ನಮ್ಮ ನಂಬಿಕೆಯು ನಮ್ಮನ್ನು ಸತ್ಕ್ರಿಯೆಗಳಿಗೆ ಪ್ರಚೋದಿಸುತ್ತದೆ
1 ನೋಹ, ಮೋಶೆ ಮತ್ತು ರಹಾಬರು ಕ್ರಿಯೆಗೈಯುವಂತೆ ಮಾಡಿದಂಥದ್ದು ನಂಬಿಕೆಯೇ. ನೋಹನು ನಾವೆಯನ್ನು ಕಟ್ಟಿದನು. ಮೋಶೆಯು ಫರೋಹನ ಆಸ್ಥಾನದಲ್ಲಿ ಬದುಕಿನ ತಾತ್ಕಾಲಿಕ ಲಾಭಗಳನ್ನು ತೊರೆದು ಹೊರಬಂದನು. ಮತ್ತು ರಹಾಬಳು ಗೂಢಚಾರರನ್ನು ಅಡಗಿಸಿಟ್ಟು, ಅನಂತರ ಅವರು ಕೊಟ್ಟ ಸೂಚನೆಗಳನ್ನು ಪಾಲಿಸಿ, ತನ್ನ ಮನೆವಾರ್ತೆಯನ್ನು ಉಳಿಸಿದಳು. (ಇಬ್ರಿ. 11:7, 24-26, 31) ಇಂದು ನಮ್ಮ ನಂಬಿಕೆಯು ನಾವು ಯಾವ ಸತ್ಕ್ರಿಯೆಗಳನ್ನು ನಡೆಸುವಂತೆ ನಮ್ಮನ್ನು ಪ್ರಚೋದಿಸುತ್ತದೆ?
2 ಸಾಕ್ಷಿನೀಡುವುದು: ನಮ್ಮ ಅದ್ಭುತಕರವಾದ ದೇವರ ಕುರಿತು ಮತ್ತು ನಮ್ಮ ನಿತ್ಯ ಸಂತೋಷಕ್ಕಾಗಿ ಆತನು ಮಾಡಿರುವ ಏರ್ಪಾಡುಗಳ ಕುರಿತು ಮಾತಾಡುವಂತೆ ನಂಬಿಕೆಯು ನಮ್ಮನ್ನು ಪ್ರಚೋದಿಸುತ್ತದೆ. (2 ಕೊರಿಂ. 4:13) ಕೆಲವೊಮ್ಮೆ ನಾವು ಸಾಕ್ಷಿಯನ್ನು ಕೊಡಲು ಹಿಂದೇಟು ಹಾಕುತ್ತೇವೆ. ಆದರೆ ನಾವು ‘ಯೆಹೋವನನ್ನು ಯಾವಾಗಲೂ ನಮ್ಮೆದುರಿಗೇ ಇಡುವಾಗ,’ ನಾವು ಬಲಪಡಿಸಲ್ಪಡುತ್ತೇವೆ ಮತ್ತು ಆಗ ನಮ್ಮ ಭಯವು ಕಡಮೆಯಾಗುತ್ತದೆ. (ಕೀರ್ತ. 16:8) ಆಗ, ಪ್ರತಿಯೊಂದು ಸೂಕ್ತವಾದ ಸಂದರ್ಭದಲ್ಲಿ ನಮ್ಮ ಸಂಬಂಧಿಕರು, ನೆರೆಹೊರೆಯವರು, ಜೊತೆಕಾರ್ಮಿಕರು, ಶಾಲಾಸಂಗಾತಿಗಳು ಮತ್ತು ಇತರರೊಂದಿಗೆ ನಾವು ಸುವಾರ್ತೆಯನ್ನು ಹಂಚಿಕೊಳ್ಳುವಂತೆ ನಮ್ಮ ನಂಬಿಕೆಯು ನಮ್ಮನ್ನು ಪ್ರೇರೇಪಿಸುತ್ತಾ ಇರುತ್ತದೆ.—ರೋಮಾ. 1:14-16.
