ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಜನವರಿ ಪು. 1-5
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಜನವರಿ 1-7
  • ಜನವರಿ 8-14
  • ಜನವರಿ 15-21
  • ಜನವರಿ 22-28
  • ಜನವರಿ 29–ಫೆಬ್ರವರಿ 4
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಜನವರಿ ಪು. 1-5

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಜನವರಿ 1-7

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 1-3

“ಸ್ವರ್ಗದ ರಾಜ್ಯವು ಸಮೀಪಿಸಿದೆ”

ಮತ್ತಾ 3:1, 2​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸಾರುವುದು: ಈ ಗ್ರೀಕ್‌ ಪದದ ಮೂಲ ಅರ್ಥ “ಸಾರ್ವಜನಿಕ ಸಂದೇಶವಾಹಕನಾಗಿ ಘೋಷಣೆಮಾಡುವುದು” ಎಂದಾಗಿದೆ. ಘೋಷಣೆಮಾಡುವ ರೀತಿಯನ್ನು ಇದು ಒತ್ತಿಹೇಳುತ್ತದೆ. ಸಾಮಾನ್ಯವಾಗಿ ಜನರ ಗುಂಪಿಗೆ ಉಪನ್ಯಾಸ ಕೊಡುವುದಲ್ಲ, ಬದಲಾಗಿ ಬಹಿರಂಗವಾದ ಸಾರ್ವಜನಿಕ ಘೋಷಣೆ ಅದಾಗಿದೆ.

ರಾಜ್ಯ: ಬಾಸಿಲೀಯ ಎಂಬ ಗ್ರೀಕ್‌ ಪದ ಪ್ರಥಮವಾಗಿ, ರಾಜನ ಸರಕಾರ ಹಾಗೂ ಒಬ್ಬ ರಾಜನ ಆಳಿಕೆಯ ಕೆಳಗಿರುವ ಪ್ರದೇಶ ಮತ್ತು ಜನರನ್ನು ಸೂಚಿಸುತ್ತದೆ. ಈ ಗ್ರೀಕ್‌ ಪದವು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ 162 ಬಾರಿ ಕಂಡುಬರುತ್ತದೆ. ಅದರಲ್ಲಿ 55 ಬಾರಿ ಮತ್ತಾಯನ ಸುವಾರ್ತೆಯಲ್ಲಿವೆ ಮತ್ತು ಇವುಗಳಲ್ಲಿ ಹೆಚ್ಚಿನವು ದೇವರ ಸ್ವರ್ಗೀಯ ಆಳ್ವಿಕೆಗೆ ಸೂಚಿತವಾಗಿವೆ. ಮತ್ತಾಯನು ಈ ಪದವನ್ನು ಪದೇ ಪದೇ ಎಷ್ಟು ಸಾರಿ ಬಳಸುತ್ತಾನೆಂದರೆ ಅವನ ಸುವಾರ್ತೆಯನ್ನು ರಾಜ್ಯ ಸುವಾರ್ತೆಯೆಂದೇ ಕರೆಯಬಹುದು.

ಸ್ವರ್ಗದ ರಾಜ್ಯ: ಈ ಪದವು ಸುಮಾರು 30 ಬಾರಿ ಮತ್ತಾಯನ ಸುವಾರ್ತೆಯಲ್ಲಿ ಮಾತ್ರ ಕಂಡುಬರುತ್ತದೆ. ಮಾರ್ಕ ಮತ್ತು ಲೂಕನ ಸುವಾರ್ತೆಯಲ್ಲಿ “ದೇವರ ರಾಜ್ಯ” ಎಂಬ ತದ್ರೀತಿಯ ಪದವನ್ನು ಉಪಯೋಗಿಸಲಾಗಿದೆ. ಇದು “ದೇವರ ರಾಜ್ಯವು” ಆಧ್ಯಾತ್ಮಿಕ ಸ್ವರ್ಗದಲ್ಲಿದೆ ಮತ್ತು ಅಲ್ಲಿಂದಲೇ ಆಳುತ್ತದೆ ಎಂಬುದನ್ನು ಸೂಚಿಸುತ್ತದೆ.—ಮತ್ತಾ 21:43; ಮಾರ್ಕ 1:15; ಲೂಕ 4:43; ದಾನಿ 2:44; 2ತಿಮೊ 4:18.

ರಾಜ್ಯ ಸಮೀಪಿಸಿದೆ: ಇಲ್ಲಿ ಸ್ವರ್ಗೀಯ ರಾಜ್ಯದ ಭಾವೀ ರಾಜನು ಇನ್ನೇನು ತೋರಿ ಬರಲಿದ್ದಾನೆ ಎಂಬ ಅರ್ಥದಲ್ಲಿ ಇದನ್ನು ಹೇಳಲಾಗಿದೆ.

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಸ್ನಾನಿಕನಾದ ಯೋಹಾನನ ಉಡುಪು ಮತ್ತು ತೋರಿಕೆ

ಸ್ನಾನಿಕನಾದ ಯೋಹಾನನು ಧರಿಸಿದ್ದ ಉಡುಪು ಒಂಟೆಯ ಕೂದಲಿನಿಂದ ಹೆಣೆದಿದ್ದ ಬಟ್ಟೆಯಾಗಿತ್ತು. ಅದು ಚರ್ಮದ ನಡುಕಟ್ಟಿನಿಂದ ಅಥವಾ ಉಡಿದಾರದಿಂದ ಸೊಂಟಕ್ಕೆ ಬಿಗಿಯಲ್ಪಟ್ಟಿತ್ತು. ಉಡಿದಾರದಲ್ಲಿ ಚಿಕ್ಕ ವಸ್ತುಗಳನ್ನು ಇಟ್ಟುಕೊಳ್ಳಸಾಧ್ಯವಿತ್ತು. ಪ್ರವಾದಿ ಎಲೀಯನು ತದ್ರೀತಿಯ ಬಟ್ಟೆಯನ್ನು ಧರಿಸುತ್ತಿದ್ದನು. (2ಅರ 1:8) ಒಂಟೆ ಕೂದಲಿನ ಬಟ್ಟೆ ಒರಟು. ಸಾಮಾನ್ಯವಾಗಿ ಬಡ ಜನರು ಅದನ್ನು ಹಾಕಿಕೊಳ್ಳುತ್ತಿದ್ದರು. ಆದರೆ ಧನಿಕರು ರೇಷ್ಮೆ ಅಥವಾ ಲಿನನ್‌ ಬಟ್ಟೆಯಿಂದ ಮಾಡಲಾದ ನಯವಾದ ಉಡುಪುಗಳನ್ನು ಧರಿಸುತ್ತಿದ್ದರು. (ಮತ್ತಾ 11:7-9) ಯೋಹಾನನು ಹುಟ್ಟಿನಿಂದಲೇ ನಾಜೀರನು. ಹಾಗಾಗಿ ಅವನ ಕೂದಲೆಂದೂ ಕತ್ತರಿಸಲ್ಪಟ್ಟಿರಲಿಲ್ಲ. ಆದ್ದರಿಂದ ಅವನ ಉಡುಪು ಮತ್ತು ತೋರಿಕೆಗಳು ಅವನು ಸರಳ ಜೀವಿ ಎಂಬುದನ್ನು ಮತ್ತು ದೇವರ ಚಿತ್ತವನ್ನು ಮಾಡುವುದಕ್ಕೆ ಪೂರ್ಣವಾಗಿ ಅರ್ಪಿತನಾಗಿದ್ದನೆಂದು ಕೂಡಲೇ ತೋರಿಸಿ ಕೊಡುತಿತ್ತು.

