ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ಡಿಸೆಂಬರ್ 5-11
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 761 ¶3
ಸಮಾಧಾನ ಸಂಬಂಧ
ಸಮಾಧಾನ ಸಂಬಂಧಕ್ಕೆ ಮತ್ತೆ ಬರಲು ಅಗತ್ಯವಾದ ಹೆಜ್ಜೆಗಳು. ದೇವರ ನಿಯಮವನ್ನು ಉಲ್ಲಂಘಿಸಲಾಗಿರುವ ಕಾರಣ ಆತನ ವಿರುದ್ಧ ತಪ್ಪುಮಾಡಲಾಗಿದೆ, ಈಗಲೂ ಮಾಡಲಾಗುತ್ತಿದೆ. ಹಾಗಾಗಿ ದೇವರೊಂದಿಗೆ ಸಮಾಧಾನ ಮಾಡಬೇಕಾದವನು ಮಾನವನು, ದೇವರು ಮನುಷ್ಯನೊಂದಿಗಲ್ಲ. (ಕೀರ್ತನೆ 51:1-4) ಮನುಷ್ಯನು ಯಾವ ರೀತಿಯಲ್ಲೂ ದೇವರಿಗೆ ಸಮಾನನಲ್ಲದ ಕಾರಣ ಮನುಷ್ಯನು ಶರತ್ತುಗಳನ್ನು ಇಡಲು ಅರ್ಹನಲ್ಲ. ಅಷ್ಟುಮಾತ್ರವಲ್ಲ, ಸರಿ ಯಾವುದು ಎನ್ನುವುದರ ಕುರಿತ ದೇವರ ಮಟ್ಟವನ್ನು ಬದಲಾಯಿಸಲು, ತಿದ್ದಲು, ಸುಧಾರಣೆ ಮಾಡಲು ಸಾಧ್ಯವಿಲ್ಲ. (ಯೆಶಾ 55:6-11; ಮಲಾ 3:6; ಹೋಲಿಸಿ ಯಾಕೋಬ 1:17.) ಹಾಗಾಗಿ ದೇವರೊಟ್ಟಿಗೆ ಸಮಾಧಾನ ಸಂಬಂಧಕ್ಕೆ ಬರಲು ಆತನು ಇಟ್ಟಿರುವ ಶರತ್ತುಗಳನ್ನು ಹೆಚ್ಚುಕಡಿಮೆ ಮಾಡಲಾಗುವುದಿಲ್ಲ ಇಲ್ಲವೇ ಪ್ರಶ್ನಿಸಲೂ ಆಗುವುದಿಲ್ಲ ಅಥವಾ ರಾಜಿಮಾಡಿಕೊಳ್ಳಲೂ ಆಗುವುದಿಲ್ಲ. (ಯೋಬ 40:1, 2, 6-8 ಹೋಲಿಸಿ; ಯೆಶಾ 40:13, 14.) ಅನೇಕ ಬೈಬಲ್ ಭಾಷಾಂತರಗಳಲ್ಲಿ ಯೆಶಾಯ 1:18ನ್ನು ಹೀಗೆ ಕೊಡಲಾಗಿದೆ: “ಈಗ ಬನ್ನಿ, ಒಟ್ಟಿಗೆ ಚರ್ಚಿಸೋಣ, ಎನ್ನುತ್ತಾನೆ ಕರ್ತನು” (KJ; AT; JP; RS). ಆದರೆ ಇದಕ್ಕಿಂತಲೂ ಸೂಕ್ತವಾದ, ಸಮಂಜಸವಾದ ಭಾಷಾಂತರ ಹೀಗಿದೆ: “ಜನರೇ, ಈಗ ಬನ್ನಿ, ನಮ್ಮ ಮಧ್ಯೆ ವಿಷಯಗಳನ್ನು ಸರಿಪಡಿಸೋಣ [“ವ್ಯಾಜ್ಯವನ್ನು ಬಗೆಹರಿಸೋಣ,” Ro] ಎನ್ನುತ್ತಾನೆ ಯೆಹೋವ” (ನೂತನ ಲೋಕ ಭಾಷಾಂತರ). ಸಂಬಂಧದಲ್ಲಿ ಒಡಕನ್ನು ಉಂಟುಮಾಡಿದ ತಪ್ಪು ಪೂರ್ತಿ ಮನುಷ್ಯನದ್ದೇ, ದೇವರದ್ದಲ್ಲ.—ಯೆಹೆ 18:25, 29-32.
ಡಿಸೆಂಬರ್ 12-18
ಬೈಬಲಿನಲ್ಲಿರುವ ರತ್ನಗಳು | ಯೆಶಾಯ 6-10
“ಮೆಸ್ಸೀಯ—ನೆರವೇರಿದ ಪ್ರವಾದನೆ”
w07 5/15 6
ಕಷ್ಟನೋವು ತುಂಬಿರುವ ಲೋಕದಲ್ಲಿ ನಿರೀಕ್ಷೆ
ನಿರೀಕ್ಷೆಗೆ ಖಚಿತವಾದ ತಳಪಾಯ
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೇಳಿದ್ದು: “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು: ‘ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.’ ” (ಮತ್ತಾಯ 6:9, 10) ಸ್ವರ್ಗದಲ್ಲಿರುವ ಆ ರಾಜ್ಯ ಅಂದರೆ ಯೇಸು ಕ್ರಿಸ್ತನು ಆಳುತ್ತಿರುವ ಆ ಸರ್ಕಾರದ ಮೂಲಕ ದೇವರು ಭೂಮಿ ಮೇಲೆ ತನ್ನ ಹಕ್ಕುಭರಿತ ಪರಮಾಧಿಕಾರವನ್ನು ತೋರಿಸಿಕೊಡುತ್ತಾನೆ.—ಕೀರ್ತನೆ 2:7-12; ದಾನಿಯೇಲ 7:13, 14.
