ನೀವು ಹೆಚ್ಚನ್ನು ಮಾಡಲು ಬಯಸುತ್ತೀರೊ?
1 ಯೇಸು ರಾಜ್ಯವನ್ನು ಬೆಲೆಕಟ್ಟಲಾಗದಂತಹ ನಿಕ್ಷೇಪಕ್ಕೆ ಹೋಲಿಸಿದನು. (ಮತ್ತಾ. 13:44-46) ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸವೂ ಒಂದು ಅಮೂಲ್ಯವಾದ ನಿಕ್ಷೇಪದಂತಿದೆ. ಈ ಶುಶ್ರೂಷೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಸ್ವಲ್ಪ ಮಟ್ಟಿಗಿನ ಸ್ವತ್ಯಾಗವನ್ನು ಮಾಡಬೇಕಾದರೂ, ಅದು ನಮ್ಮ ಜೀವನದಲ್ಲಿ ಅತ್ಯುಚ್ಚ ಸ್ಥಾನವನ್ನು ಪಡೆಯಲು ಅರ್ಹವಾಗಿದೆ. (ಮತ್ತಾ. 6:19-21) ರಾಜ್ಯ ಸೇವೆಯಲ್ಲಿ ನೀವು ಹೆಚ್ಚನ್ನು ಮಾಡಲು ಬಯಸುತ್ತೀರೊ?
2 ಈ ಆವಶ್ಯಕ ವಿಷಯಗಳನ್ನು ಪರಿಗಣಿಸಿರಿ: ಶುಶ್ರೂಷೆಯಲ್ಲಿ ನಮ್ಮ ವೈಯಕ್ತಿಕ ಪಾಲನ್ನು ಹೆಚ್ಚಿಸಲಿಕ್ಕಾಗಿ ಅನೇಕ ವಿಷಯಗಳು ಅಗತ್ಯವಾಗಿವೆ: (1) ಜೀವಿತದಲ್ಲಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವ ದೃಢನಿರ್ಧಾರವುಳ್ಳವರಾಗಿರುವುದು (ಮತ್ತಾ. 6:33); (2) ನಂಬಿಕೆಯನ್ನು ತೋರಿಸುವುದು ಮತ್ತು ಯೆಹೋವನ ಮೇಲೆ ಆತುಕೊಳ್ಳುವುದು (2 ಕೊರಿಂ. 4:1, 7); (3) ಯಥಾರ್ಥ ಹಾಗೂ ಸತತವಾದ ಪ್ರಾರ್ಥನೆಯ ಮೂಲಕ ದೇವರ ಸಹಾಯವನ್ನು ಕೋರುವುದು (ಲೂಕ 11:8-10); (4) ನಮ್ಮ ಪ್ರಾರ್ಥನೆಗಳಿಗನುಸಾರ ಜೀವಿಸುವುದು ಮತ್ತು ಅವುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವುದು.—ಯಾಕೋ. 2:14, 17.
3 ನಮ್ಮ ಶುಶ್ರೂಷೆಯನ್ನು ವಿಸ್ತರಿಸುವ ವಿಧಗಳು: ಪ್ರತಿ ತಿಂಗಳು ಶುಶ್ರೂಷೆಯಲ್ಲಿ ಕ್ರಮವಾಗಿ ಸ್ವಲ್ಪ ಸಮಯವನ್ನು ಕಳೆಯುವ ಮೂಲಭೂತ ಗುರಿಯನ್ನು ನಾವೆಲ್ಲರೂ ಇಡಸಾಧ್ಯವಿದೆ. ಆದರೆ ಅನೌಪಚಾರಿಕ ರೀತಿಯಲ್ಲಿ ಸಾಕ್ಷಿ ನೀಡಲು ಸಿಗುವ ಪ್ರತಿಯೊಂದು ಅವಕಾಶವನ್ನು ಉಪಯೋಗಿಸುವುದು, ನಿಮ್ಮ ನಿರೂಪಣೆಗಳನ್ನು ಇನ್ನೂ ಹೆಚ್ಚು ಅರ್ಥಭರಿತವಾಗಿ ಮಾಡಲು ಪ್ರಯತ್ನಿಸುವುದು, ನಿಮ್ಮ ಪುನರ್ಭೇಟಿಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು, ಪ್ರಗತಿಪರ ಗೃಹ ಬೈಬಲ್ ಅಭ್ಯಾಸಗಳನ್ನು ನಡೆಸಲು ಶ್ರಮಿಸುವುದರ ಕುರಿತಾಗಿಯೂ ನೀವು ಆಲೋಚಿಸಿದ್ದೀರೋ? ನೀವು