ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr20 ಡಿಸೆಂಬರ್‌ ಪು. 1-7
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
  • ಉಪಶೀರ್ಷಿಕೆಗಳು
  • ಡಿಸೆಂಬರ್‌ 7-13
  • ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 10-11
  • ಡಿಸೆಂಬರ್‌ 14-20
  • ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 12-13
  • ಡಿಸೆಂಬರ್‌ 21-27
  • ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 14-15
  • ಡಿಸೆಂಬರ್‌ 28–ಜನವರಿ 3
  • ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 16-17
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
mwbr20 ಡಿಸೆಂಬರ್‌ ಪು. 1-7

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಡಿಸೆಂಬರ್‌ 7-13

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 10-11

“ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ”

(ಯಾಜಕಕಾಂಡ 10:1, 2) ಆರೋನನ ಮಕ್ಕಳಲ್ಲಿ ನಾದಾಬ್‌ ಅಬೀಹು ಎಂಬಿಬ್ಬರು ತಮ್ಮ ತಮ್ಮ ಧೂಪಾರತಿಗಳಲ್ಲಿ ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು ಅದರ ಮೇಲೆ ಧೂಪದ್ರವ್ಯವನ್ನು ಹಾಕಿ ಆತನ ಸನ್ನಿಧಿಯಲ್ಲಿ ಸಮರ್ಪಿಸಲಾಗಿ 2 ಯೆಹೋವನ ಸನ್ನಿಧಿಯಿಂದ ಬೆಂಕಿ ಹೊರಟು ಅವರನ್ನು ನಾಶಮಾಡಿತು; ಅವರು ಯೆಹೋವನ ಸನ್ನಿಧಿಯಲ್ಲಿಯೇ ಸತ್ತರು.

it-1-E ಪುಟ 1174

ಅನಧಿಕೃತ

ಧರ್ಮಶಾಸ್ತ್ರದಲ್ಲಿ ನಿಷಿದ್ಧವಾಗಿದ್ದ ಬೆಂಕಿ ಮತ್ತು ಧೂಪ. ಆರೋನನ ಮಕ್ಕಳಾದ ನಾದಾಬ್‌ ಮತ್ತು ಅಬೀಹು ‘ಯೆಹೋವನು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನ’ ಅರ್ಪಿಸಿದ್ರು ಅಂತ ಯಾಜಕಕಾಂಡ 10:1 ಹೇಳುತ್ತೆ. ಇಲ್ಲಿ ‘ಬೇರೆ ಬೆಂಕಿ’ ಅನ್ನೋ ಪದಕ್ಕೆ ಹೀಬ್ರುವಿನಲ್ಲಿ ಬಳಸಿರೋ ಪದ ಜ಼ಾರ್‌. (ವಿಚಿತ್ರ ಅನ್ನೋದು ಇದ್ರ ಅರ್ಥ.) ಈ ರೀತಿಯ ಬೆಂಕಿಯನ್ನ ನಾದಾಬ್‌ ಮತ್ತು ಅಬೀಹು ಯೆಹೋವನಿಗೆ ಸಮರ್ಪಿಸಿದ್ರಿಂದ ಆತನು ಅವ್ರನ್ನ ಬೆಂಕಿಯಿಂದ ನಾಶಮಾಡಿದನು. (ಯಾಜ 10:1, 2; ಅರ 3:4; 26:61) ಇದಾದ ಮೇಲೆ, ಯೆಹೋವನು ಆರೋನನಿಗೆ “ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ಇದು ನಿನಗೂ ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತವಿಧಿ. ಅದಲ್ಲದೆ ದೇವರಿಗೆ ಮೀಸಲಾದ ವಸ್ತುಗಳನ್ನೂ ಅಲ್ಲದ ವಸ್ತುಗಳನ್ನೂ ಶುದ್ಧವಾದವುಗಳನ್ನೂ ಅಶುದ್ಧವಾದವುಗಳನ್ನೂ ವಿವೇಚಿಸುವದೂ ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವದೂ ನಿಮ್ಮ ಕರ್ತವ್ಯವಾಗಿದೆ ಎಂದು ಹೇಳಿದನು.” (ಯಾಜ 10:8-11) ಬಹುಶಃ ನಾದಾಬ್‌ ಮತ್ತು ಅಬೀಹು ಕುಡಿದ ನಶೆಯಲ್ಲಿ ತಾವು ಮಾಡಬಾರದಾಗಿದ್ದ ಈ ಕೆಲ್ಸವನ್ನ ಮೊಂಡುಧೈರ್ಯದಿಂದ ಮಾಡಿದ್ರು ಅಂತ ಕಾಣುತ್ತೆ. ಅವರು ಬೆಂಕಿ ಹಚ್ಚಿದ ಸಮ್ಯ, ಜಾಗ ಅಥ್ವಾ ಬೆಂಕಿ ಹಚ್ಚಿದ ರೀತಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿರಬಹುದು ಅಥ್ವಾ ವಿಮೋಚನಕಾಂಡ 30:34, 35 ರಲ್ಲಿ ತಿಳಿಸಿರೋ ರೀತಿಯಲ್ಲಿ ಧೂಪವನ್ನ ಸಿದ್ಧ ಮಾಡದೆ ಇದ್ದಿರಬಹುದು. ಕಾರಣ ಏನೇ ಇರ್ಲಿ, ಅವರು ‘ನಾವು ನಶೆಯಲ್ಲಿದ್ವಿ, ಅದಕ್ಕೇ ಇಂಥ ತಪ್ಪು ನಡೆದುಹೋಯ್ತು’ ಅಂತ ನೆಪ ಕೊಡಕ್ಕಾಗ್ತಾ ಇರಲಿಲ್ಲ.

(ಯಾಜಕಕಾಂಡ 10:4, 5) ಮೋಶೆ ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನ ಮಕ್ಕಳಾದ ಮೀಶಾಯೇಲನನ್ನೂ ಎಲ್ಲಾಫಾನನನ್ನೂ ಕರಿಸಿ—ನೀವು ಸಮೀಪಕ್ಕೆ ಬಂದು ನಿಮ್ಮ ಅಣ್ಣಂದಿರ ಶವಗಳನ್ನು ದೇವಮಂದಿರದ ಎದುರಿನಿಂದ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋಗಬೇಕು ಅಂದನು. 5 ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆದುಬಿಡದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು.

(ಯಾಜಕಕಾಂಡ 10:6, 7) ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್‌ ಈತಾಮಾರ್‌ ಎಂಬವರಿಗೂ—ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸತ್ತೀರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾದೀತು. ಯೆಹೋವನು ಹೊತ್ತಿಸಿದ ಈ ಬೆಂಕಿಯ ದೆಸೆಯಿಂದ ನಿಮ್ಮ ಸಹೋದರರಾಗಿರುವ ಎಲ್ಲಾ ಇಸ್ರಾಯೇಲ್ಯರ ಮನೆತನದವರೇ ದುಃಖಿಸಲಿ. 7 ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವದರಿಂದ ನೀವು ದೇವದರ್ಶನದ ಗುಡಾರದ ಬಾಗಲನ್ನು ಬಿಟ್ಟು ಹೋಗಬಾರದು; ಹೋದರೆ ಸತ್ತೀರಿ ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡಕೊಂಡರು.

ಕಾವಲಿನಬುರುಜು11 7/15 ಪುಟ 31 ಪ್ಯಾರ 16

ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರೋ?

16 ಮೋಶೆಯ ಅಣ್ಣನಾದ ಆರೋನನು ತನ್ನಿಬ್ಬರು ಪುತ್ರರಿಂದಾಗಿ ಕಷ್ಟಕರ ಸನ್ನಿವೇಶವನ್ನು ಎದುರಿಸಿದನು. ಅವನ ಮಕ್ಕಳಾದ ನಾದಾಬ್‌, ಅಬೀಹು ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು ಧೂಪವನ್ನು ಸಮರ್ಪಿಸಿ ಆತನಿಂದ ಹತರಾದಾಗ ಆರೋನನಿಗೆ ಹೇಗನಿಸಿದ್ದಿರಬಹುದು ಎಂಬದನ್ನು ಊಹಿಸಿ ನೋಡಿ. ಅವನ ಮಕ್ಕಳು ಸತ್ತುಹೋಗಿದ್ದರಿಂದ ಅವರೊಂದಿಗೆ ಮಾತಾಡುವ ಸವಾಲು ಅವನಿಗೆ ಎದುರಾಗಲಿಲ್ಲ ನಿಜ. ಆದರೆ ಅದಕ್ಕಿಂತಲೂ ಕಷ್ಟಕರವಾದ ಸವಾಲೊಂದು ಅವನಿಗೆ ಎದುರಾಯಿತು. ಆರೋನನಿಗೂ ಅವನ ನಂಬಿಗಸ್ತ ಪುತ್ರರಿಗೂ ಯೆಹೋವನು ಈ ಆದೇಶ ಕೊಟ್ಟನು: “[ಶೋಕಸೂಚಕವಾಗಿ] ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸತ್ತೀರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾದೀತು.” (ಯಾಜ. 10:1-6) ಹೇಳಿದಂಥ ವಿಷಯ ಸ್ಪಷ್ಟ. ಕುಟುಂಬದ ಅಪನಂಬಿಗಸ್ತ ಸದಸ್ಯರ ಮೇಲಿರುವ ಪ್ರೀತಿಗಿಂತ ಯೆಹೋವನ ಮೇಲಿರುವ ಪ್ರೀತಿ ಬಲವಾಗಿರಬೇಕು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ಯಾಜಕಕಾಂಡ 10:8-11) ಯೆಹೋವನು ಆರೋನನಿಗೆ—ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ಇದು ನಿನಗೂ ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತವಿಧಿ. 10 ಅದಲ್ಲದೆ ದೇವರಿಗೆ ಮೀಸಲಾದ ವಸ್ತುಗಳನ್ನೂ ಅಲ್ಲದ ವಸ್ತುಗಳನ್ನೂ ಶುದ್ಧವಾದವುಗಳನ್ನೂ ಅಶುದ್ಧವಾದವುಗಳನ್ನೂ ವಿವೇಚಿಸುವದೂ 11 ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವದೂ ನಿಮ್ಮ ಕರ್ತವ್ಯವಾಗಿದೆ ಎಂದು ಹೇಳಿದನು.

