ತಾಳ್ಮೆಗೆ ಪ್ರತಿಫಲ ಸಿಗುತ್ತದೆ
1 ನಿಮ್ಮ ತಾಳ್ಮೆಯಿಂದ, ಅಥವಾ “ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.” (ಲೂಕ 21:19) ‘ಯುಗದ ಸಮಾಪ್ತಿಯ’ ಕುರಿತಾದ ಯೇಸುವಿನ ಪ್ರವಾದನೆಯ ಭಾಗವಾಗಿರುವ ಈ ಮಾತುಗಳು, ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಅನೇಕ ಪರೀಕ್ಷೆಗಳನ್ನು ಎದುರಿಸಲು ತಯಾರಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದರೆ ಯೆಹೋವನು ಕೊಡುವ ಶಕ್ತಿಯಿಂದಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ ‘ಕಡೇ ವರೆಗೂ ತಾಳಿಕೊಳ್ಳ’ಸಾಧ್ಯವಿದೆ ಮತ್ತು ‘ರಕ್ಷಣೆಹೊಂದ’ಸಾಧ್ಯವಿದೆ.—ಮತ್ತಾ. 24:3, 13; ಫಿಲಿ. 4:13.
2 ಹಿಂಸೆ, ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಆರ್ಥಿಕ ಬಿಕ್ಕಟ್ಟುಗಳು, ಮತ್ತು ಭಾವನಾತ್ಮಕ ಖಿನ್ನತೆಯು ಪ್ರತಿ ದಿನವನ್ನು ಪಂಥಾಹ್ವಾನದಾಯಕವಾಗಿ ಮಾಡಸಾಧ್ಯವಿದೆ. ಆದರೂ, ನಾವು ಯೆಹೋವನಿಗೆ ತೋರಿಸುವ ಸಮಗ್ರತೆಯನ್ನು ಮುರಿಯಲು ಸೈತಾನನು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ಎಂದಿಗೂ ಮರೆಯಬಾರದು. ನಾವು ನಮ್ಮ ತಂದೆಗೆ ನಿಷ್ಠಾವಂತರಾಗಿ ಉಳಿಯುವ ಪ್ರತಿಯೊಂದು ದಿನವು, ದೂರುವವನ ಸವಾಲಿಗೆ ಸರಿಯಾದ ಉತ್ತರವನ್ನು ಕೊಡಲು ನಾವು ಆತನಿಗೆ ಸಹಾಯಮಾಡಿರುವ ಮತ್ತೊಂದು ದಿನವಾಗಿದೆ. ನಾವು ಪರೀಕ್ಷೆಗಳನ್ನು ಎದುರಿಸುತ್ತಿರುವಾಗ ಸುರಿಸುವ “ಕಣ್ಣೀರು” ಮರೆತುಬಿಡಲ್ಪಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಪ್ರತಿಫಲದಾಯಕವಾಗಿದೆ! ಅವು ಯೆಹೋವನಿಗೆ ಬೆಲೆಯುಳ್ಳದ್ದಾಗಿವೆ, ಮತ್ತು ನಮ್ಮ ಸಮಗ್ರತೆಯು ಆತನ ಮನಸ್ಸನ್ನು ಸಂತೋಷಪಡಿಸುತ್ತದೆ.—ಕೀರ್ತ. 56:8; ಜ್ಞಾನೋ. 27:11.
