“ಸಮಯೋಚಿತವಾದ ಮಾತುಗಳು”
1 ಜೀವದ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಿಮಗೆ ಒಂದು ಸವಾಲಾಗಿದೆಯೋ? ಕೇಳುಗರ ಮನತಾಕಲು ಗಹನವಾದ ಜ್ಞಾನವುಳ್ಳ ಯಾವುದಾದರೊಂದು ವಿಷಯವನ್ನು ಹೇಳಬೇಕೆಂದು ನಿಮಗನಿಸುತ್ತದೋ? ಯೇಸು ತನ್ನ ಶಿಷ್ಯರನ್ನು ಸಾರಲಿಕ್ಕಾಗಿ ಕಳುಹಿಸಿದಾಗ, ಅವನು ಅವರಿಗೆ ಹೇಳಿದ್ದು: “ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ.” (ಮತ್ತಾ. 10:7) ಆ ಸಂದೇಶವು ಸರಳವಾದದ್ದೂ ಇತರರಿಗೆ ತಿಳಿಸಲು ಸುಲಭವಾದದ್ದೂ ಆಗಿತ್ತು. ಇಂದು ಸಹ ಅದು ಹಾಗೇ ಇದೆ.
2 ಒಂದು ಸಂಭಾಷಣೆಯನ್ನು ಪ್ರಾರಂಭಿಸಲು ಕೆಲವು ನುಡಿಗಳು ಮಾತ್ರ ಸಾಕು. ಫಿಲಿಪ್ಪನು ಐಥಿಯೋಪ್ಯದ ಕಂಚುಕಿಯನ್ನು ಎದುರಾದಾಗ, “ಎಲೈ, ನೀನು ಓದುವದು ನಿನಗೆ ತಿಳಿಯುತ್ತದೋ?” ಎಂದು ಆ ಕಂಚುಕಿಯನ್ನು ಕೇಳಿದನು. (ಅ. ಕೃ. 8:30) ‘ಸಮಯೋಚಿತವಾದ ಮಾತುಗಳಿಂದ’ ಎಂತಹ ಒಂದು ಪ್ರತಿಫಲದಾಯಕ ಚರ್ಚೆಯು ಪ್ರಾರಂಭವಾಯಿತು!—ಜ್ಞಾನೋ. 25:11.
3 ನೀವು ಸಹ ನಿಮ್ಮ ಶುಶ್ರೂಷೆಯಲ್ಲಿ ಈ ರೀತಿಯ ಪ್ರಸ್ತಾವನೆಯನ್ನು ಉಪಯೋಗಿಸಸಾಧ್ಯವಿದೆ. ಹೇಗೆ? ಅವಲೋಕಿಸುವವರಾಗಿರುವ ಮೂಲಕ ಮತ್ತು ಸಂದರ್ಭಗಳಿಗನುಸಾರ ತಕ್ಕ ಮಾತುಗಳನ್ನು ಉಪಯೋಗಿಸುವವರಾಗಿರುವ ಮೂಲಕವೇ. ಪ್ರಶ್ನೆಯೊಂದನ್ನು ಕೇಳಿ, ಅವರ ಉತ್ತರವನ್ನು ಕೇಳಿಸಿಕೊಳ್ಳಿರಿ.
