ನಕ್ಷತ್ರಗಳು ನಿಮಗೇನು ತಿಳಿಸಬಲ್ಲವು?
ಮೋಡವಿಲ್ಲದ ರಾತ್ರಿ ಕಾಣಬರುವ ನಕ್ಷತ್ರರಂಜಿತ ಆಕಾಶವು ನಿಜವಾಗಿಯೂ ಶೋಭಾಯಮಾನವಾದ ದೃಶ್ಯ. ಬೆಳ್ಳಿಹೊಳಪಿನ ಚಂದ್ರ, ಅಸಂಖ್ಯಾತ ಮಿನುಗುವ ತಾರೆಗಳು, ನಸುಬೆಳಕಿನ ಕ್ಷೀರಪಥ—ಇವೆಲ್ಲವೂ ಅಷ್ಟು ಶಾಂತವಾಗಿ ರಹಸ್ಯಗರ್ಭಿತವಾಗಿ ತೋರಿಬರುತ್ತವೆ. ಆದುದರಿಂದ, “ಅವು ಏಕೆ ಅಲ್ಲಿವೆ? ಅವು ನಮಗೆ ಏನಾದರೂ ತಿಳಿಸಲು ಪ್ರಯತ್ನಿಸುತ್ತಿವೆಯೋ?” ಎಂದು ಒಬ್ಬನು ಪ್ರಶ್ನಿಸುವುದು ಸ್ವಾಭಾವಿಕ.
ಈ ಕಂಗೆಡಿಸುವ ಪ್ರಶ್ನೆಗಳಿಗೆ ಮನುಷ್ಯರು ಅನಾದಿಕಾಲದಿಂದಲೂ ಉತ್ತರವನ್ನು ಕಂಡುಹಿಡಿಯ ಪ್ರಯತ್ನಿಸಿದ್ದಾರೆ. ಆದರೂ, ಸಂಬಂಧಸೂಚಕವಾಗಿ ಇತ್ತೀಚೆಗೆ ಮಾತ್ರ ನಮ್ಮ ಭೌತವಿಶ್ವವು ಹುಡುಕಲಾಗದ ರೀತಿಯಲ್ಲಿ ಎಷ್ಟು ವಿಸ್ತಾರವಾಗಿದೆ ಮತ್ತು ಇದಕ್ಕೆ ಹೋಲಿಸುವಾಗ, ಭೂಮಿ ಎಷ್ಟು ಚಿಕ್ಕದೂ ಅಲ್ಪವೂ ಆದ ಚುಕ್ಕೆಯಾಗಿದೆ ಎಂದು ವಿಜ್ಞಾನಿಗಳು ಗ್ರಹಿಸಲಾರಂಭಿಸಿದ್ದಾರೆ. ಹಾಗಾದರೆ ಲಕ್ಷಾಂತರ ಬೆಳಕಿನ ವರ್ಷದೂರದಲ್ಲಿರುವ ಈ ಕೋಟ್ಯಾನುಕೋಟಿ ಆಕಾಶಗಂಗೆಗಳು ನಮ್ಮ ಜೀವನ ಮತ್ತು ವಿಧಿಯ ಅರ್ಥ ಹೇಳಲು ಮಾತ್ರ ಅಲ್ಲಿವೆ ಎಂದು ಭಾವಿಸುವುದು ಅದೆಷ್ಟು ಅವಿವೇಕದ ವಿಷಯ! ಅದಕ್ಕಿಂತಲೂ ಎಷ್ಟೋ ಮಹತ್ತಾದ ಯಾವುದನ್ನೋ ಅವುಗಳಿರಬೇಕು.
