ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w20 ಮಾರ್ಚ್‌ ಪು. 18-23
  • ಯಾವಾಗ ಮಾತಾಡ್ಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾವಾಗ ಮಾತಾಡ್ಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾವಾಗ ಮಾತಾಡ್ಬೇಕು?
  • ಯಾವಾಗ ಸುಮ್ಮನಿರಬೇಕು?
  • ನಮ್ಮ ಮಾತಿನ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?
  • ವಿವೇಚನೆಯಿಂದ ಕ್ರಿಯೆಗೈದಾಕೆ
    ಅವರ ನಂಬಿಕೆಯನ್ನು ಅನುಕರಿಸಿ
  • ವಿವೇಚನೆಯಿಂದ ಕ್ರಿಯೆಗೈದಾಕೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅಬೀಗೈಲ್‌ ಮತ್ತು ದಾವೀದ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಬುದ್ಧಿವಂತ ಸ್ತ್ರೀಯೊಬ್ಬಳು ಅನಾಹುತವನ್ನು ವಿಮುಖಗೊಳಿಸುತ್ತಾಳೆ
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
w20 ಮಾರ್ಚ್‌ ಪು. 18-23

ಅಧ್ಯಯನ ಲೇಖನ 12

ಯಾವಾಗ ಮಾತಾಡ್ಬೇಕು?

“ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. . . . ಸುಮ್ಮನಿರುವ ಸಮಯ, ಮಾತಾಡುವ ಸಮಯ.”—ಪ್ರಸಂ. 3:1, 7.

ಗೀತೆ 63 ಸದಾ ನಿಷ್ಠರು

ಕಿರುನೋಟa

1. ಪ್ರಸಂಗಿ 3:1, 7 ರಿಂದ ನಾವೇನು ಕಲಿಯುತ್ತೇವೆ?

ನಮ್ಮಲ್ಲಿ ಕೆಲವ್ರು ಯಾವಾಗ ನೋಡಿದ್ರೂ ವಟವಟ ಅಂತಾನೇ ಇರ್ತಾರೆ. ಇನ್ನು ಕೆಲವ್ರು ಏನೇ ಆದ್ರೂ ತುಟಿಕ್‌ ಪಿಟಿಕ್‌ ಅನ್ನಲ್ಲ. ಈ ಲೇಖನದ ಮುಖ್ಯ ವಚನ ತಿಳಿಸುವ ಪ್ರಕಾರ ಮಾತಾಡೋಕೂ ಸುಮ್ಮನಿರೋದಕ್ಕೂ ತಕ್ಕ ಸಮಯವಿದೆ. (ಪ್ರಸಂಗಿ 3:1, 7 ಓದಿ.) ಆದ್ರೆ ಕೆಲವು ಸಹೋದರ ಸಹೋದರಿಯರು ಸ್ವಲ್ಪ ಜಾಸ್ತಿ ಮಾತಾಡ್ಬೇಕು ಅಂತ ನಮ್ಗೆ ಅನಿಸಬಹುದು. ಇನ್ನೂ ಕೆಲವು ಸಹೋದರ ಸಹೋದರಿಯರು ಸ್ವಲ್ಪ ಕಡಿಮೆ ಮಾತಾಡ್ಬೇಕು ಅಂತನೂ ಅನಿಸಬಹುದು.

2. ನಾವು ಯಾವಾಗ ಮಾತಾಡ್ಬೇಕು, ಹೇಗೆ ಮಾತಾಡ್ಬೇಕು ಅನ್ನೋ ನಿಯಮ ಮಾಡೋ ಅಧಿಕಾರ ಯಾರಿಗಿದೆ?

2 ಮಾತು ಯೆಹೋವನು ಕೊಟ್ಟ ಉಡುಗೊರೆ. (ವಿಮೋ. 4:10, 11; ಪ್ರಕ. 4:11) ಈ ಉಡುಗೊರೆಯನ್ನು ಹೇಗೆ ಸರಿಯಾಗಿ ಉಪಯೋಗಿಸಬಹುದು ಅನ್ನೋದನ್ನ ತನ್ನ ವಾಕ್ಯವಾದ ಬೈಬಲಿನಲ್ಲಿ ಆತ ತಿಳಿಸಿದ್ದಾನೆ. ಈ ಲೇಖನದಲ್ಲಿ ನಾವು ಯಾವಾಗ ಮಾತಾಡ್ಬೇಕು, ಯಾವಾಗ ಸುಮ್ಮನಿರಬೇಕು ಅಂತ ತಿಳುಕೊಳ್ಳೋಕೆ ಸಹಾಯ ಮಾಡೋ ಕೆಲವು ಬೈಬಲ್‌ ಉದಾಹರಣೆಗಳನ್ನು ಗಮನಿಸಲಿದ್ದೇವೆ. ನಾವು ಬೇರೆಯವ್ರಿಗೆ ಏನು ಹೇಳುತ್ತೇವೋ ಅದ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅನ್ನೋದನ್ನ ಕೂಡ ನೋಡಲಿದ್ದೇವೆ. ಮೊದ್ಲು, ಯಾವಾಗ ಮಾತಾಡ್ಬೇಕು ಅಂತ ನೋಡೋಣ.

ಯಾವಾಗ ಮಾತಾಡ್ಬೇಕು?

3. ರೋಮನ್ನರಿಗೆ 10:14 ರ ಪ್ರಕಾರ ಸಾರುವುದರ ಬಗ್ಗೆ ನಮಗೆ ಯಾವ ಮನೋಭಾವ ಇರಬೇಕು?

3 ನಾವು ಯಾವಾಗ್ಲೂ ಯೆಹೋವನ ಬಗ್ಗೆ ಮತ್ತು ಆತನ ರಾಜ್ಯದ ಬಗ್ಗೆ ಮಾತಾಡಲು ಸಿದ್ಧರಿರಬೇಕು. (ಮತ್ತಾ. 24:14; ರೋಮನ್ನರಿಗೆ 10:14 ಓದಿ.) ಹೀಗೆ ಮಾಡೋದಾದ್ರೆ ಯೇಸುವನ್ನು ಅನುಕರಿಸುತ್ತೇವೆ. ಯೇಸು ಭೂಮಿಗೆ ಬಂದ ಒಂದು ಮುಖ್ಯ ಕಾರಣ ಯೆಹೋವನ ಬಗ್ಗೆ ಸತ್ಯವನ್ನ ಬೇರೆಯವ್ರಿಗೆ ತಿಳಿಸೋದಾಗಿತ್ತು. (ಯೋಹಾ. 18:37) ಆದ್ರೆ ಒಂದು ವಿಷ್ಯ ಮರೆಯಬಾರ್ದು. ಅದೇನೆಂದ್ರೆ ನಾವು ಹೇಗೆ ಮಾತಾಡ್ತೇವೆ ಅನ್ನೋದು ಕೂಡ ತುಂಬ ಮುಖ್ಯ. ನಾವು ಯೆಹೋವನ ಬಗ್ಗೆ ಬೇರೆಯವ್ರ ಹತ್ರ ಮಾತಾಡ್ವಾಗ “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಮಾತಾಡ್ಬೇಕು. ಅವರ ಭಾವನೆಗಳನ್ನು ಮತ್ತು ಅವರ ನಂಬಿಕೆಗಳನ್ನು ಅರ್ಥಮಾಡಿಕೊಳ್ಬೇಕು. (1 ಪೇತ್ರ 3:15) ಹೀಗೆ ಮಾಡ್ವಾಗ ನಾವು ಬರೀ ಮಾತಾಡೋದು ಮಾತ್ರವಲ್ಲ ಯೆಹೋವನ ಬಗ್ಗೆ ಕಲಿಸ್ಬಹುದು ಮತ್ತು ಅವರ ಮನಸ್ಸನ್ನು ಗೆಲ್ಲಬಹುದು.

