ಯೆಹೋವನೊಂದಿಗೆ ಮತ್ತು ಆತನ ಪುತ್ರನೊಂದಿಗೆ ಆನಂದದಿಂದ ಐಕ್ಯರು
ಈ ವರ್ಷದ ಅತಿ ಪ್ರಾಮುಖ್ಯ ಘಟನೆಯನ್ನು ಮಾರ್ಚ್ 28ರಂದು ಆಚರಿಸಲಾಗುವುದು
1 ಇಸವಿ 2002ರ ಮಾರ್ಚ್ 28ರಂದು ಸೂರ್ಯಾಸ್ತಮಾನದ ನಂತರ ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವ ಮೂಲಕ, ನಾವು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನೊಂದಿಗೆ ಆನಂದದಿಂದ ಐಕ್ಯರಾಗಿದ್ದೇವೆ ಎಂಬುದನ್ನು ತೋರಿಸುತ್ತೇವೆ. ಆ ವಿಶೇಷ ಸಂದರ್ಭದಲ್ಲಿ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರು, ಇನ್ನಿತರ ರಾಜ್ಯ ಬಾಧ್ಯಸ್ಥರೊಂದಿಗೆ ತಂದೆ ಮತ್ತು ಆತನ ಪುತ್ರನೊಂದಿಗೆ ಅವರಿಗಿರುವ ವಿಶೇಷವಾದ “ಅನ್ಯೋನ್ಯತೆಯಲ್ಲಿ” ಆನಂದಿಸುವರು. (1 ಯೋಹಾ. 1:3; ಎಫೆ. 1:11, 12) ಮತ್ತು ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ “ಬೇರೆ ಕುರಿಗಳು,” ಯೆಹೋವನೊಂದಿಗೆ ಹಾಗೂ ಆತನ ಪುತ್ರನೊಂದಿಗೆ ಐಕ್ಯರಾಗಿರುವ, ದೇವರ ಕೆಲಸವನ್ನು ಪೂರೈಸುವುದರಲ್ಲಿ ಅವರೊಂದಿಗೆ ಒಂದೇ ಹೃದಮನಸ್ಸುಳ್ಳವರಾಗಿರುವ ತಮ್ಮ ಅದ್ಭುತಕರವಾದ ಸುಯೋಗದ ಕುರಿತಾಗಿ ಮನನಮಾಡುವ ಅಪೂರ್ವ ಅವಕಾಶವನ್ನು ಹೊಂದುವರು!—ಯೋಹಾ. 10:16.
2 ಒಂದು ನಿಕಟವಾದ ಸಂಬಂಧದಲ್ಲಿ ಜೊತೆಯಾಗಿ ಕೆಲಸಮಾಡುವುದು: ಯೆಹೋವನೂ ಯೇಸುವೂ ಯಾವಾಗಲೂ ಆನಂದದಿಂದ ಐಕ್ಯರಾಗಿದ್ದಾರೆ. ಮನುಷ್ಯನು ಸೃಷ್ಟಿಸಲ್ಪಡುವ ಅನೇಕಾನೇಕ ಯುಗಗಳಿಗಿಂತಲೂ ಮುಂಚೆಯೇ ಅವರು ಆಪ್ತವಾದ ಸಹವಾಸದಲ್ಲಿ ಆನಂದಿಸುತ್ತಿದ್ದರು. (ಮೀಕ 5:2) ಹೀಗೆ ಅವರಿಬ್ಬರ ನಡುವೆ ಕೋಮಲ ವಾತ್ಸಲ್ಯದ ಒಂದು ಗಾಢವಾದ ಬಂಧವು ಬೆಸೆಯಿತು. ವಿವೇಕದ ಸಾಕಾರರೂಪದೋಪಾದಿ, ಈ ಜ್ಯೇಷ್ಠಪುತ್ರನು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಹೀಗೆ ಹೇಳಸಾಧ್ಯವಿತ್ತು: “ನಾನು . . . ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ [ಯೆಹೋವನ] ಮುಂದೆ ವಿನೋದಿಸುತ್ತಾ . . . ಇದ್ದೆನು.” (ಜ್ಞಾನೋ. 8:30, 31) ಪ್ರೀತಿಯ ಮೂಲನಾಗಿರುವಾತನೊಂದಿಗೆ ಅಸಂಖ್ಯಾತ ಯುಗಗಳ ನಿಕಟವಾದ ಸಹವಾಸವು, ದೇವಕುಮಾರನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು!—1 ಯೋಹಾ. 4:8.
