ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಆಗಸ್ಟ್‌ ಪು. 20-25
  • ಪಾಪ ಮಾಡಿದವ್ರಿಗೆ ಹಿರಿಯರು ತೋರಿಸೋ ಪ್ರೀತಿ, ಕರುಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಾಪ ಮಾಡಿದವ್ರಿಗೆ ಹಿರಿಯರು ತೋರಿಸೋ ಪ್ರೀತಿ, ಕರುಣೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗಂಭೀರ ಪಾಪ ಮಾಡಿದವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?
  • “ಎಲ್ರ ಮುಂದೆ ತಿದ್ದು”
  • “ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ”
  • ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ಅವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ‘ಹಿರಿಯರ ಹತ್ರ ಮಾತಾಡಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಗಂಭೀರ ಪಾಪ ಮಾಡಿದವ್ರ ಜೊತೆ ಸಭೆಯವರು ಹೇಗೆ ನಡ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಸಭೆಯನ್ನ ಹೇಗೆ ಸಂಘಟಿಸಲಾಗಿದೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಆಗಸ್ಟ್‌ ಪು. 20-25

ಅಧ್ಯಯನ ಲೇಖನ 34

ಗೀತೆ 50 ಪ್ರೀತಿಯ ದೈವಿಕ ಆದರ್ಶ

ಪಾಪ ಮಾಡಿದವ್ರಿಗೆ ಹಿರಿಯರು ತೋರಿಸೋ ಪ್ರೀತಿ, ಕರುಣೆ

“ನೀನು ಪಶ್ಚಾತ್ತಾಪ ಪಡಬೇಕಂತ ದೇವರು ನಿನಗೆ ದಯೆ ತೋರಿಸ್ತಿದ್ದಾನೆ.”—ರೋಮ. 2:4.

ಈ ಲೇಖನದಲ್ಲಿ ಏನಿದೆ?

ಸಭೇಲಿ ಯಾರಾದ್ರೂ ಗಂಭೀರ ಪಾಪ ಮಾಡಿದಾಗ ಅವ್ರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ ಅಂತ ನೋಡೋಣ.

1. ಗಂಭೀರ ಪಾಪ ಮಾಡಿದವ್ರಿಗೂ ಯಾವ ಸಹಾಯ ಇದೆ?

ನಾವು ಕಳೆದ ಲೇಖನದಲ್ಲಿ ಕೊರಿಂಥ ಸಭೇಲಿ ನಡೆದ ಒಂದು ಘಟನೆ ಬಗ್ಗೆ ನೋಡಿದ್ವಿ. ಆ ವ್ಯಕ್ತಿ ಪಾಪ ಮಾಡಿ ಪಶ್ಚಾತ್ತಾಪ ಪಡದೇ ಇದ್ದಿದ್ರಿಂದ ಅವನನ್ನ ಸಭೆಯಿಂದ ಹೊರಗೆ ಹಾಕಬೇಕಾಯ್ತು. ಆದ್ರೆ ಈ ಲೇಖನದ ಮುಖ್ಯ ವಚನ ಹೇಳೋ ಹಾಗೆ ಗಂಭೀರ ಪಾಪ ಮಾಡಿದವ್ರಿಗೂ ಸಹಾಯ ಇದೆ. ದೇವರು ಆ ವ್ಯಕ್ತಿಗಳನ್ನ ಪಶ್ಚಾತ್ತಾಪಕ್ಕೆ ನಡೆಸ್ತಾನೆ. (ರೋಮ. 2:4) ಅವ್ರಿಗೆ ಸಹಾಯ ಮಾಡೋಕೆ ಯೆಹೋವ ಹಿರಿಯರನ್ನೂ ಬಳಸ್ತಾನೆ. ಅದು ಹೇಗೆ ಅಂತ ನೋಡೋಣ.

2-3. ಸಭೇಲಿ ಯಾರಾದ್ರೂ ಗಂಭೀರ ಪಾಪ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ನಾವೇನು ಮಾಡಬೇಕು ಮತ್ತು ಯಾಕೆ?

2 ಸಭೇಲಿ ಯಾರಾದ್ರೂ ಗಂಭೀರ ಪಾಪ ಮಾಡಿದ್ರೆ, ಅದು ಹಿರಿಯರಿಗೆ ಗೊತ್ತಾಗಬೇಕು. ಆಗ್ಲೇ ಆ ವ್ಯಕ್ತಿಗೆ ಹಿರಿಯರು ಸಹಾಯ ಮಾಡೋಕೆ ಆಗೋದು. ಹಾಗಾಗಿ ನೀವೇನು ಮಾಡಬೇಕು? ಸಭೇಲಿ ಯಾರೋ ಒಬ್ರು ಗಂಭೀರ ಪಾಪ ಮಾಡಿದ್ದಾರೆ, ಇದ್ರಿಂದ ಅವರು ಸಭೆಯಿಂದ ಹೊರಗೆ ಹೋಗೋ ಸಾಧ್ಯತೆ ಇದೆ ಅಂತ ನಿಮಗೆ ಗೊತ್ತಾಯ್ತು ಅಂತ ಅಂದ್ಕೊಳ್ಳಿ. ಆಗ ನೀವು ಪಾಪ ಮಾಡಿದ ವ್ಯಕ್ತಿ ಹತ್ರ ಹೋಗಿ ಹಿರಿಯರ ಹತ್ರ ಮಾತಾಡೋಕೆ ಅವ್ರಿಗೆ ಹೇಳಬೇಕು.—ಯೆಶಾ. 1:18; ಅ. ಕಾ. 20:28; 1 ಪೇತ್ರ 5:2.

3 ಆದ್ರೆ ಪಾಪ ಮಾಡಿದ ವ್ಯಕ್ತಿ ಹಿರಿಯರ ಹತ್ರ ಮಾತಾಡೋಕೆ ಒಪ್ಪಲಿಲ್ಲ ಅಂದ್ರೆ ನಾವೇನು ಮಾಡಬೇಕು? ಅವನಿಗೆ ಸಹಾಯ ಬೇಕಿರೋದ್ರಿಂದ ನಾವೇ ಹೋಗಿ ಹಿರಿಯರ ಹತ್ರ ಹೇಳಬೇಕು. ಹೀಗೆ ಮಾಡಿದ್ರೆ ಆ ಸಹೋದರ ಅಥವಾ ಸಹೋದರಿ ಮೇಲೆ ನಿಜವಾದ ಪ್ರೀತಿ ಇದೆ ಅಂತ ತೋರಿಸ್ತೀವಿ. ಯಾಕಂದ್ರೆ ಆ ವ್ಯಕ್ತಿ ಮಾಡ್ತಿರೋ ಪಾಪನ ಅವನು ನಿಲ್ಲಿಸಲಿಲ್ಲ ಅಂದ್ರೆ ಯೆಹೋವನ ಜೊತೆ ಇರೋ ಸಂಬಂಧನ ಅವನು ಇನ್ನೂ ಹಾಳು ಮಾಡ್ಕೊಳ್ತಾನೆ. ಅಷ್ಟೇ ಅಲ್ಲ, ಅವನ ಕೆಟ್ಟ ನಡತೆಯಿಂದ ಯೆಹೋವನ ಹೆಸ್ರೂ ಹಾಳಾಗುತ್ತೆ, ಇಡೀ ಸಭೆಗೆ ಕೆಟ್ಟ ಹೆಸ್ರು ಬರುತ್ತೆ. ಹಾಗಾಗಿ ಯೆಹೋವನ ಮೇಲೆ ಮತ್ತು ಪಾಪ ಮಾಡಿದ ವ್ಯಕ್ತಿ ಮೇಲೆ ನಮಗೆ ಪ್ರೀತಿ ಇರೋದಾದ್ರೆ ನಾವು ಧೈರ್ಯವಾಗಿ ಆ ವಿಷ್ಯನ ಹಿರಿಯರಿಗೆ ಹೇಳ್ತೀವಿ.—ಕೀರ್ತ. 27:14.