ಮಿಡತೆಗಳು

ಬೈಬಲಿನಲ್ಲಿ ತಿಳಿಸಿರುವ ಪ್ರಕಾರ “ಮಿಡತೆಗಳು” ಎಂಬ ಪದವು, ಚಿಕ್ಕ ಸ್ಪರ್ಶಿಕೆ ಅಥವಾ ಸ್ಪರ್ಶಾಂಗಗಳಿರುವ ವಿವಿಧ ರೀತಿಯ ಮಿಡತೆಗಳ ಜಾತಿಯಲ್ಲಿ ಒಂದನ್ನು ಸೂಚಿಸಬಲ್ಲದು ಮತ್ತು ವಿಶೇಷವಾಗಿ ಗುಂಪುಗುಂಪಾಗಿ ವಲಸೆಹೋಗುವ ಮಿಡತೆಗಳಿಗೆ ಸೂಚಿಸುತ್ತದೆ. ಯೆರೂಸಲೇಮಿನಲ್ಲಿ ಮಾಡಲಾದ ಒಂದು ವಿಶ್ಲೇಷಣೆಗನುಸಾರ ಮರುಭೂಮಿಯ ಮಿಡತೆಗಳಲ್ಲಿ 75 ಪ್ರತಿಶತ ಸಸಾರಜನಕ (ಪ್ರೋಟೀನ್‌) ದ್ರವ್ಯ ಅಡಕವಾಗಿದೆ. ಇಂದು ಆಹಾರಕ್ಕಾಗಿ ಅದನ್ನು ಉಪಯೋಗಿಸುವಾಗ ತಲೆ, ಕಾಲು, ರೆಕ್ಕೆ ಮತ್ತು ಹೊಟ್ಟೆಯನ್ನು ತೆಗೆದು ಹಾಕಲಾಗುತ್ತದೆ. ಉಳಿದಿರುವ ಮುಂಡಭಾಗವನ್ನು ಹಸಿಯಾಗಿ ಇಲ್ಲವೆ ಬೇಯಿಸಿ ತಿನ್ನಲಾಗುತ್ತದೆ. ಈ ಕೀಟಗಳಲ್ಲಿ ಸಸಾರಜನಕ ಸಮೃದ್ಧವಾಗಿದ್ದು ಅವುಗಳ ರುಚಿಯು ಸಿಗಡಿ ಅಥವಾ ಏಡಿಯ ರುಚಿಯಂತಿದೆ ಎಂದು ಹೇಳುತ್ತಾರೆ.

ಕಾಡು ಜೇನುತುಪ್ಪ

ಇಲ್ಲಿ (1) ಕಾಡು ಜೇನುನೊಣಗಳು ಕಟ್ಟಿರುವ ಒಂದು ಗೂಡು ಮತ್ತು (2) ಜೇನು ತುಂಬಿರುವ ಗೂಡಿನ ಚಿತ್ರಗಳು ಇವೆ. ಸ್ನಾನಿಕ ಯೋಹಾನನು ತಿಂದಿರುವ ಜೇನುತುಪ್ಪವು ಏಪಿಸ್‌ ಮೆಲ್ಲಿಫೇರ ಸಿರಿಯಾಕ ಎಂಬ ಕಾಡುಜಾತಿಯ ಜೇನು ನೊಣಗಳಿಂದ ತಯಾರಿಸಿದ್ದಾಗಿರಬಹುದು. ಅವು ಆ ಪ್ರದೇಶಕ್ಕೆ ಸೇರಿದ ಜೇನು ನೊಣಗಳು. ಈ ಕಾಡು ಜಾತಿಯ ನೊಣಗಳು ಬಹು ಆಕ್ರಮಣಕಾರಿ. ಯೂದಾಯ ಅರಣ್ಯ ಪ್ರದೇಶದ ಬಿಸಿಯಾದ ಒಣಹವೆಗೆ ಆರಾಮವಾಗಿ ಹೊಂದಿಕೊಂಡು ಜೀವಿಸುತ್ತವೆ. ಆದರೂ ಮನುಷ್ಯನಿಂದ ಸಾಕಲ್ಪಡಲು ಸೂಕ್ತವಾದ ಜೇನು ಹುಳಗಳು ಇವಲ್ಲ. ಇಸ್ರಾಯೇಲಿನಲ್ಲಿ ಜೀವಿಸುತ್ತಿದ್ದ ಜನರು ಕ್ರಿಸ್ತ ಪೂರ್ವ ಒಂಬತ್ತನೆಯ ಶತಮಾನದಷ್ಟು ಮೊದಲೇ ಮಣ್ಣಿನ ಉರುಳೆಗಳಲ್ಲಿ ಜೇನು ಹುಳಗಳನ್ನು ಸಾಕುತ್ತಿದ್ದರು. ಈ ಗೂಡುಗಳ ಅವಶೇಷಗಳು ಯೋರ್ದನ್‌ ಕಣಿವೆಯ ನಗರ ಪ್ರದೇಶ (ಈಗ ಟೆಲ್‌ ರೆಹಾವ್‌) ಎಂಬ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡುಬಂದಿವೆ. ಈ ಗೂಡುಗಳಲ್ಲಿ ಜೇನುತುಪ್ಪವನ್ನು ತಯಾರಿಸಿದ ಜೇನುನೊಣದ ಜಾತಿಗಳು ಈಗಿನ ಟರ್ಕಿ ದೇಶದಿಂದ ಬಂದವುಗಳೆಂದು ಎಣಿಸಲಾಗುತ್ತದೆ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 1:3​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತಾಮಾರ: ಮತ್ತಾಯನ ಸುವಾರ್ತೆಯಲ್ಲಿ ಮೆಸ್ಸೀಯನ ವಂಶಾವಳಿಯಲ್ಲಿರುವ ಐದು ಮಂದಿ ಸ್ತ್ರೀಯರಲ್ಲಿ ತಾಮಾರ ಮೊದಲನೆಯವಳು. ಇತರ ನಾಲ್ವರಲ್ಲಿ ರಾಹಾಬ ಮತ್ತು ರೂತಳು ಇಬ್ಬರೂ ಇಸ್ರಾಯೇಲ್ಯರಲ್ಲದ ಸ್ತ್ರೀಯರು (ವಚನ 5), ಉಳಿದ ಇಬ್ಬರು “ಊರೀಯನ ಹೆಂಡತಿ” ಬತ್ಷೆಬೆ (ವಚನ 6) ಮತ್ತು ಮರಿಯ (ವಚನ 16). ಕೇವಲ ಪುರುಷರೇ ಇರುವ ವಂಶಾವಳಿಯಲ್ಲಿ ಈ ಸ್ತ್ರೀಯರನ್ನು ಸೇರಿಸಿರುವುದು ಗಮನಾರ್ಹ. ಇದಕ್ಕೆ ಕಾರಣ ಪ್ರಾಯಶಃ ಈ ಸ್ತ್ರೀಯರಲ್ಲಿ ಪ್ರತಿಯೊಬ್ಬರು ಎದ್ದುಕಾಣುವ ರೀತಿಯಲ್ಲಿ ಯೇಸುವಿನ ಪೂರ್ವಜೆಯರಾಗಿ ಪರಿಣಮಿಸಿದ್ದರಿಂದಲೇ.

