ಟೆಲಿಫೋನ್ ಸಾಕ್ಷಿಕಾರ್ಯವು ಅನೇಕರನ್ನು ತಲಪಲಿಕ್ಕಾಗಿರುವ ಒಂದು ಮಾರ್ಗವಾಗಿದೆ
1 ನಾವು ಈಗ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದಕ್ಕೆ ಸಾಕಷ್ಟು ಪುರಾವೆಯಿದೆ. (2 ತಿಮೊ. 3:1) ರಾಜ್ಯ ಸಾರುವಿಕೆಗಾಗಿ ಮತ್ತು ಶಿಷ್ಯರನ್ನಾಗಿ ಮಾಡಲಿಕ್ಕಾಗಿ ಉಳಿದಿರುವ ಸಮಯವು ಬಹಳ ಕಡಿಮೆಯಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದುದರಿಂದ, ಯೆಹೋವ ದೇವರ ಅಂಗೀಕೃತ ಆರಾಧಕರಾಗುವಂತೆ ಇತರರಿಗೆ ಸಹಾಯ ಮಾಡಲಿಕ್ಕಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ತ್ವರಿತವಾಗಿ ಕಾರ್ಯನಡಿಸಬೇಕು.
2 ತನ್ನ ನಂಬಿಕೆಯ ಕುರಿತಾದ ಸಾರ್ವಜನಿಕ ಘೋಷಣೆಯನ್ನು ಮಾಡುವ ತನ್ನ ಜವಾಬ್ದಾರಿಯನ್ನು ಅಪೊಸ್ತಲ ಪೌಲನು ಮನಗಂಡನು. (ರೋಮಾ. 10:10) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ [ದೇವರ] ಚಿತ್ತವಾಗಿದೆ” ಎಂಬುದು ಅವನಿಗೆ ತಿಳಿದಿತ್ತು. (1 ತಿಮೊ. 2:4) ಸತ್ಯದ ಕುರಿತಾದ ತನ್ನ ಜ್ಞಾನದ ಮೇಲಾಧಾರಿಸಿ, ಪೌಲನು ತನ್ನನ್ನು ಎಲ್ಲರಿಗೆ ಋಣಿಯನ್ನಾಗಿ ಪರಿಗಣಿಸಿಕೊಂಡನು. ಇದು ಸುವಾರ್ತೆಯನ್ನು ಸಾರುವುದರಲ್ಲಿ ಅವನಿಗಿದ್ದ ತುರ್ತು ಪ್ರಜ್ಞೆಯನ್ನು ಹೆಚ್ಚಿಸಿತು. ಅವನು ಹೇಳಿದ್ದು: “ನಿಮಗೆ ಸಹ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ. ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು . . . ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ.”—ರೋಮಾ. 1:14-17.
3 ವೈಯಕ್ತಿಕವಾಗಿ ನಮಗೂ ಇದೇ ರೀತಿಯ ಕೃತಜ್ಞತಾಭಾವವು ಇದೆಯೊ ಮತ್ತು ನಾವು ನಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರನ್ನು ಭೇಟಿಯಾಗಲಿಕ್ಕಾಗಿ ತದ್ರೀತಿಯ ಆತುರತೆಯನ್ನು ತೋರಿಸುತ್ತೇವೊ? ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಮತ್ತು ಬೀದಿ ಸಾಕ್ಷಿಕಾರ್ಯದಲ್ಲಿ ನಾವು ಇತರರೊಂದಿಗೆ ಮುಖಾಮುಖಿಯಾಗಿ ಸುವಾರ್ತೆಯನ್ನು ಸಾರಲು ಇಷ್ಟಪಡುವಾಗ, ನಮ್ಮ ಚಟುವಟಿಕೆಯನ್ನು ನಾವು ಇಷ್ಟಕ್ಕೆ ಮಾತ್ರ ಏಕೆ ಸೀಮಿತಗೊಳಿಸಬೇಕು? ಇಷ್ಟರ ತನಕ ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಿರದಂತಹ ಅನೇಕ ವ್ಯಕ್ತಿಗಳು ನಮ್ಮ ಸಭೆಯ ಟೆರಿಟೊರಿಯಲ್ಲಿ ಇರಬಹುದು. ಹೇಗೆ?
4 ಇದುವರೆಗೆ ಕೆಲಸಮಾಡಿರದಂತಹ ಟೆರಿಟೊರಿ: ಕಾವಲುಗಾರರು ಇರುವ ಅನೇಕ ಮಹಡಿಗಳುಳ್ಳ ವಾಸದ ಕಟ್ಟಡಗಳು ನಿಮ್ಮ ಟೆರಿಟೊರಿಯಲ್ಲಿ ಇವೆಯೊ? ಬಹುಶಃ ಮನೆಯಿಂದ ಮನೆಯ ಭೇಟಿಗೆ ಅವಕಾಶ ಕೊಡದಿರುವಂತಹ ಅತ್ಯಧಿಕ ಭದ್ರತೆಯುಳ್ಳ ಕಾಂಪ್ಲೆಕ್ಸ್ಗಳು ಇವೆ. ನಿಮ್ಮ ಸಭೆಗೆ, ನಿಮ್ಮ ಟೆರಿಟೊರಿಯಲ್ಲಿರುವ ಭದ್ರತಾ ಪಡೆಯ ಸಿಬ್ಬಂದಿಗಳ ವಾಸದ ಕ್ವಾಟರ್ಸ್ಗಳಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ಪ್ರವೇಶವನ್ನು ನಿರಾಕರಿಸಲಾಗಿದೆಯೊ? ಅಂತಹ ಸ್ಥಳಗಳಲ್ಲಿ ವಾಸಿಸುತ್ತಿರುವ ಜನರು ಎಂದೂ ದೇವರ ರಾಜ್ಯದ ಆಶೀರ್ವಾದಗಳ ಕುರಿತು ಕೇಳಿಸಿಕೊಂಡಿಲ್ಲದಿರುವುದು ತೀರ ಸಂಭವನೀಯ. ಯಾವ ಸಮಯದಲ್ಲೂ ಮನೆಯಲ್ಲಿ ಸಿಗದಂತಹ ಜನರು ನಿಮ್ಮ ಟೆರಿಟೊರಿಯಲ್ಲಿದ್ದಾರೋ?