ಯಾವಾಗ ಮಾತಾಡ್ಬೇಕು?

  • ಯೆಹೋವನ ಬಗ್ಗೆ ಸಾರೋ ಅವಕಾಶ ಸಿಕ್ಕಾಗ ಮಾತಾಡ್ಬೇಕು. ಆದ್ರೆ “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಮಾತಾಡ್ಬೇಕು. ಅವರ ನಂಬಿಕೆಗಳಿಗೆ ಬೆಲೆ ಕೊಡಬೇಕು (ಪ್ಯಾರ 3)

  • ಯಾರಾದ್ರೂ ತಪ್ಪು ದಾರಿ ಹಿಡಿಯುತ್ತಿದ್ದಾರೆ ಅಂತ ನಮ್ಗೆ ಗೊತ್ತಾದಾಗ ಮಾತಾಡ್ಬೇಕು

  • ಯಾರಿಗಾದರೂ ಸಲಹೆ ಕೊಡಬೇಕಾಗಿ ಬಂದಾಗ ಹಿರಿಯರು ಮಾತಾಡ್ಬೇಕು. ಆದ್ರೆ ತಾಳ್ಮೆಯಿಂದ, ಒಳ್ಳೇ ರೀತಿಯಲ್ಲಿ ಮಾತಾಡ್ಬೇಕು

ಇಬ್ಬರು ಸಹೋದರಿಯರು ಶಾಪಿಂಗ್‌ ಮಾಡೋಕೆ ಬಟ್ಟೆ ಅಂಗಡಿಗೆ ಹೋಗಿದ್ದಾರೆ. ಒಬ್ಬ ಸಹೋದರಿ ಆರಿಸಿಕೊಂಡ ಸ್ಕರ್ಟ್‌ ತುಂಬ ಚಿಕ್ಕದಿದೆ ಅಷ್ಟು ಸಭ್ಯವಾಗಿಲ್ಲ ಎಂದು ಇನ್ನೊಬ್ಬ ಸಹೋದರಿ ಸಲಹೆ ಕೊಡ್ತಿದ್ದಾಳೆ.

(ಪ್ಯಾರ 8 ನೋಡಿ)b

ಒಬ್ಬ ಹಿರಿಯನು ಯುವ ಸಹೋದರನೊಬ್ಬನಿಗೆ ಬೈಬಲ್‌ನಿಂದ ಶುಚಿತ್ವದ ಬಗ್ಗೆ ಸಲಹೆ ಕೊಡ್ತಿದ್ದಾನೆ. ಆ ಯುವ ಸಹೋದರನ ಮನೆ ಕ್ಲೀನಾಗಿಲ್ಲ.

(ಪ್ಯಾರ 4, 9 ನೋಡಿ)c

4. ಜ್ಞಾನೋಕ್ತಿ 9:9 ಹೇಳೋ ಪ್ರಕಾರ ನಮ್ಮ ಮಾತಿನಿಂದ ಬೇರೆಯವ್ರಿಗೆ ಹೇಗೆ ಸಹಾಯ ಆಗುತ್ತೆ?

4 ಒಬ್ಬ ಸಹೋದರ ಅಥ್ವಾ ಸಹೋದರಿಗೆ ಸಲಹೆ ಕೊಡಬೇಕಿದ್ದಾಗ ಹಿರಿಯರು ಅವರ ಹತ್ರ ಮಾತಾಡೋಕೆ ಹಿಂದೆಮುಂದೆ ನೋಡಬಾರ್ದು. ಆದ್ರೆ ಆ ವ್ಯಕ್ತಿಗೆ ಮುಜುಗರ ಆಗದೇ ಇರಲಿಕ್ಕೋಸ್ಕರ ಸರಿಯಾದ ಸಮ್ಯ ನೋಡಿ ಮಾತಾಡ್ಬೇಕು. ಅಂದ್ರೆ, ಅವರೊಬ್ಬರೇ ಇರೋ ಸಮ್ಯ ನೋಡ್ಕೊಂಡು ಮಾತಾಡ್ಬೇಕು. ಹಿರಿಯರು ಸಲಹೆ ಕೊಡುವಾಗೆಲ್ಲಾ ಗೌರವ ಕೊಟ್ಟು ಮಾತಾಡ್ತಾರೆ. ಆದ್ರೆ ಅವರಿಗೆ ಬೇಕಾದಂಥ ಬೈಬಲ್‌ ತತ್ವವನ್ನ ಹೇಳದೇ ಇರಲ್ಲ. ಯಾಕಂದ್ರೆ ಅದು ಅವ್ರಿಗೆ ವಿವೇಕದಿಂದ ನಡಕೊಳ್ಳೋಕೆ ಸಹಾಯ ಮಾಡುತ್ತೆ. (ಜ್ಞಾನೋಕ್ತಿ 9:9 ಓದಿ.) ಅಗತ್ಯವಿದ್ದಾಗ ಧೈರ್ಯದಿಂದ ಮಾತಾಡೋದು ಯಾಕಷ್ಟು ಪ್ರಾಮುಖ್ಯ? ಇದನ್ನು ತಿಳುಕೊಳ್ಳೋಕೆ ಎರಡು ಉದಾಹರಣೆ ನೋಡೋಣ. ಮೊದಲ್ನೇ ಉದಾಹರಣೆಯಲ್ಲಿ, ಒಬ್ಬ ವ್ಯಕ್ತಿ ತನ್ನ ಮಕ್ಕಳನ್ನು ತಿದ್ದಬೇಕಿತ್ತು. ಎರಡ್ನೇ ಉದಾಹರಣೆಯಲ್ಲಿ, ಒಬ್ಬ ಸ್ತ್ರೀ ಭಾವೀ ರಾಜ ಮಾಡಿದ ತಪ್ಪನ್ನು ಅವನಿಗೆ ತಿಳಿಸ್ಬೇಕಿತ್ತು.

5. ಮಹಾ ಯಾಜಕ ಏಲಿ ಮಾತಾಡ್ಬೇಕಿದ್ರೂ ಸುಮ್ಮನಿದ್ದದ್ದು ಯಾವಾಗ?