ಆಕ್ಸಿಲಿಯರಿ ಇಲ್ಲವೆ ರೆಗ್ಯುಲರ್ ಪಯನೀಯರ್ ಸೇವೆಯನ್ನು ಮಾಡಲು ಅಥವಾ ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ಸೇವೆಮಾಡಲು ಶಕ್ತರಾಗಿರಬಹುದೋ? ನೀವು ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ಸಹೋದರರಾಗಿರುವಲ್ಲಿ, ಒಬ್ಬ ಶುಶ್ರೂಷಾ ಸೇವಕರಾಗಿ ಅಥವಾ ಹಿರಿಯರಾಗಿ ಅರ್ಹರಾಗಲು ಪ್ರಯತ್ನಿಸಬಲ್ಲಿರೋ? (1 ತಿಮೊ. 3:1, 10) ಮಿನಿಸ್ಟ್ರೀರಿಯಲ್ ಟ್ರೈನಿಂಗ್ ಸ್ಕೂಲ್ಗೆ ಸೇರಲು ಅರ್ಜಿಹಾಕುವ ಮೂಲಕ ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಸಾಧ್ಯವಿದೆಯೋ?—ಲೂಕ 10:2.
4 ಪೂರ್ಣ ಸಮಯದ ಉದ್ಯೋಗವಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದ ಒಬ್ಬ ಸಹೋದರನಿಗೆ, ಒಬ್ಬ ರೆಗ್ಯುಲರ್ ಪಯನೀಯರ್ ಆಗುವಂತೆ ಪ್ರೋತ್ಸಾಹ ನೀಡಲಾಯಿತು. ಅವನು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಆರಂಭಿಸಿದನು ಮತ್ತು ನಂತರ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸಲಿಕ್ಕಾಗಿ ತನ್ನ ಸನ್ನಿವೇಶಗಳನ್ನು ಸರಿಹೊಂದಿಸಿಕೊಂಡನು. ಸಮಯಾನಂತರ ಅವನು ಮಿನಿಸ್ಟ್ರೀರಿಯಲ್ ಟ್ರೈನಿಂಗ್ ಸ್ಕೂಲ್ಗೆ ಹಾಜರಾದನು ಮತ್ತು ಇದು ಅವನನ್ನು ಸರ್ಕಿಟ್ ಮೇಲ್ವಿಚಾರಕನೋಪಾದಿ ತನ್ನ ಸದ್ಯದ ನೇಮಕಕ್ಕೆ ಸಿದ್ಧನಾಗುವಂತೆ ಸಹಾಯಮಾಡಿತು. ತನಗೆ ಕೊಡಲ್ಪಟ್ಟ ಪ್ರೋತ್ಸಾಹಕ್ಕೆ ತಾನು ಪ್ರತಿಕ್ರಿಯಿಸಿದ್ದಕ್ಕಾಗಿ ಅವನು ತುಂಬ ಸಂತೋಷಿತನಾಗಿದ್ದಾನೆ ಮತ್ತು ರಾಜ್ಯ ಸೇವೆಯಲ್ಲಿ ಹೆಚ್ಚನ್ನು ಮಾಡುವ ತನ್ನ ನಿರ್ಧಾರದ ಫಲಿತಾಂಶವಾಗಿ ತಾನು ಇನ್ನಷ್ಟು ಸಂತೋಷದಿಂದಿದ್ದೇನೆ ಎಂಬ ಭರವಸೆ ಅವನಿಗಿದೆ.
5 ಯಾರು ತಮ್ಮನ್ನು ನೀಡಿಕೊಳ್ಳುತ್ತಾರೋ ಅವರನ್ನು ಯೆಹೋವನು ಆಶೀರ್ವದಿಸುತ್ತಾನೆ. (ಯೆಶಾ. 6:8) ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವುದರಿಂದ ಮತ್ತು ಇದರ ಫಲಿತಾಂಶವಾಗಿ ಸಿಗುವ ಇನ್ನೂ ಹೆಚ್ಚಿನ ಸಂತೃಪ್ತಿ ಹಾಗೂ ಚೈತನ್ಯದಲ್ಲಿ ಆನಂದಿಸುವುದರಿಂದ ಯಾವುದೂ ನಿಮ್ಮನ್ನು ತಡೆಹಿಡಿಯದಿರಲಿ.