ಸೃಷ್ಟಿಯು ದೇವರ ಘನತೆಯನ್ನು ಪ್ರಚುರಪಡಿಸುತ್ತದೆ!
“ಆಕಾಶಮಂಡಲವು ದೇವರ ಘನತೆಯನ್ನು ಪ್ರಚುರಪಡಿಸುತ್ತಿದೆ; ಗಗನವು ಆತನ ಕೈಕೃತಿಯನ್ನು ತಿಳಿಸಿಕೊಡುತ್ತಿದೆ.”—ಕೀರ್ತನೆ 19:1, Nw.
1, 2. (ಎ) ಮನುಷ್ಯರು ದೇವರ ಘನತೆಯನ್ನು ನೇರವಾಗಿ ನೋಡಲು ಏಕೆ ಅಶಕ್ತರಾಗಿದ್ದಾರೆ? (ಬಿ) ಇಪ್ಪತ್ತನಾಲ್ಕು ಮಂದಿ ಹಿರಿಯರು ದೇವರನ್ನು ಹೇಗೆ ಘನಪಡಿಸುತ್ತಾರೆ?
“ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು.” (ವಿಮೋಚನಕಾಂಡ 33:20) ಹೀಗೆಂದು ಯೆಹೋವನು ಮೋಶೆಯನ್ನು ಎಚ್ಚರಿಸಿದನು. ಮಾನವರು ನಶ್ವರ ದೇಹದವರಾಗಿರುವುದರಿಂದ ದೇವರ ಘನತೆಯನ್ನು ನೇರವಾಗಿ ನೋಡುವಲ್ಲಿ ಅವರು ಬದುಕಿ ಉಳಿಯರು. ಆದರೂ, ದರ್ಶನವೊಂದರಲ್ಲಿ ಅಪೊಸ್ತಲ ಯೋಹಾನನಿಗೆ, ಯೆಹೋವನು ತನ್ನ ಮಹಿಮಾಭರಿತ ಸಿಂಹಾಸನದಲ್ಲಿ ಆಸೀನನಾಗಿರುವ ಕಣ್ಸೆಳೆಯುವ ಪ್ರದರ್ಶನವನ್ನು ಕೊಡಲಾಯಿತು.—ಪ್ರಕಟನೆ 4:1-3.
2 ಮನುಷ್ಯರಿಗೆ ಅಸದೃಶವಾಗಿ ನಿಷ್ಠಾವಂತ ಆತ್ಮಜೀವಿಗಳಾದರೋ ಯೆಹೋವನ ಮುಖವನ್ನು ನೋಡಬಲ್ಲರು. ಇವರಲ್ಲಿ, ಯೋಹಾನನ ಸ್ವರ್ಗೀಯ ದರ್ಶನದಲ್ಲಿ ತೋರಿಬಂದ, 1,44,000 ಮಂದಿಯನ್ನು ಪ್ರತಿನಿಧೀಕರಿಸುವ “ಇಪ್ಪತ್ತುನಾಲ್ಕು ಮಂದಿ ಹಿರಿಯರು” ಒಳಗೂಡಿದ್ದಾರೆ. (ಪ್ರಕಟನೆ 4:4; 14:1-3) ಅವರು ದೇವರ ಘನತೆಯನ್ನು ಕಂಡು ಹೇಗೆ ಪ್ರತಿವರ್ತಿಸುತ್ತಾರೆ? ಪ್ರಕಟನೆ 4:11 ತಿಳಿಸುವಂತೆ, “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಅವರು ಸಾರಿ ಹೇಳುತ್ತಾರೆ.
“ಅಕ್ಷಮ್ಯ”ರಾಗಿರುವುದಕ್ಕೆ ಕಾರಣ
3, 4. (ಎ) ದೇವರಲ್ಲಿ ನಂಬಿಕೆ ಏಕೆ ಅವೈಜ್ಞಾನಿಕವಲ್ಲ? (ಬಿ) ಕೆಲವು ಸಂದರ್ಭಗಳಲ್ಲಿ, ದೇವರಲ್ಲಿ ನಂಬಿಕೆಯಿಲ್ಲ ಎನ್ನುವುದಕ್ಕೆ ಕಾರಣ ಏನಾಗಿರುತ್ತದೆ?
3 ದೇವರನ್ನು ಘನಪಡಿಸಬೇಕೆಂಬ ಪ್ರಚೋದನೆ ನಿಮಗಿದೆಯೆ? ಮಾನವಕುಲದಲ್ಲಿ ಅಧಿಕಾಂಶ ಮಂದಿಗೆ ಈ ಪ್ರಚೋದನೆ ಇಲ್ಲದಿರುವುದು ಮಾತ್ರವಲ್ಲ, ಇವರಲ್ಲಿ ಕೆಲವರು ದೇವರ ಅಸ್ತಿತ್ವವನ್ನೂ ಅಲ್ಲಗಳೆಯುತ್ತಿದ್ದಾರೆ. ಉದಾಹರಣೆಗೆ, ಒಬ್ಬ ಖಗೋಳಜ್ಞರು ಬರೆದುದು: “ಮಧ್ಯೆ ಪ್ರವೇಶಿಸುತ್ತ ನಮ್ಮ ಪ್ರಯೋಜನಾರ್ಥವಾಗಿ ಈ ವಿಶ್ವವನ್ನು ಅದೃಷ್ಟವಶಾತ್ ರಚಿಸಿದವನು ದೇವರೊ? . . . ಅದೊಂದು ಉಲ್ಲಾಸ ನೀಡುವ ಪ್ರತೀಕ್ಷೆಯೇ ಸರಿ. ಆದರೆ ವಿಷಾದಕರವಾಗಿ, ಅದೊಂದು ಹುಸಿನಂಬಿಕೆಯೆಂದು ನನ್ನ ಅಭಿಪ್ರಾಯ. . . . ಒಬ್ಬ ದೇವರು ಇದನ್ನು ರಚಿಸಿದನು ಎಂದು ಹೇಳುವುದು ಇದಕ್ಕೆ ತೃಪ್ತಿಕರವಾದ ವಿವರಣೆಯಾಗಿರುವುದಿಲ್ಲ.”
4 ಆದರೆ ಈ ವಿಷಯದಲ್ಲಿ ವೈಜ್ಞಾನಿಕ ಸಂಶೋಧನೆಯು ಸೀಮಿತವಾಗಿದೆ, ಏಕೆಂದರೆ ಅದು ಮಾನವರು ನಿಜವಾಗಿ ಏನನ್ನು ಅವಲೋಕಿಸಬಲ್ಲರೊ ಇಲ್ಲವೆ ಅಧ್ಯಯನ ಮಾಡಬಲ್ಲರೊ, ಕೇವಲ ಅದರ ಮೇಲೆ ಮಾತ್ರ ಆಧಾರಿತವಾಗಿರಬಲ್ಲದು. ಇಲ್ಲವೆ, ಅದು ಕೇವಲ ಊಹೆ ಅಥವಾ ಕಲ್ಪನೆಯಾಗಿರುತ್ತದೆ. ಆದರೆ “ದೇವರು ಆತ್ಮಸ್ವರೂಪನು” ಆಗಿರುವುದರಿಂದ ಆತನನ್ನು ವೈಜ್ಞಾನಿಕ ಪರೀಕ್ಷೆಗೊಳಪಡಿಸುವ ಸಾಧ್ಯತೆಯೇ ಇರುವುದಿಲ್ಲ. (ಯೋಹಾನ 4:24) ಆದುದರಿಂದ, ದೇವರಲ್ಲಿ ನಂಬಿಕೆಯು ಅವೈಜ್ಞಾನಿಕವೆಂದು ಹೇಳಿ ತಳ್ಳಿಹಾಕುವುದು ದುರಹಂಕಾರವೇ ಸರಿ. ಕೇಂಬ್ರಿಜ್ ಯೂನಿವರ್ಸಿಟಿಯ ವಿಜ್ಞಾನಿ, ವಿನ್ಸೆಂಟ್ ವಿಗಲ್ಸ್ವರ್ತ್ ಹೇಳಿದ್ದೇನೆಂದರೆ, ಈ ವೈಜ್ಞಾನಿಕ ವಿಧಾನವೂ “ಒಂದು ಧಾರ್ಮಿಕ ವಿಧಾನವಾಗಿದೆ.” ಅದು ಹೇಗೆ? “ಹೇಗಂದರೆ, ಈ ವೈಜ್ಞಾನಿಕ ವಿಧಾನವು ಸ್ಥಿರ ನಂಬಿಕೆಯ ಮೇಲೆ, ಅಂದರೆ ನೈಸರ್ಗಿಕ ಘಟನೆಗಳು ‘ಪ್ರಕೃತಿ ನಿಯಮಗಳ’ ಮೇಲೆ ಹೊಂದಿಕೊಂಡಿವೆ ಎಂಬ ನಂಬಿಕೆಯ ಮೇಲೆ ಆಧಾರಿತವಾಗಿದೆ.” ಆದಕಾರಣ, ಒಬ್ಬನು ದೇವರಲ್ಲಿ ನಂಬಿಕೆಯನ್ನು ಅಲ್ಲಗಳೆಯುವಾಗ ಅವನು ಒಂದು ರೀತಿಯ ನಂಬಿಕೆಯನ್ನು ಇನ್ನೊಂದು ರೀತಿಯ ನಂಬಿಕೆಯೊಂದಿಗೆ ಅದಲುಬದಲು ಮಾಡುತ್ತಿದ್ದಾನೆ ಅಷ್ಟೇ, ಅಲ್ಲವೇ? ಕೆಲವು ಸಂದರ್ಭಗಳಲ್ಲಿ, ದೇವರಲ್ಲಿ ನಂಬಿಕೆಯಿಲ್ಲದಿರಲು ಕಾರಣವು, ಸತ್ಯವನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ಉದ್ದೇಶಪೂರ್ವಕವಾದ ನಿರಾಕರಣೆಯೇ ಎಂದು ತೋರುತ್ತದೆ. ಕೀರ್ತನೆಗಾರನು ಬರೆದುದು: “ದುಷ್ಟನು ತನ್ನ ಅಹಂಭಾವದ ಕಾರಣ ಹುಡುಕುವುದೇ ಇಲ್ಲ; ಅವನ ವಿಚಾರಗಳೆಲ್ಲವೂ ‘ದೇವರೇ ಇಲ್ಲ’ ಎಂದಾಗಿದೆ.”—ಕೀರ್ತನೆ 10:4, NW.
