ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 24: ಈಗ ಮತ್ತು ಸದಾಕಾಲ ಸತ್ಯ ಧರ್ಮದ ಶಾಶ್ವತ ಸೌಂದರ್ಯಗಳು
“ಧರ್ಮ, ಸ್ವರ್ಗೀಯ ಸತ್ಯಗಳ ಧರಿಸೆ, ನೋಡುವುದೆ ಸಾಕು ಅದರ ಶ್ಲಾಘನೆಗೆ.”—ವಿಲ್ಯಮ್ ಕೂಪರ್, 18 ನೆಯ ಶತಕದ ಇಂಗ್ಲಿಷ್ ಕವಿ
ಸುಳ್ಳು ಧರ್ಮದಲ್ಲಿ ಪ್ರಶಂಸಿಸಲು ಯಾವುದೂ ಇಲ್ಲ. ಅದು ಮಾನವ ಸಂತತಿಗೆ 60 ಶತಕಗಳ ಕ್ಲೇಶ ಮತ್ತು ಕಷ್ಟಾನುಭವವನ್ನು ತಂದಿದೆ. ಅದರ ಸುಳ್ಳಿನ, ವಂಚಕ, ದ್ರೋಹ, ಮತ್ತು ಹಗೆತನದ ಮಾರ್ಗಗಳು ಅದನ್ನು ದೇವರ ಮತ್ತು ಮನುಷ್ಯನ ದೃಷ್ಟಿಯಲ್ಲಿ ಅಸಹ್ಯವಾಗಿ ಮಾಡಿದೆ. ಸ್ವರ್ಗೀಯ ಸತ್ಯಗಳನ್ನು ಧರಿಸುವ ಬದಲಿಗೆ ಸುಳ್ಳು ಧರ್ಮವು ಸತ್ಯ ಮತ್ತು ಸೌಂದರ್ಯಗಳ ವಿರೋಧಾಲಂಕಾರವಾಗಿದೆ.
ಬೇಗನೆ, ದೇವರ ವಿನಾಶಕ ಸೈನ್ಯಗಳು ಈ ಸುಳ್ಳು ಧರ್ಮವನ್ನು ಅನಾಡಂಬರದಿಂದ ನಿತ್ಯ ನಿರ್ಮೂಲವೆಂಬ ಗುಂಡಿಗೆ ದೊಬ್ಬುವುವು. ಅದಾಗಿ ಸ್ವಲ್ಪದರಲ್ಲಿ, ಸೈತಾನನ ವ್ಯವಸ್ಥೆಯ ಉಳಿದ ಭಾಗವು ಅದನ್ನನುಸರಿಸಿ ಹೋಗುವುದು. ಆದರೆ, ಸತ್ಯ ಧರ್ಮ ಹಾಗೂ ಅದನ್ನನುಸರಿಸುವವರು ಬದುಕಿ ಉಳಿಯುವರು. ನಾವಿಂದು ವಿರಳವಾಗಿಯೇ ಭಾವಿಸಸಾಧ್ಯವಾಗುವ ಮಟ್ಟಕ್ಕೆ ಅಂದು ಶಾಶ್ವತ ಸೌಂದರ್ಯವು ಪ್ರದರ್ಶಿಸಲ್ಪಡುವುದನ್ನು ನೋಡುವುದು ಅದೆಂಥ ಆನಂದವಾಗಿರುವುದು!
ಯಾವ ಸೌಂದರ್ಯಗಳು?
ಸತ್ಯ ಧರ್ಮದ ಸೌಂದರ್ಯಗಳೋ ಅನೇಕ. ಕೆಳಗೆ ಕೇವಲ ಕೆಲವು ಕೊಡಲ್ಪಟ್ಟಿವೆ. ಈ ಶಾಶ್ವತ ಸೌಂದರ್ಯಗಳು ಬೈಬಲಾಧಾರಿತವೆಂಬುದನ್ನು ರುಜುಮಾಡಲು ಕೊಡಲಾಗಿರುವ ಬೈಬಲ್ ವಚನಗಳನ್ನು ಏಕೆ ತೆರೆದು ನೋಡಬಾರದು?
ಸತ್ಯ ಧರ್ಮದ ಅನೇಕ ಶಾಶ್ವತ ಸೌಂದರ್ಯಗಳಲ್ಲಿ ಈ ಕೆಳಗಿನವು ಸೇರಿವೆ:
▪ ನಾವು ಯಾರ ಮೇಲೆ ಯಾವ ಷರತ್ತೂ ಇಲ್ಲದೆ ಭರವಸವಿಡಬಹುದೋ ಆ ಯೆಹೋವ ಎಂಬ ಹೆಸರಿನ ಅಮೋಘ ದೇವರ ಸತ್ಯದ ಮೇಲೆ ಇದು ಆಧಾರಿತವಾಗಿದೆ.—ಕೀರ್ತನೆ 83:18; ಯೆಶಾಯ 55:10, 11.
▪ ಪ್ರತಿಯೊಬ್ಬ ನಮ್ರ ಹೃದಯಿಗೆ ಇದು ದೊರೆಯುತ್ತದೆ, ಶ್ರೇಷ್ಠ ಬುದ್ಧಿಶಕ್ತಿಯವರಿಗೆ ಮಾತ್ರ ಇದನ್ನು ಕಾದಿರಿಸಿರುವುದಿಲ್ಲ.—ಮತ್ತಾಯ 11:25; 1 ಕೊರಿಂಥ 1:26-28.