ಗಂಭೀರ ಪಾಪ ಮಾಡಿದವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?

4. ಕಮಿಟಿಯಲ್ಲಿರೋ ಹಿರಿಯರು ಗಂಭೀರ ಪಾಪ ಮಾಡಿದ ವ್ಯಕ್ತಿ ಜೊತೆ ಮಾತಾಡುವಾಗ ಅವ್ರ ಮುಖ್ಯ ಗುರಿ ಏನಾಗಿರುತ್ತೆ?

4 ಸಭೇಲಿ ಯಾರಾದ್ರೂ ಗಂಭೀರ ಪಾಪ ಮಾಡಿದ್ರೆ ಆ ಸಭೆಯ ಹಿರಿಯ ಮಂಡಳಿ ಮೂರು ಅರ್ಹ ಹಿರಿಯರನ್ನ ಆಯ್ಕೆ ಮಾಡಿ ಕಮಿಟಿಯಾಗಿ ನೇಮಿಸ್ತಾರೆ.a ಈ ಸಹೋದರರಲ್ಲಿ ಅರ್ಥ ಮಾಡ್ಕೊಳ್ಳೋ ಗುಣ ಇರಬೇಕು ಮತ್ತು ದೀನತೆನೂ ಇರಬೇಕು. ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಬೇಕು ಅಂತ ಅವ್ರಿಗೆ ಗೊತ್ತಿದ್ರೂ ಆ ವ್ಯಕ್ತಿ ಬದಲಾಗಬೇಕಂತ ಒತ್ತಾಯ ಮಾಡಬಾರದು ಅನ್ನೋದನ್ನೂ ಮನಸ್ಸಲ್ಲಿ ಇಡ್ತಾರೆ. (ಧರ್ಮೋ. 30:19) ಪಾಪ ಮಾಡಿದವರೆಲ್ರೂ ದಾವೀದನ ತರ ಪಶ್ಚಾತ್ತಾಪ ಪಡ್ತಾರೆ ಅಂತ ಹೇಳೋಕೆ ಆಗಲ್ಲ. (2 ಸಮು. 12:13) ಕೆಲವರು ಯೆಹೋವನ ಮಾತನ್ನ ಕಿವಿಗೇ ಹಾಕೊಳ್ಳಲ್ಲ. ಇದು ಹಿರಿಯರಿಗೆ ಚೆನ್ನಾಗಿ ಗೊತ್ತಿರುತ್ತೆ. (ಆದಿ. 4:6-8) ಅದೇನೇ ಆಗಿದ್ರೂ ಪಾಪ ಮಾಡಿದ ವ್ಯಕ್ತಿಯನ್ನ ಪಶ್ಚಾತ್ತಾಪಕ್ಕೆ ನಡೆಸೋದೇ ಹಿರಿಯರ ಮುಖ್ಯ ಗುರಿಯಾಗಿರುತ್ತೆ. ಕಮಿಟಿಯಲ್ಲಿರೋ ಹಿರಿಯರು ಆ ವ್ಯಕ್ತಿ ಹತ್ರ ಮಾತಾಡುವಾಗ ಯಾವ ತತ್ವಗಳನ್ನ ಮನಸ್ಸಲ್ಲಿಡಬೇಕು?

5. ಹಿರಿಯರು ಪಾಪ ಮಾಡಿದ ವ್ಯಕ್ತಿ ಜೊತೆ ಮಾತಾಡುವಾಗ ಹೇಗೆ ನಡ್ಕೊಬೇಕು? (2 ತಿಮೊತಿ 2:24-26) (ಚಿತ್ರ ನೋಡಿ.)

5 ಹಿರಿಯರು ಪಾಪ ಮಾಡಿರೋ ವ್ಯಕ್ತಿನ ಕಳೆದುಹೋಗಿರೋ ಅಮೂಲ್ಯವಾದ ಕುರಿ ತರ ನೋಡ್ತಾರೆ. (ಲೂಕ 15:4, 6) ಹಾಗಾಗಿ ಅವರು ಪಾಪ ಮಾಡಿರೋರ ಹತ್ರ ಒರಟಾಗಿ ಮಾತಾಡಲ್ಲ, ತಾವೇ ದೊಡ್ಡ ನೀತಿವಂತರು ಅನ್ನೋ ತರ ನಡ್ಕೊಳ್ಳಲ್ಲ. ಬದ್ಲಿಗೆ ಸ್ನೇಹಿತರ ತರ ನಡ್ಕೊಳ್ತಾರೆ. ಅವರ ಹತ್ರ ಮಾತಾಡುವಾಗ ಬರೀ ಪ್ರಶ್ನೆಗಳನ್ನ ಕೇಳ್ತಾ ಏನೆಲ್ಲಾ ಆಯ್ತು ಅಂತ ತಿಳ್ಕೊಳ್ಳೋದಷ್ಟೇ ಅವ್ರ ಉದ್ದೇಶ ಆಗಿರಲ್ಲ. ಬದ್ಲಿಗೆ ಅವರು 2 ತಿಮೊತಿ 2:24-26ರಲ್ಲಿರೋ ಗುಣಗಳನ್ನ ತೋರಿಸ್ತಾರೆ. (ಓದಿ.) ಪಾಪ ಮಾಡಿದವರು ತಮ್ಮ ಯೋಚನೆನ ಬದಲಾಯಿಸ್ಕೊಳ್ಳೋಕೆ ಹಿರಿಯರು ಮೃದುವಾಗಿ, ಸೌಮ್ಯವಾಗಿ, ಪ್ರೀತಿ ಮತ್ತು ದಯೆಯಿಂದ ಅವ್ರಿಗೆ ಕೊನೆವರೆಗೂ ಸಹಾಯ ಮಾಡ್ತಾರೆ.

