ತೈಲ ತಮ್ಮ ಸೇವೆಯಲ್ಲಿ ಪ್ರಾಯಶಃ!
ಒಂದು ತೊಟ್ಟು ತೈಲವಾಗಿದ್ದ ನಾನು ನನ್ನಷ್ಟಕ್ಕೆ ವಿಶ್ರಮಿಸುತ್ತಿದ್ದೆ, ನನ್ನ ನೆರೆಹೊರೆಯ ಅಸಂಖ್ಯಾತ ಹನಿಗಳೊಂದಿಗೆ ಅಸಂಖ್ಯಾತ ವರುಷ ಸಹಭಾವಿಯಾಗಿ ನಿದ್ರಿಸುತ್ತಿದ್ದೆ. ಆದರೆ ಥಟ್ಟನೆ ಉಕ್ಕಿನ ಅಲೌಕಿಕವಾದ ಕಿರುಗುಟ್ಟುವ ಕರ್ಕಶಧ್ವನಿ ನಮ್ಮ ಬೀಡಿನ ಗೋಡೆಯನ್ನು ಕೊರೆದು ನಮ್ಮನ್ನು ಎಬ್ಬಿಸಿತು. ಇನ್ನೊಂದು ಲೋಕದಿಂದ ಬಂದ ನಮ್ಮ ಏಕಾಂತವಾಸದ ಈ ಆಕ್ರಮಣಗಾರನು ಒಂದು ಬೈರಿಗೆಯ ಅಲಗು (Drill bit) ಮತ್ತು ಇದು ನಮ್ಮ ಜೀವನರೀತಿಯನ್ನು ರಾತ್ರಿಹಗಲಾಗುವುದರೊಳಗೆ ಬದಲಾಯಿಸಿ ಬಿಟ್ಟಿತು.
ಹಾಗಾದರೆ ಕ್ಷುಲ್ಲಕವಾದ ತೈಲ ತೊಟ್ಟಾಗಿದ್ದ ನಾನು ಅಷ್ಟು ಪ್ರಸಿದ್ಧವಾದದ್ದು ಹೇಗೆ? ನನ್ನ ಕಥೆ 1960ಗಳ ಪೂರ್ವಾರ್ಧಕ್ಕೆ ಹೋಗುತ್ತದೆ. ಆಗ ಅಲಾಸ್ಕಾದ ಉತ್ತರ ಇಳುಕಲಿನಲ್ಲಿ ತೈಲ ಪರಿಶೋಧನೆ ನಡೆಯುತ್ತಿತ್ತು. ಅನೇಕ ವರ್ಷಗಳಿಂದ ಆಯಿಲ್ ಕಂಪೆನಿಗಳು ತಮ್ಮ ಹಿಡಿತಕ್ಕೆ ಸಿಕ್ಕದೆ ನುಣುಚಿಕೊಳ್ಳುತ್ತಿದ್ದ ವ್ಯಾಪಾರದ ತೈಲ ಭೂಮಿಯನ್ನು ಹುಡುಕಲು ಕೋಟಿಗಟ್ಟಲೆ ಡಾಲರುಗಳನ್ನು ಖರ್ಚುಮಾಡಿದ್ದರು. 1968ರಲ್ಲಿ ಪ್ರೂಡೊ ಬೇ ಆಯಿಲ್ ಫೀಲ್ಡನ್ನು ಕಂಡುಹಿಡಿಯಲಾಯಿತು.
ಹೀಗೆ ನನ್ನ ಪಿತ್ರಾರ್ಜಿತ ಬೀಡನ್ನು ಆಕ್ರಮಿಸಲಾಯಿತು. ನನ್ನ ಸುಖೋಷ್ಣದ ಹಿತಕರವಾದ ಬೀಡನ್ನು ಬಿಡುವಂತೆ ಮಾಡಿ ನನ್ನನ್ನು ಅಪರಿಚಿತವಾದ ಲೋಕಕ್ಕೆ ಪರಕೀಯ ಉಕ್ಕಿನ ಕೊಳವೆಯ ಮೂಲಕ ಮೇಲೆ ದೂಡಲಾದಾಗ ನನಗಾದ ಭಯವನ್ನು ನೀವು ಊಹಿಸಬಲ್ಲಿರಾ?
