“ನಮ್ಮ ಟೆರಿಟೊರಿಯಲ್ಲಿ ನಾವು ಅನೇಕಬಾರಿ ಸೇವೆಮಾಡಿದ್ದೇವೆ!”
1 ನಮ್ಮ ಟೆರಿಟೊರಿಯಲ್ಲಿ ನಾವು ಎಷ್ಟು ಬಾರಿ ಸೇವೆಮಾಡಿದ್ದೇವೆಂದರೆ, ಅದರಲ್ಲಿ ಕುರಿಗಳಂತಹ ಜನರು ಇನ್ನು ಮುಂದೆ ಸಿಗುವುದಿಲ್ಲ ಎಂದು ನಿಮಗೆಂದಾದರೂ ಅನಿಸಿದೆಯೋ? ನೀವು ಹೀಗೆ ಆಲೋಚಿಸಿದ್ದಿರಬಹುದು: ‘ಜನರು ಯಾವ ಪ್ರತಿಕ್ರಿಯೆ ತೋರಿಸುವರೆಂದು ನನಗೆ ಗೊತ್ತು. ಅವರಿಗೆ ನಮ್ಮ ಸಂದೇಶದಲ್ಲಿ ಆಸಕ್ತಿಯಿಲ್ಲದಿರುವಾಗ ಅವರ ಬಳಿಗೆ ನಾವು ಪುನಃ ಪುನಃ ಏಕೆ ತಾನೇ ಹೋಗಬೇಕು?’ ಅನೇಕ ಟೆರಿಟೊರಿಗಳಲ್ಲಿ ಅನೇಕಬಾರಿ ಸೇವೆಮಾಡಲಾಗಿದೆ ಎಂಬುದು ನಿಜ. ಆದರೂ, ಈ ಅಂಶವನ್ನು ನಕಾರಾತ್ಮಕವಾಗಿ ಅಲ್ಲ, ಬದಲಾಗಿ ಸಕಾರಾತ್ಮಕವಾಗಿ ಪರಿಗಣಿಸಬೇಕು. ಏಕೆ? ಈ ಕೆಳಗೆ ಕೊಡಲ್ಪಟ್ಟಿರುವ ನಾಲ್ಕು ಕಾರಣಗಳನ್ನು ಗಮನಿಸಿರಿ.
2 ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಿವೆ: ಯೇಸು ಹೇಳಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಲೂಕ 10:2) ದಶಕಗಳಿಂದಲೂ ನಾವು ಯೆಹೋವನ ಬಳಿ ಹೆಚ್ಚಿನ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದೇವೆ. ಅನೇಕ ಸ್ಥಳಗಳಲ್ಲಿ, ಈಗ ಬೇಕಾಗಿದ್ದ ಹೆಚ್ಚಿನ ಕೆಲಸಗಾರರು ನಮಗಿದ್ದಾರೆ ಮತ್ತು ನಾವು ಟೆರಿಟೊರಿಯನ್ನು ಅನೇಕಬಾರಿ ಆವರಿಸುತ್ತಿದ್ದೇವೆ. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸಿದ್ದಾನೆ ಎಂಬ ಸಂಗತಿಯು ನಮಗೆ ಸಂತೋಷವನ್ನು ಉಂಟುಮಾಡುವುದಿಲ್ಲವೋ?
3 ಪಟ್ಟುಹಿಡಿದು ಮಾಡುವ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ: ಆಗಿಂದಾಗ್ಗೆ ಸೇವೆಮಾಡಿರುವ ಟೆರಿಟೊರಿಗಳಲ್ಲಿ ಸಹ, ಜನರು ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ ಮತ್ತು ಸತ್ಯದ ಜ್ಞಾನಕ್ಕೆ ಬರುತ್ತಿದ್ದಾರೆ. ಆದುದರಿಂದ, ಪ್ರಾಮಾಣಿಕ ಹೃದಯದ ಜನರನ್ನು ಕಂಡುಕೊಳ್ಳುವ ನಿರೀಕ್ಷೆಯಿಂದ ನಾವು ಪುನಃ ಪುನಃ ಅವರ ಬಳಿಗೆ ಹೋಗುತ್ತಿರಬೇಕಾಗಿದೆ. (ಯೆಶಾ. 6:8-11) ಯೇಸುವಿನ ಆರಂಭದ ಶಿಷ್ಯರು ಮಾಡಿದಂತೆಯೇ, ನಿಮಗೆ ನೇಮಿಸಲ್ಪಟ್ಟಿರುವ ಟೆರಿಟೊರಿಯಲ್ಲಿರುವ ಜನರ ಬಳಿಗೆ ‘ಹೋಗುತ್ತಾ ಇರಿ’ ಮತ್ತು ದೇವರ ರಾಜ್ಯದಲ್ಲಿ ಅವರ ಆಸಕ್ತಿಯನ್ನು ಕೆರಳಿಸಲು ಪ್ರಯತ್ನಿಸುತ್ತಾ ಇರಿ.—ಮತ್ತಾ. 10:6, 7.
