ಯೋಗ್ಯರಾದವರನ್ನು ಹುಡುಕುವುದು
1 ಸಾರುವ ಕೆಲಸವನ್ನು ಮಾಡುವುದರಲ್ಲಿ ಯೇಸು ಕೊಟ್ಟ ಸೂಚನೆಗಳು ಒಂದು ಪಂಥಾಹ್ವಾನವನ್ನು ತಂದೊಡ್ಡುತ್ತವೆ. ಅವನು ಹೇಳಿದ್ದು: “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ.” (ಮತ್ತಾ. 10:11) ಇಂದು ಜನರನ್ನು ತಮ್ಮ ಮನೆಗಳಲ್ಲಿ ಕಂಡುಕೊಳ್ಳುವುದು ತುಂಬ ವಿರಳವಾಗುತ್ತಿರುವಾಗ, ಈ ಹುಡುಕುವಿಕೆಯನ್ನು ನಾವು ಹೇಗೆ ಪರಿಣಾಮಕಾರಿಯಾಗಿ ಮಾಡಬಲ್ಲೆವು?
2 ನಿಮ್ಮ ಟೆರಿಟೊರಿಯನ್ನು ಅವಲೋಕಿಸಿರಿ: ಮೊಟ್ಟಮೊದಲು, ನಿಮ್ಮ ಟೆರಿಟೊರಿಯನ್ನು ಅವಲೋಕಿಸಿರಿ. ಹೆಚ್ಚಾಗಿ ಜನರು ಯಾವಾಗ ತಮ್ಮ ಮನೆಗಳಲ್ಲಿದ್ದಾರೆ? ದಿನದ ಹೊತ್ತಿನಲ್ಲಿ ಅವರನ್ನು ಎಲ್ಲಿ ಕಂಡುಕೊಳ್ಳಬಹುದು? ಅವರು ಒಂದು ಭೇಟಿಯನ್ನು ಹೆಚ್ಚು ಸ್ವಾಗತಿಸುವ ವಾರದ ಯಾವುದಾದರೂ ದಿನ ಅಥವಾ ದಿನದ ಯಾವುದಾದರೂ ಸಮಯವಿದೆಯೋ? ಸ್ಥಳಿಕ ಟೆರಿಟೊರಿಯಲ್ಲಿರುವ ಜನರ ರೂಢಿ ಮತ್ತು ಪರಿಸ್ಥಿತಿಗಳಿಗೆ ನಿಮ್ಮ ಶುಶ್ರೂಷೆಯನ್ನು ಹೊಂದಿಸಿಕೊಳ್ಳುವುದು ಹೆಚ್ಚಿನ ಒಳಿತನ್ನು ಸಾಧಿಸುವಂತೆ ನಿಮಗೆ ಸಹಾಯಮಾಡುವುದು.—1 ಕೊರಿಂ. 9:23, 26.
3 ಅನೇಕ ಪ್ರಚಾರಕರು, ಸಾಯಂಕಾಲದ ಹೊತ್ತಿನಲ್ಲಿ ಜನರನ್ನು ತಮ್ಮ ಮನೆಗಳಲ್ಲಿ ಕಂಡುಕೊಳ್ಳುವುದರಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಕೆಲವು ಮನೆಯವರು ಈ ಸಮಯದಲ್ಲಿ ಹೆಚ್ಚು ಹಾಯಾಗಿದ್ದಾರೆ ಮತ್ತು ಕಿವಿಗೊಡುವ ಮನಸ್ಸುಳ್ಳವರಾಗಿದ್ದಾರೆ. ಚಳಿಗಾಲದ ತಿಂಗಳುಗಳಲ್ಲಿ ಹಗಲು ಹೊತ್ತಿನ ತಾಸುಗಳು ಕಡಿಮೆಯಾಗಿರುವುದರಿಂದ ಕೆಲವು ಸ್ಥಳಗಳಲ್ಲಿ, ಸಾಯಂಕಾಲದ ಹೊತ್ತಿನಲ್ಲಿ ಮಾಡಲ್ಪಡುವ ಟೆಲಿಫೋನ್ ಸಾಕ್ಷಿಕಾರ್ಯವು (ಅನುಮತಿಸಲ್ಪಡುವ ಸ್ಥಳಗಳಲ್ಲಿ) ಪರಿಣಾಮಕಾರಿಯಾಗಿರಬಹುದು. ವ್ಯಾಪಾರದ ಕ್ಷೇತ್ರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷಿಕೊಡುವುದು ಸಹ ಜನರಿಗೆ ಸುವಾರ್ತೆಯನ್ನು ತಲಪಿಸುವ ಇತರ ಮಾರ್ಗಗಳಾಗಿವೆ.