ನನ್ನ ಮನೆ ಕೊಳವಲ್ಲ
ನಾನೀಗ ಬಿಟ್ಟುಹೋಗುತ್ತಿರುವ ಬೀಡನ್ನು ಪ್ರಾಯಶಃ ನಾನು ಒಂದು ನಿಮಿಷ ವರ್ಣಿಸಬೇಕು. ಒಂದನೆಯದಾಗಿ, ಅದು ಸಮುದ್ರಮಟ್ಟಕ್ಕಿಂತ 8,500 ಅಡಿ ಕೆಳಗಿತ್ತು. ಎಂಥ ಏಕಾಂತತೆ! ಇದಲ್ಲದೆ, ಅಲ್ಲಿಯ ಉಷ್ಣ 200 ಡಿಗ್ರಿ ಫಾರನ್‌ಹೈಟ್. ಇದು ನಮ್ಮ ಅಣುರಚನೆಗೆ ಅತ್ಯಂತ ಅನುಕೂಲ. ಅನೇಕರು ನನ್ನ ಮನೆಯನ್ನು ಕೊಳವೆಂದು ವರ್ಣಿಸುತ್ತಾರೆ. ಇದು ನಾನು ಎಣ್ಣೆ ತುಂಬಿದ ದೊಡ್ಡಗವಿಯಲ್ಲಿ ವಾಸಿಸುತ್ತೇನೆಂಬ ತಪ್ಪು ಅರ್ಥವನ್ನು ಕೊಟ್ಟೀತು. ಆದರೆ ವಿಷಯ ಹಾಗಲ್ಲ. ನನ್ನ ವಾಸಸ್ಥಾನ ಎಣ್ಣೆಯ ಕೊಳವೆಂದು ಕರೆಯಲ್ಪಟ್ಟರೂ ಅದು ನಿಜವಾಗಿ, ಎಣ್ಣೆ ಮತ್ತು ಅನಿಲದಿಂದ ತುಂಬಿರುವ ಮರಳಿನ ಅಥವಾ ದಪ್ಪಮರಳಿನ ತಳವಾಗಿದೆ. ಇದು ಗ್ರಹಿಸಲು ಕಷ್ಟವಾದರೆ, ಒಂದು ಮರಳು ತುಂಬಿದ ಪಾತ್ರೆಯಿದೆಯೆಂದು ಭಾವಿಸಿ. ನೀವು ಅದಕ್ಕೆ, ಅದು ತುಂಬಿ ಹರಿಯುವುದರೊಳಗೆ, ಪಾತ್ರೆಯ ಘನ ಅಳತೆಯ 25 ಸೇಕಡಾ ನೀರನ್ನು ಹೊಯ್ಯಬಲ್ಲಿರಿ.
ಈಗ, ನನ್ನನ್ನು ಹೊಸ ಜೀವನಕ್ಕೆ ಕೊಂಡೊಯ್ದ ಸಮಯಕ್ಕೆ ಹೋಗೋಣ. ತೈಲ ಜಲಾಶಯದಲ್ಲಿ ಮಹಾ ಒತ್ತಡದ ಪರಿಣಾಮವಾಗಿ ನಾನು ವೇಗದಲ್ಲಿ ಕೊಳವೆಯ ಮೂಲಕ ಮೇಲೇರಿದೆ. ಆ ಒತ್ತಡ ಮೊದಲಾಗಿ ಚದರ ಇಂಚಿಗೆ 4,000 ಪೌಂಡುಗಳಷ್ಟು ಇದ್ದುದರಿಂದ ಅದು ನನ್ನನ್ನು ಅತಿ ವೇಗದಿಂದ ಮೇಲೆತ್ತಿತ್ತು.
ಇದು ನನ್ನ ನೂತನ ಜಗತ್ತಿನ ಆರಂಭ. ನಾನು ಅತಿ ಜನಪ್ರಿಯ ಇಂಧನವಾಗುವನೆಂದು ಕೆಲವರೆಂದರು. ಇತರರು, ನಾನು ಸಾವಿರ ವಿಧಗಳಲ್ಲಿ ಕುಟುಂಬಗಳಿಗೆ ಮತ್ತು ಕೈಗಾರಿಕೆಗಳಿಗೆ ಪ್ರಯೋಜನ ತರುವೆನೆಂದು ಹೇಳಿದರು. ನಾನು ಎಲ್ಲಿ ಹೋಗಲಿದ್ದೆನೋ? ನನಗೆ ಹೆದರಿಕೆಯಾಗಿತ್ತು. ಹೇಗೂ, ನಾನೊಬ್ಬನೇ ಇರಲಿಲ್ಲ. ಪ್ರೂಡೋ ಆಯಿಲ್ ಫೀಲ್ಡಿನಿಂದ ನನ್ನ ಸಂಗಾತಿ ತೊಟ್ಟುಗಳನ್ನು ತೆಗೆಯಲು ಇನ್ನೂ ಹೆಚ್ಚು ಭಾವಿಗಳನ್ನು ತೋಡಲಾಗುತ್ತಿತ್ತು.
