ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/10 ಪು. 3-4
  • ಆಡಳಿತ ಮಂಡಲಿಯ ಪತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಡಳಿತ ಮಂಡಲಿಯ ಪತ್ರ
  • 2010 ನಮ್ಮ ರಾಜ್ಯದ ಸೇವೆ
2010 ನಮ್ಮ ರಾಜ್ಯದ ಸೇವೆ
km 3/10 ಪು. 3-4

ಆಡಳಿತ ಮಂಡಲಿಯ ಪತ್ರ

ಪ್ರಿಯ ಜೊತೆ ಸಾಕ್ಷಿಗಳೇ,

ವಿಶ್ವ ಪರಮಾಧಿಕಾರಿಯಾದ ಯೆಹೋವನ ನಾಮಧಾರಿಗಳಾಗಿರುವುದು ನಮಗಿರುವ ದೊಡ್ಡ ಸುಯೋಗ! ಆ ನಾಮ ಶಾಶ್ವತವಾದದ್ದು, ಅಳಿದುಹೋಗದಂಥದ್ದು, ಸರಿಸಾಟಿಯಿಲ್ಲದ್ದು. ನಮಗೆ ತನ್ನ ನಾಮಧಾರಿಗಳಾಗಿರುವ ಸದವಕಾಶವನ್ನು ಕೊಟ್ಟಾತನು ಯೆಹೋವನೇ. 1931ರಿಂದ ನಮಗೆ ಆ ವಿಶಿಷ್ಟ ನಾಮದೊಂದಿಗೆ ವಿಶೇಷ ನಂಟಿದೆ. (ಯೆಶಾ. 43:10) ಯೆಹೋವನ ಸಾಕ್ಷಿಗಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯನಿಸುತ್ತದೆ.

ಸೈತಾನನು ದೇವರ ಹೆಸರನ್ನು ಅಳಿಸಿಹಾಕಲು ಹಠಹಿಡಿದು ಪ್ರಯತ್ನಿಸುತ್ತಿದ್ದಾನೆ. ಅವನ ಕೈಗೊಂಬೆಯಾಗಿರುವ ರಾಷ್ಟ್ರಗಳು ಯೆಹೋವನ ನಾಮವನ್ನು ಧಿಕ್ಕರಿಸಿವೆ. ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲ್‌ ಆ ದೈವಿಕ ನಾಮವನ್ನು ದ್ವೇಷಿಸುತ್ತದೆ, ಮಾತ್ರವಲ್ಲ ಅದನ್ನು ಅನೇಕ ಬೈಬಲ್‌ ಭಾಷಾಂತರಗಳಿಂದ ತೆಗೆದುಹಾಕಿದೆ. ತದ್ವಿರುದ್ಧವಾಗಿ ಯೇಸುವಾದರೋ ತನ್ನ ತಂದೆಯ ನಾಮವನ್ನು ಎತ್ತಿಹಿಡಿದನು. ಅವನು ಕಲಿಸಿದ ಮಾದರಿ ಪ್ರಾರ್ಥನೆಯಲ್ಲಿ ಆ ನಾಮಕ್ಕೆ ಪ್ರಥಮ ಸ್ಥಾನ ಕೊಟ್ಟನು. “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು: ‘ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ’” ಎಂದು ಅವನು ಹೇಳಿದನು. (ಮತ್ತಾ. 6:9) ಅವನು ತನ್ನ ತಂದೆಗೆ ಹೃದಯದಾಳದಿಂದ ಪ್ರಾರ್ಥಿಸುವಾಗ ಅಂದದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ.” (ಯೋಹಾ. 17:6) ಯೇಸುವಿನ ಉತ್ತಮ ಮಾದರಿಯನ್ನು ಅನುಸರಿಸುತ್ತಾ ನಾವು ಭೂಮಿಯಾದ್ಯಂತ ಯೆಹೋವನ ಹೆಸರನ್ನು ಹುರುಪಿನಿಂದ ಘೋಷಿಸಲು ಹಿಂದೆಂದಿಗಿಂತಲೂ ದೃಢನಿಶ್ಚಿತರಾಗಿದ್ದೇವೆ.