3 ಜೊತೆಯಾಗಿ ಕೂಡಿಬರುವುದು: ನಂಬಿಕೆಯಿಂದಾಗಿ ಹೊರಹೊಮ್ಮುವ ಇನ್ನೊಂದು ಸತ್ಕ್ರಿಯೆಯು, ಕೂಟಗಳಿಗೆ ಕ್ರಮವಾದ ಹಾಜರಿಯಾಗಿದೆ. ಹೇಗೆ? ನಾವು ಕ್ರೈಸ್ತ ಕೂಟಗಳಲ್ಲಿ ಕೂಡಿಬರುವಾಗ, ದೇವರ ಪವಿತ್ರಾತ್ಮದ ಮೂಲಕ ಯೇಸು ನಮ್ಮೊಂದಿಗೆ ಉಪಸ್ಥಿತನಿದ್ದಾನೆಂಬ ನಮ್ಮ ಮನವರಿಕೆಯನ್ನು ಅದು ತೋರಿಸುತ್ತದೆ. (ಮತ್ತಾ. 18:20) ‘ದೇವರಾತ್ಮವು ಸಭೆಗಳಿಗೆ ಹೇಳುವಂಥದ್ದನ್ನು’ ಕೇಳಿಸಿಕೊಳ್ಳಲು ನಮಗಿರುವ ಅಪೇಕ್ಷೆಯನ್ನು ಅದು ತೋರಿಸುತ್ತದೆ. (ಪ್ರಕ. 3:6) ನಮಗೆ ಕಲಿಸುವಾತನು, ನಮ್ಮ ಮಹಾ ಉಪದೇಶಕನಾದ ಯೆಹೋವನೇ ಆಗಿದ್ದಾನೆ ಎಂಬುದನ್ನು ನಮ್ಮ ನಂಬಿಕೆಯ ದೃಷ್ಟಿಯಿಂದ ನಾವು ಗ್ರಹಿಸುವುದರಿಂದ, ನಮಗೆ ಅಲ್ಲಿ ಸಿಗುವಂಥ ಉಪದೇಶವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ.—ಯೆಶಾ. 30:20, NW.
4 ನಾವು ಮಾಡುವಂಥ ಆಯ್ಕೆಗಳು: ಕಣ್ಣಿಗೆ ಕಾಣದಂಥವುಗಳ ಬಗ್ಗೆ ನಮಗಿರುವ ಬಲವಾದ ಮನವರಿಕೆಯು, ನಾವು ನಮ್ಮ ಜೀವಿತಗಳಲ್ಲಿ ಆತ್ಮಿಕ ವಿಷಯಗಳಿಗೆ ಪ್ರಮುಖ ಸ್ಥಾನವನ್ನು ಕೊಡುವಂತೆ ಪ್ರಚೋದಿಸುತ್ತದೆ. (ಇಬ್ರಿ. 11:1) ಹೀಗೆ ಮಾಡುವುದರಲ್ಲಿ ಅನೇಕವೇಳೆ ಭೌತಿಕ ತ್ಯಾಗಗಳನ್ನು ಮಾಡುವುದೂ ಸೇರಿರುತ್ತದೆ. ಉದಾಹರಣೆಗಾಗಿ, ಒಬ್ಬ ಹಿರಿಯನು ತುಂಬ ಆದಾಯವನ್ನು ನೀಡುವಂಥ ಒಂದು ಸ್ಥಾನಕ್ಕೇರಲು ಸಿಕ್ಕಿದ ಅವಕಾಶವನ್ನು ತಳ್ಳಿಹಾಕಿದನು. ಏಕೆಂದರೆ ಅವನು ಆ ಸ್ಥಾನವನ್ನು ಸ್ವೀಕರಿಸಿದ್ದಲ್ಲಿ, ಅವನು ಕೂಟಗಳಿಗೆ ತಪ್ಪಿಸಿಕೊಳ್ಳಬೇಕಾಗುತ್ತಿತ್ತು, ತನ್ನ ಕುಟುಂಬದಿಂದ ದೂರವಿರಬೇಕಾಗುತ್ತಿತ್ತು ಮತ್ತು ತನ್ನ ಪಯನೀಯರ್ ಶುಶ್ರೂಷೆಯನ್ನು ಬಿಟ್ಟುಬಿಡಬೇಕಾಗುತ್ತಿತ್ತು. ತದ್ರೀತಿಯಲ್ಲಿ ನಾವು ಸಹ, ‘ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುತ್ತಾ’ ಇರುವವರಿಗಾಗಿ ಬೇಕಾದದ್ದೆಲ್ಲವನ್ನೂ ಯೆಹೋವನು ಒದಗಿಸುವನೆಂಬ ಬೈಬಲಿನ ಆಶ್ವಾಸನೆಯಲ್ಲಿ ನಮ್ಮ ಪೂರ್ಣ ಭರವಸೆಯನ್ನಿಡೋಣ.—ಮತ್ತಾ. 6:33.
5 ನಂಬಿಕೆಯು ನಮ್ಮ ಜೀವಿತಗಳ ಮೇಲೆ ಬೀರುವ ಬಲವಾದ ಪ್ರಭಾವವು ಬೇರೆಯವರ ಗಮನಕ್ಕೆ ಬಾರದೆ ಹೋಗುವುದಿಲ್ಲ. ಹೌದು, ನಮ್ಮ ನಂಬಿಕೆಯು ಜಗದ್ವಿಖ್ಯಾತವಾಗಿದೆ. (ರೋಮಾ. 1:8) ಆದುದರಿಂದ, ನಮ್ಮ ನಂಬಿಕೆಯು ಜೀವಂತವಾಗಿದೆ ಎಂಬುದನ್ನು ನಾವೆಲ್ಲರೂ ನಮ್ಮ ಸತ್ಕ್ರಿಯೆಗಳ ಮೂಲಕ ಪ್ರದರ್ಶಿಸೋಣ.—ಯಾಕೋ. 2:26.