5 ಮಹಾ ಯಾಜಕ ಏಲಿಗೆ ಇಬ್ಬರು ಗಂಡು ಮಕ್ಕಳಿದ್ರು. ಅವನಿಗೆ ಅವರಂದ್ರೆ ಪಂಚಪ್ರಾಣ. ಆದ್ರೆ ಈ ಇಬ್ಬರು ಮಕ್ಕಳಿಗೆ ಯೆಹೋವನ ಮೇಲೆ ಒಂಚೂರು ಗೌರವ ಇರ್ಲಿಲ್ಲ. ಅವ್ರು ದೇವಗುಡಾರದಲ್ಲಿ ಯಾಜಕರಾಗಿ ಕೆಲ್ಸ ಮಾಡ್ತಿದ್ದರು. ಆದ್ರೆ ಅವ್ರು ತಮಗಿದ್ದ ಅಧಿಕಾರವನ್ನ ದುರುಪಯೋಗಿಸಿದರು. ಯೆಹೋವನಿಗೆ ಕೊಡ್ತಿದ್ದ ಯಜ್ಞಗಳಿಗೆ ಅಗೌರವ ತೋರಿಸಿದ್ರು ಮತ್ತು ಒಂದು ಸ್ವಲ್ಪನೂ ನಾಚಿಕೆಯಿಲ್ಲದೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ರು. (1 ಸಮು. 2:12-17, 22) ಧರ್ಮಶಾಸ್ತ್ರದ ಪ್ರಕಾರ ಇಂಥ ತಪ್ಪು ಮಾಡುವವರನ್ನು ಸಾಯಿಸಬೇಕಿತ್ತು. ಆದ್ರೆ ಏಲಿ ಅವ್ರನ್ನು ಮೃದುವಾಗಿ ಗದರಿ ಸುಮ್ಮನಾಗಿಬಿಟ್ಟನು. ಅವ್ರು ಇಷ್ಟೆಲ್ಲಾ ತಪ್ಪು ಮಾಡಿದ್ರೂ ದೇವಗುಡಾರದಲ್ಲಿ ಸೇವೆ ಮಾಡೋಕೆ ಅನುಮತಿಸಿದನು. (ಧರ್ಮೋ. 21:18-21) ಏಲಿ ನಡಕೊಂಡ ರೀತಿಯನ್ನು ನೋಡ್ವಾಗ ಯೆಹೋವನಿಗೆ ಹೇಗನಿಸ್ತು? “ನೀನು ನನ್ನನ್ನು ಗೌರವಿಸುವದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವದು ಸರಿಯೋ?” ಅಂತ ಯೆಹೋವನು ಏಲಿಗೆ ಕೇಳಿದ್ನು. ಏಲಿಯ ಮಕ್ಕಳನ್ನ ಸಾಯಿಸೋ ತೀರ್ಮಾನ ಮಾಡಿದ್ನು.—1 ಸಮು. 2:29, 34.

6. ಏಲಿಯಿಂದ ನಾವೇನು ಕಲೀಬಹುದು?

6 ಏಲಿಯಿಂದ ನಾವು ಒಂದು ಒಳ್ಳೇ ಪಾಠ ಕಲೀಬಹುದು. ನಮ್ಮ ಸ್ನೇಹಿತರೋ ಸಂಬಂಧಿಕರೋ ದೇವರ ನಿಯಮವನ್ನ ಮುರಿಯೋದಾದ್ರೆ ನಾವು ಅವ್ರ ಹತ್ರ ಹೋಗಿ ಮಾತಾಡ್ಬೇಕು. ಯೆಹೋವನ ತತ್ವಗಳನ್ನ ಅವ್ರಿಗೆ ನೆನಪಿಸ್ಬೇಕು. ಯೆಹೋವನು ನೇಮಿಸಿರುವಂಥ ವ್ಯಕ್ತಿಗಳಿಂದ ಅವ್ರು ಸಹಾಯವನ್ನ ಪಡಕೊಳ್ಳೋಕೆ ಬೇಕಾದ ಏರ್ಪಾಡನ್ನು ನಾವು ಮಾಡ್ಬೇಕು. (ಯಾಕೋ. 5:14) ಆದ್ರೆ ಏಲಿಯಂತೆ ಯೆಹೋವನಿಗಿಂತ ಹೆಚ್ಚಾಗಿ ನಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಗೌರವ ಕೊಡಬಾರ್ದು. ತಪ್ಪು ಮಾಡಿದವ್ರ ಹತ್ರ ಹೋಗಿ ಮಾತಾಡೋಕೆ ತುಂಬ ಧೈರ್ಯ ಬೇಕು ನಿಜ. ಆದ್ರೆ ಹಾಗೆ ಮಾಡೋದ್ರಿಂದ ತುಂಬ ಪ್ರಯೋಜನ ಆಗುತ್ತೆ. ಈಗ ನಾವು ಏಲಿ ನಡಕೊಂಡ ರೀತಿಗೂ ಇಸ್ರಾಯೇಲ್ಯ ಸ್ತ್ರೀಯಾದ ಅಬೀಗೈಲ್‌ ನಡಕೊಂಡ ರೀತಿಗೂ ಎಷ್ಟು ವ್ಯತ್ಯಾಸ ಇದೆ ಅಂತ ಗಮನಿಸೋಣ.

ಅಬೀಗೈಲ ಮೊಣಕಾಲೂರಿ ದಾವೀದನ ಹತ್ರ ಮಾತಾಡ್ತಿದ್ದಾಳೆ.

ಸರಿಯಾದ ಸಮಯ ನೋಡಿ ಮಾತಾಡೋ ಮೂಲಕ ಅಬೀಗೈಲಳು ಒಳ್ಳೇ ಮಾದರಿ ಇಟ್ಟಳು (ಪ್ಯಾರ 7-8 ನೋಡಿ)d

7. ಅಬೀಗೈಲಳು ಯಾಕೆ ದಾವೀದನ ಹತ್ರ ಮಾತಾಡಿದಳು?

7 ಅಬೀಗೈಲಳು ಶ್ರೀಮಂತ ವ್ಯಕ್ತಿ ನಾಬಾಲನ ಹೆಂಡತಿಯಾಗಿದ್ದಳು. ದಾವೀದ ಮತ್ತು ಅವನ ಸೇವಕರು ಸೌಲನಿಂದ ತಪ್ಪಿಸಿಕೊಂಡು ಅಲೆದಾಡುತ್ತಿದ್ದಾಗ ಸ್ವಲ್ಪ ಸಮಯ ನಾಬಾಲನ ಕುರುಬರ ಜೊತೆ ಇದ್ರು. ಆ ಸಮಯದಲ್ಲಿ ಅವ್ರು ನಾಬಾಲನ ಕುರಿಹಿಂಡನ್ನು ಕಳ್ಳಕಾಕರಿಂದ ಕಾಪಾಡಿದ್ರು. ಇದಕ್ಕೆ ನಾಬಾಲ ಕೃತಜ್ಞನಾಗಿದ್ದನಾ? ಇಲ್ಲ. ತನಗೂ ತನ್ನ ಜನ್ರಿಗೂ ಊಟ, ನೀರನ್ನು ಕೊಡು ಅಂತ ದಾವೀದ ಕೇಳಿಕೊಂಡಾಗ ನಾಬಾಲ ಕೋಪದಿಂದ ರೇಗಾಡಿದ ಮತ್ತು ಅವಮಾನ ಮಾಡಿದ. (1 ಸಮು. 25:5-8, 10-12, 14) ಅದಕ್ಕೆ ದಾವೀದ ನಾಬಾಲನ ಮನೆಯಲ್ಲಿರುವ ಎಲ್ಲಾ ಗಂಡಸರನ್ನು ಸಾಯಿಸೋ ಶಪಥ ಮಾಡಿದ. (1 ಸಮು. 25:13, 22) ಈ ಅನಾಹುತನ ಯಾರಿಂದಾದ್ರೂ ತಪ್ಪಿಸೋಕೆ ಆಯ್ತಾ? ಈ ವಿಷ್ಯ ಅಬೀಗೈಲಳಿಗೆ ಗೊತ್ತಾದಾಗ ಇದು ತಾನು ಮಾತಾಡೋ ಸಮಯ ಅಂತ ಅರ್ಥಮಾಡಿಕೊಂಡಳು. ಹಸಿವೆ-ಕೋಪದಿಂದ ರೊಚ್ಚಿಗೆದ್ದಿದ್ದ ದಾವೀದ ಮತ್ತು ಅವನ 400 ಮಂದಿ ಸೈನಿಕರ ಹತ್ರ ಹೋಗಿ ಧೈರ್ಯದಿಂದ ಮಾತಾಡಿದಳು.

