ಆಡಳಿತ ಮಂಡಲಿಯಿಂದ ನಿಮಗೊಂದು ಪತ್ರ
ಪ್ರಿಯ ಜೊತೆ ‘ಮನೆಯವರೇ,’
2014ನೇ ವರ್ಷ ಒಂದು ಮಹತ್ವಪೂರ್ಣ ವರ್ಷ! ಈ ವರ್ಷದ ಆರಂಭದಲ್ಲಿ ನಿಮಗೆ ಪತ್ರ ಬರೆಯಲು ನಮಗೆ ತುಂಬ ಖುಷಿಯಾಗುತ್ತಿದೆ. ಈ ವರ್ಷದ ಕೊನೆಯಷ್ಟಕ್ಕೆ ನಮ್ಮ ನೆಚ್ಚಿನ ರಾಜನಾಗಿರುವ ಯೇಸು ಕ್ರಿಸ್ತನು ತನ್ನ ವಿರೋಧಿಗಳ ಮಧ್ಯೆ 100 ವರ್ಷಗಳ ಆಳ್ವಿಕೆಯನ್ನು ಪೂರ್ಣಗೊಳಿಸಿರುವನು.—ಕೀರ್ತ. 110:1, 2.
ಈ ಸೇವಾ ವರ್ಷದ ಆರಂಭದಲ್ಲಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ವಾರ್ಷಿಕ ಕೂಟ ನಡೆಯಿತು. ಅದರಲ್ಲಿ ನೂತನ ಲೋಕ ಬೈಬಲ್ ಭಾಷಾಂತರ ಕಮಿಟಿಯು ಮಾನವರಿಗೆ ಲಭ್ಯವಿರುವ ಬೈಬಲ್ ಭಾಷಾಂತರಗಳಲ್ಲೇ ಅತ್ಯುತ್ತಮ ಭಾಷಾಂತರದ ಪರಿಷ್ಕೃತ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಿತು. ಅರವತ್ತು ವರ್ಷಗಳ ಹಿಂದೆ ಯೆಹೋವ ದೇವರು ತನ್ನ ಆತ್ಮಜನಿತ ಪುತ್ರರನ್ನು ಬಳಸಿ ನೂತನ ಲೋಕ ಭಾಷಾಂತರವನ್ನು ನಮಗೆ ದಯಪಾಲಿಸಿದನು. (ರೋಮ. 8:15, 16) ಈ ಸಂಗತಿಯೇ ಈ ಭಾಷಾಂತರವನ್ನು ವಿಶೇಷವನ್ನಾಗಿಸುತ್ತದೆ! ನೀವಿದನ್ನು ಖಂಡಿತ ಒಪ್ಪುತ್ತೀರಲ್ಲವೇ?
ಸುಮಾರು ವರ್ಷಗಳಿಂದ ಆಡಳಿತ ಮಂಡಲಿಯ ರೈಟಿಂಗ್ ಕಮಿಟಿ ಬೈಬಲ್ ಭಾಷಾಂತರವನ್ನು ಆದ್ಯತೆಯಾಗಿಟ್ಟಿದೆ. ಈಗ ನೂತನ ಲೋಕ ಭಾಷಾಂತರ ಪೂರ್ತಿಯಾಗಿ ಅಥವಾ ಭಾಗಶಃ 121 ಭಾಷೆಗಳಲ್ಲಿದೆ. ನಿಮ್ಮಲ್ಲಿರುವ ಆ ಬೈಬಲನ್ನು ನೀವೆಷ್ಟು ಗಣ್ಯಮಾಡುತ್ತೀರೆಂದು ಯೆಹೋವನಿಗೆ ತೋರಿಸುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಪ್ರತಿದಿನವೂ ಅದನ್ನು ಓದಿರಿ, ಧ್ಯಾನಿಸಿರಿ. ಹಾಗೆ ಮಾಡುವಾಗ ಅದರ ಗ್ರಂಥಕರ್ತನಾದ ಯೆಹೋವ ದೇವರಿಗೆ ನೀವು ಇನ್ನಷ್ಟು ಆಪ್ತರಾಗುವಿರಿ.—ಯಾಕೋ. 4:8.
