ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಹೊಂದಿಸಿಕೊಳ್ಳುವವರಾಗಿರುವ ಮೂಲಕ
1 ಅಪೊಸ್ತಲ ಪೌಲನು ತನ್ನ ಸುವಾರ್ತೆಯ ನಿರೂಪಣೆಯನ್ನು ಯಾವಾಗಲೂ ತನ್ನ ಸಭಿಕರ ಹಿನ್ನೆಲೆ ಮತ್ತು ಮನೋಭಾವಕ್ಕೆ ಹೊಂದಿಸಿಕೊಳ್ಳುವ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನು ಇಟ್ಟನು. (1 ಕೊರಿಂ. 9:19-23) ನಾವು ಸಹ ಅದನ್ನೇ ಮಾಡಲು ಪ್ರಯತ್ನಿಸಬೇಕು. ನಮ್ಮ ರಾಜ್ಯದ ಸೇವೆಯಲ್ಲಿ ಬರುವ ಮಾದರಿ ನಿರೂಪಣೆಗಳನ್ನು ನಾವು ಸ್ವಲ್ಪ ಮುಂದಾಲೋಚನೆಯ ಮೂಲಕ ನಮ್ಮ ಟೆರಿಟೊರಿಯಲ್ಲಿರುವ ಜನರ ಅಗತ್ಯಗಳಿಗನುಸಾರವಾಗಿ ಹೊಂದಿಸಿಕೊಳ್ಳಬಲ್ಲೆವು. ನಾವು ಒಂದು ಮನೆಬಾಗಲಿನ ಬಳಿ ಹೋಗುತ್ತಿರುವಾಗ, ಮನೆಯವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದರ ಬಗ್ಗೆ ಸೂಚನೆಯನ್ನು ಕೊಡುವ ವಿಷಯಗಳನ್ನು ಗಮನಿಸಿ, ಅವುಗಳನ್ನು ನಮ್ಮ ನಿರೂಪಣೆಯಲ್ಲಿ ಸೇರಿಸಬಹುದು. ಆದರೆ ಇದುಮಾತ್ರವಲ್ಲದೆ, ನಮ್ಮ ಶುಶ್ರೂಷೆಯಲ್ಲಿ ನಾವು ಹೊಂದಿಸಿಕೊಳ್ಳುವವರಾಗಿರಲು ಮತ್ತೊಂದು ವಿಧವು ಸಹ ಇದೆ.
2 ಮನೆಯವರ ಹೇಳಿಕೆಗನುಸಾರವಾಗಿ ಹೊಂದಿಸಿಕೊಳ್ಳುವುದು: ಸುವಾರ್ತೆಯನ್ನು ಸಾರುವಾಗ ನಾವು ಅನೇಕವೇಳೆ ಒಂದು ಪ್ರಶ್ನೆಯನ್ನು ಕೇಳಿ, ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಂತೆ ಮನೆಯವರನ್ನು ಆಮಂತ್ರಿಸುತ್ತೇವೆ. ಆ ಪ್ರತಿಕ್ರಿಯೆಯನ್ನು ನೀವು ಹೇಗೆ ವೀಕ್ಷಿಸುತ್ತೀರಿ? ಸುಮ್ಮನೆ ಮೇಲುಮೇಲಿಗೆ ಒಪ್ಪಿಗೆ ಸೂಚಿಸಿ, ನೀವು ತಯಾರಿಸಿದ ನಿರೂಪಣೆಯನ್ನೇ ಹೇಳುತ್ತಾ ಮುಂದುವರಿಯುತ್ತೀರೊ? ಅಥವಾ ನೀವು ತಿಳಿಸುವ ವಿಷಯಗಳು ಮನೆಯವರ ಹೇಳಿಕೆಗಳನ್ನು ನೀವು ಪರಿಗಣನೆಗೆ ತೆಗೆದುಕೊಂಡಿದ್ದೀರಿ ಎಂಬುದನ್ನು ತೋರಿಸುತ್ತವೊ? ಮನೆಯವರು ಏನು ಹೇಳುತ್ತಾರೋ ಅದರಲ್ಲಿ ನೀವು ಪ್ರಾಮಾಣಿಕ ಆಸಕ್ತಿಯನ್ನು ವಹಿಸುವುದಾದರೆ, ನೀವು ಅವರ ಮನಸ್ಸಿನಲ್ಲಿ ನಿಜವಾಗಿಯೂ ಏನಿದೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಜಾಣ್ಮೆಯಿಂದ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಲು ಶಕ್ತರಾಗುವಿರಿ. (ಜ್ಞಾನೋ. 20:5) ಹೀಗೆ, ನೀವು ಕೇಳುಗರಿಗಿರುವ ಚಿಂತೆಗಳನ್ನು ಹೆಚ್ಚು ನೇರವಾಗಿ ಸಂಬೋಧಿಸುವ ರಾಜ್ಯ ಸಂದೇಶದ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಲ್ಲಿರಿ.