‘ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡಿರಿ’ ಎಂಬ 2009ರ ವಾರ್ಷಿಕವಚನವು ಶುಶ್ರೂಷೆಯನ್ನು ಪೂರ್ಣ ರೀತಿಯಲ್ಲಿ ಪೂರೈಸುವಂತೆ ನಮ್ಮನ್ನು ಪ್ರೋತ್ಸಾಹಿಸಿತು. (ಅ. ಕಾ. 20:24) ಕಳೆದ ಸೇವಾ ವರ್ಷದಲ್ಲಿ ಯೆಹೋವನು ನಮ್ಮ ಪ್ರಯತ್ನಗಳನ್ನು ಹೇರಳವಾಗಿ ಆಶೀರ್ವದಿಸಿದನು ಎಂಬುದರಲ್ಲಿ ಒಂದಿನಿತೂ ಸಂದೇಹವಿಲ್ಲ. ಜಗದ್ವ್ಯಾಪಕವಾಗಿ ದೊಡ್ಡ ಪ್ರಮಾಣದಲ್ಲಿ ಕೊಡಲಾದ ಸಾಕ್ಷಿಯು ಯೆಹೋವನ ಹೆಸರಿಗೆ ಘನಮಾನವನ್ನು ತಂದಿತು. ಪ್ರಚಾರಕರ ಹೊಸ ಉಚ್ಚಾಂಕ 73,13,173 ಆಗಿತ್ತು. ಇವರೆಲ್ಲರೂ ಸಾಕ್ಷಿಕಾರ್ಯದಲ್ಲಿ ಪಾಲ್ಗೊಂಡರು ಮಾತ್ರವಲ್ಲ, ದಿನನಿತ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಡಕಾಡುತ್ತಿರುವ ಸಹೃದಯದ ಜನರಿಗೆ ಬೋಧಿಸಿದರು. ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಹಾಜರಿ 1,81,68,323 ಆಗಿತ್ತು. ಇದು, ಈ ದುಷ್ಟ ಲೋಕದ ಅಂತ್ಯಕ್ಕೆ ಮುಂಚೆ ಯೆಹೋವನ ನಾಮವನ್ನು ಕರೆಯುವವರು ಇನ್ನೂ ಲಕ್ಷಾಂತರ ಮಂದಿ ಇರಬಹುದೆಂಬ ಭರವಸೆ ಕೊಡುತ್ತದೆ.

ಯೆಹೋವನು ಅನುಮತಿಸುವ ವರೆಗೆ ನಾವು ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಇರುವೆವು. ನಮ್ಮ ಟೆರಿಟೊರಿಯಲ್ಲಿರುವ ಜನರನ್ನು ತಲಪಲು ಸಾಧ್ಯವಿರುವ ಪ್ರತಿಯೊಂದು ಮಾರ್ಗವನ್ನು ಬಳಸುವೆವು. (ಮತ್ತಾ. 24:14; ಮಾರ್ಕ 13:10) ಮನೆಮನೆ ಸೇವೆ, ಬೀದಿ ಸಾಕ್ಷಿಕಾರ್ಯ, ಪತ್ರ ಇಲ್ಲವೆ ಟೆಲಿಫೋನ್‌ ಸಾಕ್ಷಿಕಾರ್ಯ, ಅನೌಪಚಾರಿಕ ಸಾಕ್ಷಿಕಾರ್ಯ ಹೀಗೆ ಯಾವುದೇ ವಿಧಾನವನ್ನು ಬಳಸಿ ನಾವು ಯೆಹೋವನ ಹೆಸರನ್ನೂ ಉದ್ದೇಶವನ್ನೂ ಆದಷ್ಟು ಹೆಚ್ಚೆಚ್ಚು ಜನರಿಗೆ ತಿಳಿಸಲು ಪ್ರಯತ್ನಿಸೋಣ.

