ದೀನಭಾವವನ್ನು ಅವಶ್ಯಪಡಿಸುವಂಥ ಕೆಲಸ
1 ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುವುದು: ‘ದೀನಭಾವ ಉಳ್ಳವರಾಗಿರಿ. ಅಪಕಾರಕ್ಕೆ ಅಪಕಾರವನ್ನು ಮಾಡದೆ ಆಶೀರ್ವದಿಸಿರಿ.’ (1 ಪೇತ್ರ 3:8, 9) ಈ ಸಲಹೆಯು ಖಂಡಿತವಾಗಿಯೂ ಸಾರುವ ಕೆಲಸದಲ್ಲಿ ಅನ್ವಯವಾಗುತ್ತದೆ. ವಾಸ್ತವದಲ್ಲಿ, ಕ್ರೈಸ್ತ ಶುಶ್ರೂಷೆಯು ನಮ್ಮ ದೀನಭಾವದ ಒಂದು ಪರೀಕ್ಷೆಯಾಗಿರಬಹುದು.
2 ಅಹಿತಕರ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ಸಹಾಯಮಾಡುವ ಗುಣವು ದೀನತೆಯಾಗಿದೆ. ಸಾರುತ್ತಿರುವಾಗ, ನಾವು ಯಾವುದೇ ಆಹ್ವಾನವಿಲ್ಲದೆ ಅಪರಿಚಿತರನ್ನು ಭೇಟಿಮಾಡುತ್ತೇವೆ ಮತ್ತು ಕೆಲವರು ದಾಕ್ಷಿಣ್ಯವಿಲ್ಲದೆ ಪ್ರತಿಕ್ರಿಯಿಸಬಹುದು ಎಂಬುದೂ ನಮಗೆ ಗೊತ್ತಿರುತ್ತದೆ. ಇಂತಹ ಪ್ರತಿಕ್ರಿಯೆಯ ಎದುರಿನಲ್ಲೂ ಸಾರುವಿಕೆಯನ್ನು ಮುಂದುವರಿಸಲು ದೀನತೆಯು ಅವಶ್ಯವಾಗಿದೆ. ಪಯನೀಯರ್ ಸಹೋದರಿಯರಿಬ್ಬರು, ಹೆಚ್ಚು ಕಷ್ಟಕರವಾದ ಒಂದು ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಪ್ರತಿದಿನವೂ ಮನೆಯಿಂದ ಮನೆಗೆ ಹೋದರೂ, ಯಾರೂ ಅವರಿಗೆ ಕಿವಿಗೊಡಲಿಲ್ಲ! ಆದರೂ ಅವರು ತಮ್ಮ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ, ಮತ್ತು ಇಂದು ಆ ಕ್ಷೇತ್ರದಲ್ಲಿ ಎರಡು ಸಭೆಗಳಿವೆ.
3 ಒರಟುತನವನ್ನು ನಿಭಾಯಿಸುವುದು: ಬೇರೆಯವರು ನಿರ್ದಯವಾಗಿ ಅಥವಾ ಅಸಭ್ಯವಾಗಿ ಪ್ರತಿಕ್ರಿಯಿಸುವಾಗ, ದೀನತೆಯು ನಾವು ಯೇಸುವನ್ನು ಅನುಕರಿಸುವಂತೆ ಸಹಾಯಮಾಡುವುದು. (1 ಪೇತ್ರ 2:21-23) ಒಂದು ಮನೆಯಲ್ಲಿ ಒಬ್ಬ ಸಹೋದರಿಯು, ಮೊದಲು ಹೆಂಡತಿಯಿಂದ ಮತ್ತು ನಂತರ ಗಂಡನಿಂದ ವಾಗ್ದಾಳಿಗೆ ಒಳಗಾದಳು. ಆ ಸ್ಥಳದಿಂದ ಹೊರಗೆ ಹೋಗುವಂತೆ ಅವರು ಕಟ್ಟಪ್ಪಣೆ ನೀಡಿದರು. ಸಹೋದರಿಯು ಕಿರುನಗೆಯೊಂದಿಗೆ ಅವರೊಟ್ಟಿಗೆ ಮತ್ತೊಂದು ಸಮಯದಲ್ಲಿ ಮಾತಾಡುವೆ ಎಂದು ಹೇಳಿ ಹೊರಟಳು. ಇದು ಆ ದಂಪತಿಯ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ಅವರು ಮುಂದಿನ ಬಾರಿ ತಮ್ಮ ಮನೆಗೆ ಭೇಟಿಯಿತ್ತ ಒಬ್ಬ ಸಾಕ್ಷಿಗೆ ಕಿವಿಗೊಟ್ಟರು ಮತ್ತು ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕಾಗಿ ಹಾಜರಾಗುವಂತೆ ನೀಡಲ್ಪಟ್ಟ ಆಮಂತ್ರಣವನ್ನು ಅಂಗೀಕರಿಸಿದರು. ಮುಂಚೆ ಅವಮಾನಮಾಡಲ್ಪಟ್ಟ ಸಹೋದರಿಯು ಇವರನ್ನು ಆಹ್ವಾನಿಸಲು ಹಾಗೂ ಇನ್ನೂ ಹೆಚ್ಚಿನ ಸಾಕ್ಷಿಯನ್ನು ಕೊಡಲು ಅಲ್ಲಿದ್ದಳು. ನಾವು ಕೂಡ “ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ” ವರ್ತಿಸುವ ಮೂಲಕ ಅನಾಸಕ್ತ ಜನರನ್ನು ಮೃದುಗೊಳಿಸಬಹುದು.—1 ಪೇತ್ರ 3:15, ಪರಿಶುದ್ಧ ಬೈಬಲ್a; ಜ್ಞಾನೋ. 25:15.
4 ದುರಹಂಕಾರವನ್ನು ತ್ಯಜಿಸಿರಿ: ಬೈಬಲಿನ ಕುರಿತಾದ ನಮ್ಮ ಜ್ಞಾನವು, ನಾವು ಜನರನ್ನು ಕೀಳ್ಮಟ್ಟದವರೆಂದು ಪರಿಗಣಿಸಿ, ಅವರ ವಿಷಯದಲ್ಲಿ ಹೀಯಾಳಿಸುವ ಮಾತುಗಳನ್ನಾಡಲು ಯಾವುದೇ ಆಧಾರವನ್ನು ಕೊಡುವುದಿಲ್ಲ. (ಯೋಹಾ. 7:49) ಬದಲಿಗೆ, “ಯಾರನ್ನೂ ದೂಷಿಸ”ಬಾರದೆಂದು ಬೈಬಲು ನಮಗೆ ಸಲಹೆ ನೀಡುತ್ತದೆ. (ತೀತ 3:2) ನಾವು ಯೇಸುವಿನಂತೆ ದೀನ ಮನೋಭಾವದವರಾಗಿರುವುದಾದರೆ, ಇತರರಿಗೆ ಚೈತನ್ಯ ನೀಡುವೆವು. (ಮತ್ತಾ. 11:28, 29) ದೀನವಾದ ಸಮೀಪಿಸುವಿಕೆಯು ನಮ್ಮ ಸಂದೇಶದ ಕಡೆಗೆ ಇತರರನ್ನು ಆಕರ್ಷಿಸುತ್ತದೆ.
5 ನಿಜ, ದೀನತೆಯು ಕಷ್ಟಕರವಾದ ಕ್ಷೇತ್ರದಲ್ಲಿ ನಾವು ನಮ್ಮ ಪ್ರಯತ್ನವನ್ನು ಬಿಟ್ಟುಬಿಡದಿರಲು ಸಹಾಯಮಾಡುತ್ತದೆ. ಅದು ಅನಾಸಕ್ತ ಜನರನ್ನು ಮೃದುಗೊಳಿಸಬಲ್ಲದು, ಮತ್ತು ಅದು ದೇವರ ರಾಜ್ಯದ ಸಂದೇಶದೆಡೆಗೆ ಇತರರನ್ನು ಆಕರ್ಷಿಸುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, “ದೀನರಿಗಾದರೋ ಕೃಪೆಯನ್ನು ಅನುಗ್ರಹಿಸು”ವಾತನಾದ ಯೆಹೋವನನ್ನು ಅದು ಮೆಚ್ಚಿಸುತ್ತದೆ.—1 ಪೇತ್ರ 5:5.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.