ಕಾವಲಿನಬುರುಜು14 11/15 ಪುಟ 17 ಪ್ಯಾರ 18

ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಬೇಕು

18 ನಾವು ಪವಿತ್ರರಾಗಿರಬೇಕಾದರೆ ಬೈಬಲು ಏನು ಹೇಳುತ್ತದೆಂದು ಜಾಗ್ರತೆಯಿಂದ ಪರಿಶೀಲಿಸಿ, ದೇವರು ಹೇಳಿದ್ದನ್ನು ಮಾಡಬೇಕು. ಆರೋನನ ಪುತ್ರರಾದ ನಾದಾಬ್‌ ಅಬೀಹುರ ಉದಾಹರಣೆ ತೆಗೆದುಕೊಳ್ಳಿ. ಅವರು ‘ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು’ ಸಮರ್ಪಿಸಿದರು. ಬಹುಶಃ ಆಗ ಅವರು ಮದ್ಯದ ನಶೆಯಲ್ಲಿದ್ದರು. ಹಾಗಾಗಿ ಯೆಹೋವನು ಅವರನ್ನು ಹತಿಸಿದನು. (ಯಾಜ. 10:1, 2) ಇದಾದ ನಂತರ ದೇವರು ಆರೋನನಿಗೆ ಏನಂದನೆಂದು ಗಮನಿಸಿ. (ಯಾಜಕಕಾಂಡ 10:8-11 ಓದಿ.) ಇದರರ್ಥ ನಾವು ಕ್ರೈಸ್ತ ಕೂಟಗಳಿಗೆ ಹೋಗುವ ಮುಂಚೆ ಯಾವುದೇ ಮದ್ಯಪಾನೀಯ ಕುಡಿಯಬಾರದೆಂದಾ? ಈ ಮುಂದಿನ ಅಂಶಗಳ ಬಗ್ಗೆ ಸ್ವಲ್ಪ ಯೋಚಿಸಿ: ನಾವೀಗ ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿಲ್ಲ. (ರೋಮ. 10:4) ಕೆಲವು ದೇಶಗಳಲ್ಲಿ ನಮ್ಮ ಜೊತೆ ವಿಶ್ವಾಸಿಗಳು ಕೂಟಗಳಿಗೆ ಹೋಗುವ ಮುಂಚೆ ಊಟಮಾಡುವಾಗ ಮದ್ಯಪಾನೀಯ ಸೇವಿಸುತ್ತಾರೆ. ಆದರೆ ಅದು ಮಿತ ಪ್ರಮಾಣದ್ದಾಗಿರುತ್ತದೆ. ಪಸ್ಕ ಹಬ್ಬದಲ್ಲೂ ದ್ರಾಕ್ಷಾಮದ್ಯವನ್ನು ಬಳಸಲಾಗುತ್ತಿತ್ತು. ಸಂಧ್ಯಾ ಭೋಜನದ ಸಮಯದಲ್ಲಿ ಯೇಸು ತನ್ನ ಅಪೊಸ್ತಲರಿಗೆ ತನ್ನ ರಕ್ತವನ್ನು ಸೂಚಿಸುವ ದ್ರಾಕ್ಷಾಮದ್ಯವನ್ನು ಕುಡಿಯಲು ಕೊಟ್ಟನು. (ಮತ್ತಾ. 26:27) ವಿಪರೀತ ಕುಡಿತ ಮತ್ತು ಕುಡಿಕತನವನ್ನು ಬೈಬಲ್‌ ಖಂಡಿಸುತ್ತದೆ. (1 ಕೊರಿಂ. 6:10; 1 ತಿಮೊ. 3:8) ಅಲ್ಲದೆ, ಯಾವುದೇ ರೀತಿಯ ಪವಿತ್ರ ಸೇವೆಯಲ್ಲಿ ತೊಡಗುವ ಮುಂಚೆ ಮದ್ಯಪಾನೀಯ ಸೇವಿಸಲು ಅನೇಕ ಕ್ರೈಸ್ತರ ಮನಸ್ಸಾಕ್ಷಿ ಒಪ್ಪುವುದಿಲ್ಲ. ಹಾಗಿದ್ದರೂ ಎಲ್ಲಾ ದೇಶಗಳಲ್ಲಿ ಪರಿಸ್ಥಿತಿ ಒಂದೇ ತರ ಇರುವುದಿಲ್ಲ. ಮುಖ್ಯ ವಿಷಯವೇನೆಂದರೆ ಕ್ರೈಸ್ತರು ಯಾವುದು ಪವಿತ್ರ ಯಾವುದು ಅಪವಿತ್ರ ಎಂಬದನ್ನು ವಿವೇಚಿಸಲು ಶಕ್ತರಾಗಿರಬೇಕು. ಆಗ ಅವರ ನಡವಳಿಕೆ ದೇವರು ಮೆಚ್ಚುವಂಥ ಪವಿತ್ರ ನಡವಳಿಕೆ ಆಗಿರುತ್ತದೆ.

(ಯಾಜಕಕಾಂಡ 11:8) ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು.

it-1-E ಪುಟ 111 ಪ್ಯಾರ 5

ಪ್ರಾಣಿಗಳು

ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಇಸ್ರಾಯೇಲ್ಯರು ಕೆಲವು ಪ್ರಾಣಿಗಳನ್ನ ತಿನ್ನಬಾರದು ಅನ್ನೋ ನಿಯಮ ಇತ್ತು. ಯಾಜಕಕಾಂಡ 11:8 ರಲ್ಲಿ ಯೆಹೋವ ಹೇಳಿದ ಹಾಗೆ ಇಸ್ರಾಯೇಲ್ಯರು ಆ ಪ್ರಾಣಿಗಳನ್ನ ‘ಅಶುದ್ಧವೆಂದೆಣಿಸಬೇಕಿತ್ತು.’ ಯೇಸು ಕ್ರಿಸ್ತ ತನ್ನ ಪ್ರಾಣವನ್ನ ವಿಮೋಚನಾ ಯಜ್ಞವಾಗಿ ಕೊಟ್ಟಿದ್ರಿಂದ ಆ ನಿಯಮ ರದ್ದಾಯ್ತು. ಇದಾದ ನಂತ್ರ ಕ್ರೈಸ್ತರು ಎಲ್ಲಾ ಪ್ರಾಣಿಗಳನ್ನ ತಿನ್ನಬಹುದಾಗಿತ್ತು. ಇದೇ ತರ ಮುಂಚೆನೂ ಅಂದ್ರೆ ಜಲಪ್ರಳಯದ ನಂತ್ರ, ನೋಹನಿಗೆ ಯೆಹೋವ ಎಲ್ಲಾ ಪ್ರಾಣಿಗಳನ್ನ ತಿನ್ನಬಹುದು ಅಂತ ಹೇಳಿದ್ದನು.—ಕೊಲೊ 2:13-17; ಆದಿ 9:3, 4.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಕಾವಲಿನಬುರುಜು11 2/15 ಪುಟ 12

ವಾಚಕರಿಂದ ಪ್ರಶ್ನೆಗಳು

ಆರೋನನ ಮಕ್ಕಳಾದ ನಾದಾಬ್‌ ಅಬೀಹುರ ಮರಣದ ಬಳಿಕ ಅವರ ಸಹೋದರರಾದ ಎಲ್ಲಾಜಾರ್‌, ಈತಾಮಾರರ ಮೇಲೆ ಮೋಶೆ ಕೋಪಗೊಂಡದ್ದೇಕೆ? ಅವನ ಕೋಪ ಹೇಗೆ ಶಮನವಾಯಿತು?—ಯಾಜ. 10:16-20.

ಯಾಜಕತ್ವದ ಪ್ರತಿಷ್ಠಾಪನೆಯ ನಂತರ ಸ್ವಲ್ಪದರಲ್ಲೇ ಆರೋನನ ಮಕ್ಕಳಾದ ನಾದಾಬ್‌, ಅಬೀಹುರನ್ನು ಯೆಹೋವನು ವಧಿಸಿದನು. ಏಕೆಂದರೆ ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಅವರು ಧೂಪದ್ರವ್ಯವನ್ನು ಆತನ ಸನ್ನಿಧಿಯಲ್ಲಿ ಸಮರ್ಪಿಸಿದ್ದರು. (ಯಾಜ. 10:1, 2) ಸತ್ತುಹೋದ ತಮ್ಮ ಸಹೋದರರಿಗಾಗಿ ಶೋಕಿಸಬಾರದೆಂದು ಆರೋನನ ಉಳಿದ ಪುತ್ರರಿಗೆ ಮೋಶೆ ಆಜ್ಞಾಪಿಸಿದನು. ಆ ಬಳಿಕ ಸ್ವಲ್ಪದರಲ್ಲೇ ಮೋಶೆಯು ಎಲ್ಲಾಜಾರ್‌, ಈತಾಮಾರರ ಮೇಲೆ ಕೋಪಗೊಂಡನು. ಕಾರಣ, ದೋಷಪರಿಹಾರ ಯಜ್ಞಕ್ಕಾಗಿ ಅರ್ಪಿಸಿದ ಹೋತದ ಮಾಂಸವನ್ನು ಅವರು ತಿಂದಿರಲಿಲ್ಲ. (ಯಾಜ. 9:3) ಮೋಶೆ ಏಕೆ ಆ ರೀತಿ ಪ್ರತಿಕ್ರಿಯಿಸಿದನು?

ಯೆಹೋವನು ಮೋಶೆಗೆ ಕೊಟ್ಟ ನಿಯಮಗಳಲ್ಲಿ, ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದರ ಸ್ವಲ್ಪ ಭಾಗವನ್ನು ದೇವದರ್ಶನ ಗುಡಾರದ ಅಂಗಳದಲ್ಲಿ ತಿನ್ನಬೇಕೆಂದು ನಿರ್ದಿಷ್ಟವಾಗಿ ಹೇಳಲಾಗಿತ್ತು. ಹಾಗೆ ತಿನ್ನುವುದು ಯಜ್ಞಾರ್ಪಣೆ ಮಾಡಿದವರಿಗೋಸ್ಕರ ದೋಷಪರಿಹಾರವಾಗಿ ಪರಿಗಣಿಸಲಾಗಿತ್ತು. ಆದರೆ ದೇವದರ್ಶನ ಗುಡಾರದ ಮೊದಲನೇ ವಿಭಾಗವಾದ ಪವಿತ್ರ ಸ್ಥಳದೊಳಕ್ಕೆ ಯಜ್ಞಾರ್ಪಿತ ಪಶುವಿನ ಸ್ವಲ್ಪ ರಕ್ತವು ತರಲ್ಪಟ್ಟಲ್ಲಿ ಆ ಪಶುವಿನ ಮಾಂಸವನ್ನು ತಿನ್ನಬಾರದಿತ್ತು, ಬದಲಾಗಿ ಅದನ್ನು ಸುಟ್ಟುಬಿಡಬೇಕಿತ್ತು.—ಯಾಜ. 6:24-26, 30.

