ದುಃಖಿತರನ್ನು ಸಂತೈಸಿರಿ
1. ದುಃಖಿಸುವವರಿಗೆ ಏಕೆ ಸಾಂತ್ವನದ ಅಗತ್ಯವಿದೆ?
1 ಪ್ರಿಯರನ್ನು ಮರಣದಲ್ಲಿ ಕಳೆದುಕೊಳ್ಳುವುದು ಒಂದು ಆಘಾತಕಾರಿ ಅನುಭವವಾಗಿದೆ. ಮುಖ್ಯವಾಗಿ ಯಾರಿಗೆ ರಾಜ್ಯದ ನಿರೀಕ್ಷೆಯಿಲ್ಲವೊ ಅವರ ವಿಷಯದಲ್ಲಿ ಇದು ಇನ್ನಷ್ಟು ಸತ್ಯವಾಗಿದೆ. (1 ಥೆಸ. 4:13) ‘ಜನರು ಯಾಕೆ ಸಾಯುತ್ತಾರೆ? ಸತ್ತಾಗ ಅವರು ಎಲ್ಲಿಗೆ ಹೋಗುತ್ತಾರೆ? ಪುನಃ ಎಂದಾದರೂ ನಾನು ನನ್ನ ಪ್ರಿಯ ವ್ಯಕ್ತಿಯನ್ನು ನೋಡಸಾಧ್ಯವಿದೆಯೊ?’ ಎಂದು ಅನೇಕರು ಚಿಂತಿಸುತ್ತಾರೆ. ಸಂಬಂಧಿಯೊಬ್ಬರ ಇಲ್ಲವೆ ಮಿತ್ರರೊಬ್ಬರ ಮರಣದಿಂದಾಗಿ ದುಃಖಿಸುತ್ತಿರುವ ಯಾರನ್ನಾದರೂ ನಾವು ಕ್ಷೇತ್ರ ಸೇವೆಯಲ್ಲಿ ಭೇಟಿಯಾಗುವಾಗ ಅವರಿಗೆ ಸಾಂತ್ವನವನ್ನು ನೀಡಲಿಕ್ಕಾಗಿ ಕೆಲವು ಸಲಹೆಗಳು ಈ ಕೆಳಗಿವೆ.—ಯೆಶಾ. 61:2.
2. ಒಬ್ಬ ಮನೆಯವನು ತನ್ನ ದುಃಖವನ್ನು ವ್ಯಕ್ತಪಡಿಸುವುದಾದರೆ, ನಾವು ಯಾವಾಗಲು ಒಂದು ಉದ್ದವಾದ ಸಾಕ್ಷಿಯನ್ನು ನೀಡಲು ಪ್ರಯತ್ನಿಸಬೇಕೊ?
2 ಮನೆಯಿಂದ ಮನೆಗೆ: ತನ್ನ ಕುಟುಂಬದಲ್ಲಿ ಇತ್ತೀಚೆಗಷ್ಟೆ ಒಬ್ಬರು ಮೃತಪಟ್ಟಿದ್ದಾರೆ ಎಂದು ಒಬ್ಬ ಮನೆಯವನು ನಮಗೆ ಹೇಳಬಹುದು. ಅವನು ಭಾವನಾತ್ಮಕ ಗೊಂದಲದಲ್ಲಿದ್ದಾನೊ? ದುಃಖಿಸುತ್ತಿರುವ ಸಂಬಂಧಿಕರಿಂದ ಮನೆಯು ತುಂಬಿದೆಯೊ? ಅಂಥ ಸಂದರ್ಭಗಳಲ್ಲಿ, ಉದ್ದವಾದ ಸಾಕ್ಷಿಯನ್ನು ಕೊಡದಿರುವುದು ಉತ್ತಮ. (ಪ್ರಸಂ. 3:1, 7) ನಾವು ನಮ್ಮ ದುಃಖವನ್ನು ವ್ಯಕ್ತಪಡಿಸಿ, ಮನೆಯವನು ಸ್ವೀಕರಿಸಲು ಇಷ್ಟಪಡುವುದಾದರೆ ಸೂಕ್ತವಾದ ಒಂದು ಟ್ರ್ಯಾಕ್ಟ್, ಪತ್ರಿಕೆ ಇಲ್ಲವೆ ಬ್ರೋಷರನ್ನು ನೀಡಿ ಅಲ್ಲಿಂದ ವಿನಯಭಾವದಿಂದ ಬಂದುಬಿಡಬಹುದು. ಬೈಬಲಿನಿಂದ ಹೆಚ್ಚಿನ ಸಾಂತ್ವನದ ಮಾತುಗಳನ್ನು ಹಂಚಿಕೊಳ್ಳಲು ಸೂಕ್ತವಾದ ಬೇರೊಂದು ಸಮಯದಲ್ಲಿ ಭೇಟಿಮಾಡಸಾಧ್ಯವಿದೆ.