5. ದೇವರೊಬ್ಬನಿದ್ದಾನೆಂದು ನಂಬದಿರುವುದು ಅಕ್ಷಮ್ಯವೇಕೆ?
5 ಆದರೆ ದೇವರಲ್ಲಿ ನಂಬಿಕೆಯು ಅಂಧ ವಿಶ್ವಾಸವಾಗಿರುವುದಿಲ್ಲ. ಏಕೆಂದರೆ ದೇವರ ಅಸ್ತಿತ್ವಕ್ಕೆ ವಿಪುಲವಾದ ಸಾಕ್ಷ್ಯವಿದೆ. (ಇಬ್ರಿಯ 11:1) ಖಗೋಳವಿಜ್ಞಾನಿ ಆ್ಯಲನ್ ಸ್ಯಾಂಡೆಜ್ ಹೇಳಿದ್ದು: “ಅಸ್ತವ್ಯಸ್ತತೆಯಿಂದ [ವಿಶ್ವದಲ್ಲಿ] ಇಂಥ ವ್ಯವಸ್ಥೆ ಬಂತೆಂಬ ಸಂಗತಿಯು ನನಗೆ ತೀರ ಅಸಂಭವನೀಯವಾಗಿ ತೋರುತ್ತದೆ. ಕ್ರಮ ಮತ್ತು ವ್ಯವಸ್ಥೆಯ ಯಾವುದಾದರು ಮೂಲವು ಇರಲೇಬೇಕು. ದೇವರು ನನಗೆ ಒಂದು ರಹಸ್ಯವಾಗಿರುವುದಾದರೂ, ಅಸ್ತಿತ್ವ ಎಂಬ ಅದ್ಭುತಕ್ಕೆ, ಅಂದರೆ ಶೂನ್ಯಕ್ಕೆ ಬದಲಾಗಿ ವಸ್ತುಗಳಿರುವುದಕ್ಕೆ ಅದೊಂದೇ ವಿವರಣೆಯಾಗಿದೆ.” ಅಪೊಸ್ತಲ ಪೌಲನು ರೋಮಿನಲ್ಲಿದ್ದ ಕ್ರೈಸ್ತರಿಗೆ, “ಕಣ್ಣಿಗೆ ಕಾಣದಿರುವ ಆತನ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು [ಅವಿಶ್ವಾಸಿಗಳು] ಉತ್ತರವಿಲ್ಲದವರಾಗಿದ್ದಾರೆ [“ಅಕ್ಷಮ್ಯರಾಗಿದ್ದಾರೆ,” NW],” ಎಂದು ಹೇಳಿದನು. (ರೋಮಾಪುರ 1:20) “ಜಗದುತ್ಪತ್ತಿ”ಯಾದಂದಿನಿಂದ, ವಿಶೇಷವಾಗಿ ದೇವರ ಅಸ್ತಿತ್ವವನ್ನು ಗ್ರಹಿಸಬಲ್ಲ ಬುದ್ಧಿಶಕ್ತಿಯ ಮಾನವರ ಸೃಷ್ಟಿಯಾದಂದಿನಿಂದ, ಮಹಾ ಶಕ್ತಿಶಾಲಿಯಾದ ಒಬ್ಬ ಸೃಷ್ಟಿಕರ್ತನಿದ್ದಾನೆ, ಭಕ್ತಿಗೆ ಅರ್ಹನಾಗಿರುವ ದೇವರಿದ್ದಾನೆ ಎಂಬುದು ವ್ಯಕ್ತವಾಗಿದೆ. ಈ ಕಾರಣದಿಂದ, ದೇವರ ಘನತೆಯನ್ನು ಒಪ್ಪಿಕೊಳ್ಳದಿರುವವರು ಅಕ್ಷಮ್ಯರಾಗಿದ್ದಾರೆ. ಆದರೆ ಸೃಷ್ಟಿಯು ಯಾವ ಸಾಕ್ಷ್ಯವನ್ನು ಒದಗಿಸುತ್ತದೆ?
ವಿಶ್ವವು ದೇವರ ಘನತೆಯನ್ನು ಪ್ರಚುರಪಡಿಸುತ್ತದೆ
6, 7. (ಎ) ಆಕಾಶಮಂಡಲವು ದೇವರ ಘನತೆಯನ್ನು ಹೇಗೆ ಪ್ರಚುರಪಡಿಸುತ್ತದೆ? (ಬಿ) ಆಕಾಶಮಂಡಲವು ಯಾವ ಉದ್ದೇಶಕ್ಕಾಗಿ ‘ಅಳತೆಯ ದಾರಗಳನ್ನು’ ಇಟ್ಟಿದೆ?
6 ಕೀರ್ತನೆ 19:1 (NW) ಮೇಲಿನ ಪ್ರಶ್ನೆಗೆ ಉತ್ತರಿಸುತ್ತಾ ಹೇಳುವುದು, “ಆಕಾಶಮಂಡಲವು ದೇವರ ಘನತೆಯನ್ನು ಪ್ರಚುರಪಡಿಸುತ್ತಿದೆ; ಗಗನವು ಆತನ ಕೈಕೃತಿಯನ್ನು ತಿಳಿಸಿಕೊಡುತ್ತಿದೆ.” “ಗಗನ” ಅಥವಾ ವಾಯುಮಂಡಲವನ್ನು ತೂರಿ ಹೊಳೆಯುತ್ತಿರುವ ನಕ್ಷತ್ರಗಳೂ ಗ್ರಹಗಳೂ ಮಹಿಮಾಭರಿತನಾದ ಒಬ್ಬ ದೇವರ ಅಸ್ತಿತ್ವದ ಬಗ್ಗೆ ನಿರಾಕರಿಸಲಾಗದಂಥ ರುಜುವಾತನ್ನು ಕೊಡುತ್ತದೆಂದು ದಾವೀದನು ವಿವೇಚಿಸಿ ತಿಳಿದುಕೊಂಡನು. ಅವನು ಮುಂದುವರಿಸಿ ಹೇಳಿದ್ದು: “ದಿನದಿಂದ ದಿನವು ಮಾತನ್ನು ತುಂಬಿತುಳುಕಿಸುತ್ತದೆ; ರಾತ್ರಿಯಿಂದ ರಾತ್ರಿಯು ಜ್ಞಾನವನ್ನು ತೋರಿಸಿಕೊಡುತ್ತದೆ.” (ಕೀರ್ತನೆ 19:2, NW) ದಿನದಿನವೂ ರಾತ್ರಿಯಿಂದ ರಾತ್ರಿಗೂ ಆಕಾಶಮಂಡಲವು ದೇವರ ವಿವೇಕ ಮತ್ತು ಸೃಷ್ಟಿಕಾರಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಇದು, ದೇವರನ್ನು ಸ್ತುತಿಸುವ ಮಾತುಗಳು ಆಕಾಶಮಂಡಲದಿಂದ ‘ತುಂಬಿತುಳುಕುತ್ತಿವೆಯೊ’ ಎಂಬಂತೆ ಇದೆ.