8. ಅಬೀಗೈಲಳಿಂದ ನಾವೇನು ಕಲೀಬಹುದು?

8 ಅಬೀಗೈಲಳು ದಾವೀದನ ಹತ್ರ ಧೈರ್ಯದಿಂದ, ಗೌರವದಿಂದ, ಮನ ಒಪ್ಪಿಸೋ ರೀತಿ ಮಾತಾಡಿದಳು. ಇಷ್ಟೆಲ್ಲಾ ಆಗೋಕೆ ತಾನು ಕಾರಣ ಅಲ್ಲದಿದ್ರೂ ದಾವೀದನ ಹತ್ರ ಕ್ಷಮೆ ಕೇಳಿದಳು. ದಾವೀದ ಒಬ್ಬ ಒಳ್ಳೇ ವ್ಯಕ್ತಿ ಮತ್ತು ಸರಿಯಾದದ್ದನ್ನೇ ಮಾಡ್ತಾನೆ ಅಂತ ಅವಳಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಂಡಳು. (1 ಸಮು. 25:24, 26, 28, 33, 34) ಯಾರಾದ್ರೂ ತಪ್ಪು ದಾರಿ ಹಿಡಿಯುತ್ತಿದ್ದಾರೆ ಅಂತ ನಮ್ಗೆ ಗೊತ್ತಾದ್ರೆ ನಾವು ಸಹ ಅಬೀಗೈಲಳಂತೆ ಧೈರ್ಯದಿಂದ ಮಾತಾಡ್ಬೇಕು. (ಕೀರ್ತ. 141:5) ಆದ್ರೆ ನಾವು ತುಂಬ ಗೌರವ ಕೊಟ್ಟು ಮಾತಾಡ್ಬೇಕು. ಅಂಥ ವ್ಯಕ್ತಿಗೆ ಬೇಕಾದ ಸಲಹೆಯನ್ನ ಪ್ರೀತಿಯಿಂದ ಕೊಡೋದಾದ್ರೆ ನಾವು ಅವ್ರ ನಿಜ ಸ್ನೇಹಿತರು ಅಂತ ತೋರಿಸಿಕೊಡ್ತೇವೆ.—ಜ್ಞಾನೋ. 27:17.

9-10. ಬೇರೆಯವ್ರಿಗೆ ಸಲಹೆ ಕೊಡುವಾಗ ಹಿರಿಯರು ಏನನ್ನು ಮನಸ್ಸಲ್ಲಿಡಬೇಕು?

9 ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯರು, ಸಭೆಯಲ್ಲಿರೋ ಯಾರಾದ್ರೂ ತಪ್ಪು ದಾರಿ ಹಿಡಿಯುತ್ತಿದ್ದರೆ ಅವರತ್ರ ಮಾತಾಡಲು ಧೈರ್ಯ ತೋರಿಸ್ಬೇಕು. (ಗಲಾ. 6:1) ತಾವು ಸಹ ಅಪರಿಪೂರ್ಣರು, ತಮಗೂ ಸಲಹೆ ಬೇಕು ಅನ್ನೋದನ್ನ ಹಿರಿಯರು ಒಪ್ಪಿಕೊಳ್ತಾರೆ. ಹಾಗಂತ ಶಿಸ್ತು ಬೇಕಿದ್ದವ್ರಿಗೆ ಅದನ್ನ ಕೊಡೋಕೆ ಹಿಂದೇಟು ಹಾಕಲ್ಲ. (2 ತಿಮೊ. 4:2; ತೀತ 1:9) ಒಬ್ಬ ವ್ಯಕ್ತಿಗೆ ಸಲಹೆ ಕೊಡುವಾಗ ಅವ್ರು ಒಳ್ಳೇ ರೀತಿಯಲ್ಲಿ ತಾಳ್ಮೆಯಿಂದ ಮಾತಾಡ್ತಾರೆ. ಅವ್ರು ತಮ್ಮ ಸಹೋದರರನ್ನ ಪ್ರೀತಿಸುವುದರಿಂದಲೇ ಅವ್ರಿಗೆ ಸಹಾಯ ಮಾಡ್ತಾರೆ. (ಜ್ಞಾನೋ. 13:24) ಆದ್ರೆ ಯೆಹೋವನ ನಿಯಮಗಳನ್ನ ಗೌರವಿಸುವುದು ಮತ್ತು ಸಭೆಯನ್ನು ಕಾಪಾಡುವುದೇ ಅವ್ರಿಗೆ ಎಲ್ಲಕ್ಕಿಂತ ಮುಖ್ಯವಾಗಿರುತ್ತೆ.—ಅ. ಕಾ. 20:28.

10 ನಾವು ಯಾವಾಗ ಮಾತಾಡ್ಬೇಕು ಅನ್ನೋದನ್ನ ಇಷ್ಟರವರೆಗೆ ತಿಳುಕೊಂಡ್ವಿ. ಆದ್ರೆ ಕೆಲವೊಂದು ಸಮಯದಲ್ಲಿ ನಾವು ಸುಮ್ಮನಿರುವುದೇ ಒಳ್ಳೇದು. ನಾವು ಯಾವಾಗೆಲ್ಲ ಸುಮ್ಮನಿರಬೇಕು ಅಂತ ಮುಂದಿನ ಪ್ಯಾರಗಳಲ್ಲಿ ತಿಳಿಯಲಿದ್ದೇವೆ.

ಯಾವಾಗ ಸುಮ್ಮನಿರಬೇಕು?

11. (ಎ) ಯಾಕೋಬ ಯಾವ ಉದಾಹರಣೆ ಉಪಯೋಗಿಸಿದ್ದಾನೆ? (ಬಿ) ಇದನ್ನು ನಮ್ಮ ಮಾತಿಗೆ ಹೇಗೆ ಹೋಲಿಸಬಹುದು?