ಸ್ಪಷ್ಟ ಸಂದೇಶ
ನಾವು ನೋಡಿರುವಂತೆ, ಕೆಲವರು ನಕ್ಷತ್ರಗಳಲ್ಲಿ ರಹಸ್ಯಗರ್ಭಿತ ಸೂಚನೆ ಮತ್ತು ಶಕುನಗಳನ್ನು ಓದಲು ಪ್ರಯತ್ನಿಸುತ್ತಾರಾದರೂ, ಅನೇಕರಿಗೆ ನಕ್ಷತ್ರರಂಜಿತ ಗಗನದ ಮಹಿಮೆಯು ಆಳವಾದ ಭಯಭಕ್ತಿಯನ್ನು ಹುಟ್ಟಿಸುವ ಗಂಭೀರವೂ ಮಹೋನ್ನತವೂ ಆದ ಒಂದು ಸಂದೇಶವನ್ನು ತಿಳಿಸುತ್ತದೆ. ಅಂತರಿಕ್ಷ ವಿಜ್ಞಾನಿ ವರ್ನರ್ ವ್ಯಾನ್ ಬ್ರಾನ್ ಗಮನಿಸಿದ್ದು: “ವಿಶ್ವದ ಪ್ರಕೃತಿ ನಿಯಮಗಳು ಎಷ್ಟು ನಿಷ್ಕೃಷ್ಟವೆಂದರೆ ಆ ನಿಯಮಗಳನ್ನು ಯಾರೋ ಒಬ್ಬನು ಗೊತ್ತುಮಾಡಿ ಇಟ್ಟಿರಬೇಕು.” ಇದೇ ರೀತಿ ಮಾಜಿ ವ್ಯೋಮ ಯಾತ್ರಿಕ ಜಾನ್ ಗ್ಲೆನ್ ಸುತ್ತಲಿರುವ “ನಮ್ಮ ಇಡೀ ವಿಶ್ವದ ಕ್ರಮಬದ್ಧತೆ”ಯ ಕುರಿತು “ಯಾವುದೋ ಶಕ್ತಿ ಇದೆಲ್ಲವನ್ನು ಕಕ್ಷೆಯಲ್ಲಿ ಹಾಕಿ ಅದನ್ನು ಅಲ್ಲಿ ಇಡುತ್ತದೆ” ಎಂದು ಹೇಳಿದರು.
ಆದರೂ ಇದನ್ನು ಗ್ರಹಿಸಲು ಒಬ್ಬ ವಿಶೇಷವಾಗಿ ತರಬೇತು ಹೊಂದಿದ ಉದ್ಯೋಗಸ್ಥನ ಅಥವಾ ಮಹಾವಿಜ್ಞಾನಿಯ ಅವಶ್ಯವಿಲ್ಲ. ದೃಷ್ಟಾಂತಕ್ಕೆ, ಈ ದೃಶ್ಯದಿಂದ ಪ್ರಚೋದಿತನಾಗಿ ಪುರಾತನಕಾಲದ ಒಬ್ಬ ಹಿಬ್ರೂ ಅರಸನು ಕಾವ್ಯರೂಪದಲ್ಲಿ ನಮ್ಮಲ್ಲಿ ಹೆಚ್ಚಿನವರು ಸ್ವಾಭಾವಿಕವಾಗಿ ತೋರಿಸಬಹುದಾದ ಪ್ರತಿಕ್ರಿಯೆಯನ್ನು ನುಡಿದನು. ಅವನು ಬರೆದುದು:
“ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ;
ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.
ದಿನವು ದಿನಕ್ಕೆ ಪ್ರಕಟಿಸುತ್ತಿರುವುದು;
ರಾತ್ರಿಯು ರಾತ್ರಿಗೆ ಅರುಹುತ್ತಿರುವುದು.
ಶಬ್ದವಿಲ್ಲ, ಮಾತಿಲ್ಲ,
ಅವುಗಳ ಸ್ವರ ಕೇಳಿಸುವದಿಲ್ಲ;
ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ.
ಅವುಗಳ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿರುತ್ತವೆ.”—ಕೀರ್ತನೆ 19:1-4.
ಕೌಶಲ್ಯದ ವರ್ಣಚಿತ್ರವು ಅದರ ಚಿತ್ರಗಾರನ ಕೌಶಲ್ಯ ಮತ್ತು ಪ್ರತಿಭೆಯ ಕುರಿತು ಸ್ವಲ್ಪವಾದರೂ ತಿಳಿಸುವಂತೆಯೇ ನಕ್ಷತ್ರಗಳು ಶಬ್ದ, ಮಾತು ಮತ್ತು ಸ್ವರವಿಲ್ಲದೆ ನಮಗೆ ಏನೋ ತಿಳಿಸುತ್ತಲಿವೆ. ಅಲ್ಲ, ತಮ್ಮಲ್ಲಿ ಮಂತ್ರವಿದೆ ಅಥವಾ ನಮ್ಮ ವ್ಯಕ್ತಿತ್ವ ಮತ್ತು ವಿಧಿಯ ಮೇಲೆ ತಾವು ಪ್ರಭಾವ ಬೀರುತ್ತವೆ ಎಂದು ಅವು ಹೇಳುತ್ತವೆಂದಲ್ಲ. ಬದಲಾಗಿ, ನಕ್ಷತ್ರರಂಜಿತ ಗಗನದಲ್ಲಿರುವ ಕ್ರಮ ಮತ್ತು ರಚನೆ, ಅವು ಬುದ್ಧಿಶಕ್ತಿಯುಳ್ಳ ಮತ್ತು ಬಲಾಢ್ಯನಾದ ರಚಕನೂ ಸೃಷ್ಟಿಕರ್ತನೂ ಆದಾತನ ಕೈಕೆಲಸವೆಂಬ ಸ್ಪಷ್ಟ ಸಂದೇಶವನ್ನು ತಿಳಿಸುತ್ತವೆ. ಅಪೊಸ್ತಲ ಪೌಲನು ಹೇಳಿದಂತೆ “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”—ರೋಮಾಪುರ 1:20.
