ನೀವು ನಿಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದ್ದೀರೋ?
1 ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ, ಯೇಸುವಿನ ಶಿಷ್ಯರು ತಮ್ಮ ಶುಶ್ರೂಷೆಯನ್ನು ಜನರಿಗೆ “ಸಂಪೂರ್ಣವಾಗಿ ಸಾಕ್ಷಿ”ಕೊಡುವ ಮೂಲಕ ಪೂರೈಸಿದರು ಎಂಬುದಾಗಿ ನಮಗೆ ಹೇಳಲ್ಪಟ್ಟಿದೆ. (ಅ. ಕೃ. 2:40; 8:25; 28:23; NW) ಅಪೊಸ್ತಲ ಪೌಲನ ಉದ್ದೇಶವೂ ಖಂಡಿತವಾಗಿಯೂ ಅದೇ ಆಗಿತ್ತು. (ಅ. ಕೃ. 20:24, NW) ಸುವಾರ್ತೆಯ ಶುಶ್ರೂಷಕರೋಪಾದಿ ನಿಮ್ಮ ಗುರಿಯೂ ಅದೇ ಅಲ್ಲವೋ? ಈ ಗುರಿಯನ್ನು ನೀವು ಹೇಗೆ ಪೂರೈಸಬಲ್ಲಿರಿ?
2 ನಿಮ್ಮ ನಿರೂಪಣೆಯನ್ನು ತಯಾರಿಸಿ: ಶುಶ್ರೂಷೆಯಲ್ಲಿ ನೀವು ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುವುದನ್ನು ಖಚಿತಪಡಿಸಿಕೊಳ್ಳಲು, ತಯಾರಿಯು ಪ್ರಾಮುಖ್ಯ. ಇದು ವಿಶೇಷವಾಗಿ ಪತ್ರಿಕೆಗಳನ್ನು ನೀಡುವಾಗ ನಿಜವಾಗಿದೆ, ಏಕೆಂದರೆ ಚರ್ಚಿಸಲ್ಪಡುವ ವಿಷಯವು ನಿರಂತರವಾಗಿ ಬದಲಾಗುತ್ತಿರುತ್ತದೆ. ನಮ್ಮನ್ನು ಹೆಚ್ಚು ಉತ್ತಮವಾಗಿ ಸಜ್ಜುಗೊಳಿಸಲಿಕ್ಕಾಗಿ, ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯು ಒಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ—ಎಡಗಡೆಯಲ್ಲಿರುವ ಅಂಕಣ. ಅದು ಇತ್ತೀಚಿನ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ ಮಾದರಿ ನಿರೂಪಣೆಗಳನ್ನು ಪಟ್ಟಿಮಾಡುತ್ತದೆ. ಪ್ರತಿಯೊಂದು ಸಂಚಿಕೆಯಲ್ಲಿ, ಅನೇಕ ಜನರ ಗಮನವನ್ನು ಆಕರ್ಷಿಸುವಂಥ ಒಂದು ಸಮಯೋಚಿತವಾದ ವಿಚಾರವು ಎತ್ತಿತೋರಿಸಲ್ಪಡುವುದು. ಈ ಸಂಕ್ಷಿಪ್ತವಾದ ನಿರೂಪಣೆಗಳನ್ನು ನೀವು ಹೇಗೆ ವಿಸ್ತಾರಗೊಳಿಸಬಹುದು?