ಆ ದಿನದಂದು ನಡೆದ ಆಪತ್ತುಗಳ ಬಳಿಕ ಯೆಹೋವನ ಎಲ್ಲ ಆಜ್ಞೆಗಳು ಪಾಲಿಸಲ್ಪಟ್ಟಿವೆಯೋ ಎಂದು ಖಾತ್ರಿಪಡಿಸುವ ಅಗತ್ಯವನ್ನು ಮೋಶೆ ಕಂಡಿರಬೇಕು. ದೋಷಪರಿಹಾರವಾಗಿ ಅರ್ಪಿಸಿದ ಹೋತದ ಭಾಗವನ್ನು ಸುಟ್ಟುಬಿಟ್ಟದ್ದು ಮೋಶೆಗೆ ತಿಳಿದುಬಂದಾಗ, ಎಲ್ಲಾಜಾರ್‌, ಈತಾಮಾರರು ಅದನ್ನು ಏಕೆ ತಿನ್ನಲಿಲ್ಲವೆಂದು ಅವನು ಕೋಪದಿಂದ ಪ್ರಶ್ನಿಸಿದನು. ಏಕೆಂದರೆ ಆ ಹೋತದ ರಕ್ತವನ್ನು ಪವಿತ್ರ ಸ್ಥಳದ ಯೆಹೋವನ ಸನ್ನಿಧಿಯಲ್ಲಿ ತರದಿದ್ದ ಕಾರಣ ಅವರು ಅದರ ಮಾಂಸದ ಭಾಗವನ್ನು ತಿನ್ನಬೇಕಿತ್ತು.—ಯಾಜ. 10:17, 18.

ಅವರಿಬ್ಬರು ಪ್ರಾಯಶಃ ಆರೋನನ ಅನುಮತಿಯಿಂದ ಹಾಗೆ ಮಾಡಿದ್ದಿರಬೇಕು. ಆದ್ದರಿಂದ ಆರೋನನೇ ಮೋಶೆಯ ಪ್ರಶ್ನೆಗೆ ಉತ್ತರಿಸಿದನು. ತನ್ನ ಇಬ್ಬರು ಪುತ್ರರನ್ನು ಯೆಹೋವನು ವಧಿಸಿದ್ದನ್ನು ನೋಡಿದಾಗ, ಆ ದಿನ ಇತರ ಯಾಜಕರಾದ ತಾವು ಮೂವರು ದೋಷಪರಿಹಾರಕ ಯಜ್ಞದ ಭಾಗವನ್ನು ಒಳ್ಳೇ ಮನಸ್ಸಾಕ್ಷಿಯಿಂದ ತಿನ್ನುವುದಾದರೂ ಹೇಗೆಂದು ಆರೋನನು ಯೋಚಿಸಿದ್ದಿರಬೇಕು. ನಾದಾಬ್‌, ಅಬೀಹು ಮಾಡಿದ ತಪ್ಪಿಗೆ ಉಳಿದವರು ನೇರವಾಗಿ ಹೊಣೆಗಾರರಾಗಿಲ್ಲದಿದ್ದರೂ ಅದನ್ನು ತಿನ್ನುವುದು ಯೆಹೋವನಿಗೆ ಮೆಚ್ಚಿಗೆಯಾಗದೆಂದು ಪ್ರಾಯಶಃ ಅವನು ನೆನಸಿದನು.—ಯಾಜ. 10:19.

ಆ ದಿನ ತನ್ನ ಮಕ್ಕಳು ಪ್ರಪ್ರಥಮ ಬಾರಿ ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದದ್ದರಿಂದ ಅತಿ ಚಿಕ್ಕ ಚಿಕ್ಕ ವಿಷಯದಲ್ಲೂ ದೇವರನ್ನು ಮೆಚ್ಚಿಸಲು ಅವರು ತುಂಬ ಜಾಗ್ರತೆ ವಹಿಸಿರಬೇಕಿತ್ತು ಎಂದು ಆರೋನನು ತರ್ಕಿಸಿದ್ದಿರಬಹುದು. ಆದರೆ ನಾದಾಬ್‌, ಅಬೀಹುರ ಕೃತ್ಯವು ಯೆಹೋವನ ನಾಮಕ್ಕೆ ಅಗೌರವವನ್ನು ತಂದಿತಾದ್ದರಿಂದ ದೇವರ ಕೋಪವು ಅವರನ್ನು ದಹಿಸಿಬಿಟ್ಟಿತು. ಆದಕಾರಣ ಇಂಥ ಪಾಪವು ಕಂಡುಬಂದ ಯಾಜಕ ಕುಟುಂಬದಲ್ಲಿನ ಇತರರು ಆ ಪವಿತ್ರ ಯಜ್ಞದ ಭಾಗಗಳನ್ನು ತಿನ್ನಬಾರದೆಂದು ಆರೋನನು ಯೋಚಿಸಿದ್ದಿರಬೇಕು.

ಮೋಶೆ ತನ್ನ ಅಣ್ಣನ ಉತ್ತರಕ್ಕೆ ಸಮ್ಮತಿಸಿದನೆಂದು ತೋರುತ್ತದೆ. ಏಕೆಂದರೆ ವೃತ್ತಾಂತವು ಹೀಗೆ ಕೊನೆಗೊಳ್ಳುತ್ತದೆ: “ಮೋಶೆ ಆ ಮಾತನ್ನು ಕೇಳಿ ಒಪ್ಪಿಕೊಂಡನು.” (ಯಾಜ. 10:20) ಆರೋನನ ಉತ್ತರವನ್ನು ಯೆಹೋವನು ಕೂಡ ಒಪ್ಪಿದನೆಂಬುದು ಸುವ್ಯಕ್ತ.

ಡಿಸೆಂಬರ್‌ 14-20

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 12-13

“ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಕಲಿಯುವ ಪಾಠ”

(ಯಾಜಕಕಾಂಡ 13:4, 5) ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿರದೆಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗದಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಬೇಕು. 5 ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ತೋರಿದರೆ ಯಾಜಕನು ಇನ್ನು ಏಳು ದಿನಗಳ ವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು.

ಕಾವಲಿನಬುರುಜು18.1 ಪುಟ 7

ಓಬೀರಾಯನ ಕಾಲದ್ದಾ? ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದಿದೆಯಾ?

• ಅಸ್ವಸ್ಥರನ್ನು ಪ್ರತ್ಯೇಕವಾಗಿ ಇಡುವುದು.

ಕುಷ್ಠ ರೋಗಿಗಳನ್ನು ಬೇರೆಯವರಿಂದ ಪ್ರತ್ಯೇಕಿಸಬೇಕೆಂದು ಮೋಶೆಯ ಮೂಲಕ ದೇವರು ಕೊಟ್ಟ ನಿಯಮಗಳಲ್ಲಿ ತಿಳಿಸಲಾಗಿತ್ತು. ಈ ತತ್ವವನ್ನು ಪಾಲಿಸಬೇಕೆಂದು ವೈದ್ಯರು ತಿಳಿದುಕೊಂಡದ್ದು 14 ಮತ್ತು 15 ನೇ ಶತಮಾನಗಳಲ್ಲಿ ಮಹಾಮಾರಿ ಕಾಯಿಲೆಗಳು ಬಂದ ನಂತರವೇ. ಹೀಗೆ ಮಾಡುವುದು ಒಳ್ಳೇದೆಂದು ಈಗಲೂ ನಂಬಲಾಗುತ್ತದೆ.—ಯಾಜಕಕಾಂಡ, 13 ಮತ್ತು 14 ನೇ ಅಧ್ಯಾಯಗಳು.

(ಯಾಜಕಕಾಂಡ 13:45, 46) ಯಾರಲ್ಲಿ ಕುಷ್ಠದ ಗುರುತು ಕಾಣಬಂತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯನ್ನು ಕೆದರಿಕೊಂಡು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು—ನಾನು ಅಶುದ್ಧನು ಅಶುದ್ಧನು ಎಂದು ಕೂಗಿಕೊಳ್ಳಬೇಕು. 46 ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.

ಕಾವಲಿನಬುರುಜು16.3 ಪುಟ 9 ಪ್ಯಾರ 1

ನಿಮಗೆ ತಿಳಿದಿತ್ತೋ?

ಆ ಕಾಲದಲ್ಲಿ ಕುಷ್ಠವು ಒಂದು ಮಾರಣಾಂತಿಕ ಕಾಯಿಲೆಯಾಗಿತ್ತು. ಇದು ರೋಗಿಯ ನರಗಳನ್ನು ಬಾಧಿಸಿ ಶಾಶ್ವತ ಹಾನಿ ಮಾಡುತ್ತಿತ್ತು, ಕುರೂಪ ಮಾಡುತ್ತಿತ್ತು. ಆಗ ಅದಕ್ಕಿನ್ನೂ ಔಷಧಿ ಕಂಡುಹಿಡಿದಿರಲಿಲ್ಲ. ಹಾಗಾಗಿ ಯೆಹೂದ್ಯರಿಗೆ ಎಷ್ಟು ಭಯವಿತ್ತೆಂದರೆ ಕುಷ್ಠರೋಗಿಗಳನ್ನು ದೂರ ಇಡುತ್ತಿದ್ದರು. ಅಷ್ಟೇ ಅಲ್ಲ, ಕುಷ್ಠರೋಗಿಗಳು ಸಹ ತಮ್ಮ ಸ್ಥಿತಿಯ ಬಗ್ಗೆ ಇತರರನ್ನು ಎಚ್ಚರಿಸಬೇಕೆಂಬ ಧರ್ಮಶಾಸ್ತ್ರದ ನಿಯಮವಿತ್ತು.—ಯಾಜಕಕಾಂಡ 13:45, 46.