ಮತ್ತಾ 3:11​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ದೀಕ್ಷಾಸ್ನಾನ ಮಾಡಿಸು: ಅಥವಾ “ಮುಳುಗಿಸು.” ಬ್ಯಾಪ್ಟೈಸೊ ಎಂಬ ಗ್ರೀಕ್‌ ಪದದ ಅರ್ಥ “ಅದ್ದು, ಮುಳುಗಿಸು” ಎಂದಾಗಿದೆ. ದೀಕ್ಷಾಸ್ನಾನದಲ್ಲಿ ಪೂರ್ಣ ಮುಳುಗಿಸುವಿಕೆ ಒಳಗೂಡಿದೆ ಎಂಬುದನ್ನು ಬೇರೆ ಬೈಬಲ್‌ ಉಲ್ಲೇಖಗಳೂ ತೋರಿಸುತ್ತವೆ. ಒಂದು ಸಂದರ್ಭದಲ್ಲಿ ಯೋಹಾನನು ಯೋರ್ದನ್‌ ಕಣಿವೆಯಲ್ಲಿ ಸಲೀಮ್‌ನ ಸಮೀಪದ ಒಂದು ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು “ಏಕೆಂದರೆ ಅಲ್ಲಿ ತುಂಬ ನೀರಿತ್ತು.” (ಯೋಹಾ 3:23) ಫಿಲಿಪ್ಪನು ಇಥಿಯೋಪ್ಯದ ಕಂಚುಕಿಗೆ ದೀಕ್ಷಾಸ್ನಾನ ಕೊಟ್ಟಾಗ “ಇಬ್ಬರೂ ನೀರಿನೊಳಗೆ ಇಳಿದು ಹೋದರು” ಎಂದು ಹೇಳಲಾಗಿದೆ. (ಅಕಾ 8:38) ನಾಮಾನನು ಯೋರ್ದನಿನಲ್ಲಿ “ಏಳುಸಾರಿ” “ಮುಣುಗಿ ಎದ್ದನು” ಎಂದು ವಿವರಿಸುವಾಗ ಸೆಪ್ಟೂಅಜಂಟ್‌ ಬೈಬಲ್‌ 2ಅರ 5:14​ರಲ್ಲಿ ಇದೇ ಗ್ರೀಕ್‌ ಪದವನ್ನು ಬಳಸಿದೆ.

ಜನವರಿ 8-14

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 4-5

“ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು”

ಮತ್ತಾ 5:3​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸಂತೋಷಿತರು: ಒಬ್ಬನು ಒಂದು ಖುಷಿಯ ಸಮಯದಲ್ಲಿ ಅನುಭವಿಸುವ ಬರೇ ಉಲ್ಲಾಸಕರ ಮನೋಸ್ಥಿತಿಯು ಇದಲ್ಲ. ಮನುಷ್ಯರಿಗೆ ಅನ್ವಯಿಸುವಾಗ ಈ ಪದವು, ದೇವರಿಂದ ಆಶೀರ್ವದಿಸಲ್ಪಟ್ಟ ಮತ್ತು ದೇವರ ಮೆಚ್ಚಿಗೆಯನ್ನು ಆನಂದಿಸುವಂಥ ಒಬ್ಬನ ಮನೋಸ್ಥಿತಿಯನ್ನು ಸೂಚಿಸುತ್ತದೆ. ಈ ಪದವನ್ನು ದೇವರ ಮತ್ತು ಕ್ರಿಸ್ತನ ಸ್ವರ್ಗೀಯ ಮಹಿಮೆಯ ಒಂದು ವರ್ಣನೆಯಾಗಿಯೂ ಬಳಸಲಾಗಿದೆ.—1ತಿಮೊ 1:11; 6:15.

ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು: “ಪ್ರಜ್ಞೆಯುಳ್ಳವರು” ಎಂದು ಅನುವಾದವಾದ ಗ್ರೀಕ್‌ ಪದದ ಅಕ್ಷರಾರ್ಥವು “ಬಡವರು (ಅಗತ್ಯವುಳ್ಳವರು, ನಿರ್ಗತಿಕರು, ಭಿಕ್ಷುಕರು)” ಎಂದಾಗಿದೆ. ಈ ಪೂರ್ವಾಪರದಲ್ಲಿ ಅದು ಅಗತ್ಯವುಳ್ಳವರನ್ನು ಮತ್ತು ಅದರ ಬಗ್ಗೆ ತೀವ್ರ ಪ್ರಜ್ಞೆಯುಳ್ಳವರನ್ನು ಸೂಚಿಸಲು ಬಳಸಲಾಗಿದೆ. ಇದೇ ಪದವನ್ನು ಲೂಕ 16:20, 22​ರಲ್ಲಿ “ಭಿಕ್ಷುಕ” ಲಾಜರನನ್ನು ಸೂಚಿಸಲು ಸಹ ಪ್ರಯೋಗಿಸಲಾಗಿದೆ. ಈ ವಾಕ್ಸರಣಿಯನ್ನು ಕೆಲವು ಭಾಷಾಂತರಗಳು “ಆತ್ಮದಲ್ಲಿ ಬಡವರು” ಎಂದು ತರ್ಜುಮೆ ಮಾಡಿವೆ. ಇದು ಕೂಡ ತಾವು ತೀರ ಆಧ್ಯಾತ್ಮಿಕ ಬಡತನದಲ್ಲಿದ್ದೇವೆ ಮತ್ತು ತಮಗೆ ದೇವರ ಆವಶ್ಯಕತೆ ಇದೆಯೆಂಬ ವೇದನಾಮಯ ಪ್ರಜ್ಞೆಯಿರುವ ಜನರನ್ನು ಸೂಚಿಸುತ್ತದೆ.

