ನೀವು ಹೊಂದಿಸಿಕೊಳ್ಳುತ್ತೀರೋ?
1 ಸುವಾರ್ತೆ ಸಾರುವ ಪವಿತ್ರ ನೇಮಕವನ್ನು ಪೂರೈಸುವಾಗ, ನಮ್ಮ ವಿಧಾನಗಳನ್ನು ಹೇಗೆ ಹೊಂದಿಸಿಕೊಳ್ಳಬೇಕೆಂಬುದನ್ನು ದೇವರ ವಿವೇಕ ಹಾಗೂ ಆತನ ವಾಕ್ಯದಲ್ಲಿನ ವೃತ್ತಾಂತಗಳಿಂದ ನಾವು ಕಲಿತುಕೊಳ್ಳಬೇಕು. ಪ್ರಥಮ ಶತಮಾನದ ಕ್ರೈಸ್ತರು ಹೇಗೆ ತಮ್ಮ ದೇವದತ್ತ ನೇಮಕವನ್ನು ನೆರವೇರಿಸಿದರು ಹಾಗೂ ಅದಕ್ಕಾಗಿ ಹೇಗೆ ಪ್ರಾಯೋಗಿಕ ವಿವೇಕವನ್ನು ಉಪಯೋಗಿಸಿದರೆಂಬುದನ್ನು ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿನ ದಾಖಲೆಗಳು ತೋರಿಸುತ್ತವೆ. (ಮತ್ತಾ. 28:19, 20) ಉದಾಹರಣೆಗೆ, ಇಕೋನ್ಯವನ್ನು ಬಿಟ್ಟುಹೋಗಬೇಕಾದ ಪರಿಸ್ಥಿತಿ ಎದ್ದಾಗ ಪೌಲನು ಅದನ್ನು ತಿಳಿದುಕೊಂಡು ಬೇರೆ ಸ್ಥಳಕ್ಕೆ ಹೋಗಿ ಸಾರಿದನು. (ಅ. ಕೃ. 14:5, 6) ತಮ್ಮ ಸಾರುವ ವಿಧಾನದಲ್ಲಿ ಬದಲಾವಣೆ ಮಾಡಬೇಕೆಂಬುದನ್ನು ಪೌಲನೂ ಅವನ ಸಂಗಡಿಗರೂ ವಿವೇಚಿಸಿ ತಿಳಿದಾಗ ಜನರಿಗೆ ಸಾರಲಿಕ್ಕಾಗಿ ಅವರು ಬೇರೆ ಬೇರೆ ವಿಧಾನಗಳನ್ನು ಉಪಯೋಗಿಸಿದರು. (ಅ. ಕೃ. 16:13) ನಾವು ವಿರೋಧಿಗಳಿಗೆ ಹೆದರುವುದಿಲ್ಲವಾದರೂ ಮತ್ತು ಯೆಹೋವನಿಗೆ ವಿಧೇಯರಾಗುತ್ತಾ ಇರುತ್ತೇವಾದರೂ, ನಮ್ಮ ಸಾರುವ ವಿಧಾನವನ್ನು ಬದಲಾಯಿಸಬೇಕಾದಂಥ ಪರಿಸ್ಥಿತಿ ಉಂಟಾಗುವಾಗ ನಮ್ಮ ಹಿಂದಿನ ಕೆಲವು ವಿಧಾನಗಳಿಗೆ ನಾವು ಕಟ್ಟುನಿಟ್ಟಾಗಿ ಅಂಟಿಕೊಂಡಿರಬಾರದು. (ಫಿಲಿ. 1:27, 28; ಅ. ಕೃ. 5:29) ಅಂಥ ಪ್ರಾಯೋಗಿಕ ವಿವೇಕವನ್ನು ನಾವು ತೋರಿಸುತ್ತಿದ್ದೇವೋ?
2 ಕೆಲವೊಂದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದಂಥ ಘಟನೆಗಳು, ಸತ್ಯಾರಾಧನೆಯ ವಿರೋಧಿಗಳು ಇನ್ನೂ ಸಕ್ರಿಯರಾಗಿದ್ದಾರೆ ಎಂಬುದನ್ನು ತೋರಿಸುತ್ತವೆ. ಧಾರ್ಮಿಕ ಮತಾಂಧಿಗಳ ಉದ್ದೇಶಗಳು ಬೇರೆಬೇರೆಯಾಗಿರಬಹುದು. ಆದರೆ ಅಂಥವರನ್ನು ಉಪಯೋಗಿಸಿ ಸೈತಾನನು ಜನರ ಮನಸ್ಸಿನಲ್ಲಿ ಸತ್ಯ ಕ್ರೈಸ್ತರ ಹೇತುಗಳ ಬಗ್ಗೆ ತಪ್ಪಾಭಿಪ್ರಾಯ ಮೂಡಿಸುತ್ತಾನೆ ಮತ್ತು ಹೀಗೆ ಸುವಾರ್ತೆಯು ಜನರನ್ನು ತಲಪದಂತೆ ಮಾಡಲು ಪ್ರಯತ್ನಿಸುತ್ತಾನೆ. ಪೌಲನ ದಿನಗಳಲ್ಲಿ ಎಫೆಸದಲ್ಲಿ ಹೀಗೆಯೇ ಆಯಿತು. (ಅ. ಕೃ. 19:23-28) ಇಂತಹ ವಿವಿಧ ತಂತ್ರೋಪಾಯಗಳ ಎದುರಲ್ಲಿಯೂ ನಾವು ಯೆಹೋವನ ನಾಮ ಮತ್ತು ಉದ್ದೇಶವನ್ನು ಪ್ರಸಿದ್ಧಿಪಡಿಸುತ್ತಾ ಮುಂದುವರಿಯುವ ದೃಢನಿಶ್ಚಯವನ್ನು ಹೊಂದಿರಬೇಕು; ಅದೇ ಸಮಯದಲ್ಲಿ ಪರಿಸ್ಥಿತಿಗನುಸಾರ ನಮ್ಮ ವಿಧಾನಗಳನ್ನೂ ಹೊಂದಿಸಿಕೊಳ್ಳಬೇಕು.
3 ಸುವ್ಯವಸ್ಥಿತ ಏರ್ಪಾಡು: ನಮ್ಮ ಕಡೆಗೆ ಜನರ ಅನಾವಶ್ಯಕ ಗಮನವನ್ನು ಸೆಳೆಯದಿರಲಿಕ್ಕಾಗಿ ಪ್ರಚಾರಕರು ಟೆರಿಟೊರಿಗೆ ಹೊರಟು ಹೋಗುವ ಮೊದಲೇ ಕ್ಷೇತ್ರ ಸೇವಾ ಗುಂಪಿನ ಮೇಲ್ವಿಚಾರಣೆ ಮಾಡುವ ಹಿರಿಯರು ಮತ್ತು ಶುಶ್ರೂಷಾ ಸೇವಕರು ಬೇಕಾದ ಎಲ್ಲಾ ಏರ್ಪಾಡುಗಳನ್ನು ಮತ್ತು ನೇಮಕಗಳನ್ನು ಮಾಡಬೇಕು. ಸಹೋದರ ಸಹೋದರಿಯರು ಎಲ್ಲಿ ಕೆಲಸ ಮಾಡಬೇಕೆಂದು ನಿರ್ದೇಶನವನ್ನು ಪಡೆಯುತ್ತಾ ಬೀದಿಗಳಲ್ಲಿ ಗುಂಪಾಗಿ ನಿಂತು ಇತರರ ಅನಾವಶ್ಯಕ ಗಮನ ಸೆಳೆಯುವುದಕ್ಕಿಂತ ಇದು ಎಷ್ಟೋ ವಿವೇಕಯುತವಾಗಿದೆ. ಕ್ಷೇತ್ರ ಸೇವಾ ಗುಂಪನ್ನು ಮಾರ್ಗದರ್ಶಿಸುವ ಸಹೋದರನು ಪೂರ್ವತಯಾರಿ ಮಾಡುವ ಮೂಲಕ ಪ್ರತಿಯೊಬ್ಬ ಪ್ರಚಾರಕನು ಯಾವ ಟೆರಿಟೊರಿಯಲ್ಲಿ ಕೆಲಸಮಾಡುತ್ತಾನೆಂಬುದರ ಕುರಿತು ಮಾಹಿತಿಯನ್ನು ಮುಂಚಿತವಾಗಿಯೇ ಕೊಡಸಾಧ್ಯವಿದೆ. ಇದು ಟೆರಿಟೊರಿಯಲ್ಲಿ ದೊಡ್ಡ ದೊಡ್ಡ ಗುಂಪಾಗಿ ಸೇರುವುದನ್ನು ತಪ್ಪಿಸುತ್ತದೆ.