ನಮಗೆ ಅಮೂಲ್ಯರಾಗಿರುವ ನಮ್ಮ ಸಹೋದರ-ಸಹೋದರಿಯರು ಕಷ್ಟಗಳನ್ನು ಅನುಭವಿಸುವುದನ್ನು ಕೇಳಿಸಿಕೊಂಡಾಗ ನಮಗೆ ತುಂಬ ದುಃಖ ಆಗುತ್ತದೆ. ಇಂಥ ಸನ್ನಿವೇಶಗಳಿಂದಾಗಿ ಕೆಲವೊಂದು ಸಾರಿ ಅವರಿಗೆ ಸಹೋದರ ಸಹೋದರಿಯರ ಜೊತೆಸೇರಿ ಸಂತೋಷಪಡಲು ಆಗಲಿಕ್ಕಿಲ್ಲ. ಏಷ್ಯಾದ ಒಂದು ಕುಟುಂಬದ ಅನುಭವವನ್ನೇ ತಕ್ಕೊಳ್ಳಿ. ಆ ಕುಟುಂಬದ ಪರಿಸ್ಥಿತಿ ಇದ್ದಕ್ಕಿದ್ದಂತೆ ಬುಡ ಮೇಲಾಯಿತು. ತಾಯಿಗೆ ಹಠಾತ್ತನೆ ಇಡೀ ದೇಹಕ್ಕೆ ಲಕ್ವ ಹೊಡೆಯಿತು. ವೈದ್ಯಕೀಯ ನಿಪುಣರೇ ತಬ್ಬಿಬ್ಬಾಗಿ ತಮ್ಮಿಂದ ಏನೂ ಮಾಡಲಿಕ್ಕಾಗಲ್ಲ ಎಂದು ಕೈಚೆಲ್ಲಿದರು. ಆ ಕುಟುಂಬದವರಿಗೆ ಎಷ್ಟೊಂದು ದುಃಖವಾಗಿರಬೇಕು. ಗಂಡನು ಈಗ ತನ್ನ ಹೆಂಡತಿಯನ್ನು 24 ಗಂಟೆಯೂ ಹತ್ತಿರವಿದ್ದು ನೋಡಿಕೊಳ್ಳುತ್ತಾನೆ. ಅವರ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ತಮ್ಮ ಹೆತ್ತವರಿಗೆ ಬೆನ್ನೆಲುಬಾಗಿ ನಿಂತು ಒಳ್ಳೇ ಮಾದರಿಯನ್ನಿಟ್ಟಿದ್ದಾರೆ. ಈ ಆದರ್ಶ ಕುಟುಂಬ ಮತ್ತು ಅನೇಕ ಕಷ್ಟಗಳನ್ನು ಅನುಭವಿಸಿರುವ ನೀವು ನಿಮ್ಮ ನಂಬಿಕೆಗೆ ಆದ ಈ ಪರೀಕ್ಷೆಗಳನ್ನು ಯಶಸ್ವಿಯಾಗಿ ಜಯಿಸಿದ್ದೀರಿ. ಅದಕ್ಕಾಗಿ ನಿಜಕ್ಕೂ ನೀವು ಆನಂದಿಸುತ್ತಿದ್ದೀರಿ. (ಯಾಕೋ. 1:2-4) ಯೆಹೋವನು ತನ್ನ ಅಭಿಷಿಕ್ತರಿಗೆ ಮತ್ತು ಬೇರೆ ಕುರಿಗಳಿಗೆ, ಪರೀಕ್ಷೆಗಳನ್ನು ತಾಳಿಕೊಳ್ಳುತ್ತಾ ಇದ್ದದ್ದಕ್ಕಾಗಿ ಸಂತೋಷಿಸುವಿರಿ ಎಂದು ಆಶ್ವಾಸನೆ ಕೊಡುತ್ತಾನೆ. ಯಾಕೆಂದರೆ, ಆತನು ನಮಗೆ ಅನಂತಜೀವನವನ್ನು ಬಹುಮಾನವಾಗಿ ಕೊಡಲಿದ್ದಾನೆ!—ಯಾಕೋ. 1:12.