ಇದು ಬಹು ಹೆಚ್ಚು ಖರ್ಚು ತಗಲುವ ಮತ್ತು ಅಪಾಯಕರ ಕೆಲಸ. ಅನೇಕ ವೇಳೆ ಬೈರಿಗೆ ಯಂತ್ರಗಳು ತುಂಬಾ ಒತ್ತಡವಿರುವ ಪ್ರದೇಶಗಳನ್ನು ತೂರಲಾಗಿ, ನಮ್ಮ ಜಾಗ್ರತೆ ವಹಿಸದಿರುವಲ್ಲಿ ನಾವು ಭಯಂಕರ ಸ್ಫೋಟನದೊಂದಿಗೆ ಸಿಡಿದು ತಂಡ್ರ ಪ್ರದೇಶ ಮತ್ತು ವನ್ಯಜೀವನಕ್ಕೆ ತುಂಬಾ ಹಾನಿಯನ್ನು ತರಬಲ್ಲೆವು. ಆದರೆ ನನಗೆ ಈ ದೋಷ ತಟ್ಟಲಿಲ್ಲ. ನಾನು ಅಲ್ಲಿಂದ ಕೊಳವೆಯ ಮಾರ್ಗವಾಗಿ ವಾಲೆಸ್ಡಿಗೆ ನಿಮ್ಮ ಸೇವೆಮಾಡುವ ನನ್ನ ವಿಧಿಯನ್ನು ಪೂರೈಸಲು ಪಯಣ ಬೆಳೆಸತೊಡಗಿದೆ.
ಒಂದು ವಿಷಯವೇನಂದರೆ ನನ್ನನ್ನು ಒಯ್ಯುವ ಪೈಪ್‌ಲೈನ್ ತಂಡ್ರದ ಮೇಲಿನಿಂದ ಹಾದು ಹೋಗುತ್ತದೆ. ಶಾಶ್ವತ ಘನನೆಲದ ಕರಗುವಿಕೆಯನ್ನು ತಡೆಯುವಂತೆ ಹೀಗೆ ಮಾಡಲಾಗುತ್ತದೆ. ಉತ್ತರದ ಇಳುಕಲಿನಲ್ಲಿ ಈ ಶಾಶ್ವತ ಹೆಪ್ಪುಗಟ್ಟಿದ ನೆಲದ ದಪ್ಪ ಸರಾಸರಿ 2,000 ಅಡಿ. ಇದರಲ್ಲಿ 30 ಸೇಕಡಾ ಹೆಪ್ಪುಗಟ್ಟಿದ ಜಲವಾದುದರಿಂದ ನೆಲದಡಿಯಲ್ಲಿ ಬಿಸಿ ಎಣ್ಣೆ ಹರಿಯುವುದಾದರೆ ಶಾಶ್ವತ ಘನ ನೆಲ ಕರಗಿ, ಪೈಪ್‌ಲೈನು ಮುದುರಿಹೋಗಿ ಒಡೆಯುವ ಅಪಾಯವಿದೆ. ಆಗ ಆಗಸಾಧ್ಯವಿರುವ ಹಾನಿಯನ್ನು ಭಾವಿಸಬಲ್ಲಿರೋ? ದುರ್ಬಲವಾದ ತಂಡ್ರ ಪ್ರದೇಶದಲ್ಲಿ ಸಾವಿರಾರು ಗ್ಯಾಲನ್ ಅಶುದ್ಧ ಎಣ್ಣೆ ಚೆಲ್ಲುವುದಾದರೆ ಎಂಥ ಭಯಂಕರ ಹಾನಿಯಾದೀತು!