7 ಆದರೂ, ಈ ಸಾಕ್ಷಿಯನ್ನು ಕೇಳಿಸಿಕೊಳ್ಳಬೇಕಾದರೆ ವಿವೇಚನಾಶಕ್ತಿ ಅಗತ್ಯ. ಏಕೆಂದರೆ ಅವುಗಳಲ್ಲಿ “ಮಾತೇ ಇಲ್ಲ, ಶಬ್ದಗಳೂ ಇಲ್ಲ; ಅದರಿಂದ ಧ್ವನಿಯೇ ಕೇಳಿ ಬರುವುದಿಲ್ಲ.” ಹೀಗಿದ್ದರೂ ಆಕಾಶಮಂಡಲವು ಕೊಡುವಂಥ ಮೌನಸಾಕ್ಷಿ ಶಕ್ತಿಯುತವಾಗಿದೆ. “ಸಮಸ್ತ ಭೂಮಿಯೊಳಗೆ ಅದರ ಅಳತೆ ದಾರವು ಹೊರಟು ಹೋಗಿದೆ, ಮತ್ತು ಅದರ ನುಡಿಗಳು ಫಲೋತ್ಪಾದಕ ಭೂಮಿಯ ಕಟ್ಟಕಡೆಯ ವರೆಗೂ ವ್ಯಾಪಿಸಿವೆ.” (ಕೀರ್ತನೆ 19:3, 4, NW) ಇದು, ಆಕಾಶಮಂಡಲವು ಅದರ ಮೌನ ಸಾಕ್ಷಿಯು ಭೂಮಿಯ ಮೂಲೆಮೂಲೆಗಳನ್ನೂ ತುಂಬಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ‘ಅಳತೆಯ ದಾರಗಳನ್ನು’ ಇಟ್ಟಿದೆಯೊ ಎಂಬಂತಿದೆ.
8, 9. ಸೂರ್ಯನ ಕುರಿತು ಕೆಲವು ಗಮನಾರ್ಹವಾದ ನಿಜತ್ವಗಳಾವುವು?
8 ಇದಾದ ಬಳಿಕ, ದಾವೀದನು ಯೆಹೋವನ ಸೃಷ್ಟಿಯ ಇನ್ನೊಂದು ಅದ್ಭುತವನ್ನು ವರ್ಣಿಸುತ್ತಾನೆ: “ಅದರಲ್ಲಿ [ದೃಶ್ಯ ಆಕಾಶಗಳಲ್ಲಿ] ಆತನು ಸೂರ್ಯನಿಗೆ ಒಂದು ಡೇರೆಯನ್ನು ಕಟ್ಟಿದ್ದಾನೆ, ಮತ್ತು ವಿವಾಹದ ಕೊಠಡಿಯಿಂದ ಮದುಮಗನು ಹೊರಗೆ ಬರುವಂತೆ ಅದು ಇದೆ. ಸೂರ್ಯ ತನ್ನ ಪಥದಲ್ಲಿ ಓಡುವ ಶೂರನಂತೆ ಉಲ್ಲಾಸಪಡುತ್ತದೆ. ಅದರ ಹೋಗೋಣವು ಆಕಾಶಮಂಡಲದ ಒಂದು ಕಟ್ಟಕಡೆಯಿಂದ ಆರಂಭವಾಗಿ ಮುಕ್ತಾಯದ ಪರಿಧಿಯು ಇನ್ನೊಂದು ಕಟ್ಟಕಡೆಯಲ್ಲಿದೆ; ಅದರ ತಾಪಕ್ಕೆ ಯಾವುದೂ ಮರೆಯಾಗಿರುವುದಿಲ್ಲ.”—ಕೀರ್ತನೆ 19:4-6, NW.
9 ಬೇರೆ ನಕ್ಷತ್ರಗಳಿಗೆ ಹೋಲಿಸುವಾಗ, ಸೂರ್ಯನದ್ದು ಕೇವಲ ಮಧ್ಯಮ ಗಾತ್ರವಾಗಿದೆ. ಆದರೂ ಅದೊಂದು ಅಸಾಧಾರಣವಾದ ನಕ್ಷತ್ರವಾಗಿದ್ದು ಅದರ ಸುತ್ತಲೂ ಚಲಿಸುತ್ತಿರುವ ಗ್ರಹಗಳು ಕುಬ್ಜವಾಗಿ ತೋರುತ್ತವೆ. ಸೂರ್ಯನ ದ್ರವ್ಯರಾಶಿಯ ತೂಕವು “2 ಕೋಟಿ ಕೋಟಿಗಳಿಗೆ 13 ಸೊನ್ನೆಗಳನ್ನು ಕೂಡಿಸಿದರೆ ಎಷ್ಟಾಗುತ್ತದೊ ಅಷ್ಟು ಟನ್ನುಗಳು,” ಅಂದರೆ ನಮ್ಮ ಇಡೀ ಸೌರವ್ಯೂಹದ ದ್ರವ್ಯರಾಶಿಯ 99.9 ಪ್ರತಿಶತದಷ್ಟಾಗಿದೆ ಎಂದು ಒಂದು ಮೂಲವು ಹೇಳುತ್ತದೆ! ಅದರ ಗುರುತ್ವಾಕರ್ಷಣವು ಎಷ್ಟು ಪ್ರಬಲವಾಗಿದೆಯೆಂದರೆ, ಅದು 15 ಕೋಟಿ ಕಿಲೊಮೀಟರ್ ದೂರದಲ್ಲಿರುವ ಭೂಮಿಯು ತನ್ನ ಕಕ್ಷೆಯನ್ನು ಬಿಟ್ಟು ಹೊರಗೆ ಹೋಗದಂತೆ ಅಥವಾ ಒಳಗೆ ಎಳೆಯಲ್ಪಡದಂತೆಯೂ ನೋಡಿಕೊಳ್ಳುತ್ತದೆ. ಸೂರ್ಯನ ಶಕ್ತಿಯ 200 ಕೋಟಿ ಅಂಶಗಳಲ್ಲಿ ಸುಮಾರು ಒಂದಂಶ ಮಾತ್ರ ನಮ್ಮ ಗ್ರಹವನ್ನು ತಲಪುತ್ತದಾದರೂ ಅದು ಜೀವವನ್ನು ಪೋಷಿಸಲು ಸಾಕಾಗುವಷ್ಟು ಪ್ರಮಾಣದಲ್ಲಿದೆ.
10. (ಎ) ಸೂರ್ಯವು ಅದರ “ಡೇರೆ”ಯ ಒಳಗೆಹೋಗಿ ಹೊರಬರುವುದು ಹೇಗೆ? (ಬಿ) ಅದು “ಶೂರ”ನಂತೆ ಓಡುವುದು ಹೇಗೆ?