5 ಈ ಜನರನ್ನು ಸಂಪರ್ಕಿಸುವುದು ತುಂಬ ಕಷ್ಟಕರವಾಗಿರುವುದರಿಂದ ಅವರನ್ನು ತಲಪಲು ಸಾಧ್ಯವೇ ಇಲ್ಲವೆಂದು ನಾವು ನಿರಾಶೆಗೊಳ್ಳಬೇಕಾಗಿಲ್ಲ. ಈ ಸನ್ನಿವೇಶವನ್ನು ಯೆಹೋವನು ಹೇಗೆ ಪರಿಗಣಿಸುತ್ತಾನೆ? ಅಪೊಸ್ತಲ ಪೇತ್ರನು ಬರೆಯುವುದು: “ಯಾವನಾದರೂ ನಾಶವಾಗುವದರಲ್ಲಿ ಆತನು [“ಯೆಹೋವನು,” NW] ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ. . . . ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ.” (2 ಪೇತ್ರ 3:9, 15) ಜನರ ಜೀವಗಳು ಇದರಲ್ಲಿ ಒಳಗೂಡಿವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯೆಹೋವನು ಆಸಕ್ತನಾಗಿದ್ದಾನೆ. (ಮತ್ತಾ. 18:14) ಈ ವ್ಯಕ್ತಿಗಳಿಗೆ ಯೆಹೋವನು ತೋರಿಸುವಂತಹ ರೀತಿಯಲ್ಲಿಯೇ ಸಹಾನುಭೂತಿ ಮತ್ತು ಕರುಣೆಯನ್ನು ನಾವು ಹೇಗೆ ತೋರಿಸಸಾಧ್ಯವಿದೆ? ನಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರಿಗೂ ಸಾಕ್ಷಿ ಕೊಡಲು ಪ್ರಯತ್ನಿಸುವ ಮೂಲಕವೇ.—ಅ. ಕೃ. 20:20, 21; ಪ್ರಕ. 14:6, 7.
6 ಸಮಗ್ರವಾದ ಚಟುವಟಿಕೆಗಾಗಿ ವ್ಯವಸ್ಥಾಪಿಸಲ್ಪಡುವುದು: ಅನಾರೋಗ್ಯ ಅಥವಾ ಶಾರೀರಿಕ ದೌರ್ಬಲ್ಯದ ಕಾರಣ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮನೆಯಲ್ಲೇ ಉಳಿಯಬೇಕಾಗಿರುವವರು ಟೆಲಿಫೋನಿನ ಸದುಪಯೋಗವನ್ನು ಮಾಡುವಂತೆ ಈ ಮುಂಚೆ ಸೊಸೈಟಿಯು ಅವರನ್ನು ಉತ್ತೇಜಿಸಿದೆ. ಇಂತಹ ವ್ಯಕ್ತಿಗಳು ಟೆಲಿಫೋನ್ ಸಾಕ್ಷಿಕಾರ್ಯವನ್ನು ಮುಂದುವರಿಸಬೇಕು. ಅಷ್ಟುಮಾತ್ರವಲ್ಲ, ರೆಗ್ಯುಲರ್ ಹಾಗೂ ಆಕ್ಸಿಲಿಯರಿ ಪಯನೀಯರರನ್ನೂ ಒಳಗೊಂಡು ಅನೇಕ ಸಹೋದರ ಸಹೋದರಿಯರು, ತಮ್ಮ ಮನೆಯಿಂದ ಮನೆಯ ಶುಶ್ರೂಷೆಗೆ ಟೆಲಿಫೋನ್ ಸಾಕ್ಷಿಕಾರ್ಯವನ್ನು ಕೂಡಿಸಿದ್ದಾರೆ ಎಂಬ ವರದಿಗಳು ಬಂದಿವೆ.