ಸರ್ವವನ್ನು ನಡೆಸುವ ಶಕ್ತಿ
ಭೌತ ವಿಶ್ವದ ಅಧ್ಯಯನದ ಮೂಲಕ ವಿಜ್ಞಾನಿಗಳು ಅತ್ಯಂತ ದೊಡ್ಡ ಆಕಾಶಗಂಗೆಯಿಂದ ಅತ್ಯಂತ ಚಿಕ್ಕ ಪರಮಾಣುವಿನ ತನಕ ಇರುವ ಎಲ್ಲಾ ಭೌತದ್ರವ್ಯವು ಕೆಲವು ನಿರ್ದಿಷ್ಟ ಭೌತಿಕ ನಿಯಮಗಳಿಂದ ನಡೆಸಲ್ಪಡುತ್ತವೆಂದು ತಿಳಿಯುತ್ತಿದ್ದಾರೆ. ಮತ್ತು ನಾವು, ಯಾವ ವಿಶ್ವವು ನೈತಿಕತೆಯ ನಿಯಮ, ಸೂತ್ರಗಳು ಸೇರಿರುವ ನಿರ್ದಿಷ್ಟ ನಿಯಮ, ಸೂತ್ರಗಳಿಂದ ನಡೆಸಲ್ಪಡುತ್ತದೋ ಆ ವಿಶ್ವದ ಭಾಗವಾಗಿದ್ದೇವೆ.
ತರ್ಕಪದ್ಧತಿ ಮತ್ತು ಸಹಜಪ್ರಜ್ಞೆಯ ಪ್ರಕರಣಗ್ರಂಥಕ್ಕೆ ಗೌರವಿಸಲ್ಪಟ್ಟಿರುವ 18ನೆಯ ಶತಮಾನದ ಜರ್ಮನ್ ತತ್ವಜ್ಞಾನಿ ಮತ್ತು ಶಿಕ್ಷಕ ಇಮ್ಮಾನುವೆಲ್ ಕ್ಯಾಂಟ್ ಬರೆದುದು: “ಎರಡು ವಿಷಯಗಳು, ನಾವು ಎಷ್ಟು ಹೆಚ್ಚಾಗಿ ಮತ್ತು ಸ್ತಿಮಿತವಾಗಿ ಅವುಗಳ ವಿಷಯ ಜ್ಞಾಪಿಸಿಕೊಳ್ಳುತ್ತೇವೋ ಆವಾಗ ಮನಸ್ಸನ್ನು ನವೀನ ಮತ್ತು ಹೆಚ್ಚುತ್ತಿರುವ ಶ್ಲಾಘನೆ ಮತ್ತು ಭಯದಿಂದ ತುಂಬಿಸುತ್ತೇವೆ: ಮೇಲಿರುವ ನಕ್ಷತ್ರರಂಜಿತ ಗಗನ ಮತ್ತು ನಮ್ಮೊಳಗಿನ ನೈತಿಕ ನಿಯಮ.” ಹೌದು, ಭೌತಿಕ “ನಕ್ಷತ್ರರಂಜಿತ ಗಗನ”ವನ್ನು ಆಳುವ ನಿಯಮಗಳನ್ನು ಸೃಷ್ಟಿಸಿದಾತನೇ “ನಮ್ಮೊಳಗಿರುವ ನೈತಿಕ ನಿಯಮ”ವನ್ನೂ ಸೃಷ್ಟಿಸಿದನು.(ರೋಮಾಪುರ 2:14, 15) ಈ ದೇವರ ವಾಕ್ಯದಿಂದ ಪೋಷಿಸಲ್ಪಟ್ಟು ವಿಕಸಿಸಲ್ಪಡುವ ಈ “ಒಳಗಿರುವ . . . ನಿಯಮವು” ನಮ್ಮ ಸಂತೋಷದ ಮತ್ತು ಜೀವನದ ಉದ್ದೇಶದ ಅನ್ವೇಷಣೆಯಲ್ಲಿ ನಮ್ಮನ್ನು ನಡೆಸಬಲ್ಲದು. ಈ ಕಾರಣದಿಂದಲೇ, ಕೀರ್ತನೆಗಾರನು ಆಕಾಶದ ನಕ್ಷತ್ರಗಳನ್ನು ಗಮನಿಸಿ ದೇವರ ಮಹಿಮೆಯನ್ನು ಒಪ್ಪಿಕೊಳ್ಳಲು ಪ್ರಚೋದಿತನಾದ ಬಳಿಕ ಹೀಗೆಂದನು:
ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು.
ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.
ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ.
ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತವೆ.
ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ.
ಯೆಹೋವನ ವಿಧಿಗಳು ಯಥಾರ್ಥವಾದವುಗಳು, ಅವು ಕೇವಲ ನ್ಯಾಯವಾಗಿವೆ.”—ಕೀರ್ತನೆ 19:7-9.
ಹಾಗಾದರೆ, ನಕ್ಷತ್ರಗಳೇನು ತಿಳಿಸುತ್ತವೆ? ಏನಂದರೆ, ಸೃಷ್ಟಿಕರ್ತನು ವಿವೇಕ ಮತ್ತು ಪ್ರೀತಿಯಿಂದ ನಮ್ಮ ಸುತ್ತಲಿರುವ ವಿಶ್ವದ ಜಟಿಲ ಕಾರ್ಯಗತಿಯನ್ನು ನಡೆಸುವ ಭೌತಿಕ ನಿಯಮಗಳನ್ನು ಮಾತ್ರವಲ್ಲ ನಮ್ಮ ಧಾವಿಸುತ್ತರುವ ಮತ್ತು ಬದಲಾವಣೆ ಹೊಂದುತ್ತಿರುವ ಸಮಾಜದಲ್ಲಿ ನಮ್ಮನ್ನು ನಡೆಸಲು ನೈತಿಕ ನಿಯಮಗಳನ್ನೂ ಒದಗಿಸಿದ್ದಾನೆ. ಇಲ್ಲ, ದೇವರು ನಮ್ಮನ್ನು ಯಾವುದರ “ವರ್ತನೆ” ಪೂರ್ವನಿಶ್ಚಿತವಾಗಿದೆಯೋ ಮತ್ತು ಯಾವುದರ “ಚಲನೆಗಳು” ಆಟಗಾರನಿಂದ ನಿಯಂತ್ರಿಸಲ್ಪಡುತ್ತದೋ ಆ ಚದುರಂಗಮಣೆಯ ಮೇಲಿರುವ ಕಾಯಿಗಳಂತೆ ಮಾಡಲಿಲ್ಲ. ಬದಲಾಗಿ, ನಾವು ವಿವೇಕದಿಂದ ವರ್ತಿಸುವಂತೆ ಸಹಾಯಮಾಡುವ ನೈತಿಕ ನಿಯಮಗಳನ್ನು ಆತನು ನಮಗೊದಗಿಸಿದ್ದಾನೆ. ಆದರೆ ಈ ದೇವದತ್ತ ನೀತಿನಿಯಮಗಳನ್ನು ಅಂಗೀಕರಿಸಿ ಅನ್ವಯಿಸಿಕೊಳ್ಳುವುದು ಸ್ವತಂತ್ರ ನೈತಿಕ ವ್ಯಕ್ತಿಗಳಾದ ನಮ್ಮ ಪಾಲಿಗೆ ಬಿಡಲ್ಪಟ್ಟಿದೆ.
ಈ ನಿಯಮಗಳೆಲ್ಲಿವೆ? ಅಪೊಸ್ತಲ ಪೌಲನು ತಿಳಿಸುವುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಆದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥಿ 3:16, 17) ಹೌದು, ದೇವರ ಪ್ರೇರಿತ ವಚನವಾದ ಬೈಬಲಿನಲ್ಲಿ ಸಕಲ ಮಾನವ ಚಟುವಟಿಕೆಗಳಿಗೆ ಬೇಕಾಗುವ ಪ್ರಯೋಜನಕರವಾದ ಮಾರ್ಗದರ್ಶನವಿದೆ. ಈ ಕಾರಣದಿಂದ ಬೈಬಲು ನಮಗೆ ಪ್ರೋತ್ಸಾಹಿಸುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.”—ಜ್ಞಾನೋಕ್ತಿ 3:5-7. (g89 11/22)