ಆಡಳಿತ ಮಂಡಲಿಯ ಪತ್ರ
ಪ್ರಿಯ ಜೊತೆ ಸಾಕ್ಷಿಗಳೇ,
ಯೆಹೋವನಿಗೆ ನಂಬಿಗಸ್ತ ಸೇವೆ ಸಲ್ಲಿಸುತ್ತಿರುವ 70 ಲಕ್ಷಕ್ಕೂ ಹೆಚ್ಚು ಮಂದಿಗೆ ಈ ಪತ್ರ ಬರೆಯಲು ತುಂಬ ಸಂತೋಷವಾಗುತ್ತಿದೆ. ಲೋಕದ ಯಾವುದೇ ಕಡೆಯ ಸಾಕ್ಷಿಯೊಬ್ಬರು ಸಿಗುವಾಗ ನಮಗೂ ಅವರಿಗೂ ವಿಶೇಷ ಬಾಂಧವ್ಯವಿದೆ ಎಂದು ತಕ್ಷಣ ಅನಿಸುತ್ತದೆ. (ಯೋಹಾ. 13:34, 35) ಬೇರೆಬೇರೆ ದೇಶಗಳ ಸಹೋದರ ಸಹೋದರಿಯರ ನಂಬಿಕೆ-ನಿಷ್ಠೆಗೆ ನಿದರ್ಶನವಾಗಿರುವ ಮನಸೆಳೆಯುವ ಕಥನ/ಅನುಭವಗಳನ್ನು ಓದುವಾಗಲೂ ಅದೇ ಅನಿಸಿಕೆ ಮೂಡುತ್ತದಲ್ಲವೆ?
ಲೋಕದೆಲ್ಲೆಡೆಯಿಂದ ಬರುತ್ತಿರುವ ವರದಿಗಳಲ್ಲಿ ತಿಳಿದು ಬಂದದ್ದೇನೆಂದರೆ, ನಿಮ್ಮಲ್ಲಿ ಅನೇಕರು ಕುಟುಂಬ ಆರಾಧನಾ ಕಾರ್ಯಕ್ರಮವನ್ನು ತಪ್ಪದೆ ಮಾಡುತ್ತೀರಿ. ಪುಟಾಣಿ ಮಕ್ಕಳಿರುವ ಹೆತ್ತವರು ಎಷ್ಟೋ ಆಸಕ್ತಿಕರ ವಿಧಗಳಲ್ಲಿ ಅವರ ಮನಸೆಳೆದು ಚರ್ಚೆಗಳನ್ನು ನಡೆಸುತ್ತಿದ್ದಾರೆ. (ಎಫೆ. 6:4) ದಂಪತಿಗಳು ಒಟ್ಟಿಗೆ ಕುಟುಂಬ ಆರಾಧನೆ ಮಾಡುತ್ತಿದ್ದು ಅವರ ವಿವಾಹ ಬಂಧ ಬಲಗೊಳ್ಳುತ್ತಿದೆ. (ಎಫೆ. 5:28-33) ಹೀಗೆ ವ್ಯಕ್ತಿಗತವಾಗಿ ಮತ್ತು ಕುಟುಂಬವಾಗಿ ದೇವರ ವಾಕ್ಯದ ಗಹನ ಅಧ್ಯಯನಕ್ಕಾಗಿರುವ ಈ ಏರ್ಪಾಡಿನಿಂದ ಎಲ್ಲರಿಗೂ ತುಂಬ ಪ್ರಯೋಜನವಾಗುತ್ತಿದೆ.—ಯೆಹೋ. 1:8, 9.
ನಿಮ್ಮಲ್ಲಿ ಎಷ್ಟೋ ಮಂದಿ ಇತ್ತೀಚಿನ ನೈಸರ್ಗಿಕ ವಿಪತ್ತುಗಳಲ್ಲಿ ಸಿಕ್ಕಿ ಕಷ್ಟಪಟ್ಟಿದ್ದೀರಿ. ನಿಮಗಾಗಿ ನಮ್ಮ ಮನಮರುಗುತ್ತದೆ. ಇಂಥ ಕಷ್ಟಕಾಲದಲ್ಲಿ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ನಾವು ಧನ್ಯವಾದ ಹೇಳುತ್ತೇವೆ. (ಅ. ಕಾ. 11:28-30; ಗಲಾ. 6:9, 10) ಇದಲ್ಲದೆ ನಿಮ್ಮಲ್ಲಿ ಎಷ್ಟೋ ಮಂದಿ ನಿಮ್ಮನಿಮ್ಮ ಸಭೆಗಳಲ್ಲೇ ಭೌತಿಕ ಅಗತ್ಯವುಳ್ಳವರಿಗೆ ತೆರೆಮರೆಯಲ್ಲಿದ್ದು ಸಹಾಯ ಮಾಡುತ್ತಿದ್ದೀರಿ. ಹಿಂದಿನ ಕಾಲದ ದೊರ್ಕಳಂತೆ ನೀವು “ಸತ್ಕ್ರಿಯೆಗಳಲ್ಲಿಯೂ ದಾನಧರ್ಮಗಳಲ್ಲಿಯೂ” ಸದಾ ನಿರತರಾಗಿದ್ದೀರಿ. (ಅ. ಕಾ. 9:36) ಯೆಹೋವನು ಇದನ್ನೆಲ್ಲಾ ನೋಡುತ್ತಿದ್ದಾನೆ. ನಿಮಗೆ ಪ್ರತಿಫಲವನ್ನು ಕೊಟ್ಟೇ ಕೊಡುತ್ತಾನೆ.—ಮತ್ತಾ. 6:3, 4.