3 ನಿಮ್ಮ ಟೆರಿಟೊರಿಯಲ್ಲಿ ತುಂಬ ಪರಿಣಾಮಕಾರಿಯಾಗಿರುವುದು ಎಂದು ನೀವೆಣಿಸುವ ಒಂದು ಸಲಹೆಯನ್ನು ಆರಿಸಿಕೊಳ್ಳಿ. ಅದರಲ್ಲಿ ಸೂಚಿಸಲ್ಪಟ್ಟಿರುವ ಲೇಖನವನ್ನು ಜಾಗರೂಕತೆಯಿಂದ ಓದಿ, ಆಸಕ್ತಿಯನ್ನು ಕೆರಳಿಸಬಹುದಾದ ನಿರ್ದಿಷ್ಟವಾದ ಪಾಯಿಂಟ್ಗಳನ್ನು ಗುರುತಿಸಿಕೊಳ್ಳಿ. ಚರ್ಚೆಯೊಂದಿಗೆ ಸಂಬಂಧಿಸುವಂಥ ಮತ್ತು ಪ್ರಾಯಶಃ ನೀವು ಮನೆಯವರಿಗೆ ಓದಿ ತೋರಿಸಬಹುದಾದ ಒಂದು ಉದ್ಧೃತ ವಚನವನ್ನು ಹುಡುಕಿರಿ. ನಿಮ್ಮ ಕೇಳುಗರು ಪತ್ರಿಕೆಯನ್ನು ಓದುವಂತೆ ಪ್ರೋತ್ಸಾಹಿಸುವಂಥ ಒಂದು ಸಂಕ್ಷಿಪ್ತವಾದ ಸಮಾಪ್ತಿಯನ್ನು, ಸೂಕ್ತವಾಗಿದ್ದರೆ ಕೂಡಿಸಿರಿ ಮತ್ತು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಮನೆಯವನು ಕಾಣಿಕೆಯನ್ನು ನೀಡಬಹುದು ಎಂಬುದರ ಕುರಿತಾದ ಒಂದು ಸಂಕ್ಷಿಪ್ತವಾದ ಹೇಳಿಕೆಯನ್ನು ಮಾಡಿ. ಈಗ ನಿಮ್ಮ ನಿರೂಪಣೆಯನ್ನು ಪೂರ್ವಾಭ್ಯಾಸಿಸಿ.
4 ಬೈಬಲನ್ನು ಉಪಯೋಗಿಸಲು ಯೋಜಿಸಿ: ಒಳ್ಳೆಯ ಯೋಜನೆಯೊಂದಿಗೆ, ನಿಮ್ಮ ನಿರೂಪಣೆಯಲ್ಲಿ ಹೆಚ್ಚಿನ ವೇಳೆ ಒಂದು ವಚನವನ್ನು ಒಳಸೇರಿಸಬಹುದು. ಆದರೆ ಅದಕ್ಕಿಂತ ಮುಂಚಿತವಾಗಿ, ನಮ್ಮ ಟೆರಿಟೊರಿಯಲ್ಲಿ ಮಾತಾಡಲಾಗುವ ಭಾಷೆಗಳಲ್ಲಿ ನಾವು ಸಂಪೂರ್ಣವಾದ ಬೈಬಲನ್ನು ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ನಂತರ, ಬೈಬಲನ್ನು ಉಪಯೋಗಿಸುವುದರ ಕುರಿತು ಯಾವುದೇ ಸ್ಥಳಿಕ ಪೂರ್ವಾಭಿಪ್ರಾಯ ಇಲ್ಲದಿರುವುದಾದರೆ, ಅದನ್ನು ಉಪಯೋಗಿಸುವ ಮೂಲಕ ನಮ್ಮ ಸಂಭಾಷಣೆಯನ್ನು ಆರಂಭಿಸಲು ಸಾಧ್ಯವಾಗಬಹುದು. ಒಂದು ಸ್ನೇಹಪರವಾದ ವಂದನೆಯನ್ನು ನೀಡಿದ ನಂತರ, ನಾವು ಹೀಗೆ ಹೇಳಬಹುದು:
◼ “ಇದನ್ನು ನಂಬುತ್ತೀರೋ ಎಂಬುದಾಗಿ ನಾವು ಜನರನ್ನು ಕೇಳುತ್ತಿದ್ದೇವೆ . . .” ಆದಿಕಾಂಡ 1:1ನ್ನು ಓದಿ, ಮತ್ತು ನಂತರ ಕೇಳಿ: “ಈ ವಾಕ್ಯವನ್ನು ನೀವು ಒಪ್ಪಿಕೊಳ್ಳುತ್ತೀರೋ?” ವ್ಯಕ್ತಿಯು ಒಪ್ಪಿಕೊಳ್ಳುವುದಾದರೆ, ಹೀಗೆ ಹೇಳಿ: “ನಾನೂ ಒಪ್ಪಿಕೊಳ್ಳುತ್ತೇನೆ. ಆದರೂ, ದೇವರು ಎಲ್ಲವನ್ನೂ ಸೃಷ್ಟಿಸಿರುವುದಾದರೆ, ಎಲ್ಲ ದುಷ್ಟತನಕ್ಕೂ ಆತನೇ ಜವಾಬ್ದಾರನಾಗಿದ್ದಾನೆ ಎಂದು ನಿಮಗೆ ಅನಿಸುತ್ತದೋ?” ಆ ವ್ಯಕ್ತಿಯ ಉತ್ತರವನ್ನು ಪರಿಗಣಿಸಿದ ನಂತರ, ಪ್ರಸಂಗಿ 7:29ನ್ನು ಓದಿ. ಜ್ಞಾನ ಪುಸ್ತಕವನ್ನು 71ನೆಯ ಪುಟಕ್ಕೆ ತೆರೆದು, ಎರಡನೆಯ ಪ್ಯಾರಗ್ರಾಫನ್ನು ಓದಿ. ಆ ವ್ಯಕ್ತಿಯು ಪುಸ್ತಕವನ್ನು ಓದುವಂತೆ ಪ್ರೋತ್ಸಾಹಿಸಿ. ಆದಿಕಾಂಡ 1:1ರಲ್ಲಿರುವ ವಾಕ್ಯವನ್ನು ಮನೆಯವನು ಒಪ್ಪುವುದಿಲ್ಲವಾದರೆ, ಸೃಷ್ಟಿ (ಇಂಗ್ಲಿಷ್) ಪುಸ್ತಕವನ್ನು ಪರಿಶೀಲಿಸುವಂತೆ ಅವನನ್ನು ಉತ್ತೇಜಿಸಿ.
5 ಕಂಡುಕೊಳ್ಳಲ್ಪಟ್ಟಂಥ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಿ: ಕಂಡುಕೊಳ್ಳಲ್ಪಟ್ಟಂಥ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗದಿದ್ದರೆ, ನೀವು ನಿಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ಪತ್ರಿಕೆಗಳನ್ನು ಅಥವಾ ಇತರ ಸಾಹಿತ್ಯವನ್ನು ತೆಗೆದುಕೊಂಡಿರಲಿ ಇಲ್ಲದಿರಲಿ, ನೀವು ಅವರೊಂದಿಗೆ ಒಂದು ಒಳ್ಳೆಯ ಚರ್ಚೆಯನ್ನು ನಡಿಸಿರುವುದಾದರೆ, ಆ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಬರೆದುಕೊಳ್ಳಿ. ತಡಮಾಡದೇ ಪುನಃ ಹೋಗುವ ಮೂಲಕ ಆ ವ್ಯಕ್ತಿಯ ಆಸಕ್ತಿಯನ್ನು ಬೆಳೆಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿ. ಖಂಡಿತವಾಗಿಯೂ, ಒಂದು ಬೈಬಲ್ ಅಭ್ಯಾಸದ ನೀಡುವಿಕೆಯನ್ನು ಮಾಡಿ.
6 “ಸಂಪೂರ್ಣವಾದ ಸಾಕ್ಷಿಯನ್ನು ಕೊಡಬೇಕೆಂದು” ಯೇಸು ತಮಗೆ ಆಜ್ಞೆಯಿತ್ತಿದ್ದಾನೆ ಎಂಬುದು ಅವನ ಪ್ರಥಮ ಶತಮಾನದ ಶಿಷ್ಯರಿಗೆ ಗೊತ್ತಿತ್ತು. (ಅ. ಕೃ. 10:42, NW) ಅದೇ ಆಜ್ಞೆ ನಮಗೂ ಅನ್ವಯವಾಗುತ್ತದೆ, ಏಕೆಂದರೆ ನಾವು ಶಿಷ್ಯರನ್ನು ಮಾಡಲು ಸಾಧ್ಯವಿರುವ ಒಂದೇ ವಿಧಾನವು ಸಾಕ್ಷಿಕೊಡುವುದಾಗಿದೆ. (ಮತ್ತಾ. 28:19, 20) ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸಲಿಕ್ಕಾಗಿ ನಮ್ಮಿಂದಾಗುವುದೆಲ್ಲವನ್ನೂ ಮಾಡೋಣ.—2 ತಿಮೊ. 4:5.