(ಯಾಜಕಕಾಂಡ 13:52) ಆ ವಸ್ತುವು ಬಟ್ಟೆಯಾದರೂ ಹಾಸಾದರೂ ಹೊಕ್ಕಾದರೂ ಉಣ್ಣೆಯದಾದರೂ ನಾರಿನದಾದರೂ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.

(ಯಾಜಕಕಾಂಡ 13:57) ಆ ಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಂಡು ಬಂದರೆ ಕುಷ್ಠರೋಗವು ಇನ್ನೂ ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.

it-2-E ಪುಟ 238 ಪ್ಯಾರ 3

ಕುಷ್ಠ

ಬಟ್ಟೆ ಮೇಲೆ ಮತ್ತು ಮನೆ ಗೋಡೆಯ ಮೇಲೆ. ಈ ಕುಷ್ಠ ಉಣ್ಣೆ ಬಟ್ಟೆ, ನಾರಿನ ಬಟ್ಟೆ, ತೊಗಲು ಅಥ್ವಾ ಚರ್ಮದ ವಸ್ತುಗಳ ಮೇಲೆನೂ ಬರ್ತಿತ್ತು. ಇದನ್ನ ನೀರಿಂದ ತೊಳೆದಾಗ ಹೋಗ್ತಿತ್ತು. ಆದ್ರೂ ಆ ವಸ್ತುವನ್ನ ಪ್ರತ್ಯೇಕವಾಗಿ ಇಡ್ಬೇಕಾಗಿತ್ತು. ಆದ್ರೆ ಹಸಿರಾದ ಅಥ್ವಾ ಕೆಂಪಾದ ಮಚ್ಚೆ ಕಾಣಿಸ್ಕೊಂಡ್ರೆ ಅದು ಬೇರೆಯವ್ರಿಗೆ ಹರಡೋ ಕುಷ್ಠ ಆಗಿತ್ತು. ಹಾಗಾಗಿ ಆ ವಸ್ತುಗಳನ್ನ ಪೂರ್ತಿಯಾಗಿ ಸುಟ್ಟುಹಾಕಬೇಕಾಗಿತ್ತು. (ಯಾಜ 13:47-59) ಒಂದುವೇಳೆ ಗೋಡೆ ಮೇಲೆ ಹಸಿರಾದ ಅಥ್ವಾ ಕೆಂಪಾದ ಗುರುತುಗಳು ಕಾಣಿಸ್ಕೊಂಡ್ರೆ ಆ ಮನೆಯನ್ನ ಮುಚ್ಚಿಸಿಬಿಡಬೇಕು ಅಂತ ಯಾಜಕ ಹೇಳ್ತಿದ್ದ. ಮನೆ ಗೋಡೆ ಮೇಲೆ ಆ ತರ ಗುರುತುಗಳು ಬಂದ್ರೆ ಮನೆಯ ಕಲ್ಲುಗಳನ್ನ ತೆಗೆಸಿ, ಆ ಮನೆಯ ಗೋಡೆಯನ್ನ ಕೆರೆದು ಅದನ್ನೆಲ್ಲ ಊರ ಹೊರಗಿರೋ ಅಪವಿತ್ರ ಸ್ಥಳದಲ್ಲಿ ಬಿಸಾಡಬೇಕಿತ್ತು. ಆ ಕುಷ್ಠ ಮನೆ ಗೋಡೆ ಮೇಲೆ ಮತ್ತೆ ಕಾಣಿಸ್ಕೊಂಡ್ರೆ ಆ ಮನೆ ಅಶುದ್ಧ ಅಂತ ಪರಿಗಣಿಸಿ ಅದನ್ನ ಕೆಡವಿಹಾಕಬೇಕಿತ್ತು. ಆಮೇಲೆ ಕಲ್ಲು, ಮಣ್ಣು, ತೊಲೆಯನ್ನ ಊರ ಹೊರಗೆ ಅಪವಿತ್ರ ಸ್ಥಳದಲ್ಲಿ ಬಿಸಾಡಬೇಕಿತ್ತು. ಒಂದುವೇಳೆ ಆ ಮನೇಲಿ ಮತ್ತೆ ಕುಷ್ಠ ಕಾಣಿಸ್ಕೊಳ್ಳದೇ ಇದ್ರೆ ಆ ಮನೆಯನ್ನ ಶುದ್ಧ ಅಂತ ಪರಿಗಣಿಸಲಾಗ್ತಿತ್ತು. ಆಮೇಲೆ ಶುದ್ಧೀಕರಣ ಮಾಡಲಾಗ್ತಿತ್ತು. (ಯಾಜ 14:33-57) ಬಟ್ಟೆ ಮೇಲೆ, ಮನೆ ಗೋಡೆ ಮೇಲೆ ಬರೋ ಒಂದು ತರದ ಬೂಷ್ಟನ್ನ (ನುಸಿಯನ್ನ) ಕುಷ್ಠ ಅಂತ ಇಲ್ಲಿ ಹೇಳಿರಬಹುದು. ಆದ್ರೆ ಅದೇ ಅಂತ ಪಕ್ಕಾ ಹೇಳಕ್ಕಾಗಲ್ಲ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ಯಾಜಕಕಾಂಡ 12:2) ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು—ಒಬ್ಬ ಸ್ತ್ರೀ ಗಂಡುಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಏಳು ದಿನಗಳ ತನಕ ಅಶುದ್ಧಳಾಗಿರಬೇಕು.

(ಯಾಜಕಕಾಂಡ 12:5) ಹೆಣ್ಣು ಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಎರಡು ವಾರಗಳು ಅಶುದ್ಧಳಾಗಿರಬೇಕು; ಮತ್ತು ಶುದ್ಧೀಕರಣಪೂರ್ತಿಗೆ ಅರುವತ್ತಾರು ದಿವಸ ಹಿಡಿಯುವದು.

ಕಾವಲಿನಬುರುಜು04 5/15 ಪುಟ 23 ಪ್ಯಾರ 2

ಯಾಜಕಕಾಂಡ ಪುಸ್ತಕದ ಮುಖ್ಯಾಂಶಗಳು

ಯಾಜಕಕಾಂಡ 12:2, 5—ಮಗುವನ್ನು ಹೆರುವುದು ಒಬ್ಬ ಸ್ತ್ರೀಯನ್ನು ಏಕೆ ‘ಅಶುದ್ಧಳನ್ನಾಗಿ’ ಮಾಡುತ್ತಿತ್ತು? ಸಂತಾನೋತ್ಪತ್ತಿಯ ಅಂಗಾಂಗಗಳನ್ನು ಪರಿಪೂರ್ಣ ಮಾನವ ಜೀವವನ್ನು ದಾಟಿಸಲಿಕ್ಕಾಗಿ ನಿರ್ಮಿಸಲಾಗಿತ್ತು. ಆದರೆ ಬಾಧ್ಯತೆಯಾಗಿ ಬಂದಿರುವ ಪಾಪದ ಪರಿಣಾಮಗಳಿಂದಾಗಿ, ಅಪರಿಪೂರ್ಣ ಮತ್ತು ಪಾಪಪೂರ್ಣವಾದ ಜೀವವನ್ನು ಮಗುವಿಗೆ ದಾಟಿಸಲಾಗುತ್ತಿತ್ತು. ಹೆರಿಗೆ, ಹಾಗೂ ಮುಟ್ಟು ಮತ್ತು ವೀರ್ಯಸ್ಖಲನದಂಥ ಇತರ ವಿಷಯಗಳು ಬರಮಾಡುತ್ತಿದ್ದ ‘ಅಶುದ್ಧತೆಯ’ ತಾತ್ಕಾಲಿಕ ಅವಧಿಗಳು, ಪಿತ್ರಾರ್ಜಿತವಾಗಿ ಬಂದಿರುವ ಪಾಪಪೂರ್ಣತೆಯನ್ನು ಮನಸ್ಸಿಗೆ ತರುತ್ತಿದ್ದವು. (ಯಾಜಕಕಾಂಡ 15:16-24; ಕೀರ್ತನೆ 51:5; ರೋಮಾಪುರ 5:12) ಶುದ್ಧೀಕರಣಕ್ಕಾಗಿ ಪೂರೈಸಲ್ಪಡಬೇಕಾಗಿದ್ದ ನಿಬಂಧನೆಗಳು, ಮಾನವಕುಲದ ಪಾಪಪೂರ್ಣತೆಯನ್ನು ಮುಚ್ಚಲು ಮತ್ತು ಮಾನವ ಪರಿಪೂರ್ಣತೆಯನ್ನು ಪುನಸ್ಸ್ಥಾಪಿಸಲು ಒಂದು ಈಡು ಯಜ್ಞದ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇಸ್ರಾಯೇಲ್ಯರಿಗೆ ಸಹಾಯಮಾಡಿತು. ಈ ರೀತಿಯಲ್ಲಿ ಈ ಧರ್ಮಶಾಸ್ತ್ರವು ಅವರನ್ನು ‘ಕ್ರಿಸ್ತನಿಗೆ ಸೇರುವ ತನಕ ಕಾಯುವ ಆಳು’ ಆಗಿತ್ತು.—ಗಲಾತ್ಯ 3:24.

(ಯಾಜಕಕಾಂಡ 12:3) ಎಂಟನೆಯ ದಿನದಲ್ಲಿ ಆ ಮಗುವಿಗೆ ಸುನ್ನತಿಮಾಡಿಸಬೇಕು.

ಕಾವಲಿನಬುರುಜು18.1 ಪುಟ 7

ಓಬೀರಾಯನ ಕಾಲದ್ದಾ? ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದಿದೆಯಾ?

• ಸುನ್ನತಿ ಮಾಡಬೇಕಾದ ಸಮಯ.

