ನಮ್ಮ ರಾಜ್ಯ-ನಿರೀಕ್ಷೆಯನ್ನು ನಾವು ಹಂಚಿಕೊಳ್ಳುತ್ತೇವೆ
1 ಕಠಿನವಾದ ಈ ಕಡೇ ದಿವಸಗಳಲ್ಲಿ ಲೋಕದಲ್ಲಿರುವ ಅನೇಕರಿಗೆ ಯಾವ ನಿರೀಕ್ಷೆಯೂ ಇಲ್ಲ. (ಎಫೆ. 2:12) ಇನ್ನಿತರರು ಬುದ್ಧಿಹೀನರಂತೆ ಪ್ರಾಪಂಚಿಕ ಐಶ್ವರ್ಯ, ಮಾನವ ಅಧಿಕಾರಿಗಳು, ಆಧುನಿಕ ವಿಜ್ಞಾನ ಮುಂತಾದವುಗಳಲ್ಲಿ ಭರವಸೆಯನ್ನಿಟ್ಟಿದ್ದಾರೆ. ಭವಿಷ್ಯಕ್ಕಾಗಿ ನಿಜವಾದ ನಿರೀಕ್ಷೆಯನ್ನು ಹೊಂದಿರುವ ನಾವು ಎಷ್ಟೊಂದು ಸಂತೋಷಿತರಾಗಿದ್ದೇವೆ! “ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ ಆಗಿದೆ.”—ಇಬ್ರಿ. 6:19.
2 ದೇವರ ರಾಜ್ಯಾಡಳಿತದ ಕೆಳಗೆ ಭೂಮಿಯು ಪರದೈಸಾಗಿ ಮಾರ್ಪಡಲಿರುವುದು. ಮೃತಪಟ್ಟಿರುವ ಪ್ರಿಯ ಜನರ ಪುನರುತ್ಥಾನವಾಗಲಿದೆ. (ಅ. ಕೃ. 24:15) ಬಡತನ, ಅನ್ಯಾಯ, ಅಸ್ವಸ್ಥತೆ, ವೃದ್ಧಾಪ್ಯ ಮತ್ತು ಮರಣವು ಇಲ್ಲದೆ ಹೋಗುವುದು. (ಕೀರ್ತ. 9:18; ಮತ್ತಾ. 12:20, 21; ಪ್ರಕ. 21:3, 4) ಬೇಗನೆ ನೆರವೇರಲಿರುವ ಯೆಹೋವನ ವಾಗ್ದಾನಗಳಲ್ಲಿ ಇವು ಕೆಲವಾಗಿವೆ. ನಮ್ಮ ನಿರೀಕ್ಷೆಯ ಯಾವ ಅಂಶವನ್ನು ನೀವು ವಿಶೇಷವಾಗಿ ಎದುರುನೋಡುತ್ತೀರಿ?
3 ಶುಭವರ್ತಮಾನವನ್ನು ಸಾರಿರಿ: ರಾಜ್ಯದ ನಿರೀಕ್ಷೆಯನ್ನು ನಾವು ನಮ್ಮಲ್ಲಿಯೇ ಇಟ್ಟುಕೊಂಡಿರಬಾರದು. ದೇವರ ಮತ್ತು ನೆರೆಯವರ ಮೇಲಣ ನಮ್ಮ ಪ್ರೀತಿಯು ಯೇಸುವನ್ನು ಅನುಕರಿಸುತ್ತಾ “ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ . . . ಸೆರೆಯವರಿಗೆ ಬಿಡುಗಡೆಯಾಗುವದನ್ನು ಮತ್ತು ಕುರುಡರಿಗೆ ಕಣ್ಣು ಬರುವದನ್ನು ಪ್ರಸಿದ್ಧಿಪಡಿಸುವದಕ್ಕೂ ಮನಮುರಿದವರನ್ನು ಬಿಡಿಸಿ ಕಳುಹಿಸುವದಕ್ಕೂ” ನಮ್ಮನ್ನು ಪ್ರಚೋದಿಸುತ್ತದೆ. (ಲೂಕ 4:18) ಅಪೊಸ್ತಲ ಪೌಲನು ಮಾರುಕಟ್ಟೆಯಲ್ಲಿ ಮತ್ತು ಜನರು ಸಿಗುತ್ತಿದ್ದಲ್ಲೆಲ್ಲಾ ಶುಭವರ್ತಮಾನವನ್ನು ಹಂಚಿಕೊಂಡನು. ಆತನು ಶುಶ್ರೂಷೆಯಲ್ಲಿ ಅತ್ಯಾಸಕ್ತಿಯಿಂದ ನಿರತನಾದನು. (ಅ. ಕೃ. 