ವಾಲೆಸ್ಡಿನಿಂದ ಬಹುದೂರದ ತೈಲಶೋಧನಾಗಾರಕ್ಕೆ ಸೂಪರ್ ಟ್ಯಾಂಕರ್ ಹಡಗಿನ ಮೂಲಕ ಪ್ರಯಾಣ ಬೆಳೆಸುವ ವಿಷಯವನ್ನು ನನ್ನ ಕಾರ್ಯಕ್ರಮದಲ್ಲಿತ್ತು. ಅಲ್ಲಿ ನನ್ನ ಹೊಸ ಜೀವನ ಪ್ರಾರಂಭಗೊಳ್ಳಲಿಕ್ಕಿತ್ತು. ಅಲ್ಲಿ ಅನಿಲ ಮತ್ತು ನೀರನ್ನು ಬೇರ್ಪಡಿಸಿ ಇನ್ನೊಂದು ಸ್ಥಳಕ್ಕೆ ರವಾನಿಸಲಿಕ್ಕಿತ್ತು. ‘ನಾವು ಎಣ್ಣೆಯ ಕುರಿತು ಮಾತಾಡುತ್ತಿರುವಾಗ ನೀವು ಅನಿಲ (ಗ್ಯಾಸ್) ಅನ್ನುತ್ತೀರಲ್ಲಾ’ ಎಂದು ನೀವು ಪ್ರಶ್ನಿಸಬಹುದು. ಹೌದು, ನಾನು ಜೀವಿಸುತ್ತಿದ್ದಲ್ಲಿ ಅನಿಲವು ಯಾವಾಗಲೂ ಇದೆಯೆಂಬದು ಅಧಿಕಾಂಶ ಜನರಿಗೆ ತಿಳಿದಿಲ್ಲ. ವಾಸ್ತವವೇನಂದರೆ, ನನ್ನ ರಚನೆಯಲ್ಲಿ ಹೆಚ್ಚಾಗಿರುವುದು ಗ್ಯಾಸೇ. ನಿಜಸಂಗತಿಯೇನಂದರೆ, ನಾವು ಭೂಮಿಯ ಮೇಲ್ಮೈಗೆ ಬಂದೊಡನೆ ನನ್ನನ್ನು ಬಿಡುಗಡೆಮಾಡುವುದಾದರೆ ನಾನು ನೂರಕ್ಕೂ ಹೆಚ್ಚು ಪಾಲು ವಿಕಾಸವಾಗುವೆನು. ಆಗ ನಾನು ಮಾಡುವ ಶಬ್ಧ ಎಷ್ಟಾಗಿದ್ದೀತೆಂದು ನೆನಸಿರಿ!
ಹೇಗೂ, ಶೋಧನಾಗಾರದಲ್ಲಿ ನಾನು ರೂಪಾಂತರಗೊಳ್ಳಲಿದ್ದೇನೆ. ನನ್ನನ್ನು ಚಿಕ್ಕ ಚಿಕ್ಕ ಅಂಶಗಳಾಗಿ ಅಥವಾ ಭಾಗಗಳಾಗಿ ಒಡೆಯಲಾಗುವುದು. ಇದಕ್ಕೆ ಫ್ರ್ಯಾಕ್ಶನಲ್ ಡಿಸ್ಟಿಲೇಶನ್ ಎಂದು ಹೆಸರು. ಕಚ್ಛಾ ಎಣ್ಣೆಯನ್ನು ಹಬೆಯಾಗುವಂತೆ ಕಾಯಿಸಿ ಒಂದು ದೊಡ್ಡ ಗೋಪುರದ ಮೂಲಕ ಮೇಲೇರುವಂತೆ ಬಿಡಲಾಗುತ್ತದೆ. ಇದು, ವಿವಿಧ ಅಂಶಗಳು ವಿವಿಧ ಮಟ್ಟದಲ್ಲಿ ಸಾಂದ್ರೀಕರಿಸುವಂತೆಯೂ ನಿಯಂತ್ರಕ ಪೊರೆಗಳ ಮೂಲಕ ಎಳೆಯಲ್ಪಡುವಂತೆಯೂ ಮಾಡುತ್ತದೆ. ಆಗ ನನ್ನಲ್ಲಿರುವ ಅರ್ಧಾಂಶ ಪೆಟ್ರೋಲ್ ಆಗಿ ಪರಿಣಮಿಸುತ್ತದೆ. ಮತ್ತು ಆಗ, ನೀವು ಪೆಟ್ರೋಲ್ ಪಂಪಿಗೆ ವಾಹನ ನಡಿಸಿ, ‘ತುಂಬಿಸಿ’ ಎಂದು ಹೇಳುವಾಗ, ನಾನು ತಮ್ಮ ಸೇವೆಯಲ್ಲಿರುವೆ.
ಆದರೆ ನಾನು ಇನ್ನು ಅನೇಕ ವಸ್ತುಗಳಲ್ಲಿಯೂ ಹೋಗಿ ಸೇರಬಲ್ಲೆ. ತೈಲದ ಹನಿಗಳಾದ ನಾವು ಮೊದಲಲ್ಲಿ ಏನೂ ದೊಡ್ಡದಾಗಿ ಕಾಣದಿದ್ದರೂ ವಿಷಯ ಹಾಗಿರುವುದಿಲ್ಲ. ನಿಮ್ಮ ಕೋಣೆಯ ಸುತ್ತಲೂ ಕಣ್ಣು ಹಾಯಿಸಿ. ನಿಮ್ಮ ಕುರ್ಚಿಯನ್ನು ಪ್ಲಾಸ್ಟಿಕ್, ವೈನಿಲ್ ಅಥವಾ ಸಿಂಥೆಟಿಕ್ ರಬ್ಬರಿನಿಂದ ಮಾಡಿರಬಹುದು. ಆ ಅಡಿಗೆಮನೆಯ ಅಂದವಾದ ಮೇಜನ್ನು ಎಣ್ಣೆಯಿಂದ ಮಾಡಿದ ನಯಮರಲೇಪದಿಂದ ಹೊದಿಸಿರಬಹುದು. ನಿಮ್ಮ ನೆಲದ ಹೊದಿಕೆ ತೈಲ ಉತ್ಪಾದನೆಗಳನ್ನು ಮಾಡುವ ರಾಸಾಯನಿಕ ಕಾರ್ಖಾನೆಗಳಿಂದ ಬರುವ ಕಚ್ಛಾ ಸಾಮಗ್ರಿಯ ಫಲವಾಗಿ ಬಂದಿರಬಹುದು. ಹೀಗೆ ತಮ್ಮ ಸೇವೆ ಸಹಸ್ರ ವಿಧಗಳಲ್ಲಿ ನಡೆಯುತ್ತದೆ!
ಇನ್ನು ಮುಂದೆ ‘ತಮ್ಮ ಸೇವೆ’ಯಲ್ಲಿಲ್ಲ
ಆದರೆ ನನ್ನ ವಿಷಯದಲ್ಲಿ ಇದ್ಯಾವುದೂ ಆಗುವಂತಿಲ್ಲ. ನಾನು ವಾಲೆಸ್ಡಿನಿಂದ ಸೂಪರ್ ಟ್ಯಾಂಕರ್ ಎಕ್ಸೊನ್ ವಾಲೆಸ್ಡ್ ಹಡಗಿನ ಮೂಲಕ ಶೋಧನಾಗಾರಕ್ಕೆ ಪ್ರಯಾಣವನ್ನು ಆರಂಭಿಸಿದೆ. ಮಧ್ಯರಾತ್ರಿ ಕಳೆದ ಸ್ವಲ್ಪದರಲ್ಲಿ ಲೋಹಬಂಡೆಗೆ ಬಡಿದು ಕಿರುಗುಟ್ಟುವ ಸದ್ದು ಕೇಳಿಸಿತು. ಉತ್ತರದ ಇಳುಕಲಿನಲ್ಲಿ ಆ ಉಕ್ಕಿನ ಅಲಗು ನನ್ನ ಬೀಡನ್ನಾಕ್ರಮಿಸಿದಾಗ ನಡೆದುದಕ್ಕಿಂತಲೂ ಇದೆಷ್ಟೋ ಭಯಭರಿತವಾಗಿತ್ತು! ಕ್ಷಿಪ್ರವೇ, ಪ್ರಿನ್ಸ್ ವಿಲ್ಯಂ ಸೌಂಡಿನ ಬ್ಲೈ ರೀಫಿನಲ್ಲಿ ನಾನಿದ್ದ ಎಣ್ಣೆ ತೊಟ್ಟಿ ಸೀಳಿ ಬಿರುಕು ಬಿಟ್ಟಿತು. ನಾನು, ಒಂದು ಕೋಟಿ 10 ಲಕ್ಷ ಗ್ಯಾಲನ್ ಸಂಗಾತಿಗಳೊಂದಿಗೆ ಅಲ್ಲಿಯ ನೀರಿನೊಳಗೆ ರಭಸದಿಂದ ನುಗ್ಗಿದೆ. ನಾನೀಗ ಒಂದು ಭಯಂಕರ ಮಾಲಿನ್ಯದ ಭಾಗವಾದೆ, ಉತ್ತರ ಅಮೆರಿಕದಲ್ಲೇ ಅತ್ಯಂತ ದೊಡ್ಡ ತೈಲಸುರಿತದ ಭಾಗವಾಗಿ ಬಿಟ್ಟೆ!