ಇಂದು ಜೀವನದ ಪ್ರತಿಯೊಂದೂ ಕ್ಷೇತ್ರದಲ್ಲೂ ಕಂಡುಬರುತ್ತಿರುವ ವಿವಿಧ ರೀತಿಯ ಭಯವು, ದೇವರು ಈ ಬಗ್ಗೆ ಏನಾದರೂ ಮಾಡಲೇಬೇಕೆಂದು ಸ್ಪಷ್ಟವಾಗಿ ಸೂಚಿಸುತ್ತದೆ. ಸಂತೋಷದ ವಿಷಯವೇನೆಂದರೆ, ದೇವರು ಇದನ್ನು ಮಾಡುವ ಸಮಯ ಹತ್ತಿರವಿದೆ! ಯೆಹೋವನು ಮೆಸ್ಸೀಯ ರಾಜನಾಗಿ ಸಿಂಹಾಸನಕ್ಕೇರಿಸಿರುವ ಯೇಸು ಕ್ರಿಸ್ತನಿಗೆ ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಮತ್ತು ಆತನ ಹೆಸರನ್ನು ಪವಿತ್ರೀಕರಿಸುವ ಅಧಿಕಾರವನ್ನು ಕೊಡಲಾಗಿದೆ. (ಮತ್ತಾಯ 28:18) ಅತಿ ಬೇಗನೆ ಆ ರಾಜ್ಯದ ಆಳ್ವಿಕೆಯು ಭೂಮಿಗೆ ವಿಸ್ತರಿಸಿ, ಭಯ ಹಾಗೂ ಚಿಂತೆಯ ಎಲ್ಲ ಕಾರಣಗಳನ್ನು ಅಳಿಸಿಹಾಕಲಿದೆ. ನಮಗಿರುವ ಭಯ, ಹೆದರಿಕೆಗಳನ್ನು ತೆಗೆದುಹಾಕಲು ಅರ್ಹನಾದ ರಾಜ ಯೇಸುವಿನಲ್ಲಿರುವ ಗುಣಗಳನ್ನು ಯೆಶಾಯ 9:6 ಪಟ್ಟಿಮಾಡುತ್ತದೆ. ಉದಾಹರಣೆಗೆ ಅವನನ್ನು “ನಿತ್ಯನಾದ ತಂದೆ,” “ಅದ್ಭುತಸ್ವರೂಪನು,” “ಆಲೋಚನಾಕರ್ತನು” ಮತ್ತು “ಸಮಾಧಾನದ ಪ್ರಭು” ಎಂದು ಕರೆಯಲಾಗಿದೆ.
“ನಿತ್ಯನಾದ ತಂದೆ” ಎಂಬ ಅಕ್ಕರೆಯ ಪದಪ್ರಯೋಗದ ಬಗ್ಗೆ ಯೋಚಿಸಿ. ಯೇಸು ವಿಧೇಯ ಮಾನವರಿಗೆ ತನ್ನ ವಿಮೋಚನಾ ಯಜ್ಞದ ಆಧಾರದ ಮೇಲೆ ಭೂಮಿಯಲ್ಲಿ ನಿತ್ಯ ಜೀವ ಕೊಡುವ ಅಧಿಕಾರ, ಶಕ್ತಿಯನ್ನು ಪಡೆದಿರುತ್ತಾನೆ, ಅಷ್ಟುಮಾತ್ರವಲ್ಲ ಹಾಗೆ ಮಾಡುವ ಆಸೆಯೂ ಅವನಿಗಿದೆ. ಇದರರ್ಥ, ಪ್ರಥಮ ಮನುಷ್ಯನಾದ ಆದಾಮನು ಬರಮಾಡಿದ ಪಾಪ ಹಾಗೂ ಅಪರಿಪೂರ್ಣತೆಯಿಂದ ಕೊನೆಗೂ ಮಾನವರಿಗೆ ಬಿಡುಗಡೆ ಸಿಗಲಿದೆ. (ಮತ್ತಾಯ 20:28; ರೋಮನ್ನರಿಗೆ 5:12; 6:23) ದೇವರು ತನಗೆ ಕೊಟ್ಟಿರುವ ಶಕ್ತಿಯನ್ನು ಯೇಸು ಬಳಸಿ ಸತ್ತುಹೋಗಿರುವ ಸಾವಿರಾರು ಮಂದಿಯನ್ನು ಮತ್ತೆ ಜೀವಕ್ಕೆ ತರಲಿದ್ದಾನೆ.—ಯೋಹಾನ 11:25, 26.
ಯೇಸು ಭೂಮಿಯಲ್ಲಿದ್ದಾಗ “ಅದ್ಭುತಸ್ವರೂಪನು, ಆಲೋಚನಾಕರ್ತನು” ಅಂದರೆ ಅದ್ಭುತವಾದ ಸಲಹೆಗಾರನು ಆಗಿದ್ದಾನೆಂಬ ಮಾತು ರುಜುವಾಯಿತು. ಆತನಿಗೆ ದೇವರ ವಾಕ್ಯದ ಬಗ್ಗೆ ಇದ್ದ ಜ್ಞಾನ ಹಾಗೂ ಮಾನವ ಸ್ವಭಾವದ ಕುರಿತು ಇದ್ದ ಅಸಾಮಾನ್ಯವಾದ ತಿಳಿವಳಿಕೆಯ ಕಾರಣ, ದಿನನಿತ್ಯದ ಜೀವನದ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆಂದು ತಿಳಿದಿತ್ತು. ಕ್ರಿಸ್ತನು ಸ್ವರ್ಗದಲ್ಲಿ ಸಿಂಹಾಸನಾರೂಢನಾದ ನಂತರವೂ ಅದ್ಭುತ ಸಲಹೆಗಾರನಾಗಿ ಮುಂದುವರಿದಿದ್ದಾನೆ. ಮಾನವಕುಲದೊಂದಿಗೆ ಸಂವಾದಿಸಲು ಯೆಹೋವನು ಬಳಸುವ ಮಾಧ್ಯಮಗಳಲ್ಲಿ ಆತನೇ ಪ್ರಮುಖನು. ಬೈಬಲಿನಲ್ಲಿ ದಾಖಲಾಗಿರುವ ಯೇಸುವಿನ ಸಲಹೆ, ಸೂಚನೆ ಯಾವಾಗಲೂ ವಿವೇಕಯುತವಾಗಿದೆ. ದೋಷವಿಲ್ಲದ್ದೂ ಆಗಿದೆ. ನಾವಿದನ್ನು ತಿಳಿದುಕೊಂಡು ನಂಬಿದರೆ ಅದು, ಅನಿಶ್ಚಿತತೆಯಿಂದ ಮತ್ತು ಕಂಗೆಡಿಸುವ ಭಯದಿಂದ ಮುಕ್ತವಾದ ಜೀವನಕ್ಕೆ ನಡೆಸುತ್ತದೆ.