4 ಜನರ ಗಮನ ಸೆಳೆಯದ ರೀತಿಯಲ್ಲಿ ಸೇವೆ ಮಾಡಲು ವಿವೇಕವು ಅಗತ್ಯ. ಧೈರ್ಯದಿಂದ ಎಲ್ಲರಿಗೂ ಕಾಣುವಂಥ ರೀತಿಯಲ್ಲಿ ಸೇವೆ ಮಾಡುವುದು ಹಿಂದೊಮ್ಮೆ ಸಾಕ್ಷಿ ನೀಡಲು ಅವಕಾಶ ಕೊಡುತ್ತಿತ್ತಾದರೂ ಈಗ ಅದೇ ಸಂಗತಿಯು ಸಾರುವುದನ್ನು ಮುಂದುವರಿಸದಂತೆ ನಿಮಗೆ ತಡೆಯಾಗಬಲ್ಲದು. ಅಲ್ಲದೆ, ನಿಮ್ಮನ್ನೂ ಇತರರನ್ನೂ ಅಪಾಯಕ್ಕೊಡ್ಡಬಲ್ಲದು. ಆದುದರಿಂದ ಸಾರುವ ನಮ್ಮ ವಿಧಾನದಲ್ಲಿ ಹೊಂದಾಣಿಕೆ ಮಾಡದೇ ಇರುವುದು ಮೂರ್ಖತನವಾಗಿರಬಲ್ಲದು. ಕ್ಷೇತ್ರ ಸೇವಾ ಗುಂಪು ಚಿಕ್ಕದಾಗಿರಬೇಕು. ದೊಡ್ಡ ಗುಂಪಾಗಿ ಟೆರಿಟೊರಿಯನ್ನು ‘ಆಕ್ರಮಿಸಬೇಡಿ.’ ಪ್ರಚಾರಕರಿಗೆ ಅಥವಾ ಇಬ್ಬಿಬ್ಬರು ಪ್ರಚಾರಕರಿಗೆ ಸೇವೆ ಮಾಡಲು ಸಾಕಾಗುವಷ್ಟು ಟೆರಿಟೊರಿಯನ್ನು ಕೊಡಿರಿ; ಎರಡು ಮೂರು ವಾರಗಳಲ್ಲಿ ಸೇವೆ ಮಾಡಲು ಸಾಕಾಗುವಷ್ಟು ಟೆರಿಟೊರಿಯನ್ನೂ ಕೊಡಬಹುದು. ಈ ಟೆರಿಟೊರಿಯಲ್ಲಿ ಅವರು ತಮ್ಮ ಸ್ವಂತ ಸಮಯಕ್ಕನುಗುಣವಾಗಿ ಕೆಲಸ ಮಾಡಬಹುದು. ಆದರೆ ಎಷ್ಟು ಟೆರಿಟೊರಿಯನ್ನು ಆವರಿಸಿದ್ದಾರೆಂಬುದರ ಕುರಿತು ಅವರು ಗುಂಪು ಮೇಲ್ವಿಚಾರಕನಿಗೆ ತಿಳಿಸಬೇಕು. ಗುಂಪು ಮೇಲ್ವಿಚಾರಕರು ಮತ್ತು ಕ್ಷೇತ್ರ ಸೇವಾ ಗುಂಪುಗಳ ಮೇಲ್ವಿಚಾರಣೆ ತೆಗೆದುಕೊಳ್ಳುವ ಎಲ್ಲರೂ ತಾವು ಉಪಯೋಗಿಸುತ್ತಿದ್ದ ವಿಧಾನವನ್ನು ಹೊಂದಿಸಿಕೊಳ್ಳಬೇಕು.
5 ನೀವು ಹೊಂದಾಣಿಕೆ ಮಾಡಿಕೊಳ್ಳುವವರಾಗಿದ್ದೀರೋ?: ಸಾಧ್ಯವಿರುವಲ್ಲೆಲ್ಲ ಮನೆ ಮನೆ ಸೇವೆಯನ್ನು ನಾವು ಮಾಡುತ್ತೇವಾದರೂ ಕೆಲವೊಂದು ಸಮಯದಲ್ಲಿ ಮತ್ತು ಸ್ಥಳಗಳಲ್ಲಿ ಸಾಕ್ಷಿಕಾರ್ಯದ ಇತರ ವಿಧಾನಗಳಲ್ಲಿ ಒಳಗೂಡುವುದು ವಿವೇಕಯುತವಾಗಿರುವುದು. ಅಥವಾ ಬೇರೆ ಕೆಲವೊಂದು ದೇಶಗಳಲ್ಲಿ ನಮ್ಮ ಸಹೋದರರು ಮಾಡುವಂತೆ ಒಂದು ಬೀದಿಯಲ್ಲಿ ಕೇವಲ ಒಂದು ಮನೆಗೆ ಹೋಗಿ ನಂತರ ಅಲ್ಲಿಂದ ಇನ್ನೊಂದು ಕ್ಷೇತ್ರಕ್ಕೋ ಇನ್ನೊಂದು ಬೀದಿಗೋ ಹೋಗಿ ಸೇವೆ ಮಾಡಬಹುದು. ಹೀಗೆ ಮಾಡಲು ಹೆಚ್ಚು ಸಮಯ ವ್ಯಯವಾಗುತ್ತದೆಂಬುದೇನೋ ನಿಜ. ಆದರೆ ಮನೆ ಮನೆಗೆ ಸುವಾರ್ತೆ ಸಾರುವುದನ್ನು ನಿಲ್ಲಿಸಲು ವಿರೋಧಿಗಳು ಮಾಡುವ ಪ್ರಯತ್ನಗಳನ್ನು ಇದು ವಿಫಲಗೊಳಿಸುವುದು.