11 ಕೆಲವೊಂದು ಸಮಯದಲ್ಲಿ ಮಾತಾಡದೇ ಇರೋಕೆ ತುಂಬ ಕಷ್ಟ ಆಗಬಹುದು. ಬೈಬಲ್‌ ಲೇಖಕನಾದ ಯಾಕೋಬ ಇದರ ಬಗ್ಗೆ ಹೀಗೆ ಹೇಳಿದ್ದಾನೆ: “ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣನೂ ತನ್ನ ಇಡೀ ದೇಹಕ್ಕೆ ಕಡಿವಾಣ ಹಾಕಲು ಶಕ್ತನೂ ಆಗಿದ್ದಾನೆ.” (ಯಾಕೋ. 3:2, 3) ಸಾಮಾನ್ಯವಾಗಿ ಕಡಿವಾಣವನ್ನು ಕುದುರೆಯ ಬಾಯಲ್ಲಿ ಹಾಕಲಾಗುತ್ತೆ. ಅದಕ್ಕೆ ಜೋಡಿಸಿರುವ ಲಗಾಮನ್ನು ಕುದುರೆ ಸವಾರನು ಹಿಡಿದೆಳೆಯುವ ಮೂಲಕ ಕುದುರೆ ಯಾವ ದಿಕ್ಕಿಗೆ ಹೋಗ್ಬೇಕು, ಯಾವಾಗ ನಿಲ್ಲಬೇಕು ಅಂತ ಸೂಚಿಸುತ್ತಾನೆ. ಒಂದುವೇಳೆ ಲಗಾಮು ಸವಾರನ ಕೈತಪ್ಪಿ ಹೋದ್ರೆ ಕುದುರೆ ಇಷ್ಟ ಬಂದಲ್ಲಿಗೆ ಓಡಿಹೋಗಬಹುದು. ಇದ್ರಿಂದ ಕುದುರೆಗೂ ಸವಾರನಿಗೂ ಹಾನಿ ಆಗುತ್ತೆ. ಅದೇ ರೀತಿ ನಾವು ನಮ್ಮ ಮಾತನ್ನ ನಿಯಂತ್ರಣದಲ್ಲಿ ಇಡದಿದ್ದರೆ ತುಂಬ ಹಾನಿಯಾಗುತ್ತೆ. ಅನೇಕ ಸಮಸ್ಯೆಗಳು ಸಹ ಬರಬಹುದು. ನಾವು ಯಾವೆಲ್ಲಾ ಸಂದರ್ಭದಲ್ಲಿ ಲಗಾಮನ್ನು ಎಳೀಬೇಕು ಅಥವಾ ಮಾತಾಡದೇ ಸುಮ್ಮನಿರಬೇಕು ಅಂತ ಈಗ ನೋಡೋಣ.

ಯಾವಾಗ ಸುಮ್ಮನಿರಬೇಕು?

  • ನಿಷೇಧ ಇರುವಂಥ ದೇಶದಲ್ಲಿ ನಮ್ಮ ಕೆಲ್ಸ ಹೇಗೆ ನಡೀತಿದೆ ಅನ್ನೋದನ್ನು ಹೇಳ್ಬೇಕು ಅನಿಸಿದಾಗ ಸುಮ್ಮನಿರಬೇಕು

  • ಸಭೆಯಲ್ಲಿ ಸೂಕ್ಷ್ಮವಾದ, ಗುಟ್ಟಾಗಿ ಇಡಬೇಕಾದ ವಿಷ್ಯಗಳಿದ್ರೆ ಅದ್ರ ಬಗ್ಗೆ ಮಾತಾಡ್ದೆ ಸುಮ್ಮನಿರಬೇಕು

ಒಂದು ರಾಜ್ಯ ಸಭಾಗೃಹದಲ್ಲಿ ಬೇರೆ ಕಡೆಯಿಂದ ಬಂದ ದಂಪತಿಯ ಸುತ್ತ ಸ್ಥಳೀಯ ಪ್ರಚಾರಕರು ನಿಂತುಕೊಂಡು ಪ್ರಶ್ನೆಗಳನ್ನ ಕೇಳ್ತಿದ್ದಾರೆ.

(ಪ್ಯಾರ 12 ನೋಡಿ)e

ಒಬ್ಬ ಹಿರಿಯ ಫೋನ್‌ನಲ್ಲಿ ಮಾತಾಡ್ತಾ ತನ್ನ ಹಿಂದಿರುವ ಬಾಗಿಲನ್ನು ಮುಚ್ಚುತ್ತಿದ್ದಾನೆ. ಅವನ ಹೆಂಡತಿ ಆ ರೂಮ್‌ನಲ್ಲಿ ಓದುತ್ತಿದ್ದಾಳೆ.

(ಪ್ಯಾರ 13-14 ನೋಡಿ)f

12. ನಾವು ಯಾವಾಗ ಮಾತಾಡದೇ ಸುಮ್ಮನಿರಬೇಕು?

12 ಯಾರ ಹತ್ರನೂ ಹೇಳಬಾರದ ವಿಷ್ಯ ಒಬ್ಬ ಸಹೋದರ ಅಥವಾ ಸಹೋದರಿಗೆ ಗೊತ್ತಿದ್ರೆ ನೀವೇನು ಮಾಡ್ತೀರ? ಉದಾಹರಣೆಗೆ, ನಮ್ಮ ಕೆಲಸದ ಮೇಲೆ ನಿಷೇಧ ಇರುವಂಥ ದೇಶದ ಸಹೋದರ ಅಥವಾ ಸಹೋದರಿ ನಿಮ್ಗೆ ಸಿಕ್ಕಿದ್ದಾರೆ ಅಂದ್ಕೊಳ್ಳಿ. ಆಗ ನೀವು, ಆ ದೇಶದಲ್ಲಿ ನಮ್ಮ ಕೆಲಸವನ್ನ ಹೇಗೆ ಮಾಡ್ತಿದ್ದಾರೆ ಅಂತ ಕೇಳೋಕೆ ಹೋಗ್ತೀರಾ? ಅವ್ರಿಗೆ ಹಾನಿ ಮಾಡೋ ಉದ್ದೇಶದಿಂದ ನಾವದನ್ನು ಕೇಳ್ದೇ ಇರಬಹುದು. ನಮ್ಮ ಸಹೋದರರ ಮೇಲೆ ಪ್ರೀತಿ ಇರೋದ್ರಿಂದ ಅವ್ರಿಗೆ ಏನಾಗ್ತಿದೆ ಅಂತ ತಿಳುಕೊಳ್ಳೋಕೆ ನಮ್ಗೆ ಆಸಕ್ತಿ ಇರುತ್ತೆ. ಅಷ್ಟೇ ಅಲ್ಲ, ನಾವು ಅವ್ರಿಗೋಸ್ಕರ ಪ್ರಾರ್ಥಿಸುವಾಗ ಅವ್ರ ಸಮಸ್ಯೆಯನ್ನ ನಿರ್ದಿಷ್ಟವಾಗಿ ಹೇಳೋಕೆ ಇಷ್ಟಪಡ್ತೇವೆ. ಅದಕ್ಕೇ ನಮ್ಗೆ ಆ ಪ್ರಶ್ನೆಯನ್ನ ಕೇಳಬೇಕಂತ ಅನಿಸಬಹುದು. ಆದ್ರೂ ಈ ಸನ್ನಿವೇಶದಲ್ಲಿ ನಾವು ಲಗಾಮನ್ನು ಎಳೀಬೇಕು ಅಂದ್ರೆ ಮಾತಾಡದೇ ಸುಮ್ಮನಿರಬೇಕು. ಯಾರಿಗೂ ಹೇಳಬಾರದ ವಿಷ್ಯವನ್ನ ನಮ್ಗೆ ಹೇಳೋಕೆ ಒಬ್ಬ ಸಹೋದರನ ಮೇಲೆ ಒತ್ತಡ ಹಾಕೋದಾದ್ರೆ ನಾವು ಪ್ರೀತಿ ತೋರಿಸಿದಂತೆ ಆಗಲ್ಲ. ಬದ್ಲಿಗೆ ಆ ಸಹೋದರನ ಮೇಲೆ ಮತ್ತು ಆತನನ್ನ ನಂಬಿದ ಬೇರೆ ಸಹೋದರ ಸಹೋದರಿಯರ ಮೇಲೆ ನಮ್ಗೆ ಪ್ರೀತಿ ಇಲ್ಲ ಅಂತ ತೋರಿಸಿಕೊಟ್ಟ ಹಾಗಾಗುತ್ತೆ. ನಿಷೇಧ ಇರುವಂಥ ದೇಶಗಳಲ್ಲಿನ ಸಹೋದರ ಸಹೋದರಿಯರಿಗೆ ನಾವು ಸಮಸ್ಯೆ ತಂದೊಡ್ಡೋಕೆ ಇಷ್ಟಪಡಲ್ಲ ಅಲ್ವಾ? ಅದೇ ರೀತಿ, ಅಲ್ಲಿನ ಸಹೋದರ ಸಹೋದರಿಯರು ಸಹ ಸಮಸ್ಯೆ ತಂದೊಡ್ಡೋಕೆ ಇಷ್ಟಪಡಲ್ಲ. ಹಾಗಾಗಿ ಆ ದೇಶಗಳಲ್ಲಿ ಹೇಗೆ ಸುವಾರ್ತೆ ಸಾರುತ್ತಾರೆ, ಕೂಟಗಳನ್ನ ನಡೆಸ್ತಾರೆ, ಆರಾಧನೆಗೆ ಸಂಬಂಧಿಸಿದ ಬೇರೆ ಕೆಲಸಗಳನ್ನು ಮಾಡ್ತಾರೆ ಅಂತ ಅವ್ರು ತಿಳಿಸಲ್ಲ.