7 ಟೆಲಿಫೋನ್ ಸಾಕ್ಷಿಕಾರ್ಯವನ್ನು ಏರ್ಪಡಿಸಲು ಕೆಲವು ಸಭೆಗಳು ಒಟ್ಟುಗೂಡಿ ಪ್ರಯತ್ನಗಳನ್ನು ಮಾಡಿವೆ. ಟೆರಿಟೊರಿಗಳನ್ನು ನೇಮಿಸುವುದರಲ್ಲಿ ಮತ್ತು ವ್ಯಕ್ತಿಗತವಾಗಿ ಅಥವಾ ಇನ್ನಿತರ ಪ್ರಚಾರಕರ ಮೂಲಕ ಬೆಂಬಲವನ್ನು ಕೊಡುವುದರಲ್ಲಿ ಹಿರಿಯರು ನಾಯಕತ್ವವನ್ನು ವಹಿಸಿದಾಗ, ಅತ್ಯಧಿಕ ಸಾಫಲ್ಯವು ಸಿಕ್ಕಿದೆ ಎಂದು ವರದಿಸಲಾಗಿದೆ. ಈ ಚಟುವಟಿಕೆಯ ಮೇಲ್ವಿಚಾರಣೆಯನ್ನು ಮಾಡುವ ಜವಾಬ್ದಾರಿಯು ಸೇವಾ ಮೇಲ್ವಿಚಾರಕನದ್ದಾಗಿದೆ. ಆದರೂ, ಈ ಕೆಲಸವನ್ನು ವ್ಯವಸ್ಥಾಪಿಸುವುದರಲ್ಲಿ ಸೇವಾ ಮೇಲ್ವಿಚಾರಕನಿಗೆ ಸಹಾಯಮಾಡಲಿಕ್ಕಾಗಿ, ಹಿರಿಯರ ಮಂಡಲಿಯು ಒಬ್ಬ ಅರ್ಹ ಹಿರಿಯನು ಅಥವಾ ಜವಾಬ್ದಾರಿಯುತ ಶುಶ್ರೂಷಾ ಸೇವಕನನ್ನು ಆಯ್ಕೆಮಾಡಬಹುದು.
8 ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡಲು ಆರಂಭದಲ್ಲಿ ಹಿಂಜರಿಯುತ್ತಿದ್ದರೂ, ಈಗ ಅದನ್ನು ಜಯಿಸಿ, ಅದರಲ್ಲಿ ಅನುಭವವನ್ನು ಪಡೆದುಕೊಂಡಿರುವ ಪ್ರಚಾರಕರು, ಇದನ್ನು ಒಂದು ಫಲದಾಯಕ ಕ್ಷೇತ್ರವಾಗಿ ಕಂಡುಕೊಂಡಿದ್ದಾರೆ. ಮೊದಮೊದಲು ಕೆಲವೇ ಪ್ರಚಾರಕರು ಮತ್ತು ಪಯನೀಯರರು ಈ ಕರೆಗಳನ್ನು ಮಾಡಲು ಪ್ರಯತ್ನಿಸಬಹುದು. ಈ ರೀತಿಯ ಸಾಕ್ಷಿಕಾರ್ಯದೊಂದಿಗೆ ಅವರು ಚಿರಪರಿಚಿತರಾಗಿ, ಇದನ್ನು ಸುಲಭವಾದದ್ದಾಗಿ ಕಂಡುಕೊಂಡ ಬಳಿಕ, ಅವರ ಹುರುಪು ಹಾಗೂ ಉತ್ತೇಜನದಾಯಕ ಅನುಭವಗಳು, ಸಾರುವ ಕೆಲಸದ ಈ ಆಸಕ್ತಿದಾಯಕ ಕ್ಷೇತ್ರದಲ್ಲಿ ಭಾಗವಹಿಸುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವಂತೆ ಇತರರನ್ನು ಪ್ರಚೋದಿಸಬಹುದು.
9 ಹೇಗೆ ಆರಂಭಿಸುವುದು? ಕಟ್ಟಡದ ಪ್ರವೇಶದ್ವಾರದಲ್ಲಿ ಕಂಡುಬರುವ ಹೆಸರುಗಳ ಪಟ್ಟಿಯಿಂದ ಅಥವಾ ಯಾವುದರ ಮೇಲೆ ಮನೆಯ ಯಜಮಾನರ ಹೆಸರುಗಳು ಬರೆಯಲ್ಪಟ್ಟಿರುತ್ತವೋ ಆ ಟಪಾಲು ಪೆಟ್ಟಿಗೆಗಳಿಂದ ಆ ಕಟ್ಟಡ ನಿವಾಸಿಗಳ ಹೆಸರುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು. ಅನಂತರ ಟೆಲಿಫೋನ್ ಡೈರೆಕ್ಟರಿಯಲ್ಲಿ ಅವರ ಟೆಲಿಫೋನ್ ನಂಬರ್ಗಳನ್ನು ಕಂಡುಕೊಳ್ಳಬಹುದು. ಟೆಲಿಫೋನ್ ಡೈರೆಕ್ಟರಿಗಳ ಪ್ರಚಲಿತ ಸಂಚಿಕೆಯಿಂದ ತೆಗೆದ ಜೆರಾಕ್ಸ್ ಪ್ರತಿಗಳನ್ನು ಟೆರಿಟೊರಿಗಳೋಪಾದಿ ಉಪಯೋಗಿಸಸಾಧ್ಯವಿದೆ. ಇಂತಹ ಟೆರಿಟೊರಿಗಳ ಗಾತ್ರವನ್ನು ಹೆಚ್ಚುಕಡಿಮೆ ಚಿಕ್ಕದಾಗಿಡತಕ್ಕದ್ದು.