4 ವಿಶೇಷ ಚಟುವಟಿಕೆಯ ಒಂದು ತಿಂಗಳಿನಲ್ಲಿ, ಒಂದು ಸಭೆಯು ಶನಿವಾರ ಮತ್ತು ಭಾನುವಾರ ಅಪರಾಹ್ನದ ಸಾಕ್ಷಿಕಾರ್ಯವನ್ನು ಹಾಗೂ ಬುಧವಾರ ಮತ್ತು ಶುಕ್ರವಾರ ಸಾಯಂಕಾಲದ ಸಾಕ್ಷಿಕಾರ್ಯವನ್ನು ಏರ್ಪಡಿಸಿತು. ಅವರು ಟೆಲಿಫೋನ್ ಸಾಕ್ಷಿಕಾರ್ಯವನ್ನು ಸಂಘಟಿಸಿದರು ಮತ್ತು ವ್ಯಾಪಾರದ ಟೆರಿಟೊರಿಯಲ್ಲಿ ಕೆಲಸ ಮಾಡಲು ಏರ್ಪಾಡುಗಳನ್ನು ಮಾಡಿದರು. ಈ ಏರ್ಪಾಡುಗಳು ಶುಶ್ರೂಷೆಗಾಗಿ ಎಷ್ಟು ಉತ್ಸಾಹವನ್ನು ಕೆರಳಿಸಿದವೆಂದರೆ, ಕ್ಷೇತ್ರ ಸೇವೆಯನ್ನು ಇದೇ ಸಮಯಗಳಲ್ಲಿ ಮುಂದುವರಿಸುವಂತೆ ಆ ಸಭೆಯು ನಿರ್ಣಯಿಸಿತು.
5 ಪುನರ್ಭೇಟಿಗಳ ವಿಷಯದಲ್ಲಿ ಶ್ರದ್ಧೆಯುಳ್ಳವರಾಗಿರಿ: ನೀವು ಪುನರ್ಭೇಟಿ ಮಾಡಲಿಕ್ಕಾಗಿ ಹಿಂದೆರಳುವಾಗ ಜನರನ್ನು ಮನೆಗಳಲ್ಲಿ ಕಂಡುಕೊಳ್ಳುವುದು ನಿಮ್ಮ ಟೆರಿಟೊರಿಯಲ್ಲಿ ಕಷ್ಟಕರವಾಗಿರುವುದಾದರೆ, ಮೊದಲ ಭೇಟಿಯಿಂದ ಪ್ರತಿ ಭೇಟಿಯ ಅಂತ್ಯದಲ್ಲಿ ಮುಂದಿನ ಭೇಟಿಗಾಗಿ ಒಂದು ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿರಿ. ನಂತರ, ಆ ಸಮಯಕ್ಕೆ ತಪ್ಪದೆ ಹೋಗಿರಿ. (ಮತ್ತಾ. 5:37) ಸೂಕ್ತವಾಗಿರುವಲ್ಲಿ, ನೀವು ಮನೆಯವರ ದೂರವಾಣಿ ಸಂಖ್ಯೆಯನ್ನು ಕೇಳಬಹುದು. ಇದು ಸಹ, ಆ ವ್ಯಕ್ತಿಯನ್ನು ಪುನಃ ಸಂಪರ್ಕಿಸುವಂತೆ ನಿಮಗೆ ಸಹಾಯಮಾಡುವುದು.
6 ಯೋಗ್ಯರಾದವರನ್ನು ಹುಡುಕುವ ಮತ್ತು ಕಂಡುಕೊಂಡ ಆಸಕ್ತಿಯನ್ನು ಬೆಳೆಸಲಿಕ್ಕಾಗಿ ನಾವು ಮಾಡುವ ಶ್ರದ್ಧಾಪೂರ್ವಕ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವು ಖಂಡಿತ ಇರುವುದು.—ಜ್ಞಾನೋ. 21:5.