ದೇವದೂತರು ನಮಗೆ ಸಹಾಯಮಾಡುತ್ತಿದ್ದಾರೆ
1 “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” ಈ ಮಾತುಗಳು, “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಆಜ್ಞೆಗೆ ಕಿವಿಗೊಡುವವರೆಲ್ಲರಿಗೆ ಎಷ್ಟು ಉತ್ತೇಜನದಾಯಕವಾಗಿವೆ! (ಮತ್ತಾ. 28:18-20) ಯೇಸು ಸತ್ಕ್ರೈಸ್ತರೊಂದಿಗಿರುವ ಒಂದು ಗಮನಾರ್ಹ ವಿಧವು, ತನ್ನ ದೇವದೂತರ ಮೂಲಕವೇ ಆಗಿದೆ. (ಮತ್ತಾ. 13:36-43) ಈ ನಂಬಿಗಸ್ತ ಆತ್ಮಜೀವಿಗಳೊಂದಿಗೆ ಸೇರಿ “ನಿತ್ಯವಾದ ಶುಭವರ್ತಮಾನ”ವನ್ನು ಸಾರುವುದು ಎಷ್ಟು ರೋಮಾಂಚಕವಾಗಿದೆ!—ಪ್ರಕ. 14:6, 7.
2 ನಮ್ಮ ಶುಶ್ರೂಷೆಯಲ್ಲಿ: “ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ” ದೇವದೂತರು ಕಳುಹಿಸಲ್ಪಡುತ್ತಾರೆ ಎಂದು ಬೈಬಲು ತಿಳಿಸುತ್ತದೆ. (ಇಬ್ರಿ. 1:14) ಪ್ರಥಮ ಶತಮಾನದಲ್ಲಿ, ಯೇಸುವಿನ ಹಿಂಬಾಲಕರನ್ನು ಯೋಗ್ಯ ವ್ಯಕ್ತಿಗಳ ಕಡೆಗೆ ಮಾರ್ಗದರ್ಶಿಸುವುದರಲ್ಲಿ ದೇವದೂತರು ಒಳಗೂಡಿದ್ದರು. (ಅ.ಕೃ. 8:26) ಇಂದು ಸಹ ದೇವರ ಸೇವಕರು ದೇವದೂತರ ಮಾರ್ಗದರ್ಶನದ ರುಜುವಾತನ್ನು ಮನಗಾಣುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಮನೆಯವರು, ತಾವು ಸಹಾಯಕ್ಕಾಗಿ ಪ್ರಾರ್ಥಿಸುತ್ತಿದ್ದಾಗಲೇ ಸಾಕ್ಷಿಗಳು ತಮ್ಮ ಮನೆಗೆ ಬಂದಿದ್ದರು ಎಂದು ಹೇಳಿದ್ದಾರೆ. ಇಂಥ ಜನರು ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯಿಸುವಾಗ, ದೇವದೂತರೊಂದಿಗೆ ನಾವು ಸಹ ಎಷ್ಟು ಸಂತೋಷಿಸುತ್ತೇವೆ!—ಲೂಕ 15:10.
3 ವಿರೋಧವನ್ನು ಎದುರಿಸುವಾಗ: ದಾನಿಯೇಲ, ಅವನ ಮೂವರು ಯುವ ಹೀಬ್ರು ಸಂಗಡಿಗರು, ಅಪೊಸ್ತಲ ಪೇತ್ರ, ಮತ್ತು ಗಂಭೀರವಾದ ಪರೀಕ್ಷೆಗಳನ್ನು ಎದುರಿಸಿರುವಂಥ ಇನ್ನೂ ಅನೇಕರು, “ಪರಾಕ್ರಮಶಾಲಿ”ಗಳಾಗಿರುವ ದೇವದೂತರ ಸಹಾಯದಿಂದ ಯೆಹೋವನ ಸಂರಕ್ಷಣೆಯನ್ನು ಅನುಭವಿಸಿದ್ದಾರೆ. (ಕೀರ್ತ. 103:20; ದಾನಿ. 3:28; 6:21, 22; ಅ.ಕೃ. 12:11) ವಿರೋಧವನ್ನು ಎದುರಿಸುತ್ತಿರುವಾಗ ಕೆಲವೊಮ್ಮೆ ನಮಗೆ ನಿಸ್ಸಹಾಯಕ ಅನಿಸಿಕೆಯಾಗಬಹುದಾದರೂ, “ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂಬುದನ್ನು ಎಲೀಷನ ಸೇವಕನು ಮನಗಂಡಾಗ ಅವನಿಗೆ ಯಾವ ಅನುಭವವಾಯಿತೋ ಅದರಿಂದ ನಾವು ಉತ್ತೇಜನವನ್ನು ಪಡೆದುಕೊಳ್ಳಸಾಧ್ಯವಿದೆ. (2 ಅರ. 6:15-17) ಒಂದುವೇಳೆ ನಮ್ಮ ಕ್ರೈಸ್ತ ಸಹೋದರರಿಂದ ನಾವು ಬಲವಂತವಾಗಿ ಪ್ರತ್ಯೇಕಿಸಲ್ಪಟ್ಟರೂ, ನಾವು ಹತಾಶರಾಗುವ ಅಗತ್ಯವಿಲ್ಲ. ದೇವರ ವಾಕ್ಯವು ನಮಗೆ ಹೀಗೆ ಆಶ್ವಾಸನೆ ನೀಡುತ್ತದೆ: “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.”—ಕೀರ್ತ. 34:7.
4 ಅತಿ ಬೇಗನೆ ದೇವದೂತ ಸೇನೆಗಳು ಕ್ರಿಸ್ತನ ರಾಜ್ಯಾಧಿಕಾರಕ್ಕೆ ವಿರುದ್ಧವಾಗಿರುವ ಸರ್ವವನ್ನೂ ನಿರ್ಮೂಲನಮಾಡಲು ಸವಾರಿಯನ್ನು ಆರಂಭಿಸುವವು. (ಪ್ರಕ. 19:11, 14, 15) ನಾವು ಆ ದಿನಕ್ಕಾಗಿ ಕಾಯುತ್ತಿರುವಾಗ, ಕ್ರಿಸ್ತನ ನೇತೃತ್ವದಲ್ಲಿರುವ ಸ್ವರ್ಗೀಯ ಸೇನೆಯ ಪ್ರಬಲವಾದ ಬೆಂಬಲದಲ್ಲಿ ಸಂಪೂರ್ಣವಾಗಿ ಭರವಸೆಯನ್ನಿಡುತ್ತಾ, ಯೆಹೋವನನ್ನು ಧೈರ್ಯದಿಂದ ಸ್ತುತಿಸುತ್ತಾ ಮುಂದುವರಿಯೋಣ.—1 ಪೇತ್ರ 3:22.