ಹಿಂದಿರುಗಿ ಹೋಗಲು ಮರೆಯಬೇಡಿರಿ!
1 “ಆ ಸಂಭಾಷಣೆ ಬಹಳ ಉತ್ತಮವಾಗಿತ್ತು! ಪುನರ್ಭೇಟಿ ಮಾಡಲು ನಾನು ಖಂಡಿತವಾಗಿಯೂ ಆ ಮನೆಗೆ ಪುನಃ ಹೋಗಬೇಕು.” ಇದೇ ಮಾತುಗಳನ್ನು ನೀವು ಹೇಳಿರಬಹುದಾದರೂ, ಆ ವ್ಯಕ್ತಿ ಎಲ್ಲಿ ವಾಸಿಸುತ್ತಾನೆ ಎಂಬುದನ್ನೇ ತದನಂತರ ಮರೆತುಬಿಟ್ಟ ಸಂದರ್ಭ ನಿಮಗೆ ಒದಗಿಬಂದಿದೆಯೊ? ಹಾಗಿದ್ದರೆ, ಹಿಂದಿರುಗಿ ಹೋಗುವುದನ್ನು ಖಾತ್ರಿಪಡಿಸಿಕೊಳ್ಳಲು ನಿಮಗಿರುವ ಒಂದೇ ಒಂದು ಮಾರ್ಗವು ಆ ಮಾಹಿತಿಯನ್ನು ಬರೆದಿಡುವುದೇ ಆಗಿದೆ.
2 ಅದೆಲ್ಲವನ್ನು ಬರೆದಿಡಿರಿ: ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ನಡೆಸಿದ ಸಂಭಾಷಣೆಯು ನಿಮ್ಮ ನೆನಪಿನಲ್ಲಿ ಇನ್ನೂ ಹಚ್ಚಹಸುರಾಗಿರುವಾಗಲೇ, ಆ ಭೇಟಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಬರೆದಿಟ್ಟುಕೊಳ್ಳಲು ಸಮಯ ತೆಗೆದುಕೊಳ್ಳಿರಿ. ಆ ವ್ಯಕ್ತಿಯ ಹೆಸರನ್ನು ಮತ್ತು ಅವನನ್ನು ನೀವು ಹೇಗೆ ಗುರುತಿಸುವಿರೆಂಬುದನ್ನು ಚುಟುಕಾಗಿ ಬರೆದಿಟ್ಟುಕೊಳ್ಳಿರಿ. ಅವನ ವಿಳಾಸವನ್ನು ಬರೆದಿಟ್ಟುಕೊಳ್ಳುವಾಗ, ಅದನ್ನು ಊಹಿಸಿಕೊಂಡು ಬರೆಯದೆ, ನೀವು ಬರೆಯುವ ಎಲ್ಲ ವಿಷಯವು ಸರಿಯಾಗಿದೆಯೊ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪುನಃ ಅದನ್ನು ಪರಿಶೀಲಿಸಿರಿ. ನೀವು ಮಾತಾಡಿದ ವಿಷಯವನ್ನು, ಓದಿದ ಯಾವುದೇ ವಚನಗಳನ್ನು ಮತ್ತು ಆ ಮನೆಯವನಿಗೆ ನೀಡಲಾದ ಸಾಹಿತ್ಯದ ಕುರಿತು ಬರೆದಿಟ್ಟುಕೊಳ್ಳಿರಿ.
3 ಮುಂದಿನ ಭೇಟಿಯಲ್ಲಿ ಉತ್ತರಿಸಲ್ಪಡಲಿರುವ ಒಂದು ಪ್ರಶ್ನೆಯನ್ನು ನೀವು ಆ ವ್ಯಕ್ತಿಗೆ ಕೇಳಿರುವುದಾದರೆ, ಅದನ್ನು ಸಹ ಬರೆದಿಟ್ಟುಕೊಳ್ಳಿರಿ. ನೀವು ಆ ವ್ಯಕ್ತಿ, ಅವನ ಕುಟುಂಬ ಅಥವಾ ಅವನ ಧರ್ಮದ ಕುರಿತು ಏನನ್ನಾದರೂ ತಿಳಿದುಕೊಂಡಿದ್ದೀರೋ? ಹಾಗಿರುವುದಾದರೆ, ಅದನ್ನು ಸಹ ಚುಟುಕಾಗಿ ಬರೆದಿಡಿರಿ. ನೀವು ಮುಂದಿನ ಬಾರಿ ಭೇಟಿಮಾಡಿದಾಗ, ಇದನ್ನು ಆ ವ್ಯಕ್ತಿಗೆ ತಿಳಿಸುವುದರಿಂದ ನಿಮಗೆ ಅವರ ವಿಷಯದಲ್ಲಿ ವೈಯಕ್ತಿಕ ಆಸಕ್ತಿಯಿದೆ ಎಂಬುದನ್ನು ತೋರಿಸುವಿರಿ. ಕೊನೆಗೆ, ಆರಂಭದ ಭೇಟಿಯನ್ನು ಮಾಡಿದ ದಿನ ಮತ್ತು ಸಮಯವನ್ನು ಸಹ ಬರೆದುಕೊಳ್ಳಿರಿ ಮತ್ತು ಪುನಃ ಯಾವಾಗ ಬರುವಿರೆಂದು ಹೇಳಿದ ಸಮಯವನ್ನು ಸಹ ಬರೆದಿಟ್ಟುಕೊಳ್ಳಿರಿ. ಸರಿಯಾದ ಟಿಪ್ಪಣಿಗಳನ್ನು ಬರೆದಿಡುವ ಮೂಲಕ, ಮಾಹಿತಿಯು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಮತ್ತು ಹಿಂದಿರುಗಿ ಬರುವಿರೆಂದು ನೀವು ಕೊಟ್ಟ ಮಾತನ್ನು ಮರೆತುಬಿಡುವ ಸಾಧ್ಯತೆಯು ಸಹ ಕಡಿಮೆಯಾಗಿರುತ್ತದೆ.—1 ತಿಮೊ. 1:12.