ಕಳೆದ ವರ್ಷ ಸ್ಮರಣೆಗೆ 1,92,41,252 ಮಂದಿ ಹಾಜರಾಗಿದ್ದರು. ದೇವಜನರ ಈ ವಿಶೇಷ ಕೂಟಕ್ಕೆ ಹಾಜರಾಗುವ ಮೂಲಕ ಇಷ್ಟೊಂದು ಮಂದಿ ಯೆಹೋವನಿಗೆ ಮತ್ತು ಯೇಸು ಕ್ರಿಸ್ತನಿಗೆ ಗಣ್ಯತೆ ತೋರಿಸುವುದನ್ನು ನೋಡುವಾಗ ತುಂಬ ಸಂತೋಷವಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ 20 ಲಕ್ಷಕ್ಕಿಂತಲೂ ಹೆಚ್ಚು ಪ್ರಚಾರಕರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಮೂಲಕ ಯೆಹೋವನಿಗೆ ಸ್ತುತಿಘೋಷ ಸಲ್ಲಿಸಿದರು. ಇದು ನಮ್ಮೆಲ್ಲರನ್ನು ಹುರಿದುಂಬಿಸುತ್ತದಲ್ಲವೇ? ಅಷ್ಟೇ ಅಲ್ಲದೆ, ಸರ್ಕಿಟ್ ಮೇಲ್ವಿಚಾರಕರ ಭೇಟಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳನ್ನು ಬಿಟ್ಟು ಬೇರೆ ತಿಂಗಳಲ್ಲಿದ್ದರೂ ಆ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುತ್ತಿರುವವರು ಇಡೀ ಪಯನೀಯರ್ ಕೂಟವನ್ನು ಹಾಜರಾಗಬಹುದು ಎಂದು ತಿಳಿದು ನಿಮಗೆ ಸಂತೋಷವಾಯಿತಲ್ಲವೇ? ಆಧ್ಯಾತ್ಮಿಕವಾಗಿ ವಿವೇಕಿಗಳಾಗಿರುವವರಿಗೆ ಸಾರುವ ಕೆಲಸದಲ್ಲಿ ಹಾಗೂ ಸಭಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದರ ಮಹತ್ವ ತಿಳಿದಿದೆ. ಈ ರೀತಿ ಕ್ರಿಯಾಶೀಲರಾಗಿರುವುದು ನಾವು ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಉಳಿಯಲು ಸಹಾಯಮಾಡುತ್ತದೆ. ಮಾತ್ರವಲ್ಲ ಪಿಶಾಚನು ನಮ್ಮ ನಂಬಿಕೆಯನ್ನು ಶಿಥಿಲಗೊಳಿಸಿ ನಮ್ಮನ್ನು ಜೀವದ ಮಾರ್ಗದಿಂದ ದೂರ ತಳ್ಳಲು ಮಾಡುವ ಕುತಂತ್ರಗಳಿಗೆ ನಾವು ಬಲಿಬೀಳದಿರಲು ಸಾಧ್ಯವಾಗುತ್ತದೆ.—1 ಕೊರಿಂ. 15:58.
ಕಳೆದ ಸೇವಾ ವರ್ಷದಲ್ಲಿ 2,77,344 ಮಂದಿ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದರು! ಈಗ ಅವರು ಲೋಕವ್ಯಾಪಕವಾಗಿರುವ ತಮ್ಮ ಸಹೋದರರ ಜೊತೆಜೊತೆಗೆ ಜೀವದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈ ವಿಷಯ ನಮ್ಮಲ್ಲಿ ನವಚೈತನ್ಯ ತುಂಬುತ್ತದಲ್ಲವೇ? (ಮತ್ತಾ. 7:13, 14) ಈ ಹೊಸಬರು ‘ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡಲು’ ಅವರಿಗೆ ನಮ್ಮ ಬೆಂಬಲ, ನೆರವು ಬೇಕು. (ಕೊಲೊ. 2:7) ಹಾಗಾಗಿ ಕಡೇ ವರೆಗೆ ತಾಳಿಕೊಂಡಿರುವಂತೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರಿ. (ಮತ್ತಾ. 24:13) “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಿರಿ.” (1 ಥೆಸ. 5:14) ನಾವೆಲ್ಲರೂ, “ನಿನ್ನ ರಾಜ್ಯವು ಬರಲಿ” ಎಂದು “ಎಡೆಬಿಡದೆ ಪ್ರಾರ್ಥನೆ” ಮಾಡುತ್ತಾ ಇರೋಣ.—1 ಥೆಸ. 5:17; ಮತ್ತಾ. 6:10.
ಯೆಹೋವನನ್ನು ಪ್ರೀತಿಸುವ ನಿಮ್ಮಲ್ಲಿ ಪ್ರತಿಯೊಬ್ಬರನ್ನು ನಾವು ಪ್ರೀತಿಸುತ್ತೇವೆ!
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