ಮತ್ತಾ 5:7​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕರುಣೆಯುಳ್ಳವರು: “ಕರುಣೆಯುಳ್ಳವರು” ಮತ್ತು “ಕರುಣೆ” ಎಂಬ ಈ ಬೈಬಲ್‌ ಪದಪ್ರಯೋಗಗಳು ಕೇವಲ ಕ್ಷಮಾಪಣೆ ಅಥವಾ ದಯಾಭರಿತ ತೀರ್ಪಿಗೆ ಸೀಮಿತವಲ್ಲ. ಇದು ಹೆಚ್ಚಾಗಿ ಕೊರತೆಯುಳ್ಳವರ ಸಹಾಯಕ್ಕಾಗಿ ಪ್ರಥಮ ಹೆಜ್ಜೆ ತಕ್ಕೊಳ್ಳಲು ಒಬ್ಬ ವ್ಯಕ್ತಿಯನ್ನು ಪ್ರೇರಿಸುವಂಥ ಕನಿಕರ ಮತ್ತು ಕರುಣಾ ಭಾವಗಳನ್ನು ಸೂಚಿಸುತ್ತದೆ.

ಮತ್ತಾ 5:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಶಾಂತಿಶೀಲರು: ಕೇವಲ ಶಾಂತಿಯನ್ನು ಕಾಪಾಡಿಕೊಳ್ಳುವವರಲ್ಲ ಬದಲಿಗೆ ಕೊರತೆ ಇರುವಾಗ ಅದು ಶಾಂತಿಯನ್ನು ತರುವವರು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 4:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಒಂದು ಆರಾಧನಾ ಕ್ರಿಯೆ ಮಾಡು: “ಆರಾಧಿಸಲು” ಎಂದು ಅನುವಾದಿಸಬಲ್ಲ ಈ ಗ್ರೀಕ್‌ ಕ್ರಿಯಾಪದವು ಭೂತಕಾಲದಲ್ಲಿದ್ದು, ಅದು ಒಂದು ಕ್ಷಣಿಕವಾದ ಕ್ರಿಯೆ ಎಂಬುದನ್ನು ಸೂಚಿಸುತ್ತದೆ. “ಒಂದು ಆರಾಧನಾ ಕ್ರಿಯೆಯನ್ನು ಮಾಡು” ಎಂದು ಭಾಷಾಂತರ ಮಾಡಿದ್ದು ಏನನ್ನು ಸೂಚಿಸುತ್ತದೆಂದರೆ, ಪಿಶಾಚನು ತನ್ನನ್ನು ಸತತವಾಗಿ ಅಥವಾ ನಿರಂತರವಾಗಿ ಆರಾಧಿಸುವಂತೆ ಯೇಸುವಿಗೆ ಹೇಳಲಿಲ್ಲ. ಅದು ಒಂದೇ ಒಂದು “ಆರಾಧನಾ ಕ್ರಿಯೆ” ಆಗಿತ್ತು.

ಮತ್ತಾ 4:23​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಬೋಧಿಸುವುದು . . . ಸಾರುವುದು: ಬೋಧಿಸುವುದು ಸಾರುವುದಕ್ಕಿಂತ ಭಿನ್ನವಾಗಿದೆ. ಬೋಧಕನು ಸಾರುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತಾನೆ. ಅಂದರೆ ಕಲಿಸುತ್ತಾನೆ, ವಿವರಿಸಿ ಹೇಳುತ್ತಾನೆ, ಮನಗಾಣಿಸುವ ತರ್ಕಗಳನ್ನು ಬಳಸುತ್ತಾನೆ ಮತ್ತು ಆಧಾರಕ್ಕಾಗಿ ಪುರಾವೆಗಳನ್ನು ಕೊಡುತ್ತಾನೆ.

ಜನವರಿ 15-21

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 6-7

“ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ”

ಮತ್ತಾ 6:24​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸೇವಕ: ಈ ಕ್ರಿಯಾಪದವು ಒಬ್ಬನು ದಾಸನಾಗಿ ಸೇವೆಮಾಡುವುದನ್ನು ಸೂಚಿಸುತ್ತದೆ. ಅಂದರೆ ಅವನು, ಒಬ್ಬನೇ ಯಜಮಾನನ ಒಡೆತನದ ಕೆಳಗಿರುತ್ತಾನೆ. ಒಬ್ಬ ಕ್ರೈಸ್ತನು ತನ್ನನ್ನು ಲೌಕಿಕ ಸಂಪತ್ತು ಸ್ವತ್ತುಗಳನ್ನು ಶೇಖರಿಸಲು ಮೀಸಲಾಗಿಟ್ಟುಕೊಂಡೂ ಅದೇ ಸಮಯದಲ್ಲಿ ದೇವರಿಗೆ ಸಲ್ಲತಕ್ಕ ಅನನ್ಯ ಭಕ್ತಿಯನ್ನು ಕೊಡುವುದೂ ಅಸಾಧ್ಯವಾದ ಸಂಗತಿ ಎಂದು ಯೇಸು ಇಲ್ಲಿ ಹೇಳುತ್ತಿದ್ದಾನೆ.

ಮತ್ತಾ 6:33​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹುಡುಕುತ್ತಾ ಇರಿ: ಈ ಗ್ರೀಕ್‌ ಕ್ರಿಯಾಪದ ರೂಪವು ಮುಂದುವರಿಯುವ ಕ್ರಿಯೆಯನ್ನು ಸೂಚಿಸುತ್ತದೆ ಮತ್ತು ‘ಎಡೆಬಿಡದೆ ಹುಡುಕಿರಿ’ ಎಂದು ಕೂಡ ಹೇಳಬಹುದು. ಯೇಸುವಿನ ನಿಜ ಹಿಂಬಾಲಕರು ಕೇವಲ ಸ್ವಲ್ಪ ಸಮಯಕ್ಕೆ ಮಾತ್ರ ದೇವರ ರಾಜ್ಯವನ್ನು ಹುಡುಕಿ ಮತ್ತೆ ಬೇರೆ ವಿಷಯಗಳಿಗೆ ಹೋಗಬಹುದು ಅಂತ ಅಲ್ಲ. ಬದಲಿಗೆ ಅವರು ತಮ್ಮ ಜೀವನದಲ್ಲಿ ಯಾವಾಗಲೂ ಅದಕ್ಕೆ ಮೊದಲ ಸ್ಥಾನ ಕೊಡಬೇಕು.