ತನ್ನ ಕುರಿಮಂದೆ ಜೊತೆ ಕುರುಬ ಕಳೆದು ಹೋದ ಕುರಿಯನ್ನ ಹುಡುಕ್ತಿದ್ದಾನೆ. ಕಳೆದು ಹೋದ ಆ ಕುರಿಯ ಕಾಲಿಗೆ ಗಾಯ ಆಗಿದೆ, ಅದು ಪೊದೆಯಲ್ಲಿ ಸಿಕ್ಕಿಹಾಕೊಂಡಿದೆ.

ಅವತ್ತಿದ್ದ ಕುರುಬರ ತರಾನೇ ಇವತ್ತಿನ ಹಿರಿಯರು ಕಳೆದೋಗಿರೋ ಕುರಿಯನ್ನ ಹುಡುಕೋಕೆ ಎಲ್ಲ ಪ್ರಯತ್ನ ಮಾಡ್ತಾರೆ (ಪ್ಯಾರ 5 ನೋಡಿ)


6. ಪಾಪ ಮಾಡಿದ ವ್ಯಕ್ತಿ ಜೊತೆ ಮಾತಾಡೋ ಮುಂಚೆ ಹಿರಿಯರು ತಮ್ಮ ಮನಸ್ಸನ್ನ ಹೇಗೆ ತಯಾರಿ ಮಾಡ್ಕೊಳ್ತಾರೆ? (ರೋಮನ್ನರಿಗೆ 2:4)

6 ಹಿರಿಯರು ತಮ್ಮ ಮನಸ್ಸನ್ನ ತಯಾರಿ ಮಾಡ್ಕೊಳ್ತಾರೆ. ಇವರು ಪಾಪ ಮಾಡಿದವ್ರ ಜೊತೆ ಯಾವಾಗ್ಲೂ ಯೆಹೋವ ದೇವರ ತರಾನೇ ನಡ್ಕೊಳ್ತಾರೆ. ಅವರು ಹೀಗೆ ನಡ್ಕೊಳ್ಳುವಾಗ “ನೀನು ಪಶ್ಚಾತ್ತಾಪ ಪಡಬೇಕಂತ ದೇವರು ನಿನಗೆ ದಯೆ ತೋರಿಸ್ತಿದ್ದಾನೆ” ಅಂತ ಪೌಲ ಯೆಹೋವನ ಬಗ್ಗೆ ಹೇಳಿದ ಮಾತನ್ನ ನೆನಪಲ್ಲಿ ಇಟ್ಕೊಳ್ತಾರೆ. (ರೋಮನ್ನರಿಗೆ 2:4 ಓದಿ.) ಹಿರಿಯರು ನಾವು ಮೊದ್ಲು ಕುರುಬರಾಗಿದ್ದೀವಿ, ಯೇಸು ಸಭೆನ ನೋಡ್ಕೊಳ್ಳೋ ತರಾನೇ ನಾವು ನೋಡ್ಕೊಬೇಕು ಅನ್ನೋದನ್ನ ನೆನಪಲ್ಲಿಡ್ತಾರೆ. (ಯೆಶಾ. 11:3, 4; ಮತ್ತಾ. 18:18-20) ಈ ಕಮಿಟಿಲಿರೋ ಹಿರಿಯರು ಪಾಪ ಮಾಡಿದ ವ್ಯಕ್ತಿ ಜೊತೆ ಮಾತಾಡೋ ಮುಂಚೆ ಪ್ರಾರ್ಥನೆ ಮಾಡಿ ತಮ್ಮ ಮುಖ್ಯ ಗುರಿ ಏನು ಅಂತ ಚೆನ್ನಾಗಿ ಯೋಚಿಸ್ತಾರೆ. ಪಾಪ ಮಾಡಿದ ವ್ಯಕ್ತಿಯನ್ನ ಪಶ್ಚಾತ್ತಾಪಕ್ಕೆ ನಡೆಸೋದೇ ಅವ್ರ ಮುಖ್ಯ ಗುರಿಯಾಗಿದೆ. ಆಮೇಲೆ ಅವರು ಅದಕ್ಕೆ ಸಹಾಯ ಮಾಡೋ ವಚನಗಳನ್ನ, ಪುಸ್ತಕ-ಪ್ರಕಾಶನಗಳನ್ನ ಓದ್ತಾರೆ. ಆಮೇಲೆ ಆ ವ್ಯಕ್ತಿನ ಮತ್ತು ಅವನ ಸನ್ನಿವೇಶನ ಅರ್ಥಮಾಡ್ಕೊಳ್ಳೋಕೆ ಸಹಾಯಕ್ಕಾಗಿ ಪ್ರಾರ್ಥನೆನೂ ಮಾಡ್ತಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ ಯಾಕೆ ಆ ಪಾಪ ಮಾಡಿದ, ಯಾಕೆ ಹಾಗೆ ಯೋಚಿಸಿದ ಅಂತ ಅರ್ಥಮಾಡ್ಕೊಳ್ಳೋಕೆ ಅವನ ಹಿನ್ನೆಲೆನೂ ತಿಳ್ಕೊಳ್ತಾರೆ.—ಜ್ಞಾನೋ. 20:5.

7-8. ಪಾಪ ಮಾಡಿದ ವ್ಯಕ್ತಿ ಜೊತೆ ಮಾತಾಡುವಾಗ ಹಿರಿಯರು ಹೇಗೆ ತಾಳ್ಮೆ ತೋರಿಸ್ತಾರೆ?

7 ಹಿರಿಯರು ಯೆಹೋವ ದೇವರ ತರ ತಾಳ್ಮೆ ತೋರಿಸ್ತಾರೆ. ಯೆಹೋವ ದೇವರು ಹಿಂದೆ ತನ್ನ ಜನ್ರ ಜೊತೆ ಹೇಗೆ ನಡ್ಕೊಂಡನು ಅನ್ನೋದನ್ನ ನೆನಪಲ್ಲಿಡ್ತಾರೆ. ಉದಾಹರಣೆಗೆ ಯೆಹೋವ ಕಾಯಿನನ ಜೊತೆ ತಾಳ್ಮೆಯಿಂದ ನಡ್ಕೊಂಡನು. ಹೇಳೋ ಮಾತು ಕೇಳಿದ್ರೆ ಅವನಿಗೆ ಆಶೀರ್ವಾದ ಸಿಗುತ್ತೆ, ಕೇಳಿಲ್ಲ ಅಂದ್ರೆ ಹಾನಿ ಆಗುತ್ತೆ ಅಂತಾನೂ ಯೆಹೋವ ಹೇಳಿದನು. (ಆದಿ. 4:6, 7) ಯೆಹೋವ ನಾತಾನನನ್ನ ಕಳಿಸಿ ದಾವೀದನನ್ನೂ ತಿದ್ದಿದನು. ನಾತಾನ ಮನಸ್ಸು ಮುಟ್ಟೋ ಒಂದು ಉದಾಹರಣೆ ಹೇಳಿದಾಗ ದಾವೀದ ಪಶ್ಚಾತ್ತಾಪ ಪಟ್ಟ. (2 ಸಮು. 12:1-7) ಅಷ್ಟೇ ಅಲ್ಲ, ಇಸ್ರಾಯೇಲ್‌ ಜನ್ರು ದಾರಿ ತಪ್ಪಿದಾಗ ಅವ್ರಿಗೆ ಸಹಾಯ ಮಾಡೋಕೆ “ಪದೇ ಪದೇ” ಪ್ರವಾದಿಗಳನ್ನ ಅವ್ರ ಹತ್ರ ‘ಕಳಿಸ್ತಾ ಇದ್ದನು.’ (ಯೆರೆ. 7:24, 25) ಇದ್ರಿಂದ ನಾವೇನು ಕಲಿತೀವಿ? ಯೆಹೋವ ದೇವರು ‘ಮೊದಲು ಜನ ಪಶ್ಚಾತ್ತಾಪ ಪಡಲಿ, ಆಮೇಲೆ ನಾನು ಅವ್ರಿಗೆ ಸಹಾಯ ಮಾಡ್ತೀನಿ’ ಅಂತ ಅಂದ್ಕೊಳ್ಳಲಿಲ್ಲ. ಅದ್ರ ಬದ್ಲು ಅವರು ಪಾಪ ಮಾಡ್ತಿರುವಾಗ್ಲೇ ಅವ್ರಿಗೆ ತಪ್ಪನ್ನ ಅರ್ಥಮಾಡಿಸಿ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಿದನು.