3 ಈ ಕಾರಣದಿಂದ, ಚರ್ಚಿಸಲಿಕ್ಕಾಗಿ ನಾವು ಈ ಮೊದಲೇ ಯೋಜಿಸಿರುವ ವಿಷಯಗಳಲ್ಲದೆ ಬೇರೆ ವಿಷಯಗಳ ಕುರಿತು ಮಾತಾಡಲು ಸಿದ್ಧಮನಸ್ಸುಳ್ಳವರಾಗಿರುವುದು ಅಗತ್ಯವಾಗಿದೆ. ಪ್ರಾಯಶಃ ನಾವು ವಾರ್ತಾಪತ್ರಿಕೆಯಲ್ಲಿ ತಿಳಿಸಲ್ಪಟ್ಟಿರುವ ಒಂದು ಸಮಸ್ಯೆಯ ಬಗ್ಗೆ ಹೇಳಿಕೆ ನೀಡುತ್ತಾ ಸಂಭಾಷಣೆಯನ್ನು ಆರಂಭಿಸಿರಬಹುದು. ಆದರೆ, ಮನೆಯವನು ತನಗೆ ಚಿಂತೆಯನ್ನುಂಟುಮಾಡಿರುವ ಸ್ಥಳಿಕ ಅಥವಾ ವೈಯಕ್ತಿಕ ಸಮಸ್ಯೆಯೊಂದನ್ನು ತಿಳಿಸಬಹುದು. ಇಂಥ ಸಂದರ್ಭದಲ್ಲಿ, ಮನೆಯವನ ಅಗತ್ಯಗಳನ್ನು ಪೂರೈಸುವುದರಲ್ಲಿ ನಮಗಿರುವ ನಿಜ ಆಸಕ್ತಿಯು, ಬೈಬಲ್ ಚರ್ಚೆಯನ್ನು ಮನೆಯವನಿಗೆ ಹೆಚ್ಚು ಪ್ರಾಮುಖ್ಯವಾಗಿರುವ ವಿಷಯದ ಮೇಲೆ ಕೇಂದ್ರೀಕರಿಸುವಂತೆ ನಮ್ಮನ್ನು ಪ್ರೇರಿಸುವುದು.—ಫಿಲಿ. 2:4.
4 ನಮ್ಮ ಪ್ರಸ್ತಾಪವನ್ನು ಹೊಂದಿಸಿಕೊಳ್ಳುವುದು: ಮನೆಯವನು ಒಂದು ಪ್ರಶ್ನೆಯನ್ನು ಎಬ್ಬಿಸುವಾಗ, ಆ ವಿಷಯದ ಕುರಿತು ನಾವು ಸಂಶೋಧನೆ ಮಾಡಿ ಹೆಚ್ಚು ಮಾಹಿತಿಯನ್ನು ಪಡೆದುಕೊಂಡ ಬಳಿಕ, ಮತ್ತೊಂದು ಸಂದರ್ಭದಲ್ಲಿ ಸಂಭಾಷಣೆಯನ್ನು ಮುಂದುವರಿಸುವುದು ಪ್ರಯೋಜನಕರವೆಂದು ನಾವು ಕಂಡುಕೊಳ್ಳಬಹುದು. ಆ ವಿಷಯದ ಬಗ್ಗೆ ಹೆಚ್ಚು ಪೂರ್ಣವಾಗಿ ಚರ್ಚಿಸಲ್ಪಟ್ಟಿರುವ ಪ್ರಕಾಶನಗಳನ್ನು ಸಹ ನಾವು ನೀಡಸಾಧ್ಯವಿದೆ. ಇದೆಲ್ಲವೂ, ಯೆಹೋವನನ್ನು ತಿಳಿದುಕೊಳ್ಳಲು ಇತರರಿಗೆ ಸಹಾಯಮಾಡುವುದರಲ್ಲಿ ನಮಗಿರುವ ಪ್ರಾಮಾಣಿಕ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.—2 ಕೊರಿಂ. 2:17.