10 ಕೀರ್ತನೆಗಾರನು ಸೂರ್ಯನ ಬಗ್ಗೆ ಸಾಂಕೇತಿಕ ಭಾಷೆಯಲ್ಲಿ ಮಾತಾಡುತ್ತಾ, ಅದನ್ನು ದಿನದಲ್ಲಿ ಒಂದು ದಿಗಂತದಿಂದ ಇನ್ನೊಂದು ದಿಗಂತಕ್ಕೆ ಓಡಾಡುತ್ತ, ರಾತ್ರಿಯಲ್ಲಿ “ಡೇರೆಯಲ್ಲಿ” ವಿಶ್ರಮಿಸುವ ಒಬ್ಬ “ಶೂರ”ನಂತೆ ಚಿತ್ರಿಸುತ್ತಾನೆ. ಆ ಮಹಾ ನಕ್ಷತ್ರವು ದಿಗಂತದಲ್ಲಿ ಕೆಳಗಿಳಿಯುತ್ತಾ ಹೋಗುವುದನ್ನು ಈ ಭೂಮಿಯಿಂದ ನೋಡುವಾಗ, ಅದು “ಒಂದು ಡೇರೆ”ಯೊಳಗೆ ವಿಶ್ರಾಂತಿಗಾಗಿ ಹೋಗುತ್ತಿರುವಂತೆ ಕಾಣುತ್ತದೆ. ಆದರೆ ಬೆಳಗ್ಗೆ, ಅದು “ವಿವಾಹದ ಕೊಠಡಿಯಿಂದ ಮದುಮಗನು ಹೊರಗೆ ಬರುವಂತೆ,” ತೇಜೋಮಯವಾಗಿ ಪ್ರಜ್ವಲಿಸುತ್ತಾ ಥಟ್ಟನೆ ಹೊರಬರುವಂತೆ ಕಾಣುತ್ತದೆ. ಕುರುಬನಾಗಿದ್ದ ದಾವೀದನಿಗೆ ರಾತ್ರಿಯ ವಿಪರೀತ ಚಳಿಯ ಅನುಭವವಿತ್ತು. (ಆದಿಕಾಂಡ 31:40) ಸೂರ್ಯನ ಕಿರಣಗಳು ತನ್ನನ್ನೂ ತನ್ನ ಸುತ್ತಲಿನ ಭೂಪ್ರದೇಶವನ್ನೂ ಹೇಗೆ ಶೀಘ್ರವಾಗಿ ಬೆಚ್ಚಗಾಗಿಸುತ್ತಿದ್ದವು ಎಂಬುದನ್ನು ಅವನು ಮರುಜ್ಞಾಪಿಸಿಕೊಂಡನು. ಪೂರ್ವದಿಂದ ಪಶ್ಚಿಮಕ್ಕೆ ಸೂರ್ಯವು ಮಾಡುತ್ತಿದ್ದ ಪ್ರಯಾಣದಿಂದ ಅದು ದಣಿದಿರಲಿಲ್ಲ, ಬದಲಿಗೆ “ಶೂರ”ನಂತೆ ಆ “ಪ್ರಯಾಣವನ್ನು” ಪುನರಾವರ್ತಿಸಲು ಸಿದ್ಧವಾಗಿರುತ್ತಿತ್ತು.
ಭಯಭಕ್ತಿ ಹುಟ್ಟಿಸುವ ನಕ್ಷತ್ರಗಳೂ ಗ್ಯಾಲಕ್ಸಿಗಳೂ
11, 12. (ಎ) ಬೈಬಲು ನಕ್ಷತ್ರಗಳನ್ನು ಉಸುಬಿಗೆ ಹೋಲಿಸುವುದರಲ್ಲಿ ಗಮನಾರ್ಹವಾದದ್ದೇನಿದೆ? (ಬಿ) ಈ ವಿಶ್ವವು ಎಷ್ಟು ವಿಸ್ತಾರವಾಗಿರಬಹುದು?
11 ದೂರದರ್ಶಕವಿಲ್ಲದೆ, ದಾವೀದನು ಕೆಲವೇ ಸಾವಿರ ನಕ್ಷತ್ರಗಳನ್ನು ನೋಡಶಕ್ತನಾಗಿದ್ದನು. ಆದರೆ, ಇತ್ತೀಚಿನ ಒಂದು ಅಧ್ಯಯನಕ್ಕನುಸಾರ, ಆಧುನಿಕ ದೂರದರ್ಶಕಗಳಿಂದ ವಿಶ್ವದಲ್ಲಿ ಕಾಣಸಾಧ್ಯವಿರುವ ನಕ್ಷತ್ರಗಳ ಸಂಖ್ಯೆಯು, 7 ಕೋಟಿಯ ನಂತರ 15 ಸೊನ್ನೆಗಳನ್ನು ಸೇರಿಸಿದರೆ ಎಷ್ಟಾಗುತ್ತದೊ ಅಷ್ಟು. ನಕ್ಷತ್ರಗಳ ಸಂಖ್ಯೆಯನ್ನು “ಸಮುದ್ರತೀರದಲ್ಲಿರುವ ಉಸುಬಿ”ಗೆ ಹೋಲಿಸಿದಾಗ ಯೆಹೋವನು ಅವುಗಳ ಅಪರಿಮಿತ ಸಂಖ್ಯೆಗೆ ಸೂಚಿಸಿದನು.—ಆದಿಕಾಂಡ 22:17.
12 ಅನೇಕ ವರುಷಗಳಿಂದ, ಖಗೋಳಜ್ಞರು ಯಾವುದನ್ನು “ಮಸುಕಾದ, ಸ್ಪಷ್ಟ ತೋರಿಕೆಯಿಲ್ಲದ, ಬೆಳಗಿರುವ ಚಿಕ್ಕ ಪ್ರದೇಶಗಳು” ಎಂದು ವರ್ಣಿಸಿದರೊ ಅವುಗಳನ್ನು ಅವಲೋಕಿಸಿದ್ದಾರೆ. ಈ “ಸುರುಳಿ ನೀಹಾರಿಕೆಗಳು” ನಮ್ಮ ಕ್ಷೀರಪಥ ಗ್ಯಾಲಕ್ಸಿಯಲ್ಲೇ ಇರುವ ಕೆಲವು ವಸ್ತುಗಳೆಂದು ವಿಜ್ಞಾನಿಗಳು ಎಣಿಸಿದರು. ಆದರೆ 1924ರಲ್ಲಿ, ಅಂಥ ಸುರುಳಿ ನೀಹಾರಿಕೆಗಳಲ್ಲಿ ಅತಿ ಹತ್ತಿರದಲ್ಲಿರುವಂಥ ಆ್ಯಂಡ್ರಾಮಡ, 20 ಲಕ್ಷ ಜ್ಯೋತಿರ್ವರ್ಷ ದೂರದಲ್ಲಿರುವ ಒಂದು ಪ್ರತ್ಯೇಕ ಗ್ಯಾಲಕ್ಸಿಯಾಗಿದೆಯೆಂದು ಕಂಡುಹಿಡಿಯಲಾಯಿತು! ಈಗ ವಿಜ್ಞಾನಿಗಳು, 10 ಸಾವಿರ ಕೋಟಿಗಳಿಗಿಂತಲೂ ಹೆಚ್ಚು ಗ್ಯಾಲಕ್ಸಿಗಳಿವೆಯೆಂದೂ, ಅವುಗಳಲ್ಲಿ ಪ್ರತಿಯೊಂದರಲ್ಲಿ ಸಾವಿರಾರು ಕೋಟಿ ನಕ್ಷತ್ರಗಳಿವೆಯೆಂದೂ ಅಂದಾಜುಮಾಡುತ್ತಾರೆ. ಆದರೂ, ಯೆಹೋವನು “ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ.”—ಕೀರ್ತನೆ 147:4.
13. (ಎ) ತಾರಾಪುಂಜಗಳ ಬಗ್ಗೆ ಗಮನಾರ್ಹವಾದ ಸಂಗತಿ ಯಾವುದು? (ಬಿ) “ಖಗೋಲದ ಕಟ್ಟಳೆ”ಗಳು ವಿಜ್ಞಾನಿಗಳಿಗೆ ತಿಳಿದಿರುವುದಿಲ್ಲವೆಂಬುದು ಹೇಗೆ ವ್ಯಕ್ತ?
