ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಮಾರ್ಚ್‌ ಪು. 1-4
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಮಾರ್ಚ್‌ 5-11
  • ಮಾರ್ಚ್‌ 12-18
  • ಮಾರ್ಚ್‌ 19-25
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಮಾರ್ಚ್‌ ಪು. 1-4

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಮಾರ್ಚ್‌ 5-11

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 20-21

“ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು”

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಪೇಟೆ (ಮಾರುಕಟ್ಟೆ)

ಇಲ್ಲಿ ಚಿತ್ರಿಸಲಾದಂಥ ಕೆಲವು ಮಾರುಕಟ್ಟೆಗಳು ದಾರಿಬದಿಗಳಲ್ಲಿರುವ ಮಾರಾಟದ ಸ್ಥಳಗಳಾಗಿವೆ. ಮಾರಾಟಗಾರರು ದಾರಿಬದಿಯಲ್ಲಿ ಎಷ್ಟೊಂದು ಸರಕು ಸಾಮಾನುಗಳನ್ನು ತಂದುಹಾಕುತ್ತಿದ್ದರೆಂದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಸ್ಥಳಿಕ ನಿವಾಸಿಗಳು ಇಲ್ಲಿ ದಿನನಿತ್ಯದ ಗೃಹೋಪಯೋಗಿ ಸಾಮಾನುಗಳನ್ನು, ಮಡಿಕೆ ಕುಡಿಕೆಗಳನ್ನು, ಬೆಲೆಬಾಳುವ ಗಾಜಿನ ಸಾಮಾನುಗಳನ್ನು ಹಾಗೂ ತಾಜಾ ಆಹಾರ ಸಾಮಗ್ರಿಗಳನ್ನು ಖರೀದಿಸಬಹುದಿತ್ತು. ಸಂಸ್ಕರಣಾ ಸೌಲಭ್ಯವು ಇರದ ಕಾರಣ ಆಹಾರ ಪದಾರ್ಥಗಳನ್ನು ಖರೀದಿಸಲು ಜನರು ಪ್ರತಿದಿನ ಪೇಟೆಗೆ ಬರುತ್ತಿದ್ದರು. ವ್ಯಾಪಾರಿಗಳಿಂದ ಅಥವಾ ಬೇರೆಯವರಿಂದ ಗಿರಾಕಿಗಳಿಗೆ ಹೊಸ ಸುದ್ದಿ ಸಮಾಚಾರಗಳು ಸಿಗುತ್ತಿದ್ದವು. ಮಕ್ಕಳಿಗೆ ಆಡಲು ಸ್ಥಳವಿರುತ್ತಿತ್ತು. ನಿರುದ್ಯೋಗಿಗಳಿಗೆ ಕೂಲಿಕೆಲಸ ದೊರೆಯುತ್ತಿತ್ತು. ಇಂಥ ಪೇಟೆ ಚೌಕಗಳಲ್ಲಿ ಯೇಸು ರೋಗಿಗಳನ್ನು ವಾಸಿಮಾಡಿದ್ದನು ಮತ್ತು ಪೌಲನು ಸುವಾರ್ತೆ ಸಾರಿದ್ದನು. (ಅಕಾ 17:17) ಇದಕ್ಕೆ ವ್ಯತಿರಿಕ್ತವಾಗಿ, ದುರಭಿಮಾನಿಗಳಾದ ಫರಿಸಾಯರು ಮತ್ತು ಶಾಸ್ತ್ರಿಗಳು ಈ ಸಾರ್ವಜನಿಕ ಪೇಟೆ ಬೀದಿಗಳಲ್ಲಿ ಬೇರೆಯವರಿಂದ ವೀಕ್ಷಿಸಲ್ಪಡಲು ಮತ್ತು ವಂದಿಸಲ್ಪಡಲ್ಪಡುವುದರಲ್ಲಿ ಹೆಚ್ಚು ಆಸಕ್ತರಿದ್ದರು.

ಮತ್ತಾ 20:20, 21​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಜೆಬೆದಾಯನ ಮಕ್ಕಳ ತಾಯಿ: ಇವಳು ಅಪೊಸ್ತಲ ಯಾಕೋಬ ಮತ್ತು ಯೋಹಾನರ ತಾಯಿ. ಮಾರ್ಕನು ಬರೆದ ಸುವಾರ್ತೆಗೆ ಅನುಸಾರ ಯೇಸುವನ್ನು ವಿನಂತಿಸಿದವರು ಯಾಕೋಬ ಮತ್ತು ಯೋಹಾನರೇ. ಆ ವಿನಂತಿಯು ಬಂದದ್ದು ಅವರಿಂದಲೇ. ಆದರೆ ಅವರು ತಮ್ಮ ತಾಯಿಯಾದ ಸಲೋಮಿಯ ಮೂಲಕ ಅದನ್ನು ಯೇಸುವಿಗೆ ತಲಪಿಸಿದರು. ಸಲೋಮಿ ಪ್ರಾಯಶಃ ಯೇಸುವಿನ ಸೋದರತ್ತೆಯಾಗಿರಬೇಕು.—ಮತ್ತಾ 27:55, 56; ಮಾರ್ಕ 15:40, 41; ಯೋಹಾ 19:25.

ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ಎಡಗಡೆಯಲ್ಲಿಯೂ: ಇಲ್ಲಿ ಎರಡು ಸ್ಥಾನಗಳೂ ಗೌರವದ ಮತ್ತು ಅಧಿಕಾರದ ಸ್ಥಾನಗಳಾಗಿವೆ. ಆದರೆ ಅತ್ಯಧಿಕ ಗೌರವಯುತ ಸ್ಥಾನವು ಯಾವಾಗಲೂ ಬಲಗಡೆಯದ್ದು.—ಕೀರ್ತ 110:1; ಅಕಾ 7:55, 56; ರೋಮ 8:34.

ಮತ್ತಾ 20:26, 28​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಶುಶ್ರೂಷಕ: ಅಥವಾ “ಸೇವಕ.” ಬೈಬಲು ಸೇವಕನಿಗೆ ಗ್ರೀಕ್‌ ಪದವಾದ ಡಯಕೊನಸ್‌ನ್ನು ಬಳಸುತ್ತದೆ. ಇತರರ ಪರವಾಗಿ ದೀನತೆಯಿಂದ ಬಿಡದೆ ಸೇವೆ ಸಲ್ಲಿಸುವ ವ್ಯಕ್ತಿಯನ್ನು ಅದು ಸೂಚಿಸುತ್ತದೆ. ಈ ಪದವನ್ನು ಕ್ರಿಸ್ತನನ್ನು (ರೋಮ 15:8), ಕ್ರಿಸ್ತನ ಶುಶ್ರೂಷಕರನ್ನು ಅಥವಾ ಸೇವಕರನ್ನು (1ಕೊರಿ 3:5-7; ಕೊಲೊ 1:23), ಸಹಾಯಕ ಸೇವಕರನ್ನು (ಫಿಲಿ 1:1; 1 ತಿಮೊ 3:8), ಹಾಗೂ ಮನೆಗೆಲಸದ ಸೇವಕರನ್ನು (ಯೋಹಾ 2:5, 9) ಮತ್ತು ಸರ್ಕಾರಿ ಅಧಿಕಾರಿಗಳನ್ನು (ರೋಮ 13:4) ಸೂಚಿಸಲಿಕ್ಕಾಗಿ ಬಳಸಲಾಗಿದೆ.

ಶುಶ್ರೂಷೆ ಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಶುಶ್ರೂಷೆ ಮಾಡುವುದಕ್ಕೆ: ಅಥವಾ “ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಸೇವೆ ಮಾಡುವುದಕ್ಕೆ.”

