿ ವಾಸಿಸುವ ಸಹೋದರಿ ಓಟೀಲ್ಯ ಮಿಡ್ಲನ್ ಅವರು, ತಮ್ಮ ದೀಕ್ಷಾಸ್ನಾನದ ಮುಂಚೆ, ಅಂದರೆ 1921ರಲ್ಲಿ ಸುವಾರ್ತೆಯ ಕ್ರಮವಾದ ಪ್ರಚಾರಕರಾದರು. ಇದಾದ ಎಪ್ಪತ್ತಾರು ವರ್ಷಗಳ ನಂತರ, ಅಂದರೆ ತಮ್ಮ 99ನೇ ಪ್ರಾಯದಲ್ಲಿ ಅವರು ಹೇಳಿದ್ದು: “ಇನ್ನೂ ಕೂಡ ನಾನು ಒಬ್ಬ ಕ್ರಮವಾದ ಪ್ರಚಾರಕಳಾಗಿರಲು ಸಾಧ್ಯವಾಗಿರುವುದಕ್ಕಾಗಿ ನನಗೆ ಸಂತೋಷವಾಗುತ್ತದೆ.” ಎಲ್ಲ ಯೆಹೋವನ ಸೇವಕರು ಅನುಕರಿಸಬೇಕಾದ ಎಂತಹ ಅದ್ಭುತಕರವಾದ ಮನೋಭಾವವಿದು!