13 ಯೆಹೋವನು ಯೋಬನನ್ನು, “ನೀನು ಕೈಮಾ ತಾರಾಪುಂಜದ ಸರಪಣಿಗಳನ್ನು ಬಿಗಿಯಬಲ್ಲಿಯಾ, ಅಥವಾ ಕೆಸಿಲ್ ತಾರಾಪುಂಜದ ಹುರಿಗಳನ್ನು ಸಡಿಲಿಸಬಲ್ಲಿಯಾ?” ಎಂದು ಕೇಳಿದನು. (ಯೋಬ 38:31, NW) ಒಂದು ತಾರಾಪುಂಜವು ಒಂದು ನಿರ್ದಿಷ್ಟ ಆಕೃತಿಯನ್ನು ರೂಪಿಸುವಂತೆ ಕಾಣುವ ನಕ್ಷತ್ರ ರಾಶಿಯಾಗಿದೆ. ಈ ನಕ್ಷತ್ರಗಳ ನಡುವೆ ತುಂಬ ದೊಡ್ಡ ಅಂತರವಿರಸಾಧ್ಯವಿದೆಯಾದರೂ, ಭೂಮಿಯಿಂದ ನೋಡುವಾಗ ಅವುಗಳ ಸಾಪೇಕ್ಷ ಸ್ಥಾನಗಳು ಸ್ಥಿರವಾಗಿವೆ. ಅವುಗಳ ಸ್ಥಾನಗಳು ಅತಿ ನಿಕರವಾಗಿರುವುದರಿಂದಲೇ ನಕ್ಷತ್ರಗಳು “ಸಮುದ್ರಯಾನದಲ್ಲಿ, ಆಕಾಶಯಾನದಲ್ಲಿ ವ್ಯೋಮಯಾತ್ರಿಗಳಿಗೆ ಸ್ಥಾನನಿರ್ಣಯ ಮಾಡುವುದರಲ್ಲಿ, ಮತ್ತು ನಕ್ಷತ್ರ ಗುರುತಿಸುವಿಕೆಯಲ್ಲಿ ಸಹಾಯಕರ ಮಾರ್ಗದರ್ಶಿಗಳು” ಆಗಿವೆ. (ದಿ ಎನ್ಸೈಕ್ಲಪೀಡಿಯ ಅಮೆರಿಕಾನ) ಆದರೂ ಆ ತಾರಾಪುಂಜಗಳನ್ನು ಬಿಗಿಹಿಡಿದಿರುವ “ಸರಪಣಿಗಳನ್ನು” ಯಾವನೂ ಪೂರ್ತಿಯಾಗಿ ಗ್ರಹಿಸಿರುವುದಿಲ್ಲ. ಹೌದು, ಯೋಬ 38:33ರಲ್ಲಿ ಕೇಳಲ್ಪಟ್ಟ, “ಖಗೋಲದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ”? ಎಂಬ ಪ್ರಶ್ನೆಗೆ ವಿಜ್ಞಾನಿಗಳಲ್ಲಿ ಇನ್ನೂ ಉತ್ತರವಿಲ್ಲ.
14. ಬೆಳಕಿನ ಚೆದರಿಸುವಿಕೆಯು ಯಾವ ವಿಧದಲ್ಲಿ ಒಂದು ರಹಸ್ಯವಾಗಿದೆ?
14 ಯೋಬನಿಗೆ ಕೇಳಲ್ಪಟ್ಟ ಇನ್ನೊಂದು ಪ್ರಶ್ನೆಯನ್ನೂ ವಿಜ್ಞಾನಿಗಳು ಉತ್ತರಿಸಲಾರರು: “ಈಗ, ಬೆಳಕು ತನ್ನನ್ನು ಯಾವುದರ ಮೂಲಕ ಚೆದರಿಸಿಕೊಳ್ಳುತ್ತದೆಯೊ ಆ ಮಾರ್ಗವೆಲ್ಲಿ?” (ಯೋಬ 38:24, NW) ಬೆಳಕಿನ ಕುರಿತು ಕೇಳಲಾದ ಈ ಪ್ರಶ್ನೆಯನ್ನು ಒಬ್ಬ ಲೇಖಕನು, “ಗಹನವಾಗಿ ಆಧುನಿಕವಾದ ವೈಜ್ಞಾನಿಕ ಪ್ರಶ್ನೆ” ಎಂಬುದಾಗಿ ಕರೆದನು. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ಮಂದಿ ಗ್ರೀಕ್ ತತ್ತ್ವಜ್ಞಾನಿಗಳು, ಬೆಳಕು ಮಾನವ ನೇತ್ರದಿಂದ ಹೊರಟು ಬರುತ್ತದೆ ಎಂದು ನಂಬಿದ್ದರು. ಇತ್ತೀಚಿನ ಸಮಯಗಳಲ್ಲಿ, ವಿಜ್ಞಾನಿಗಳು ಬೆಳಕಿನಲ್ಲಿ ಸಣ್ಣಸಣ್ಣ ಕಣಗಳು ಅಡಕವಾಗಿವೆ ಎಂದು ನೆನಸಿದರು. ಇತರರು ಅದು ತರಂಗಗಳಲ್ಲಿ ಚಲಿಸುತ್ತದೆಂದು ನೆನಸಿದರು. ಇಂದು ವಿಜ್ಞಾನಿಗಳು, ಬೆಳಕು ತರಂಗಗಳಂತೆಯೂ ಕಣಗಳಂತೆಯೂ ವರ್ತಿಸುತ್ತದೆ ಎಂದು ನಂಬುತ್ತಾರೆ. ಆದರೂ, ಬೆಳಕಿನ ಸ್ವರೂಪ ಮತ್ತು ಅದು ಹೇಗೆ ‘ತನ್ನನ್ನು ಚೆದರಿಸಿಕೊಳ್ಳುತ್ತದೆ’ ಎಂಬುದು ಈಗಲೂ ಪೂರ್ಣವಾಗಿ ತಿಳಿದಿರುವುದಿಲ್ಲ.
15. ದಾವೀದನಂತೆ, ಆಕಾಶಮಂಡಲದ ಕುರಿತು ಧ್ಯಾನಿಸುವಾಗ ನಮಗೆ ಹೇಗನಿಸಬೇಕು?
15 ಇದನ್ನೆಲ್ಲ ಧ್ಯಾನಿಸುವಾಗ ಒಬ್ಬ ವ್ಯಕ್ತಿಗೆ ಕೀರ್ತನೆಗಾರನಾದ ದಾವೀದನಂತೆಯೇ ಅನಿಸುವುದು ನಿಶ್ಚಯ. ದಾವೀದನಂದದ್ದು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?”—ಕೀರ್ತನೆ 8:3, 4.
ಭೂಮಿಯೂ ಅದರ ಜೀವಿಗಳೂ ಯೆಹೋವನನ್ನು ಘನಪಡಿಸುತ್ತವೆ
16, 17. “ಆದಿಸಾಗರ”ಗಳಲ್ಲಿರುವ ಜೀವಿಗಳು ಯೆಹೋವನನ್ನು ಹೇಗೆ ಸ್ತುತಿಸುತ್ತವೆ?
16 ಸೃಷ್ಟಿಯು ದೇವರ ಘನತೆಯನ್ನು ಪ್ರಚುರಪಡಿಸುವ ಇತರ ವಿಧಗಳನ್ನೂ ಕೀರ್ತನೆ 148 ಪಟ್ಟಿಮಾಡುತ್ತದೆ. ವಚನ 7 ಹೇಳುವುದು: “ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. ತಿಮಿಂಗಿಲಗಳೂ [“ಸಮುದ್ರದ ಮಹಾದೇಹಿಗಳೂ,” NW] ಆದಿಸಾಗರಗಳೂ” ಯೆಹೋವನನ್ನು ಕೊಂಡಾಡಲಿ. ಹೌದು, ‘ಆದಿಸಾಗರಗಳು’ ದೇವರ ವಿವೇಕ ಮತ್ತು ಶಕ್ತಿಯನ್ನು ಎತ್ತಿತೋರಿಸುವ ಅದ್ಭುತಗಳಿಂದ ತುಂಬಿವೆ. ನೀಲ ತಿಮಿಂಗಿಲದ ಸರಾಸರಿ ತೂಕ 120 ಟನ್ನುಗಳಾಗಿದೆ, ಅಂದರೆ 30 ಆನೆಗಳ ಭಾರದಷ್ಟು! ಅದರ ಹೃದಯದ ತೂಕವೇ 450 ಕಿಲೊಗ್ರ್ಯಾಮ್ಗಳಾಗಿದ್ದು, 6,400 ಕಿಲೊಗ್ರ್ಯಾಮ್ಗಳಷ್ಟು ರಕ್ತವನ್ನು ದೇಹಕ್ಕೆಲ್ಲ ಪಂಪುಮಾಡಲು ಶಕ್ತವಾಗಿದೆ! ಈ ಬೃಹದಾಕಾರದ ಸಮುದ್ರದೇಹಿಗಳು ನೀರಿನಲ್ಲಿ ನಿಧಾನವಾಗಿಯೂ ಒಡ್ಡೊಡ್ಡಾಗಿಯೂ ಚಲಿಸುತ್ತವೆಯೆ? ನಿಶ್ಚಯವಾಗಿಯೂ ಇಲ್ಲ. ಅವು ಭಾವೋತ್ಪಾದಕವಾದ ವೇಗದಿಂದ “ಸಾಗರಗಳನ್ನು ಸುತ್ತುತ್ತವೆ” ಎಂದು ಯೂರೋಪಿಯನ್ ಸಿಟೇಷನ್ ಬೈಕಾಚ್ ಕ್ಯಾಂಪೇನ್ ಸಂಘದ ಒಂದು ವರದಿ ಹೇಳುತ್ತದೆ. “ಒಂದು ನೀಲ ತಿಮಿಂಗಿಲ 10 ತಿಂಗಳುಗಳಲ್ಲಿ 16,000 ಕಿಲೊಮೀಟರುಗಳಷ್ಟು ದೂರದ ವರೆಗೆ ವಲಸೆ ಹೋದುದನ್ನು” ಉಪಗ್ರಹದಿಂದ ಪತ್ತೆಮಾಡಲಾಗಿದೆ.