ಗಂಡು ಮಗು ಹುಟ್ಟಿದ ನಂತರ ಎಂಟನೇ ದಿನದಲ್ಲಿ ಅದಕ್ಕೆ ಸುನ್ನತಿ ಮಾಡಿಸಬೇಕೆಂದು ದೇವರ ನಿಯಮದಲ್ಲಿ ತಿಳಿಸಲಾಗಿತ್ತು. (ಯಾಜಕಕಾಂಡ 12:3) ನವಜಾತ ಶಿಶುಗಳಲ್ಲಿ ಏಳು ದಿನಗಳ ನಂತರವೇ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಸಾಮಾನ್ಯ ಮಟ್ಟವನ್ನು ತಲಪುತ್ತದೆ ಎಂದು ಹೇಳಲಾಗುತ್ತದೆ. ಆಧುನಿಕ ವೈದ್ಯ ಚಿಕಿತ್ಸೆ ಲಭ್ಯವಿಲ್ಲದಿದ್ದ ಆ ಬೈಬಲ್‌ ಕಾಲಗಳಲ್ಲಿ ಶಿಶುಗಳಿಗೆ ಸುನ್ನತಿ ಮಾಡಿಸಲು ಒಂದು ವಾರದ ತನಕ ಕಾಯುವುದು ಒಂದು ಸುರಕ್ಷಿತ ಕ್ರಮವಾಗಿತ್ತು.

ಡಿಸೆಂಬರ್‌ 21-27

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 14-15

“ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ”

(ಯಾಜಕಕಾಂಡ 15:13-15) ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ ಅವನು ಶುದ್ಧಮಾಡಿಸಿಕೊಳ್ಳುವದಕ್ಕೆ ಆಗಿನಿಂದ ಏಳು ದಿನಗಳನ್ನು ಲೆಕ್ಕಿಸಿಕೊಂಡು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸೆಲೇ ನೀರಿನಿಂದ ತನ್ನ ಶರೀರವನ್ನು ತೊಳೆದುಕೊಂಡು ಶುದ್ಧನಾಗುವನು. 14 ಎಂಟನೆಯ ದಿನದಲ್ಲಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಲಿಗೆ ಯೆಹೋವನ ಸನ್ನಿಧಿಗೆ ಬಂದು ಯಾಜಕನಿಗೆ ಒಪ್ಪಿಸಬೇಕು. 15 ಯಾಜಕನು ದೋಷಪರಿಹಾರಕಯಜ್ಞಕ್ಕಾಗಿ ಒಂದನ್ನೂ ಸರ್ವಾಂಗಹೋಮಕ್ಕಾಗಿ ಇನ್ನೊಂದನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಅವನ ಸ್ರಾವದ ವಿಷಯದಲ್ಲಿ ಯೆಹೋವನ ಸನ್ನಿಧಿಯಲ್ಲಿ ಅವನಿಗೋಸ್ಕರ ದೋಷಪರಿಹಾರಮಾಡುವನು.

it-1-E ಪುಟ 263

ಸ್ನಾನ

ಒಬ್ಬ ಇಸ್ರಾಯೇಲ್ಯ ವ್ಯಕ್ತಿ ಯಾವ್ದೇ ಕಾರಣಕ್ಕೆ ಅಶುದ್ಧನಾದ್ರೂ ಧರ್ಮಶಾಸ್ತ್ರದ ಪ್ರಕಾರ ಅವನು ಸ್ನಾನ ಮಾಡಿ ಶುದ್ಧನಾಗಬೇಕಿತ್ತು. ಕುಷ್ಠ ರೋಗ ವಾಸಿಯಾದ ವ್ಯಕ್ತಿ, ವೀರ್ಯಸ್ಖಲನ ಆದ ವ್ಯಕ್ತಿ, ಮುಟ್ಟಾದ ಸ್ತ್ರೀ, ಲೈಂಗಿಕ ಸಂಭೋಗ ಮಾಡಿದ ವ್ಯಕ್ತಿ ‘ಅಶುದ್ಧರಾಗಿ’ ಇರ್ತಿದ್ರು. ‘ಸ್ರಾವ ಇರೋ’ ವ್ಯಕ್ತಿ ಮುಟ್ಟಿದ ವಸ್ತುಗಳ ಸಂಪರ್ಕಕ್ಕೆ ಬಂದ ವ್ಯಕ್ತಿ ಕೂಡ ‘ಅಶುದ್ಧನಾಗಿ’ ಇರುತ್ತಿದ್ದ. ಇವ್ರೆಲ್ಲ ಸ್ನಾನ ಮಾಡ್ಕೊಂಡು ಶುದ್ಧರಾಗಬೇಕಿತ್ತು. (ಯಾಜ 14:8, 9; 15:4-27) ಶವವನ್ನು ಮುಟ್ಟಿದ ವ್ಯಕ್ತಿ ಅಥ್ವಾ ಶವ ಇದ್ದ ಗುಡಾರದಲ್ಲಿದ್ದ ವ್ಯಕ್ತಿ ಕೂಡ ‘ಅಶುದ್ಧನಾಗಿರುತ್ತಿದ್ದ.’ ಅಶುದ್ಧತೆಯನ್ನ ತೆಗೆದುಹಾಕ್ತಿದ್ದ ನೀರನ್ನ ಅವನು ಚಿಮಿಕಿಸ್ಕೊಂಡು ಶುದ್ಧನಾಗಬೇಕಿತ್ತು. ಈ ನಿಯಮವನ್ನ ಪಾಲಿಸ್ದೇ ಹೋದ್ರೆ ಅಂಥವನು ‘ಯೆಹೋವನ ದೇವಸ್ಥಾನವನ್ನು ಅಪವಿತ್ರಪಡಿಸಿದ ಕಾರಣ ಅವನನ್ನ ಸಭೆಯಿಂದ ತೆಗೆಯಬೇಕಿತ್ತು.’ (ಅರ 19:20) ಹಾಗಾಗಿ ಬೈಬಲಿನ ಬೇರೆ ವಚನಗಳಲ್ಲಿ ‘ತೊಳೆಯೋದು,’ ‘ಸ್ನಾನ ಮಾಡೋದು’ ಅನ್ನೋ ಪದಗಳನ್ನ ಯೆಹೋವನ ಮುಂದೆ ಕಳಂಕ ಇಲ್ಲದೆ ಇರೋದು ಅನ್ನೋ ಅರ್ಥದಲ್ಲಿ ಬಳಸಲಾಗಿದೆ. (ಕೀರ್ತ 26:6; 73:13; ಯೆಶಾ 1:16; ಯೆಹೆ 16:9) ಬೈಬಲಲ್ಲಿ ದೇವರ ವಾಕ್ಯವನ್ನ ನೀರಿಗೆ ಹೋಲಿಸಲಾಗಿದೆ. ಇದ್ರಿಂದ ಒಬ್ಬ ತನ್ನನ್ನೇ ಶುದ್ಧ ಮಾಡ್ಕೊಳ್ಳಕ್ಕಾಗುತ್ತೆ.—ಎಫೆ 5:26.

(ಯಾಜಕಕಾಂಡ 15:28-30) ಅವಳಿಗೆ ರಕ್ತಸ್ರಾವ ನಿಂತ ದಿನದಿಂದ ಅವಳು ಏಳು ದಿನಗಳನ್ನು ಲೆಕ್ಕಿಸಿಕೊಂಡು ತರುವಾಯ ಶುದ್ಧಳಾಗುವಳು. 29 ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಲಿಗೆ ಯಾಜಕನ ಬಳಿಗೆ ತರಬೇಕು. 30 ಯಾಜಕನು ದೋಷಪರಿಹಾರಕಯಜ್ಞಕ್ಕಾಗಿ ಒಂದನ್ನೂ ಸರ್ವಾಂಗಹೋಮಕ್ಕಾಗಿ ಇನ್ನೊಂದನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಅವಳ ಸ್ರಾವದಿಂದುಂಟಾದ ಅಪರಿಶುದ್ಧತೆಯ ವಿಷಯವಾಗಿ ಕರ್ತನ ಸನ್ನಿಧಿಯಲ್ಲಿ ಅವಳಿಗೋಸ್ಕರ ದೋಷಪರಿಹಾರಮಾಡುವನು.

it-2-E ಪುಟ 372 ಪ್ಯಾರ 2

ಮುಟ್ಟು

ಒಬ್ಬ ಸ್ತ್ರೀಗೆ ತಿಂಗಳಿನ ಮುಟ್ಟಿನ ಸಮಯ ಅಲ್ದೇ ಬೇರೆ ಸಮಯದಲ್ಲೂ ಅಂದ್ರೆ “ಮುಟ್ಟಿನ ಕಾಲಕ್ಕೆ ತಕ್ಕದ್ದಕ್ಕಿಂತ ಹೆಚ್ಚು ದಿನಗಳು” ರಕ್ತಸ್ರಾವವಾದ್ರೆ ಧರ್ಮಶಾಸ್ತ್ರದ ಪ್ರಕಾರ ಅವಳು ಅಶುದ್ಧಳಾಗಿ ಇರ್ತಿದ್ಲು. ಆ ದಿನಗಳಲ್ಲಿ ಅವಳು ಯಾವುದ್ರ ಮೇಲೆ ಮಲಗಿದ್ರೂ ಯಾವದ್ರ ಮೇಲೆ ಕೂತ್ರೂ ಅದು ಅಶುದ್ಧ ಆಗ್ತಿತ್ತು. ಆ ವಸ್ತುಗಳನ್ನ ಮುಟ್ಟಿದವ್ರೂ ಅಶುದ್ಧ ಆಗ್ತಿದ್ರು. ಅವಳಿಗೆ ರಕ್ತಸ್ರಾವ ನಿಂತು ಏಳು ದಿನ ಆದ್ಮೇಲೆ ಶುದ್ಧಳಾಗ್ತಿದ್ಲು. ಎಂಟನೇ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನ ಅಥ್ವಾ ಎರಡು ಪಾರಿವಾಳದ ಮರಿಗಳನ್ನ ಯಾಜಕನಿಗೆ ಕೊಡಬೇಕಿತ್ತು. ಯಾಜಕ ಅದ್ರಲ್ಲಿ ದೋಷಪರಿಹಾರಕ ಯಜ್ಞಕ್ಕಾಗಿ ಒಂದನ್ನ ಸರ್ವಾಂಗಹೋಮಕ್ಕಾಗಿ ಒಂದನ್ನ ಯೆಹೋವನಿಗೆ ಅರ್ಪಿಸಬೇಕಿತ್ತು. ಹೀಗೆ ಅವಳಿಗೋಸ್ಕರ ದೋಷಪರಿಹಾರ ಮಾಡ್ತಿದ್ದ.—ಯಾಜ 15:19-30.