10 ಎಲ್ಲ ರೀತಿಯ ಸಾರುವ ಚಟುವಟಿಕೆಯಲ್ಲಿ, ಸರಿಯಾದ ದಾಖಲೆಯನ್ನಿಡುವುದು ಬಹಳಷ್ಟು ಪ್ರಯೋಜನವನ್ನು ತರುತ್ತದೆ. ಟೆಲಿಫೋನ್ ಸಾಕ್ಷಿಕಾರ್ಯದ ವಿಷಯದಲ್ಲೂ ಇದು ಸತ್ಯವಾಗಿದೆ. ಚರ್ಚಿಸಲ್ಪಟ್ಟ ವಿಷಯ, ಮನೆಯವನ ಅಭಿರುಚಿಗಳು, ಮತ್ತು ಮುಂದಿನ ಟೆಲಿಫೋನ್ ಕರೆಯಲ್ಲಿ ಚರ್ಚಿಸಲ್ಪಡಲಿಕ್ಕಿರುವ ವಿಷಯಗಳಂತಹ ಸಹಾಯಕರ ಮಾಹಿತಿಯನ್ನು ಮನೆಯಿಂದ ಮನೆಯ ರೆಕಾರ್ಡ್ನಲ್ಲಿ ಜಾಗರೂಕತೆಯಿಂದ ಬರೆದಿಡಿರಿ. ಇನ್ನೊಂದು ದಿನ ಟೆಲಿಫೋನ್ ಕರೆಯನ್ನು ಮಾಡಬೇಕೋ ಅಥವಾ ಒಂದು ವೈಯಕ್ತಿಕ ಭೇಟಿಯು ಏರ್ಪಡಿಸಲ್ಪಟ್ಟಿದೆಯೋ ಎಂಬುದನ್ನು ಅದರಲ್ಲಿ ಸೂಚಿಸಿರಿ.
11 ವೈಯಕ್ತಿಕ ಶೆಡ್ಯೂಲ್ ಅಗತ್ಯ: ಟೆಲಿಫೋನ್ ಸಾಕ್ಷಿಕಾರ್ಯದ ವಿಷಯದಲ್ಲಿ ನಿಮ್ಮ ಭರವಸೆಯನ್ನು ಹೆಚ್ಚಿಸಲು ಹಾಗೂ ಅದರ ಬಗ್ಗೆ ನಿಮಗಿರುವ ಭಯವನ್ನು ನಿವಾರಿಸಲು, ಇದನ್ನು ಕ್ರಮವಾಗಿ ಮಾಡುವುದು ನಿಮಗೆ ಸಹಾಯ ಮಾಡುವುದು. ಜನರು ಮನೆಯಲ್ಲಿರಬಹುದಾದ ಸಮಯದಲ್ಲಿ, ಅಂದರೆ ಸಾಯಂಕಾಲದಲ್ಲಿ ಅಥವಾ ವಾರಾಂತ್ಯಗಳಲ್ಲಿ ಫೋನ್ ಕರೆಯನ್ನು ಮಾಡುವುದು ಅತ್ಯುತ್ತಮ. ಈ ಕರೆಗಳನ್ನು ಮಾಡಲು ಪ್ರತಿ ವಾರ ನಿಗದಿತ ಸಮಯವನ್ನು ಬದಿಗಿರಿಸಿರಿ. ಸಭಾ ಪುಸ್ತಕ ಅಭ್ಯಾಸವು ಆರಂಭವಾಗುವ ಒಂದು ತಾಸಿಗೆ ಮುಂಚಿನ ಅವಧಿಯು ಫೋನ್ ಕರೆಗೆ ಹೆಚ್ಚು ಅನುಕೂಲಕರವಾದದ್ದಾಗಿದೆ ಎಂದು ಕೆಲವರು ಕಂಡುಕೊಂಡಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಯಾವ ಸಮಯದಲ್ಲಿ ಉತ್ತಮ ಫಲಿತಾಂಶಗಳು ದೊರಕುತ್ತವೆ ಎಂಬುದನ್ನು ಕಂಡುಹಿಡಿಯಿರಿ.
12 ತಯಾರಿಮಾಡುವ ವಿಧ: ಈ ಸೇವಾ ಸುಯೋಗದಲ್ಲಿ ಆನಂದಿಸುವಂತಹ ಇತರರೊಂದಿಗೆ ಮಾತಾಡಿರಿ ಮತ್ತು ಅವರಿಂದ ಕೆಲವು ಸಲಹೆಗಳನ್ನು ಪಡೆದುಕೊಳ್ಳಿರಿ. ಯಾವಾಗಲೂ ಸಕಾರಾತ್ಮಕ ಮನೋಭಾವದವರಾಗಿರಿ. ನಿಮ್ಮ ಬಲ ಮತ್ತು ಶಕ್ತಿಯ ಮೂಲನಾಗಿರುವ ಯೆಹೋವನ ಕಡೆಗೆ ನೋಡಿರಿ ಮತ್ತು ಪ್ರಾರ್ಥನೆಯ ಮೂಲಕ ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳಿರಿ. (ಕೀರ್ತ. 27:14; ಫಿಲಿ. 4:13) ಇನ್ನಿತರ ರೀತಿಯ ಸಾಕ್ಷಿಕಾರ್ಯದಲ್ಲಿ ಮಾಡುವಂತೆಯೇ, ಈ ಚಟುವಟಿಕೆಯಲ್ಲೂ ಪೂರ್ಣಹೃದಯದಿಂದ ನಿಮ್ಮನ್ನು ತೊಡಗಿಸಿಕೊಳ್ಳಲು ಯೋಜನೆಗಳನ್ನು ಮಾಡಿರಿ.—ಮಾರ್ಕ 12:33ನ್ನು ಹೋಲಿಸಿರಿ.