17 ಸೀಸೆ ಮೂತಿಯ ಡಾಲ್ಫಿನ್ ಸಾಮಾನ್ಯವಾಗಿ ನೀರಿನಡಿಗೆ 45 ಮೀಟರ್ಗಳಷ್ಟು ಆಳಕ್ಕೆ ಧುಮುಕುತ್ತದೆ. ಆದರೆ ಒಂದು ಡಾಲ್ಫಿನ್ ನೀರಿನಡಿ ಅತಿ ಹೆಚ್ಚು ಆಳಕ್ಕೆ ಧುಮುಕಿರುವುದರ ದಾಖಲಿತ ಆಳವು 547 ಮೀಟರ್ಗಳು! ಈ ಸಸ್ತನಿಯು ಅಷ್ಟು ಆಳಕ್ಕೆ ಧುಮುಕಿದರೂ ಬದುಕಿ ಉಳಿಯುವುದು ಹೇಗೆ? ಧುಮುಕುವ ವೇಳೆಯಲ್ಲಿ ಅದರ ಹೃದಯದ ಬಡಿತವು ನಿಧಾನಿಸ ತೊಡಗಿ, ಅದರ ರಕ್ತದ ಪ್ರವಾಹವು ಹೃದಯ, ಶ್ವಾಸಕೋಶ ಮತ್ತು ಮಿದುಳಿಗೆ ತಿರುಗಿಸಲ್ಪಡುತ್ತದೆ. ಅಲ್ಲದೆ, ಅದರ ಸ್ನಾಯುಗಳಲ್ಲಿ ಆಮ್ಲಜನಕವನ್ನು ಶೇಖರಿಸಿಡುವ ಒಂದು ರಸಾಯನವಿದೆ. ಆನೆ ಸೀಲ್ ಮತ್ತು ತಿಮಿಮೇದಸ್ಸಿನ ತಿಮಿಂಗಿಲಗಳು ಇನ್ನೂ ಹೆಚ್ಚು ಆಳಗಳಿಗೆ ಧುಮುಕಬಲ್ಲವು. ಡಿಸ್ಕವರ್ ಪತ್ರಿಕೆ ಹೇಳುವುದು: “ಒತ್ತಡವನ್ನು ಪ್ರತಿರೋಧಿಸುವ ಬದಲು ಅವು ತಮ್ಮ ಶ್ವಾಸಕೋಶಗಳು ಪೂರ್ತಿ ಮುದುಡಿಹೋಗುವಂತೆ ಬಿಡುತ್ತವೆ.” ಅವು ತಮಗೆ ಬೇಕಾಗಿರುವ ಆಮ್ಲಜನಕದ ಹೆಚ್ಚಿನಾಂಶವನ್ನು ತಮ್ಮ ಸ್ನಾಯುಗಳಲ್ಲಿ ಶೇಖರಿಸಿಡುತ್ತವೆ. ಈ ಜೀವಿಗಳು ನಿಜವಾಗಿಯೂ ಒಬ್ಬ ಸರ್ವಶಕ್ತ ದೇವರ ವಿವೇಕಕ್ಕೆ ಸಜೀವ ಸಾಕ್ಷ್ಯವಾಗಿವೆ ಎಂಬುದು ಸ್ಪಷ್ಟ!
18. ಸಮುದ್ರಜಲವು ಯೆಹೋವನ ವಿವೇಕವನ್ನು ತೋರಿಸುವುದು ಹೇಗೆ?
18 ಸಮುದ್ರಜಲವು ಸಹ ಯೆಹೋವನ ವಿವೇಕವನ್ನು ಪ್ರತಿಬಿಂಬಿಸುತ್ತದೆ. ಸಯೆಂಟಿಫಿಕ್ ಅಮೆರಿಕನ್ ಪತ್ರಿಕೆ ಹೇಳುವುದು: “ಸಾಗರದಲ್ಲಿ, ಮೇಲಿನ 100 ಮೀಟರ್ಗಳಷ್ಟು ಆಳದ ತನಕ ಇರುವ ನೀರಿನ ಪ್ರತಿಯೊಂದು ತೊಟ್ಟಿನಲ್ಲಿಯೂ ಮುಕ್ತವಾಗಿ ತೇಲುವ, ಫೈಟೋಪ್ಲ್ಯಾಂಕ್ಟನ್ ಎಂದು ಕರೆಯಲ್ಪಡುವ ಅತಿಸೂಕ್ಷ್ಮರೀತಿಯ ಸಸ್ಯವಿದೆ.” ಈ “ಅದೃಶ್ಯಾರಣ್ಯವು” ನಮ್ಮ ವಾತಾವರಣದಿಂದ ಕೋಟಿಗಟ್ಟಲೆ ಟನ್ನುಗಳಷ್ಟು ಇಂಗಾಲವನ್ನು ಹೀರಿ ಗಾಳಿಯನ್ನು ಶುಚಿಮಾಡುತ್ತದೆ. ಈ ಫೈಟೋಪ್ಲ್ಯಾಂಕ್ಟನ್ ನಾವು ಉಸಿರಾಡುವ ಆಮ್ಲಜನಕದಲ್ಲಿ ಅರ್ಧಕ್ಕಿಂತಲೂ ಹೆಚ್ಚನ್ನು ಉತ್ಪಾದಿಸುತ್ತದೆ.
19. ಬೆಂಕಿ ಮತ್ತು ಹಿಮವು ಯೆಹೋವನ ಚಿತ್ತವನ್ನು ಹೇಗೆ ನೆರವೇರಿಸುತ್ತವೆ?
19 ‘ಆತನ ಅಪ್ಪಣೆಯನ್ನು ಬೆಂಕಿ, ಕಲ್ಮಳೆ, ಹಿಮ, ಹಬೆ ಇವುಗಳೂ ಬಿರುಗಾಳಿಯೂ ನೆರವೇರಿಸು’ತ್ತವೆಯೆಂದು ಕೀರ್ತನೆ 148:8 ಹೇಳುತ್ತದೆ. ಹೌದು, ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಪ್ರಕೃತಿಯ ನಿರ್ಜೀವ ಶಕ್ತಿಗಳನ್ನೂ ಉಪಯೋಗಿಸುತ್ತಾನೆ. ಉದಾಹರಣೆಗೆ ಬೆಂಕಿಯನ್ನು ತೆಗೆದುಕೊಳ್ಳಿ. ಹಿಂದಿನ ದಶಕಗಳಲ್ಲಿ, ಕಾಡ್ಗಿಚ್ಚು ಕೇವಲ ವಿನಾಶವನ್ನು ತರುವಂಥದ್ದಾಗಿ ವೀಕ್ಷಿಸಲಾಗುತ್ತಿತ್ತು. ಆದರೆ ಈಗ ಸಂಶೋಧಕರು ನಂಬುವುದೇನಂದರೆ, ಇಂತಹ ಬೆಂಕಿಯು ಹಳೆಯ ಅಥವಾ ಸಾಯುತ್ತಿರುವ ಮರಗಳನ್ನು ತೆಗೆದುಹಾಕಿ, ಅನೇಕ ಬೀಜಗಳ ಮೊಳಕೆಯನ್ನು ವರ್ಧಿಸಿ, ಪೌಷ್ಟಿಕಾಂಶಗಳನ್ನು ಪುನರುಪಯೋಗಕ್ಕೆ ತಕ್ಕದ್ದಾಗುವಂತೆ ಮಾಡಿ, ಹೀಗೆ ವಾಸ್ತವದಲ್ಲಿ ಬೆಂಕಿ ವೇಗವಾಗಿ ಹಬ್ಬುವ ಅಪಾಯವನ್ನು ಕಡಿಮೆ ಮಾಡುತ್ತಾ ಪರಿಸರದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಿಮವೂ ಮಹತ್ವಪೂರ್ಣವಾದದ್ದಾಗಿದೆ. ಅದು ನೆಲಕ್ಕೆ ನೀರನ್ನು ಒದಗಿಸಿ, ಅದನ್ನು ಫಲವತ್ತಾಗಿ ಮಾಡಿ, ನದಿಗಳನ್ನು ಪುನಃ ತುಂಬಿಸಿ, ಹೆಪ್ಪುಗಟ್ಟಿಸುವಂಥ ಹವಾಮಾನದಿಂದ ಸಸ್ಯಗಳಿಗೂ ಪ್ರಾಣಿಗಳಿಗೂ ಸಂರಕ್ಷಣೆ ನೀಡುತ್ತದೆ.