(ಯಾಜಕಕಾಂಡ 15:31) ಇಸ್ರಾಯೇಲ್ಯರು ಅಶುದ್ಧತೆಗೆ ದೂರವಾಗಿರುವಂತೆ ನೀವು ಅವರನ್ನು ಈ ರೀತಿಯಾಗಿ ಕಾಪಾಡಬೇಕು. ಅವರು ಅಪವಿತ್ರರಾಗಿದ್ದು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡಿದರೆ ನಾಶವಾದಾರು.

it-1-E ಪುಟ 1133

ಪವಿತ್ರ ಸ್ಥಳ

2. ದೇವದರ್ಶನ ಗುಡಾರ ಮತ್ತು ನಂತ್ರ ಕಟ್ಟಿದ ದೇವಾಲಯ. ದೇವಗುಡಾರ ಮತ್ತು ದೇವಾಲಯ ಮಾತ್ರವಲ್ಲ ಅದ್ರ ಸುತ್ತ ಇದ್ದ ಅಂಗಳ ಕೂಡ ಪವಿತ್ರ ಸ್ಥಳವಾಗಿತ್ತು. (ವಿಮೋ 38:24; 2ಪೂರ್ವ 29:5; ಅಕಾ 21:28) ಅಂಗಳದಲ್ಲಿ ಮುಖ್ಯವಾಗಿ ಯಜ್ಞವೇದಿ ಮತ್ತು ತಾಮ್ರದ ಗಂಗಾಳ ಇತ್ತು. ಇವು ಕೂಡ ಪವಿತ್ರವಾಗಿದ್ದವು. ಧರ್ಮಶಾಸ್ತ್ರದ ಪ್ರಕಾರ ಶುದ್ಧರಾಗಿ ಇದ್ದವರು ಮಾತ್ರ ದೇವದರ್ಶನ ಗುಡಾರದ ಅಂಗಳಕ್ಕೆ ಅಥ್ವಾ ದೇವಾಲಯದ ಅಂಗಳಕ್ಕೆ ಹೋಗ್ಬೇಕಿತ್ತು. ಅಶುದ್ಧರಾಗಿದ್ದ ಯಾರೂ ಕಾಲಿಡಬಾರದಿತ್ತು. ಉದಾಹರಣೆಗೆ ಅಶುದ್ಧಳಾಗಿದ್ದ ಸ್ತ್ರೀ ಪವಿತ್ರವಾದ ಯಾವುದನ್ನೂ ಮುಟ್ಟಬಾರದು, ಪವಿತ್ರ ಸ್ಥಳಕ್ಕೆ ಹೋಗ್ಬಾರದು ಅನ್ನೋ ನಿಯಮ ಇತ್ತು. (ಯಾಜ 12:2-4) ಅಶುದ್ಧ ಸ್ಥಿತಿಯಲ್ಲಿದ್ದ ಇಸ್ರಾಯೇಲ್ಯನೊಬ್ಬ ತನ್ನನ್ನ ಶುದ್ಧ ಮಾಡಿಕೊಳ್ದೇ ಹಾಗೇ ಇದ್ದುಬಿಟ್ರೆ ದೇವಗುಡಾರವನ್ನ ಕೂಡ ಅಶುದ್ಧ ಮಾಡಿದಂತಾಗ್ತಿತ್ತು. (ಯಾಜ 15:31) ಕುಷ್ಠರೋಗ ಇದ್ದ ವ್ಯಕ್ತಿಯೊಬ್ಬ ತನ್ನನ್ನ ಶುದ್ಧ ಮಾಡಿಕೊಳ್ಳೋಕೆ ಯಜ್ಞಕ್ಕಾಗಿ ತಂದ ಪ್ರಾಣಿಗಳನ್ನ ಅಂಗಳದ ಬಾಗಿಲಲ್ಲೇ ನಿಂತು ಯಾಜಕನಿಗೆ ಕೊಡ್ಬೇಕಿತ್ತು. (ಯಾಜ 14:11) ಅಶುದ್ಧನಾಗಿದ್ದ ವ್ಯಕ್ತಿಯೊಬ್ಬ ದೇವದರ್ಶನ ಗುಡಾರದಲ್ಲಿ ಅಥ್ವಾ ದೇವಾಲಯದಲ್ಲಿ ಸಮಾಧಾನಯಜ್ಞಪಶುವಿನ ಮಾಂಸ ತಿಂದ್ರೆ ಅವನಿಗೆ ಮರಣಶಿಕ್ಷೆ ಆಗ್ತಿತ್ತು.—ಯಾಜ 7:20, 21.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ಯಾಜಕಕಾಂಡ 14:14) ಆಗ ಯಾಜಕನು ಆ ಪ್ರಾಯಶ್ಚಿತ್ತಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೊಟ್ಟಿಗೂ ಹಚ್ಚಬೇಕು.

(ಯಾಜಕಕಾಂಡ 14:17) ಅವನು ತನ್ನ ಕೈಯಲ್ಲಿರುವ ಮಿಕ್ಕ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೊಟ್ಟಿಗೂ ಪ್ರಾಯಶ್ಚಿತ್ತ ಯಜ್ಞಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಿ.

(ಯಾಜಕಕಾಂಡ 14:25) ಪ್ರಾಯಶ್ಚಿತ್ತಯಜ್ಞದ ಕುರಿಯನ್ನು ವಧಿಸಿದ ನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೊಟ್ಟಿಗೂ ಹಚ್ಚಬೇಕು.

(ಯಾಜಕಕಾಂಡ 14:28) ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೊಟ್ಟಿಗೂ ಪ್ರಾಯಶ್ಚಿತ್ತಯಜ್ಞಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.

it-1-E ಪುಟ 665 ಪ್ಯಾರ 5

ಕಿವಿ

ಆರೋನ ಮತ್ತು ಆತನ ಮಕ್ಕಳನ್ನ ಯಾಜಕಸೇವೆಗೆ ಅಭಿಷೇಕಿಸುವಾಗ ಮೋಶೆ ಏನೇನು ಮಾಡ್ಬೇಕಿತ್ತು ಅಂತ ಯೆಹೋವ ಹೇಳಿದ್ದನು. ಅದೇನಂದ್ರೆ ಅವ್ರು ಅರ್ಪಿಸಿದ ಟಗರಿನ ರಕ್ತದಲ್ಲಿ ಸ್ವಲ್ಪ ತಗೊಂಡು ಮೋಶೆ ಅದನ್ನ ಆರೋನ ಮತ್ತು ಅವನ ಮಕ್ಕಳ ಬಲಗಿವಿಯ ತುದಿಗೆ, ಬಲಗೈ ಮತ್ತು ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕಿತ್ತು. ಇದ್ರರ್ಥ ಆರೋನ ಮತ್ತು ಅವನ ಮಕ್ಕಳು ಯೆಹೋವ ಹೇಳೋದನ್ನ ಕೇಳಿಸ್ಕೊಬೇಕು, ತಮ್ಮ ಕೈಗಳಿಂದ ಆತನ ಸೇವೆ ಮಾಡಬೇಕು, ಆತನು ತೋರಿಸಿದ ದಾರೀಲಿ ನಡೀಬೇಕು ಅನ್ನೋದಾಗಿತ್ತು. (ಯಾಜ 8:22-24) ಕುಷ್ಠ ಇದ್ದ ವ್ಯಕ್ತಿಯನ್ನ ಶುದ್ಧೀಕರಿಸುವಾಗ್ಲೂ ಯಾಜಕ ಇದೇ ರೀತಿ ಮಾಡ್ಬೇಕು ಅಂತ ಧರ್ಮಶಾಸ್ತ್ರ ಹೇಳಿತ್ತು. ಪ್ರಾಯಶ್ಚಿತ್ತ ಯಜ್ಞವಾಗಿ ಆ ವ್ಯಕ್ತಿ ಅರ್ಪಿಸಿದ್ದ ಟಗರಿನ ರಕ್ತದಲ್ಲಿ ಮತ್ತು ಎಣ್ಣೆಯಲ್ಲಿ ಸ್ವಲ್ಪ ತಗೊಂಡು ಯಾಜಕನು ಅವನ ಬಲಗಿವಿಯ ತುದಿಗೆ ಹಚ್ಚಬೇಕಿತ್ತು. (ಯಾಜ 14:14, 17, 25, 28) ಯಜಮಾನನಿಗೆ ಕೊನೇ ತನಕ ದಾಸನಾಗಿ ಇರೋಕೆ ಇಷ್ಟಪಡೋ ವ್ಯಕ್ತಿಗೂ ಮಾಡ್ತಿದ್ದ ವಿಷ್ಯ ಸ್ವಲ್ಪ ಇದೇ ತರ ಇರ್ತಿತ್ತು. ದಾಸನನ್ನ ಬಾಗಿಲ ನಿಲುವುಪಟ್ಟಿಗಳ ಹತ್ರ ನಿಲ್ಲಿಸಿ ಯಜಮಾನ ಅವನ ಕಿವಿಯನ್ನ ಸಲಾಕೆಯಿಂದ ಚುಚ್ಚಬೇಕಿತ್ತು. ತನ್ನ ಯಜಮಾನನ ಮಾತನ್ನ ಯಾವಾಗ್ಲೂ ಕೇಳ್ತೀನಿ ಅನ್ನೋದನ್ನ ದಾಸನ ಕಿವಿಯಲ್ಲಿದ್ದ ಆ ಗುರುತು ಸೂಚಿಸ್ತಿತ್ತು.—ವಿಮೋ 21:5, 6.

(ಯಾಜಕಕಾಂಡ 14:43-45) ಅವನು ಆ ಕಲ್ಲುಗಳನ್ನು ತೆಗಿಸಿ ಮನೆಯ ಗೋಡೆಗಳನ್ನು ಗೀಚಿಸಿ ಗಿಲಾವು ಮಾಡಿಸಿದ ಮೇಲೆ ಆ ರೋಗದ ಗುರುತು ತಿರಿಗಿ ಕಾಣಬಂದರೆ ಯಾಜಕನು ಬಂದು ನೋಡಬೇಕು. 44 ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ; ಆ ಮನೆ ಅಶುದ್ಧವಾಗಿರುವದು. 45 ಅವನು ಆ ಮನೆಯನ್ನು ಕೆಡಹಿಸಿ ಅದರ ಎಲ್ಲಾ ಕಲ್ಲುಗಳನ್ನೂ ತೊಲೆಗಳನ್ನೂ ಮಣ್ಣನ್ನೂ ಊರಿನ ಹೊರಗೆ ಅಪವಿತ್ರಸ್ಥಳದಲ್ಲಿ ಹಾಕಿಸಿಬಿಡಬೇಕು.