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 21:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ರಕ್ಷಣೆಯನ್ನು ಕೋರುತ್ತೇವೆ: ಅಕ್ಷರಶಃ “ಹೊಸನ್ನಾ.” ಈ ಗ್ರೀಕ್‌ ಪದವು “ರಕ್ಷಣೆಯನ್ನು ಕೋರುತ್ತೇವೆ” ಅಥವಾ “ದಯವಿಟ್ಟು ರಕ್ಷಿಸು” ಎಂಬ ಅರ್ಥವಿರುವ ಹೀಬ್ರೂ ವಾಕ್ಸರಣಿಯಿಂದ ಬಂದಿದೆ. ರಕ್ಷಣೆ ಅಥವಾ ಜಯವನ್ನು ಕೊಡಲಿಕ್ಕಾಗಿ ದೇವರನ್ನು ಬೇಡಿಕೊಳ್ಳುವುದಕ್ಕೆ ಈ ಪದವನ್ನು ಬಳಸಲಾಗಿದೆ. ಇದನ್ನು “ದಯವಿಟ್ಟು ರಕ್ಷಣೆಯನ್ನು ದಯಪಾಲಿಸು” ಎಂದು ಹೇಳಬಹುದು. ಸಮಯಾನಂತರ ಇದು ಪ್ರಾರ್ಥನೆ ಮತ್ತು ಸ್ತುತಿ ಸ್ತೋತ್ರದ ಪದಪ್ರಯೋಗವಾಗಿ ಪರಿಣಮಿಸಿತು. ಇದರ ಹೀಬ್ರೂ ಪದಪ್ರಯೋಗ ಕೀರ್ತ 118:25​ರಲ್ಲಿ ಇದೆ. ಪಸ್ಕದ ಸಮಯ ಕ್ರಮವಾಗಿ ಹಾಡಲಾಗುತ್ತಿದ್ದ ಹಾಲೆಲ್‌ ಕೀರ್ತನೆಗಳ ಭಾಗ ಇದಾಗಿತ್ತು. ಹಾಗಾಗಿ ಈ ಸನ್ನಿವೇಶದಲ್ಲಿ ಈ ಪದಗಳು ಜನರಿಗೆ ಸುಲಭವಾಗಿ ನೆನಪಿಗೆ ಬಂದವು. ‘ದಾವೀದ ಕುಮಾರನಿಗೆ ರಕ್ಷಣೆಯನ್ನು ಕೋರುತ್ತೇವೆ’ ಎಂದವರು ಮಾಡಿದ ಪ್ರಾರ್ಥನೆಗೆ ದೇವರು ಕೊಟ್ಟ ಉತ್ತರದ ಒಂದು ವಿಧ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ಮೂಲಕವೇ. ಮತ್ತಾ 21:42​ರಲ್ಲಿ ಯೇಸು ತಾನೇ ಕೀರ್ತ 118:22, 23​ನ್ನು ಉಲ್ಲೇಖಿಸಿ ಅದನ್ನು ಮೆಸ್ಸೀಯನಿಗೆ ಅನ್ವಯಿಸಿದನು.

ದಾವೀದನ ಕುಮಾರ: ಯೇಸುವಿನ ವಂಶಾವಳಿಯನ್ನು ಹಾಗೂ ವಾಗ್ದತ್ತ ಮೆಸ್ಸೀಯನಾದ ಅವನ ಸ್ಥಾನವನ್ನು ಒಪ್ಪಿದ್ದೇವೆ, ಅಂಗೀಕರಿಸಿದ್ದೇವೆಂದು ಸೂಚಿಸುವ ಹೇಳಿಕೆ ಇದಾಗಿದೆ.

ಮಾರ್ಚ್‌ 12-18

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 22-23

“ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ”

ಮತ್ತಾ 22:37​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹೃದಯ: ಸಾಂಕೇತಿಕ ಅರ್ಥದಲ್ಲಿ ಬಳಸುವಾಗ ಈ ಪದವು ಸಾಮಾನ್ಯವಾಗಿ ಪೂರ್ತಿ ಆಂತರಿಕ ವ್ಯಕ್ತಿಯನ್ನು ಸೂಚಿಸುತ್ತದೆ. ಆದರೆ “ಪ್ರಾಣ” ಮತ್ತು “ಮನಸ್ಸು” ಇವನ್ನು ಒಟ್ಟಿಗೆ ಸೇರಿಸಿ ಹೇಳುವಾಗ ಅವು ಹೆಚ್ಚು ವಿಶಿಷ್ಟ ಅರ್ಥವನ್ನು ಸೂಚಿಸುತ್ತವೆ. ಅಂದರೆ ಮುಖ್ಯವಾಗಿ ಒಬ್ಬ ವ್ಯಕ್ತಿಯ ಭಾವನೆಗಳು, ಬಯಕೆಗಳು ಮತ್ತು ಅನಿಸಿಕೆಗಳಿಗೆ ಅದು ಸೂಚಿಸುತ್ತದೆ. ಇಲ್ಲಿ ಬಳಸಿರುವ ಮೂರು ಪದಗಳು (ಹೃದಯ, ಪ್ರಾಣ, ಮನಸ್ಸು) ಪರಸ್ಪರ ಪ್ರತ್ಯೇಕವಾದವುಗಳಲ್ಲ. ಅವನ್ನು ಒಂದಕ್ಕೊಂದು ಸಂಬಂಧಿಸುವ ಅರ್ಥದಲ್ಲಿ ಅಂದರೆ, ದೇವರಿಗೆ ಸಂಪೂರ್ಣವೂ ಸಮಗ್ರವೂ ಆದ ಪ್ರೀತಿಯನ್ನು ತೋರಿಸುವ ಆವಶ್ಯಕತೆಯನ್ನು ಬಲವಾಗಿ ಒತ್ತಿಹೇಳುವ ಅರ್ಥದಲ್ಲಿ ಬಳಸಲಾಗಿದೆ.

ಪ್ರಾಣ: ಅಥವಾ “ಇಡೀ ಅಸ್ತಿತ್ವ.”

ಮನಸ್ಸು: ಅಂದರೆ ಬುದ್ಧಿ ಸಾಮರ್ಥ್ಯಗಳು. ದೇವರನ್ನು ತಿಳಿದುಕೊಳ್ಳಬೇಕಾದರೆ ಮತ್ತು ಆತನ ಪ್ರೀತಿಯಲ್ಲಿ ಬೆಳೆಯಬೇಕಾದರೆ ಒಬ್ಬನು ತನ್ನ ಮನಸ್ಸು ಅಥವಾ ಬುದ್ಧಿ ಶಕ್ತಿಯನ್ನು ಉಪಯೋಗಿಸಬೇಕು. (ಯೋಹಾ 17:3; ರೋಮ 12:1) ಧರ್ಮೋ 6:5​ರಿಂದ ತೆಗೆದ ಈ ಉಲ್ಲೇಖದಲ್ಲಿ ಮೂಲ ಹೀಬ್ರೂ ವಚನವು, ‘ಹೃದಯ, ಪ್ರಾಣ, ಶಕ್ತಿ’ ಎಂಬ ಮೂರು ಪದಗಳನ್ನು ಬಳಸುತ್ತದೆ. ಆದರೂ ಗ್ರೀಕ್‌ ಭಾಷೆಯ ಮತ್ತಾಯನ ವೃತ್ತಾಂತದಲ್ಲಿ “ಶಕ್ತಿ” ಎಂಬ ಪದದ ಬದಲಿಗೆ “ಮನಸ್ಸು” ಎಂಬ ಪದವನ್ನು ಬಳಸಲಾಗಿದೆ. ಈ ವಿವಿಧ ಪದಗಳನ್ನು ಬಳಸಲಿಕ್ಕೆ ಅನೇಕ ಕಾರಣಗಳಿದ್ದಿರಬಹುದು. ಒಂದನೇದಾಗಿ, ಪುರಾತನ ಹೀಬ್ರೂವಿನಲ್ಲಿ “ಮನಸ್ಸು” ಎಂಬುದಕ್ಕೆ ನಿರ್ದಿಷ್ಟ ಪದವಿಲ್ಲ. ಆದರೂ ಈ ಪರಿಕಲ್ಪನೆಯನ್ನು ಅನೇಕವೇಳೆ “ಹೃದಯ” ಎಂಬ ಹೀಬ್ರೂ ಪದದೊಳಗೆ ಸೇರಿಸಲಾಗುತ್ತಿತ್ತು. ಈ ಪದವನ್ನು ಸಾಂಕೇತಿಕವಾಗಿ ಉಪಯೋಗಿಸುವಾಗ ಅದು ಒಬ್ಬ ವ್ಯಕ್ತಿಯ ಯೋಚನೆ, ಅನಿಸಿಕೆಗಳು, ಮನೋಭಾವಗಳು ಮತ್ತು ಪ್ರಚೋದನೆಗಳು ಸೇರಿರುವ ಇಡೀ ಆಂತರಿಕ ವ್ಯಕ್ತಿಯನ್ನು ಸೂಚಿಸುತ್ತದೆ. (ಧರ್ಮೋ 29:4; ಕೀರ್ತ 26:2; 64:6; ಈ ವಚನದಲ್ಲಿರುವ ಹೃದಯ ಪದದ ಸ್ಟಡಿ ನೋಟ್‌ ನೋಡಿ.) ಈ ಕಾರಣದಿಂದಾಗಿ, “ಹೃದಯ” ಎಂಬ ಪದವನ್ನು ಹೀಬ್ರು ಮೂಲಪಾಠ ಎಲ್ಲಿ ಬಳಸುತ್ತದೆಯೋ ಅಲ್ಲಿ ಗ್ರೀಕ್‌ ಸೆಪ್ಟೂಅಜಿಂಟ್‌ ಬೈಬಲ್‌ “ಮನಸ್ಸು” ಎಂಬ ಗ್ರೀಕ್‌ ಸಮಾನಾರ್ಥವುಳ್ಳ ಪದವನ್ನು ಬಳಸುತ್ತದೆ. (ಆದಿ 8:21; 17:17; ಜ್ಞಾನೋ 2:10; ಯೆಶಾ 14:13) ಮತ್ತಾಯನು ಧರ್ಮೋ 6:5​ನ್ನು ಉಲ್ಲೇಖಿಸಿದಾಗ “ಶಕ್ತಿ”ಯ ಬದಲಿಗೆ “ಮನಸ್ಸು” ಎಂಬ ಪದವನ್ನು ಬಳಸಿದ ಇನ್ನೊಂದು ಕಾರಣ ಏನಾಗಿರಬಹುದೆಂದರೆ “ಶಕ್ತಿ” [ಅಥವಾ “ಜೀವಶಕ್ತಿ”] ಎಂದು ಭಾಷಾಂತರವಾದ ಹೀಬ್ರು ಪದದಲ್ಲಿ ದೈಹಿಕ ಶಕ್ತಿ ಮತ್ತು ಮಾನಸಿಕ ಅಥವಾ ಬೌದ್ಧಿಕ ಸಾಮರ್ಥ್ಯ ಇವೆರಡೂ ಸೇರಿರುವ ಸಾಧ್ಯತೆಯಿಂದಲೇ. ಏನೇ ಇರಲಿ ಈ ಹೀಬ್ರು ಮತ್ತು ಗ್ರೀಕ್‌ ಪದಗಳ ಮಧ್ಯೆ ಆಗಿರುವ ವಿಚಾರಗಳ ಮೇಲ್ಚಾಚುವಿಕೆಯು, ಸುವಾರ್ತೆಗಳ ಲೇಖಕರು ಧರ್ಮೋಪದೇಶಕಾಂಡದಿಂದ ಉಲ್ಲೇಖಿಸುವಾಗ ಅಲ್ಲಿರುವ ಪದಗಳನ್ನೇ ಏಕೆ ಉಪಯೋಗಿಸಿಲ್ಲ ಎಂದು ಅರ್ಥಮಾಡಲು ಸಹಾಯವಾಗುತ್ತದೆ.

ಮತ್ತಾ 22:39​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಎರಡನೆಯ ಆಜ್ಞೆ: ಮತ್ತಾ 22:37​ರಲ್ಲಿ ಯೇಸು ಫರಿಸಾಯನಿಗೆ ಕೊಟ್ಟ ನೇರವಾದ ಉತ್ತರವು ದಾಖಲೆಯಾಗಿದೆ. ಆದರೆ ಈಗ ಯೇಸು ಆ ಮೊದಲನೇ ಪ್ರಶ್ನೆಗಿಂತ ಆಚೆಗೆ ಹೋಗಿ ಎರಡನೇ ಆಜ್ಞೆಯನ್ನು ಉಲ್ಲೇಖಿಸುತ್ತಾನೆ. (ಯಾಜ 19:18) ಹೀಗೆ ಆ ಎರಡು ಆಜ್ಞೆಗಳಿಗೆ ಬಿಡಿಸಿಕೊಳ್ಳಲಾಗದ ಸಂಬಂಧವಿದೆಂದು ಕಲಿಸಿದನು. ಆ ಆಜ್ಞೆಗಳು ಇಡೀ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಸಾರಾಂಶವಾಗಿದೆ ಎಂದು ಸೂಚಿಸಿದನು.—ಮತ್ತಾ 22:40.

ನೆರೆಯವನು: “ನೆರೆಯವನು” ಎಂಬುದರ ಗ್ರೀಕ್‌ ಪದಕ್ಕೆ (ಅಕ್ಷರಾರ್ಥ “ಹತ್ತಿರವಿರುವವನು”) ಎಂದರ್ಥವಿದೆ. ಇದು ಬರೇ ಹತ್ತಿರದಲ್ಲಿ ವಾಸಿಸುವವರನ್ನು ಮಾತ್ರವಲ್ಲ, ಒಬ್ಬ ವ್ಯಕ್ತಿ ಪರಸ್ಪರವಾಗಿ ಪ್ರತಿಕ್ರಿಯಿಸಿ ವ್ಯವಹರಿಸುವ ಬೇರೆ ಯಾವನನ್ನಾದರೂ ಸೂಚಿಸಬಹುದು.—ಲೂಕ 10:29-37; ರೋಮ 13:8-10.

ಮತ್ತಾ 22:40​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಧರ್ಮಶಾಸ್ತ್ರ . . . ಪ್ರವಾದಿಗಳು: “ಧರ್ಮಶಾಸ್ತ್ರ” ಎಂಬುದು ಆದಿಕಾಂಡದಿಂದ ಧರ್ಮೋಪದೇಶಕಾಂಡದ ವರೆಗಿನ ಬೈಬಲ್‌ ಪುಸ್ತಕಗಳನ್ನು ಸೂಚಿಸುತ್ತದೆ. “ಪ್ರವಾದಿಗಳು” ಎಂಬುದು ಹೀಬ್ರು ಶಾಸ್ತ್ರಗ್ರಂಥದ ಪ್ರವಾದನಾ ಪುಸ್ತಕಗಳನ್ನು ಸೂಚಿಸುತ್ತದೆ. ಆದರೂ ಇವುಗಳನ್ನು ಒಟ್ಟಾಗಿ ಹೇಳುವಾಗ ಆ ಪದರೂಪವು ಇಡೀ ಹೀಬ್ರು ಶಾಸ್ತ್ರಗ್ರಂಥವನ್ನೇ ಸೂಚಿಸುತ್ತದೆ ಎಂದು ಅರ್ಥಮಾಡಿಕೊಳ್ಳಸಾಧ್ಯವಿದೆ.—ಮತ್ತಾ 7:12; 22:40; ಲೂಕ 16:16.

