ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 10: ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದು
1 ಒಬ್ಬ ಬೈಬಲ್ ವಿದ್ಯಾರ್ಥಿಯು ಅಸ್ನಾತ ಪ್ರಚಾರಕನಾಗಲು ಅರ್ಹನಾಗಿದ್ದಾನೆ ಎಂದು ಹಿರಿಯರು ನಿರ್ಧರಿಸಿದಾಗ, ಅವನು ಸಭೆಯೊಂದಿಗೆ ಬಹಿರಂಗವಾಗಿ ಸಾರುವ ಕೆಲಸದಲ್ಲಿ ಭಾಗವಹಿಸಲು ಆರಂಭಿಸಬಹುದು. (ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು, ಪುಟ 79-81 ನ್ನು ನೋಡಿ.) ಮನೆಯಿಂದ ಮನೆಗೆ ಸಾರುವ ಪಂಥಾಹ್ವಾನವನ್ನು ಎದುರಿಸುವಂತೆ ವಿದ್ಯಾರ್ಥಿಗೆ ನಾವು ಹೇಗೆ ಸಹಾಯಮಾಡಬಲ್ಲೆವು?
2 ಒಟ್ಟಿಗೆ ತಯಾರಿಸುವುದು: ಉತ್ತಮ ತಯಾರಿಗೆ ಯಾವುದೇ ಬದಲಿ ಇಲ್ಲ. ನಮ್ಮ ರಾಜ್ಯದ ಸೇವೆ ಮತ್ತು ತರ್ಕಿಸು (ಇಂಗ್ಲಿಷ್) ಪುಸ್ತಕದಲ್ಲಿ ಸೂಚಿತ ನಿರೂಪಣೆಗಳನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ವಿದ್ಯಾರ್ಥಿಗೆ ತೋರಿಸಿಕೊಡಿರಿ. ಸ್ಥಳಿಕ ಕ್ಷೇತ್ರಕ್ಕೆ ಸೂಕ್ತವಾಗಿರುವ ಒಂದು ಸರಳವಾದ ನಿರೂಪಣೆಯನ್ನು ಆರಿಸಿಕೊಳ್ಳುವಂತೆ ಅವನಿಗೆ ಸಹಾಯಮಾಡಿರಿ. ಆರಂಭದಿಂದಲೇ, ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸುವಂತೆ ಅವನನ್ನು ಉತ್ತೇಜಿಸಿರಿ.—2 ತಿಮೊ. 4:2.
3 ಹೊಸ ಪ್ರಚಾರಕರಿಗೆ ಪೂರ್ವಾಭಿನಯಗಳು ಹೆಚ್ಚು ಪ್ರಯೋಜನಕಾರಿಯಾಗಿರಬಲ್ಲವು. ವಿದ್ಯಾರ್ಥಿಯು ನಿರೂಪಣೆಯನ್ನು ಅಭಿನಯಿಸುವಾಗ, ಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಪ್ರತಿಕ್ರಿಯೆಗಳನ್ನು ಹೇಗೆ ಜಾಣ್ಮೆಯಿಂದ ನಿಭಾಯಿಸುವುದು ಎಂಬುದನ್ನು ತೋರಿಸಿಕೊಡಿರಿ. (ಕೊಲೊ. 4:6) ಮನೆಯವರು ಕೇಳಬಹುದಾದ ಪ್ರತಿಯೊಂದು ಪ್ರಶ್ನೆಗೆ ಕ್ರೈಸ್ತ ಶುಶ್ರೂಷಕರು ಉತ್ತರಗಳನ್ನು ತಿಳಿದಿರಬೇಕಾದ ಅಗತ್ಯವಿಲ್ಲ ಎಂಬುದನ್ನು ಅವನಿಗೆ ತಿಳಿಸಿರಿ. ಅಂಥ ಪ್ರಶ್ನೆಗಳಿಗೆ ಸಂಶೋಧನೆಮಾಡುವ ಮೂಲಕ ಉತ್ತರವನ್ನು ಕಂಡುಕೊಂಡು, ಮುಂದಿನ ಭೇಟಿಯಲ್ಲಿ ಅದನ್ನು ಚರ್ಚಿಸುವುದು ಅನೇಕವೇಳೆ ಉತ್ತಮವಾಗಿರುತ್ತದೆ.—ಜ್ಞಾನೋ. 15:28.