3. ಪರಿಸ್ಥಿತಿಗಳು ಅನುಮತಿಸುವಲ್ಲಿ, ದುಃಖಿಸುತ್ತಿರುವ ಮನೆಯವನಿಗೆ ನಾವು ಯಾವ ಶಾಸ್ತ್ರವಚನಗಳನ್ನು ತೋರಿಸಬಹುದು?
3 ಇತರ ಸಂದರ್ಭಗಳಲ್ಲಿ ನಾವು ಪ್ರಥಮ ಭೇಟಿಯಲ್ಲಿಯೇ ಹೆಚ್ಚನ್ನು ಹೇಳಸಾಧ್ಯವಿದೆ ಎಂದು ಗ್ರಹಿಸಬಹುದು. ಅವರ ತಪ್ಪಾದ ದೃಷ್ಟಿಕೋನಗಳನ್ನು ತಿದ್ದುವ ಸಮಯ ಇದಲ್ಲವಾದರೂ, ಮನೆಯವರು ಸಮ್ಮತಿಸುವುದಾದರೆ ಪುನರುತ್ಥಾನದ ಕುರಿತಾದ ಬೈಬಲಿನ ವಾಗ್ದಾನಗಳನ್ನು ನಾವು ಅವರಿಗೆ ಓದಿಹೇಳಬಹುದು. (ಯೋಹಾ. 5:28, 29) ಅಥವಾ ಸತ್ತವರ ಸ್ಥಿತಿಯ ಬಗ್ಗೆ ಬೈಬಲ್ ಏನು ಹೇಳುತ್ತದೆ ಎಂಬುದನ್ನು ನಾವು ಅವರಿಗೆ ತಿಳಿಸಸಾಧ್ಯವಿದೆ. (ಪ್ರಸಂ. 9:5, 10) ಪುನರುತ್ಥಾನದ ಕುರಿತಾದ ಬೈಬಲಿನ ಒಂದು ವೃತ್ತಾಂತವು ಸಹ ಸಾಂತ್ವನವನ್ನು ನೀಡಬಹುದು. (ಯೋಹಾ. 11:39-44) ಅಥವಾ ಯೋಬನು ಯೆಹೋವನಲ್ಲಿ ವ್ಯಕ್ತಪಡಿಸಿದ ನಂಬಿಕೆಯ ಮಾತುಗಳನ್ನು ಪರಿಗಣಿಸಬಹುದು. (ಯೋಬ 14:14, 15) ಮನೆಯನ್ನು ಬಿಟ್ಟುಬರುವ ಮುಂಚೆ, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಅಥವಾ ಬೇರೆ ಯಾವುದಾದರೊಂದು ಸೂಕ್ತವಾದ ಬ್ರೋಷರನ್ನು ಇಲ್ಲವೆ ಟ್ರ್ಯಾಕ್ಟನ್ನು ನೀಡಬಹುದು. ಅಥವಾ ಬೈಬಲ್ ಬೋಧಿಸುತ್ತದೆ ಪುಸ್ತಕ ಮತ್ತು ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್ ನೀಡಬಹುದು. ಆ ಪುಸ್ತಕದ 6ನೇ ಅಧ್ಯಾಯದಲ್ಲಿರುವ ಮಾಹಿತಿಗೆ ಅವರ ಗಮನವನ್ನು ತಿರುಗಿಸಿ, ಪುನಃ ಹಿಂದಿರುಗಿ ಹೋದಾಗ ಆ ವಿಷಯವನ್ನು ಇನ್ನಷ್ಟು ಚರ್ಚಿಸಲು ಏರ್ಪಾಡುಮಾಡಿ ಬರಬಹುದು.
4. ನಾವು ಸಾಂತ್ವನವನ್ನು ಒದಗಿಸಬೇಕಾದ ಇತರ ಸಂದರ್ಭಗಳು ಯಾವುವು?
