ನಮ್ಮ ಸಾಹಿತ್ಯವನ್ನು ಅಮೂಲ್ಯವೆಂದೆಣಿಸುತ್ತೀರೊ?
1 ವಜ್ರಗಳು ಮತ್ತು ಇತರ ರತ್ನಮಣಿಗಳು, ಅವುಗಳ ಸೌಂದರ್ಯಕ್ಕಾಗಿ ಮಾತ್ರವಲ್ಲ, ಅವುಗಳನ್ನು ಹುಡುಕಿ, ಗಣಿಯಿಂದ ತೆಗೆಯುವ ದುಬಾರಿ ಖರ್ಚಿನಿಂದಾಗಿಯೂ ತುಂಬ ಬೆಲೆಬಾಳುವಂಥವುಗಳಾಗಿವೆ. ಯೆಹೋವನ ಮತ್ತು ಯೇಸು ಕ್ರಿಸ್ತನ ಕುರಿತಾದ ಜ್ಞಾನವು ಅದಕ್ಕಿಂತಲೂ ಶ್ರೇಷ್ಠ ಮೌಲ್ಯದ್ದಾಗಿದೆ. ಮತ್ತು ನಮ್ಮ ಪ್ರಕಾಶನಗಳು ಮಾತ್ರ ಈ ಆತ್ಮಿಕ ಐಶ್ವರ್ಯಗಳನ್ನು ಆಳವಾಗಿ ಮತ್ತು ದೈವಿಕ ವಿವೇಕದೊಂದಿಗೆ ವಿವರಿಸುತ್ತವೆ. (ರೋಮಾ. 11:33; ಫಿಲಿ. 3:8) ನಮ್ಮ ಸಾಹಿತ್ಯಕ್ಕಾಗಿ ನಾವು ನಿಜವಾದ ಗಣ್ಯತೆಯನ್ನು ಹೇಗೆ ಪ್ರದರ್ಶಿಸಬಲ್ಲೆವು?
2 ಅನೇಕ ವ್ಯಕ್ತಿಗಳು ಮತ್ತು ಕುಟುಂಬಗಳು, ರಾಜ್ಯ ಸಭಾಗೃಹಕ್ಕೆ ಕೊಂಡೊಯ್ದು, “ಸೊಸೈಟಿಯ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು—ಮತ್ತಾಯ 24:14” ಎಂಬ ಲೇಬಲ್ ಇರುವ ಪೆಟ್ಟಿಗೆಗಳಲ್ಲಿ ಕಾಣಿಕೆಯನ್ನು ಹಾಕಲಿಕ್ಕಾಗಿ ಕ್ರಮವಾಗಿ ಕಾಣಿಕೆಯನ್ನು ಬದಿಗಿರಿಸುತ್ತವೆ. ಅಲ್ಲದೆ, ಸಾಹಿತ್ಯ ಇಲ್ಲವೆ ಪತ್ರಿಕೆಗಳ ಸರಬರಾಯಿಯನ್ನು ಪಡೆದುಕೊಳ್ಳುವಾಗ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ತಾವು ಪಡೆದಿರುವ ಕಾಣಿಕೆಗಳನ್ನು ಆ ಪೆಟ್ಟಿಗೆಗಳಲ್ಲಿ ಹಾಕುವಾಗ, ಅವರು ಇನ್ನೂ ಹೆಚ್ಚಿನ ಕಾಣಿಕೆಗಳನ್ನು ಕೊಡುತ್ತಾರೆ.
3 ಗಣ್ಯತೆಯನ್ನು ಪ್ರದರ್ಶಿಸುವ ಇನ್ನೊಂದು ವಿಧವು, ನಾವು ಕ್ಷೇತ್ರ ಸೇವೆಯಲ್ಲಿ ಭೇಟಿಯಾಗುವ ಜನರಿಗೆ ಸಾಹಿತ್ಯವನ್ನು ನೀಡುವಾಗ, ಆಯ್ದ ಜನರಿಗೆ ಅದನ್ನು ನೀಡುವುದೇ ಆಗಿದೆ. ಒಂದು ವಜ್ರದ ಮೌಲ್ಯವನ್ನು ಗ್ರಹಿಸಲಾಗದಂಥ ಒಂದು ಶಿಶುವಿನ ಕೈಯಲ್ಲಿ ನಾವು ದುಬಾರಿಯಾದ ಒಂದು ವಜ್ರವನ್ನು ಕೊಡಲು ಯೋಚಿಸಲಿಕ್ಕಿಲ್ಲ. ಹಾಗೆಯೇ, ಆತ್ಮಿಕ ವಿಷಯಗಳ ಬಗ್ಗೆ ಸ್ವಲ್ಪವೂ ಗಣ್ಯತೆಯಿಲ್ಲದ ಜನರಿಗೆ ನಾವು ನಮ್ಮ ಅಮೂಲ್ಯವಾದ ಸಾಹಿತ್ಯವನ್ನು ಕೊಡುವುದಿಲ್ಲ. (ಇಬ್ರಿಯ 12:16ನ್ನು ಹೋಲಿಸಿರಿ.) ನಮ್ಮ ಸೇವೆಯನ್ನು ಮತ್ತು ನಮ್ಮ ಸಾಹಿತ್ಯವನ್ನು ಉದಾರಭಾವದಿಂದ ಕೊಡುವುದನ್ನು ವಿವೇಚನಾಶಕ್ತಿಯು ನಿಯಂತ್ರಿಸಬೇಕು. ಮನೆಯವನಿಗೆ ಸಂಭಾಷಿಸಲು ಮನಸ್ಸಿದೆಯೊ? ನಾವು ಮಾತಾಡುತ್ತಿರುವಾಗ ಅವನು ಗಮನಕೊಡುತ್ತಿದ್ದಾನೊ, ನಾವು ಕೇಳುವಂಥ ಪ್ರಶ್ನೆಗಳಿಗೆ ಪ್ರತಿಕ್ರಿಯೆ ತೋರಿಸುತ್ತಿದ್ದಾನೊ, ಮತ್ತು ನಾವು ಬೈಬಲಿನಿಂದ ವಚನಗಳನ್ನು ಓದುವಾಗ ನಮ್ಮೊಂದಿಗೆ ಇದ್ದಾನೊ? ಅಂಥ ಆಸಕ್ತಿಯು ತೋರಿಬರುವಲ್ಲಿ, ನಾವು ಸೂಕ್ತವಾದ ಪ್ರಕಾಶನವನ್ನು ಬಿಟ್ಟುಬರಲು ಸಂತೋಷಿಸುತ್ತೇವೆ. ನಮ್ಮ ಪ್ರಕಾಶನಗಳಿಂದ ನಾವು ಅಧ್ಯಯನಗಳನ್ನು ನಡೆಸುವಾಗ, ಬೈಬಲ್ ಏನು ಕಲಿಸುತ್ತದೆಂಬುದನ್ನು ಕಲಿಯಲು ಜನರಿಗೆ ಸಹಾಯ ಸಿಗುತ್ತದೆ, ಮತ್ತು ಯೆಹೋವನೊಂದಿಗೆ ಒಂದು ಸಂಬಂಧವನ್ನು ಕಟ್ಟಲು ಅವರಿಗೆ ದಾರಿಯು ತೆರೆಯುತ್ತದೆ. ನಮ್ಮ ಸಾಹಿತ್ಯದಿಂದ ಸಿಗುವ ನಿಜವಾದ ಪ್ರಯೋಜನವು, ಅದನ್ನು ಹೇಗೆ ಉಪಯೋಗಿಸಲಾಗುತ್ತದೆಂಬುದರ ಮೇಲೆ ಅವಲಂಬಿಸಿರುತ್ತದೆ.
4 ಸಾಹಿತ್ಯವನ್ನು ರಾಜ್ಯ ಸಭಾಗೃಹದಲ್ಲಿನ ಶೆಲ್ಫ್ ಮೇಲಾಗಲಿ, ನಮ್ಮ ಮನೆಯಲ್ಲಾಗಲಿ ಬಿಡುವುದರಿಂದ ಅದರ ಉದ್ದೇಶವು ಪೂರೈಸಲ್ಪಡುವುದಿಲ್ಲ, ಮತ್ತು ಅದರ ಮೌಲ್ಯವೇನೆಂಬುದೂ ಗೊತ್ತಾಗುವುದಿಲ್ಲ. ಪತ್ರಿಕೆಗಳ ಹಳೆಯ ಸಂಚಿಕೆಗಳು, ಬ್ರೋಷರುಗಳು, ಗಟ್ಟಿರಟ್ಟಿನ ಪುಸ್ತಕಗಳು ಮತ್ತು ಟ್ರ್ಯಾಕ್ಟ್ಗಳನ್ನೂ ಸದುಪಯೋಗಿಸಬೇಕು. ನಮ್ಮ ಬಳಿ ಈಗಾಗಲೇ ಎಷ್ಟು ಸಾಹಿತ್ಯವಿದೆ ಮತ್ತು ಯಾವ ಸಾಹಿತ್ಯವಿದೆ ಎಂಬುದನ್ನು ನಾವು ಕೊನೆ ಬಾರಿ ಯಾವಾಗ ಪರೀಕ್ಷಿಸಿ ನೋಡಿದ್ದೇವೆ? ಎಷ್ಟೊಂದು ಸಾಹಿತ್ಯವು ರಾಶಿಬಿದ್ದಿದೆಯೆಂಬುದನ್ನು ನೋಡಿ ನಮಗೇ ಆಶ್ಚರ್ಯವಾಗಬಹುದು. ನಮ್ಮ ಬಳಿಯಿರುವ ಸಾಹಿತ್ಯವು, ದೀರ್ಘ ಸಮಯದಿಂದ ಹಾಗೆಯೇ ಇಡಲ್ಪಟ್ಟಿದ್ದರಿಂದ ಅದರ ಬಣ್ಣ ಬದಲಾಗದೆ ಇದೆಯೊ, ಹರಿಯಲ್ಪಟ್ಟಿರದೆ ಅಥವಾ ಗಲೀಜಾಗದೆ ಈಗಲೂ ಒಳ್ಳೇ ಸ್ಥಿತಿಯಲ್ಲಿದೆಯೊ? ಹಾಗಿರುವಲ್ಲಿ, ಅದನ್ನು ಕ್ಷೇತ್ರ ಶುಶ್ರೂಷೆಯಲ್ಲಿ ವಿತರಿಸಲು ನಾವು ಪ್ರತಿಯೊಂದು ಪ್ರಯತ್ನವನ್ನು ಮಾಡಬೇಕು. ಹಾಳಾಗಿರುವ ಸಾಹಿತ್ಯವನ್ನು ವೈಯಕ್ತಿಕ ಬಳಕೆಗಾಗಿ ಉಪಯೋಗಿಸಬಹುದು ಇಲ್ಲವೆ ಸೂಕ್ತವಾದ ರೀತಿಯಲ್ಲಿ ಎಸೆಯಬಹುದು. ನಾವು ಮುಖ್ಯವಾಗಿ ಸದ್ಯದ ನೀಡಿಕೆಗೆ ಗಮನಕೊಡುತ್ತಿರುವುದಾದರೂ, ನಾವು ಕೆಲವೊಮ್ಮೆ ಒಂದು ಭಿನ್ನ ಪ್ರಕಾಶನವನ್ನು ಉಪಯೋಗಿಸಲು ನಿರ್ಧರಿಸಬಹುದು.
5 ವಿತರಣೆಗಾಗಿ ನಿಮಗೆಷ್ಟು ಸಾಹಿತ್ಯ ನಿಜವಾಗಿಯೂ ಬೇಕಾಗುವುದು ಎಂಬುದನ್ನು ಜಾಗರೂಕತೆಯಿಂದ ಆಲೋಚಿಸಿ ನೋಡಿರಿ. ಉತ್ತಮ ತೀರ್ಮಾನಶಕ್ತಿಯು ಅಗತ್ಯ. ವಿಶೇಷವಾಗಿ ಪಯನೀಯರ್ ಸೇವೆಯನ್ನು ಮಾಡುವಾಗ, ಸಾಕಷ್ಟು ಮೊತ್ತದ ಸಾಹಿತ್ಯವು ಬೇಕಾಗುತ್ತದೆ. ಆದರೆ ವೈಯಕ್ತಿಕ ಸಾಹಿತ್ಯದ ಒಂದು ದೊಡ್ಡ ಸರಬರಾಯಿಯನ್ನು ಇಡುವ ಅಗತ್ಯವಿಲ್ಲ. ಏಕೆಂದರೆ ರಾಜ್ಯ ಸಭಾಗೃಹದಲ್ಲಿ ಕೂಟಗಳ ಮುಂಚೆ ಮತ್ತು ಅನಂತರ ಹೆಚ್ಚು ಸಾಹಿತ್ಯವನ್ನು ಪಡೆದುಕೊಳ್ಳಬಹುದು. ತಿಂಗಳ ಆರಂಭದಲ್ಲಿ ಶುರುಮಾಡಲಿಕ್ಕಾಗಿ ಸಾಕಷ್ಟು ಸಾಹಿತ್ಯವನ್ನು ಇಟ್ಟುಕೊಳ್ಳಿ, ಮತ್ತು ಅನಂತರ ಅದು ಮುಗಿಯುತ್ತಾ ಹೋದಂತೆ ಇನ್ನೂ ಹೆಚ್ಚು ಸಾಹಿತ್ಯವನ್ನು ತಂದಿರಿಸಿಕೊಳ್ಳಿ.
6 ನಮ್ಮ ಪ್ರಕಾಶನಗಳು, ದೇವರ ಸತ್ಯ ವಾಕ್ಯವನ್ನು ಗಣ್ಯಮಾಡುವ ಜನರ ಹಸ್ತಗಳಲ್ಲಿರಿಸಲ್ಪಡುವಾಗ, ಅತಿ ಹೆಚ್ಚು ಮೌಲ್ಯದವುಗಳಾಗಿರುತ್ತವೆ. ಏನನ್ನು ಒದಗಿಸಲಾಗಿದೆಯೊ ಅದರ ಬಳಕೆಯಲ್ಲಿ ನಾವೆಲ್ಲರೂ ವಿವೇಕಿಗಳೂ ವಿವೇಚನಾಶೀಲರೂ ಆಗಿರೋಣ. ಹೀಗೆ ನಮ್ಮ ಸಾಹಿತ್ಯವು ನಮಗೆ ನಿಜವಾಗಿಯೂ ಎಷ್ಟು ಅಮೂಲ್ಯವಾಗಿದೆ ಎಂಬದನ್ನು ತೋರಿಸೋಣ.