13 ಒಂದು ಡೆಸ್ಕ್ ಅಥವಾ ಟೇಬಲ್ನ ಬಳಿ ಕುಳಿತುಕೊಳ್ಳುವುದು ಸಹಾಯಕರವಾಗಿರಸಾಧ್ಯವಿದೆ ಎಂಬುದನ್ನು ಅನುಭವವು ರುಜುಪಡಿಸಿದೆ. ನೇರವಾಗಿರುವ ಕುರ್ಚಿಯಲ್ಲಿ ಕುಳಿತುಕೊಳ್ಳುವುದು, ಸ್ಪಷ್ಟವಾದ ಆಲೋಚನಾಶಕ್ತಿಯನ್ನು ಹಾಗೂ ಚಿತ್ತೈಕಾಗ್ರತೆಯನ್ನು ಉಂಟುಮಾಡುತ್ತದೆ. ನೀವು ಉಪಯೋಗಿಸಬಹುದಾದ ಸಾಕ್ಷಿಕಾರ್ಯದ ಎಲ್ಲ ಸಲಕರಣೆಗಳನ್ನು ಕಣ್ಣಿಗೆ ಕಾಣುವಂತೆ ಇಡಿರಿ—ಟ್ರ್ಯಾಕ್ಟ್ಗಳು, ಪ್ರಸ್ತುತ ನೀಡಲಾಗುತ್ತಿರುವ ಸಾಹಿತ್ಯ, ಇತ್ತೀಚಿನ ಪತ್ರಿಕೆಗಳು ಅಥವಾ ಆಸಕ್ತಿದಾಯಕವಾದ ವಿಷಯಗಳಿರುವ ಕೆಲವು ಹಳೆಯ ಪ್ರತಿಗಳು, ಬೈಬಲ್, ರೀಸನಿಂಗ್ ಪುಸ್ತಕ, ನಿರ್ದಿಷ್ಟವಾದ ಕೂಟದ ಸಮಯಗಳಿರುವ ಮತ್ತು ರಾಜ್ಯ ಸಭಾಗೃಹದ ವಿಳಾಸವನ್ನು ಪಟ್ಟಿಮಾಡಿರುವ ಕೂಟದ ಆಮಂತ್ರಣ ಪತ್ರಿಕೆಗಳು, ಒಂದು ಪೆನ್ನು ಅಥವಾ ಪೆನ್ಸಿಲ್, ಮತ್ತು ಮನೆಯಿಂದ ಮನೆಯ ರೆಕಾರ್ಡ್ಗಳು. ನಿಮ್ಮ ಸಾಹಿತ್ಯವು ಸುಲಭವಾಗಿ ಕೈಗೆಟುಕುವಂತೆ ಇಡಿರಿ, ಮತ್ತು ಸಾಧ್ಯವಿರುವಲ್ಲಿ ನೀವು ಒಂದು ನಿರ್ದಿಷ್ಟ ಲೇಖನವನ್ನು ಸಹ ತೆರೆದಿಡಬಹುದು. ನಿಮ್ಮ ನಿರೂಪಣೆಯನ್ನು ಚೆನ್ನಾಗಿ ಪೂರ್ವಾಭಿನಯಿಸಿರಿ. ಸಾಕ್ಷಿಯನ್ನು ನೀಡುವುದು ಮತ್ತು ಸಾಧ್ಯವಾದಷ್ಟು ಬೇಗನೆ ಆ ವ್ಯಕ್ತಿಯೊಂದಿಗೆ ಒಂದು ಭೇಟಿಯನ್ನು ಏರ್ಪಡಿಸುವುದು ನಿಮ್ಮ ಟೆಲಿಫೋನ್ ಕರೆಯ ಉದ್ದೇಶವಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ.
14 ಒಂದು ಟೆಲಿಫೋನ್ ಕರೆಯನ್ನು ಮಾಡುವುದು: ಶಾಂತರಾಗಿರಿ ಮತ್ತು ಸಹಜವಾಗಿರಿ. ಪರಿಣಾಮಕಾರಿಯಾದ ಟೆಲಿಫೋನ್ ಸಾಕ್ಷಿಕಾರ್ಯಕ್ಕೆ, ಹೃತ್ಪೂರ್ವಕವಾದ ಮತ್ತು ಹಿತಕರವಾದ ಸ್ವರವು ಅತ್ಯಗತ್ಯವಾಗಿದೆ. ನಿಮ್ಮ ಮುಖದ ಮೇಲಿನ ಮಂದಹಾಸವು ನಿಮ್ಮ ಸ್ವರದಲ್ಲಿ ಪ್ರತಿಬಿಂಬಿಸಲ್ಪಡುವುದು. ಸಾಕಷ್ಟು ಗಟ್ಟಿಯಾದ ಧ್ವನಿಯನ್ನು ಉಪಯೋಗಿಸಿ, ನಿಧಾನವಾಗಿಯೂ ಸ್ಪಷ್ಟವಾಗಿಯೂ ಮಾತಾಡಿರಿ. ಸೌಜನ್ಯವುಳ್ಳವರೂ, ತಾಳ್ಮೆಯುಳ್ಳವರೂ, ಸ್ನೇಹಪರರೂ ಆಗಿರಿ. ಅವರು ನಿಮ್ಮ ಸಂದೇಶವನ್ನು ನಿರಾಕರಿಸುವರೆಂದು ಭಯಪಡಬೇಡಿರಿ. ನಿಮ್ಮ ಸಂದೇಶದಲ್ಲಿ ಅವರಿಗೆ ಆಸಕ್ತಿಯಿಲ್ಲದಿರಬಹುದು ಎಂಬ ವಾಸ್ತವಾಂಶವನ್ನು ಅಂಗೀಕರಿಸಿರಿ. ಮನೆಯಿಂದ ಮನೆಯ ಸೇವೆಯಲ್ಲಿ ನೀವು ನಕಾರಾತ್ಮಕ ಉತ್ತರವನ್ನು ಯಾವ ದೃಷ್ಟಿಯಿಂದ ನೋಡುತ್ತೀರೋ ಅದೇ ದೃಷ್ಟಿಯಲ್ಲಿ ಇದನ್ನೂ ನೋಡಿರಿ.