ರಾಜ್ಯವನ್ನೂ: ಕೆಲವು ಪುರಾತನ ಗ್ರೀಕ್‌ ಹಸ್ತಪ್ರತಿಗಳು “ದೇವರ ರಾಜ್ಯ” ಎಂದು ಹೇಳುತ್ತವೆ.

ಆತನ: ಆತನು ಅಂದರೆ ದೇವರಿಗೆ, ‘ಸ್ವರ್ಗದಲ್ಲಿರುವ ತಂದೆಗೆ’ ಅನ್ವಯಿಸುತ್ತದೆ ಎಂದು ಮತ್ತಾ 6:32​ರಲ್ಲಿದೆ.

ನೀತಿಯನ್ನೂ: ಯಾರು ದೇವರ ನೀತಿಯನ್ನೂ ಸ್ವಇಚ್ಛೆಯಿಂದ ಹುಡುಕುತ್ತಾರೋ ಅವರು ಆತನ ಚಿತ್ತವನ್ನು ಮಾಡುತ್ತಾರೆ ಮತ್ತು ಸರಿ-ತಪ್ಪಿನ ಆತನ ಮಟ್ಟಗಳನ್ನು ಅನುಕರಿಸುತ್ತಾರೆ. ಈ ಬೋಧನೆಯು ತಮ್ಮ ಸ್ವಂತ ನೀತಿಯನ್ನು ಸ್ಥಾಪಿಸಲು ಪ್ರಯತ್ನಿಸಿದ ಫರಿಸಾಯರ ವಿರುದ್ಧವಾಗಿದ್ದು ಸಂಪೂರ್ಣವಾಗಿ ಭಿನ್ನವಾಗಿತ್ತು.—ಮತ್ತಾ 5:20.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 7:28, 29​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅತ್ಯಾಶ್ಚರ್ಯಪಟ್ಟವು: ಇಲ್ಲಿ ಬಳಸಲಾದ ಗ್ರೀಕ್‌ ಕ್ರಿಯಾಪದಕ್ಕೆ, “ಭಾವಪರವಶವಾಗುವಷ್ಟರ ಮಟ್ಟಿಗೆ ಅಚ್ಚರಿಯಿಂದ ತುಂಬಿ ಹೋಗುವುದು” ಎಂಬ ಅರ್ಥವಿದೆ. ಕ್ರಿಯೆಯು ಮುಂದುವರಿಯುತ್ತಿರುವ ಈ ಪದರೂಪವು ಜನರ ಗುಂಪಿನ ಮೇಲೆ ಯೇಸುವಿನ ಮಾತುಗಳು ಎಂಥ ಅಪಾರ ಪರಿಣಾಮ ಬೀರಿತ್ತೆಂದು ಸೂಚಿಸುತ್ತದೆ.

ಅವನ ಬೋಧಿಸುವ ರೀತಿ: ಈ ಹೇಳಿಕೆಯು ಯೇಸು ಹೇಗೆ ಬೋಧಿಸಿದನು, ಆತನ ಬೋಧನಾ ವಿಧಾನಗಳು ಯಾವುವು ಎಂಬುದನ್ನು ಸೂಚಿಸುತ್ತದೆ. ಇದರಲ್ಲಿ ಆತನು ಕಲಿಸಿದ ಎಲ್ಲವುಗಳು, ಪರ್ವತ ಪ್ರಸಂಗದಲ್ಲಿ ಅವನು ಕೊಟ್ಟ ಇಡೀ ಬೋಧನಾ ಭಾಗವು ಕೂಡಿರುತ್ತದೆ.

ಅವರ ಶಾಸ್ತ್ರಿಗಳಂತೆ ಬೋಧಿಸದೆ: ಶಾಸ್ತ್ರಿಗಳು ವಾಡಿಕೆಯ ಪ್ರಕಾರ ಪೂಜ್ಯ ರಬ್ಬಿಗಳ ಅಧಿಕಾರದ ಆಧಾರದಲ್ಲಿ ಉಲ್ಲೇಖಗಳನ್ನು ಮಾಡುತ್ತಿದ್ದರು. ಆದರೆ ಯೇಸುವು ಯೆಹೋವನ ಪ್ರತಿನಿಧಿಯಾಗಿ ಮಾತನಾಡಿದನು. ತನ್ನ ಬೋಧನೆಗಳನ್ನು ದೇವರ ವಾಕ್ಯದ ಮೇಲೆ ಆಧಾರಿಸಿ ಅಧಿಕಾರವಿದ್ದವನಂತೆ ಉಪದೇಶ ಮಾಡಿದನು.—ಯೋಹಾ 7:16.

ಜನವರಿ 22-28

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 8-9

“ಯೇಸು ಜನರನ್ನು ಪ್ರೀತಿಸಿದನು”