ಯೆಶಾಯ 9:6 ಯೇಸುವನ್ನು “ಸಮಾಧಾನದ ಪ್ರಭು” ಎಂದೂ ಕರೆಯುತ್ತದೆ. ಈ ಹುದ್ದೆಯಲ್ಲಿರುವ ಕ್ರಿಸ್ತನು ಬೇಗನೆ ತನ್ನ ಶಕ್ತಿಯನ್ನು ಬಳಸಿ ಎಲ್ಲ ವಿಧದ ರಾಜಕೀಯ, ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ತೆಗೆದುಹಾಕುವನು. ಹೇಗೆ? ಮಾನವಕುಲವನ್ನು ಮೆಸ್ಸೀಯನ ರಾಜ್ಯದ ಶಾಂತಿಭರಿತವಾದ ಒಂದೇ ಆಳ್ವಿಕೆಯಡಿ ತರುವ ಮೂಲಕ.—ದಾನಿಯೇಲ 2:44.
ದೇವರ ರಾಜ್ಯ ಆಳುವಾಗ ಇಡೀ ಲೋಕದಲ್ಲಿ ನಿತ್ಯ ಶಾಂತಿ ಇರಲಿದೆ. ನಾವೇಕೆ ನಿಶ್ಚಯದಿಂದಿರಬಲ್ಲೆವು? ಕಾರಣವನ್ನು ಯೆಶಾಯ 11:9ರಲ್ಲಿ ತಿಳಿಸಲಾಗಿದೆ: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ [ರಾಜ್ಯದ ಪ್ರಜೆಗಳು] ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಕಟ್ಟಕಡೆಗೆ ಭೂಮಿ ಮೇಲಿರುವ ಪ್ರತಿಯೊಬ್ಬ ಮಾನವನಿಗೆ ದೇವರ ನಿಷ್ಕೃಷ್ಟ ಜ್ಞಾನ ಇರುವುದು ಮತ್ತು ಆತನಿಗೆ ವಿಧೇಯನಾಗುವನು. ಇದರ ಬಗ್ಗೆ ಯೋಚಿಸುವಾಗ ನಿಮಗೆ ಖುಷಿ ಆಗುವುದಿಲ್ಲವಾ? ಹೌದಾದರೆ, ಈ ಅಮೂಲ್ಯ ಜ್ಞಾನ ಅಂದರೆ “ಯೆಹೋವನ ಜ್ಞಾನ”ವನ್ನು ತೆಗೆದುಕೊಳ್ಳಲು ತಡಮಾಡಬೇಡಿ.
ನಂಬಿಕೆ ಕಟ್ಟುವಂಥ ಮತ್ತು ಜೀವದಾಯಕ ದೇವಜ್ಞಾನವನ್ನು ಪಡೆಯಲು ನಮ್ಮ ದಿನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮತ್ತು ಉಜ್ವಲವಾದ ಭವಿಷ್ಯದ ಕುರಿತು ಬೈಬಲ್ ಏನು ಹೇಳುತ್ತದೆಂದು ನೀವು ಪರಿಶೀಲಿಸಬಹುದು. ನಿಮ್ಮ ಕ್ಷೇತ್ರದಲ್ಲಿರುವ ಜನರಿಗೆ ಯೆಹೋವನ ಸಾಕ್ಷಿಗಳು ಬೈಬಲಿನ ಉಚಿತ ಅಧ್ಯಯನದ ಬಗ್ಗೆ ತಿಳಿಸುತ್ತಿದ್ದಾರೆ. ನೀವೂ ಈ ಏರ್ಪಾಡಿನಿಂದ ಪ್ರಯೋಜನ ಪಡೆಯಬಹುದು. ಬೈಬಲಿನ ಅಧ್ಯಯನ ಮಾಡುವುದು, ನಿಮ್ಮ ಭಯವನ್ನು ಓಡಿಸಿ, ಕಷ್ಟ ತುಂಬಿರುವ ಈ ಲೋಕದಲ್ಲಿ ನಿಜವಾದ ನಿರೀಕ್ಷೆ ಪಡೆಯಲಿಕ್ಕಾಗಿರುವ ಒಂದು ವಿಧವಾಗಿದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 1219
ಯೆಶಾಯ