6 ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಿರುವಾಗ ನಿಮ್ಮ ಸುತ್ತಮುತ್ತಲು ನಡೆಯುವ ವಿಷಯಗಳ ಕುರಿತು ಸದಾ ಹುಷಾರಾಗಿರಲು ಮರೆಯದಿರಿ. ಆಗ ಅಲ್ಲಿರುವವರು ಏನು ಮಾಡಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಸಮಸ್ಯೆ ಉಂಟಾಗುವುದನ್ನು ತಡೆಯಲು ನೀವು ಶಕ್ತರಾಗುವಿರಿ. ನೀವು ಸಂಭಾಷಣೆಯನ್ನು ಪ್ರಾರಂಭಿಸಿದಾಗ ಮನೆಯವನು ಹೇಗೆ ಪ್ರತಿಕ್ರಿಯಿಸುತ್ತಾನೆ, ಏನು ಹೇಳುತ್ತಾನೆ ಎಂಬುದಕ್ಕೆ ಜಾಗರೂಕತೆಯಿಂದ ಗಮನಕೊಡಿರಿ. ನೀವು ಹೇಗೆ ಮಾತನ್ನು ಆರಂಭಿಸಬೇಕೆಂದು ಮೊದಲೇ ಆಲೋಚಿಸಿ ಆ ನಿಮ್ಮ ಮಾತುಗಳಿಗೆ ಮನೆಯವನು ಏನನ್ನುತ್ತಾನೆಂಬುದನ್ನು ಸರಿಯಾಗಿ ಕಿವಿಗೊಟ್ಟು ಗಮನಿಸುವುದಾದರೆ ಅವನು ಶಾಂತವಾಗಿರುತ್ತಾನೋ ಇಲ್ಲವೋ ಎಂಬುದನ್ನು ಕೂಡಲೇ ವಿವೇಚಿಸಿ ತಿಳಿಯಬಲ್ಲಿರಿ. ಒಳ್ಳೇ ತಯಾರಿ ನಿಮಗೆ ಸಂರಕ್ಷಣೆ ನೀಡುವುದು. ಸೂಕ್ತವಾಗಿರುವಲ್ಲಿ, ನಮ್ಮ ಮತ್ತು ನಮ್ಮ ಉದ್ದೇಶದ ಕುರಿತು ತಿಳಿಯ ಬಯಸುವ ಪ್ರಮಾಣಿಕ ವ್ಯಕ್ತಿಗಳ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳು ಉತ್ತರಿಸುತ್ತಾರೆ ಎಂಬ ಟ್ರ್ಯಾಕ್ಟ್ ಅನ್ನು ಸದುಪಯೋಗಿಸಿ.
7 ಸದಾ ಯೆಹೋವನ ಮೇಲೆ ಆತುಕೊಳ್ಳುತ್ತಾ ಇರಿ. ಪವಿತ್ರಾತ್ಮಕ್ಕಾಗಿ ನೀವು ಕೇಳಿಕೊಳ್ಳುವುದಾದರೆ ಆತನು ಅದನ್ನು ನಿಮಗೆ ದಯಪಾಲಿಸುತ್ತಾನೆ. (ಲೂಕ 11:13) ಸಾರುವ ವಿಧಾನಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿರುವ ಮೂಲಕ ಹೊಂದಿಸಿಕೊಳ್ಳುವುದರಲ್ಲಿ ಯೆಹೋವನ ಅತ್ಯುತ್ಕೃಷ್ಟ ಮಾದರಿಯನ್ನು ನಾವು ಅನುಸರಿಸುತ್ತೇವೆ. ಆತನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿರುವ ಯೋಜನೆಯಲ್ಲಿ ಎಂದಿಗೂ ತುಂಬ ಕಟ್ಟುನಿಟ್ಟಾಗಿರುವುದಿಲ್ಲ. ಯಾಕೆಂದರೆ ಹೊಂದಿಸಿಕೊಳ್ಳದೆ ಕಟ್ಟುನಿಟ್ಟಾಗಿರುವುದು ಸಫಲತೆಗೆ ಅಡ್ಡಿಯಾಗಬಲ್ಲದು. ಅಡ್ಡಿತಡೆಗಳು ಯಾವುದೇ ಆಗಿರಲಿ ತನ್ನ ಉದ್ದೇಶಕ್ಕನುಸಾರ ತಾನು ಮಾಡಲಿಚ್ಛಿಸಿದ ಸಂಕಲ್ಪವನ್ನು ಯೆಹೋವನು ನೆರವೇರಿಸುತ್ತಾನೆ.—ಯೆಶಾ. 55:11; ಎಫೆ. 1:9-11.