20. ಪರ್ವತಗಳು ಮತ್ತು ಮರಗಳು ಮಾನವಕುಲಕ್ಕೆ ಹೇಗೆ ಪ್ರಯೋಜನಕರವಾಗಿರುತ್ತವೆ?
20 “ಬೆಟ್ಟಗಳೂ ಎಲ್ಲಾ ಗುಡ್ಡಗಳೂ ಹಣ್ಣಿನ ಮರಗಳೂ ಎಲ್ಲಾ ತುರಾಯಿ ಗಿಡಗಳೂ” ಎಂದು ಕೀರ್ತನೆ 148:9 ವಿವರವಾಗಿ ಹೇಳುತ್ತದೆ. ಯೆಹೋವನ ಮಹಾ ಶಕ್ತಿಗೆ ವೈಭವಯುಕ್ತ ಪರ್ವತಗಳು ನಿಶ್ಚಯವಾಗಿಯೂ ಒಂದು ಸಾಕ್ಷ್ಯವಾಗಿವೆ. (ಕೀರ್ತನೆ 65:6) ಆದರೆ ಪ್ರಾಯೋಗಿಕವಾದ ಉದ್ದೇಶವೊಂದನ್ನೂ ಅವು ಪೂರೈಸುತ್ತವೆ. ಸ್ವಿಟ್ಸರ್ಲೆಂಡ್ನ ಬರ್ನ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಜಿಯಾಗ್ರಫಿಯ ಒಂದು ವರದಿ ತಿಳಿಸುವುದು: “ಜಗತ್ತಿನ ಮಹಾ ನದಿಗಳಲ್ಲಿ ಎಲ್ಲವುಗಳ ಮೂಲ ತೊರೆಗಳು ಪರ್ವತಗಳಲ್ಲಿವೆ. ಮಾನವಕುಲದ ಅರ್ಧಾಂಶಕ್ಕೂ ಹೆಚ್ಚು ಜನರು ಪರ್ವತಗಳಲ್ಲಿ ಶೇಖರಣೆಯಾಗುವ ನೀರಿನ ಮೇಲೆ ಹೊಂದಿಕೊಂಡಿರುತ್ತಾರೆ. . . . ಈ ‘ನೀರಿನ ಕಟ್ಟೆಗೋಪುರಗಳು’ ಮಾನವಕುಲದ ಕ್ಷೇಮಕ್ಕೆ ಅತಿ ಪ್ರಮುಖವಾಗಿವೆ.” ಒಂದು ಸಾಮಾನ್ಯ ಮರವು ಸಹ ಅದರ ನಿರ್ಮಾಣಿಕನಿಗೆ ಘನತೆ ತರುತ್ತದೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದ ಒಂದು ವರದಿಯು, ಮರಗಳು “ಎಲ್ಲ ದೇಶಗಳ ಜನರ ಹಿತಕ್ಕೆ ಪ್ರಾಮುಖ್ಯ . . . ಅನೇಕ ಮರಜಾತಿಗಳು ಮರದ ತೊಲೆ, ಹಣ್ಣು, ಬೀಜ, ರಾಳ ಮತ್ತು ಗೋಂದು ಮುಂತಾದ ಉತ್ಪನ್ನಗಳ ಆಗರವಾಗಿರುವುದರಿಂದ ಅವು ಆರ್ಥಿಕತೆಗೆ ತುಂಬಾ ಪ್ರಾಮುಖ್ಯವಾಗಿವೆ” ಎಂದು ಹೇಳುತ್ತದೆ. ಲೋಕದಾದ್ಯಂತ, 200 ಕೋಟಿ ಜನರು ಅಡುಗೆ ಮತ್ತು ಇಂಧನಕ್ಕಾಗಿ ಮರಗಳನ್ನು ಅವಲಂಬಿಸಿರುತ್ತಾರೆ.”
21. ಒಂದು ಸಾಮಾನ್ಯ ಎಲೆಯು ವಿನ್ಯಾಸದ ಸಾಕ್ಷ್ಯವನ್ನು ಹೇಗೆ ತೋರಿಸುತ್ತದೆ ಎಂಬುದನ್ನು ವಿವರಿಸಿರಿ.
21 ವಿವೇಕಿಯಾದ ನಿರ್ಮಾಣಿಕನೊಬ್ಬನಿದ್ದಾನೆ ಎಂಬುದಕ್ಕೆ ಸಾಕ್ಷ್ಯವನ್ನು ಮರವೊಂದರ ವಿನ್ಯಾಸದಿಂದಲೇ ನೋಡುತ್ತೇವೆ. ಒಂದು ಸಾಮಾನ್ಯವಾದ ಎಲೆಯನ್ನು ತೆಗೆದುಕೊಳ್ಳಿ. ಅದು ಒಣಗಿ ಹೋಗದಂತೆ ಅದರ ಹೊರಭಾಗದಲ್ಲಿ ಮೇಣದಂತಹ ಲೇಪವಿದೆ. ಎಲೆಯ ಮೇಲ್ಭಾಗದಲ್ಲಿನ ಲೇಪದ ಕೆಳಗೆ ಹರಿದ್ರೇಣು (ಕ್ಲೋರೋಪ್ಲಾಸ್ಟ್)ಗಳುಳ್ಳ ಕಣಗಳ ಒಂದು ಸಾಲು ಇದೆ. ಇವುಗಳಲ್ಲಿ, ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುವ ಹರಿತ್ತು (ಕ್ಲೋರೋಫಿಲ್) ಎಂಬ ವಸ್ತು ಇದೆ. ದ್ಯುತಿಸಂಶ್ಲೇಷಣೆ (ಫೋಟೋಸಿಂತಿಸಿಸ್) ಎಂಬ ಕಾರ್ಯವಿಧಾನದಿಂದಾಗಿ ಎಲೆಗಳು “ಆಹಾರ ಕಾರ್ಖಾನೆಗಳು” ಆಗಿ ಪರಿಣಮಿಸುತ್ತವೆ. ಮರದ ಬೇರುಗಳ ಮೂಲಕ ನೀರು ಮೇಲೇರಿ ಜಟಿಲವಾದ “ಕೊಳಾಯಿ ವ್ಯವಸ್ಥೆಯ” ಸಹಾಯದಿಂದ ಎಲೆಗಳಿಗೆ ಸಾಗಿಸಲ್ಪಡುತ್ತದೆ. ಎಲೆಯ ಅಡಿಭಾಗದಲ್ಲಿರುವ ಸಾವಿರಾರು ಚಿಕ್ಕ ಚಿಕ್ಕ “ಕವಾಟಗಳು” ತೆರೆದು ಮುಚ್ಚುತ್ತಿರುವಾಗ ಇಂಗಾಲವನ್ನು ಒಳಹೀರಲಾಗುತ್ತದೆ. ನೀರು ಮತ್ತು ಇಂಗಾಲ ಸೇರಿ ಶರ್ಕರಪಿಷ್ಟಗಳನ್ನು ತಯಾರಿಸಲಿಕ್ಕಾಗಿ ಬೇಕಾದ ಶಕ್ತಿಯನ್ನು ಬೆಳಕು ಒದಗಿಸಿ ಕೊಡುತ್ತದೆ. ಈಗ ಆ ಮರವು, ಸ್ವತಃ ತಾನೇ ತಯಾರಿಸಿರುವ ಆಹಾರವನ್ನು ತಿನ್ನಸಾಧ್ಯವಾಗುತ್ತದೆ. ಆದರೂ ಈ “ಕಾರ್ಖಾನೆ” ಮೌನವಾಗಿ ಕಾರ್ಯನಡೆಸುತ್ತದೆ ಮತ್ತು ಸುಂದರವಾಗಿದೆ. ಪರಿಸರವನ್ನು ಮಲಿನಗೊಳಿಸುವ ಬದಲಿಗೆ, ಮರವು ಆಮ್ಲಜನಕವನ್ನು ಉಪೋತ್ಪನ್ನವಾಗಿ ಹೊರಬಿಡುತ್ತದೆ!