8 ಗಂಭೀರ ಪಾಪ ಮಾಡಿದ ವ್ಯಕ್ತಿ ಜೊತೆ ಹಿರಿಯರು ಮಾತಾಡುವಾಗ ಅವರು ಯೆಹೋವ ದೇವರ ತರ ನಡ್ಕೊಬೇಕು. 2 ತಿಮೊತಿ 4:2ರಲ್ಲಿ ಹೇಳಿರೋ ತರ ಅವರು “ತಾಳ್ಮೆಯಿಂದ” ಅವ್ರ ಜೊತೆ ಮಾತಾಡಬೇಕು. ಹಾಗಾಗಿ ಒಬ್ಬ ಹಿರಿಯ ಪಾಪ ಮಾಡಿದ ಒಬ್ಬ ವ್ಯಕ್ತಿನ ಸರಿದಾರಿಗೆ ತರೋಕೆ ತಾಳ್ಮೆಯಿಂದ ಮತ್ತು ಸಮಾಧಾನದಿಂದ ಅವನ ಜೊತೆ ನಡ್ಕೊಬೇಕು. ಒಂದುವೇಳೆ ಹಿರಿಯನಿಗೆ ಕಿರಿಕಿರಿಯಾದ್ರೆ ಕೋಪ ಮಾಡ್ಕೊಂಡುಬಿಟ್ರೆ ಆ ವ್ಯಕ್ತಿ ಅವನು ಹೇಳೋದನ್ನ ಕೇಳದೇ ಹೋಗಬಹುದು ಅಥವಾ ಪಶ್ಚಾತ್ತಾಪ ಪಡದೇ ಇರಬಹುದು.

9-10. ಪಾಪ ಮಾಡಿದ ವ್ಯಕ್ತಿ ತನ್ನ ತಪ್ಪನ್ನ ಅರ್ಥಮಾಡ್ಕೊಳ್ಳೋಕೆ ಹಿರಿಯರು ಅವನಿಗೆ ಹೇಗೆ ಸಹಾಯ ಮಾಡ್ತಾರೆ?

9 ಪಾಪ ಮಾಡೋಕೆ ಮುಂಚೆ ಆ ವ್ಯಕ್ತಿ ಏನೆಲ್ಲಾ ಮಾಡೋಕೆ ತಪ್ಪಿಹೋದ ಅಂತ ಹಿರಿಯರು ಅರ್ಥಮಾಡ್ಕೊಳ್ಳೋಕೆ ಪ್ರಯತ್ನಿಸ್ತಾರೆ. ಅವನಿಗೆ ಯೆಹೋವನ ಜೊತೆ ಇರೋ ಸಂಬಂಧ ಹಾಳಾಗೋಕೆ ಕಾರಣ ಏನು? ಅವನು ಬೈಬಲ್‌ ಓದೋದನ್ನ ಸೇವೆ ಮಾಡೋದನ್ನ ನಿಲ್ಲಿಸಿಬಿಟ್ಟಿದ್ನಾ? ಅವನು ಮನಸ್ಸು ಪೂರ್ತಿಯಾಗಿ ಯೆಹೋವನಿಗೆ ಪ್ರಾರ್ಥನೆ ಮಾಡಿ ಎಷ್ಟು ಸಮಯ ಆಯ್ತು? ತಪ್ಪಾದ ಆಸೆ ಬಂದಾಗ ಅವನು ಅದನ್ನ ತಡೀತಿದ್ನಾ ಅಥವಾ ಹಾಗೆ ಬಿಟ್ಟುಬಿಡ್ತಿದ್ನಾ? ಅವನು ಎಂಥವ್ರ ಜೊತೆ ಸ್ನೇಹ ಮಾಡ್ತಿದ್ದ? ಯಾವ ರೀತಿಯ ಮನೋರಂಜನೆ ನೋಡ್ತಿದ್ದ? ಇದೆಲ್ಲಾ ಅವನ ಯೋಚ್ನೆ ಮತ್ತು ಆಸೆನ ಹೇಗೆ ಬದಲಾಯಿಸಿರಬಹುದು? ತಾನು ನಡ್ಕೊಂಡ ರೀತಿಯಿಂದ ಯೆಹೋವನಿಗೆ ಬೇಜಾರಾಗಿದೆ ಅಂತ ಅವನಿಗೆ ಗೊತ್ತಿದ್ಯಾ?

10 ಪಾಪ ಮಾಡಿದ ವ್ಯಕ್ತಿ ತನಗೆ ಯೆಹೋವನ ಜೊತೆಗಿರೋ ಸಂಬಂಧ ಯಾಕೆ ಹಾಳಾಗಿದೆ ಮತ್ತು ತಾನು ಪಾಪ ಮಾಡೋಕೆ ಕಾರಣ ಏನು ಅಂತ ಅರ್ಥಮಾಡ್ಕೊಳ್ಳೋಕೆ ಹಿರಿಯರು ಅವನಿಗೆ ಕೆಲವೊಂದು ಪ್ರಶ್ನೆಗಳನ್ನ ಕೇಳ್ತಾರೆ. (ಜ್ಞಾನೋ. 20:5) ಹಿರಿಯರು ಕೆಲವು ವಿಷ್ಯಗಳನ್ನ ತಿಳ್ಕೊಬೇಕು ಅನ್ನೋದು ನಿಜ, ಆದ್ರೆ ಅನಾವಶ್ಯಕವಾಗಿ ತೀರ ವೈಯಕ್ತಿಕ ಪ್ರಶ್ನೆಗಳನ್ನ ಅವನ ಹತ್ರ ಕೇಳಲ್ಲ. ಅಷ್ಟೇ ಅಲ್ಲ, ನಾತಾನನ ತರ ಅವರೂ ಅವನ ತಪ್ಪನ್ನ ಅರ್ಥಮಾಡಿಸೋಕೆ ಉದಾಹರಣೆಗಳನ್ನ ಹೇಳಬಹುದು. ಹೀಗೆ ಮಾಡುವಾಗ ಮೊದಲನೇ ಭೇಟಿಯಲ್ಲೇ ಆ ವ್ಯಕ್ತಿ ತಾನು ಮಾಡಿದ ಪಾಪ ನೆನಸಿ ತುಂಬ ದುಃಖ ಪಡಬಹುದು ಮತ್ತು ಪಶ್ಚಾತ್ತಾಪನೂ ಪಡಬಹುದು.