13. ಹಿರಿಯರು ಏನು ಮಾಡಬೇಕಂತ ಜ್ಞಾನೋಕ್ತಿ 11:13 ಹೇಳುತ್ತೆ ಮತ್ತು ಯಾಕೆ?

13 ಹಿರಿಯರು ಸಹ ಜ್ಞಾನೋಕ್ತಿ 11:13 ರಲ್ಲಿರುವ ತತ್ವವನ್ನು ಪಾಲಿಸೋದು ತುಂಬ ಮುಖ್ಯ. (ಓದಿ.) ಅವ್ರು ಗುಟ್ಟಾಗಿ ಇಡಬೇಕಾದ ವಿಷ್ಯವನ್ನ ಬೇರೆಯವ್ರ ಹತ್ರ ಹೇಳಬಾರದು. ಒಬ್ಬ ಹಿರಿಯನಿಗೆ ಮದುವೆಯಾಗಿದ್ರೆ ಇದನ್ನ ಮಾಡೋಕೆ ಸ್ವಲ್ಪ ಕಷ್ಟ ಆಗ್ಬಹುದು. ಯಾಕಂದ್ರೆ ಸಾಮಾನ್ಯವಾಗಿ ಗಂಡ-ಹೆಂಡತಿ ಬೇರೆ ಯಾರಿಗೂ ಹೇಳದಿರುವಂಥ ತಮ್ಮ ಯೋಚನೆ, ಭಾವನೆ ಮತ್ತು ಚಿಂತೆಗಳನ್ನ ಒಬ್ಬರಿಗೊಬ್ಬರು ಹಂಚಿಕೊಳ್ತಾರೆ. ಇದ್ರಿಂದಾನೇ ಅವರ ಬಂಧ ಬಲ ಆಗುತ್ತೆ. ಆದ್ರೆ ಒಬ್ಬ ಹಿರಿಯನು ತನ್ನ ಸಭೆಯಲ್ಲಿರುವವರು ಹೇಳಿಕೊಂಡಿರೋ ವಿಷ್ಯಗಳನ್ನ ಹೆಂಡತಿ ಹತ್ರ ಹೇಳಬಾರ್ದು. ಒಂದುವೇಳೆ ಹೇಳೋದಾದ್ರೆ ಸಭೆಯಲ್ಲಿರುವವರು ಅವನ ಮೇಲಿರೋ ನಂಬಿಕೆಯನ್ನ ಕಳಕೊಳ್ತಾರೆ ಮತ್ತು ಅವನು ತನ್ನ ಹೆಸರನ್ನೇ ಹಾಳುಮಾಡಿಕೊಳ್ತಾನೆ. ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ‘ಎರಡು ಮಾತಿನವರು’ ಆಗಿರಬಾರದು ಅಥವಾ ಮೋಸ ಮಾಡಬಾರದು. (1 ತಿಮೊ. 3:8) ಅಂದ್ರೆ ಅವ್ರು ನಂಬಿಕೆದ್ರೋಹ ಮಾಡಬಾರದು ಅಥ್ವಾ ಹರಟೆ ಮಾತಾಡಬಾರದು. ಒಬ್ಬ ಹಿರಿಯನಿಗೆ ನಿಜವಾಗ್ಲೂ ತನ್ನ ಹೆಂಡತಿ ಮೇಲೆ ಪ್ರೀತಿ ಇರೋದಾದ್ರೆ ಆಕೆ ತಿಳುಕೊಳ್ಳುವ ಅವಶ್ಯಕತೆ ಇಲ್ಲದ ವಿಷ್ಯಗಳನ್ನ ಅವಳ ಹತ್ರ ಹೇಳೋಕೆ ಹೋಗಲ್ಲ.

14. ಹಿರಿಯನ ಹೆಂಡತಿ ತನ್ನ ಗಂಡನ ಹೆಸರು ಹಾಳಾಗದಂತೆ ಹೇಗೆ ನೋಡಿಕೊಳ್ತಾಳೆ?

14 ಗುಟ್ಟಾಗಿ ಇಡಬೇಕಾದ ವಿಷ್ಯಗಳನ್ನ ಹೇಳುವಂತೆ ತನ್ನ ಗಂಡನಿಗೆ ಒತ್ತಾಯ ಮಾಡದೇ ಇರುವ ಮೂಲಕ ಒಬ್ಬ ಹೆಂಡತಿ ತನ್ನ ಗಂಡನ ಹೆಸರು ಹಾಳಾಗದಂತೆ ನೋಡಿಕೊಳ್ಳುತ್ತಾಳೆ. ಹೀಗೆ ಅವಳು ತನ್ನ ಗಂಡನಿಗೆ ಬೆಂಬಲ ಕೊಡ್ತಾಳೆ ಮತ್ತು ಯಾರೆಲ್ಲಾ ತನ್ನ ಗಂಡನ ಹತ್ರ ವೈಯಕ್ತಿಕ ವಿಷ್ಯಗಳನ್ನ ಹೇಳಿಕೊಂಡಿದ್ದಾರೋ ಅವರನ್ನು ಕೂಡ ಗೌರವಿಸ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಆಕೆ ಸಭೆಯ ಶಾಂತಿ, ಐಕ್ಯತೆಯನ್ನ ಕಾಪಾಡಲು ಸಹಾಯ ಮಾಡೋದ್ರಿಂದ ಯೆಹೋವನ ಮನಸ್ಸನ್ನು ಸಂತೋಷಪಡಿಸ್ತಾಳೆ.—ರೋಮ. 14:19.

ನಮ್ಮ ಮಾತಿನ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?

15. ಯೋಬನ ಮೂವರು ಸ್ನೇಹಿತರ ಬಗ್ಗೆ ಯೆಹೋವನಿಗೆ ಹೇಗನಿಸಿತು ಮತ್ತು ಯಾಕೆ?

15 ನಾವು ಯಾವಾಗ ಮತ್ತು ಹೇಗೆ ಮಾತಾಡ್ಬೇಕು ಅನ್ನೋದ್ರ ಬಗ್ಗೆ ಯೋಬ ಪುಸ್ತಕದಿಂದ ಅನೇಕ ವಿಷ್ಯಗಳನ್ನು ಕಲೀಬಹುದು. ಯೋಬನ ಜೀವನದಲ್ಲಿ ಒಂದರ ಮೇಲೊಂದರಂತೆ ಅನೇಕ ದುರಂತಗಳು ಸಂಭವಿಸಿದ ನಂತ್ರ ಅವನನ್ನು ಸಂತೈಸಿ ಸಲಹೆ ಕೊಡಲಿಕ್ಕಾಗಿ ನಾಲ್ಕು ಜನ ಬಂದ್ರು. ಅವರಲ್ಲಿ ಮೂವರ ಹೆಸ್ರು ಎಲೀಫಜ, ಬಿಲ್ದದ ಮತ್ತು ಚೋಫರ. ಅವ್ರು ತುಂಬ ಸಮಯದವರೆಗೆ ಏನೂ ಮಾತಾಡಲಿಲ್ಲ. ಅವ್ರು ಸುಮ್ಮನಿದ್ದ ಆ ಸಮಯದಲ್ಲಿ ಯೋಬನಿಗೆ ಹೇಗೆಲ್ಲಾ ಸಹಾಯ ಮಾಡಬಹುದು ಅಂತ ಯೋಚಿಸಲಿಲ್ಲ. ಬದಲಿಗೆ, ಯೋಬ ತಪ್ಪು ಮಾಡಿದ್ದಾನೆ ಅನ್ನೋದನ್ನ ಹೇಗೆ ರುಜುಪಡಿಸಬಹುದು ಅಂತ ಯೋಚಿಸಿದ್ರು. ಇದು ಅವ್ರು ಆಮೇಲೆ ಹೇಳಿದ ಮಾತಿನಿಂದ ಗೊತ್ತಾಗುತ್ತೆ. ಅವ್ರು ಕೆಲವು ಸತ್ಯ ವಿಷ್ಯಗಳನ್ನು ಹೇಳಿದ್ರೂ ಯೋಬ ಮತ್ತು ಯೆಹೋವನ ಬಗ್ಗೆ ಒರಟಾಗಿ ಮಾತಾಡಿದ್ರು, ಸುಳ್ಳುಗಳನ್ನು ಹೇಳಿದ್ರು. ಯೋಬ ಕೆಟ್ಟ ವ್ಯಕ್ತಿ ಅಂತ ಹೇಳಿಬಿಟ್ರು. (ಯೋಬ 32:1-3) ಆಗ ಯೆಹೋವ ಏನು ಮಾಡಿದ್ನು? ಈ ಮೂರು ವ್ಯಕ್ತಿಗಳ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಆತ ಅವರನ್ನು ಮೂರ್ಖರು ಎಂದು ಕರೆದನು ಮತ್ತು ಅವ್ರು ಯೋಬನ ಹತ್ರ ತಮಗೋಸ್ಕರ ಪ್ರಾರ್ಥಿಸುವಂತೆ ಕೇಳಿಕೊಳ್ಳುವ ತರ ಮಾಡಿದ್ನು.—ಯೋಬ 42:7-9.

16. ಎಲೀಫಜ, ಬಿಲ್ದದ ಮತ್ತು ಚೋಫರರ ಉದಾಹರಣೆಯಿಂದ ನಾವೇನು ಕಲೀಬಹುದು?

16 ನಾವು ಎಲೀಫಜ, ಬಿಲ್ದದ ಮತ್ತು ಚೋಫರರ ಕೆಟ್ಟ ಉದಾಹರಣೆಯಿಂದ ಅನೇಕ ಪಾಠ ಕಲೀಬಹುದು. ಮೊದಲ್ನೇದಾಗಿ, ನಮ್ಮ ಸಹೋದರರು ಕೆಟ್ಟವರು ಅಂತ ನಾವು ತೀರ್ಮಾನಿಸಬಾರದು. (ಮತ್ತಾ. 7:1-5) ಬದಲಿಗೆ, ನಾವು ಮಾತಾಡೋಕೂ ಮುಂಚೆ ಅವ್ರು ಹೇಳೋದನ್ನು ಚೆನ್ನಾಗಿ ಕೇಳಿಸಿಕೊಳ್ಳಬೇಕು. ಆಗಲೇ ನಾವು ಅವ್ರ ಪರಿಸ್ಥಿತಿನ ಅರ್ಥಮಾಡಿಕೊಳ್ಳೋಕೆ ಸಾಧ್ಯ ಆಗುತ್ತೆ. (1 ಪೇತ್ರ 3:8) ಎರಡನೇದಾಗಿ, ನಾವು ದಯೆಯಿಂದ ಮಾತಾಡಬೇಕು ಮತ್ತು ಸತ್ಯವನ್ನೇ ಹೇಳಬೇಕು. (ಎಫೆ. 4:25) ಮೂರನೇದಾಗಿ, ನಾವು ಬೇರೆಯವ್ರ ಹತ್ರ ಏನು ಮಾತಾಡ್ತೇವೆ ಅನ್ನೋದನ್ನ ಯೆಹೋವನು ಗಮನಿಸ್ತಾನೆ.

17. ಎಲೀಹುವಿನ ಉದಾಹರಣೆಯಿಂದ ನಾವೇನನ್ನು ಕಲೀಬಹುದು?

17 ಯೋಬನನ್ನು ನೋಡೋಕೆ ಬಂದ ನಾಲ್ಕನೇ ವ್ಯಕ್ತಿಯ ಹೆಸ್ರು ಎಲೀಹು. ಅವನು ಅಬ್ರಹಾಮನ ಸಂಬಂಧಿಕನಾಗಿದ್ದನು. ಅವನು ಯೋಬ ಮತ್ತು ಆ ಮೂವರು ಸ್ನೇಹಿತರು ಮಾತಾಡೋದನ್ನು ಚೆನ್ನಾಗಿ ಕೇಳಿಸಿಕೊಂಡಿದ್ದನು. ಯೋಬನ ಯೋಚನಾರೀತಿಯನ್ನು ತಿದ್ದಿಕೊಳ್ಳೋಕೆ ಬೇಕಾದ ಸಲಹೆಯನ್ನ ದಯೆಯಿಂದ ಕೊಡೋಕೆ ಅವನಿಗೆ ಸಾಧ್ಯವಾಯಿತು. (ಯೋಬ 33: 1, 6, 17) ಎಲೀಹುವಿನ ಮುಖ್ಯ ಉದ್ದೇಶ ತನಗೆ ಅಥ್ವಾ ಬೇರೆ ಮನುಷ್ಯರಿಗೆ ಮಹಿಮೆ ಕೊಡೋದು ಆಗಿರಲಿಲ್ಲ. ಬದಲಿಗೆ, ಯೆಹೋವನಿಗೆ ಮಹಿಮೆ ಕೊಡುವುದೇ ಆಗಿತ್ತು. (ಯೋಬ 32:21, 22; 37:23, 24) ಮಾತಾಡೋಕೆ ಮತ್ತು ಸುಮ್ಮನಿರೋಕೆ ತಕ್ಕ ಸಮಯ ಇದೆ ಅಂತ ಎಲೀಹುವಿನ ಉದಾಹರಣೆಯಿಂದ ನಾವು ತಿಳುಕೊಳ್ಳಬಹುದು. (ಯಾಕೋ. 1:19) ಅಷ್ಟೇ ಅಲ್ಲ, ಬೇರೆಯವ್ರಿಗೆ ಸಲಹೆ ಕೊಡುವಾಗ ನಮ್ಮ ಮುಖ್ಯ ಉದ್ದೇಶ ನಮ್ಗೆ ಮಹಿಮೆ ತರೋದಲ್ಲ, ಯೆಹೋವನಿಗೆ ಮಹಿಮೆ ತರೋದೇ ಆಗಿರಬೇಕು.

