ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 6: ವಿದ್ಯಾರ್ಥಿಯು ಒಂದು ಪ್ರಶ್ನೆಯನ್ನು ಎಬ್ಬಿಸುವಾಗ
1 ಒಮ್ಮೆ ಒಂದು ಬೈಬಲ್ ಅಧ್ಯಯನವು ಸ್ಥಾಪಿಸಲ್ಪಟ್ಟ ಅನಂತರ, ಒಂದರಿಂದ ಮತ್ತೊಂದು ವಿಷಯವಸ್ತುವಿಗೆ ಹಾರುವ ಬದಲು ಬೈಬಲ್ ಬೋಧನೆಗಳನ್ನು ಕ್ರಮವಾದ ರೀತಿಯಲ್ಲಿ ಪರಿಗಣಿಸುವುದು ಹೆಚ್ಚು ಉತ್ತಮ. ಇದು ನಿಷ್ಕೃಷ್ಟ ಜ್ಞಾನದ ಬುನಾದಿಯನ್ನು ಕಟ್ಟಿಕೊಳ್ಳಲು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಮಾಡಲು ವಿದ್ಯಾರ್ಥಿಗೆ ಸಹಾಯಮಾಡುವುದು. (ಕೊಲೊ. 1:9, 10) ಆದರೂ, ಅನೇಕವೇಳೆ ಅಧ್ಯಯನದ ಸಮಯದಲ್ಲಿ ವಿದ್ಯಾರ್ಥಿಗಳು ವಿಭಿನ್ನ ವಿಷಯಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸುತ್ತಾರೆ. ಇವುಗಳನ್ನು ನಿರ್ವಹಿಸುವುದು ಹೇಗೆ?
2 ವಿವೇಚನಾಶೀಲರಾಗಿರಿ: ಪರಿಗಣಿಸಲ್ಪಡುತ್ತಿರುವ ಅಧ್ಯಯನ ಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಮಾನ್ಯವಾಗಿ ಆ ಸಮಯದಲ್ಲೇ ಉತ್ತರಿಸಬಹುದು. ಒಂದು ಪ್ರಶ್ನೆಯು ಅಧ್ಯಯನ ಪ್ರಕಾಶನದಲ್ಲೇ ಸ್ವಲ್ಪ ಮುಂದಕ್ಕೆ ಚರ್ಚಿಸಲ್ಪಡಲಿರುವುದಾದರೆ, ಅದರ ಕುರಿತು ತಿಳಿಸುವುದಷ್ಟೇ ಸಾಕು. ಆದರೂ, ಒಂದುವೇಳೆ ಪ್ರಶ್ನೆಯು ಅಧ್ಯಯನ ಭಾಗಕ್ಕೆ ಸಂಬಂಧಿಸಿದ್ದಲ್ಲವಾದರೆ ಅಥವಾ ಸರಿಯಾಗಿ ಉತ್ತರಿಸಲು ಸಂಶೋಧನೆಯು ಅಗತ್ಯವಿರುವುದಾದರೆ, ಅದನ್ನು ಅಧ್ಯಯನದ ಅನಂತರ ಅಥವಾ ಮತ್ತೊಂದು ಸಮಯದಲ್ಲಿ ಪರಿಗಣಿಸುವುದು ಉತ್ತಮ. ವಿದ್ಯಾರ್ಥಿಯ ಪ್ರಶ್ನೆಯನ್ನು ಬರೆದುಕೊಳ್ಳುವುದು ತನ್ನ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಎಂಬ ಆಶ್ವಾಸನೆಯನ್ನು ಅವನಿಗೆ ಕೊಡುತ್ತದೆ ಮತ್ತು ಅಧ್ಯಯನವು ಹಳಿತಪ್ಪದಂತೆ ನೋಡಿಕೊಳ್ಳಲು ಸಹಾಯಮಾಡುತ್ತದೆ ಎಂಬುದನ್ನು ಕೆಲವು ಪ್ರಚಾರಕರು ಕಂಡುಕೊಂಡಿದ್ದಾರೆ.
