ಒಳ್ಳೆಯ ನೆರೆಯವರಾಗಿ ಸಾಕ್ಷಿನೀಡಿ
1 “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಯೇಸು ಹೇಳಿದನು. (ಮತ್ತಾ. 22:39) ನಿಸ್ಸಂದೇಹವಾಗಿಯೂ, ನೀವು ಜೊತೆ ವಿಶ್ವಾಸಿಗಳಿಗೆ “ಒಳ್ಳೇದನ್ನು” ಮಾಡುತ್ತೀರಿ. ಆದರೆ, ನೀವು ನಿಮ್ಮ ಪ್ರೀತಿಯನ್ನು ವಿಶಾಲಗೊಳಿಸಿ, ನಿಮ್ಮ ಹತ್ತಿರದಲ್ಲೇ ಜೀವಿಸುವ ಜನರನ್ನು ಸಹ ಅದರಲ್ಲಿ ಸೇರಿಸಬಹುದೊ? (ಗಲಾ. 6:10) ಯಾವ ವಿಧಗಳಲ್ಲಿ ಅದನ್ನು ಮಾಡಬಲ್ಲಿರಿ?
2 ನಿಮ್ಮನ್ನು ಪರಿಚಯಿಸಿಕೊಳ್ಳುವ ಮೂಲಕ: ನೀವೊಬ್ಬ ಯೆಹೋವನ ಸಾಕ್ಷಿಯೆಂದು ನಿಮ್ಮ ನೆರೆಯವರಿಗೆ ಗೊತ್ತಿದೆಯೋ? ಒಂದುವೇಳೆ ಗೊತ್ತಿಲ್ಲದಿದ್ದರೆ, ಕ್ಷೇತ್ರಸೇವೆಯ ಸಮಯದಲ್ಲಿ ನೀವು ಅವರ ಮನೆಗೆ ಯಾಕೆ ಹೋಗಬಾರದು? ಅದರಿಂದ ಸಿಗುವ ಫಲಿತಾಂಶಗಳು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು! ಇಲ್ಲವೇ ನಿಮಗೆ ಅನೌಪಚಾರಿಕವಾಗಿ ಸಾಕ್ಷಿನೀಡಲು ನಿರಾಳವೆನಿಸಿದರೆ, ಅದನ್ನು ಪ್ರಯತ್ನಿಸಿ. ಮನೆಯ ಹೊರಗಿರುವಾಗ, ಅವರು ಅಂಗಳದಲ್ಲಿ ಕೆಲಸಮಾಡುತ್ತಿರುವುದನ್ನೋ ಇಲ್ಲವೇ ಬೀದಿಯಲ್ಲಿ ಆರಾಮವಾಗಿ ನಡೆಯುತ್ತಿರುವುದನ್ನೋ ನೀವು ನೋಡಬಹುದು. ನಗುಮುಖದೊಂದಿಗೆ ಅವರನ್ನು ಸಮೀಪಿಸಿ. ನಿಮ್ಮ ನಂಬಿಕೆಗಳ ಕುರಿತು, ರಾಜ್ಯ ಸಭಾಗೃಹವು ಎಲ್ಲಿದೆ ಮತ್ತು ಅಲ್ಲಿ ಏನು ನಡೆಯುತ್ತದೆ ಎಂಬುದರ ಕುರಿತು ಮಾತಾಡಲು ಪ್ರಯತ್ನಿಸಿ. ನೆರೆಯವರಲ್ಲಿ ಯಾರು ಅಲ್ಲಿಗೆ ಹಾಜರಾಗುತ್ತಾರೆ ಎಂಬುದನ್ನು ಅವರಿಗೆ ತಿಳಿಸಿರಿ. ಕೂಟಗಳಿಗೆ ಹಾಜರಾಗುವಂತೆ ಅವರಿಗೆ ಆಹ್ವಾನವನ್ನು ನೀಡಿರಿ. ನಿಮಗೆ ಪರಿಚಯವಿರುವ ಪ್ರತಿಯೊಬ್ಬರಿಗೂ ಸುವಾರ್ತೆಯ ಕುರಿತು ಸಂಪೂರ್ಣವಾದ ಸಾಕ್ಷಿಯನ್ನು ನೀಡಲು ದೃಢಮನಸ್ಸುಳ್ಳವರಾಗಿರಿ.—ಅ. ಕೃ. 10:42; 28:23.
3 ನಿಮ್ಮ ಆದರ್ಶ ನಡತೆಯ ಮೂಲಕ: ನಿಮ್ಮ ಸ್ನೇಹಪರ ನಡವಳಿಕೆಯು ನಿಮ್ಮ ಕುರಿತಾಗಿ ಬಹಳಷ್ಟನ್ನು ತಿಳಿಸುವುದು ಮತ್ತು ಇತರರಿಗೆ ಸಾಕ್ಷಿನೀಡಲು ಸಹ ಮಾರ್ಗವನ್ನು ಸುಗಮಗೊಳಿಸುವುದು. ಅದು ‘ದೇವರ ಉಪದೇಶಕ್ಕೆ ಅಲಂಕಾರವಾಗಿಯೂ’ ಇರುವುದು. (ತೀತ 2:7, 10) ನಿಮ್ಮ ನೆರೆಯವರಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿರಿ. ಅವರೊಂದಿಗೆ ಸ್ನೇಹದಿಂದಲೂ ತಿಳಿವಳಿಕೆಯಿಂದಲೂ ವರ್ತಿಸಿರಿ. ಏಕಾಂತತೆ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿರಲು ಅವರಿಗಿರುವ ಹಕ್ಕನ್ನು ಗೌರವಿಸಿರಿ. ಅವರಲ್ಲಿ ಯಾರಾದರೊಬ್ಬರು ಅಸೌಖ್ಯದಿಂದಿರುವುದಾದರೆ ಹೆಚ್ಚು ದಯಾಪರರಾಗಿದ್ದು ಸಹಾಯಹಸ್ತವನ್ನು ನೀಡಿರಿ. ಒಂದು ಹೊಸ ಕುಟುಂಬವು ನಿಮ್ಮ ನೆರೆಯವರಾಗಿ ಬರುವಾಗ, ಅವರಲ್ಲಿಗೆ ಹೋಗಿ ಅವರನ್ನು ಸ್ವಾಗತಿಸಿರಿ. ಇಂಥ ದಯಾಪರ ಕೃತ್ಯಗಳು ಒಳ್ಳೆಯ ಅಭಿಪ್ರಾಯವನ್ನು ಮೂಡಿಸುತ್ತವೆ ಹಾಗೂ ಯೆಹೋವನನ್ನು ಸಂತೋಷಪಡಿಸುತ್ತವೆ.—ಇಬ್ರಿ. 13:16.
4 ನಿಮ್ಮ ಮನೆ ಮತ್ತು ಇತರ ವಸ್ತುಗಳನ್ನು ಇಟ್ಟುಕೊಂಡಿರುವ ರೀತಿಯ ಮೂಲಕ: ಒಬ್ಬ ಒಳ್ಳೆಯ ನೆರೆಯವರಾಗಿರುವುದರಲ್ಲಿ, ನಿಮ್ಮ ಮನೆಯನ್ನು ನೋಡಲು ಚೆನ್ನಾಗಿ ಕಾಣುವಂತೆ ಇಟ್ಟುಕೊಳ್ಳುವುದೂ ಸೇರಿದೆ. ಶುಚಿಯಾಗಿ ಮತ್ತು ಆಕರ್ಷಕವಾಗಿಡಲ್ಪಟ್ಟಿರುವ ಮನೆ ಹಾಗೂ ಅಂಗಳವು ತಾನೇ ಸಾಕ್ಷಿಯನ್ನು ಕೊಡುತ್ತವೆ. ಆದರೆ ಕೊಳಕಾಗಿರುವ ಇಲ್ಲವೇ ಬೇಡದ ವಸ್ತುಗಳು ಅಲ್ಲಲ್ಲಿ ಬಿದ್ದಿರುವ ಮನೆಯು, ರಾಜ್ಯದ ಸಂದೇಶದ ಮೌಲ್ಯವನ್ನು ಕುಗ್ಗಿಸುವುದು. ಹಾಗಾಗಿ, ನಿಮ್ಮ ಮನೆ, ಅಂಗಳ ಮತ್ತು ವಾಹನಗಳನ್ನು ಶುಚಿಯಾಗಿಯೂ ಸುಸ್ಥಿತಿಯಲ್ಲೂ ಇಟ್ಟುಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ.
5 ಕ್ರೈಸ್ತ ಸಭೆಯ ಹೊರಗಿರುವವರ ಕಡೆಗೆ ಕಾಳಜಿಯನ್ನು ತೋರಿಸುವುದು ನಿಮ್ಮ ನೆರೆಯವರಿಗಾಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಇದರ ಪರಿಣಾಮವೇನಾಗಿರಬಹುದು? “ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು” ಅವರಲ್ಲಿ ಕೆಲವರು ‘ದೇವರನ್ನು ಕೊಂಡಾಡಬಹುದು.’—1 ಪೇತ್ರ 2:12.