ಆಧಾರಿತವಾಗಿವೆ: “ತೂಗುಹಾಕು” ಎಂಬ ಅಕ್ಷರಾರ್ಥವಿರುವ ಗ್ರೀಕ್‌ ಪದವನ್ನು ಇಲ್ಲಿ “ಅವಲಂಬಿಸು, ಆಧಾರವಾಗಿರು” ಎಂಬ ಸಾಂಕೇತಿಕ ಅರ್ಥದಲ್ಲಿ ಬಳಸಲಾಗಿದೆ. ಹೀಗೆ ದಶಾಜ್ಞೆಗಳಿರುವ ಧರ್ಮಶಾಸ್ತ್ರ ಮಾತ್ರವಲ್ಲ ಇಡೀ ಹೀಬ್ರು ಶಾಸ್ತ್ರಗ್ರಂಥವು ಪ್ರೀತಿಯ ಮೇಲೆ ಆಧಾರಿತವಾಗಿದೆ ಎಂದು ಯೇಸು ಸೂಚಿಸಿದನು.—ರೋಮ 13:9.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 22:21​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕೈಸರನದನ್ನು ಕೈಸರನಿಗೆ: ಇಲ್ಲಿ ಯೇಸು ಕೊಟ್ಟ ಉತ್ತರ ಮತ್ತು ಮಾರ್ಕ 12:17​ರಲ್ಲಿ ಹಾಗೂ ಲೂಕ 20:25​ರಲ್ಲಿರುವ ಸಮಾನ ವೃತ್ತಾಂತಗಳು, ಅವನು ರೋಮನ್‌ ಚಕ್ರವರ್ತಿಯ ಬಗ್ಗೆ ಹೇಳಿರುವ ಮತ್ತು ದಾಖಲೆಯಾಗಿರುವ ಏಕಮಾತ್ರ ಪ್ರಸ್ತಾಪವಾಗಿದೆ. ‘ಕೈಸರನದು ಕೈಸರನಿಗೆ’ ಅಂದರೆ ಲೌಕಿಕ ಸರ್ಕಾರಗಳು ನೀಡುವ ಸೇವೆಗಳಿಗಾಗಿ ನಾವು ಕೊಡುವ ಹಣ ಮತ್ತು ಲೋಕದ ಅಧಿಕಾರಿಗಳಿಗೆ ನಾವು ಕೊಡುವ ಗೌರವ ಮತ್ತು ಸಂಬಂಧಿತ ಅಧೀನತೆಯೂ ಸೇರಿರುತ್ತದೆ.—ರೋಮ 13:1-7.

ದೇವರದನ್ನು ದೇವರಿಗೆ: ಇದರಲ್ಲಿ ಒಬ್ಬ ವ್ಯಕ್ತಿಯ ಪೂರ್ಣ ಹೃದಯದ ಆರಾಧನೆ, ಪೂರ್ಣ ಪ್ರಾಣದ ಪ್ರೀತಿ ಮತ್ತು ಸಂಪೂರ್ಣ ನಿಷ್ಠೆಯುಳ್ಳ ವಿಧೇಯತೆ ಸೇರಿವೆ.—ಮತ್ತಾ 4:10; 22:37, 38; ಅಕಾ 5:29; ರೋಮ 14:8.

