ನಮ್ಮ ಸಮರ್ಪಣೆಯ ಪ್ರತಿಜ್ಞೆಗನುಸಾರ ಜೀವಿಸುವುದು
1 ನೀವು ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡಿರಲಿ ಅಥವಾ ದೀಕ್ಷಾಸ್ನಾನವನ್ನು ಪಡೆದುಕೊಂಡು ದಶಕಗಳು ಕಳೆದಿರಲಿ, ನಿಮ್ಮ ಜೀವನದ ಆ ಮೈಲಿಗಲ್ಲನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿರುವಿರಿ. ನಮ್ಮ ದೀಕ್ಷಾಸ್ನಾನವು ಎಂದೆಂದಿಗೂ ಉಳಿಯಲಿರುವ ಸಮರ್ಪಿತ ಸೇವಾ ಜೀವನದ ಅಂತ್ಯವಲ್ಲ, ಬದಲಿಗೆ ಆರಂಭವಾಗಿದೆ. (1 ಯೋಹಾ. 2:17) ನಮ್ಮ ಸಮರ್ಪಣೆಯ ಪ್ರತಿಜ್ಞೆಗನುಸಾರ ಜೀವಿಸುವುದರಲ್ಲಿ ಏನು ಒಳಗೊಂಡಿದೆ?
2 ಯೇಸುವಿನ ಮಾದರಿಯನ್ನು ಅನುಸರಿಸಿರಿ: ದೀಕ್ಷಾಸ್ನಾನವನ್ನು ಪಡೆದುಕೊಂಡ ಬಳಿಕ ಯೇಸು “ಉಪದೇಶಮಾಡುವದಕ್ಕೆ ಪ್ರಾರಂಭಿಸಿ,” “ದೇವರ ರಾಜ್ಯದ ಸುವಾರ್ತೆಯನ್ನು” ಸಾರತೊಡಗಿದನು. (ಲೂಕ 3:23; 4:43) ತದ್ರೀತಿಯಲ್ಲಿ, ಯೆಹೋವನಿಗೆ ನಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮೂಲಕ, ನಾವು ಸುವಾರ್ತೆಯ ನೇಮಿತ ಶುಶ್ರೂಷಕರಾದೆವು. ಜೀವನದ ಭೌತಿಕ ಆವಶ್ಯಕತೆಗಳನ್ನು ಪಡೆದುಕೊಳ್ಳಲಿಕ್ಕಾಗಿ ಹೆಚ್ಚಿನ ಸಮಯ ಮತ್ತು ಪ್ರಯತ್ನವು ಬೇಕಾಗಿರಬಹುದಾದರೂ, ನಮ್ಮ ಜೀವನೋದ್ಯೋಗ ಅಥವಾ ಪ್ರಮುಖ ಕೆಲಸವು ಕ್ರೈಸ್ತ ಶುಶ್ರೂಷೆಯಾಗಿದೆ. (ಮತ್ತಾ. 6:33) ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿರುವವರು ಆಸ್ತಿ ಅಥವಾ ಅಂತಸ್ತಿಗಾಗಿ ಹೆಣಗಾಡುವ ಬದಲು, ಅಪೊಸ್ತಲ ಪೌಲನಂತೆ ‘ತಮ್ಮ ಶುಶ್ರೂಷೆಯನ್ನು ಘನತೆಗೇರಿಸಲು’ ಪ್ರಯತ್ನಿಸುತ್ತಾರೆ. (ರೋಮಾ. 11:13, NW) ನೀವು ಯೆಹೋವನನ್ನು ಸೇವಿಸುವ ನಿಮ್ಮ ಸುಯೋಗವನ್ನು ಗಣ್ಯಮಾಡುತ್ತಾ, ಆತನಿಗೆ ನೀವು ಮಾಡುವ ಸೇವೆಯನ್ನು ಘನಪಡಿಸಲು ಪರಮ ಪ್ರಯತ್ನವನ್ನು ಮಾಡುತ್ತೀರೋ?