ಮತ್ತಾ 8:3​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವನನ್ನು ಮುಟ್ಟಿದನು: ಮೋಶೆಯ ಧರ್ಮಶಾಸ್ತ್ರವು ಕುಷ್ಠರೋಗಿಗಳಿಗೆ ಪ್ರತ್ಯೇಕವಾಸವನ್ನು ಅವಶ್ಯಪಡಿಸಿತ್ತು. ರೋಗದ ಸೋಂಕಿನಿಂದ ಇತರರನ್ನು ತಪ್ಪಿಸಲು ಹೀಗೆ ಮಾಡುತ್ತಿದ್ದರು. (ಯಾಜ 13:45, 46; ಅರಣ್ಯ 5:1-4) ಆದರೆ ಯೆಹೂದಿ ಧಾರ್ಮಿಕ ಮುಖಂಡರು ಜನರ ಮೇಲೆ ಇನ್ನೂ ಹೆಚ್ಚಿನ ನಿಯಮಗಳನ್ನು ಹೊರಿಸಿದರು. ಉದಾಹರಣೆಗೆ ಕುಷ್ಠರೋಗಿಯ ಹತ್ತಿರ ಸುಮಾರು 1.8 ಮೀಟರ್‌ (6 ಅಡಿ) ಅಂತರದೊಳಗೆ ಯಾವನೂ ಬರಬಾರದಿತ್ತು. ಆದರೆ ತುಂಬಾ ಗಾಳಿಯಿದ್ದ ಸಮಯದಲ್ಲಿ ಅಂತರವು 45 ಮೀಟರ್‌ (150 ಅಡಿ) ಆಗಿತ್ತು. ಇಂಥ ನಿರ್ಬಂಧಗಳಿಂದಾಗಿ ಜನರು ಕುಷ್ಠರೋಗಿಗಳನ್ನು ನಿಷ್ಕರುಣೆಯಿಂದ ಉಪಚರಿಸುತ್ತಿದ್ದರು. ಕುಷ್ಠರನ್ನು ಕಂಡ ಕ್ಷಣ ಅಡಗಿಕೊಳ್ಳುತ್ತಿದ್ದ ಒಬ್ಬ ರಬ್ಬಿಯ ಬಗ್ಗೆ ಮತ್ತು ಅವರು ಹತ್ತಿರಬರದಂತೆ ಕಲ್ಲೆಸೆದು ಅವರನ್ನು ದೂರವಿಡುತ್ತಿದ್ದ ಇನ್ನೊಬ್ಬನ ಬಗ್ಗೆ ಸಂಪ್ರದಾಯವು ಹೊಗಳಿ ಮಾತಾಡಿದೆ. ಇದಕ್ಕೆ ಭಿನ್ನವಾಗಿ ಯೇಸುವಾದರೋ ಕುಷ್ಠರೋಗಿಗಳ ದುರವಸ್ಥೆಗೆ ಆಳವಾದ ಅನುಕಂಪ, ಕನಿಕರ ತೋರಿಸಿದನು. ಇತರ ಯೆಹೂದ್ಯರಿಗೆ ಯೋಚಿಸಲೂ ಅಸಾಧ್ಯವೆಂದೆಣಿಸಿದ ವಿಷಯವನ್ನು ಆತನು ಮಾಡಿದನು ಅಂದರೆ ಕುಷ್ಠರೋಗಿಯನ್ನು ಮುಟ್ಟಿದನು ಸಹ. ಆತನು ಒಂದೇ ಒಂದು ಮಾತಿನಿಂದ ಅವನನ್ನು ವಾಸಿ ಮಾಡಶಕ್ತನಾಗಿದ್ದರೂ ಅವನನ್ನು ಸ್ಪರ್ಶಿಸಿ ಕನಿಕರ ತೋರಿಸಿದನು.—ಮತ್ತಾ 8:5-12.

ನನಗೆ ಮನಸ್ಸುಂಟು: ಯೇಸು ಅವನ ವಿನಂತಿಯನ್ನು ಅಂಗೀಕರಿಸಿದನು ಮಾತ್ರವೇ ಅಲ್ಲ ಅದಕ್ಕೆ ಪ್ರತಿಕ್ರಿಯೆ ತೋರಿಸುವ ಬಲವಾದ ಅಪೇಕ್ಷೆಯನ್ನೂ ವ್ಯಕ್ತಪಡಿಸಿದನು. ಬರೇ ಕರ್ತವ್ಯ ಪಾಲನೆಯಲ್ಲ, ಅದಕ್ಕಿಂತ ಹೆಚ್ಚಿನದಾದ ಪರಾನುಭೂತಿಯಿಂದ ಪ್ರೇರಿತನಾದನು.

ಮತ್ತಾ 9:10​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಊಟಕ್ಕೆ ಕುಳಿತಿದ್ದಾಗ: ಅಥವಾ ‘ಪಂಕ್ತಿಯಲ್ಲಿ (ಮೇಜಿನಲ್ಲಿ) ಊಟಕ್ಕೆ ಕುಳಿತರು.’ ಒಬ್ಬನೊಂದಿಗೆ ಪಂಕ್ತಿಯಲ್ಲಿ (ಮೇಜಿನಲ್ಲಿ) ಕೂತು ಊಟಮಾಡುವುದು ಆ ವ್ಯಕ್ತಿಯೊಂದಿಗಿನ ಆಪ್ತ ಸ್ನೇಹಭಾವವನ್ನು ಸೂಚಿಸುತ್ತಿತ್ತು. ಹಾಗಾಗಿ ಯೇಸುವಿನ ದಿನಗಳಲ್ಲಿ ಯೆಹೂದ್ಯರು ಯೆಹೂದ್ಯರಲ್ಲದವರೊಂದಿಗೆ ಸಾಮಾನ್ಯವಾಗಿ ಎಂದೂ ಪಂಕ್ತಿಯಲ್ಲಿ (ಮೇಜಿನಲ್ಲಿ) ಕೂತು ಊಟ ಮಾಡುತ್ತಿರಲಿಲ್ಲ.

ತೆರಿಗೆ ವಸೂಲಿಗಾರರು: ಅನೇಕ ಯೆಹೂದ್ಯರು ರೋಮನ್‌ ಅಧಿಕಾರಿಗಳಿಗಾಗಿ ತೆರಿಗೆ ವಸೂಲಿ ಮಾಡುತ್ತಿದ್ದರು. ಅಂಥ ಯೆಹೂದ್ಯರನ್ನು ಜನರು ದ್ವೇಷಿಸುತ್ತಿದ್ದರು. ಯಾಕೆಂದರೆ ಜನರು ಹೇಸುತ್ತಿದ್ದ ವಿದೇಶಿ ಅಧಿಕಾರದ ಜೊತೆಗೂಡಿ ಅವರು ಕೆಲಸಮಾಡುತ್ತಿದ್ದರು ಮಾತ್ರವಲ್ಲ ಅಧಿಕೃತ ತೆರಿಗೆ ದರಕ್ಕಿಂತ ಹೆಚ್ಚು ಹಣವನ್ನು ಸುಲಿಯುತ್ತಿದ್ದರು. ತೆರಿಗೆ ವಸೂಲಿಗಾರರೊಂದಿಗೆ ಯೆಹೂದ್ಯರು ಸಾಮಾನ್ಯವಾಗಿ ಬೆರೆಯುತ್ತಿರಲಿಲ್ಲ. ಅವರನ್ನು ಪಾಪಿಗಳೂ ವೇಶ್ಯೆಗಳೂ ಆಗಿರುವವರ ಸಾಲಿಗೆ ಸೇರಿಸುತ್ತಿದ್ದರು.—ಮತ್ತಾ 11:19; 21:32.

