ವಿಮೋಚನಾ ಮೌಲ್ಯದ ಯಜ್ಞವನ್ನು ಕೃತಜ್ಞತೆಯಿಂದ ಸ್ಮರಿಸುವುದು
1, 2. ವಿಮೋಚನಾ ಮೌಲ್ಯದ ಯಜ್ಞವನ್ನು ಕೃತಜ್ಞತೆಯಿಂದ ಸ್ಮರಿಸಲು ನಮಗೆ ಯಾವ ಸಕಾರಣಗಳಿವೆ?
1 ಯೇಸುವಿನ ಆಜ್ಞೆಗೆ ವಿಧೇಯತೆ ತೋರಿಸುತ್ತಾ ಲೋಕದಾದ್ಯಂತವಿರುವ ಸತ್ಯ ಕ್ರೈಸ್ತರು 2008 ಮಾರ್ಚ್ 22ರ ಶನಿವಾರ ಸೂರ್ಯಾಸ್ತಮಾನದ ನಂತರ ಆತನ ಮರಣವನ್ನು ಸ್ಮರಿಸಲು ಕೂಡಿಬರುವರು. (ಲೂಕ 22:19; 1 ಕೊರಿಂ. 11:23-26) 1,975 ವರ್ಷಗಳ ಹಿಂದೆ ನೈಸಾನ್ 14ರಂದು ಏನೆಲ್ಲಾ ಪೂರೈಸಲ್ಪಟ್ಟಿತ್ತೋ ಅದಕ್ಕಾಗಿ ನಮ್ಮಲ್ಲಿರುವ ಆಳವಾದ ಕೃತಜ್ಞತೆಯೇ ಕೂಡಿಬರುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಯೇಸು ಯಾತನಾಕಂಬದ ಮೇಲೆ ವೇದನಾಮಯ ಮರಣಕ್ಕೊಪ್ಪಿಸಲ್ಪಟ್ಟಾಗಲೂ ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡನು. ಹೀಗೆ ತನ್ನ ತಂದೆಯ ನಾಮವನ್ನು ಪವಿತ್ರೀಕರಿಸಿದನು ಹಾಗೂ ಸೈತಾನನ ಸವಾಲಿಗೆ ಪ್ರಬಲವಾದ ಉತ್ತರ ಕೊಟ್ಟನು.—ಯೋಬ 1:11; ಜ್ಞಾನೋ. 27:11.
2 ಯೇಸುವಿನ ಸುರಿಸಲ್ಪಟ್ಟ ರಕ್ತವು ಒಂದು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿತು ಮತ್ತು ಇದರಿಂದಾಗಿ ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಆಳ್ವಿಕೆ ನಡೆಸಲು ಅಪರಿಪೂರ್ಣ ಮಾನವರನ್ನು ದೇವರ ಪುತ್ರರಾಗಿ ಸ್ವೀಕರಿಸಲು ಸಾಧ್ಯವಾಯಿತು. (ಯೆರೆ. 31:31-34; ಮಾರ್ಕ 14:24) ಅಷ್ಟುಮಾತ್ರವಲ್ಲದೆ, ಸ್ವತಃ ಯೇಸುವೇ ನಿಕೊದೇಮನಿಗೆ ವಿವರಿಸಿದಂತೆ, ದೇವರು ತನ್ನ ಅತ್ಯಂತ ಪ್ರಿಯ ಮಗನನ್ನೇ ಯಜ್ಞವಾಗಿ ನೀಡುವ ಮೂಲಕ ಮಾನವಕುಲದ ಕಡೆಗಿರುವ ತನ್ನ ಆಳವಾದ ಪ್ರೀತಿಯನ್ನು ಸ್ಪಷ್ಟವಾಗಿ ತೋರಿಸಿದನು.—ಯೋಹಾ. 3:16.
3. ಜ್ಞಾಪಕಾಚರಣೆಗೆ ಹಾಜರಾಗುವವರು ಹೇಗೆ ಪ್ರಯೋಜನ ಹೊಂದಲಿರುವರು?
3 ಇತರರನ್ನು ಆಮಂತ್ರಿಸಿರಿ: ನಮಗೆ ಪರಿಚಯವಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸುವಂತೆ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿನ ಪುರವಣಿ ಸಲಹೆ ಕೊಡುತ್ತದೆ. ನೀವು ಅಂಥ ಪಟ್ಟಿಯನ್ನು ಮಾಡಿ ಅದರಲ್ಲಿರುವ ವ್ಯಕ್ತಿಗಳನ್ನು ಆಮಂತ್ರಿಸಲು ಪ್ರಾರಂಭಿಸಿದ್ದೀರೋ? ಜ್ಞಾಪಕಾಚರಣೆಗೆ ಜನರನ್ನು ಆಮಂತ್ರಿಸುವ ಕಾರ್ಯಾಚರಣೆಯು ಮಾರ್ಚ್ 1ರಿಂದ ಆರಂಭವಾಗಲಿದೆ. ಇದರಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ನೀವು ಸಿದ್ಧತೆಗಳನ್ನು ಮಾಡುತ್ತಿದ್ದೀರೋ? ಜ್ಞಾಪಕಾಚರಣೆಯಂದು ನೀಡಲಾಗುವ ಶಾಸ್ತ್ರಾಧಾರಿತ ಮಾಹಿತಿಯು ಹಾಜರಾಗುವವರು ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಟ್ಟು ನಿತ್ಯಜೀವ ಪಡೆಯುವಂತೆ ಸಹಾಯ ಮಾಡುವುದು.—ರೋಮಾ. 10:17.
