ವಿವೇಚನೆ ಉಪಯೋಗಿಸಿ, ಸುವಾರ್ತೆ ಸಾರಿ
1 ವಿವಿಧ ನಂಬಿಕೆ ಮತ್ತು ಹಿನ್ನೆಲೆಯ ಜನರಿಗೆ ಸುವಾರ್ತೆ ಸಾರಲು ವಿವೇಚನೆ ಎಷ್ಟು ಪ್ರಾಮುಖ್ಯ ಎಂದು ಅಪೊಸ್ತಲ ಪೌಲನು ಒತ್ತಿ ಹೇಳಿದನು. ಈಗಲೂ, ದೇವರೆಂದರೆ ತುಂಬ ಭಯ-ಭಕ್ತಿ ಇರುವ ಜನರೂ ಅದೇ ಸಮಯದಲ್ಲಿ ದೇವರ ಬಗ್ಗೆ ಆಸಕ್ತಿಯೇ ಇಲ್ಲದ ಜನರೂ ಇದ್ದಾರೆ. ಆದ್ದರಿಂದ ನಾವು ಸುವಾರ್ತೆ ಸಾರುವಾಗ “ಎಲ್ಲ ರೀತಿಯ ಜನರಿಗೆ” ಇಷ್ಟವಾಗುವ ರೀತಿಯಲ್ಲಿ ಮಾತಾಡಬೇಕು. ಇದನ್ನು ಮಾಡಲು ವಿವೇಚನೆ ಅತ್ಯಾವಶ್ಯಕ.—1 ಕೊರಿಂ. 9:19-23.
2 ಕ್ಷೇತ್ರ ಸೇವೆಯಲ್ಲಿ ವಿವೇಚನೆ ತೋರಿಸುವುದು ಹೇಗೆ? ಮನೆಯವರ ಆಸಕ್ತಿಗೆ ಸರಿಯಾಗಿ ನಿಮ್ಮ ನಿರೂಪಣೆಯನ್ನು ಬದಲಾಯಿಸುವ ಮೂಲಕವೇ. ಇದನ್ನು ಮಾಡಲು ಚೆನ್ನಾಗಿ ತಯಾರಿ ಮಾಡಬೇಕು. ನಿಮ್ಮ ಹತ್ತಿರ ಇರುವ ಪುಸ್ತಕಗಳು ಮತ್ತು ಪತ್ರಿಕೆಗಳಲ್ಲಿ ಯಾವ ವಿಷಯ ಇದೆ ಎಂದು ಚೆನ್ನಾಗಿ ತಿಳಿದುಕೊಳ್ಳಿ. ಆಗ ನೀವು ಯಾವುದೇ ಸನ್ನಿವೇಶದಲ್ಲಾದರೂ ಸುವಾರ್ತೆ ಸಾರಲು ಸಿದ್ಧರಿರುತ್ತೀರಿ. ಸುವಾರ್ತೆ ಸಾರುವಾಗ ವಯಸ್ಸಾದವರು, ಯುವ ಜನರು, ಗೃಹಿಣಿಯರು, ಕೆಲಸಕ್ಕೆ ಹೋಗುವ ಸ್ತ್ರೀಯರು, ಹೀಗೆ ಬೇರೆ ಬೇರೆ ಜನರು ಸಿಗುತ್ತಾರೆ. ಆದ್ದರಿಂದ ವಿವೇಚನೆ ಉಪಯೋಗಿಸಿ ಅವರಿಗೆ ಇಷ್ಟವಾಗುವ ವಿಷಯವನ್ನು ಆರಿಸಿ ಮಾತಾಡಬೇಕು.
3 ಒಂದು ಮನೆಗೆ ಹೋದಾಗ ಅಲ್ಲಿನ ಪರಿಸರವನ್ನು ಗಮನಿಸಿ. ಹೀಗೆ ಮಾಡುವುದರಿಂದ ಮನೆಯವರಿಗೆ ಮಕ್ಕಳಿದ್ದಾರಾ? ಮನೆಯವರು ಯಾವ ಧರ್ಮದವರು? ಮನೆಯನ್ನು ವ್ಯವಸ್ಥಿತವಾಗಿ ಇಟ್ಟಿದ್ದಾರಾ? ಎಂಬ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ಆಗ ಮನೆಯವರ ಪರಿಸ್ಥಿತಿಗೆ ಸರಿಯಾಗಿ, ಅವರಿಗೆ ಆಸಕ್ತಿಕರವಾದ ವಿಷಯಗಳ ಬಗ್ಗೆ ಮಾತಾಡುತ್ತಾ ನಿಮ್ಮ ಸಂಭಾಷಣೆಯನ್ನು ಆರಂಭಿಸಲು ಸಾಧ್ಯವಾಗುತ್ತದೆ. ಜಾಣ್ಮೆ ಉಪಯೋಗಿಸುತ್ತಾ ಮನೆಯವರಿಗೆ ಪ್ರಶ್ನೆಗಳನ್ನು ಕೇಳಿ. ಅವರು ಉತ್ತರಿಸುವಾಗ ಸರಿಯಾಗಿ ಕಿವಿಗೊಡಿ. ಹೀಗೆ ನೀವು ಮನೆಯವರ ನಂಬಿಕೆ ಮತ್ತು ಅಭಿಪ್ರಾಯಗಳನ್ನು ತಿಳಿದುಕೊಳ್ಳಬಹುದು ಮತ್ತು ಅದಕ್ಕೆ ಸರಿಯಾಗಿ ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು.
4 ಚೆನ್ನಾಗಿ ತಯಾರಿಸಿ, ವಿವೇಚನೆಯನ್ನು ಉಪಯೋಗಿಸಿ ಸುವಾರ್ತೆ ಸಾರುವುದಾದರೆ ನಾವು ಸಹ ಅಪೊಸ್ತಲ ಪೌಲನು ಹೇಳಿದಂತೆಯೇ ಹೇಳಬಲ್ಲೆವು. ಅವನು ಹೇಳಿದ್ದು: “ನಾನು ಯಾವ ರೀತಿಯಲ್ಲಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು.”—1 ಕೊರಿಂ. 9:22; ಜ್ಞಾನೋ. 19:8.