ಆದುದರಿಂದ, ಸರ್ವಿಸ್ ಸ್ಟೇಶನಿನಲ್ಲಿ ನಿಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಲು ನಾನು ಸಹಾಯಮಾಡಲಾರೆ. ನಾನು ನಿಮ್ಮ ಮೇಜಿನ ಮೇಲಿರುವ ಪ್ಲಾಸ್ಟಿಕ್ ಪ್ಲೇಟು, ನಿಮ್ಮ ಟೆಲಿವಿಶನ್, ನಿಮ್ಮ ಮೆಚ್ಚಿನ ಸೌಂದರ್ಯವರ್ಧಕ ಕ್ರೀಮ್, ನೀವು ಉಡುವ ಬಟ್ಟೆ ಅಥವಾ ಆ ಆಸೆ ತೋರಿಸುವ ಸುವಾಸನೆಯ ಸುಗಂಧದ್ರವ್ಯ ಆಗಲಾರೆ. ನಾನು ಆರಂಭದಲ್ಲಿ ಹೊರಟಿದ್ದಂತೆ, ತಮ್ಮ ಸೇವೆಯಲ್ಲಿದ್ದೇನೆ ಎಂದು ಹೇಳುತ್ತಾ ನಿಮ್ಮ ಮುಂದೆ ತೋರಿಸಿಕೊಳ್ಳಲು ಎಂದಿಗೂ ಶಕ್ತನಾಗಲಾರೆ. ಇನ್ನು ಮುಂದೆ ಆ ಪ್ರಶ್ನೆಯೇ ಏಳಲಾರದು!
ಬದಲಿಗೆ, ನಾನು ಪ್ರಿನ್ಸ್ ವಿಲ್ಯಂ ಸೌಂಡ್ ಮತ್ತು ಅಲಾಸ್ಕ ಕೊಲ್ಲಿಯನ್ನು ಮಲಿನ ಮಾಡುತ್ತಾ ಅಂತ್ಯಗೊಂಡೆ. ನೂರಾರು ಮೈಲು ಸಮುದ್ರ ಕರಾವಳಿಯ ಸೌಂದರ್ಯವನ್ನು ಕೆಡಿಸುವುದರಲ್ಲಿ ಪಾಲಿಗನಾದೆ. ಸಹಸ್ರಾರು ಪಕ್ಷಿ, ಪ್ರಾಣಿಗಳ ಮರಣದಲ್ಲಿ ಭಾಗಿಯಾದೆ. ನೂರಾರು ಬೆಸ್ತರ ಹೊಟ್ಟೆಪಾಡಿಗೆ ಹಾನಿ ತಂದೆ. ಪ್ರೂಡೊ ಬೇಯ ಉತ್ತರದ ಇಳುಕಲಿನಲ್ಲಿ, ಸಮುದ್ರಮಟ್ಟಕ್ಕಿಂತ 8,500 ಅಡಿ ಕೆಳಗೆ ನನ್ನ ಸುಖೋಷ್ಣದ ಮನೆಯಲ್ಲಿ ವಿಶ್ರಮಿಸುತ್ತಾ, ನನ್ನ ಪಾಡಿಗೆ ನಾನೇ ಆ ತೈಲದ ತೊಟ್ಟಾಗಿ ಇರುತ್ತಾ ಇದ್ದಿದ್ದರೆ ಎಷ್ಟೋ ಲೇಸಾಗಿತ್ತು. (g89 11/22)