4 ಪೋರ್ಚುಗಲ್ನಲ್ಲಿ ಅನೇಕ ಸಭೆಗಳು ತಮ್ಮ ಟೆರಿಟೊರಿಯನ್ನು ಪ್ರತಿ ವಾರ ಆವರಿಸುತ್ತವಾದರೂ, ಇನ್ನು ಕೂಡ ಕುರಿಗಳಂತಹ ಜನರನ್ನು ಕಂಡುಕೊಳ್ಳುತ್ತಿವೆ. ವಿಶೇಷವಾಗಿ ಒಬ್ಬ ಸಹೋದರಿಗೆ ಈ ವಿಷಯದಲ್ಲಿ ತುಂಬ ಸಕಾರಾತ್ಮಕ ಮನೋಭಾವವಿದೆ. ಅವಳು ಹೇಳುವುದು: “ಪ್ರತಿ ದಿನ ಬೆಳಗ್ಗೆ ಸೇವೆಗೆ ಹೋಗುವುದಕ್ಕೆ ಮೊದಲು, ಬೈಬಲನ್ನು ಅಭ್ಯಾಸಿಸುವುದರಲ್ಲಿ ಆಸಕ್ತಿ ತೋರಿಸುವಂತಹ ಯಾರನ್ನಾದರೂ ಕಂಡುಕೊಳ್ಳಲು ನನಗೆ ಸಹಾಯಮಾಡುವಂತೆ ನಾನು ಯೆಹೋವನಿಗೆ ಪ್ರಾರ್ಥಿಸುತ್ತೇನೆ.” ಒಂದು ದಿನ ಅವಳು, ಹೇರ್ಡ್ರೆಸರ್ (ಕೇಶವಿನ್ಯಾಸಮಾಡುವವರು)ನ ಅಂಗಡಿಯಲ್ಲಿ ಕೆಲಸಮಾಡುವವರೊಂದಿಗೆ ಒಂದು ಅಭ್ಯಾಸವನ್ನು ಏರ್ಪಡಿಸಿದಳು. ಆದರೂ, ಅವರಲ್ಲಿ ಒಬ್ಬಳು ಮಾತ್ರ ಅಭ್ಯಾಸಕ್ಕೆ ಹಾಜರಾದಳು. ಅವಳು ಹೇಳಿದ್ದು: “ನನ್ನ ಜೊತೆ ಕೆಲಸಮಾಡುವವರಿಗೆ ಇದರಲ್ಲಿ ಆಸಕ್ತಿಯಿಲ್ಲ, ಆದರೆ ನನಗೆ ಆಸಕ್ತಿಯಿದೆ.” ಅಭ್ಯಾಸಮಾಡುತ್ತಿದ್ದ ಈ ಹುಡುಗಿಯು ಒಂದೇ ತಿಂಗಳಲ್ಲಿ ಇತರರೊಂದಿಗೆ ಎರಡು ಬೈಬಲ್ ಅಭ್ಯಾಸಗಳನ್ನು ನಡೆಸಲು ಆರಂಭಿಸಿದಳು. ತದನಂತರ ಬೇಗನೆ ಅವಳು ದೀಕ್ಷಾಸ್ನಾನ ಪಡೆದುಕೊಂಡಳು ಮತ್ತು ಪಯನೀಯರ್ ಸೇವೆಯನ್ನು ಆರಂಭಿಸಿದಳು!