3 ಮಾನವಕುಲಕ್ಕೆ ಅಗತ್ಯವಾಗಿದ್ದ ವಿಮೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ, ಯೆಹೋವನು, ಮಾನವರನ್ನು ವಿಶೇಷವಾಗಿ ಪ್ರೀತಿಸುತ್ತಿದ್ದ ತನ್ನ ಒಬ್ಬನೇ ಮಗನು ಪ್ರಾಯಶ್ಚಿತ್ತ ಯಜ್ಞವನ್ನು ಕೊಡಲಿಕ್ಕಾಗಿ ಅವನನ್ನು ಆಯ್ಕೆಮಾಡಿದನು. ಈ ಯಜ್ಞವೇ ನಮ್ಮ ಏಕೈಕ ನಿರೀಕ್ಷೆಯಾಗಿದೆ. (ಜ್ಞಾನೋ. 8:31) ಒಂದೇ ಉದ್ದೇಶವನ್ನು ಪೂರೈಸುವುದರಲ್ಲಿ ಯೆಹೋವನು ಮತ್ತು ಆತನ ಪುತ್ರನು ಐಕ್ಯರಾಗಿರುವಂತೆಯೇ, ನಾವು ಅವರೊಂದಿಗೆ ಮತ್ತು ಪರಸ್ಪರರೊಂದಿಗೆ ಬಲವಾದ ಪ್ರೀತಿಯ ಬಂಧಗಳಲ್ಲಿ, ಆನಂದದಿಂದ ದೇವರ ಚಿತ್ತವನ್ನು ಮಾಡುತ್ತಾ ಐಕ್ಯರಾಗಿ ಉಳಿಯುತ್ತೇವೆ.
4 ನಮ್ಮ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸುವುದು: ಜ್ಞಾಪಕಾಚರಣೆಗೆ ಹಾಜರಿರುವ ಮೂಲಕ ಮತ್ತು ತದೇಕಚಿತ್ತದಿಂದ ಹಾಗೂ ಗೌರವಪೂರ್ವಕವಾಗಿ ಕಿವಿಗೊಡುವ ಮೂಲಕ, ಯೆಹೋವನ ಪ್ರೀತಿಗಾಗಿ ಹಾಗೂ ನಮಗಾಗಿರುವ ಆತನ ಪುತ್ರನ ಯಜ್ಞಕ್ಕಾಗಿ ನಮ್ಮ ನಿಜವಾದ ಗಣ್ಯತೆಯನ್ನು ನಾವು ತೋರಿಸಬಲ್ಲೆವು. ಆ ದಿನದಂದು, ಯೇಸುವಿನ ಪ್ರೀತಿಪರ ಮಾದರಿ, ಪ್ರಾಯಶ್ಚಿತ್ತವನ್ನು ಒದಗಿಸುವುದರಲ್ಲಿ ಮರಣದ ವರೆಗೂ ಅವನ ನಂಬಿಗಸ್ತಿಕೆ, ಮತ್ತು ದೇವರ ಸ್ಥಾಪಿತ ರಾಜ್ಯದ ರಾಜನಾಗಿ ಅವನ ಆಳ್ವಿಕೆ ಹಾಗೂ ಆ ರಾಜ್ಯವು ಮಾನವಕುಲಕ್ಕೆ ತರಲಿರುವ ಆಶೀರ್ವಾದಗಳನ್ನು ಎತ್ತಿತೋರಿಸಲಾಗುವುದು. ನಾವು ನಿರಂತರವಾಗಿ ನಮ್ಮ ನಂಬಿಕೆಯನ್ನು ಪ್ರದರ್ಶಿಸುತ್ತಾ, “ಸತ್ಯಕ್ಕೆ ಸಹಕಾರಿ”ಗಳೋಪಾದಿ ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ ಹುರುಪಿನಿಂದ ಕೆಲಸವನ್ನು ಮಾಡುವ ಅಗತ್ಯದ ಕುರಿತಾಗಿಯೂ ನಮಗೆ ಜ್ಞಾಪಕ ಹುಟ್ಟಿಸಲಾಗುವುದು.—3 ಯೋಹಾ. 8; ಯಾಕೋ. 2:17.