ಮತ್ತಾ 23:24​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸೊಳ್ಳೆಯನ್ನು ಸೋಸಿ ಒಂಟೆಯನ್ನು ನುಂಗುವವರು: ಇಸ್ರಾಯೇಲ್ಯರಿಗೆ ಗೊತ್ತಿದ್ದ ಅತಿ ಚಿಕ್ಕ ಮತ್ತು ಅತಿ ದೊಡ್ಡ ಅಶುದ್ಧ ಜೀವಿಗಳಲ್ಲಿ ಸೊಳ್ಳೆ ಮತ್ತು ಒಂಟೆ ಸೇರಿತ್ತು. (ಯಾಜ 11:4, 21-24) ಯೇಸು ಇಲ್ಲಿ ಅತಿಶಯೋಕ್ತಿಯೊಂದಿಗೆ ಸ್ವಲ್ಪ ವ್ಯಂಗ್ಯವನ್ನು ಬಳಸಿದ್ದಾನೆ. ಸೊಳ್ಳೆಯಿಂದಾಗಿ ಆಚಾರವಿಧಿಗಳ ಸಂಬಂಧದಲ್ಲಿ ತಾವು ಅಶುದ್ಧರಾಗದಂತೆ ಧಾರ್ಮಿಕ ಮುಖಂಡರು ತಮ್ಮ ಪಾನೀಯಗಳನ್ನು ಸೋಸಿ ಕುಡಿಯುತ್ತಿದ್ದರು. ಅದೇ ಸಮಯದಲ್ಲಿ ಒಂದು ಒಂಟೆಯನ್ನು ನುಂಗುವುದಕ್ಕೆ ಸಮಾನವಾಗಿ ಧರ್ಮಶಾಸ್ತ್ರದ ಪ್ರಮುಖ ವಿಚಾರಗಳನ್ನು ಪೂರ್ತಿಯಾಗಿ ಅಲಕ್ಷಿಸುತ್ತಿದ್ದರೆಂದು ಯೇಸು ಇಲ್ಲಿ ಹೇಳಿದ್ದಾನೆ.

ಮಾರ್ಚ್‌ 19-25

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 24

“ಕಡೇ ದಿವಸಗಳಲ್ಲಿ ಆಧ್ಯಾತ್ಮಿಕವಾಗಿ ಎಚ್ಚರವಾಗಿರಿ”

it-2-E 279 ¶6

ಪ್ರೀತಿ

ಒಬ್ಬನಲ್ಲಿರುವ ಪ್ರೀತಿ ತಣ್ಣಗಾಗಬಲ್ಲದು. ಯೇಸು ತನ್ನ ಶಿಷ್ಯರಿಗೆ ಮುಂದೆ ಆಗಲಿರುವ ವಿಷಯಗಳನ್ನು ತಿಳಿಸುತ್ತಿದ್ದನು. ಆಗ ದೇವರಲ್ಲಿ ನಂಬಿಕೆಯಿದೆ ಎಂದು ಹೇಳುವ ಅನೇಕರ ಪ್ರೀತಿ (ಅಗಾಪೆ) ತಣ್ಣಗಾಗಿ ಹೋಗುವುದೆಂದು ಸೂಚಿಸಿದನು. (ಮತ್ತಾ 24:3, 12) ಬರಲಿದ್ದ ಕಠಿಣ ಸಮಯಗಳ ಒಂದು ಸೂಚನೆಯನ್ನು ತಿಳಿಸುತ್ತಾ ಮನುಷ್ಯರು ‘ಹಣಪ್ರೇಮಿಗಳಾಗುವರೆಂದು’ ಅಪೊಸ್ತಲ ಪೌಲನು ಹೇಳಿದ್ದಾನೆ. (2ತಿಮೊ 3:1, 2) ಹೀಗೆ ಸರಿಯಾದ ಮೂಲತತ್ವಗಳ ಬಗ್ಗೆ ಒಬ್ಬನು ಕುರುಡಾಗಿ ಹೋಗಲು ಸಾಧ್ಯವಿದೆ ಹಾಗೂ ಮೊದಲಿದ್ದ ಯೋಗ್ಯ ಪ್ರೀತಿಯನ್ನು ಕಳೆದುಕೊಳ್ಳಸಾಧ್ಯವಿದೆ ಎಂಬುದು ವ್ಯಕ್ತ. ಆದ್ದರಿಂದ ದೇವರ ವಾಕ್ಯವನ್ನು ಧ್ಯಾನಿಸುವ ಮೂಲಕ ಮತ್ತು ದೇವರ ಮೂಲತತ್ವಗಳಿಗೆ ಅನುಸಾರ ಬದುಕನ್ನು ರೂಪಿಸುವ ಮೂಲಕ ಪ್ರೀತಿಯನ್ನು ಬೆಳೆಸಿಕೊಳ್ಳುವ ಮತ್ತು ಅದಕ್ಕಾಗಿ ಸತತ ಸಾಧನೆಯನ್ನು ಮಾಡುವ ಮಹತ್ವವನ್ನು ಇದು ಒತ್ತಿಹೇಳುತ್ತದೆ.—ಎಫೆ 4:15, 22-24.