ಯೆಶಾಯನು ಯೆಹೂದದಲ್ಲಿ ಪ್ರವಾದಿಯಾಗಿ ಸೇವೆಮಾಡುತ್ತಿದ್ದ ಸಮಯದಲ್ಲಿ, ವಿಶೇಷವಾಗಿ ರಾಜ ಆಹಾಜನ ದಿನಗಳಲ್ಲಿ ಆ ರಾಜ್ಯದ ನೈತಿಕ ಸ್ಥಿತಿ ತುಂಬ ಕೆಳಮಟ್ಟಕ್ಕಿಳಿದಿತ್ತು. ಅಲ್ಲಿನ ಪ್ರಧಾನರು ಮತ್ತು ಸಾಮಾನ್ಯ ಜನರು ದಂಗೆಯೆದ್ದಿದ್ದರು. ಯೆಹೋವನ ದೃಷ್ಟಿಯಲ್ಲಿ ಆ ಜನಾಂಗದ ‘ತಲೆ ಮತ್ತು ಹೃದಯವೆಲ್ಲಾ’ ರೋಗಗ್ರಸ್ತವಾಗಿತ್ತು. ಅಲ್ಲಿನ ನಾಯಕರನ್ನು ‘ಸೊದೋಮಿನ ಅಧಿಪತಿಗಳು’ ಎಂದು ಕರೆಯಲಾಯಿತು. ಅಲ್ಲಿನ ಜನರನ್ನು ‘ಗೊಮೋರದ ಪ್ರಜೆಗಳಿಗೆ’ ಹೋಲಿಸಲಾಯಿತು. (ಯೆಶಾ 1:2-10) ಅವರ ಕಿವಿಗಳು ಮಂದವಾಗಿರುವವು ಅಂದರೆ ಅವರು ಪ್ರತಿಕ್ರಿಯಿಸುವುದಿಲ್ಲವೆಂದು ಯೆಶಾಯನಿಗೆ ಮುಂಚೆಯೇ ತಿಳಿಸಲಾಗಿತ್ತು. ಆ ಇಡೀ ಜನಾಂಗವು ನಾಶವಾಗುವ ವರೆಗೆ ಪರಿಸ್ಥಿತಿ ಹೀಗೇ ಇರುವುದೆಂದು ಯೆಹೋವನು ಹೇಳಿದನು. ಒಂದು ದೊಡ್ಡ ಮರದ ಬುಡದ ಹಾಗೆ, ಆ ಜನಾಂಗದ ‘ಹತ್ತನೆಯ ಒಂದು ಭಾಗ,’ ‘ದೇವಕುಲ’ ಮಾತ್ರ ಉಳಿಯುವುದೆಂದೂ ಹೇಳಿದನು. ಯೆಶಾಯನ ಪ್ರವಾದನಾ ಕೆಲಸವು ಉಳಿಯಲಿದ್ದ ಆ ಚಿಕ್ಕ ಸಂಖ್ಯೆಯವರಿಗೆ ಸಾಂತ್ವನ ಹಾಗೂ ಬಲ ಕೊಟ್ಟಿರಬೇಕು. ಆದರೆ ಆ ಜನಾಂಗದ ಉಳಿದವರು ಯೆಶಾಯನ ಮಾತಿಗೆ ಕಿವಿಗೊಡಲಿಲ್ಲ.—ಯೆಶಾ 6:1-13.
ಯೆಶಾಯನು ಮುಖ್ಯವಾಗಿ ಪ್ರವಾದಿಸಿದ್ದು ಯೆಹೂದದ ಬಗ್ಗೆಯಾದರೂ, ಅವನು ಇಸ್ರಾಯೇಲ್ ರಾಜ್ಯ ಹಾಗೂ ಸುತ್ತಲಿನ ಜನಾಂಗಗಳ ಬಗ್ಗೆಯೂ ಪ್ರವಾದನೆ ನುಡಿದನು. ಏಕೆಂದರೆ ಇವುಗಳೆಲ್ಲವೂ ಯೆಹೂದದ ಸನ್ನಿವೇಶ ಹಾಗೂ ಇತಿಹಾಸದ ಮೇಲೆ ಪ್ರಭಾವ ಬೀರಿದ್ದವು. ಯೆಶಾಯನು ತುಂಬ ಸಮಯದ ವರೆಗೆ ಪ್ರವಾದಿಯಾಗಿ ಕೆಲಸಮಾಡಿದನು. ಅವನು ಆರಂಭಿಸಿದ್ದು ರಾಜ ಉಜ್ಜೀಯನು ಸತ್ತ ವರ್ಷದಲ್ಲಿ ಅಂದರೆ ಕ್ರಿ.ಪೂ. 778ರಲ್ಲಿ, ಅಥವಾ ಅದಕ್ಕಿಂತ ಸ್ವಲ್ಪ ಮುಂಚೆ ಮತ್ತು ಹಿಜ್ಕೀಯನ ಆಳ್ವಿಕೆಯ 14ನೇ ವರ್ಷದ (ಕ್ರಿ.ಪೂ. 732) ಬಳಿಕ ಸ್ವಲ್ಪ ಸಮಯದ ವರೆಗೆ ಆ ಕೆಲಸಮಾಡಿದನು.—ಯೆಶಾ 36:1, 2; 37:37, 38.
ಯೆಶಾಯನ ಕುಟುಂಬ. ಯೆಶಾಯನಿಗೆ ಮದುವೆಯಾಗಿತ್ತು. ಅವನ ಹೆಂಡತಿಯನ್ನು “ಪ್ರವಾದಿನಿ” ಎಂದು ಕರೆಯಲಾಗಿದೆ (ಯೆಶಾ 8:3, ಸತ್ಯವೇದ ಭಾಷಾಂತರ ಪಾದಟಿಪ್ಪಣಿ). ಅವಳು ಬರೀ ಪ್ರವಾದಿಯ ಹೆಂಡತಿಯಾಗಿರುವುದಕ್ಕಿಂತ ಹೆಚ್ಚಿನ ಅರ್ಥ ಇದಕ್ಕಿತ್ತೆಂದು ತೋರುತ್ತದೆ. ಬಹುಶಃ ಅವಳಿಗೂ ನ್ಯಾಯಸ್ಥಾಪಕರ ಸಮಯದಲ್ಲಿದ್ದ ದೆಬೋರಳಂತೆ ಮತ್ತು ಯೋಷೀಯನ ಆಳ್ವಿಕೆಯ ಕಾಲದಲ್ಲಿದ್ದ ಹುಲ್ದಳಂತೆ ಯೆಹೋವನು ಪ್ರವಾದಿಸುವ ಕೆಲಸವನ್ನು ಕೊಟ್ಟನು.—ನ್ಯಾಯ 4:4; 2ಅರ 22:14.
