ಬಲವಾದ ನಂಬಿಕೆಯ ರುಜುವಾತು!
1. ಕ್ಷೋಭೆಗೊಳಿಸುವಂಥ ಯಾವ ಘಟನೆಗಳನ್ನು ಯೇಸು ಮುಂತಿಳಿಸಿದನು?
1 ಯೇಸು ತನ್ನ ಸಾನ್ನಿಧ್ಯ ಮತ್ತು ಯುಗದ ಸಮಾಪ್ತಿಯ ಕುರಿತು ಮಾತಾಡುತ್ತಿದ್ದಾಗ ಅಪೊಸ್ತಲರು ಶ್ರದ್ಧೆಯಿಂದ ಕಿವಿಗೊಡುತ್ತಿದ್ದರು. ಯುದ್ಧಗಳು, ಆಹಾರದ ಅಭಾವ, ಭೂಕಂಪಗಳು, ಸಾಂಕ್ರಾಮಿಕ ರೋಗಗಳಂಥ ಕ್ಷೋಭೆಗೊಳಿಸುವ ಘಟನೆಗಳಿಗೆ ಮನುಷ್ಯರು ತುತ್ತಾಗಲಿದ್ದರು. ನಂತರ ಯೇಸು, ತನ್ನ ಹಿಂಬಾಲಕರು ಹಗೆ ಹಾಗೂ ಹಿಂಸೆಗೆ ಒಳಗಾಗುವರು, ಕೊಲ್ಲಲ್ಪಡುವರು, ಅಲ್ಲದೆ ಸುಳ್ಳು ಪ್ರವಾದಿಗಳು ಕಾಣಿಸಿಕೊಂಡು ಅನೇಕರನ್ನು ಮೋಸಗೊಳಿಸುವರು ಮತ್ತು ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು ಎಂದು ಹೇಳಿದನು.
2. ಸುವಾರ್ತೆಯು ಲೋಕವ್ಯಾಪಕವಾಗಿ ಸಾರಲ್ಪಡುತ್ತಿರುವುದು ಅದ್ಭುತಕರ ಸಂಗತಿಯೇಕೆ?
2 ಆ ಹಿನ್ನೆಲೆಯಲ್ಲಿ ದೇವರ ರಾಜ್ಯದ ಸುವಾರ್ತೆಯು ಸರ್ವಲೋಕದಲ್ಲಿ ಸಾರಲಾಗುವುದು ಎಂದು ಯೇಸು ಹೇಳಿದ ಮಾತು ಅಪೊಸ್ತಲರನ್ನು ಚಕಿತಗೊಳಿಸಿದ್ದಿರಬಹುದು. (ಮತ್ತಾ. 24:3-14) ಆ ರೋಮಾಂಚಕ ಪ್ರವಾದನೆಯ ಅದ್ಭುತ ನೆರವೇರಿಕೆಯನ್ನು ನಾವಿಂದು ನೋಡಸಾಧ್ಯವಿದೆ. ಇಂದಿನ ಸಮಯಗಳು ಅಪಾಯಕರವಾಗಿರುವುದಾದರೂ ಯೆಹೋವನ ಸಾಕ್ಷಿಗಳು ಸುವಾರ್ತೆಯನ್ನು ಹುರುಪಿನಿಂದ ಘೋಷಿಸುತ್ತಿದ್ದಾರೆ. ಲೋಕದ ಪ್ರೀತಿಯು ತಣ್ಣಗಾಗುತ್ತ ಇದ್ದರೂ ನಮ್ಮ ಪ್ರೀತಿ ಹಿಂದೆಂದಿಗಿಂತಲೂ ಹೆಚ್ಚೆಚ್ಚಾಗುತ್ತಿದೆ. ನಮ್ಮನ್ನು “ಎಲ್ಲಾ ಜನಾಂಗಗಳವರು” ಹಗೆಮಾಡುವುದಾದರೂ ನಾವಾದರೋ ಕಾರ್ಯತಃ ಪ್ರತಿಯೊಂದು ಜನಾಂಗ ಅಥವಾ ದೇಶದಲ್ಲಿ ಸಾರುತ್ತೇವೆ.