jy-E 259 ¶5

ಅಪೊಸ್ತಲರು ಒಂದು ಸೂಚನೆಗಾಗಿ ಕೇಳುತ್ತಾರೆ

ತನ್ನ ಶಿಷ್ಯರು ಜಾಗರೂಕರಾಗಿರಬೇಕು, ಕಾಯುತ್ತಿರಬೇಕು ಮತ್ತು ಸಿದ್ಧರಾಗಿರಬೇಕು ಎಂದು ಯೇಸು ಹೇಳಿದನು. ಅವನು ಈ ಎಚ್ಚರಿಕೆಯನ್ನು ಇನ್ನೊಂದು ದೃಷ್ಟಾಂತದ ಮೂಲಕ ಒತ್ತಿಹೇಳಿದನು: “ಮನೆಯ ಯಜಮಾನನಿಗೆ ಕಳ್ಳನು ಯಾವ ಜಾವದಲ್ಲಿ ಬರುತ್ತಾನೆಂಬುದು ಗೊತ್ತಿರುತ್ತಿದ್ದಲ್ಲಿ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕಳ್ಳನು ನುಗ್ಗುವಂತೆ ಬಿಡುತ್ತಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ. ಆದುದರಿಂದ ನೀವು ಸಹ ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಮತ್ತಾಯ 24:43, 44.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 24:8​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸಂಕಟದ ಶೂಲೆಗಳು: ಈ ಗ್ರೀಕ್‌ ಪದವು ಅಕ್ಷರಾರ್ಥವಾಗಿ ಹೆರಿಗೆಯ ಸಮಯದಲ್ಲಿ ತಾಯಿ ಅನುಭವಿಸುವ ತೀಕ್ಷ್ಣ ವೇದನೆಯನ್ನು ಸೂಚಿಸುತ್ತದೆ. ಇಲ್ಲಿ ಅದನ್ನು ಸಾಮಾನ್ಯ ಅರ್ಥದಲ್ಲಿ ಸಂಕಟ, ಬೇನೆ ಮತ್ತು ಕಷ್ಟಾನುಭವವನ್ನು ಸೂಚಿಸಲು ಬಳಸಲಾಗಿದೆ. ಆದರೂ ಹೆರಿಗೆಯ ನೋವು ಹೇಗೆ ಹೆಚ್ಚಾಗುತ್ತಾ ಹೋಗುತ್ತದೋ ಹಾಗೆ, ಮುಂತಿಳಿಸಲ್ಪಟ್ಟ ಉಪದ್ರವ ಮತ್ತು ಕಷ್ಟಾನುಭವಗಳು ಮತ್ತಾ 24:21​ರಲ್ಲಿ ಹೇಳಿರುವ ಮಹಾಸಂಕಟಕ್ಕೆ ಮುಂಚಿನ ಸಮಯದಲ್ಲಿ ಆವರ್ತನೆ, ತೀಕ್ಷ್ಣತೆ ಮತ್ತು ಕಾಲಾವಧಿಯಲ್ಲಿ ಹೆಚ್ಚುತ್ತಾ ಹೋಗುವುದೆಂಬುದನ್ನೂ ಅದು ಸೂಚಿಸಬಹುದು.

ಮತ್ತಾ 24:20​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಚಳಿಗಾಲದಲ್ಲಿ: ಈ ಸಮಯದಲ್ಲಿ ಭಾರಿ ಮಳೆ, ನೆರೆ ಮತ್ತು ಚಳಿಯು ಇರುತ್ತದೆ. ಹಾಗಾಗಿ ಪ್ರಯಾಣ ಮಾಡುವುದು ಕಷ್ಟಕರ, ಆಹಾರ ದೊರಕಿಸಿಕೊಳ್ಳುವುದು ಮತ್ತು ಇಳುಕೊಳ್ಳಲು ಸ್ಥಳ ಸಿಗುವುದು ಸಹ ತುಂಬಾ ಕಷ್ಟ.—ಎಜ್ರ 10:9, 13.

ಸಬ್ಬತ್‌ ದಿನದಲ್ಲಿ: ಯೂದಾಯದಂಥ ಪ್ರದೇಶಗಳಲ್ಲಿ ಸಬ್ಬತ್‌ ನಿಯಮಗಳ ನಿರ್ಬಂಧಗಳು ಬಹು ದೂರ ಪ್ರಯಾಣ ಮಾಡುವುದನ್ನು ಮತ್ತು ಹೊರೆ ಹೊತ್ತುಕೊಂಡು ಹೋಗುವುದನ್ನು ಕಷ್ಟಕರವಾಗಿ ಮಾಡುತ್ತಿತ್ತು. ಅಲ್ಲದೆ ಸಬ್ಬತ್‌ ದಿನದಲ್ಲಿ ಪಟ್ಟಣದ ಹೆಬ್ಬಾಗಿಲುಗಳನ್ನು ಮುಚ್ಚಲಾಗುತ್ತಿತ್ತು.—ಅಕಾ 1:12 ಮತ್ತು ಪರಿಶಿಷ್ಟ ಬಿ12 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