4 ಇತರ ಸಂದರ್ಭಗಳಲ್ಲಿ: ಶವಸಂಸ್ಕಾರ ಅಥವಾ ಸ್ಮಾರಕ ಭಾಷಣವು ರಾಜ್ಯ ಸಭಾಗೃಹದಲ್ಲಿ ನಡೆಯಲಿರುವುದಾದರೆ ಅಲ್ಲಿ ಅವಿಶ್ವಾಸಿಗಳು ಹಾಜರಿರುವರೊ? ಹಾಗಿರುವಲ್ಲಿ ಸಾಂತ್ವನ ಒದಗಿಸುವಂಥ ಸಾಹಿತ್ಯ ಅವರಿಗೆ ಲಭ್ಯವಾಗುವಂತೆ ಏರ್ಪಾಡು ಮಾಡಬಹುದು. ದುಃಖಿಸುತ್ತಿರುವ ಕುಟುಂಬಸ್ಥರಿಗಾಗಿ ಸೂಕ್ತವಾಗಿರುವ ಕೆಲವು ಸಾಹಿತ್ಯವನ್ನು ಹೊಂದಿರುವುದನ್ನು ಕೆಲವು ಶವಸಂಸ್ಕಾರ ಗೃಹಗಳು ಗಣ್ಯಮಾಡಿವೆ. ಕೆಲವೊಮ್ಮೆ ವಾರ್ತಾಪತ್ರಿಕೆಯಲ್ಲಿ ಬರುವ ನಿಧನರಾದವರ ಪ್ರಕಟನೆಗಳು ಶೋಕಿಸುತ್ತಿರುವ ಕುಟುಂಬ ಸದಸ್ಯರಿಗೆ ಸಂಕ್ಷಿಪ್ತವಾದ ಒಂದು ಸಾಂತ್ವನದಾಯಕ ಪತ್ರವನ್ನು ಬರೆಯುವಂತೆ ಸಾಧ್ಯಮಾಡಿವೆ. ಒಂದು ಸಂದರ್ಭದಲ್ಲಿ, ಕೆಲವು ಟ್ರ್ಯಾಕ್ಟ್‌ಗಳನ್ನು ಹೊಂದಿದ್ದ ಒಂದು ಪತ್ರವನ್ನು ಪಡೆದುಕೊಂಡ ಬಳಿಕ ಒಬ್ಬ ವಿಧುರನು ತನ್ನ ಮಗಳೊಂದಿಗೆ ಪ್ರಚಾರಕಳ ಮನೆಗೆ ಹೋಗಿ, “ನನಗೆ ಈ ಪತ್ರವನ್ನು ಕಳುಹಿಸಿದವರು ನೀವೊ? ನನಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಬೇಕು” ಎಂದು ಹೇಳಿದನು. ಆ ಮನುಷ್ಯನೂ ಅವನ ಮಗಳೂ ಬೈಬಲ್ ಅಧ್ಯಯನಕ್ಕೆ ಒಪ್ಪಿ ಸಭಾ ಕೂಟಗಳಿಗೆ ಹಾಜರಾಗಲು ಆರಂಭಿಸಿದರು.
5. ದುಃಖಿಸುತ್ತಿರುವವರನ್ನು ಸಂತೈಸಲು ನಾವು ಏಕೆ ಸಂದರ್ಭಗಳಿಗಾಗಿ ಹುಡುಕಬೇಕು?
5 “ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವದು ಲೇಸು” ಎಂದು ಪ್ರಸಂಗಿ 7:2 ಹೇಳುತ್ತದೆ. ಸಾಮಾನ್ಯವಾಗಿ ಮಜಾಮಾಡುತ್ತಿರುವವನಿಗಿಂತ ದುಃಖಿಸುತ್ತಿರುವವನು ದೇವರ ವಾಕ್ಯಕ್ಕೆ ಕಿವಿಗೊಡಲು ಹೆಚ್ಚು ಸಿದ್ಧನಿರುತ್ತಾನೆ. ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡು ದುಃಖಿಸುತ್ತಿರುವವರನ್ನು ಸಂತೈಸಲು ನಾವೆಲ್ಲರು ಸೂಕ್ತವಾದ ಸಂದರ್ಭಗಳಿಗಾಗಿ ಹುಡುಕೋಣ.