ಯೆಹೋವನು ಬಲುಬೇಗನೆ ತನ್ನ ನಾಮವನ್ನು ಪವಿತ್ರೀಕರಿಸುವನೆಂದು ನಂಬಲು ನಮಗೆ ಅನೇಕ ಕಾರಣಗಳಿವೆ. (ಯೆಹೆ. 36:23) ದೇವರ ನಾಮವನ್ನು ಅಪಮಾನಕ್ಕೆ ಗುರಿಮಾಡುವವರೆಲ್ಲರೂ ನಿರ್ನಾಮವಾಗುವ ಸಮಯ ಧಾವಿಸಿ ಬರುತ್ತಿದೆ. ಯೆಹೋವನ ನಾಮವನ್ನು ಪ್ರಸಿದ್ಧಪಡಿಸಿ ಆತನ ವಿಶ್ವ ಪರಮಾಧಿಕಾರವನ್ನು ಎತ್ತಿಹಿಡಿದ ಆತನ ನಿಷ್ಠಾವಂತ ಸೇವಕರೆಲ್ಲರಿಗೆ ಅದು ಎಷ್ಟೊಂದು ಅತ್ಯಾನಂದದ ದಿನವಾಗಿರುವುದು!

“ಸದಾ ಎಚ್ಚರವಾಗಿರಿ!” ಎಂಬ ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು 2009ರಲ್ಲಿ ಜಗತ್ತಿನ ಅನೇಕ ಭಾಗಗಳಲ್ಲಿ ಜರುಗಿದವು. ಆ ಅಧಿವೇಶನಗಳು, ಯೆಹೋವನು ತನ್ನ ಜನರನ್ನು ಪ್ರೀತಿಯಿಂದ ಪರಾಮರಿಸುತ್ತಿರುವುದಕ್ಕೆ ಸಾಕ್ಷ್ಯವಾಗಿದ್ದವು. ಅವು ನಮ್ಮ ದೇವಪ್ರಭುತ್ವಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಯೆಹೋವನ ದಿನಕ್ಕಾಗಿ ಎಚ್ಚರವಾಗಿದ್ದು ಕಾಯುವ ಅಗತ್ಯವನ್ನು ಅವು ನಮಗೆ ಇನ್ನಷ್ಟು ಮನದಟ್ಟುಮಾಡಿಸಿದವು.—ಮಾರ್ಕ 13:37; 1 ಥೆಸ. 5:1, 2, 4.

ನಿಶ್ಚಯವಾಗಿಯೂ ಯೆಹೋವನು ನಮಗೆ ಒಳ್ಳೇದನ್ನೇ ಮಾಡುತ್ತಿದ್ದಾನೆ, ನಮ್ಮ ಹೃದಯಗಳನ್ನು ಹರ್ಷಾನಂದದಿಂದ ತುಂಬಿಸುತ್ತಿದ್ದಾನೆ. ನಮ್ಮನ್ನು ಹಸುರುಗಾವಲುಗಳಲ್ಲಿ ತಂಗಿಸುತ್ತಾನೆ ಮತ್ತು ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ.—ಕೀರ್ತ. 23:1, 2; 100:2, 5.

ಮುಂದಿನ ತಿಂಗಳುಗಳಲ್ಲಿ ನೀವು ರಾಜ್ಯದ ಸೇವೆಯಲ್ಲಿ ಕಾರ್ಯಮಗ್ನರಾಗಿರುವಾಗ ಯೆಹೋವನು ನಿಮ್ಮನ್ನು ಆಶೀರ್ವದಿಸುವನೆಂಬ ಭರವಸೆ ನಿಮಗಿರಲಿ.

ನಮ್ಮ ಲೋಕವ್ಯಾಪಕ ಸಹೋದರ ಬಳಗಕ್ಕೆ ಕ್ರೈಸ್ತ ಪ್ರೀತಿಯೊಂದಿಗೆ,

ನಿಮ್ಮ ಸಹೋದರರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