11. ಯೇಸು ಪಾಪಿಗಳ ಜೊತೆ ಹೇಗೆ ನಡ್ಕೊಂಡನು?

11 ಹಿರಿಯರು ಯೇಸು ತರ ಇರೋಕೆ ತುಂಬ ಪ್ರಯತ್ನ ಮಾಡ್ತಾರೆ. ಯೇಸು ತಾರ್ಸದ ಸೌಲನ ಹತ್ರ ಮಾತಾಡುವಾಗ “ಸೌಲ, ಸೌಲ, ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?” ಅಂತ ಕೇಳಿದನು. ಹೀಗೆ ಸೌಲ ತನ್ನ ತಪ್ಪನ್ನ ಅರ್ಥಮಾಡ್ಕೊಳ್ಳೋಕೆ ಯೇಸು ಸಹಾಯ ಮಾಡಿದನು. (ಅ. ಕಾ. 9:3-6) “ಈಜೆಬೇಲ್‌ ಅನ್ನೋ ಸ್ತ್ರೀ” ಬಗ್ಗೆ ಹೇಳುವಾಗ್ಲೂ “ನಾನು ಅವಳಿಗೆ ತಿದ್ಕೊಳ್ಳೋಕ್ಕೆ” ಅಥವಾ ಪಶ್ಚಾತ್ತಾಪ ಪಡೋಕೆ “ಸಮಯ ಕೊಟ್ಟೆ” ಅಂತ ಹೇಳಿದನು.—ಪ್ರಕ. 2:20, 21.

12-13. ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡೋಕೆ ಹಿರಿಯರು ಹೇಗೆ ಸಮಯ ಕೊಡ್ತಾರೆ? (ಚಿತ್ರ ನೋಡಿ.)

12 ಹಿರಿಯರು ಯೇಸು ತರಾನೇ ನಡ್ಕೊಳ್ತಾರೆ. ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡಲ್ಲ ಅಂತ ಅವರು ಆತುರಪಟ್ಟು ತೀರ್ಮಾನ ಮಾಡಲ್ಲ. ಕೆಲವರು ಮೊದಲನೇ ಭೇಟಿಯಲ್ಲೇ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡ್ತಾರೆ. ಇನ್ನು ಕೆಲವ್ರಿಗೆ ಪಶ್ಚಾತ್ತಾಪ ಪಡೋಕೆ ಜಾಸ್ತಿ ಸಮಯ ಬೇಕಾಗುತ್ತೆ. ಅದಕ್ಕೆ ಹಿರಿಯರು ಒಂದಕ್ಕಿಂತ ಹೆಚ್ಚು ಸಲ ಅವ್ರನ್ನ ಭೇಟಿ ಮಾಡಬಹುದು. ಹಿರಿಯರು ಮೊದಲನೇ ಭೇಟಿಮಾಡಿದಾಗ ಏನೆಲ್ಲಾ ಹೇಳಿದ್ರೋ ಅದ್ರ ಬಗ್ಗೆ ಪಾಪ ಮಾಡಿದ ವ್ಯಕ್ತಿ ಆಮೇಲೆ ಕೂತು ಚೆನ್ನಾಗಿ ಯೋಚ್ನೆ ಮಾಡಬಹುದು. ಆಗ ಅವನು ದೀನತೆಯಿಂದ ಯೆಹೋವನಿಗೆ ಪ್ರಾರ್ಥನೆ ಮಾಡಿ ತಾನು ಮಾಡಿದ ಪಾಪಕ್ಕೆ ಕ್ಷಮೆ ಕೇಳಬಹುದು. (ಕೀರ್ತ. 32:5; 38:18) ಹೀಗೆ ಅವನು ಮುಂದಿನ ಭೇಟಿಯಲ್ಲಿ ಹಿರಿಯರು ಬಂದು ಮಾತಾಡುವಾಗ ಅವನ ಯೋಚ್ನೆನೇ ಬದಲಾಗಿರಬಹುದು.

13 ಪಾಪ ಮಾಡಿದ ವ್ಯಕ್ತಿಯನ್ನ ಪಶ್ಚಾತ್ತಾಪಕ್ಕೆ ನಡೆಸಲು ಹಿರಿಯರು ಅವನ ಹತ್ರ ದಯೆಯಿಂದ ಮಾತಾಡ್ತಾರೆ, ಅವನನ್ನ ಅರ್ಥಮಾಡ್ಕೊಳ್ತಾರೆ. ‘ಅವನಿಗೆ ಸಹಾಯ ಮಾಡೋಕೆ ನಾವು ಹಾಕೋ ಪ್ರಯತ್ನನ ಆಶೀರ್ವದಿಸಪ್ಪಾ’ ಅಂತ ಯೆಹೋವನಿಗೆ ಪ್ರಾರ್ಥಿಸ್ತಾರೆ. ಅಷ್ಟೇ ಅಲ್ಲ, ಅವನಿಗೆ ಬುದ್ಧಿ ಬಂದು ಪಶ್ಚಾತ್ತಾಪನೂ ಪಡ್ತಾನೆ ಅಂತ ನಂಬಿಕೆ ಇಡ್ತಾರೆ.—2 ತಿಮೊ. 2:25, 26.

ಚಿತ್ರಗಳು: 1. ಮೂರು ಹಿರಿಯರು ಒಬ್ಬ ಸಹೋದರನನ್ನ ಭೇಟಿ ಮಾಡಿದ್ದಾರೆ. ಹಿರಿಯರು ಮಾತಾಡುವಾಗ ಆ ಸಹೋದರ ಬೇರೆ ಕಡೆಗೆ ನೋಡ್ತಿದ್ದಾನೆ. 2. ಆಮೇಲೆ, ಹಿರಿಯರು ಆ ಸಹೋದರನನ್ನ ಮತ್ತೆ ಭೇಟಿ ಮಾಡಿದ್ದಾರೆ. ಹಿರಿಯರು ಮಾತಾಡುವಾಗ ಆ ಸಹೋದರ ಗಮನಕೊಟ್ಟು ಕೇಳ್ತಿದ್ದಾನೆ.

ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡೋಕೆ ಸಾಕಷ್ಟು ಸಮಯ ಕೊಡೋಕಂತ ಹಿರಿಯರು ಅವ್ರನ್ನ ಒಂದಕ್ಕಿಂತ ಜಾಸ್ತಿ ಸಲ ಭೇಟಿ ಮಾಡಬಹುದು (ಪ್ಯಾರ 12 ನೋಡಿ)


14. (ಎ) ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ಆ ಮಹಿಮೆ ಯಾರಿಗೆ ಮಾತ್ರ ಹೋಗಬೇಕು? (ಬಿ) ನಾವು ಯಾಕೆ ಹಾಗೆ ಹೇಳಬಹುದು?

14 ಪಾಪ ಮಾಡಿದ ವ್ಯಕ್ತಿ ಒಂದುವೇಳೆ ಪಶ್ಚಾತ್ತಾಪ ಪಟ್ರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ! (ಲೂಕ 15:7, 10) ಅದ್ರೆ ಈ ಮಹಿಮೆ ಯಾರಿಗೆ ಮಾತ್ರ ಹೋಗಬೇಕು? ಹಿರಿಯರಿಗಾ? ಅಲ್ಲ! ಪಾಪ ಮಾಡಿದವರು ‘ಪಶ್ಚಾತ್ತಾಪ ಪಡೋಕೆ ದೇವರು ಅವ್ರಿಗೆ ಅವಕಾಶ ಕೊಡಬಹುದು’ ಅಂತ ಪೌಲ ಹೇಳಿದ. (2 ತಿಮೊ. 2:25) ಹಾಗಾಗಿ ಪಶ್ಚಾತ್ತಾಪ ಪಡೋಕೆ ಯಾವುದೇ ಮನುಷ್ಯ ಅಲ್ಲ, ಯೆಹೋವ ದೇವರೇ ಅವನಿಗೆ ಸಹಾಯ ಮಾಡ್ತಾರೆ. ಹೀಗೆ ಸಹಾಯ ಮಾಡೋದ್ರಿಂದ ಆ ವ್ಯಕ್ತಿ ತನ್ನ ಯೋಚ್ನೆನ, ನಡತೆನ ಸರಿ ಮಾಡ್ಕೊಳ್ಳೋಕೆ ಆಗುತ್ತೆ. ಯೆಹೋವನ ಸಹಾಯದಿಂದ ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ತುಂಬ ಪ್ರಯೋಜನ ಆಗುತ್ತೆ. ಅವನು ಸತ್ಯದ ಸರಿಯಾದ ಜ್ಞಾನ ಪಡ್ಕೊಳ್ತಾನೆ, ಅವನಿಗೆ ಮತ್ತೆ ಬುದ್ಧಿ ಬರುತ್ತೆ. ಅಷ್ಟೇ ಅಲ್ಲ, ಅವನು ಸೈತಾತನ ಬಲೆಯಿಂದ ತಪ್ಪಿಸ್ಕೊಳ್ತಾನೆ.—2 ತಿಮೊ. 2:26.

15. ಪಶ್ಚಾತ್ತಾಪ ಪಟ್ಟ ವ್ಯಕ್ತಿಗೆ ಸಹಾಯ ಮಾಡೋಕೆ ಹಿರಿಯರು ಏನು ಮಾಡ್ತಾರೆ?

15 ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ಆ ಕಮಿಟಿಯಲ್ಲಿರೋ ಹಿರಿಯರು ಆಗಾಗ ಅವನಿಗೆ ಪರಿಪಾಲನಾ ಭೇಟಿ ಮಾಡೋಕೆ ಏರ್ಪಾಡು ಮಾಡ್ತಾರೆ. ಇದ್ರಿಂದ ಅವನು ಸೈತಾನನ ಬಲೆಯಿಂದ ತಪ್ಪಿಸ್ಕೊಳ್ಳೋಕೆ ಮತ್ತು ಸರಿಯಾಗಿರೋದನ್ನ ಮಾಡೋಕೆ ಸಹಾಯ ಆಗುತ್ತೆ. (ಇಬ್ರಿ. 12:12, 13) ಆ ವ್ಯಕ್ತಿ ಮಾಡಿದ ಪಾಪ ಯಾವುದು ಅಂತಾಗ್ಲಿ ಅಥವಾ ಆ ಪಾಪದ ಬಗ್ಗೆ ಬೇರೆ ಯಾವುದೇ ವಿವರವನ್ನಾಗ್ಲಿ ಹಿರಿಯರು ಯಾರಿಗೂ ಹೇಳಲ್ಲ. ಆದ್ರೆ ಅವರು ಸಭೆಗೆ ಒಂದು ವಿಷ್ಯನ ತಿಳಿಸಬೇಕಾಗಬಹುದು. ಅದು ಯಾವುದು?

“ಎಲ್ರ ಮುಂದೆ ತಿದ್ದು”

16. “ಎಲ್ರ ಮುಂದೆ ತಿದ್ದು” ಅಂತ ಪೌಲ ಹೇಳಿದ್ರ ಅರ್ಥ ಏನು? (1 ತಿಮೊತಿ 5:20)

16 ಒಂದನೇ ತಿಮೊತಿ 5:20 ಓದಿ. ಪೌಲ ಹಿರಿಯನಾಗಿದ್ದ ತಿಮೊತಿಗೆ “ಪಾಪ ಮಾಡ್ತಾ ಇರುವವನನ್ನ ಎಲ್ರ ಮುಂದೆ ತಿದ್ದು” ಅಂತ ಹೇಳಿದ. ಹಾಗಾದ್ರೆ “ಎಲ್ರ ಮುಂದೆ ತಿದ್ದು” ಅನ್ನೋದ್ರ ಅರ್ಥ ಏನು? ಪೌಲ ಇಲ್ಲಿ ಇಡೀ ಸಭೆ ಮುಂದೆ ತಿದ್ದು ಅಂತ ಹೇಳ್ತಿರಲಿಲ್ಲ. ಬದ್ಲಿಗೆ ಆ ಪಾಪದ ಬಗ್ಗೆ ಗೊತ್ತಿರೋ ಕೆಲವ್ರ ಮುಂದೆ ಹೇಳು ಅಂತ ಹೇಳ್ತಿದ್ದಾನೆ. ಈ ಕೆಲವರು ಯಾರು? ಯಾರು ಆ ಪಾಪನ ಕಣ್ಣಾರೆ ನೋಡಿದ್ದಾರೋ ಅಥವಾ ಅವನೇ ಹೋಗಿ ಯಾರತ್ರ ಆ ಪಾಪದ ಬಗ್ಗೆ ಹೇಳಿದ್ದಾನೋ ಅವರು. ಹಾಗಾಗಿ ಇವರ ಹತ್ರ ಮಾತ್ರ ಹಿರಿಯರು ‘ಪಾಪ ಮಾಡಿದ ವ್ಯಕ್ತಿ ಜೊತೆ ನಾವು ಮಾತಾಡಿದ್ದೀವಿ, ಅವನಿಗೆ ಬುದ್ಧಿ ಹೇಳಿ ತಿದ್ದಿದ್ದೀವಿ’ ಅಂತ ಹೇಳ್ತಾರೆ.

