ದೇವರ ವಾಕ್ಯವನ್ನು ನೀವು ಸಮರ್ಥಿಸುತ್ತೀರೊ?
1 ಬೈಬಲನ್ನು ಆಗಾಗ್ಗೆ ಅಪಖ್ಯಾತಿಗೆ ಒಳಪಡಿಸುವಂಥ ಲೋಕದಲ್ಲಿ ಸತ್ಕ್ರೈಸ್ತರಾದರೊ ದೇವರ ವಾಕ್ಯವನ್ನು ಹುರುಪಿನಿಂದ ಪ್ರಕಟಪಡಿಸುತ್ತಾರೆ. ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ’ ಎಂಬ ದೃಢನಿಶ್ಚಯವಿರುವ ನಾವು ಯೇಸುವಿನೊಂದಿಗೆ ಸಹಮತದಲ್ಲಿದ್ದೇವೆ. ಅವನು ಯೆಹೋವನಿಗೆ ಪ್ರಾರ್ಥನೆಯಲ್ಲಿ ಇದನ್ನು ದೃಢೀಕರಿಸುತ್ತಾ ಅಂದದ್ದು: “ನಿನ್ನ ವಾಕ್ಯವೇ ಸತ್ಯವು.” (2 ತಿಮೊ. 3:16; ಯೋಹಾ. 17:17) ನಾವು ದೇವರ ವಾಕ್ಯವನ್ನು ಹೇಗೆ ಪರಿಣಾಮಕಾರಿಯಾಗಿ ಸಮರ್ಥಿಸಬಹುದು?
2 ಶಾಸ್ತ್ರವಚನಗಳನ್ನು ಕಲಿಯಿರಿ: ದೇವರ ವಾಕ್ಯವನ್ನು ಯೇಸು ಶ್ರದ್ಧೆಯಿಂದ ಅಭ್ಯಾಸಮಾಡಿದನು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದು ಅವನಿಗೆ ತನ್ನ ಶುಶ್ರೂಷಾದ್ಯಂತ ಶಾಸ್ತ್ರವಚನಗಳ ಮೂಲಕ ಬೋಧಿಸುವಂತೆ ಸಾಧ್ಯಗೊಳಿಸಿತು. (ಲೂಕ 4:16-21; 24:44-46) ನಮ್ಮ ಸ್ಮರಣೆಯಲ್ಲಿ ಸಾಕಷ್ಟು ಶಾಸ್ತ್ರವಚನಗಳ ಒಂದು ಭಂಡಾರವನ್ನು ನಾವು ಹೇಗೆ ಕಟ್ಟಬಲ್ಲೆವು? ಬೈಬಲನ್ನು ಅನುದಿನ ಓದುವ ಮೂಲಕ ಮತ್ತು ಉತ್ತೇಜಕವೂ ಶುಶ್ರೂಷೆಯಲ್ಲಿ ಸಹಾಯಕವೂ ಆಗಿರುವ ಒಂದು ವಚನವನ್ನು ಧ್ಯಾನಿಸುವ ಮೂಲಕ ನಾವಿದನ್ನು ಮಾಡುತ್ತೇವೆ. ಕೂಟಗಳಿಗೆ ತಯಾರಿಸುವಾಗ ಉಲ್ಲೇಖಿತ ಶಾಸ್ತ್ರವಚನಗಳನ್ನು ನೇರವಾಗಿ ನಮ್ಮ ಬೈಬಲ್ನಿಂದ ತೆರೆದು ಓದಿ ಅದರ ಕುರಿತ ಒಂದು ಹೇಳಿಕೆಯನ್ನು ಕೊಡಲು ನಾವು ಸಿದ್ಧಪಡಿಸಬಹುದು. ಕೂಟಗಳಲ್ಲಿ ಭಾಷಣಕರ್ತನು ಶಾಸ್ತ್ರವಚನಗಳನ್ನು ಓದುವಾಗ ನಾವದನ್ನು ನಮ್ಮ ಬೈಬಲ್ನಲ್ಲಿ ಅನುಸರಿಸಬೇಕು. ಬೈಬಲ್ ವಚನಗಳನ್ನು ಕಲಿಯುವುದು ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವಂತೆ’ ನಮ್ಮನ್ನು ಸಜ್ಜುಗೊಳಿಸುತ್ತದೆ.—2 ತಿಮೊ. 2:15.