15 ಪೀಠಿಕೆಯಲ್ಲಿ ನಿಮ್ಮ ಪೂರ್ಣ ಹೆಸರನ್ನು ತಿಳಿಸಿರಿ. ನಿರ್ದಿಷ್ಟವಾದ ಒಂದು ಕಟ್ಟಡದಲ್ಲಿ ಅಥವಾ ಕಾಂಪ್ಲೆಕ್ಸ್ನಲ್ಲಿರುವ ಎಲ್ಲ ಜನರಿಗೆ ನೀವು ಫೋನ್ ಮಾಡುತ್ತಿದ್ದೀರೆಂದು ಹೇಳದೇ ಇರುವುದು ಅತ್ಯುತ್ತಮ, ಏಕೆಂದರೆ ಇದರಿಂದ ನಿಮ್ಮ ಸಾಕ್ಷಿಕಾರ್ಯಕ್ಕೆ ತಡೆಯುಂಟಾಗಬಹುದು.
16 ರೀಸನಿಂಗ್ ಪುಸ್ತಕದಿಂದ ತೆಗೆದ ಅನೇಕ ಪೀಠಿಕೆಗಳನ್ನು ಸಂಭಾಷಣಾ ರೂಪದಲ್ಲಿ ಓದಬಹುದು. ಉದಾಹರಣೆಗೆ, ನೀವು ನಿಮ್ಮನ್ನು ಹೀಗೆ ಪರಿಚಯಿಸಿಕೊಳ್ಳಬಹುದು: “ನಮಸ್ಕಾರ, ನನ್ನ ಹೆಸರು ________ . ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಅಶಕ್ತನಾಗಿರುವ ಕಾರಣ ನಾನು ನಿಮಗೆ ಫೋನ್ ಮಾಡುತ್ತಿದ್ದೇನೆ.” ಇದನ್ನು ಹೇಳಿದ ನಂತರ, ಹೆಚ್ಚು ಸಮಯಾವಕಾಶವನ್ನು ಕೊಡದೆ ಹೀಗೆ ಹೇಳಿರಿ: “ಇಂದಿನ ಜೀವನ ಮಟ್ಟವು ಎಂದಾದರೂ ಉತ್ತಮಗೊಳ್ಳುವುದೋ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳುವುದರಲ್ಲಿ ನಾನು ಆಸಕ್ತನಾಗಿದ್ದೇನೆ. ನಮ್ಮಲ್ಲಿ ಅಧಿಕಾಂಶ ಮಂದಿ ಬದುಕಿರುವುದಕ್ಕೆ ಸಂತೋಷಪಡುತ್ತೇವಾದರೂ, ‘ಸಂತೋಷಕರವಾಗಿ ಜೀವಿಸುವುದು ನಿಜವಾಗಿಯೂ ಸಾಧ್ಯವಿದೆಯೊ?’ ಎಂದು ಅನೇಕರು ಸೋಜಿಗಪಡುತ್ತಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? [ಉತ್ತರಕ್ಕಾಗಿ ಸಮಯವನ್ನು ಅನುಮತಿಸಿರಿ.] ಇಂದು ಸಂತೋಷಕ್ಕೆ ದೊಡ್ಡ ತಡೆಯು ಯಾವುದಾಗಿದೆಯೆಂದು ನೀವು ಹೇಳುತ್ತೀರಿ?” ಅಥವಾ ಮೇಲಿನಂತೆ ನಿಮ್ಮ ಪರಿಚಯ ಮಾಡಿಕೊಂಡ ನಂತರ ನೀವು ಹೀಗೆ ಹೇಳಸಾಧ್ಯವಿದೆ: “ನಾನು ಒಂದು ಅಂತಾರಾಷ್ಟ್ರೀಯ ಸ್ವಯಂಸೇವಕ ಕೆಲಸದಲ್ಲಿ ಒಳಗೂಡಿದ್ದೇನೆ, ಮತ್ತು ಜೀವಿತದ ಉದ್ದೇಶದ ಕುರಿತು ನಿಮ್ಮ ಅನಿಸಿಕೆಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ. ನಮಗೆ ವಯಸ್ಸಾಗುತ್ತಾ ಬಂದಂತೆ, ಜೀವಿತವು ತುಂಬ ಅಲ್ಪಾವಧಿಯದ್ದಾಗಿದೆ ಎಂಬುದು ನಮಗೆ ಅರಿವಾಗುತ್ತದೆ. ಜೀವಿತವು ಕೇವಲ ಇಷ್ಟನ್ನೇ ಒಳಗೂಡಿದೆಯೋ? ಇದರ ಕುರಿತು ನಿಮ್ಮ ಅಭಿಪ್ರಾಯವೇನಾಗಿದೆ?” (ರೀಸನಿಂಗ್ ಪುಸ್ತಕದ ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ 5-6ನೆಯ ಪುಟದಲ್ಲಿರುವ “ಜೀವನ/ಸಂತೋಷ” ಎಂಬ ಉಪಶೀರ್ಷಿಕೆಯನ್ನು ನೋಡಿರಿ.) ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಪೀಠಿಕೆಗಳನ್ನು ಉಪಯೋಗಿಸುವುದರ ಕುರಿತು ಮತ್ತು ಆ ಸಾಕ್ಷಿಕಾರ್ಯದಲ್ಲಿ ಎದುರಿಸಲ್ಪಡುವ ಆಕ್ಷೇಪಣೆಗಳನ್ನು ದೂರಮಾಡುವುದರ ಕುರಿತು, 1990ರ ಆಗಸ್ಟ್ ತಿಂಗಳ ನಮ್ಮ ರಾಜ್ಯದ ಸೇವೆಯ 4ನೆಯ ಪುಟದಲ್ಲಿ ಕಂಡುಬರುವ ಸಲಹೆಗಳ ಪುನರ್ವಿಮರ್ಶೆಯು, ಇನ್ನೂ ಹೆಚ್ಚಿನ ಸಹಾಯಕರ ಮಾಹಿತಿಯನ್ನು ಒದಗಿಸುವುದು.