ಎಚ್ಚರ! 4/06 ಪುಟ 12 ರಲ್ಲಿರೋ ಚೌಕ

ಬೂಷ್ಟು ಮಿತ್ರ ಹಾಗೂ ಶತ್ರು!

ಬೈಬಲಿನಲ್ಲಿ ಬೂಷ್ಟಿನ ಬಗ್ಗೆ ತಿಳಿಸಲಾಗಿದೆಯೊ?

‘ಮನೆಯ ಗೋಡೆಗಳಲ್ಲಿ ಕುಷ್ಠದ ಗುರುತು’ ಕಂಡುಬರುವ ವಿಷಯದ ಕುರಿತು ಬೈಬಲ್‌ ತಿಳಿಸುತ್ತದೆ. (ಯಾಜಕಕಾಂಡ 14:34-48) “ಪ್ರಾಣಹಾನಿಕರವಾದ ಕುಷ್ಠ” ಎಂಬುದಾಗಿಯೂ ಕರೆಯಲ್ಪಟ್ಟಿರುವ ಈ ಗುರುತು ಒಂದು ರೀತಿಯ ಬೂಷ್ಟಾಗಿತ್ತೆಂದು ಹೇಳಲಾಗಿದೆ. ಆದರೆ ಇದರ ಕುರಿತು ಅನಿಶ್ಚಿತತೆಯಿದೆ. ಏನೇ ಆಗಿರಲಿ, ಮನೆಯ ಯಜಮಾನನು ಆ ಗುರುತುಗಳಿರುವ ಕಲ್ಲುಗಳನ್ನು ತೆಗಿಸಿ, ಮನೆಯ ಗೋಡೆಗಳ ಒಳಗಡೆಯನ್ನೆಲ್ಲಾ ಗೀಚಿಸಿ, ಗುರುತುಗಳಿದ್ದ ಕಲ್ಲುಗಳನ್ನೂ ಗೀಚಿದ ಮಣ್ಣನ್ನು ಊರಿನ ಹೊರಗೆ “ಅಪವಿತ್ರ ಸ್ಥಳದಲ್ಲಿ” ಹಾಕಿಸಬೇಕು ಎಂಬುದಾಗಿ ದೇವರ ಧರ್ಮಶಾಸ್ತ್ರವು ಆದೇಶಿಸಿತ್ತು. ಒಂದುವೇಳೆ ಆ ಕುಷ್ಠವು ತಿರಿಗಿ ಕಾಣಬಂದರೆ, ಇಡೀ ಮನೆಯನ್ನೇ ಅಶುದ್ಧವೆಂದು ಘೋಷಿಸಿ, ಕೆಡಹಿಸಿ ಅದರ ಎಲ್ಲ ಸಾಮಗ್ರಿಗಳನ್ನು ಅಪವಿತ್ರ ಸ್ಥಳದಲ್ಲಿ ಹಾಕಿಸಿಬಿಡಬೇಕು. ಯೆಹೋವನು ಒದಗಿಸಿದ ಈ ಸವಿವರವಾದ ಸಲಹೆಗಳು, ತನ್ನ ಜನರ ಮತ್ತು ಅವರ ಶಾರೀರಿಕ ಹಿತಕ್ಷೇಮದ ಬಗ್ಗೆ ಆತನಿಗಿದ್ದ ಆಳವಾದ ಪ್ರೀತಿಪರ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ.

ಡಿಸೆಂಬರ್‌ 28–ಜನವರಿ 3

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 16-17

“ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?”

(ಯಾಜಕಕಾಂಡ 16:12) ಅವನು ತನಗೋಸ್ಕರವಾದ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ತೆರೆಯನ್ನು ದಾಟಿ.

ಕಾವಲಿನಬುರುಜು19.11 ಪುಟ 20-21 ಪ್ಯಾರ 4

ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು

4 ಯಾಜಕಕಾಂಡ 16:12, 13 ಓದಿ. ದೋಷಪರಿಹಾರಕ ದಿನದಂದು ಏನು ನಡೆಯುತ್ತಿತ್ತೆಂದು ಚಿತ್ರಿಸಿಕೊಳ್ಳಿ. ಮಹಾ ಯಾಜಕನು ದೇವದರ್ಶನ ಗುಡಾರದ ಒಳಗೆ ಪ್ರವೇಶಿಸುತ್ತಿದ್ದನು. ಆ ದಿನದಂದು ಅವನು ಮೂರು ಬಾರಿ ದೇವದರ್ಶನ ಗುಡಾರದ ಅತಿ ಪವಿತ್ರ ಸ್ಥಳಕ್ಕೆ ಹೋಗುತ್ತಿದ್ದನು. ಮೊದಲನೇ ಬಾರಿ ಪ್ರವೇಶಿಸುವಾಗ ಅವನ ಒಂದು ಕೈಯಲ್ಲಿ ಪರಿಮಳಧೂಪ ಇರುವ ಒಂದು ಚಿಕ್ಕ ಪಾತ್ರೆ, ಇನ್ನೊಂದು ಕೈಯಲ್ಲಿ ಕೆಂಡ ತುಂಬಿರುವ ಚಿನ್ನದ ಧೂಪಾರತಿ ಇರುತ್ತಿತ್ತು. ಅತಿ ಪವಿತ್ರ ಸ್ಥಳದ ದ್ವಾರವನ್ನು ಮುಚ್ಚಿರುವ ತೆರೆಯ ಮುಂದೆ ಹೋದಾಗ ಅಲ್ಲಿ ಒಂದು ಕ್ಷಣ ನಿಂತು, ನಂತರ ತುಂಬ ಭಯಭಕ್ತಿಯಿಂದ, ಗೌರವದಿಂದ ಅವನು ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸಿ ಒಡಂಬಡಿಕೆಯ ಮಂಜೂಷದ ಮುಂದೆ ನಿಲ್ಲುತ್ತಿದ್ದನು. ಒಂದರ್ಥದಲ್ಲಿ ಅವನು ಯೆಹೋವನ ಮುಂದೆಯೇ ನಿಂತಂತೆ ಇರುತ್ತಿತ್ತು. ಆಮೇಲೆ ಆ ಯಾಜಕನು ತುಂಬ ಜಾಗ್ರತೆಯಿಂದ ಪರಿಮಳಧೂಪವನ್ನು ಕೆಂಡದ ಮೇಲೆ ಹಾಕುತ್ತಿದ್ದನು. ಆಗ ಇಡೀ ಕೋಣೆಯು ಸುವಾಸನೆಯಿಂದ ತುಂಬುತ್ತಿತ್ತು. ನಂತರ ಯಜ್ಞವಾಗಿ ಕೊಟ್ಟಂಥ ಪ್ರಾಣಿಗಳ ರಕ್ತವನ್ನು ತಗೊಂಡು ಅವನು ಅತಿ ಪವಿತ್ರ ಸ್ಥಳಕ್ಕೆ ಪುನಃ ಪ್ರವೇಶಿಸುತ್ತಿದ್ದನು. ಹೀಗೆ ಅವನು ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ರಕ್ತವನ್ನು ಅರ್ಪಿಸುತ್ತಿದ್ದನು.

(ಯಾಜಕಕಾಂಡ 16:13) ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಧೂಪದ ಹೊಗೆ ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಮುಚ್ಚುವದು.

ಕಾವಲಿನಬುರುಜು19.11 ಪುಟ 21 ಪ್ಯಾರ 5

ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು

5 ದೋಷಪರಿಹಾರಕ ದಿನದಂದು ಪರಿಮಳಧೂಪವನ್ನು ಸುಡುತ್ತಿದ್ದ ವಿಷಯದಿಂದ ನಾವೇನು ಕಲಿಯಬಹುದು? ಯೆಹೋವನ ನಂಬಿಗಸ್ತ ಸೇವಕರು ಮಾಡುವ ಪ್ರಾರ್ಥನೆಗಳು ಧೂಪದಂತೆ ಇವೆ ಎಂದು ಬೈಬಲ್‌ ತಿಳಿಸುತ್ತದೆ. (ಕೀರ್ತ. 141:2; ಪ್ರಕ. 5:8) ಮಹಾ ಯಾಜಕನು ಯೆಹೋವನ ಸನ್ನಿಧಿಯ ಮುಂದೆ ತುಂಬ ಭಯಭಕ್ತಿಯಿಂದ, ಗೌರವದಿಂದ ಧೂಪವನ್ನು ತರುತ್ತಿದ್ದನು. ಅದೇರೀತಿ, ನಾವು ಯೆಹೋವನಿಗೆ ತುಂಬ ಭಯಭಕ್ತಿಯಿಂದ, ಗೌರವದಿಂದ ಪ್ರಾರ್ಥನೆ ಮಾಡಬೇಕು. ಒಂದು ಮಗು ತನ್ನ ತಂದೆಯ ಹತ್ತಿರ ಮಾತಾಡುವಂತೆ ನಾವು ಇಡೀ ವಿಶ್ವದ ಸೃಷ್ಟಿಕರ್ತನಾಗಿರುವ ಯೆಹೋವನ ಹತ್ತಿರ ಮಾತಾಡಬಹುದು, ಆತನಿಗೆ ಆಪ್ತರಾಗಬಹುದು. (ಯಾಕೋ. 4:8) ಈ ಅವಕಾಶ ಕೊಟ್ಟಿರುವುದಕ್ಕಾಗಿ ಯೆಹೋವನಿಗೆ ಆಭಾರಿಗಳಾಗಿದ್ದೇವೆ. ಯೆಹೋವನು ನಮ್ಮನ್ನು ಆಪ್ತಮಿತ್ರರಂತೆ ವೀಕ್ಷಿಸುತ್ತಾನೆ. (ಕೀರ್ತ. 25:14) ಈ ಸುಯೋಗವನ್ನು ನಾವು ಮಾನ್ಯ ಮಾಡುವುದರಿಂದ ಆತನಿಗೆ ನೋವಾಗುವಂಥ ಯಾವ ವಿಷಯವನ್ನೂ ಮಾಡುವುದಿಲ್ಲ.