ಬೈಬಲಿನಲ್ಲಿ ಯೆಶಾಯನ ಪುತ್ರರಲ್ಲಿ ಇಬ್ಬರ ಹೆಸರನ್ನು ಕೊಡಲಾಗಿದೆ. ಈ ಪುತ್ರರನ್ನು ಅವನಿಗೆ “ಗುರುತುಗಳಾಗಿಯೂ ಅದ್ಭುತಗಳಾಗಿಯೂ” ಕೊಡಲಾಗಿತ್ತು. (ಯೆಶಾ 8:18) ಯೆಶಾಯನು ರಾಜ ಆಹಾಜನಿಗೆ ದೇವರ ಸಂದೇಶವನ್ನು ತಲಪಿಸಲು ಹೋದಾಗ ಶೆಯಾರ್ ಯಾಶೂಬನು ತಂದೆ ಜೊತೆ ಹೋಗುವಷ್ಟು ದೊಡ್ಡವನಾಗಿದ್ದನು. ಶೆಯಾರ್ ಯಾಶೂಬ ಎಂಬ ಹೆಸರಿನ ಅರ್ಥ “ಬರೀ ಜನಶೇಷವು (ಉಳಿದಿರುವವರು) ಹಿಂದಿರುಗುವುದು.” ಈ ಹೆಸರಿಗೆ ಪ್ರವಾದನಾ ಅರ್ಥವಿತ್ತು. ಯೆಶಾಯನಿಗೆ ಹುಟ್ಟಿರುವ ಒಬ್ಬ ಮಗನಿಗೆ ಆ ಹೆಸರು ಹೇಗೆ ಖಂಡಿತವಾಗಿ ಕೊಡಲಾಗಿತ್ತೊ ಹಾಗೆಯೇ ಯೆಹೂದದ ರಾಜ್ಯವು ಕಾಲಾನಂತರ ಪತನಗೊಂಡು, ಅಲ್ಲಿಂದ ಬಂಧಿವಾಸಕ್ಕೆ ಕೊಂಡೊಯ್ಯಲ್ಪಟ್ಟವರಲ್ಲಿ ಉಳಿಕೆಯವರು ಮಾತ್ರ ಸ್ವಲ್ಪ ಸಮಯಾನಂತರ ಹಿಂದಿರುಗುವುದೂ ಅಷ್ಟೇ ನಿಶ್ಚಯವಾಗಿತ್ತು. (ಯೆಶಾ 7:3; 10:20-23) ಈ ಉಳಿಕೆಯವರ ಚಿಕ್ಕ ಗುಂಪು ಹಿಂದಿರುಗಿದ್ದು ಕ್ರಿ.ಪೂ. 537ರಲ್ಲಿ. ಆ ವರ್ಷದಲ್ಲಿ ಪರ್ಷಿಯದ ರಾಜ ಕೋರೇಷ ಅವರನ್ನು ಬಾಬೆಲಿನಲ್ಲಿನ 70 ವರ್ಷಗಳ ಬಂದಿವಾಸದಿಂದ ಬಿಡುಗಡೆಮಾಡುವ ಆಜ್ಞೆ ಹೊರಡಿಸಿದನು.—2ಪೂರ್ವ 36:22, 23; ಎಜ್ರ 1:1; 2:1, 2.
ಯೆಶಾಯನ ಇನ್ನೊಬ್ಬ ಮಗನಿಗೆ, ತಾಯಿ ಗರ್ಭದಲ್ಲಿ ಹುಟ್ಟುವ ಮುಂಚೆಯೇ ಹೆಸರು ಕೊಡಲಾಗಿತ್ತು. ಆ ಹೆಸರನ್ನು ಒಂದು ಹಲಿಗೆಯ ಮೇಲೆ ಬರೆಯಲಾಯಿತು ಮತ್ತು ನಂಬಲರ್ಹ ಸಾಕ್ಷಿಗಳ ಎದುರು ದೃಢೀಕರಿಸಲಾಯಿತು. ಈ ಹೆಸರನ್ನು ಆ ಮಗನು ಹುಟ್ಟುವ ತನಕ ಗುಟ್ಟಾಗಿಟ್ಟಿರಬಹುದು. ಅವನು ಹುಟ್ಟಿದ ನಂತರ ಆ ಸಾಕ್ಷಿಗಳು ಮುಂದೆ ಬಂದು, ಪ್ರವಾದಿಯು ಅವನ ಹುಟ್ಟನ್ನು ಮುಂತಿಳಿಸಿದ್ದನೆಂದು ಸಾಕ್ಷಿಕೊಟ್ಟಿರಬೇಕು. ಇದು ಆ ವಿಷಯಕ್ಕೆ ಪ್ರವಾದನಾತ್ಮಕ ಅರ್ಥವಿದೆಯೆಂದು ಸಾಬೀತುಪಡಿಸಿತು. ದೇವರ ಆಜ್ಞೆ ಪ್ರಕಾರ ಆ ಮಗುವಿಗೆ ಇಡಲಾದ ಹೆಸರು ಮಹೇರ್ ಶಾಲಾಲ್ ಹಾಷ್ ಬಜ್ ಆಗಿತ್ತು. ಇದರರ್ಥ, “ಸೂರೆಗೆ ಆತುರ, ಕೊಳ್ಳೆಗೆ ಅವಸರ.” ಈ ಪುತ್ರ “ಅಪ್ಪಾ, ಅಮ್ಮಾ” ಎಂದು ಕರೆಯಲು ಶುರುಮಾಡುವುದರೊಳಗೆ, ಆರಾಮ್ಯರು ಮತ್ತು ಹತ್ತು ಕುಲಗಳ ಇಸ್ರಾಯೇಲ್ ರಾಜ್ಯ ಸೇರಿ ಮಾಡುತ್ತಿದ್ದ ಒಳಸಂಚಿನಿಂದಾಗಿ ಯೆಹೂದಕ್ಕಿದ್ದ ಅಪಾಯವು ತೆಗೆದುಹಾಕಲಾಗುವುದೆಂದು ಹೇಳಲಾಯಿತು.—ಯೆಶಾ 8:1-4.