ಕೆಲವು ದೇಶಗಳಲ್ಲಿ, ಕಾನೂನನ್ನು ತಿರುಚಿ ಕೇಡುಕಲ್ಪಿಸುವವರು ನಿಮ್ಮ ಹಕ್ಕುಗಳನ್ನು ಕಾಲಕೆಳಗೆ ಹಾಕಿ ಹೊಸಕಿಹಾಕಿದ್ದಾರೆ. (ಕೀರ್ತ. 94:20-22) ಆದರೆ ಇಂತೆಲ್ಲಾ ಕಷ್ಟ ಬಂದೇ ಬರುವುದೆಂದು ಯೇಸು ಮುಂತಿಳಿಸಿದ್ದಾನೆಂದು ನಿಮಗೆ ಗೊತ್ತು. ಆದ್ದರಿಂದ ನೀವು ಧೈರ್ಯದಿಂದ ಇದನ್ನೆಲ್ಲಾ ತಾಳಿಕೊಳ್ಳುತ್ತಾ ಯೆಹೋವನನ್ನು ನಿಮ್ಮ ಆಶ್ರಯಗಿರಿಯನ್ನಾಗಿ ಮಾಡಿಕೊಂಡಿದ್ದೀರಿ. (ಯೋಹಾ. 15:19, 20) ‘ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರ ಮುಂದೆ ಉತ್ತರ ಹೇಳುತ್ತಾ’ ಇರುವ ನಿಮ್ಮನ್ನು ನಮ್ಮ ಪ್ರಾರ್ಥನೆಗಳಲ್ಲಿ ಸದಾ ನೆನಸಿಕೊಳ್ಳುತ್ತೇವೆ.—1 ಪೇತ್ರ 3:13-15.
ಸೈತಾನ ಅನೈತಿಕತೆಯೆಂಬ ಬಲೆಯನ್ನು ಬೀಸುತ್ತಾ ಜನರನ್ನು ಕುಟಿಲ ವಿಧಾನಗಳಿಂದ ಸಿಕ್ಕಿಸಿಹಾಕಲು ಅವಿರತ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಅವನ ಈ ಕುಟಿಲತೆಗೆ ಬಲಿಬೀಳದೆ ನೈತಿಕವಾಗಿ ಶುದ್ಧರಾಗಿ ಉಳಿದಿರುವ ನಿಮ್ಮೆಲ್ಲರನ್ನು ತುಂಬ ಶ್ಲಾಘಿಸುತ್ತೇವೆ. ಲೋಕದ ನೈತಿಕ ಮಟ್ಟ ತೀರ ಅವನತಿಗೆ ಇಳಿದಿರುವ ಈ ಕಾಲದಲ್ಲಿ “ಕರ್ತನಲ್ಲಿಯೂ ಆತನ ಪರಾಕ್ರಮಭರಿತ ಶಕ್ತಿಯಲ್ಲಿಯೂ ನೀವು ಬಲವನ್ನು ಪಡೆದುಕೊಳ್ಳುತ್ತಾ” ಇದ್ದೀರಿ. (ಎಫೆ. 6:10) ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಂಡು ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಂತಿದ್ದೀರಿ.’ (ಎಫೆ. 6:11, 12) ಯೆಹೋವನು ನಿಮ್ಮ ಒಳ್ಳೇ ಮಾದರಿಯನ್ನು ತೋರಿಸಿ ತನ್ನನ್ನು ಹಂಗಿಸುತ್ತಿರುವ ಸೈತಾನನಿಗೆ ಸರಿಯಾದ ಉತ್ತರ ನೀಡುತ್ತಿದ್ದಾನೆ!—ಜ್ಞಾನೋ. 27:11.