ಮತ್ತಾ 9:36​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕನಿಕರಪಟ್ಟನು: ಇದರ ಗ್ರೀಕ್‌ ಕ್ರಿಯಾಪದವು ಸ್ಪ್ಲೆಗ್‌-ಕನಿ-ಜೋಮೈ ಎಂದಾಗಿದೆ. ಇದು “ಕರುಳುಗಳಿಗೆ” (ಸ್ಪ್ಲೆಗ್‌-ಕನ) ಸಂಬಂಧಿಸಿದ ಪದವಾಗಿದೆ, ದೇಹದಾಳದಲ್ಲಿ ಅನಿಸುವ ಒಂದು ತೀಕ್ಷ್ಣ ಭಾವನೆಯ ಗಾಢತೆಯನ್ನು ಇದು ಸೂಚಿಸುತ್ತದೆ. ಕನಿಕರದ ತೀವ್ರತೆಯನ್ನು ಸೂಚಿಸಲು ಗ್ರೀಕ್‌ ಭಾಷೆಯಲ್ಲಿ ಪ್ರಯೋಗಿಸುವ ಅತಿ ಪ್ರಬಲವಾದ ಪದ ಇದಾಗಿದೆ.

ಜನವರಿ 29–ಫೆಬ್ರವರಿ 4

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 10-11

“ಯೇಸು ಚೈತನ್ಯ ನೀಡಿದನು”

ಮತ್ತಾ 10:29, 30​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಗುಬ್ಬಿಗಳು: ಗ್ರೀಕ್‌ ಪದವಾದ ಸ್ಟ್ರೋತಿಯಾನ್‌ ಎಂದರೆ ಅತಿ ಕಿರಿದಾದ ಪುಟ್ಟ ಗಾತ್ರದ ಯಾವುದೇ ಚಿಕ್ಕ ಪಕ್ಷಿ ಎಂಬರ್ಥ ಕೊಡುತ್ತದೆ. ಆದರೆ ಇದು ಹೆಚ್ಚಾಗಿ ಗುಬ್ಬಿಗಳಿಗೆ ಸೂಚಿತವಾಗಿದೆ. ಆಹಾರಕ್ಕಾಗಿ ಮಾರಲ್ಪಡುವ ಎಲ್ಲಾ ಹಕ್ಕಿಗಳಲ್ಲಿ ಗುಬ್ಬಿಗಳಿಗೆ ಅತಿ ಕಡಿಮೆ ಬೆಲೆ ಇತ್ತು.

ಚಿಕ್ಕ ಮೌಲ್ಯದ ಒಂದು ಕಾಸಿಗೆ: ಅಕ್ಷರಶಃ “ಒಂದು ಎಸ್ಸಾರಿಯನ್‌ (ಒಂದು ಕಾಸಿಗೆ).” ಇದು 45 ನಿಮಿಷ ಕೆಲಸ ಮಾಡಿದಕ್ಕಾಗಿ ಒಬ್ಬನಿಗೆ ಸಿಗುವ ಕೂಲಿ. (App. B-14 ನೋಡಿ) ಯೇಸು ತನ್ನ ಮೂರನೇ ಗಲಿಲಾಯ ಸಂಚಾರದ ಈ ಸಂದರ್ಭದಲ್ಲಿ, ಎರಡು ಗುಬ್ಬಿಗಳ ಬೆಲೆ ಒಂದು ಎಸ್ಸಾರಿಯನ್‌ ಎಂದು ಹೇಳಿದನು. ಸುಮಾರು ಒಂದು ವರ್ಷದ ನಂತರ ಅಂದರೆ ಯೂದಾಯದ ತನ್ನ ಸೇವಾ ಸಂಚಾರದಲ್ಲಿ ಇದರ ಇಮ್ಮಡಿ ಬೆಲೆಗೆ (ಎರಡು ಕಾಸಿಗೆ) ಐದು ಗುಬ್ಬಿಗಳು ಮಾರಲ್ಪಡುತ್ತವೆ ಎಂದು ಯೇಸು ಹೇಳಿದನು. (ಲೂಕ 12:6) ಈ ವೃತ್ತಾಂತಗಳನ್ನು ಹೋಲಿಸುವಾಗ ವ್ಯಾಪಾರಸ್ಥರಿಗೆ ಗುಬ್ಬಿಗಳು ಎಷ್ಟು ಅಲ್ಪ ಬೆಲೆಯದ್ದಾಗಿದ್ದವು ಎಂದರೆ ಐದನೆಯದನ್ನು ಪುಕ್ಕಟೆಯಾಗಿ ಕೊಡಲಾಗುತ್ತಿತ್ತು.

ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ: ಮನುಷ್ಯನ ತಲೆಯಲ್ಲಿ ಸರಾಸರಿ 100,000ಕ್ಕಿಂತಲೂ ಹೆಚ್ಚು ಕೂದಲುಗಳಿವೆಯೆಂದು ಹೇಳಲಾಗುತ್ತದೆ. ಯೆಹೋವನಿಗೆ ಅಂಥ ಸೂಕ್ಷ್ಮ ವಿವರಣೆಗಳ ಆಪ್ತ ಜ್ಞಾನವಿದೆ. ಇದು ಕ್ರಿಸ್ತನ ಪ್ರತಿಯೊಬ್ಬ ಹಿಂಬಾಲಕನಲ್ಲಿ ಆತನಿಗೆ ತೀವ್ರಾಸಕ್ತಿಯಿದೆ ಎಂಬುದರ ಖಾತ್ರಿಯನ್ನು ಕೊಡುತ್ತದೆ.

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಗುಬ್ಬಿ

ಆಹಾರಕ್ಕಾಗಿ ಮಾರಲಾಗುವ ಎಲ್ಲಾ ಪಕ್ಷಿಗಳಲ್ಲಿ ಗುಬ್ಬಿಗಳು ಅತ್ಯಂತ ಕಡಿಮೆ ಬೆಲೆಯವುಗಳು. ಒಬ್ಬ ಮನುಷ್ಯನು ಬರೇ 45 ನಿಮಿಷ ಕೆಲಸ ಮಾಡಿ ಸಂಪಾದಿಸುವ ಹಣದಿಂದ ಎರಡು ಗುಬ್ಬಿಗಳನ್ನು ಖರೀದಿಸಬಹುದಿತ್ತು. ಇದರ ಗ್ರೀಕ್‌ ಪದರೂಪವು ಹಲವಾರು ವಿಧದ ಚಿಕ್ಕ ಪಕ್ಷಿಗಳನ್ನು ಸೂಚಿಸುತ್ತದೆ. ಇದರಲ್ಲಿ ವಿಶೇಷವಾಗಿ ಮನೆಗಳಲ್ಲಿ ನೆಲೆಸುವ ಸಾಮಾನ್ಯ ಗುಬ್ಬಿ (ಪೇಸರ್‌ ಡೊಮೆಸ್ಟಿಕಸ್‌ ಬಿಬಿಲಿಕಸ್‌) ಮತ್ತು ಸ್ಫೇನಿಷ್‌ ಗುಬ್ಬಿ (ಪೇಸರ್‌ ಹಿಸ್ಪೇನಿಯೋಲೆನ್ಸಿಸ್‌) ಸೇರಿರುತ್ತವೆ. ಇಸ್ರೇಲ್‌ ದೇಶದಲ್ಲಿ ಇವು ಈಗಲೂ ತುಂಬಾ ಸಂಖ್ಯೆಯಲ್ಲಿವೆ.