ಯೆಹೂದಕ್ಕೆ ಬೇಗನೆ ಆ ಪರಿಹಾರ ಸಿಗಲಿದೆಯೆಂದು ಪ್ರವಾದನೆಯು ಸೂಚಿಸಿತು. ಅರಾಮ್ಯರ ರಾಜ ರೆಚೀನ್ ಮತ್ತು ಇಸ್ರಾಯೇಲ್ಯರ ರಾಜ ಪೆಕಹ ಯೆಹೂದದ ವಿರುದ್ಧ ನಡೆಸಿದ ಕಾರ್ಯಾಚರಣೆಗೆ ಅಶ್ಶೂರ್ಯದ ರಾಜ್ಯವು ಅಡ್ಡಬಂತು. ಅಶ್ಶೂರ್ಯರೂ ದಮಸ್ಕವನ್ನು ವಶಪಡಿಸಿದರು. ನಂತರ ಕ್ರಿ.ಪೂ. 740ರಲ್ಲಿ ಇಸ್ರಾಯೇಲ್ ರಾಜ್ಯವನ್ನು ದೋಚಿ ನಾಶಮಾಡಿದರು. ಹೀಗೆ ಆ ಹುಡುಗನ ಹೆಸರಿಗಿದ್ದ ಪ್ರವಾದನಾತ್ಮಕ ಅರ್ಥವನ್ನು ಪೂರ್ಣ ರೀತಿಯಲ್ಲಿ ಪೂರೈಸಿದರು. (2ಅರ 16:5-9; 17:1-6) ಆದರೆ ಆರಾಮ್ಯ ಹಾಗೂ ಇಸ್ರಾಯೇಲ್ ರಾಜ್ಯದಿಂದ ಅಪಾಯವನ್ನು ದೂರಮಾಡಲು ರಾಜ ಆಹಾಜನು ಯೆಹೋವನಲ್ಲಿ ಭರವಸೆಯಿಡಲಿಲ್ಲ. ಬದಲಾಗಿ ಅಶ್ಶೂರ್ಯರ ರಾಜನ ಸಂರಕ್ಷಣೆ ಪಡೆಯಲು ಅವನಿಗೆ ಲಂಚಕೊಟ್ಟನು. ಆದ್ದರಿಂದಲೇ ಯೆಹೋವನು ಅಶ್ಶೂರ್ಯರು ಯೆಹೂದಕ್ಕೆ ಹೆಚ್ಚು ದೊಡ್ಡ ಅಪಾಯವಾಗಿ ಯೆರೂಸಲೇಮಿನ ವರೆಗೂ ಬರುವಂತೆ ಬಿಟ್ಟನು. ಯೆಶಾಯನು ಇದರ ಬಗ್ಗೆ ಎಚ್ಚರಿಸಿದಂತೆಯೇ ಆಯಿತು.—ಯೆಶಾ 7:17-20.
ಯೆಹೋವನು ಕೊಡುತ್ತಿದ್ದ ‘ಗುರುತುಗಳ’ ಬಗ್ಗೆ ಯೆಶಾಯನು ಅನೇಕ ಸಲ ಹೇಳಿದನು. ಅವನ ಇಬ್ಬರು ಪುತ್ರರು ಸಹ ಆ ಗುರುತಗಳಲ್ಲಿ ಒಂದಾಗಿದ್ದರು! ಒಂದು ಸಂದರ್ಭದಲ್ಲಿ ಸ್ವತಃ ಯೆಶಾಯನೇ ಗುರುತಾಗಿದ್ದನು. ಅವನು ಮೂರು ವರ್ಷಗಳ ವರೆಗೆ ಬೆತ್ತಲೆಯಾಗಿ, ಕೆರವಿಲ್ಲದೆ ನಡೆದಾಡಬೇಕೆಂದು ಯೆಹೋವನು ಆಜ್ಞಾಪಿಸಿದನು. ಇದು ಐಗುಪ್ತ ಮತ್ತು ಕೂಷಿನ ವಿರುದ್ಧ ಒಂದು ಸೋಜಿಗದ ಗುರುತಾಗಿದ್ದು, ಅವರನ್ನು ಅಶ್ಶೂರದ ರಾಜನು ಸೆರೆ ಕೊಂಡೊಯ್ಯುವನೆಂದು ಸೂಚಿಸುತ್ತಿತ್ತು.—ಯೆಶಾ 20:1-6; ಹೋಲಿಸಿ ಯೆಶಾ 7:11, 14; 19:20; 37:30; 38:7, 22; 55:13; 66:19.