17. ಒಬ್ಬ ವ್ಯಕ್ತಿ ಮಾಡಿದ ಗಂಭೀರ ಪಾಪದ ಬಗ್ಗೆ ಸಭೇಲಿ ಹೆಚ್ಚಿನವ್ರಿಗೆ ಈಗಾಗ್ಲೇ ಗೊತ್ತಾಗಿದ್ರೆ ಅಥವಾ ಮುಂದೆ ಗೊತ್ತಾಗೋದಾದ್ರೆ ಸಭೇಲಿ ಯಾವ ಪ್ರಕಟಣೆ ಮಾಡಲಾಗುತ್ತೆ ಮತ್ತು ಯಾಕೆ?

17 ಇನ್ನೂ ಕೆಲವು ಸಂದರ್ಭಗಳಲ್ಲಿ ಆ ವ್ಯಕ್ತಿ ಮಾಡಿದ ಪಾಪದ ಬಗ್ಗೆ ಸಭೆಲಿರೋ ತುಂಬ ಜನ್ರಿಗೆ ಈಗಾಗ್ಲೇ ಗೊತ್ತಿರಬಹುದು ಅಥವಾ ಮುಂದೆ ಗೊತ್ತಾಗಬಹುದು. ಇಂಥ ಸಂದರ್ಭದಲ್ಲಿ ಮಾತ್ರ “ಎಲ್ರ ಮುಂದೆ” ಅಂತ ಪೌಲ ಹೇಳಿದ್ದು ಇಡೀ ಸಭೆಯನ್ನ ಸೂಚಿಸುತ್ತೆ. ಹಾಗಾಗಿ ಪಾಪ ಮಾಡಿದ ಸಹೋದರ ಅಥವಾ ಸಹೋದರಿಗೆ ತಿದ್ದುಪಾಟು ಕೊಡಲಾಗಿದೆ ಅನ್ನೋ ಪ್ರಕಟಣೆಯನ್ನ ಒಬ್ಬ ಹಿರಿಯ ಸಭೆ ಮುಂದೆ ಮಾಡ್ತಾನೆ. ಯಾಕೆ? ಗಂಭೀರ ಪಾಪ ಮಾಡದೇ ಇರೋಕೆ “ಬೇರೆಯವ್ರಿಗೂ ಎಚ್ಚರಿಕೆ ಸಿಗುತ್ತೆ” ಅಂತ ಪೌಲ ಹೇಳಿದ.

18. ದೀಕ್ಷಾಸ್ನಾನ ಪಡೆದ 18 ವರ್ಷದೊಳಗಿರೋ ಮಕ್ಕಳು ಗಂಭೀರ ಪಾಪ ಮಾಡಿದ್ರೆ ಹಿರಿಯರು ಏನು ಮಾಡ್ತಾರೆ? (ಚಿತ್ರ ನೋಡಿ.)

18 ದೀಕ್ಷಾಸ್ನಾನ ಪಡ್ಕೊಂಡಿರೋ ಅಪ್ರಾಪ್ತ ವಯಸ್ಸಿನ ಮಕ್ಕಳು ಅಂದ್ರೆ 18 ವರ್ಷದೊಳಗಿರೋ ಮಕ್ಕಳು ಗಂಭೀರ ಪಾಪ ಮಾಡೋದಾದ್ರೆ ಹಿರಿಯರು ಏನು ಮಾಡ್ತಾರೆ? ಹಿರಿಯ ಮಂಡಲಿ ಇಬ್ರು ಹಿರಿಯರನ್ನ ನೇಮಿಸ್ತಾರೆ. ಇವರು ಆ ಮಗುವಿನ ಜೊತೆ ಆ ಮಗುವಿನ ಕ್ರೈಸ್ತ ಅಪ್ಪಅಮ್ಮನನ್ನb ಕೂರಿಸಿ ಮಾತಾಡಿಸ್ತಾರೆ. ಆ ಮಗು ಪಶ್ಚಾತ್ತಾಪ ಪಡೋಕೆ ಈಗಾಗ್ಲೇ ಅವರು ಯಾವೆಲ್ಲ ಸಹಾಯ ಮಾಡಿದ್ದಾರೆ ಅಂತ ಈ ಹಿರಿಯರು ಕೇಳಿ ತಿಳ್ಕೊಳ್ತಾರೆ. ಆ ಮಗು ಅಪ್ಪಅಮ್ಮ ಕೊಟ್ಟ ಸಲಹೆಯನ್ನ ಕೇಳ್ತಾ ಇದ್ರೆ ಮತ್ತು ತನ್ನ ಯೋಚ್ನೆನ, ನಡ್ಕೊಳ್ಳೋ ರೀತಿನ ಬದಲಾಯಿಸೋಕೆ ತಯಾರಿದ್ರೆ ಅಪ್ಪಅಮ್ಮನೇ ಆ ಮಗುಗೆ ಸಹಾಯ ಮಾಡೋಕೆ ಹಿರಿಯರು ಬಿಟ್ಟುಬಿಡ್ತಾರೆ. (ಧರ್ಮೋ. 6:6, 7; ಜ್ಞಾನೋ. 6:20; 22:6; ಎಫೆ. 6:2-4) ನಮಗೆಲ್ಲ ಗೊತ್ತಿರೋ ಹಾಗೆ ಮಕ್ಕಳಿಗೆ ಬುದ್ಧಿ ಹೇಳೋಕೆ, ಅವ್ರನ್ನ ಸರಿಯಾಗಿ ಬೆಳೆಸೋಕೆ ಯೆಹೋವ ದೇವರು ಅಪ್ಪಅಮ್ಮಂಗೆ ಜವಾಬ್ದಾರಿಯನ್ನ ಕೊಟ್ಟಿದ್ದಾರೆ. ಹಾಗಂತ ಹಿರಿಯರು ಆ ಮಗು ಬಗ್ಗೆ ಮರೆತುಬಿಡಲ್ಲ. ಆ ಮಗು ಎಷ್ಟರ ಮಟ್ಟಿಗೆ ತಿದ್ಕೊಳ್ತಿದ್ದಾನೆ ಅಂತ ಹೆತ್ತವರ ಹತ್ರ ಆಗಾಗ ಕೇಳಿ ತಿಳ್ಕೊಳ್ತಾರೆ. ಆದ್ರೆ ಆ ಮಗು ಪಶ್ಚಾತ್ತಾಪ ಪಡದೆ ಮತ್ತೆಮತ್ತೆ ಅದೇ ಪಾಪನ ಮಾಡ್ತಾ ಇರೋದಾದ್ರೆ ಹಿರಿಯರು ಏನು ಮಾಡ್ತಾರೆ? ಒಂದು ಹಿರಿಯರ ಕಮಿಟಿ ಆ ಮಗುವನ್ನ ಕ್ರೈಸ್ತ ಅಪ್ಪಅಮ್ಮನ ಜೊತೆ ಭೇಟಿ ಮಾಡ್ತಾರೆ.

