“ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು”
1 ಕ್ರೈಸ್ತರೆಲ್ಲರು ಕಷ್ಟಗಳನ್ನು ಸಹಿಸಿಕೊಳ್ಳಲೇ ಬೇಕಾಗಿದೆ. (2 ತಿಮೊ. 3:12) ಸಂಕಷ್ಟಗಳು ಅನೇಕ ರೂಪರೀತಿಗಳಲ್ಲಿ ಬರಬಹುದು. ಅವು ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು, ಪ್ರಲೋಭನೆ, ಹಿಂಸೆ ಅಥವಾ ಬೇರೆ ಅನೇಕ ವಿಧಗಳಲ್ಲಿ ಬರಬಲ್ಲವು. ಸೈತಾನನಿಂದ ನಮ್ಮ ಮೇಲೆ ಹೇರಲ್ಪಡುವ ಕಷ್ಟಗಳಾದರೋ ನಮ್ಮನ್ನು ನಿಧಾನಿಸುವಂತೆ, ನಮ್ಮ ಕ್ರೈಸ್ತ ಶುಶ್ರೂಷೆಯನ್ನು ನಾವು ಅಲಕ್ಷಿಸುವಂತೆ ಮತ್ತು ದೇವರ ಸೇವೆಯನ್ನು ನಾವು ನಿಲ್ಲಿಸುವಂತೆ ಸಹ ರಚಿಸಲ್ಪಟ್ಟಿವೆ. (ಯೋಬ 1:9-11) ಹೀಗಿರಲಾಗಿ ಕಷ್ಟಗಳನ್ನು ಸಹಿಸಿಕೊಳ್ಳುವುದು ಸಂತೋಷಕ್ಕೆ ನಡಿಸುವುದು ಹೇಗೆ?—2 ಪೇತ್ರ 2:9.
2 ಕಷ್ಟಗಳಿಗಾಗಿ ನಿಮ್ಮನ್ನು ಸಿದ್ಧಗೊಳಿಸಿರಿ: ಯೆಹೋವನು ತನ್ನ ಸತ್ಯವಾಕ್ಯವನ್ನು ನಮಗೆ ಕೊಟ್ಟಿರುತ್ತಾನೆ. ಅದರಲ್ಲಿ ಯೇಸುವಿನ ಜೀವನ ವೃತ್ತಾಂತ ಮತ್ತು ಬೋಧನೆಗಳೂ ಸೇರಿವೆ. ಯೇಸುವಿನ ಮಾತುಗಳನ್ನು ಆಲಿಸುವ ಮೂಲಕ ಮತ್ತು ಅವುಗಳನ್ನು ಕೈಕೊಂಡು ನಡೆಯುವ ಮೂಲಕ ನಾವೊಂದು ದೃಢವಾದ ಅಸ್ತಿವಾರವನ್ನು ಹಾಕುತ್ತೇವೆ ಮತ್ತು ಹೀಗೆ ಸಂಕಷ್ಟಗಳಿಗಾಗಿ ನಮ್ಮನ್ನು ಸಿದ್ಧಗೊಳಿಸುತ್ತೇವೆ. (ಲೂಕ 6:47-49) ಬೇರೆ ಸಹಾಯ ಮೂಲಗಳಿಂದ ಅಂದರೆ ಸಭೆಯಲ್ಲಿರುವ ನಮ್ಮ ಕ್ರೈಸ್ತ ಸಹೋದರ ಸಹೋದರಿಯರಿಂದ, ಸಭಾಕೂಟಗಳಿಂದ ಮತ್ತು ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಮೂಲಕ ಸಿಗುವ ಬೈಬಲಾಧರಿತ ಪ್ರಕಾಶನಗಳಿಂದಲೂ ನಾವು ಬಲವನ್ನು ಪಡೆದುಕೊಳ್ಳುತ್ತೇವೆ. ಅದಲ್ಲದೆ, ದೇವರ ವರವಾದ ಪ್ರಾರ್ಥನೆಯ ಉಪಯೋಗವನ್ನು ನಾವು ಯಥೇಷ್ಟವಾಗಿ ಮಾಡುತ್ತಿರುತ್ತೇವೆ.—ಮತ್ತಾ. 6:13.