ಗಡೀಪಾರು ಮತ್ತು ಪುನಃಸ್ಥಾಪನೆಯ ಕುರಿತ ಪ್ರವಾದನೆಗಳು. ಯೆಹೂದದ ರಾಜರನ್ನು ಸಿಂಹಾಸನದಿಂದ ಉರುಳಿಸಿ ಯೆರೂಸಲೇಮನ್ನು ಅಶ್ಶೂರ ರಾಜ್ಯವಲ್ಲ ಬದಲಾಗಿ ಬಾಬೆಲ್ ರಾಜ್ಯ ನಾಶಮಾಡುವುದೆಂದು ಮುಂತಿಳಿಸುವ ಸುಯೋಗವೂ ಯೆಶಾಯನಿಗಿತ್ತು. (ಯೆಶಾ 39:6, 7) ಅಶ್ಶೂರವು ಯೆಹೂದದ ‘ಕತ್ತಿನ ವರೆಗೂ ಏರಿ ಬಂದಾಗ’ ಯೆಶಾಯನು ರಾಜ ಹಿಜ್ಕೀಯನಿಗೆ ಸಮಾಧಾನಪಡಿಸುವ ಒಂದು ಸಂದೇಶವನ್ನು ಕಳುಹಿಸಿದನು. ಅದೇನೆಂದರೆ, ಅಶ್ಶೂರದ ಆ ಸೇನಾಪಡೆಗೆ ನಗರವನ್ನು ಪ್ರವೇಶಿಸಲು ಸಾಧ್ಯವಾಗದು. (ಯೆಶಾ 8:7, 8) ಅಶ್ಶೂರ ಸೇನೆಯ ಬಲಿಷ್ಠರು ಮತ್ತು ಮುಖಂಡರಲ್ಲಿ 1,85,000 ಮಂದಿಯನ್ನು ಹತಿಸಲು ಯೆಹೋವನು ತನ್ನ ದೇವದೂತನನ್ನು ಕಳುಹಿಸಿ ಯೆರೂಸಲೇಮನ್ನು ರಕ್ಷಿಸಿದನು. ಹೀಗೆ ತಾನು ಕೊಟ್ಟ ಮಾತಿನಂತೆ ನಡೆದನು.—2ಪೂರ್ವ 32:21.
ನಿಸ್ಸಂದೇಹವಾಗಿ ಯೆಶಾಯನಿಗೆ ಎಲ್ಲಕ್ಕಿಂತ ಹೆಚ್ಚಿನ ಆನಂದವನ್ನು ತಂದ ಸಂಗತಿಯು, ಆತನಿಗೆ ಅತಿ ಪ್ರಿಯವಾಗಿದ್ದ ಯೆರೂಸಲೇಮಿನ ಪುನಸ್ಸ್ಥಾಪನೆಯ ಬಗ್ಗೆ ಅನೇಕ ಪ್ರವಾದನೆಗಳನ್ನು ಹೇಳಲು ಮತ್ತು ಬರೆಯಲು ಯೆಹೋವನು ಕೊಟ್ಟ ಸುಯೋಗವೇ. ಯೆಹೋವ ಜನರು ಆತನ ವಿರುದ್ಧ ದ್ರೋಹಮಾಡಿ ದಂಗೆಯೇಳುವ ಕಾರಣ ಅವರು ಬಾಬೆಲಿಗೆ ಗಡೀಪಾರಾಗುವಂತೆ ಅನುಮತಿಸಲಿದ್ದನು. ಆದರೂ ದೇವಜನರನ್ನು ಶಾಶ್ವತವಾಗಿ ಸೆರೆಯಲ್ಲಿಡುವ ಉದ್ದೇಶವಿದ್ದ ಮತ್ತು ಅವರ ಜೊತೆ ಹಗೆಯಿಂದ ನಡೆದುಕೊಂಡ ಕಾರಣ ದೇವರು ಬಾಬೆಲಿನ ಮೇಲೆ ನ್ಯಾಯತೀರ್ಪು ತರಲಿದ್ದನು. ಯೆಶಾಯನ ಹಲವಾರು ಪ್ರವಾದನೆಗಳಲ್ಲಿ, ಬಾಬೆಲಿನ ಮೇಲೆ ಬರಲಿರುವ ದೇವರ ತೀರ್ಪು ಮತ್ತು ಅದು ಮುಂದೆಂದೂ ಪುನಃ ಕಟ್ಟಲ್ಪಡದಷ್ಟು ನಿರ್ಜನವಾದ ಪಾಳುಭೂಮಿ ಆಗುವುದೆಂಬ ವಿಷಯವಿದೆ.—ಯೆಶಾ 45:1, 2; ಅಧ್ಯಾ 13, 14, 46-48.
ಡಿಸೆಂಬರ್ 19-25
ಬೈಬಲಿನಲ್ಲಿರುವ ರತ್ನಗಳು | ಯೆಶಾಯ 11-16
“ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು”
w13 6/1 7
ಪೂರ್ವಗ್ರಹವಿಲ್ಲದ ಲೋಕ—ಯಾವಾಗ ಬರುವುದು?
ದೇವರ ರಾಜ್ಯ ಎಲ್ಲ ರೀತಿಯ ಪೂರ್ವಗ್ರಹಕ್ಕೆ ಅಂತ್ಯ ತರಲಿದೆ
ಪೂರ್ವಗ್ರಹದ ಭಾವನೆಯನ್ನು ನಿಯಂತ್ರಿಸಲು ಮತ್ತು ಬೇರುಸಮೇತ ಕಿತ್ತೆಸೆಯಲು ಬೈಬಲ್ ಜ್ಞಾನ ಸಹಾಯ ಮಾಡಬಲ್ಲದು. ಆದರೆ ಅದು ಪೂರ್ತಿಯಾಗಿ ಅಳಿದುಹೋಗಬೇಕಾದರೆ ತೆಗೆದುಹಾಕಬೇಕಾದ ಇನ್ನೆರಡು ಅಂಶಗಳಿವೆ. ಮೊದಲನೇದು, ಪಾಪ ಮತ್ತು ಮಾನವ ಅಪರಿಪೂರ್ಣತೆ. ಬೈಬಲ್ ಸ್ಪಷ್ಟವಾಗಿ ಹೀಗನ್ನುತ್ತದೆ: “ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ.” (1 ಅರಸು 8:46) ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ ನಮ್ಮೊಳಗೆ ಒಂದು ಹೋರಾಟ ನಡೆಯುತ್ತಾ ಇರುತ್ತದೆ. ಇಂಥದ್ದೇ ಆಂತರ್ಯದ ಹೋರಾಟವಿದ್ದ ಪೌಲನು ಬರೆದದ್ದು: “ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ.” (ರೋಮನ್ನರಿಗೆ 7:21) ಆದ್ದರಿಂದ ಆಗಾಗ್ಗೆ ನಮ್ಮ ಅಪರಿಪೂರ್ಣ ಹೃದಯವು ‘ಹಾನಿಕಾರಕ ಆಲೋಚನೆಗಳನ್ನು’ ಇಲ್ಲವೇ ತರ್ಕಗಳನ್ನು ಬಳಸಿ ನಮ್ಮನ್ನು ಪೂರ್ವಗ್ರಹಕ್ಕೆ ನಡೆಸುತ್ತದೆ.
