ಮಳೆಗಾಲದಲ್ಲಿ “ದೇವರ ವಾಕ್ಯವನ್ನು ಸಾರು”
1 “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು” ಎಂದು ಅಪೊಸ್ತಲ ಪೌಲನು ಉತ್ತೇಜಿಸಿದನು. (2 ತಿಮೊ. 4:2) ಮಳೆಗಾಲವು ನಮ್ಮಲ್ಲಿ ಅನೇಕರಿಗೆ “ಅನುಕೂಲವಿಲ್ಲದ ಕಾಲ”ವಾಗಿರಬಲ್ಲದು, ಏಕೆಂದರೆ ನಮ್ಮ ದೈನಂದಿನ ಜೀವಿತವನ್ನು ಅಸ್ತವ್ಯಸ್ತಗೊಳಿಸುವ ಆರ್ದ್ರ ಹವಾಮಾನ, ನೀರುತುಂಬಿದ ರಸ್ತೆಗಳು, ಮತ್ತು ಮಳೆಗಾಲದ ಕಾಯಿಲೆಗಳನ್ನು ನಾವು ನಿಭಾಯಿಸಬೇಕಾಗಿರುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಕ್ರಮವಾಗಿ “ದೇವರ ವಾಕ್ಯವನ್ನು ಸಾರು”ವುದು ಒಂದು ಪಂಥಾಹ್ವಾನವಾಗಿರಬಲ್ಲದು. ಹಾಗಿದ್ದರೂ, ಒಳ್ಳೆಯ ಯೋಜನೆ ಮತ್ತು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುವ ಮೂಲಕ, ಮಳೆಗಾಲವು ನಮ್ಮ ಹುರುಪನ್ನು ನಂದಿಸುವುದನ್ನು ನಾವು ತಪ್ಪಿಸಬಲ್ಲೆವು.
2 ಒಳ್ಳೇ ವಿವೇಚನೆ ಮತ್ತು ಮುಂದಾಲೋಚನೆಯು ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗಾಗಿ ಒಂದು ಒಳ್ಳೆಯ ಕೊಡೆ, ಸೂಕ್ತವಾದ ಮಳೆಯಂಗಿ, ನಮ್ಮ ಬೈಬಲ್ಗಳು, ಸಾಹಿತ್ಯ, ಮತ್ತು ಪತ್ರಿಕೆಗಳನ್ನು ಮಳೆಯಿಂದ ರಕ್ಷಿಸುವ ಒಂದು ಸೂಕ್ತವಾದ ಬ್ಯಾಗ್—ಇವುಗಳೆಲ್ಲವನ್ನೂ ಖರೀದಿಸುವುದು ವಿವೇಕಯುತವಾಗಿದೆ. ನೀವು ದ್ವಿಚಕ್ರ ವಾಹನವೊಂದನ್ನು ಉಪಯೋಗಿಸುವಲ್ಲಿ, ತೇವಗೊಂಡಿರುವ ಅಥವಾ ಕೆಸರು ತುಂಬಿರುವ ರಸ್ತೆಗಳಲ್ಲಿ ಅತಿ ಜಾಗ್ರತೆಯಿಂದ ಗಾಡಿಯನ್ನು ಓಡಿಸಿರಿ. ನೆಗಡಿ ಮತ್ತು ಜಲರವಾನಿತ ರೋಗಗಳನ್ನು ತಡೆಯಲಿಕ್ಕಾಗಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿರಿ.
3 ಸಾಧ್ಯವಿರುವಲ್ಲಿ, ಮನೆಯವರು ಸಾಮಾನ್ಯವಾಗಿ ನಿಮ್ಮನ್ನು ಒಳಕ್ಕೆ ಕರೆಯುವ ಸಂಭವನೀಯತೆಯಿರುವಂಥ ಟೆರಿಟೊರಿಗಳನ್ನು ಆಯ್ಕೆಮಾಡಿರಿ. ಹವಾಮಾನವು ಇನ್ನಷ್ಟು ಕೆಡುವುದಾದರೆ, ನಿಮಗೆ ಕಿವಿಗೊಡಲು ಮನಸ್ಸಿದ್ದವರನ್ನು ಪುನರ್ಭೇಟಿಮಾಡಲು ಹೋಗಬಹುದು. ಇದಕ್ಕಾಗಿ ನೀವು ಒಳ್ಳೇ ರೆಕಾರ್ಡ್ಗಳನ್ನು ಇಟ್ಟುಕೊಳ್ಳಬೇಕು. ಮನೆಯಿಂದ ಹೊರಹೋಗಲಾಗದಷ್ಟು ಜೋರಾದ ಮಳೆಯಿರುವ ದಿನಗಳ ಕುರಿತಾಗಿ ಏನು? ಟೆಲಿಫೋನ್ ಸಾಕ್ಷಿಕಾರ್ಯವನ್ನು ಪ್ರಯತ್ನಿಸುವುದರ ಕುರಿತಾಗಿ ನೀವು ಯೋಚಿಸಿದ್ದೀರೋ? ಫೆಬ್ರವರಿ 2001ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ನೀವು ಕೆಲವು ಪ್ರಾಯೋಗಿಕ ಸಲಹೆಗಳನ್ನು ಕಂಡುಕೊಳ್ಳುವಿರಿ. ನಿಮ್ಮ ಬಳಿ ಫೋನ್ ಇಲ್ಲವಾದರೆ, ಪತ್ರದ ಮೂಲಕ ಸಾಕ್ಷಿಕೊಡಬಹುದಾದ ಜನರ ಒಂದು ಪಟ್ಟಿಯನ್ನು ನೀವು ಮಾಡಬಲ್ಲಿರೋ?