5 ಬೇರೆಯವರು ನಮ್ಮೊಂದಿಗೆ ಪಾಲ್ಗೊಳ್ಳುವಂತೆ ಸಹಾಯಮಾಡುವುದು: ಟೆರಿಟೊರಿಯಲ್ಲಿರುವ ಎಲ್ಲ ನಿಷ್ಕ್ರಿಯ ಸಾಕ್ಷಿಗಳು, ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗುವಂತೆ ಅವರನ್ನು ಪ್ರೋತ್ಸಾಹಿಸಲು ಹಿರಿಯರು ವಿಶೇಷ ಪ್ರಯತ್ನವನ್ನು ಮಾಡತಕ್ಕದ್ದು. (ಮತ್ತಾ. 18:12, 13) ಯಾರನ್ನೂ ಬಿಟ್ಟುಬಿಡದಂತೆ ಮತ್ತು ಎಲ್ಲರಿಗೂ ವೈಯಕ್ತಿಕ ಆಮಂತ್ರಣ ಸಿಗುವಂತೆ, ಕರೆಯಬೇಕಾಗಿರುವವರ ಒಂದು ಪಟ್ಟಿಯನ್ನು ಮಾಡಿರಿ.
6 ಜ್ಞಾಪಕಾಚರಣೆಗೆ ಬರಬಹುದಾದ ಇತರರ ಕುರಿತಾಗಿ ನಿಮಗೆ ತಿಳಿದಿದೆಯೊ? ಈ ಸಂದರ್ಭಕ್ಕಾಗಿ ಅವರ ಗಣ್ಯತೆಯನ್ನು ಬೆಳೆಸಲಿಕ್ಕಾಗಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಅವರು ಬಂದಾಗ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿರಿ, ಮತ್ತು ಅವರ ಬರೋಣದಿಂದಾಗಿ ನಮಗೆ ಸಂತೋಷವಾಗಿದೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಿರಿ. ವರ್ಷದ ಈ ಅತಿ ಪ್ರಾಮುಖ್ಯ ಘಟನೆಗೆ, ನಮ್ಮ ಎಲ್ಲ ಬೈಬಲ್ ವಿದ್ಯಾರ್ಥಿಗಳು, ಇತರ ಆಸಕ್ತ ಜನರು, ಕುಟುಂಬ ಸದಸ್ಯರು ಮತ್ತು ಪರಿಚಯಸ್ಥರನ್ನು ಆಮಂತ್ರಿಸಲು ನಮ್ಮಿಂದಾದದ್ದೆಲ್ಲವನ್ನೂ ಮಾಡೋಣ. “ಕ್ರಿಸ್ತ ಯೇಸುವಿನ ಜ್ಞಾನದ ಅತ್ಯುತ್ಕೃಷ್ಟ ಮೌಲ್ಯ”ದ ಕುರಿತು ಕಲಿಯುವವರೆಲ್ಲರಿಗೆ, ಪ್ರಾಯಶ್ಚಿತ್ತದ ಪ್ರಯೋಜನಗಳು ಈಗಲೂ ಲಭ್ಯವಿವೆ. (ಫಿಲಿ. 3:8, NW) ಕ್ರಿಸ್ತನ ಯಜ್ಞದಲ್ಲಿ ನಂಬಿಕೆಯನ್ನಿಡುವವರು, ನಿತ್ಯಜೀವದ ದೃಢವಾದ ನಿರೀಕ್ಷೆಯನ್ನು ಹೊಂದಬಲ್ಲರು.—ಯೋಹಾ. 3:16.