3 ಪರೀಕ್ಷೆಗಳಿಂದ ಪರಿಷ್ಕರಿಸಲ್ಪಡುವುದು: ಕಷ್ಟಬಾಧೆಗಳು ನಮ್ಮ ನಂಬಿಕೆಯಲ್ಲಿರುವ ಒಂದು ಬಲಹೀನತೆಯನ್ನು ಅಥವಾ ಅಹಂಭಾವ ಇಲ್ಲವೆ ಅಸಹಿಷ್ಣುತೆಗಳಂಥ ವ್ಯಕ್ತಿತ್ವ ಲೋಪಗಳನ್ನು ತೋರಿಸಿಕೊಡಬಹುದು. ಅಶಾಸ್ತ್ರೀಯ ವಿಧಾನಗಳ ಮೂಲಕ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳಲು ಅಥವಾ ಅವುಗಳನ್ನು ಕೊನೆಗೊಳಿಸಲು ಪ್ರಯತ್ನಿಸುವ ಬದಲು, ನಾವು ದೇವರ ವಾಕ್ಯದ ಬುದ್ಧಿವಾದಕ್ಕೆ ಕಿವಿಗೊಡಬೇಕು. ಅದು, “ತಾಳ್ಮೆಯು ಸಿದ್ಧಿಗೆ ಬರಲಿ” ಎಂದು ಹೇಳುತ್ತದೆ. ಏಕೆ? ಏಕೆಂದರೆ ಪರೀಕ್ಷೆಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವುದು, ನಾವು “ಶಿಕ್ಷಿತರೂ ಸರ್ವಸುಗುಣವುಳ್ಳವರೂ” ಆಗುವಂತೆ ಸಹಾಯಮಾಡುವುದು. (ಯಾಕೋ. 1:2-4) ತಾಳ್ಮೆಯು ನ್ಯಾಯಸಮ್ಮತತೆ, ಪರಾನುಭೂತಿ, ಮತ್ತು ಕರುಣೆಯಂಥ ಅಮೂಲ್ಯವಾದ ಗುಣಗಳನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡಸಾಧ್ಯವಿದೆ.—ರೋಮಾ. 12:15.
4 ಶೋಧಿತ ನಂಬಿಕೆ: ನಾವು ಪರೀಕ್ಷೆಗಳನ್ನು ತಾಳಿಕೊಳ್ಳುವಾಗ, ದೇವರ ದೃಷ್ಟಿಯಲ್ಲಿ ತುಂಬ ಬೆಲೆಬಾಳುವಂಥದ್ದಾಗಿರುವ ಶೋಧಿತ ನಂಬಿಕೆಯನ್ನು ನಾವು ಪಡೆದುಕೊಳ್ಳುತ್ತೇವೆ. (1 ಪೇತ್ರ 1:6, 7) ಇಂತಹ ನಂಬಿಕೆಯು ಭಾವೀ ಪರೀಕ್ಷೆಗಳ ಸಮಯದಲ್ಲಿ ಸ್ಥಿರಚಿತ್ತರಾಗಿ ಉಳಿಯುವಂತೆ ನಮ್ಮನ್ನು ಸನ್ನದ್ಧಗೊಳಿಸುತ್ತದೆ. ಮಾತ್ರವಲ್ಲದೆ, ನಾವು ದೇವರ ಸಮ್ಮತಿಯನ್ನು ಗ್ರಹಿಸಿಕೊಳ್ಳಬಲ್ಲೆವು, ಮತ್ತು ಇದು ನಮ್ಮ ನಿರೀಕ್ಷೆಯನ್ನು ಬಲಪಡಿಸಿ, ಅದನ್ನು ನಮಗೆ ಹೆಚ್ಚು ನೈಜವಾದದ್ದಾಗಿ ಮಾಡುತ್ತದೆ.—ರೋಮಾ. 5:3-5.
5 ತಾಳ್ಮೆಗೆ ಸಿಗುವ ಅತ್ಯುನ್ನತ ಪ್ರತಿಫಲವನ್ನು ಯಾಕೋಬ 1:12 ಎತ್ತಿತೋರಿಸುತ್ತದೆ. ಅದು ಹೇಳುವುದು: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು.” ಆದುದರಿಂದ, ಯೆಹೋವನು “ತನ್ನನ್ನು ಪ್ರೀತಿಸುವವರಿಗೆ” ಸಮೃದ್ಧ ಆಶೀರ್ವಾದಗಳನ್ನು ಕೊಡುವನು ಎಂಬ ದೃಢಭರವಸೆಯೊಂದಿಗೆ ನಾವು ಆತನಿಗೆ ತೋರಿಸುವ ಭಕ್ತಿಯಲ್ಲಿ ಸ್ಥಿರಚಿತ್ತರಾಗಿ ಉಳಿಯೋಣ.