ಪ್ರಾಯೋಗಿಕ ಅನ್ವಯವನ್ನು ಮಾಡಲು ನಮಗೆ ಸಹಾಯಮಾಡುವ ಒಂದು ಶಾಲೆ
1 ನಾವು 2006ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್ನಲ್ಲಿ ಪಟ್ಟಿಮಾಡಲ್ಪಟ್ಟಿರುವ ವಿಷಯಗಳನ್ನು ಪರಿಗಣಿಸುತ್ತಾ ಹೋದಂತೆ, ಆಧ್ಯಾತ್ಮಿಕ ಬೋಧನೆಗಳನ್ನು ನಮ್ಮ ಪವಿತ್ರ ಸೇವೆಯಲ್ಲಿ ಮತ್ತು ದಿನನಿತ್ಯದ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮೂಲಕ ಅವುಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕಲು ನಿರ್ಧರಿಸುತ್ತೇವೆ.—ಯೋಹಾ. 13:17; ಫಿಲಿ. 4:9.
2 ಹೇಳಿಕೆಗಳನ್ನು ನೀಡುವುದು: ಈ ವರ್ಷಕ್ಕಾಗಿರುವ ಶೆಡ್ಯೂಲ್, ಬೈಬಲ್ ಮುಖ್ಯಾಂಶಗಳ ಭಾಗದಲ್ಲಿ ಸಭಿಕರ ಭಾಗವಹಿಸುವಿಕೆಗೆ ಇನ್ನೂ ಒಂದು ನಿಮಿಷವನ್ನು ಕೂಡಿಸುತ್ತದೆ. ಇದರರ್ಥ ಬೈಬಲ್ ವಾಚನದ ಮುಖ್ಯಾಂಶಗಳನ್ನು ಪ್ರಸ್ತುತಪಡಿಸಲು ನೇಮಿಸಲ್ಪಟ್ಟಿರುವ ಸಹೋದರನು ತನ್ನ ಭಾಗವನ್ನು ಆರು ನಿಮಿಷಗಳಲ್ಲಿ ಅಲ್ಲ, ಬದಲಿಗೆ ಐದು ನಿಮಿಷಗಳಲ್ಲಿ ಮುಗಿಸಬೇಕೆಂಬುದನ್ನು ಮನಸ್ಸಿನಲ್ಲಿಡತಕ್ಕದ್ದಾಗಿದೆ. ತಮ್ಮ ಆಸನಗಳಿಂದ ಹೇಳಿಕೆಗಳನ್ನು ನೀಡುವ ಸಭಿಕರು ಸಹ ಅವರು ತೆಗೆದುಕೊಳ್ಳುವ ಸಮಯದ ಕಡೆಗೆ ಗಮನಕೊಡಬೇಕು. ಹೇಳಿಕೆಗಳನ್ನು ನೀಡುವವರು ಜಾಗರೂಕ ಮುಂದಾಲೋಚನೆಯಿಂದ 30 ಸೆಕೆಂಡುಗಳಲ್ಲಿ ಅಥವಾ ಅದಕ್ಕಿಂತಲೂ ಕಡಿಮೆ ಸಮಯದಲ್ಲಿ ಸಹಾಯಕರವಾಗಿರುವ ಮಾಹಿತಿಯನ್ನು ವ್ಯಕ್ತಪಡಿಸಸಾಧ್ಯವಿದೆ. ಸಭಿಕರ ಭಾಗವಹಿಸುವಿಕೆಗಾಗಿ ನಿಗದಿಪಡಿಸಲ್ಪಟ್ಟಿರುವ ಐದು ನಿಮಿಷಗಳಲ್ಲಿ ಸುಮಾರು ಹತ್ತು ಮಂದಿ ಅರ್ಥವತ್ತಾದ ಹೇಳಿಕೆಯನ್ನು ನೀಡಲು ಸಾಧ್ಯವಾಗಬೇಕು.