5 ಕೆಲಸವು ಮಾಡಲ್ಪಡುತ್ತಿದೆ: ಯೇಸು ಮುಂತಿಳಿಸಿದಂತಹ ರೀತಿಯಲ್ಲೇ ಇಂದು ಸುವಾರ್ತೆಯು ಸಾರಲ್ಪಡುತ್ತಿದೆ. (ಮತ್ತಾ. 24:14) ಎಲ್ಲಿ ಜನರು ‘[ನಮಗೆ] ಕಿವಿಗೊಡಲು ಬಯಸುವುದಿಲ್ಲವೋ’ ಅಂತಹ ಸ್ಥಳಗಳಲ್ಲಿಯೂ, ಸಾರುವ ಚಟುವಟಿಕೆಯ ಮೂಲಕ ಅವರಿಗೆ ಎಚ್ಚರಿಕೆಯು ನೀಡಲ್ಪಡುತ್ತಿದೆ. ಕೆಲವರು ಸತ್ಯಕ್ಕೆ ಕಿವಿಗೊಡುವುದಿಲ್ಲ ಮತ್ತು ಅದಕ್ಕೆ ವಿರೋಧವನ್ನು ತೋರಿಸುತ್ತಾರೆ ಎಂಬುದನ್ನು ಸಹ ನಾವು ನಿರೀಕ್ಷಿಸಸಾಧ್ಯವಿದೆ. ಆದರೂ, ಬರಲಿರುವ ದೇವರ ನ್ಯಾಯತೀರ್ಪಿನ ಕುರಿತು ಅವರಿಗೆ ಸಮಯಕ್ಕೆ ಸರಿಯಾಗಿ ಎಚ್ಚರಿಕೆಯನ್ನು ನೀಡಬೇಕಾಗಿದೆ.—ಯೆಹೆ. 2:4, 5; 3:7, 8, 19.
6 ನಮ್ಮ ಕೆಲಸವು ಇನ್ನೂ ಮುಗಿದಿಲ್ಲ: ಸಾರುವ ಕೆಲಸವನ್ನು ಯಾವಾಗ ಮುಗಿಸಬೇಕು ಎಂಬುದನ್ನು ನಿರ್ಧರಿಸುವವರು ನಾವಲ್ಲ. ಈ ಕೆಲಸವನ್ನು ನಿರ್ದಿಷ್ಟವಾಗಿ ಯಾವಾಗ ನಿಲ್ಲಿಸಬೇಕೆಂಬುದು ಯೆಹೋವನಿಗೆ ಗೊತ್ತಿದೆ. ಸುವಾರ್ತೆಗೆ ಕಿವಿಗೊಡಬಹುದಾದಂಥ ಜನರು ನಮ್ಮ ಟೆರಿಟೊರಿಯಲ್ಲಿದ್ದಾರೋ ಇಲ್ಲವೋ ಎಂಬುದು ಸಹ ಆತನಿಗೆ ತಿಳಿದಿದೆ. ಇಂದು, ತಮಗೆ ಆಸಕ್ತಿಯಿಲ್ಲ ಎಂದು ಕೆಲವು ಜನರು ಹೇಳುತ್ತಾರೆ. ಆದರೆ ಉದ್ಯೋಗ ನಷ್ಟ, ಗಂಭೀರವಾದ ಕಾಯಿಲೆ, ಒಬ್ಬ ಪ್ರಿಯ ವ್ಯಕ್ತಿಯ ಮರಣಗಳಂತಹ ಅವರ ಜೀವಿತಗಳಲ್ಲಾಗುವ ನಾಟಕೀಯವಾದ ಬದಲಾವಣೆಗಳು, ಬೇರೊಂದು ಸಮಯದಲ್ಲಿ ನಮ್ಮ ಸಂದೇಶಕ್ಕೆ ಅವರು ಕಿವಿಗೊಡುವಂತೆ ಮಾಡಬಹುದು. ನಮ್ಮ ಕುರಿತಾದ ಪೂರ್ವಕಲ್ಪಿತ ಅಭಿಪ್ರಾಯದ ಕಾರಣದಿಂದ ಅಥವಾ ಕಿವಿಗೊಡಲು ಸಮಯವಿರದಷ್ಟು ಕಾರ್ಯಮಗ್ನರಾಗಿದ್ದರಿಂದ, ಅನೇಕ ಜನರು ನಾವು ಸಾರುವ ವಿಷಯವನ್ನು ಎಂದೂ ಕೇಳಿಸಿಕೊಳ್ಳದಿರಬಹುದು. ಪುನಃ ಪುನಃ ಹೋಗಿ ಸ್ನೇಹಭಾವದಿಂದ ಭೇಟಿ ನೀಡುವುದು, ಅವರು ನಮ್ಮ ಸಂದೇಶಕ್ಕೆ ಗಮನಕೊಡುವಂತೆ ಹಾಗೂ ಕಿವಿಗೊಡುವಂತೆ ಪ್ರಚೋದಿಸಬಹುದು.