18:5) ಶುಶ್ರೂಷೆಯಲ್ಲಿ ಹುರುಪಿನಿಂದ ಪಾಲ್ಗೊಳ್ಳುವುದರಲ್ಲಿ ಆತನ ಮಾದರಿಯನ್ನು ಅನುಕರಿಸುವುದು “ಪ್ರಪಂಚದ ಚಿಂತೆಗಳೂ ಐಶ್ವರ್ಯದಿಂದುಂಟಾಗುವ ಮೋಸವೂ” ನಮ್ಮ ಕ್ರೈಸ್ತ ನಿರೀಕ್ಷೆಯನ್ನು ಮಂದಗೊಳಿಸದಂತೆ ತಡೆಯುತ್ತದೆ.—ಮಾರ್ಕ 4:18, 19.
4 ನಾವು ಭೇಟಿಯಾಗುವಂಥ ಜನರು ಔದಾಸೀನ್ಯ ಮನೋಭಾವ ತೋರಿಸುವಾಗ, ರಾಜ್ಯ ಸಂದೇಶದಲ್ಲಿ ಕೊಂಚವೇ ಆಸಕ್ತಿ ತೋರಿಸುವಾಗ, ಇಲ್ಲವೇ ನೇರವಾಗಿ ವಿರೋಧಿಸುವಾಗ ನಮ್ಮ ರಾಜ್ಯ-ನಿರೀಕ್ಷೆಯು ಮಾಸಿಹೋಗುವುದಿಲ್ಲ. ‘ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸುತ್ತೇವೆ.’ (ಇಬ್ರಿ. 10:23) ನಾವಂತೂ ‘ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವರಲ್ಲ.’ (ರೋಮಾ. 1:15) ಈ ನಮ್ಮ ನಿಶ್ಚಿತಾಭಿಪ್ರಾಯ ಮತ್ತು ಸತತ ಪ್ರಯತ್ನವು ಕ್ರಮೇಣ ಕೆಲವರಾದರೂ ಆಲಿಸುವಂತೆ ಮಾಡಬಹುದು.
5 ಕೆಡುತ್ತಿರುವ ಲೋಕದ ಪರಿಸ್ಥಿತಿಗಳು ಬೈಬಲ್ ಪ್ರವಾದನೆಗಳನ್ನು ನೆರವೇರಿಸುತ್ತಿರುವುದರ ಕಡೆಗೆ ಜನರ ಗಮನವನ್ನು ನಾವು ಯೋಗ್ಯವಾಗಿಯೇ ಸೆಳೆಯುವುದಾದರೂ, ನಾವು ನಾಶನವನ್ನು ಮಾತ್ರವೇ ಸಾರುವವರಲ್ಲ. ಅದಕ್ಕೆ ಬದಲಾಗಿ ನಮ್ಮ ಶುಶ್ರೂಷೆಯು ರಾಜ್ಯ-ನಿರೀಕ್ಷೆಯಾದ ದೇವರ ರಾಜ್ಯದ ಶುಭವಾರ್ತೆಯ ಮೇಲೆ ಕೇಂದ್ರಿತವಾಗಿದೆ. ನಮ್ಮ ‘ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವಂತೆ’ ನಾವು ಈ ಶುಭವರ್ತಮಾನವನ್ನು ನಿಶ್ಚಿತಾಭಿಪ್ರಾಯ ಮತ್ತು ಹುರುಪಿನಿಂದ ಸಾರೋಣ.—ಇಬ್ರಿ. 6:11.