3 ಬೋಧನಾ ಭಾಷಣಗಳು: ಬೈಬಲ್ ಮುಖ್ಯಾಂಶಗಳು ಮತ್ತು ಉಪದೇಶ ಭಾಷಣದ ವಿಷಯಭಾಗವನ್ನು ನಮ್ಮ ಶುಶ್ರೂಷೆ ಹಾಗೂ ನಮ್ಮ ದೈನಂದಿನ ಜೀವಿತಗಳ ಇತರ ಕ್ಷೇತ್ರಗಳಿಗೆ ಅನ್ವಯಿಸುವ ಮೂಲಕ ಆ ವಿಷಯಭಾಗದ ಮೌಲ್ಯದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕು. ಭಾಷಣಕರ್ತನು ತನ್ನ ಕೇಳುಗರಲ್ಲಿ ಕೇವಲ ಕ್ರಿಯೆಗೈಯಬೇಕೆಂಬ ಬಯಕೆಯನ್ನು ಹುಟ್ಟಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬೇಕು. ಏನು ಮಾಡಬೇಕಾಗಿದೆ ಎಂಬುದನ್ನು ಅವನು ನಿರ್ದಿಷ್ಟವಾಗಿ ಹೇಳಬೇಕು, ಅದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ತೋರಿಸಿಕೊಡಬೇಕು ಮತ್ತು ಆ ರೀತಿಯಲ್ಲಿ ಕ್ರಿಯೆಗೈಯುವುದರ ಪ್ರಯೋಜನಗಳ ಕಡೆಗೆ ಗಮನ ಸೆಳೆಯಬೇಕು. ಅವನು ಹೀಗೆ ಹೇಳಬಹುದು: “ಈ ರೀತಿಯಲ್ಲಿ ನಮಗೆ ಈ ವಚನವು ಮಾರ್ಗದರ್ಶನವನ್ನು ನೀಡುತ್ತದೆ,” ಅಥವಾ “ಈ ರೀತಿಯಲ್ಲಿ ನಾವು ಈ ವಚನಗಳನ್ನು ಶುಶ್ರೂಷೆಯಲ್ಲಿ ಉಪಯೋಗಿಸಬಹುದು.” ಸ್ಥಳಿಕ ಪರಿಸ್ಥಿತಿಗಳ ಬಗ್ಗೆ ಅರಿವುಳ್ಳವರಾಗಿರುವ ಹಿರಿಯರು ಮತ್ತು ಶುಶ್ರೂಷಾ ಸೇವಕರು, ವಿಷಯಭಾಗದ ಪ್ರಾಯೋಗಿಕ ಅನ್ವಯವನ್ನು ಆದಷ್ಟುಮಟ್ಟಿಗೆ ನಿರ್ದಿಷ್ಟವಾಗಿ ತಿಳಿಸಲು ಪ್ರಯತ್ನಿಸಬೇಕು.
4 ಬೈಬಲಿನಲ್ಲಿರುವ ಉದಾಹರಣೆಗಳನ್ನು ಉಲ್ಲೇಖಿಸುವುದು ಪ್ರಾಯೋಗಿಕ ಅನ್ವಯವನ್ನು ಮಾಡಲು ವಿಶೇಷವಾಗಿ ಪರಿಣಾಮಕಾರಿಯಾಗಿರಬಲ್ಲದು. ಒಂದು ಶಾಸ್ತ್ರೀಯ ಉದಾಹರಣೆಯನ್ನು ತಿಳಿಸಿದ ಬಳಿಕ ಭಾಷಣಕರ್ತನು ಹೀಗೆ ಹೇಳಬಹುದು: “ನೀವು ಸಹ ಇದೇ ರೀತಿಯ ಪರಿಸ್ಥಿತಿಯಲ್ಲಿ ಇರಬಹುದು.” ಬೈಬಲಿನಲ್ಲಿರುವ ಉದಾಹರಣೆಗಳ ಬಗ್ಗೆ ಮಾಡಲ್ಪಡುವ ಯಾವುದೇ ಅನ್ವಯವು ಅದರ ಪೂರ್ವಾಪರಕ್ಕೆ, ಇಡೀ ಬೈಬಲಿಗೆ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಪ್ರಕಾಶಿಸಲ್ಪಟ್ಟಿರುವ ವಿಷಯಕ್ಕೆ ಹೊಂದಿಕೆಯಲ್ಲಿದೆ ಎಂಬುದನ್ನು ಭಾಷಣಕರ್ತನು ಖಚಿತಪಡಿಸಿಕೊಳ್ಳಬೇಕು.—ಮತ್ತಾ. 24:45.
5 ವಿವೇಕವು ಜ್ಞಾನ ಮತ್ತು ತಿಳಿವಳಿಕೆಯನ್ನು ಯಶಸ್ವಿಕರವಾಗಿ ಉಪಯೋಗಿಸುವ ಸಾಮರ್ಥ್ಯವಾಗಿದೆ. “ವಿವೇಕವೇ ಮುಖ್ಯವಾದದ್ದಾಗಿದೆ.” (ಜ್ಞಾನೋ. 4:7, NW) ಆದುದರಿಂದ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿನ ನಮ್ಮ ಅಧ್ಯಯನಗಳ ಮೂಲಕ ನಾವು ಪ್ರಾಯೋಗಿಕ ವಿವೇಕವನ್ನು ಪಡೆದುಕೊಳ್ಳುತ್ತಾ ಹೋಗುವಾಗ, ಇತರರಿಗೆ ಅದನ್ನು ತಿಳಿಸುವ ನಮ್ಮ ಸಾಮರ್ಥ್ಯವನ್ನು ಸಹ ಉತ್ತಮಗೊಳಿಸೋಣ.