17 ಚರ್ಚೆಯ ಆರಂಭದಲ್ಲೇ ಬೈಬಲನ್ನು ಉಪಯೋಗಿಸಿರಿ. ಸಂಭಾಷಣೆಯ ಒಂದು ಹಂತದಲ್ಲಿ, ಅಂದರೆ ಸೂಕ್ತವಾದ ಸಂದರ್ಭವನ್ನು ನೋಡಿ, ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೀರಿ ಎಂದು ಅವರಿಗೆ ತಿಳಿಸಿರಿ. ಸಂಭಾಷಣೆಯಲ್ಲಿ ಮನೆಯವನು ಸಹ ಒಳಗೂಡುವಂತೆ ಮಾಡಿರಿ. ತನ್ನ ಅಭಿಪ್ರಾಯಗಳನ್ನು ನಿಮಗೆ ತಿಳಿಸಲು ಆ ವ್ಯಕ್ತಿಯು ಬಯಸುವಲ್ಲಿ, ಅವನು ಹೇಳುವುದನ್ನು ಕೇಳಿಸಿಕೊಳ್ಳಲು ಭಯಪಡಬೇಡಿರಿ. ಅವನ ಅಭಿವ್ಯಕ್ತಿಗಳು ಮತ್ತು ಹೇಳಿಕೆಗಳಿಗಾಗಿ ಅವನಿಗೆ ಉಪಕಾರ ಹೇಳಿರಿ. ಅವನನ್ನು ಶ್ಲಾಘಿಸಲು ಸಿದ್ಧರಾಗಿರಿ. ಆದರೂ, ಆ ವ್ಯಕ್ತಿಯೇ ಹೆಚ್ಚು ಸಂಭಾಷಣೆಮಾಡುತ್ತಿರುವಲ್ಲಿ ಅಥವಾ ವಾಗ್ವಾದಿಸುತ್ತಿರುವಲ್ಲಿ, ಉಪಾಯದಿಂದ ಆ ಫೋನ್ ಕರೆಯನ್ನು ನಿಲ್ಲಿಸಿಬಿಡಿರಿ. ದೇವರ ಆತ್ಮವು ನಿಮ್ಮ ಪ್ರಯತ್ನಗಳನ್ನು ಮಾರ್ಗದರ್ಶಿಸಲಿ ಮತ್ತು ಯಾರು ದೇವರ ಕಡೆಗೆ ಯೋಗ್ಯ ಮನೋಭಾವವುಳ್ಳವರಾಗಿದ್ದಾರೊ ಅವರನ್ನು ಹುಡುಕುವಂತೆ ನಿಮಗೆ ಸಹಾಯ ಮಾಡಲಿ.
18 ಮನೆಯವನು ಸಂಭಾಷಣೆಯನ್ನು ಮುಕ್ತಾಯಗೊಳಿಸುವಂತೆ ಬಿಡುವುದಕ್ಕೆ ಬದಲಾಗಿ ನೀವೇ ಅದನ್ನು ಮುಕ್ತಾಯಕ್ಕೆ ತರುವುದು ಹೆಚ್ಚು ಉತ್ತಮ. ರಾಜ್ಯ ಸಭಾಗೃಹದಲ್ಲಿ ನಡೆಯುವ ಬಹಿರಂಗ ಭಾಷಣಕ್ಕೆ ಬರುವಂತೆ ಆ ವ್ಯಕ್ತಿಯನ್ನು ಆಮಂತ್ರಿಸಿ, ಸಭಾಗೃಹದ ವಿಳಾಸ ಹಾಗೂ ಕೂಟದ ಸಮಯವನ್ನು ತಿಳಿಸುವ ಮೂಲಕ ನೀವು ಸಂಭಾಷಣೆಯನ್ನು ಮುಕ್ತಾಯಗೊಳಿಸಸಾಧ್ಯವಿದೆ. ಚರ್ಚಿಸಲ್ಪಟ್ಟ ವಿಷಯದ ಕುರಿತು ಇನ್ನೂ ಹೆಚ್ಚಿನ ಸಂಗತಿಗಳನ್ನು ಮಾತಾಡಲಿಕ್ಕಾಗಿ ನಾನು ನಿಮ್ಮ ಮನೆಗೆ ಬರಬಹುದೋ ಎಂದು ಸಹ ನೀವು ಅವನನ್ನು ಕೇಳಬಹುದು. ಟೆಲಿಫೋನಿನ ಮೂಲಕವೇ ಸಾಹಿತ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಚಯಿಸಬಹುದು. ಒಂದು ಪತ್ರಿಕಾ ಮಾರ್ಗವನ್ನು ಆರಂಭಿಸುವ ಗುರಿಯೊಂದಿಗೆ ಪತ್ರಿಕೆಗಳನ್ನು ಕೊಡಬಹುದು.