3 ಬೈಬಲ್ ಮಾತಾಡಲಿ: ಶುಶ್ರೂಷೆಯಲ್ಲಿ ಭಾಗವಹಿಸುವಾಗ ಬೈಬಲ್ ಮಾತಾಡುವಂತೆ ನಾವು ಬಿಡಬೇಕು. ಉದಾಹರಣೆಗೆ, ಪರಿಸ್ಥಿತಿ ಅನುಮತಿಸುವಲ್ಲಿ ಮನೆಯವನೊಂದಿಗೆ ಒಂದು ಶಾಸ್ತ್ರವಚನವನ್ನು ಓದಿ ಚರ್ಚಿಸಲು ನಾವು ಪ್ರಯತ್ನಿಸಬೇಕು. ಅವನೊಂದು ಪ್ರಶ್ನೆ ಕೇಳಿದಾಗ ಅಥವಾ ಆಕ್ಷೇಪ ಒಡ್ಡಿದಾಗ ಬೈಬಲಿನ ಮೂಲಕ ಉತ್ತರ ಕೊಡುವುದು ಅತ್ಯುತ್ತಮ. ಮನೆಯವನು ಕಾರ್ಯನಿರತನಾಗಿರುವಾಗಲೂ ಬೈಬಲ್ನ ವಿಚಾರವೊಂದನ್ನು ನಾವು ಎತ್ತಿ ಹೇಳುತ್ತಾ, “ಹೋಗುವ ಮುಂಚೆ ಈ ಒಂದು ವಚನವನ್ನು ನಿಮಗೆ ತೋರಿಸಲೋ?” ಎಂದು ಕೇಳಬಹುದು. ಸಾಧ್ಯವಾದಲ್ಲೆಲ್ಲ, ಬೈಬಲ್ನಿಂದಲೇ ಓದಿರಿ. ನೀವು ಓದುವಾಗ ಮನೆಯವನು ಸಹ ಅದನ್ನು ಹಿಂಬಾಲಿಸಲಿ. ಆದರೆ ಕೆಲವೊಮ್ಮೆ ಅಹಿತಕರ ಪರಿಸ್ಥಿತಿ ಏಳಬಹುದು. ಆಗ ಬ್ಯಾಗ್ನಿಂದ ಬೈಬಲನ್ನು ಹೊರತೆಗೆದು ಶಾಸ್ತ್ರವಚನಗಳನ್ನು ಓದುವ ಬದಲಿಗೆ ಬಾಯಿಮಾತಿನಲ್ಲೇ ಹೇಳುವುದು ಉತ್ತಮ.
4 ತ್ರಯೈಕ್ಯದ ಬೋಧನೆ ತಪ್ಪೆಂದು ತೋರಿಸಲು ಮನೆಯವನೊಬ್ಬನಿಗೆ ಶಾಸ್ತ್ರ ವಚನಗಳನ್ನು ತೋರಿಸಿದಾಗ ಅವನು ಉದ್ಗರಿಸಿದ್ದು: “ಹುಟ್ಟಿನಿಂದಲೂ ಚರ್ಚಿಗೆ ಹೋಗುತ್ತಾ ಇದ್ದೇನೆ ಆದರೆ ಬೈಬಲ್ ಹೀಗೆ ಹೇಳುತ್ತದೆಂದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ!” ಬೈಬಲ್ ಅಧ್ಯಯನವನ್ನು ಅವನು ಸಂತೋಷದಿಂದ ಸ್ವೀಕರಿಸಿದನು. ಕುರಿಗಳು ತನ್ನ ಸ್ವರಕ್ಕೆ ಕಿವಿಗೊಡುವವೆಂದು ಯೇಸು ಸಹ ಹೇಳಿದ್ದನು. (ಯೋಹಾ. 10:16, 27) ಪ್ರಾಮಾಣಿಕ ಹೃದಯದ ಜನರು ಸತ್ಯವನ್ನು ಗುರುತಿಸುವ ಅತ್ಯುತ್ತಮ ವಿಧವು ಅದನ್ನು ಬೈಬಲ್ನಿಂದ ನೇರವಾಗಿ ಓದುವ ಮೂಲಕವೇ ಆಗಿದೆ. ಆದುದರಿಂದ ನಾವು ದೇವರ ಸತ್ಯವಾಕ್ಯದ ಸಮರ್ಥಕರಾಗಿರೋಣ!