3. ಲೋಕವ್ಯಾಪಕ ವರದಿಯಲ್ಲಿ ಯಾವ ಅಂಕಿಅಂಶಗಳು ನಿಮಗೆ ಉತ್ತೇಜನದಾಯಕವಾಗಿವೆ?
3 ಯೆಹೋವನ ಸಾಕ್ಷಿಗಳ ಕಳೆದ ಸೇವಾ ವರ್ಷದ ಚಟುವಟಿಕೆಯನ್ನು 3-6ನೇ ಪುಟಗಳಲ್ಲಿರುವ ತಃಖ್ತೆಯಲ್ಲಿ ಪುನಃ ಪರಿಶೀಲಿಸುವುದು ಎಷ್ಟೊಂದು ಉತ್ತೇಜನದಾಯಕ! ಅನುಕ್ರಮವಾಗಿ 16 ವರ್ಷಗಳಿಂದ ನೂರು ಕೋಟಿಗಿಂತ ಹೆಚ್ಚು ತಾಸುಗಳನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ವ್ಯಯಿಸಲಾಗುತ್ತಿದೆ. ಬಲವಾದ ನಂಬಿಕೆಯ ಎಂಥ ಉತ್ತಮ ರುಜುವಾತಿದು! ಪಯನೀಯರರ ಸಂಖ್ಯೆಯಲ್ಲಿ 5.8 ಪ್ರತಿಶತ, ಪ್ರಚಾರಕರಲ್ಲಿ 3.1 ಪ್ರತಿಶತ ಮತ್ತು ಬೈಬಲ್ ಅಧ್ಯಯನಗಳಲ್ಲಿ 4.4 ಪ್ರತಿಶತ ಅಭಿವೃದ್ಧಿಯಾಗಿದೆ. ದೀಕ್ಷಾಸ್ನಾನದ ಸಂಖ್ಯೆಯಲ್ಲಿ ಕಳೆದ ಸೇವಾ ವರ್ಷಕ್ಕಿಂತ 20.1 ಪ್ರತಿಶತ ಹೆಚ್ಚಳವಾಗಿದೆ. ಹೆಚ್ಚುಕಡಿಮೆ ಎಪ್ಪತ್ತು ಲಕ್ಷ ಮಂದಿ—ಮಾನವ ಇತಿಹಾಸದಲ್ಲೇ ಅತಿ ಹೆಚ್ಚು ಜನರು ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸುತ್ತಿರುವುದನ್ನು ನೋಡುವುದು ರೋಮಾಂಚಕಾರಿಯಾಗಿದೆ! ತಃಖ್ತೆಯನ್ನು ಪರೀಕ್ಷಿಸುವಾಗ ನಿರ್ದಿಷ್ಟವಾಗಿ ನಿಮ್ಮನ್ನು ಉತ್ತೇಜಿಸುವಂಥ ಯಾವ ಅಂಶವನ್ನು ಕಂಡುಕೊಂಡಿದ್ದೀರಿ?
4. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆಯಲಿಕ್ಕೋಸ್ಕರ ಯಾವ ಸಮಸ್ಯೆಗಳನ್ನು ಜಯಿಸಿದನು?