4. ನಾವು ಜ್ಞಾಪಕಾಚರಣೆಗೆ ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚೆ ಬರಬೇಕು ಏಕೆ?
4 ಈ ವಿಶೇಷ ಆಮಂತ್ರಣ ಸ್ವೀಕರಿಸಿ ಬಂದವರನ್ನು ಆದರದಿಂದ ಸ್ವಾಗತಿಸಲು, ಸಾಧ್ಯವಿರುವವರೆಲ್ಲರೂ ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚೆ ಬರುವಂತೆ ಉತ್ತೇಜಿಸಲಾಗಿದೆ. ಜ್ಞಾಪಕಾಚರಣೆಗೆ ಹಾಜರಿರುವ ಜನರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುವುದರಿಂದ ಹೊಸಬರು ಮತ್ತು ಈಗಾಗಲೇ ಕೆಲವೊಂದು ಕೂಟಗಳಿಗೆ ಹಾಜರಾದವರ ಕಡೆಗೆ ನಾವು ವಿಶೇಷ ಗಮನ ಕೊಡಬೇಕಾಗುತ್ತದೆ.
5. ನೀವು ಈ ಆಚರಣೆಗಾಗಿ ನಿಮ್ಮ ಹೃದಯವನ್ನು ಹೇಗೆ ಸಿದ್ಧಪಡಿಸಿಕೊಳ್ಳಸಾಧ್ಯವಿದೆ?
5 ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಿ: ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2008 ಮತ್ತು 2008ರ ಕ್ಯಾಲೆಂಡರ್ನಲ್ಲಿ ಮಾರ್ಚ್ 17ರಿಂದ ಜ್ಞಾಪಕಾಚರಣೆಗಾಗಿ ವಿಶಿಷ್ಟ ಬೈಬಲ್-ವಾಚನದ ಶೆಡ್ಯೂಲನ್ನು ಕೊಡಲಾಗಿದೆ. ಈ ಶೆಡ್ಯೂಲನ್ನು ಅನುಸರಿಸುವ ಮೂಲಕ ಯೇಸುವಿನ ಭೂಜೀವಿತದ ಕೊನೆಯ ದಿನಗಳಲ್ಲಿ ನಡೆದ ಘಟನೆಗಳನ್ನು ಪರಿಶೀಲಿಸುವುದು ಜ್ಞಾಪಕಾಚರಣೆಗಾಗಿ ನಿಮ್ಮ ‘ಹೃದಯವನ್ನು ಸಿದ್ಧಪಡಿಸುವುದು.’ (ಎಜ್ರ 7:10, NW) ಈ ಬೈಬಲ್ ವೃತ್ತಾಂತಗಳನ್ನು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಿರಿ. ಇದು, ವಿಮೋಚನಾ ಮೌಲ್ಯದ ಯಜ್ಞವನ್ನು ನೀಡುವುದರ ಮೂಲಕ ಯೆಹೋವನು ಮತ್ತು ಆತನ ಪುತ್ರನು ತೋರಿಸಿದ ಪ್ರೀತಿಗಾಗಿರುವ ನಿಮ್ಮ ಗಣ್ಯತೆಯನ್ನು ಇನ್ನೂ ಆಳಗೊಳಿಸುವುದು.—ಕೀರ್ತ. 143:5.
6. ವಿಮೋಚನಾ ಮೌಲ್ಯದ ಯಜ್ಞಕ್ಕಾಗಿ ಕೃತಜ್ಞತೆಯನ್ನು ಹೆಚ್ಚಿಸುವುದು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ?
6 ಜ್ಞಾಪಕಾಚರಣೆಯು ಹತ್ತಿರ ಆಗುತ್ತಿರುವುದರಿಂದ ಈ ಪ್ರಾಮುಖ್ಯ ಸಂದರ್ಭಕ್ಕಾಗಿ ಉತ್ತಮ ರೀತಿಯಲ್ಲಿ ತಯಾರಾಗಿರೋಣ ಮತ್ತು ಇತರರು ಕೂಡ ಹಾಗೆ ಮಾಡುವಂತೆ ಸಹಾಯ ನೀಡೋಣ. ವಿಮೋಚನಾ ಮೌಲ್ಯದ ಯಜ್ಞವನ್ನು ಕೃತಜ್ಞತೆಯಿಂದ ಸ್ಮರಿಸುವುದು ಯೆಹೋವನ ಮತ್ತು ಆತನ ಪುತ್ರನೊಂದಿಗಿನ ನಮ್ಮ ಸಂಬಂಧವನ್ನು ಇನ್ನೂ ಹೆಚ್ಚು ಬಲಪಡಿಸುವುದು. (2 ಕೊರಿಂ. 5:14, 15) ಮಾತ್ರವಲ್ಲದೆ, ಇತರರ ಕಡೆಗೆ ಸ್ವತ್ಯಾಗದ ಪ್ರೀತಿಯನ್ನು ತೋರಿಸುವ ಮೂಲಕ ಅವರನ್ನು ಅನುಕರಿಸುವಂತೆಯೂ ಇದು ನಮ್ಮನ್ನು ಪ್ರಚೋದಿಸುವುದು.—1 ಯೋಹಾ. 4:11.