ಮತ್ತಾ 11:28​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹೊರೆಹೊತ್ತವರೇ: ಕಷ್ಟ, ಆತಂಕ ಮತ್ತು ದಣಿವಿನಿಂದ ಬಳಲಿಹೋದ “ಹೊರೆಹೊತ್ತವರನ್ನು” ಯೇಸು ತನ್ನ ಬಳಿಗೆ ಬರುವಂತೆ ಕರೆದನು. ಯೆಹೋವನ ಆರಾಧನೆಯು ಅವರಿಗೆ ಭಾರವಾದ ಹೊರೆಯಾಗಿತ್ತು. ಹೇಗಂದರೆ ಧಾರ್ಮಿಕ ಮುಖಂಡರು ಮಾನವ ಸಂಪ್ರದಾಯಗಳನ್ನು ಮೋಶೆಯ ಧರ್ಮಶಾಸ್ತ್ರಕ್ಕೆ ಕೂಡಿಸಿದ್ದರು. (ಮತ್ತಾ 23:4) ವಿಶ್ರಾಂತಿ ಹಾಗೂ ಚೈತನ್ಯದ ಮೂಲವಾಗಿರಬೇಕಾಗಿದ್ದ ಸಬ್ಬತ್‌ ಕೂಡ ಜನರಿಗೆ ಒಂದು ಭಾರವಾದ ಹೊರೆಯಾಗಿ ಪರಿಣಮಿಸಿತ್ತು.—ವಿಮೋ 23:12; ಮಾರ್ಕ 2:23-28; ಲೂಕ 6:1-11.

ನಾನು ನಿಮಗೆ ಚೈತನ್ಯ ಕೊಡುವೆನು: “ಚೈತನ್ಯ” ಎಂಬುದರ ಗ್ರೀಕ್‌ ಪದರೂಪವು, ದಣಿವಾರಿಸಿಕೊಂಡು ಪುನಃ ಹೊಸ ಬಲ ಹೊಂದಲು ವಿಶ್ರಾಂತಿ ಪಡೆದುಕೋ, (ಮತ್ತಾ 26:45; ಮಾರ್ಕ 6:31) ಆಯಾಸ ಪರಿಹರಿಸಿಕೋ ಎಂಬ ಎರಡನ್ನೂ ಸೂಚಿಸಬಹುದು (2ಕೊರಿಂ 7:13; ಫಿಲೆ 7). ಪೂರ್ವಾಪರವು ತೋರಿಸುವ ಮೇರೆಗೆ, ಯೇಸುವಿನ “ನೊಗವನ್ನು” (ಮತ್ತಾ 11:29) ತೆಗೆದುಕೊಳ್ಳುವುದರಲ್ಲಿ ಕ್ರಿಯೆ ಒಳಗೂಡಿದೆಯೇ ವಿನಃ ವಿಶ್ರಾಂತಿಯಲ್ಲ. ಕಷ್ಟಪಡುವವರಿಗೆ ಹೊರೆಹೊತ್ತವರಿಗೆ ಪುನಃ ಶಕ್ತಿ, ಚೈತನ್ಯವನ್ನು ಯೇಸು ಕೊಡುವನೆಂಬ ವಿಚಾರವನ್ನು ಈ ಗ್ರೀಕ್‌ ಕ್ರಿಯಾಪದವು ಸೂಚಿಸುತ್ತದೆ. ಯಾರು ಆತನ ಹಗುರವಾದ ಮತ್ತು ಮೃದುವಾದ ನೊಗವನ್ನು ತೆಗೆದುಕೊಳ್ಳಲು ಬಯಸುತ್ತಾರೊ ಅವರಿಗೆ ಆ ಚೈತನ್ಯವು ಸಿಗುವುದು.

ಮತ್ತಾ 11:29​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ: ಯೇಸು ತನ್ನ “ನೊಗ”ವನ್ನು ಸಾಂಕೇತಿಕವಾಗಿ ಬಳಸಿದನು. ಅಧಿಕಾರ, ಮಾರ್ಗದರ್ಶನೆಗೆ ಅಧೀನರಾಗುವ ಅರ್ಥದಲ್ಲಿ ಬಳಸಿದನು. ದೇವರು ಯೇಸುವಿನ ಮೇಲಿಟ್ಟ ಜೋಡಿ ನೊಗದ ಬಗ್ಗೆ ಅವನು ಇಲ್ಲಿ ಹೇಳುತ್ತಿದ್ದಲ್ಲಿ, ಶಿಷ್ಯರನ್ನು ಆ ನೊಗದ ಕೆಳಗೆ ತನ್ನೊಂದಿಗೆ ಬರುವಂತೆ ಆಮಂತ್ರಿಸುತ್ತಿದ್ದನು ಮತ್ತು ತಾನು ಸಹಾಯಮಾಡುವೆನೆಂದು ಹೇಳುತ್ತಿದ್ದನು. ಹಾಗಿದ್ದಲ್ಲಿ, “ನನ್ನೊಂದಿಗೆ ನನ್ನ ನೊಗದ ಕೆಳಗೆ ಬನ್ನಿರಿ” ಎಂದು ಆ ವಚನ ಭಾಷಾಂತರವಾಗುವ ಸಾಧ್ಯವಿತ್ತು. ಯೇಸು ತಾನೇ ಬೇರೆಯವರ ಮೇಲೆ ಹಾಕುವ ನೊಗವು ಅದಾಗಿದ್ದರೆ, ಅವರು ಶಿಷ್ಯರೋಪಾದಿ ಕ್ರಿಸ್ತನ ಅಧಿಕಾರಕ್ಕೆ ಮತ್ತು ಮಾರ್ಗದರ್ಶನೆಗೆ ತಮ್ಮನ್ನು ಅಧೀನಪಡಿಸುವುದನ್ನು ಅದು ಸೂಚಿಸುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