4 ಮಳೆಯು ಧಾರಾಕಾರವಾಗಿ ಸುರಿಯುತ್ತಿರುವಾಗ ನಮ್ಮ ಕ್ರಮವಾದ ಬೈಬಲ್ ವಿದ್ಯಾರ್ಥಿಗಳು ಮತ್ತು ಆಸಕ್ತ ವ್ಯಕ್ತಿಗಳನ್ನು ಭೇಟಿಮಾಡಲು ನಮಗೆ ಅಷ್ಟು ಮನಸ್ಸಾಗಲಿಕ್ಕಿಲ್ಲ. ಆದರೆ ನಮ್ಮ ಹೆಚ್ಚಿನ ಪ್ರಯತ್ನಗಳು ತರಬಹುದಾದ ಸಕಾರಾತ್ಮಕ ಪರಿಣಾಮಗಳ ಕುರಿತು ಯೋಚಿಸಿ ನೋಡಿ. ಒಬ್ಬ ಸ್ತ್ರೀಯು ಹೇಳಿದ್ದು: “ಈ ಸಾಕ್ಷಿಗಳ ಹುರುಪು ಮತ್ತು ಪ್ರಾಮಾಣಿಕತೆಯನ್ನು ನೋಡಿ ನಾನೂ ನನ್ನ ಗಂಡನೂ ತುಂಬ ಪ್ರಭಾವಿತರಾದೆವು. ಅವರು ತಮ್ಮ ಕೆಲಸದಲ್ಲಿ ಒಂದು ಚಿಕ್ಕ ದ್ವಿಚಕ್ರ ವಾಹನವನ್ನು ಉಪಯೋಗಿಸಿದರು, ಮತ್ತು ಮಳೆಗಾಲವೂ ಧಾರಾಕಾರವಾಗಿ ಸುರಿಯುವ ಮಳೆಯೂ ಅವರನ್ನು ತಡೆಯಲಿಲ್ಲ.” ಆ ಸ್ತ್ರೀಯು ನಂತರ ಒಬ್ಬ ದೀಕ್ಷಾಸ್ನಾನ ಪಡೆದ ಸಹೋದರಿಯಾದಳು. ಮಳೆಯಲ್ಲಿ ಒದ್ದೆಯಾಗಲು ಸಿದ್ಧರಾದದ್ದಕ್ಕಾಗಿ ಎಂತಹ ಉತ್ತಮ ಪ್ರತಿಫಲ!
5 ಹಿರಿಯರು, ವಿಶೇಷವಾಗಿ ಸೇವಾ ಮೇಲ್ವಿಚಾರಕರು, ಮಳೆಗಾಲದಲ್ಲಿಯೂ ಕ್ಷೇತ್ರ ಸೇವಾ ಚಟುವಟಿಕೆಯನ್ನು ಎಂದಿನಂತೆ ಮುಂದುವರಿಸಲಿಕ್ಕಾಗಿ ಒಂದು ಪ್ರಾಯೋಗಿಕ ಶೆಡ್ಯೂಲನ್ನು ಮಾಡಬಲ್ಲರು. ಭೇಟಿ ನೀಡುವವರು ಒದ್ದೆಯಾಗದೆ ಇರಬಹುದಾದ ಬಹುಮಹಡಿ ಕಟ್ಟಡಗಳು ಅಥವಾ ಹೌಸಿಂಗ್ ಕಾಲನಿಗಳು ಸಭೆಯ ಟೆರಿಟೊರಿಯಲ್ಲಿವೆಯೋ? ಮಳೆಯ ಸಮಯದಲ್ಲಿ ಈ ಕ್ಷೇತ್ರಗಳನ್ನು ಏಕೆ ನೇಮಿಸಬಾರದು? ಕಾಲೇಜ್ ಮತ್ತು ವಿಶ್ವವಿದ್ಯಾನಿಲಯದ ಹಾಸ್ಟಲ್ಗಳು ಸಹ ಬಿರುಸಾದ ಮಳೆ ಹಾಗೂ ಗಾಳಿಯ ಹವಾಮಾನದಲ್ಲಿ ಸಾಕ್ಷಿಕೊಡಲು ಸೂಕ್ತವಾದ ಕ್ಷೇತ್ರಗಳಾಗಿವೆ. ಕೇವಲ ಮಳೆಯ ಕಾರಣ ಬೀದಿ ಸಾಕ್ಷಿಕಾರ್ಯವು ನಿಂತುಹೋಗಬೇಕೆಂದಿಲ್ಲ. ಸುಸಂಘಟನೆಯೊಂದಿಗೆ, ಸ್ವಲ್ಪ ಆಶ್ರಯವನ್ನು ಒದಗಿಸುವಂಥ ವ್ಯಾಪಾರ ಮಳಿಗೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ರೈಲ್ವೇ ಸ್ಟೇಷನ್ಗಳಲ್ಲಿ, ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಈ ಚಟುವಟಿಕೆಯನ್ನು ವಿವೇಚನೆಯಿಂದ ಮಾಡಬಹುದು.
6 ಒಣಗಿಹೋದ ನಮ್ಮ ಹಳ್ಳಿಗಾಡುಗಳನ್ನು ಅಕ್ಷರಾರ್ಥ ನೀರು ಚೈತನ್ಯಗೊಳಿಸುತ್ತಿರುವಾಗ, ಸತ್ಯದ ಜೀವದಾಯಕ ಜಲವನ್ನು ಕಂಡುಕೊಳ್ಳುವುದರಲ್ಲಿ ಇತರರಿಗೆ ಸಹಾಯಮಾಡುವ ಆನಂದವನ್ನು ನಾವು ಅನುಭವಿಸೋಣ.—ಪ್ರಕ. 22:17.