18. ದೇವರು ಕೊಟ್ಟಿರುವ ಮಾತಾಡುವ ಉಡುಗೊರೆಯನ್ನು ಅಮೂಲ್ಯವಾಗಿ ನೋಡ್ತೇವೆ ಅಂತ ಹೇಗೆ ತೋರಿಸಿಕೊಡಬಹುದು?

18 ಯಾವಾಗ, ಹೇಗೆ ಮಾತಾಡ್ಬೇಕು ಅನ್ನೋದ್ರ ಬಗ್ಗೆ ಬೈಬಲಿನಲ್ಲಿರುವ ಸಲಹೆಗಳನ್ನ ಅನುಸರಿಸಿದರೆ ಮಾತಾಡುವ ಉಡುಗೊರೆಯನ್ನ ನಾವು ಅಮೂಲ್ಯವಾಗಿ ನೋಡ್ತೇವೆ ಅಂತ ತೋರಿಸಿಕೊಡ್ತೇವೆ. ವಿವೇಕಿ ರಾಜ ಸೊಲೊಮೋನ ದೇವರ ಪ್ರೇರಣೆಯಿಂದ ಹೀಗೆ ಹೇಳಿದನು: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಜ್ಞಾನೋ. 25:11) ಬೇರೆಯವ್ರು ಹೇಳೋದನ್ನು ಚೆನ್ನಾಗಿ ಕೇಳಿಸಿಕೊಂಡ್ರೆ ಮತ್ತು ಮಾತಾಡೋ ಮುಂಚೆ ಯೋಚಿಸಿದ್ರೆ ನಮ್ಮ ಮಾತು ಬಂಗಾರದ ಹಣ್ಣುಗಳ ತರ ಇರುತ್ತೆ. ಅಂದ್ರೆ ನಮ್ಮ ಮಾತಿಗೆ ಬೆಲೆ ಇರುತ್ತೆ, ಸುಂದರವಾಗಿಯೂ ಇರುತ್ತೆ. ಹಾಗೆ ಮಾಡುವಾಗ ನಾವು ಹೆಚ್ಚೇ ಮಾತಾಡ್ಲಿ ಕಡಿಮೆನೇ ಮಾತಾಡ್ಲಿ ಇದ್ರಿಂದ ಬೇರೆಯವ್ರಿಗೆ ಪ್ರಯೋಜನ ಆಗುತ್ತೆ. ಅಷ್ಟೇ ಅಲ್ಲ, ಯೆಹೋವನಿಗೆ ನಮ್ಮ ಬಗ್ಗೆ ಹೆಮ್ಮೆ ಅನ್ಸುತ್ತೆ. (ಜ್ಞಾನೋ. 23:15; ಎಫೆ. 4:29) ನಮ್ಗೆ ಮಾತಾಡುವ ಉಡುಗೊರೆ ಕೊಟ್ಟಿರುವುದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳೋ ಅತ್ಯುತ್ತಮ ವಿಧಾನ ಇದೇ ಆಗಿದೆ!

ನಿಮ್ಮ ಉತ್ತರವೇನು?

  • ಯಾವಾಗ ಮಾತಾಡ್ಬೇಕು?

  • ಯಾವಾಗ ಸುಮ್ಮನಿರಬೇಕು?

  • ಈ ಲೇಖನದಲ್ಲಿ ಚರ್ಚಿಸಲಾದ ಬೈಬಲ್‌ ಕಾಲದ ಜನರ ಉದಾಹರಣೆಗಳಿಂದ ನೀವೇನನ್ನು ಕಲಿತಿರಿ?

ಗೀತೆ 93 ‘ನಿಮ್ಮ ಬೆಳಕು ಪ್ರಕಾಶಿಸಲಿ’

a ನಾವು ಯಾವಾಗ ಮಾತಾಡ್ಬೇಕು, ಯಾವಾಗ ಮಾತಾಡಬಾರ್ದು ಅಂತ ತಿಳುಕೊಳ್ಳೋಕೆ ಸಹಾಯ ಮಾಡುವ ತತ್ವಗಳು ಬೈಬಲಿನಲ್ಲಿವೆ. ನಾವು ಈ ತತ್ವಗಳನ್ನ ಅರ್ಥಮಾಡಿಕೊಂಡು ಅನ್ವಯಿಸಿದ್ರೆ ಯೆಹೋವನಿಗೆ ತುಂಬ ಖುಷಿಯಾಗುತ್ತೆ.

b ಚಿತ್ರ ವಿವರಣೆ: ಒಬ್ಬ ಸಹೋದರಿ ಇನ್ನೊಬ್ಬ ಸಹೋದರಿಗೆ ಪ್ರೀತಿಯಿಂದ ಸಲಹೆ ಕೊಡ್ತಿದ್ದಾಳೆ.

c ಚಿತ್ರ ವಿವರಣೆ: ಒಬ್ಬ ಸಹೋದರ ಶುಚಿತ್ವದ ಬಗ್ಗೆ ಇನ್ನೊಬ್ಬ ಸಹೋದರನಿಗೆ ಸಲಹೆ ಕೊಡ್ತಿದ್ದಾನೆ.

d ಚಿತ್ರ ವಿವರಣೆ: ಅಬೀಗೈಲಳು ಸರಿಯಾದ ಸಮಯ ನೋಡಿ ದಾವೀದನ ಹತ್ರ ಮಾತಾಡಿದಳು, ಇದ್ರಿಂದ ಒಳ್ಳೇದೇ ಆಯ್ತು.

e ಚಿತ್ರ ವಿವರಣೆ: ನಿಷೇಧ ಇರೋ ದೇಶದಲ್ಲಿ ನಮ್ಮ ಕೆಲ್ಸ ಹೇಗೆ ನಡೆಯುತ್ತಿದೆ ಅನ್ನೋದ್ರ ಬಗ್ಗೆ ಒಬ್ಬ ದಂಪತಿ ಏನೂ ಹೇಳುತ್ತಿಲ್ಲ.

f ಚಿತ್ರ ವಿವರಣೆ: ಒಬ್ಬ ಹಿರಿಯನು ಸಭೆಯ ಬಗ್ಗೆ ಗುಟ್ಟಾಗಿ ಇಡಬೇಕಾಗಿರುವಂಥ ವಿಷ್ಯಗಳನ್ನ ಮಾತಾಡುವಾಗ ಬೇರೆ ಯಾರೂ ಕೇಳಿಸಿಕೊಳ್ಳದಂತೆ ಜಾಗ್ರತೆ ವಹಿಸುತ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