7 ಇತ್ತೀಚಿನ ವರ್ಷಗಳಲ್ಲಿ ಬೆಳೆದು ದೊಡ್ಡವರಾಗಿದ್ದು, ಈಗ ತಮ್ಮ ಸ್ವಂತ ಕುಟುಂಬಗಳನ್ನು ಹೊಂದಿರುವ ಅನೇಕರು, ಜೀವಿತವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಮತ್ತು ದೇವರ ವಾಕ್ಯವು ಮಾತ್ರ ಉತ್ತರಿಸಸಾಧ್ಯವಿರುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಯುವಪ್ರಾಯದ ಒಬ್ಬ ತಾಯಿಯು ಇಬ್ಬರು ಸಾಕ್ಷಿಗಳನ್ನು ತನ್ನ ಮನೆಯೊಳಗೆ ಬರುವಂತೆ ಆಹ್ವಾನಿಸಿ ಹೇಳಿದ್ದು: “ನಾನು ಚಿಕ್ಕವಳಾಗಿದ್ದಾಗ, ನನ್ನ ತಾಯಿ ಸಾಕ್ಷಿಗಳ ಸಂದೇಶಕ್ಕೆ ಕಿವಿಗೊಡುತ್ತಿರಲಿಲ್ಲ ಮತ್ತು ತನಗೆ ಆಸಕ್ತಿಯಿಲ್ಲ ಎಂದು ಹೇಳಿ ಅವರನ್ನು ಹಿಂದೆ ಕಳುಹಿಸಿಬಿಡುತ್ತಿದ್ದರು. ಸಾಕ್ಷಿಗಳು ಬೈಬಲಿನ ಕುರಿತು ಮಾತಾಡಲು ಬಯಸುತ್ತಾರೆ ಅಷ್ಟೆ, ಆದರೆ ತಾಯಿ ಏಕೆ ಹೀಗೆ ಮಾಡುತ್ತಾರೆ ಎಂಬುದು ನನಗೆ ಅರ್ಥವೇ ಆಗುತ್ತಿರಲಿಲ್ಲ. ನಾನು ದೊಡ್ಡವಳಾಗಿ, ಮದುವೆಮಾಡಿಕೊಂಡು, ನನ್ನದೇ ಸಂಸಾರವನ್ನು ಆರಂಭಿಸುವಾಗ, ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಬಂದು ನನಗೆ ಬೈಬಲಿನ ಕುರಿತು ವಿವರಿಸುವಂತೆ ಅವರನ್ನು ಕೇಳಿಕೊಳ್ಳುವೆ ಎಂದು ನಾನು ಮನಸ್ಸಿನಲ್ಲೇ ನಿರ್ಧರಿಸಿದೆ.” ಇದನ್ನೇ ಅವಳು ಮಾಡಿದಳು ಮತ್ತು ಅವಳನ್ನು ಭೇಟಿಯಾದ ಸಾಕ್ಷಿಗಳಿಗೆ ನಿಜಕ್ಕೂ ಆನಂದವಾಯಿತು.