2011ರಲ್ಲಿ ನಮ್ಮ ಕರ್ತನ ಮರಣದ ಸ್ಮರಣೆಗೆ 1,93,74,737 ಮಂದಿ ಹಾಜರಾದದ್ದನ್ನು ಕೇಳಿ ಹರ್ಷಿಸಿದೆವು. ಇಷ್ಟು ದೊಡ್ಡ ಹಾಜರಿಗೆ ಒಂದು ಮುಖ್ಯ ಕಾರಣ ಕಳೆದ ಏಪ್ರಿಲ್ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಂತೆ ಕೊಟ್ಟ ಕರೆಗೆ ನೀವು ನೀಡಿದ ಅಮೋಘ ಪ್ರತಿಕ್ರಿಯೆಯೇ. 26,57,377 ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದಿರಿ! ಇದರಿಂದ ಯೆಹೋವನ ನಿಷ್ಠಾವಂತ ಸಾಕ್ಷಿಗಳು ಏಕಕಂಠದಿಂದ ಯೆಹೋವನಿಗೆ ಸಲ್ಲಿಸಿದ ಸ್ತುತಿ ಲೋಕದೆಲ್ಲೆಡೆ ಲಕ್ಷಾಂತರ ಮಂದಿಯ ಕಿವಿಗೆ ಬಿತ್ತು. (ರೋಮ. 10:18) ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲಾಗದವರು ಸೇವೆಯಲ್ಲಿ ಹೆಚ್ಚನ್ನು ಮಾಡಲು ಪ್ರಯತ್ನಿಸಿದಿರಿ. ನಿಮ್ಮೆಲ್ಲರ ಸಿದ್ಧಮನಸ್ಸು ಮತ್ತು ಹುರುಪನ್ನು ನೋಡಿ ನಮ್ಮ ಮನಸ್ಸು ಸಂತೋಷದಿಂದ ಬೀಗಿತು.—ಕೀರ್ತ. 110:3; ಕೊಲೊ. 3:23.
ಕಳೆದ ವರ್ಷ 2,63,131 ಮಂದಿ ಹೊಸಬರು ಯೆಹೋವನಿಗೆ ಮಾಡಿಕೊಂಡ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದರು. ನಾವಿದಕ್ಕಾಗಿ ಯೆಹೋವನಿಗೆ ಆಭಾರಿ. ಅಲ್ಲದೆ ನಿಮಗೂ ಧನ್ಯವಾದ. ಏಕೆಂದರೆ “ಕೇಳಿಸಿಕೊಳ್ಳುತ್ತಿರುವ ಪ್ರತಿಯೊಬ್ಬನು ‘ಬಾ!’ ಎನ್ನಲಿ. ಬಾಯಾರುತ್ತಿರುವ ಪ್ರತಿಯೊಬ್ಬನು ಬರಲಿ! ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ” ಎಂಬ ಆಮಂತ್ರಣ ಕೊಡುವುದರಲ್ಲಿ ನೀವೆಲ್ಲರೂ ನಮ್ಮೊಂದಿಗೆ ದನಿಗೂಡಿಸಿದ್ದೀರಿ. (ಪ್ರಕ. 22:17) ಈಗಾಗಲೇ ಸ್ಥಾಪನೆಗೊಂಡಿರುವ ದೇವರ ರಾಜ್ಯದ ವಿವಿಧ ವೈಶಿಷ್ಟ್ಯಗಳ ಬಗ್ಗೆ 2011ರ ಜಿಲ್ಲಾ ಅಧಿವೇಶನದಲ್ಲಿ ತಿಳಿದುಕೊಂಡ ಮೇಲಂತೂ ನಾವು ಇನ್ನಷ್ಟು ಉತ್ಸುಕತೆಯಿಂದ “ದೇವರ ರಾಜ್ಯ ಬರಲಿ” ಎಂದು ಹೇಳುತ್ತಿದ್ದೇವೆ. “ನಾನು ಬೇಗನೆ ಬರುತ್ತೇನೆ” ಎಂದು ಯೇಸು ಕೊಟ್ಟ ಭರವಸೆಗೆ ಸ್ಪಂದಿಸುತ್ತಾ ಅಪೊಸ್ತಲ ಯೋಹಾನನು ಹೇಳಿದಂತೆ ನಾವೂ ಮನಃಪೂರ್ವಕವಾಗಿ “ಆಮೆನ್! ಕರ್ತನಾದ ಯೇಸುವೇ, ಬಾ!” ಎನ್ನುತ್ತೇವೆ.—ಪ್ರಕ. 22:20.
ಮೈ ನವಿರೇಳಿಸುವ ಆ ಅದ್ಭುತ ಘಟನೆಗಾಗಿ ಎದುರುನೋಡುತ್ತಾ ಯೆಹೋವನ ಮೇಲಿನ ಪ್ರೀತಿಯನ್ನು “ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ತೋರಿಸುತ್ತಿರುವ ಪ್ರಿಯ ಸಹೋದರ ಸಹೋದರಿಯರಾದ ನಿಮ್ಮಲ್ಲಿ ಒಬ್ಬೊಬ್ಬರ ಮೇಲೂ ನಮಗೆ ತುಂಬ ಪ್ರೀತಿಯಿದೆ.—1 ಯೋಹಾ. 3:18.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