22, 23. (ಎ) ಕೆಲವು ಪಕ್ಷಿಗಳಿಗೂ ಭೂಮೃಗಗಳಿಗೂ ಯಾವ ಗಮನಾರ್ಹ ಸಾಮರ್ಥ್ಯಗಳಿವೆ? (ಬಿ) ಇನ್ನೂ ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವ ಅಗತ್ಯವಿದೆ?
22 “ಎಲ್ಲಾ ಮೃಗಪಕ್ಷಿಗಳೂ ಕ್ರಿಮಿಕೀಟಗಳೂ” ಎನ್ನುತ್ತದೆ ಕೀರ್ತನೆ 148:10. ಅನೇಕ ಭೂಮೃಗಗಳು ಮತ್ತು ಪಕ್ಷಿಗಳು ಅಚ್ಚರಿಗೊಳಿಸುವಂಥ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ. ಲೈಸಾನ್ ಆಲ್ಬಟ್ರಾಸ್ ಎಂಬ ಕಡಲಕೋಳಿ ಬಹು ದೂರ (ಒಂದು ಪಕ್ಷಿಯು ಕೇವಲ 90 ದಿನಗಳಲ್ಲಿ 40,000 ಕಿಲೊಮೀಟರ್ಗಳಷ್ಟು ದೂರ ಹಾರಿತು) ಹಾರಬಲ್ಲದು. ಬ್ಲ್ಯಾಕ್ಪೋಲ್ ವಾರ್ಬ್ಲರ್ ಹಾಡುಹಕ್ಕಿಯು ವಿರಮಿಸದೆ 80ಕ್ಕೂ ಹೆಚ್ಚು ತಾಸುಗಳ ವರೆಗೆ ಹಾರುತ್ತಾ ಉತ್ತರ ಅಮೆರಿಕದಿಂದ ದಕ್ಷಿಣ ಅಮೆರಿಕಕ್ಕೆ ಪಯಣಿಸುತ್ತದೆ. ಒಂಟೆಯು ನೀರನ್ನು, ಸಾಮಾನ್ಯವಾಗಿ ನೆನಸಲಾಗಿರುವಂತೆ ಅದರ ದುಬ್ಬಿನಲ್ಲಿ ಶೇಖರಿಸದೆ, ಪಚನ ವ್ಯವಸ್ಥೆಯಲ್ಲಿ ಶೇಖರಿಸುವುದರಿಂದ, ನಿರ್ಜಲೀಕರಣದ ಭಯವಿಲ್ಲದೆ ದೀರ್ಘಾವಧಿಗಳ ವರೆಗೆ ಪಯಣಿಸಲು ಸಾಧ್ಯವಾಗತ್ತದೆ. ಆದುದರಿಂದ ಎಂಜಿನೀಯರರು ಯಂತ್ರಗಳನ್ನು ಮತ್ತು ಹೊಸ ವಸ್ತುಗಳನ್ನು ವಿನ್ಯಾಸಿಸುವಾಗ, ಪ್ರಾಣಿಜಗತ್ತನ್ನು ಜಾಗರೂಕತೆಯಿಂದ ಪರೀಕ್ಷಿಸಿ ನೋಡುವುದರಲ್ಲಿ ಆಶ್ಚರ್ಯವೇನಿಲ್ಲ. ಲೇಖಕಿ ಗೇಲ್ ಕ್ಲೀರ್ ಹೇಳುವುದು: “ಒಳ್ಳೇದಾಗಿ ಕಾರ್ಯನಡಿಸುವ . . . ಮತ್ತು ಪರಿಸರಕ್ಕೆ ಯೋಗ್ಯವಾಗಿ ಹೊಂದಿಕೊಂಡಿರಬೇಕಾದ ಯಾವುದನ್ನಾದರೂ ನೀವು ರಚಿಸಬಯಸಿದರೆ, ಇದಕ್ಕೆ ಬೇಕಾದ ಉತ್ತಮ ಮಾದರಿಯನ್ನು ನೀವು ಪ್ರಕೃತಿಯಲ್ಲೇ ಕಂಡುಕೊಳ್ಳುವುದು ಸಂಭಾವ್ಯ.”
23 ಹೌದು, ಸೃಷ್ಟಿಯು ನಿಜವಾಗಿಯೂ ದೇವರ ಘನತೆಯನ್ನು ಪ್ರಚುರಪಡಿಸುತ್ತದೆ! ತಾರೆಗಳಿಂದ ತುಂಬಿರುವ ಆಕಾಶಮಂಡಲದಿಂದ ಹಿಡಿದು ಸಸ್ಯ ಮತ್ತು ಪ್ರಾಣಿಗಳ ವರೆಗೆ ಪ್ರತಿಯೊಂದೂ ಅದರ ಸೃಷ್ಟಿಕರ್ತನಿಗೆ ಸ್ತುತಿಯನ್ನು ತರುತ್ತದೆ. ಆದರೆ ಮಾನವರಾದ ನಮ್ಮ ಕುರಿತು ಏನು ಹೇಳಬಹುದು? ದೇವರನ್ನು ಸ್ತುತಿಸುವುದರಲ್ಲಿ ನಾವು ಪ್ರಕೃತಿಯೊಂದಿಗೆ ಹೇಗೆ ಜೊತೆಗೂಡಬಲ್ಲೆವು?
ನಿಮಗೆ ನೆನಪಿದೆಯೆ?
• ದೇವರ ಅಸ್ತಿತ್ವವನ್ನು ಅಲ್ಲಗಳೆಯುವವರು ಅಕ್ಷಮ್ಯರೇಕೆ?
• ನಕ್ಷತ್ರಗಳೂ ಗ್ರಹಗಳೂ ದೇವರನ್ನು ಹೇಗೆ ಘನಪಡಿಸುತ್ತವೆ?
• ಸಮುದ್ರಪ್ರಾಣಿಗಳು ಮತ್ತು ಭೂಮೃಗಗಳು ಒಬ್ಬ ಪ್ರೀತಿಪೂರ್ಣ ಸೃಷ್ಟಿಕರ್ತನಿದ್ದಾನೆಂಬುದಕ್ಕೆ ಹೇಗೆ ಸಾಕ್ಷ್ಯಕೊಡುತ್ತವೆ?
• ಪ್ರಕೃತಿಯ ನಿರ್ಜೀವಶಕ್ತಿಗಳು ಯೆಹೋವನ ಚಿತ್ತವನ್ನು ಹೇಗೆ ನೆರವೇರಿಸುತ್ತವೆ?
[ಪುಟ 10ರಲ್ಲಿರುವ ಚಿತ್ರ]
ನಾವು ನೋಡಸಾಧ್ಯವಿರುವ ನಕ್ಷತ್ರಗಳ ಸಂಖ್ಯೆಯು, 7 ಕೋಟಿಯ ನಂತರ 15 ಸೊನ್ನೆಗಳನ್ನು ಸೇರಿಸಿದರೆ ಎಷ್ಟಾಗುತ್ತದೊ ಅಷ್ಟು ಎಂದು ವಿಜ್ಞಾನಿಗಳು ಅಂದಾಜುಮಾಡುತ್ತಾರೆ!
[ಕೃಪೆ]
Frank Zullo
[ಪುಟ 12ರಲ್ಲಿರುವ ಚಿತ್ರ]
ಸೀಸೆ ಮೂತಿಯ ಡಾಲ್ಫಿನ್
[ಪುಟ 13ರಲ್ಲಿರುವ ಚಿತ್ರ]
ಹಿಮಹರುಳು
[ಕೃಪೆ]
snowcrystals.net
[ಪುಟ 13ರಲ್ಲಿರುವ ಚಿತ್ರ]
ಎಳೆಯ ಲೈಸಾನ್ ಆಲ್ಬಟ್ರಾಸ್