ಇಬ್ರು ಹಿರಿಯರು ದೀಕ್ಷಾಸ್ನಾನ ಪಡೆದ ಅಪ್ರಾಪ್ತ ಹುಡುಗನನ್ನ ಅವನ ಹೆತ್ತವ್ರ ಜೊತೆ ಅವನ ಮನೇಲಿ ಭೇಟಿ ಮಾಡಿದ್ದಾರೆ. ಅವ್ರಲ್ಲಿ ಒಬ್ಬ ಹಿರಿಯ ಒಂದು ಬೈಬಲ್‌ ವಚನ ತೋರಿಸಿ ಮಾತಾಡ್ತಿದ್ದಾನೆ.

ಅಪ್ರಾಪ್ತ ವಯಸ್ಸಿನ ಮಕ್ಕಳು ಪಾಪ ಮಾಡಿದ್ರೆ ಇಬ್ರು ಹಿರಿಯರು ಅವ್ರ ಕ್ರೈಸ್ತ ಅಪ್ಪಅಮ್ಮ ಮುಂದೆ ಕೂತು ಮಾತಾಡಿಸ್ತಾರೆ (ಪ್ಯಾರ 18 ನೋಡಿ)


“ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ”

19. ಗಂಭೀರ ಪಾಪ ಮಾಡಿದ ವ್ಯಕ್ತಿಗೆ ಹಿರಿಯರು ಸಹಾಯ ಮಾಡುವಾಗ ಹೇಗೆ ಯೆಹೋವ ದೇವರ ತರಾನೇ ನಡ್ಕೊಳ್ತಾರೆ?

19 ಕಮಿಟಿಯಲ್ಲಿರೋ ಹಿರಿಯರಿಗೆ ಸಭೆನ ಶುದ್ಧವಾಗಿ ಇಡೋ ದೊಡ್ಡ ಜವಾಬ್ದಾರಿ ಇದೆ. (1 ಕೊರಿಂ. 5:7) ಅದೇ ಸಂದರ್ಭದಲ್ಲಿ, ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡೋಕೆ ತಮ್ಮಿಂದಾದ ಎಲ್ಲ ಸಹಾಯನೂ ಮಾಡ್ತಾರೆ. ಆ ವ್ಯಕ್ತಿ ಬದಲಾಗ್ತಾನೆ ಅನ್ನೋ ನಂಬಿಕೆನೂ ಇಡ್ತಾರೆ. ಯಾಕಂದ್ರೆ ಅವರು ಯೆಹೋವನ ತರ ಇರೋಕೆ ಬಯಸ್ತಾರೆ. “ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ” ಅಂತ ಬೈಬಲ್‌ ಹೇಳುತ್ತೆ. (ಯಾಕೋ. 5:11) ವಯಸ್ಸಾದ ಅಪೊಸ್ತಲ ಯೋಹಾನನೂ ಹೀಗೇ ನಡ್ಕೊಂಡ. ಅದಕ್ಕೆ ಅವನು “ನನ್ನ ಪ್ರೀತಿಯ ಮಕ್ಕಳೇ, ನೀವು ಪಾಪ ಮಾಡಬಾರದು ಅಂತ ಈ ವಿಷ್ಯಗಳ ಬಗ್ಗೆ ನಿಮಗೆ ಬರೀತಾ ಇದ್ದೀನಿ. ಆದ್ರೆ ಯಾರಾದ್ರೂ ಪಾಪ ಮಾಡೋದಾದ್ರೆ ಅವ್ರಿಗೆ ಸಹಾಯ ಮಾಡೋಕೆ ತಂದೆ ಹತ್ರ ನೀತಿವಂತನಾಗಿರೋ ಯೇಸು ಕ್ರಿಸ್ತ ಇದ್ದಾನೆ” ಅಂತ ಹೇಳಿದ.—1 ಯೋಹಾ. 2:1.

20. ಮುಂದಿನ ಲೇಖನದಲ್ಲಿ ನಾವೇನ್‌ ಕಲಿತೀವಿ?

20 ಬೇಜಾರಿನ ವಿಷ್ಯ ಏನಂದ್ರೆ ಕೆಲವರು ಪಶ್ಚಾತ್ತಾಪ ಪಡೋಕೆ ಒಪ್ಪೋದೇ ಇಲ್ಲ. ಆಗ ಅವ್ರನ್ನ ಸಭೆಯಿಂದ ಹೊರಗೆ ಹಾಕಬೇಕಾಗುತ್ತೆ. ಇಂಥವ್ರಿಗೆ ಸಹಾಯ ಮಾಡೋಕೆ ಹಿರಿಯರು ಏನು ಮಾಡ್ತಾರೆ? ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.

ನೀವೇನು ಹೇಳ್ತೀರಾ?

  • ಪಾಪ ಮಾಡಿದ ವ್ಯಕ್ತಿ ಜೊತೆ ಹಿರಿಯರು ಮಾತಾಡುವಾಗ ರೋಮನ್ನರಿಗೆ 2:4ರಲ್ಲಿ ಹೇಳಿರೋ ತರ ಅವ್ರ ಮುಖ್ಯ ಗುರಿ ಏನಾಗಿರುತ್ತೆ?

  • ಹಿರಿಯರು ಹೇಗೆ ನಡ್ಕೊಬೇಕು ಅಂತ 2 ತಿಮೊತಿ 2:24-26 ಹೇಳುತ್ತೆ?

  • “ಎಲ್ರ ಮುಂದೆ ತಿದ್ದು” ಅನ್ನೋದ್ರ ಅರ್ಥ ಏನು?

ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು

a ಹಿಂದೆ ಈ ಕಮಿಟಿಯನ್ನ ನಾವು ನ್ಯಾಯನಿರ್ಣಾಯಕ ಕಮಿಟಿ ಅಂತ ಕರೀತಿದ್ವಿ. ಹಿರಿಯರಿಗೆ ಇರೋ ಎಷ್ಟೋ ಕೆಲಸಗಳಲ್ಲಿ ನ್ಯಾಯ ನಿರ್ಣಯಿಸೋದು ಬರೀ ಒಂದು ಕೆಲಸ ಆಗಿದೆ ಅಷ್ಟೇ. ಅದಕ್ಕೆ ಇನ್ಮುಂದೆ ಈ ಪದನ ಬಳಸಲ್ಲ ಅದ್ರ ಬದ್ಲು ಹಿರಿಯರ ಕಮಿಟಿ ಅಂತ ಬಳಸ್ತೀವಿ.

b ಇಲ್ಲಿ ಅಪ್ಪಅಮ್ಮಂಗೆ ಹೇಳಿರೋ ವಿಷ್ಯಗಳು ಅಪ್ರಾಪ್ತ ವಯಸ್ಸಿನ ಮಕ್ಕಳ ಕಾನೂನುಬದ್ಧ ಪೋಷಕರಿಗೂ ಅಥವಾ ಆ ಮಕ್ಕಳ ಜವಾಬ್ದಾರಿ ತಗೊಂಡಿರೋರಿಗೂ ಅನ್ವಯಿಸುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