4 ಕೆಲವು ಮೂಲಭೂತ ಪ್ರಶ್ನೆಗಳು: ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿ, ನೀವು ಈ ಪ್ರಶ್ನೆಗಳಲ್ಲಿ ಯಾವುದಾದರೊಂದನ್ನು ಉಪಯೋಗಿಸಬಹುದು:
◼ “ನೀವು ಕರ್ತನ ಪ್ರಾರ್ಥನೆಯನ್ನು ಮಾಡುತ್ತೀರೋ?” (ಮತ್ತಾ. 6:9, 10) ಪ್ರಾರ್ಥನೆಯ ಸ್ವಲ್ಪ ಭಾಗವನ್ನು ಹೇಳಿ, ನಂತರ ಹೀಗೆ ಕೇಳಿರಿ: “‘ಯೇಸು ಪವಿತ್ರೀಕರಿಸಲ್ಪಡಲಿ ಎಂದು ಹೇಳಿದ ಆ ದೇವರ ಹೆಸರೇನು?’ ಎಂದು ಕೆಲವರು ಪ್ರಶ್ನಿಸುತ್ತಾರೆ. ‘ಯೇಸು ನಾವು ಪ್ರಾರ್ಥಿಸಬೇಕೆಂದು ಹೇಳಿದ ಆ ರಾಜ್ಯವು ಯಾವುದು?’ ಎಂದು ಇತರರು ಕೇಳುತ್ತಾರೆ. ಈ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನು ನೀವು ಕಂಡುಕೊಂಡಿದ್ದೀರೋ?”
◼ “‘ಜೀವಿತದ ಅರ್ಥವೇನು?’ ಎಂಬ ಪ್ರಶ್ನೆಯ ಬಗ್ಗೆ ನೀವು ಯಾವಾಗಲಾದರೂ ಸೋಜಿಗಪಟ್ಟಿದ್ದೀರೋ?” ಇದು ದೇವರ ಜ್ಞಾನವನ್ನು ಪಡೆದುಕೊಳ್ಳುವ ಆವಶ್ಯಕತೆಯನ್ನು ಸೂಚಿಸುತ್ತದೆ ಎಂಬುದನ್ನು ತೋರಿಸಿರಿ.—ಪ್ರಸಂ. 12:13; ಯೋಹಾ. 17:3.
◼ “ಮರಣವು ಶಾಶ್ವತವಾಗಿ ಇಲ್ಲದೇ ಹೋಗುವುದು ಎಂದು ನೀವು ನೆನಸುತ್ತೀರೋ?” ಭರವಸಾರ್ಹವಾದ ಒಂದು ಉತ್ತರಕ್ಕೆ ಯೆಶಾಯ 25:8 ಮತ್ತು ಪ್ರಕಟನೆ 21:4ನ್ನು ಉಪಯೋಗಿಸಿರಿ.
◼ “ಈ ಲೋಕದಲ್ಲಿ ಆಗುತ್ತಿರುವ ಗಲಭೆಗೆ ಒಂದು ಸರಳವಾದ ಪರಿಹಾರವಿದೆಯೋ?” ದೇವರು “ನಿನ್ನ ನೆರೆಯವನನ್ನು . . . ಪ್ರೀತಿಸಬೇಕು” ಎಂದು ಕಲಿಸುತ್ತಾನೆ ಎಂಬುದನ್ನು ತೋರಿಸಿರಿ.—ಮತ್ತಾ. 22:39.
◼ “ಯಾವುದಾದರೊಂದು ದಿನ ನಮ್ಮ ಈ ಭೂಮಿಯನ್ನು ವಿಶ್ವವಿಪ್ಲವವು ನಾಶಗೊಳಿಸುವುದೋ?” ಈ ಭೂಮಿಯು ಸದಾಕಾಲಕ್ಕೂ ಇರುವುದು ಎಂಬ ಬೈಬಲಿನ ವಾಗ್ದಾನವನ್ನು ಅವರೊಂದಿಗೆ ಹಂಚಿಕೊಳ್ಳಿರಿ.—ಕೀರ್ತ. 104:5.
5 ಸರಳವಾಗಿ, ನೇರವಾದ ರೀತಿಯಲ್ಲಿ ಹಾಗೂ ಸ್ನೇಹಭಾವದಿಂದ ಸುವಾರ್ತೆಯನ್ನು ಪ್ರಸ್ತುತಪಡಿಸಿರಿ. ಸತ್ಯದ ‘ಮಾತುಗಳನ್ನು’ ಇತರರೊಂದಿಗೆ ಹಂಚಿಕೊಳ್ಳುವ ನಿಮ್ಮ ಪ್ರಯತ್ನಗಳನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುವನು.