ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಿರಿ
1 ಪುರಾತನ ಕಾಲದ ಯೆಹೋವನ ಪ್ರವಾದಿಗಳು ಹಾಗೂ ಯೇಸು ಕ್ರಿಸ್ತನು, ಮುಂದೆ ನಡೆಯಲಿರುವ ಒಂದು ಒಟ್ಟುಗೂಡಿಸುವಿಕೆಯ ಕೆಲಸದ ಕುರಿತು ಮಾತಾಡಿದರು. (ಯೆಶಾ. 56:8; ಯೆಹೆ. 34:11; ಯೋಹಾ. 10:16) ಇಂದು ಲೋಕವ್ಯಾಪಕವಾಗಿ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಿರುವಾಗ, ಆ ಕೆಲಸವು ಪೂರೈಸಲ್ಪಡುತ್ತಿದೆ. (ಮತ್ತಾ. 24:14) ದೇವರ ಸೇವೆಮಾಡುವವರು ಹಾಗೂ ದೇವರ ಸೇವೆಮಾಡದಿರುವವರ ನಡುವೆ ಇರುವ ತಾರತಮ್ಯವು ಈಗ ಸುವ್ಯಕ್ತವಾಗುತ್ತಿದೆ. (ಮಲಾ. 3:18) ಇದು ನಮಗೆ ಏನನ್ನು ಅರ್ಥೈಸುತ್ತದೆ?
2 ವೈಯಕ್ತಿಕ ಜವಾಬ್ದಾರಿ: ಕ್ರೈಸ್ತ ಶುಶ್ರೂಷೆಯನ್ನು ಮುಂದುವರಿಸುವುದರಲ್ಲಿ ಪೂರ್ಣವಾಗಿ ತಲ್ಲೀನನಾಗಿದ್ದ ಪೌಲನ ಮಾದರಿಯಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ. ಸುವಾರ್ತೆಯನ್ನು ಕೇಳಿಸಿಕೊಳ್ಳುವ ಹಾಗೂ ರಕ್ಷಣೆಯನ್ನು ಪಡೆಯುವ ಸದವಕಾಶವು ಎಲ್ಲರಿಗೂ ಸಿಗಸಾಧ್ಯವಾಗುವಂತೆ, ಇತರರಿಗೆ ಸಾರುವ ಜವಾಬ್ದಾರಿ ಎಂಬ ಋಣವು ತನ್ನ ಮೇಲಿದೆ ಎಂದು ಅವನಿಗನಿಸಿತ್ತು. ಇದು, ಅವರ ಪರವಾಗಿ ಎಡೆಬಿಡದೆ ಶ್ರಮಿಸುವಂತೆ ಅವನನ್ನು ಪ್ರಚೋದಿಸಿತು. (ರೋಮಾ. 1:14-17) ಇಂದು ಮಾನವಕುಲವು ಎದುರಿಸುತ್ತಿರುವ ಅಪಾಯಕರ ಸನ್ನಿವೇಶಗಳನ್ನು ಪರಿಗಣಿಸುವಾಗ, ನಮ್ಮ ನೇಮಿತ ಟೆರಿಟೊರಿಯಲ್ಲಿರುವ ಜನರಿಗೆ ಸುವಾರ್ತೆಯನ್ನು ಸಾರಲು ಇನ್ನೂ ಹೆಚ್ಚಿನ ಜವಾಬ್ದಾರಿ ನಮಗಿದೆ ಅಲ್ಲವೊ?—1 ಕೊರಿಂ. 9:16.
3 ತುರ್ತಿನಿಂದ ಕ್ರಿಯೆಗೈಯಬೇಕಾದ ಸಮಯ: ಸಾರುವ ಕೆಲಸವನ್ನು, ಅಪಾಯಕ್ಕೆ ಒಳಗಾಗಿರುವವರನ್ನು ಹುಡುಕುವ ಮತ್ತು ಸಂರಕ್ಷಿಸುವ ಕಾರ್ಯಾಚರಣೆಗೆ ಹೋಲಿಸಸಾಧ್ಯವಿದೆ. ಪರಿಸ್ಥಿತಿಯು ಕೈಮೀರಿ ಹೋಗುವುದಕ್ಕೆ ಮೊದಲು ಅಪಾಯದಲ್ಲಿರುವ ಜನರನ್ನು ಹುಡುಕಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ ಅಗತ್ಯವಿದೆ. ತುಂಬ ಕಡಿಮೆ ಸಮಯವು ಉಳಿದಿದೆ. ಜೀವಗಳು ಅಪಾಯದಲ್ಲಿವೆ! “ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಉತ್ತೇಜಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.—ಮತ್ತಾ. 9:38.
4 ಇಂದಿನ ತುರ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅನೇಕ ರಾಜ್ಯ ಪ್ರಚಾರಕರು, ಈ ಜೀವರಕ್ಷಕ ಚಟುವಟಿಕೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಿದ್ದಾರೆ. ಹಿರೊಹಿಸ ಎಂಬ ಹದಿವಯಸ್ಕನೊಬ್ಬನು ಒಂಟಿ ಹೆತ್ತವರ ಕುಟುಂಬದಲ್ಲಿ ಜೀವಿಸುತ್ತಿದ್ದನು. ಅವನಿಗೆ ಇನ್ನೂ ನಾಲ್ಕು ಮಂದಿ ತಮ್ಮತಂಗಿಯರಿದ್ದರು. ಪ್ರತಿ ದಿನ ಬೆಳಗ್ಗೆ ಮೂರು ಗಂಟೆಗೆ ಎದ್ದು, ಮನೆಮನೆಗೆ ವಾರ್ತಾಪತ್ರಿಕೆಗಳನ್ನು ವಿತರಿಸುವ ಮೂಲಕ ಅವನು ತನ್ನ ಕುಟುಂಬಕ್ಕೆ ಸಹಾಯಮಾಡುತ್ತಿದ್ದನು. ಇಷ್ಟೆಲ್ಲ ಕಷ್ಟಪಡಬೇಕಾಗಿದ್ದರೂ, ಹಿರೊಹಿಸನಿಗೆ ಶುಶ್ರೂಷೆಯಲ್ಲಿ ಇನ್ನೂ ಹೆಚ್ಚು ಪಾಲ್ಗೊಳ್ಳಬೇಕು ಎಂಬ ಬಯಕೆ ಇತ್ತು. ಆದುದರಿಂದ ಅವನು ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಿದನು. ಮುಂದೆ ಎಂದೂ ಪುನರಾವರ್ತಿಸಲ್ಪಡದಂಥ ಈ ಕೆಲಸದಲ್ಲಿ ನೀವು ಸಹ ಹೆಚ್ಚು ಪಾಲ್ಗೊಳ್ಳಲು ಸಾಧ್ಯವಿದೆಯೋ?
5 “ಉಳಿದಿರುವ ಸಮಯವು ಬಹಳ ಕಡಿಮೆ”ಯಾಗಿದೆ. (1 ಕೊರಿಂ. 7:29, NW) ಆದುದರಿಂದ, ಭೂಮಿಯಲ್ಲಿ ಇಂದು ನಡೆಸಲ್ಪಡುತ್ತಿರುವ ಅತ್ಯಂತ ಪ್ರಾಮುಖ್ಯ ಕೆಲಸದಲ್ಲಿ, ಅಂದರೆ ರಾಜ್ಯದ ಸುವಾರ್ತೆಯನ್ನು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡೋಣ. ಈ ಶುಶ್ರೂಷೆಯನ್ನು ಯೇಸು ಕೊಯ್ಲಿನ ಕೆಲಸಕ್ಕೆ ಹೋಲಿಸಿದನು. (ಮತ್ತಾ. 9:35-38) ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ, ಇತರರು ಪ್ರಕಟನೆ 7:9, 10ರಲ್ಲಿ ವರ್ಣಿಸಲ್ಪಟ್ಟಿರುವಂಥ ಆರಾಧಕರ ಮಹಾ ಸಮೂಹದ ಭಾಗವಾಗುವಂತೆ ಸಹಾಯಮಾಡುವಾಗ, ನಮ್ಮ ಶ್ರಮಕ್ಕೆ ತಕ್ಕ ಫಲವು ಸಿಗುವುದು.