(ಯಾಜಕಕಾಂಡ 16:14, 15) ಆಗ ಆ ಹೋರಿಯು ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮಿಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮಿಕಿಸಬೇಕು. 15 ತರುವಾಯ ಅವನು ಜನರಿಗೋಸ್ಕರವಾದ ದೋಷಪರಿಹಾರಕಯಜ್ಞದ ಹೋತವನ್ನು ವಧಿಸಿ ಅದರ ರಕ್ತವನ್ನು ತೆರೆಯೊಳಗೆ ತಂದು ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ ಕೃಪಾಸನದ ಮೇಲೆಯೂ ಎದುರಾಗಿಯೂ ಚಿಮಿಕಿಸಬೇಕು.

ಕಾವಲಿನಬುರುಜು19.11 ಪುಟ 21 ಪ್ಯಾರ 6

ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು

6 ಮಹಾ ಯಾಜಕನು ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ಯಜ್ಞವನ್ನು ಅರ್ಪಿಸಬೇಕಿತ್ತು ಅನ್ನುವುದನ್ನು ಗಮನಿಸಿ. ಮೊದಲಿಗೆ ಪರಿಮಳಧೂಪವನ್ನು ಸುಡುವ ಮೂಲಕ ದೇವರು ತನ್ನನ್ನು ಮೆಚ್ಚಿದ್ದಾನೆ ಎಂದು ಅವನು ಖಚಿತಪಡಿಸಿಕೊಳ್ಳುತ್ತಿದ್ದನು. ನಾವಿದರಿಂದ ಯೇಸು ಬಗ್ಗೆ ಒಂದು ವಿಷಯವನ್ನು ಕಲಿಯಬಹುದು. ಯೇಸು ಭೂಮಿಯಲ್ಲಿದ್ದಾಗ ಮನುಷ್ಯರಿಗಾಗಿ ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸುವುದಕ್ಕಿಂತ ಮುಂಚೆ ಅದಕ್ಕಿಂತಲೂ ಪ್ರಾಮುಖ್ಯವಾದ ಒಂದು ವಿಷಯವನ್ನು ಮಾಡಬೇಕಿತ್ತು. ಅದೇನಾಗಿತ್ತು? ಯೆಹೋವನು ಯೇಸುವಿನ ಯಜ್ಞ ಸ್ವೀಕರಿಸಬೇಕೆಂದರೆ ಯೇಸು ಜೀವನಪೂರ್ತಿ ಯೆಹೋವನು ಹೇಳಿದಂತೆ ನಡಕೊಳ್ಳಬೇಕಿತ್ತು, ನಿಷ್ಠೆಯಿಂದ ಇರಬೇಕಿತ್ತು. ಹೀಗೆ ಯೆಹೋವನು ಹೇಳುವ ತರ ಜೀವನ ಮಾಡುವುದೇ ಸರಿ ಎಂದು ಯೇಸು ತೋರಿಸಿಕೊಡಬೇಕಿತ್ತು. ತನ್ನ ತಂದೆಯ ಆಳ್ವಿಕೆಯೇ ಸರಿಯಾದದ್ದು, ನ್ಯಾಯವಾದದ್ದು ಎಂದು ಯೇಸು ರುಜುಪಡಿಸಬೇಕಿತ್ತು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ಯಾಜಕಕಾಂಡ 16:10) ಯಾವ ಹೋತ ಅಜಾಜೇಲನದೆಂದು ಗೊತ್ತಾಗುವದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ ಅದರ ಮೇಲೆ ದೋಷ ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಿಸಿಬಿಡಬೇಕು.

it-1-E ಪುಟ 226 ಪ್ಯಾರ 3

ಅಜಾಜೇಲ

ಅಪೊಸ್ತಲ ಪೌಲ ಹೇಳಿದ ಹಾಗೆ “ಹೋರಿಗಳ ಮತ್ತು ಆಡುಗಳ ರಕ್ತದಿಂದ” ಸಾಧಿಸೋಕೆ ಆಗ್ದೇ ಇದ್ದಿದ್ದನ್ನ ಯೇಸು ಸಾಧಿಸಿದನು. ಅಂದ್ರೆ ತನ್ನ ಪರಿಪೂರ್ಣವಾಗಿದ್ದ ಮಾನವ ಜೀವವನ್ನ ಯಜ್ಞವಾಗಿ ಕೊಟ್ಟು ಮಾನವಕುಲದ ಎಲ್ಲಾ ಪಾಪಗಳನ್ನ ತೆಗೆದುಹಾಕಿದನು. (ಇಬ್ರಿ 10:4, 11, 12) ಅಜಾಜೇಲನ ಹೋತದಂತೆ ‘ಅವನು ನಮ್ಮ ಕಷ್ಟಗಳನ್ನ ಹೊತ್ತುಕೊಂಡನು.’ “ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು.” (ಯೆಶಾ 53:4, 5; ಮತ್ತಾ 8:17; 1ಪೇತ್ರ 2:24) ಅವನು ತನ್ನ ಯಜ್ಞದಲ್ಲಿ ನಂಬಿಕೆ ಇಡುವವ್ರ ಪಾಪಗಳನ್ನ ‘ಹೊರುತ್ತಾನೆ.’ ಯೇಸು ಕ್ರಿಸ್ತ ಕೊಟ್ಟ ಯಜ್ಞದಿಂದ ಯೆಹೋವ ದೇವರು ನಮ್ಮ ಪಾಪಗಳನ್ನ ಪೂರ್ತಿಯಾಗಿ ಕ್ಷಮಿಸ್ತಾನೆ, ಅದನ್ನ ನೆನಪಿಸಿಕೊಳ್ಳೋದೂ ಇಲ್ಲ. ಹೀಗೆ ‘ಅಜಾಜೇಲನ ಹೋತ’ ಯೇಸು ಕ್ರಿಸ್ತನ ಯಜ್ಞವನ್ನ ಸೂಚಿಸ್ತು.

(ಯಾಜಕಕಾಂಡ 17:10, 11) ಇದಲ್ಲದೆ ಇಸ್ರಾಯೇಲ್ಯರಲ್ಲಿಯಾಗಲಿ ಅವರ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು. 11 ಯಾಕಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ.

ಕಾವಲಿನಬುರುಜು14 11/15 ಪುಟ 10 ಪ್ಯಾರ 10

ನಾವು ಪರಿಶುದ್ಧರಾಗಿರಬೇಕು—ಏಕೆ?

10 ಯಾಜಕಕಾಂಡ 17:10 ಓದಿ. ಇಸ್ರಾಯೇಲ್ಯರು “ರಕ್ತಭೋಜನ” ಮಾಡಬಾರದು ಇಲ್ಲವೇ ಪವಿತ್ರ ಗ್ರಂಥ ಭಾಷಾಂತರ ಹೇಳುವಂತೆ “ಯಾವುದೇ ತರದ ರಕ್ತ” ತಿನ್ನಬಾರದೆಂದು ಯೆಹೋವನು ಆಜ್ಞೆ ಕೊಟ್ಟಿದ್ದನು. ಇದು ಕ್ರೈಸ್ತರಿಗೂ ಅನ್ವಯವಾಗುವ ನಿಯಮ. ಅವರು ಮಾನವ ಇಲ್ಲವೆ ಪ್ರಾಣಿ ರಕ್ತವನ್ನು ವಿಸರ್ಜಿಸಬೇಕು. (ಅ. ಕಾ. 15:28, 29) ಯೆಹೋವನು ನಮ್ಮ ಮೇಲೆ ‘ಉಗ್ರ ಕೋಪ ಮಾಡಿ,’ ತನ್ನ ಸಭೆಯಿಂದ ನಮ್ಮನ್ನು ತೆಗೆದುಹಾಕುವಂತೆ ಮಾಡುವ ಯಾವುದೇ ಕೆಲಸಕ್ಕೆ ಕೈಹಾಕಲು ನಮಗಿಷ್ಟವಿಲ್ಲ. ನಾವಾತನನ್ನು ಪ್ರೀತಿಸುತ್ತೇವೆ. ಆತನಿಗೆ ವಿಧೇಯರಾಗಲು ಬಯಸುತ್ತೇವೆ. ಯೆಹೋವನ ಬಗ್ಗೆ ತಿಳಿಯದ ಮತ್ತು ಆತನಿಗೆ ವಿಧೇಯರಾಗುವುದರ ಬಗ್ಗೆ ಸ್ವಲ್ಪವೂ ಚಿಂತಿಸದ ಜನರ ವಿನಂತಿ, ಬೇಡಿಕೆಗಳಿಗೆ ಮಣಿಯಬಾರದೆಂಬ ದೃಢನಿರ್ಣಯ ಮಾಡಿದ್ದೇವೆ. ಜೀವಕ್ಕೆ ಅಪಾಯವಿದ್ದರೂ ಸರಿ ಈ ನಿರ್ಣಯಕ್ಕೆ ಅಂಟಿಕೊಳ್ಳುತ್ತೇವೆ. ರಕ್ತವನ್ನು ತೆಗೆದುಕೊಳ್ಳದೆ ಇರುವುದಕ್ಕಾಗಿ ಅಪಹಾಸ್ಯಕ್ಕೀಡಾಗುವೆವು ಎಂದು ನಮಗೆ ತಿಳಿದಿದೆ. ಹಾಗಿದ್ದರೂ ದೇವರಿಗೆ ವಿಧೇಯರಾಗುವ ಆಯ್ಕೆ ಮಾಡುತ್ತೇವೆ. (ಯೂದ 17, 18) ರಕ್ತ ತಿನ್ನಬಾರದು ಅಥವಾ ರಕ್ತಪೂರಣ ತೆಗೆದುಕೊಳ್ಳಬಾರದೆಂಬ ದೃಢಸಂಕಲ್ಪವನ್ನು ಬಲಪಡಿಸಲು ಅದರ ಕುರಿತು ನಮಗೆ ಯಾವ ನೋಟ ಇರಬೇಕು?—ಧರ್ಮೋ. 12:23.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