3 ನಮ್ಮ ಮೂಲಭೂತ ಅಧ್ಯಯನ ಪ್ರಕಾಶನಗಳಲ್ಲಿ ಅನೇಕ ಬೈಬಲ್ ಬೋಧನೆಗಳನ್ನು ಸಂಕ್ಷಿಪ್ತವಾಗಿ ಮಾತ್ರ ಪರಿಗಣಿಸಲಾಗುತ್ತದೆ. ಒಂದು ನಿರ್ದಿಷ್ಟ ಬೋಧನೆಯನ್ನು ಸ್ವೀಕರಿಸಲು ವಿದ್ಯಾರ್ಥಿಗೆ ಕಷ್ಟಕರವಾಗಿರುವುದಾದರೆ ಅಥವಾ ಅವನು ಒಂದು ಸುಳ್ಳು ನಂಬಿಕೆಗೆ ಬಲವಾಗಿ ಅಂಟಿಕೊಳ್ಳುವುದಾದರೆ ಆಗೇನು? ಆ ವಿಷಯದ ಕುರಿತು ಬೈಬಲ್ ಏನು ಹೇಳುತ್ತದೋ ಅದನ್ನು ಸವಿವರವಾಗಿ ಚರ್ಚಿಸುವ ಹೆಚ್ಚಿನ ಮಾಹಿತಿಯನ್ನು ಪರಿಗಣಿಸುವುದು ಪ್ರಯೋಜನದಾಯಕವಾಗಿರಬಹುದು. ವಿದ್ಯಾರ್ಥಿಗೆ ಇನ್ನೂ ಮನದಟ್ಟು ಆಗಿರದಿದ್ದರೆ, ಆ ವಿಷಯವನ್ನು ಮತ್ತೊಂದು ಸಮಯದಲ್ಲಿ ಚರ್ಚಿಸಲಿಕ್ಕಾಗಿ ಬದಿಗಿರಿಸಿ ಅವನ ಕ್ರಮದ ಅಧ್ಯಯನವನ್ನು ಮುಂದುವರಿಸಿರಿ. (ಯೋಹಾ. 16:12) ಬೈಬಲಿನ ಹೆಚ್ಚೆಚ್ಚು ಜ್ಞಾನವನ್ನು ಅವನು ಪಡೆದುಕೊಳ್ಳುತ್ತಾ ಹೋದಂತೆ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಾ ಹೋದಂತೆ, ಅವನಿಗೆ ಆ ಬೈಬಲ್ ಬೋಧನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದೀತು.
4 ವಿನಯಶೀಲರಾಗಿರಿ: ನಿಮಗೆ ಒಂದು ಪ್ರಶ್ನೆಗೆ ಉತ್ತರವು ಸ್ಪಷ್ಟವಾಗಿ ತಿಳಿದಿಲ್ಲವಾದರೆ, ನಿಷ್ಕೃಷ್ಟವಲ್ಲದ ಉತ್ತರವನ್ನು ಕೊಡುವ ಪ್ರಯತ್ನವನ್ನು ಮಾಡಬೇಡಿರಿ. (2 ತಿಮೊ. 2:15; 1 ಪೇತ್ರ 4:11) ನೀವು ಸಂಶೋಧನೆಯನ್ನು ಮಾಡಿ ಉತ್ತರದೊಂದಿಗೆ ಹಿಂದೆ ಬರುವಿರಿ ಎಂದು ಹೇಳಿರಿ. ನೀವು ಈ ಸಂದರ್ಭವನ್ನು, ಸಂಶೋಧನೆಯನ್ನು ಹೇಗೆ ಮಾಡುವುದು ಎಂಬುದನ್ನು ವಿದ್ಯಾರ್ಥಿಗೆ ತೋರಿಸುವುದಕ್ಕಾಗಿಯೂ ಉಪಯೋಗಿಸಬಹುದು. ಯೆಹೋವನ ಸಂಘಟನೆಯಿಂದ ಒದಗಿಸಲ್ಪಟ್ಟಿರುವ ವಿವಿಧ ಸಂಶೋಧನಾ ಸಹಾಯಕಗಳನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಅವನಿಗೆ ಪ್ರಗತಿಪರವಾಗಿ ತೋರಿಸಿರಿ. ಈ ರೀತಿಯಲ್ಲಿ ಅವನು ತರುವಾಯ ತನ್ನ ಸ್ವಂತ ಪ್ರಶ್ನೆಗಳಿಗೆ ತಾನೇ ಉತ್ತರವನ್ನು ಕಂಡುಕೊಳ್ಳಲು ಶಕ್ತನಾಗುವನು.—ಅ. ಕೃ. 17:11.