3 ಯೆಹೋವನು ಒಂದು ನಿರೀಕ್ಷೆಯನ್ನು ಸಹ ನಮಗೆ ಕೊಟ್ಟಿರುತ್ತಾನೆ. ನಾವು ಯೆಹೋವನ ವಾಗ್ದಾನಗಳಲ್ಲಿ ಬಲವಾದ ನಂಬಿಕೆಯನ್ನು ಕಟ್ಟುವಾಗ ನಮ್ಮ ನಿರೀಕ್ಷೆಯು “ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ” ಆಗಿ ಪರಿಣಮಿಸುತ್ತದೆ. (ಇಬ್ರಿ. 6:19) ಬೈಬಲಿನ ಕಾಲದಲ್ಲಿ ಹಡಗುಗಳೆಂದೂ ಒಳ್ಳೆಯ ಹವಾಮಾನದಲ್ಲೂ ಲಂಗರದ ಹೊರತಾಗಿ ಬಂದರನ್ನು ಬಿಡುತ್ತಿರಲಿಲ್ಲ. ಥಟ್ಟನೆ ಒಂದು ಬಿರುಗಾಳಿ ಎದ್ದಲ್ಲಿ ಲಂಗರವನ್ನು ಹಾಕುವುದಾದರೆ ಹಡಗವು ಬಂಡೆತುಂಬಿದ ತೀರಕ್ಕೆ ಹೋಗಿ ಅಪ್ಪಳಿಸದಂತೆ ಅದು ತಡೆಯಬಲ್ಲದು. ತದ್ರೀತಿಯಲ್ಲಿ ನಾವೀಗಲೇ ದೇವರ ವಾಗ್ದಾನಗಳಲ್ಲಿ ನಂಬಿಕೆಯನ್ನು ಕಟ್ಟುವುದು ಸಂಕಷ್ಟಗಳ ಬಿರುಗಾಳಿಗಳು ಏಳುವಾಗ ನಮ್ಮನ್ನು ಸ್ಥಿರಗೊಳಿಸುವುದು. ಕಷ್ಟಸಂಕಟಗಳು ಇದ್ದಕ್ಕಿದ್ದಂತೆ ಹಠಾತ್ತನೆ ಏಳಬಹುದು. ಲುಸ್ತ್ರದಲ್ಲಿ ಪೌಲ ಮತ್ತು ಬಾರ್ನಬರ ಸಾರುವ ಚಟುವಟಿಕೆಗೆ ಆರಂಭದಲ್ಲಿ ಜನರು ಒಳ್ಳೆಯದಾಗಿ ಪ್ರತಿಕ್ರಿಯಿಸಿದರೂ, ಯೆಹೂದಿ ವಿರೋಧಿಗಳು ಆಗಮಿಸಿದಾಗ ಪರಿಸ್ಥಿತಿಯು ಥಟ್ಟನೇ ಬದಲಾಯಿತು.—ಅ. ಕೃ. 14:8-19.
4 ಸಹನೆಯು ಸಂತೋಷವನ್ನು ಫಲಿಸುತ್ತದೆ: ವಿರೋಧದ ಮಧ್ಯೆಯೂ ಸಾರುವುದರಲ್ಲಿ ದೃಢರಾಗಿ ಉಳಿಯುವುದು ನಮಗೆ ಮನಶ್ಶಾಂತಿಯನ್ನು ಕೊಡುತ್ತದೆ. ಕ್ರಿಸ್ತನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಳ್ಳುವಾಗ ನಾವು ಉಲ್ಲಾಸಿಸುತ್ತೇವೆ. (ಅ. ಕೃ. 5:40, 41) ಕಷ್ಟಗಳನ್ನು ಸಹಿಸಿಕೊಳ್ಳುವುದು ನಮಗೆ ದೀನತೆ, ವಿಧೇಯತೆ ಮತ್ತು ತಾಳ್ಮೆಯೆಂಬ ಗುಣಗಳನ್ನು ಹೆಚ್ಚು ಪೂರ್ಣವಾಗಿ ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ. (ಧರ್ಮೋ. 8:16; ಇಬ್ರಿ. 5:8; ಯಾಕೋ. 1:2, 3) ಅದು ನಮಗೆ ಯೆಹೋವನ ಮೇಲೆ ಅವಲಂಬಿಸುವಂತೆ, ಆತನ ವಾಗ್ದಾನಗಳಲ್ಲಿ ಭರವಸವಿಡುವಂತೆ ಮತ್ತು ಆತನನ್ನು ಆಶ್ರಯಿಸುವಂತೆ ಕಲಿಸುತ್ತದೆ.—ಜ್ಞಾನೋ. 18:10.
5 ಕಷ್ಟಗಳು ಸ್ವಲ್ಪಕಾಲ ಮಾತ್ರ ಇರುವವುಗಳು ಎಂದು ನಾವು ಬಲ್ಲೆವು. (2 ಕೊರಿಂ. 4:17, 18) ಯೆಹೋವನ ಮೇಲೆ ನಮಗಿರುವ ಪ್ರೀತಿಯ ಆಳವನ್ನು ಪ್ರದರ್ಶಿಸಲು ಈ ಕಷ್ಟಗಳು ನಮಗೆ ಅವಕಾಶಗಳನ್ನು ಒದಗಿಸಿಕೊಡುತ್ತವೆ. ಅವುಗಳನ್ನು ಸಹಿಸಿಕೊಳ್ಳುವ ಮೂಲಕ ಸೈತಾನನ ಸುಳ್ಳಾರೋಪಗಳಿಗೆ ಸರಿಯಾದ ಉತ್ತರವನ್ನು ನಾವು ಕೊಡಬಲ್ಲೆವು. ಆದುದರಿಂದ ನಾವು ನಿರಾಶೆಹೊಂದಿ ಬಿಟ್ಟು ಕೊಡುವ ಜನರಲ್ಲ! ಯಾಕೋಬನಂದದ್ದು: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು.”—ಯಾಕೋ. 1:12.