7 ಜ್ಞಾಪಕಾಚರಣೆಯು ಪ್ರಾಮಾಣಿಕ ವ್ಯಕ್ತಿಗಳ ಮೇಲೆ ಬೀರಬಲ್ಲ ಪರಿಣಾಮವನ್ನು ಎಂದಿಗೂ ಕಡಿಮೆ ಅಂದಾಜುಮಾಡಬೇಡಿ. ಎರಡು ವರ್ಷಗಳ ಹಿಂದೆ, ಪಾಪುವ ನ್ಯೂ ಗಿನೀ ಎಂಬ ದ್ವೀಪರಾಷ್ಟ್ರದಲ್ಲಿ, ಜ್ಞಾಪಕಾಚರಣೆಗೆ ಹಾಜರಾಗಲಿಕ್ಕಾಗಿ 11 ಮಂದಿ ಆಸಕ್ತ ವ್ಯಕ್ತಿಗಳು, ಪ್ರಕ್ಷುಬ್ಧವಾದ ಸಮುದ್ರದ ಮೂಲಕ ಸುಮಾರು 17 ತಾಸುಗಳ ವರೆಗೆ ಒಂದು ಚಿಕ್ಕ ದೋಣಿಯಲ್ಲಿ ಪ್ರಯಾಣಿಸಿದರು. ಏಕೆ? ಅವರು ಹೇಳಿದ್ದು: “ನಾವು ಯೆಹೋವನ ಜೊತೆ ಆರಾಧಕರೊಂದಿಗೆ ಕ್ರಿಸ್ತನ ಜ್ಞಾಪಕಾಚರಣೆಯನ್ನು ಆಚರಿಸಲು ಬಯಸಿದೆವು. ಅದಕ್ಕಾಗಿ ನಾವು ಮಾಡಿದ ಆ ಪ್ರಯಾಣವು ಸಾರ್ಥಕವಾಗಿತ್ತು.” ಆ ಆಸಕ್ತ ವ್ಯಕ್ತಿಗಳು ತೋರಿಸಿದಂಥ ಹುರುಪಿನ ಕುರಿತಾಗಿ ಮತ್ತು ಯೆಹೋವನೊಂದಿಗೆ, ಆತನ ಪುತ್ರನೊಂದಿಗೆ ಹಾಗೂ ಕ್ರೈಸ್ತ ಸಹೋದರರ ಬಳಗದೊಂದಿಗೆ ಆನಂದದಿಂದ ಐಕ್ಯರಾಗಿರುವುದರ ಕಡೆಗಿನ ಅವರ ಗಣ್ಯತೆಯ ಕುರಿತಾಗಿ ತುಸು ಯೋಚಿಸಿರಿ!
8 ಎಲ್ಲಾ ಆಸಕ್ತ ವ್ಯಕ್ತಿಗಳು ಬೈಬಲ್ ಅಧ್ಯಯನವನ್ನು ಮಾಡುವಂತೆ ಅವರನ್ನು ಉತ್ತೇಜಿಸಿರಿ. ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಮತ್ತು ತಾವು ಕಲಿಯುತ್ತಿರುವ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿರಿ. ತಮ್ಮ ಜೀವಿತದಲ್ಲಿ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ‘ಬೆಳಕಿನಲ್ಲಿ ನಡೆಯುವಂತೆ’ ಮತ್ತು ‘ಸತ್ಯವನ್ನನುಸರಿಸುವಂತೆ’ ಅವರಿಗೆ ಸಹಾಯಮಾಡಿರಿ. (1 ಯೋಹಾ. 1:6, 7) ಯೆಹೋವನೊಂದಿಗೆ ಒಂದು ಆಪ್ತವಾದ ಸಂಬಂಧವನ್ನು ಬೆಳೆಸಿಕೊಳ್ಳಲು ಮತ್ತು ಆತನ ಚಿತ್ತವನ್ನು ಐಕ್ಯದಿಂದ ಮಾಡುವ ಅಮೂಲ್ಯ ಸುಯೋಗಕ್ಕಾಗಿ ತಮ್ಮ ಗಣ್ಯತೆಯನ್ನು ಹೆಚ್ಚಿಸುತ್ತಾ ಇರಲು ಅವರಿಗೆ ನೆರವು ನೀಡಿರಿ.
9 ‘ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವದರಲ್ಲಿ’ ಆನಂದದಿಂದ ಐಕ್ಯರಾಗಿರುವುದು ಎಷ್ಟು ಅದ್ಭುತಕರವಾದ ಸುಯೋಗವಾಗಿದೆ! (ಫಿಲಿ. 1:27, 28) ಮಾರ್ಚ್ 28ರಂದು, ಜ್ಞಾಪಕಾಚರಣೆಯ ಸಂದರ್ಭದಲ್ಲಿ ನಮ್ಮ ಹಿತಕರವಾದ ಸಾಹಚರ್ಯಕ್ಕಾಗಿ ನಾವು ಮುನ್ನೋಡುತ್ತಾ, ಯೆಹೋವನಿಗೂ ಆತನ ಪುತ್ರನಿಗೂ ಸದಾ ಆಭಾರಿಗಳಾಗಿರೋಣ!—ಲೂಕ 22:19.