4 ಇವು ಉತ್ತೇಜನದಾಯಕ ಅಂಕಿಅಂಶಗಳು ಆಗಿರುವುದಾದರೂ, ನಂಬಿಕೆಯನ್ನು ರುಜುಪಡಿಸಿದ ವ್ಯಕ್ತಿಗಳನ್ನು ಅವು ಪ್ರತಿನಿಧಿಸುತ್ತವೆ ಎನ್ನುವುದನ್ನು ನಾವೆಂದಿಗೂ ಮರೆಯಬಾರದು. ಒಂದು ಉದಾಹರಣೆಯನ್ನು ಪರಿಗಣಿಸಿ. ಗಿಯರ್ಮೋ ಎಂಬವನು ಬೊಲಿವಿಯದಲ್ಲಿ ಹುಟ್ಟಿ ಬೆಳೆದನು. 1935ರಲ್ಲಿ ಜನಿಸಿದ ಇವನು ತನ್ನ ಒಂಬತ್ತರ ಪ್ರಾಯದಿಂದ ಕೋಕ (ಇವುಗಳ ಎಲೆಗಳಿಂದ ಕೊಕೇನ್ ತಯಾರಿಸಲಾಗುತ್ತದೆ) ತೋಟದಲ್ಲಿ ಕೆಲಸಮಾಡುತ್ತಿದ್ದನು. ಪ್ರಯಾಸದ ದೈಹಿಕ ಕೆಲಸದಿಂದ ಉಂಟಾಗುತ್ತಿದ್ದ ನೋವಿನಿಂದ ಉಪಶಮನ ಪಡೆಯಲು ಚಿಕ್ಕಂದಿನಿಂದಲೇ ಇವನು ಕೋಕ ಎಲೆಗಳನ್ನು ಅಗಿದು ತಿನ್ನುತ್ತಿದ್ದನು. ಸಮಯಾನಂತರ ಇವನಿಗೆ ಮದ್ಯ ಹಾಗೂ ಸಿಗರೇಟಿನ ಚಟ ಹಿಡಿಯಿತು. ಯೆಹೋವನು ತನ್ನಿಂದ ಏನನ್ನು ಅಪೇಕ್ಷಿಸುತ್ತಾನೆಂದು ಕಲಿಯಲು ಆರಂಭಿಸಿದ ಬಳಿಕ ಗಿಯರ್ಮೋ ಮದ್ಯಪಾನ ಮತ್ತು ಧೂಮಪಾನವನ್ನು ಬಿಟ್ಟನು. ಆದರೆ ಕೋಕ ಎಲೆಗಳನ್ನು ಅಗಿಯುವ ತನ್ನ ಜೀವನುದ್ದದ ಚಟವನ್ನು ಬಿಟ್ಟುಬಿಡುವುದೇ ಅವನಿಗೆ ಅತ್ಯಂತ ಕಠಿನ ಸವಾಲಾಗಿತ್ತು. ಅವನು ಎಡೆಬಿಡದೆ ಪ್ರಾರ್ಥಿಸಿದನು ಮತ್ತು ಈ ಚಟದಿಂದ ವಿಮುಕ್ತನಾದನು. ತನ್ನ ದುರ್ವ್ಯಸನಗಳನ್ನು ತೊರೆದವನಾಗಿ ಅವನು ದೀಕ್ಷಾಸ್ನಾನ ಹೊಂದಿದನು. ಅವನು ಹೇಳುವುದು: “ಈಗ ನಾನು ಶುದ್ಧನೂ, ಬಹಳ ಸಂತೋಷಿತನೂ ಆಗಿದ್ದೇನೆ.”
5. ನಿಮ್ಮ ಅಪೇಕ್ಷೆಯೇನು?
5 ಯೆಹೋವನು ನಿಜವಾಗಿಯೂ ಜನರಲ್ಲಿ ಆಸಕ್ತನಾಗಿದ್ದಾನೆ. ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂಬುದು ಆತನ ಅಪೇಕ್ಷೆ. (2 ಪೇತ್ರ 3:9) ಅದು ನಮ್ಮ ಅಪೇಕ್ಷೆಯೂ ಆಗಿದೆ. ಪ್ರಾಮಾಣಿಕ ಹೃದಯದ ಜನರು ಯೆಹೋವನನ್ನು ತಿಳಿದುಕೊಳ್ಳುವಂತೆ ಮತ್ತು ಪ್ರೀತಿಸುವಂತೆ ಸಹಾಯಮಾಡುತ್ತ ಮುಂದುವರಿಯಲು ಸಾಧ್ಯವಿರುವುದೆಲ್ಲವನ್ನು ಮಾಡಲು ನಮ್ಮ ಹೃದಯಗಳು ನಮ್ಮನ್ನು ಪ್ರೇರಿಸುವಂತಾಗಲಿ.