ಎರಡನೇದು, ಪಿಶಾಚನಾದ ಸೈತಾನನ ಪ್ರಭಾವ. ಬೈಬಲ್ ಅವನನ್ನು “ನರಹಂತಕ” ಎಂದು ಕರೆಯುತ್ತದೆ. ಇವನು “ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿ”ದ್ದಾನೆಂದು ಅದು ಹೇಳುತ್ತದೆ. (ಯೋಹಾನ 8:44; ಪ್ರಕಟನೆ 12:9) ಇದು ನಮಗೆ ಪೂರ್ವಗ್ರಹವು ಯಾಕೆ ಎಲ್ಲೆಡೆ ಇದೆ, ಮತ್ತು ಜಾತಿವಾದ, ಭೇದಭಾವ, ಜನಾಂಗೀಯ ಹತ್ಯೆ ಹಾಗೆ ಬೇರೆ ವಿಧಗಳ ಜಾತೀಯ, ಧಾರ್ಮಿಕ, ಸಾಮಾಜಿಕ ಅಸಹಿಷ್ಣುತೆಯನ್ನು ಮನುಷ್ಯ ಯಾಕೆ ತೆಗೆದುಹಾಕಲಾರನೆಂದು ತೋರಿಸಿಕೊಡುತ್ತದೆ.
ಹಾಗಾಗಿ ಪೂರ್ವಗ್ರಹ ಸಂಪೂರ್ಣವಾಗಿ ನಿರ್ಮೂಲವಾಗಬೇಕಾದರೆ ಮಾನವನಲ್ಲಿರುವ ಪಾಪ, ಅಪರಿಪೂರ್ಣತೆ ಮಾತ್ರವಲ್ಲ ಪಿಶಾಚನಾದ ಸೈತಾನನ ಪ್ರಭಾವವೂ ತೆಗೆದುಹಾಕಲ್ಪಡಬೇಕು. ದೇವರ ರಾಜ್ಯವು ಇದನ್ನೇ ಮಾಡಲಿದೆಯೆಂದು ಬೈಬಲ್ ತೋರಿಸುತ್ತದೆ.
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಈ ಮಾತುಗಳನ್ನು ಬಳಸಿ ದೇವರಿಗೆ ಪ್ರಾರ್ಥಿಸಲು ಹೇಳಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:10) ದೇವರ ರಾಜ್ಯವು ಎಲ್ಲ ಅನ್ಯಾಯ, ಅಂದರೆ ಎಲ್ಲ ವಿಧದ ಅಸಹಿಷ್ಣುತೆ ಮತ್ತು ಪೂರ್ವಗ್ರಹವನ್ನೂ ತೆಗೆದುಹಾಕುವುದು.
ದೇವರ ರಾಜ್ಯ ಬಂದು ಭೂಮಿಯ ಮೇಲೆ ಎಲ್ಲವನ್ನೂ ನಿಯಂತ್ರಿಸಲು ಆರಂಭಿಸುವಾಗ ಸೈತಾನನನ್ನು “ಬಂಧನದಲ್ಲಿಡಲಾಗುವುದು” ಅಂದರೆ ಪೂರ್ತಿಯಾಗಿ ನಿರ್ಬಂಧಿಸಲಾಗುವುದು. ಆಗ ಅವನು “ಜನಾಂಗಗಳನ್ನು ಮರುಳುಗೊಳಿಸಲಾರನು.” (ಪ್ರಕಟನೆ 20:2, 3) ಆಗ “ನೂತನ ಭೂಮಿ” ಅಂದರೆ ನೂತನ ಮಾನವ ಸಮಾಜ ಇರುವುದು. ಅಲ್ಲಿ “ನೀತಿಯು ವಾಸವಾಗಿರುವುದು.”—2 ಪೇತ್ರ 3:13.
ಆ ನೀತಿವಂತ ಮಾನವ ಸಮಾಜದಲ್ಲಿರುವವರು ಪಾಪದಿಂದ ಮುಕ್ತರಾಗಿ ಪರಿಪೂರ್ಣರಾಗುವರು. (ರೋಮ 8:21) ದೇವರ ರಾಜ್ಯದ ಪ್ರಜೆಗಳಾಗಿ ಅವರು ‘ಕೇಡು ಮಾಡುವುದಿಲ್ಲ, ಹಾಳುಮಾಡುವುದಿಲ್ಲ.’ ಏಕೆಂದರೆ ಆಗ “ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾ 11:9) ಆ ಸಮಯದಲ್ಲಿ ಎಲ್ಲ ಮಾನವರು ಯೆಹೋವ ದೇವರ ಮಾರ್ಗಗಳ ಬಗ್ಗೆ ಕಲಿಯುವರು. ಆತನ ಪ್ರೀತಿಭರಿತ ವ್ಯಕ್ತಿತ್ವವನ್ನು ಅನುಕರಿಸುವರು. “ದೇವರಲ್ಲಿ ಯಾವುದೇ ಪಕ್ಷಪಾತವಿಲ್ಲ” ಹಾಗಾಗಿ ಅಲ್ಲಿ ಪೂರ್ವಗ್ರಹ ಅಂತ್ಯವಾಗುವುದು!—ರೋಮ 2:11.