8 ನೀವು ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಸಾಕ್ಷಿನೀಡಸಾಧ್ಯವಿದೆಯೋ? ನಾವು ಒಂದೇ ಟೆರಿಟೊರಿಯಲ್ಲಿ ಅನೇಕಬಾರಿ ಸೇವೆಮಾಡುತ್ತಿರುವಾಗ, ಅಲ್ಲಿರುವ ಜನರಿಂದಾಗಿಯೇ ನಮಗೆ ಸೇವೆಮಾಡಲು ಕಷ್ಟವಾಗುತ್ತದೆಂದು ಯಾವಾಗಲೂ ಹೇಳಸಾಧ್ಯವಿಲ್ಲ. ಕೆಲವೊಮ್ಮೆ ನಾವೇ ಇದಕ್ಕೆ ಕಾರಣರಾಗಿರುತ್ತೇವೆ. ಯಾವಾಗಲೂ ನಕಾರಾತ್ಮಕ ಭಾವನೆಗಳಿಂದ ನಾವು ಸೇವೆಯನ್ನು ಆರಂಭಿಸುತ್ತೇವೋ? ಇದು ನಮ್ಮ ಮನೋಭಾವದ ಮೇಲೆ, ನಮ್ಮ ಸ್ವರದ ಮೇಲೆ ಹಾಗೂ ಮುಖಭಾವದ ಮೇಲೆ ಪ್ರಭಾವ ಬೀರಬಲ್ಲದು. ಸಕಾರಾತ್ಮಕ ಮನೋಭಾವವನ್ನು ತೋರಿಸಿರಿ ಹಾಗೂ ಮುಖವು ಪ್ರಸನ್ನವಾಗಿರಲಿ. ಒಳ್ಳೆಯ ರೀತಿಯಲ್ಲಿ ಮಾತಾಡಲು ಪ್ರಯತ್ನಿಸಿರಿ. ನಿಮ್ಮ ನಿರೂಪಣೆಯನ್ನು ಬದಲಾಯಿಸಿರಿ ಮತ್ತು ಅದನ್ನು ಉತ್ತಮಗೊಳಿಸಲು ಪ್ರಯತ್ನಿಸಿರಿ. ನಿಮ್ಮ ಆರಂಭದ ಪ್ರಶ್ನೆಯನ್ನು ನೀವು ಬದಲಾಯಿಸಿ ಅಥವಾ ಸಂಭಾಷಣೆಯಲ್ಲಿ ಬೇರೊಂದು ಶಾಸ್ತ್ರವಚನವನ್ನು ಉಪಯೋಗಿಸಿ ಇದೇ ಟೆರಿಟೊರಿಯಲ್ಲಿ ಕೆಲಸಮಾಡುವಾಗ ಇತರ ಸಹೋದರ ಸಹೋದರಿಯರು ಹೇಗೆ ಯಶಸ್ಸನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಅವರ ಬಳಿಯೇ ಕೇಳಿ ತಿಳಿದುಕೊಳ್ಳಿ. ಸೇವೆಯಲ್ಲಿ ಬೇರೆ ಬೇರೆ ಪ್ರಚಾರಕರೊಂದಿಗೆ ಮತ್ತು ಪಯನೀಯರರೊಂದಿಗೆ ಕೆಲಸಮಾಡಿರಿ ಮತ್ತು ಅವರ ಶುಶ್ರೂಷೆಯನ್ನು ಯಾವುದು ಪರಿಣಾಮಕಾರಿಯಾಗಿ ಮಾಡುತ್ತದೆ ಎಂಬುದನ್ನು ಗಮನಿಸಿರಿ.
9 ರಾಜ್ಯದ ಕುರಿತು ಸಾರುವ ಕೆಲಸಕ್ಕೆ ಯೆಹೋವನ ಅಂಗೀಕಾರವೂ ಆಶೀರ್ವಾದವೂ ಇದೆ. ಮತ್ತು ಈ ಕೆಲಸದಲ್ಲಿ ಭಾಗವಹಿಸುವ ಮೂಲಕ, ಆತನ ಕಡೆಗೆ ಹಾಗೂ ನಮ್ಮ ನೆರೆಯವರ ಕಡೆಗೆ ನಮಗಿರುವ ಪ್ರೀತಿಯನ್ನು ನಾವು ರುಜುಪಡಿಸುವೆವು. (ಮತ್ತಾ. 22:37-39) ಆದುದರಿಂದ, ನಮ್ಮ ಕೆಲಸವನ್ನು ನಾವು ಪೂರ್ಣಗೊಳಿಸೋಣ ಮತ್ತು ಪುನಃ ಪುನಃ ನಮ್ಮ ಟೆರಿಟೊರಿಯಲ್ಲಿ ಸೇವೆಮಾಡುವುದರಲ್ಲಿ ಆಯಾಸಗೊಳ್ಳದಿರೋಣ.