19 ಟೆಲಿಫೋನ್ ಸಾಕ್ಷಿಕಾರ್ಯದ ಸಂತೋಷದಲ್ಲಿ ಪಾಲ್ಗೊಳ್ಳಿರಿ: ಎಲ್ಲ ಟೆಲಿಫೋನ್ ಕರೆಗಳೂ ಬೈಬಲ್ ಅಭ್ಯಾಸಗಳಾಗಿ ಮಾರ್ಪಡುವವೋ? ಇಲ್ಲ, ಆದರೆ ಕೆಲವು ಬೈಬಲ್ ಅಭ್ಯಾಸಗಳು ದೊರಕುವವು. ಉದಾಹರಣೆಗೆ, ಒಂದು ತಿಂಗಳಿನಲ್ಲಿ ಸಹೋದರಿಯೊಬ್ಬಳು 300ಕ್ಕಿಂತಲೂ ಹೆಚ್ಚಿನ ಕರೆಗಳನ್ನು ಮಾಡಿದಳು. ತನ್ನನ್ನು ಪರಿಚಯಿಸಿಕೊಂಡ ಬಳಿಕ, ಪ್ರತಿಯೊಂದು ಮನೆಯನ್ನು ಭೇಟಿಮಾಡುವುದಕ್ಕೆ ಬದಲಾಗಿ ತಾನು ಏಕೆ ಟೆಲಿಫೋನ್ ಕರೆಯನ್ನು ಮಾಡುತ್ತಿದ್ದೇನೆ ಎಂಬುದರ ಕಾರಣವನ್ನು ಅವಳು ವಿವರಿಸುತ್ತಿದ್ದಳು. ಆಮೇಲೆ ಅವಳು ಒಂದು ಚಿಕ್ಕ ನಿರೂಪಣೆಯನ್ನು ನೀಡುತ್ತಿದ್ದಳು. ಇದರ ಫಲಿತಾಂಶವಾಗಿ ಅವಳಿಗೆ 12 ಒಳ್ಳೆಯ ಕರೆಗಳು ಸಿಕ್ಕಿದವು. ಈಗಲೂ ಅವಳು ಟೆಲಿಫೋನ್ನ ಮೂಲಕ ಮೂವರು ಆಸಕ್ತ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದಾಳೆ, ಮತ್ತು ಅವಳು ತಮ್ಮ ಮನೆಗಳಿಗೆ ಬಂದು ಭೇಟಿಮಾಡಲು ಇನ್ನೂ ನಾಲ್ಕು ಮಂದಿ ಒಪ್ಪಿದ್ದಾರೆ.
20 “ಭೂಲೋಕದ ಕಟ್ಟಕಡೆಯ ವರೆಗೂ” ಸಾಕ್ಷಿಕಾರ್ಯವನ್ನು ಮುಂದುವರಿಸುವಂತೆ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಆಜ್ಞೆಯನ್ನಿತ್ತನು. (ಅ. ಕೃ. 1:8) ಕೆಲವು ಕ್ಷೇತ್ರಗಳಲ್ಲಿ, ಟೆಲಿಫೋನ್ ಸಾಕ್ಷಿಕಾರ್ಯವನ್ನು ಮಾಡುವ ಮೂಲಕವೇ ಈ ಆಜ್ಞೆಯನ್ನು ಪೂರೈಸಸಾಧ್ಯವಿದೆ. ಈ ಮೇಲಿನ ವಿಷಯವನ್ನು ಪುನರ್ವಿಮರ್ಶಿಸಿದ ಬಳಿಕ ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ಇಷ್ಟರ ತನಕ ರಾಜ್ಯದ ಸುವಾರ್ತೆಯು ತಲಪದಿರುವಂತಹ ಕ್ಷೇತ್ರಗಳಲ್ಲಿ ವಾಸಿಸುತ್ತಿರುವವರನ್ನೂ ಒಳಗೊಂಡು, ‘ಎಲ್ಲ ಮನುಷ್ಯರಿಗೆ’ ಸುವಾರ್ತೆಯನ್ನು ಸಾರಲಿಕ್ಕಾಗಿ ನನ್ನ ಸಭೆಯ ಟೆರಿಟೊರಿಯಲ್ಲಿ ನಾನು ಇನ್ನೂ ಹೆಚ್ಚಿನದ್ದನ್ನು ಮಾಡಬಲ್ಲೆನೊ?’ ಈ ಸಲಹೆಗಳನ್ನು ಅನುಸರಿಸಿರುವ ಸಹೋದರರು, ತಮಗೆ ದೊರಕಿದ ಫಲಿತಾಂಶಗಳಿಂದ ತುಂಬ ಉತ್ತೇಜಿತರಾಗಿದ್ದಾರೆ. ‘ತಮ್ಮ ಶುಶ್ರೂಷೆಯನ್ನು ಮಹಿಮೆಪಡಿಸಲು’ ಟೆಲಿಫೋನ್ ಸಾಕ್ಷಿಕಾರ್ಯವು ಒಂದು ಅಸಾಧಾರಣ ಮಾರ್ಗವಾಗಿದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. (ರೋಮಾ. 11:13, NW) ಟೆಲಿಫೋನ್ ಸಾಕ್ಷಿಕಾರ್ಯದ ಮೂಲಕ ಸಿಗುವ ಈ ಆನಂದವನ್ನು ನೀವೂ ಅನುಭವಿಸುವಂತಾಗಲಿ.