4 ಒಟ್ಟಿಗೆ ಸಾರುವುದು: ವಿದ್ಯಾರ್ಥಿಯು ಮೊದಲ ಬಾರಿ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ನೀವಿಬ್ಬರೂ ಒಟ್ಟಿಗೆ ತಯಾರಿಸಿರುವ ನಿರೂಪಣೆಯನ್ನು ನೀವು ಹೇಗೆ ನೀಡುತ್ತೀರೆಂಬುದನ್ನು ಅವನು ಮೊದಲು ಗಮನಿಸಲಿ. ಅನಂತರ ಅವನು ಮಾತಾಡುವಂತೆ ತಿಳಿಸಿರಿ. ಕೆಲವು ಸಂದರ್ಭಗಳಲ್ಲಿ, ನಿರೂಪಣೆಯ ಕೇವಲ ಒಂದು ಭಾಗವನ್ನು ಅವನು ನೀಡಿದರೆ ಸಾಕು. ಉದಾಹರಣೆಗೆ, ಒಂದು ಶಾಸ್ತ್ರವಚನವನ್ನು ಓದಿ ಅದರ ಬಗ್ಗೆ ಹೇಳಿಕೆ ನೀಡಿದರೆ ಸಾಕಾಗಬಹುದು. ವಿದ್ಯಾರ್ಥಿಯ ವ್ಯಕ್ತಿತ್ವ ಮತ್ತು ಸಾಮರ್ಥ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳಿರಿ. (ಫಿಲಿ. 4:5) ಸಾರುವ ಕೆಲಸದ ವಿವಿಧ ಕ್ಷೇತ್ರಗಳಲ್ಲಿ ನೀವು ನಿಮ್ಮ ವಿದ್ಯಾರ್ಥಿಯನ್ನು ತರಬೇತುಗೊಳಿಸುತ್ತಾ ಇರುವಾಗ ಅವನಿಗೆ ಹೆಚ್ಚು ಶ್ಲಾಘನೆಯನ್ನು ನೀಡಿರಿ.
5 ಕ್ರಮವಾಗಿ—ಸಾಧ್ಯವಿರುವುದಾದರೆ ಪ್ರತಿ ವಾರ—ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಒಂದು ಕಾಲತಖ್ತೆಯನ್ನು ಇಟ್ಟುಕೊಳ್ಳಲು ಹೊಸ ಪ್ರಚಾರಕನಿಗೆ ಸಹಾಯಮಾಡುವುದು ಪ್ರಾಮುಖ್ಯ. (ಫಿಲಿ. 3:16) ಸೇವೆಯಲ್ಲಿ ಒಟ್ಟಿಗೆ ಕೆಲಸಮಾಡುವಂತೆ ನಿರ್ದಿಷ್ಟ ಏರ್ಪಾಡುಗಳನ್ನು ಮಾಡಿರಿ. ಇತರ ಹುರುಪಿನ ಶುಶ್ರೂಷಕರೊಂದಿಗೆ ಸಹ ಕೆಲಸಮಾಡುವಂತೆ ಅವನನ್ನು ಉತ್ತೇಜಿಸಿರಿ. ಅವರ ಮಾದರಿ ಮತ್ತು ಸಹವಾಸವು, ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿನ ಕುಶಲತೆಯನ್ನು ಬೆಳೆಸಿಕೊಳ್ಳುವಂತೆ ಮತ್ತು ಆನಂದವನ್ನು ಕಂಡುಕೊಳ್ಳುವಂತೆ ಅವನಿಗೆ ಸಹಾಯಮಾಡುವುದು.