4 ನಿಮ್ಮ ದಾಖಲೆಯು ಪೂರ್ಣಗೊಂಡ ನಂತರ, ಅದನ್ನು ನಿಮ್ಮ ಕ್ಷೇತ್ರ ಸೇವೆಯ ಇತರ ಸಾಧನಗಳಾದ ಪುಸ್ತಕವನ್ನಿಡುವ ಬ್ಯಾಗ್, ರೀಸನಿಂಗ್ ಪುಸ್ತಕ ಮತ್ತು ಸಾಹಿತ್ಯದೊಂದಿಗೆ ಇಡಿರಿ, ಹೀಗೆ ಮಾಡುವುದರಿಂದ ಅದು ಯಾವಾಗಲೂ ನಿಮ್ಮ ಬಳಿಯಲ್ಲೇ ಇರುವುದು. ಮನೆಯಲ್ಲಿರದವರ ದಾಖಲೆಯನ್ನಿಡಲು ಮತ್ತು ನಿಮ್ಮ ಪುನರ್ಭೇಟಿಗಳ ಬಗ್ಗೆ ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳಲು ಬೇರೆ ಬೇರೆ ಮನೆ ಮನೆಯ ರೆಕಾರ್ಡ್ಗಳನ್ನು ಉಪಯೋಗಿಸುವುದು ಒಳ್ಳೇದು. ನಿಜ, ಪುನರ್ಭೇಟಿಗಳ ಬಗ್ಗೆ ಸರಿಯಾದ ದಾಖಲೆಯನ್ನಿಡಲು ನೀವು ಸಾಕಷ್ಟು ಪ್ರಯಾಸಪಟ್ಟಿರಬಹುದಾದರೂ, ಪುನಃ ಭೇಟಿಮಾಡಲು ಮರೆಯದಿರುವುದೇ ಪ್ರಾಮುಖ್ಯವಾದ ವಿಷಯವಾಗಿದೆ!
5 ಮನೆಯವನ ಕುರಿತು ಆಲೋಚಿಸಿರಿ: ಶುಶ್ರೂಷೆಗಾಗಿ ತಯಾರಿಮಾಡುವಾಗ, ಪುನರ್ಭೇಟಿಗಳ ಬಗ್ಗೆ ನೀವು ಬರೆದಿರುವ ಟಿಪ್ಪಣಿಗಳನ್ನು ಪುನರ್ವಿಮರ್ಶಿಸಿರಿ. ಪ್ರತಿಯೊಬ್ಬ ವ್ಯಕ್ತಿಯ ಕುರಿತು ಮತ್ತು ಮುಂದಿನ ಭೇಟಿಯನ್ನು ಮಾಡುವಾಗ ಯಾವ ರೀತಿಯಲ್ಲಿ ಆರಂಭಿಸಿದರೆ ಉತ್ತಮವಾಗಿರಬಹುದೆಂಬುದರ ಕುರಿತು ಚಿಂತನೆಮಾಡಿ. ಮನೆಯವನ ಆಸಕ್ತಿಯನ್ನು ಕೆರಳಿಸಿ, ಅದನ್ನು ಒಂದು ಮನೆ ಬೈಬಲ್ ಅಭ್ಯಾಸವಾಗಿ ಹೇಗೆ ಪರಿವರ್ತಿಸಬಹುದೆಂಬುದರ ಕುರಿತು ಆಲೋಚಿಸಿರಿ. ಈ ರೀತಿಯಲ್ಲಿ ಯೋಜನೆ ಮಾಡುವುದರಿಂದ, ಸುವಾರ್ತೆಯ ಶುಶ್ರೂಷಕರಾಗಿ ನಿಮಗೆ ಹೇರಳವಾದ ಫಲಗಳು ಸಿಕ್ಕುವವು ಮತ್ತು ಹೀಗೆ ನಿಮ್ಮ ವೈಯಕ್ತಿಕ ಆನಂದವು ಸಹ ಹೆಚ್ಚುವುದು.—ಜ್ಞಾನೋ. 21:5ಎ.
6 ಹಾಗಾದರೆ ಮುಂದಿನ ಸಲ, ನೀವು ಹೇಳುವ ವಿಷಯಕ್ಕೆ ಚೆನ್ನಾಗಿ ಕಿವಿಗೊಡುವ ಒಬ್ಬನನ್ನು ನೀವು ಭೇಟಿಯಾಗುವುದಾದರೆ, ಈ ಭೇಟಿಯನ್ನು ಸುಲಭವಾಗಿ ನೆನಪಿನಲ್ಲಿಡಬಹುದೆಂದು ಹೇಳಿ ಸಮರ್ಥಿಸಿಕೊಳ್ಳಬೇಡಿ. ಅದರ ಬದಲು ಬರೆದಿಡಿರಿ, ನಿಮ್ಮ ಟಿಪ್ಪಣಿಗಳನ್ನು ಪುನರ್ವಿಮರ್ಶಿಸಿರಿ, ಮನೆಯವನ ಕುರಿತು ಆಲೋಚಿಸುತ್ತಾ ಇರಿ, ಅನಂತರ ಹಿಂದಿರುಗಿ ಹೋಗಲು ಮರೆಯಬೇಡಿರಿ!