3 ಯೇಸುವಿನಂತೆ, ನಾವು ‘ಸೈತಾನನನ್ನು ಎದುರಿಸ’ ಬೇಕು. (ಯಾಕೋ. 4:7) ಸೈತಾನನು ಯೇಸುವನ್ನು ಅವನ ದೀಕ್ಷಾಸ್ನಾನದ ನಂತರ ಶೋಧನೆಗೊಳಪಡಿಸಿದಂತೆ, ಇಂದು ಸಹ ಅವನು ಯೆಹೋವನ ಸಮರ್ಪಿತ ಸೇವಕರನ್ನು ಶೋಧನೆಯ ಗುರಿಹಲಗೆಯಾಗಿ ಪರಿಗಣಿಸುತ್ತಾನೆ. (ಲೂಕ 4:1-13) ಸೈತಾನನ ಲೋಕದಿಂದ ಸುತ್ತುವರಿಯಲ್ಪಟ್ಟವರಾಗಿರುವ ನಾವು ಸ್ವಶಿಸ್ತನ್ನು ಪಾಲಿಸಿ, ನಮ್ಮ ಮನಸ್ಸನ್ನು ಮಲಿನಗೊಳಿಸಬಲ್ಲ ಅಥವಾ ಹೃದಯವನ್ನು ಭ್ರಷ್ಟಗೊಳಿಸಬಲ್ಲ ಯಾವುದೇ ವಿಷಯವನ್ನು ದೂರವಿರಿಸಬೇಕು. (ಜ್ಞಾನೋ. 4:23; ಮತ್ತಾ. 5:29, 30) ಕ್ರೈಸ್ತರು “ಕರ್ತನ [“ಯೆಹೋವನ,” NW] ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡ”ಸಾಧ್ಯವಿಲ್ಲ ಎಂದು ಅವರಿಗೆ ಉಪದೇಶಿಸಲಾಗಿದೆ. (1 ಕೊರಿಂ. 10:21) ಇದು ನಾವು ಅಹಿತಕರ ಮನೋರಂಜನೆ, ದುಸ್ಸಹವಾಸ ಮತ್ತು ಇಂಟರ್ನೆಟ್ಗಳಲ್ಲಿನ ಅಪಾಯಗಳ ವಿರುದ್ಧ ಜಾಗ್ರತೆ ವಹಿಸುವುದನ್ನು ಅವಶ್ಯಪಡಿಸುತ್ತದೆ. ಮತ್ತು ನಾವು ಧರ್ಮಭ್ರಷ್ಟ ವಿಷಯಗಳಿಂದ ದೂರವಿರುವುದನ್ನೂ ಇದು ಕೇಳಿಕೊಳ್ಳುತ್ತದೆ. ಇವುಗಳ ವಿಷಯದಲ್ಲಿ ಮತ್ತು ಸೈತಾನನ ಇತರ ಕುತಂತ್ರಗಳ ವಿಷಯದಲ್ಲಿ ಜಾಗ್ರತೆ ವಹಿಸುವುದು, ನಾವು ನಮ್ಮ ಸಮರ್ಪಣೆಗನುಸಾರ ಜೀವಿಸುವಂತೆ ನಮಗೆ ಸಹಾಯಮಾಡುವುದು.
4 ದೇವರ ಒದಗಿಸುವಿಕೆಗಳನ್ನು ಉಪಯೋಗಿಸಿಕೊಳ್ಳಿ: ನಮ್ಮ ಸಮರ್ಪಣೆಯ ಪ್ರತಿಜ್ಞೆಗನುಸಾರ ಜೀವಿಸಲು ಯೆಹೋವನು ನಮಗೆ ತನ್ನ ವಾಕ್ಯ ಮತ್ತು ಕ್ರೈಸ್ತ ಸಭೆಯ ಮೂಲಕ ನೆರವನ್ನು ಒದಗಿಸಿದ್ದಾನೆ. ಬೈಬಲ್ ವಾಚನವನ್ನು ಮತ್ತು ಯೆಹೋವನಿಗೆ ಪ್ರಾರ್ಥಿಸುವುದನ್ನು ನಿಮ್ಮ ದೈನಂದಿನ ನಿಯತಕ್ರಮದ ಭಾಗವಾಗಿ ಮಾಡಿಕೊಳ್ಳಿರಿ. (ಯೆಹೋ. 1:8; 1 ಥೆಸ. 5:16) ಸಭಾ ಕೂಟಗಳಲ್ಲಿ ಆನಂದವನ್ನು ಕಂಡುಕೊಳ್ಳಿ. (ಕೀರ್ತ. 122:1) ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದಾರೋ ಮತ್ತು ಆತನ ನಿಯಮಗಳನ್ನು ಕೈಕೊಂಡು ನಡೆಯುತ್ತಾರೋ ಅಂಥವರೊಂದಿಗೆ ಸಹವಾಸಮಾಡಿರಿ.—ಕೀರ್ತ. 119:63.
5 ದೈವಿಕ ಬೆಂಬಲದೊಂದಿಗೆ, ನೀವು ಯೆಹೋವನಿಗೆ ಮಾಡಿದ ಸಮರ್ಪಣೆಯ ಪ್ರತಿಜ್ಞೆಗನುಸಾರ ಜೀವಿಸಬಲ್ಲಿರಿ ಮತ್ತು ಆತನನ್ನು ಶಾಶ್ವತವಾಗಿ ಸೇವಿಸುವ ಸಂತೋಷ ನಿಮ್ಮದಾಗಿರುವುದು.—ಕೀರ್ತ. 22:26, 27; ಫಿಲಿ. 4:13.