▪ ಕುಲ, ಸಾಮಾಜಿಕ ಸ್ಥಾನ, ಮತ್ತು ಆರ್ಥಿಕ ಸ್ಥಿತಿಯ ಸಂಬಂಧದಲ್ಲಿ ಇದು ಕುರುಡಾಗಿದೆ.—ಅಪೊಸ್ತಲರ ಕೃತ್ಯಗಳು 10:34, 35; 17:24-27.
▪ ಅದು ದುಃಖ, ರೋಗ, ಕ್ಲೇಶ, ಮತ್ತು ಮರಣಗಳಿಲ್ಲದ ಶಾಂತಿ ಮತ್ತು ಭದ್ರತೆಯ ಲೋಕದಲ್ಲಿ ಜೀವನದ ಸುದೃಢ ನಿರೀಕ್ಷೆಯನ್ನು ಕೊಡುತ್ತದೆ.—ಯೆಶಾಯ 32:18; ಪ್ರಕಟನೆ 21:3, 4.
▪ ಅದರ ಸದಸ್ಯರು ಲೋಕವ್ಯಾಪಕವಾಗಿ ನಿಷ್ಠೆಯ ಸಹೋದರತ್ವದಿಂದ, ಬೋಧನೆ, ನಡತೆ ಮತ್ತು ಮನೋಭಾವದಲ್ಲಿ ಒಂದಾಗುವ ಆಧಾರಕಟ್ಟನ್ನು ಅದು ಒದಗಿಸುತ್ತದೆ.—ಕೀರ್ತನೆ 133:1; ಯೋಹಾನ 13:35.
▪ ಅದು ಪ್ರತಿಯೊಬ್ಬನಿಗೆ—ಪುರುಷ, ಸ್ತ್ರೀ, ಮತ್ತು ಮಗುವಿಗೆ—ದೇವರ ಕೆಲಸದಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸುವ, ಮತ್ತು ಹೀಗೆ ಉದ್ದೇಶಭರಿತ ಜೀವನವನ್ನು ನಡೆಸುವ ಸುಯೋಗವನ್ನು ನೀಡುತ್ತದೆ.—1 ಕೊರಿಂಥ 15:58; ಇಬ್ರಿಯ 13:15, 16.
▪ ಅಡಗಿರುವ ಅಪಾಯಗಳ ಕುರಿತು ಅದು ಎಚ್ಚರಿಸುತ್ತಾ, ನಾವು ಪ್ರಯೋಜನ ಬರುವಂತೆ ಹೇಗೆ ನಡೆದುಕೊಳ್ಳಬೇಕೆಂದು ಕಲಿಸುತ್ತದೆ.—ಜ್ಞಾನೋಕ್ತಿ 4:10-13; ಯೆಶಾಯ 48:17, 18.
ಮತ್ತು ಈ ಸೌಂದರ್ಯಗಳು ಶಾಶ್ವತವೆಂದು ಏಕೆ ಹೇಳಬಹುದು? ಸತ್ಯ ಧರ್ಮವು ಬಾಳಿಕೆ ಬರುವಷ್ಟೇ ಕಾಲ—ಶಾಶ್ವತವಾಗಿ—ಇವು ಸಹ ಬಾಳಿಕೆ ಬರುವುದರಿಂದಲೇ.
ಅಂತರಗಳನ್ನು ತುಂಬಿಸುವದು
ಮರಣವು ಸತ್ಯದ ಮಹಾ ಶತ್ರುಗಳಲ್ಲಿ ಒಂದು ಎಂದು ಹೇಳಸಾಧ್ಯವಿದೆ, ಏಕೆಂದರೆ ಇತರ ಯಾವನಿಗೂ ತಿಳಿಯದಿರುವ ಮಾಹಿತಿಯನ್ನು ಜನರು ಅನೇಕ ವೇಳೆ ತಮ್ಮ ಸಮಾಧಿಗೆ ಕೊಂಡೊಯ್ಯುತ್ತಾರೆ. ತುಲನಾತ್ಮಕವಾಗಿ ಇತ್ತೀಚೆಗೆ ನಡೆದ ಘಟನೆಗಳ ಸರಿಯಾದ ವಿವರಗಳು—ಉದಾಹರಣೆಗೆ, 1963ರಲ್ಲಿ ನಡೆದ ಅಮೆರಿಕದ ಅಧ್ಯಕ್ಷ ಜೆ. ಎಫ್. ಕೆನೆಡಿ ಅವರ ಹತ್ಯೆ—ಈಗಲೂ ವಿವಾದಾಸ್ಪದವಾಗಿವೆ. ಅದರ ನಿಜತ್ವಗಳೇನು? ಅದನ್ನು ಯಾರು ನಿಜವಾಗಿಯೂ ಬಲ್ಲರು? ಯಾರಿಗೆ ಗೊತ್ತೋ ಅವರು ಈಗ ಜೀವಿತರಾಗಿರುವುದಿಲ್ಲ. ಮತ್ತು ಕೇವಲ 28 ವರ್ಷಗಳ ಹಿಂದೆ ನಡೆದ ಸಂಗತಿ ಹೀಗಿರಬಹುದಾದರೆ, ನೂರಾರು ಯಾ ಸಾವಿರಾರು ವರ್ಷಗಳ ಹಿಂದೆ ನಡೆದಿರುವ ವಿಷಯಗಳ ಕುರಿತೇನು?
ಇದಲ್ಲದೆ, ಇತಿಹಾಸಗಾರರು ಕೇವಲ ಮನುಷ್ಯಮಾತ್ರರು, ಸೀಮಿತವಾದ ಜ್ಞಾನವುಳ್ಳವರು, ಮತ್ತು ವ್ಯಕ್ತಿಪರವಾದ ಅಪೂರ್ಣತೆಯುಳ್ಳವರು, ಮತ್ತು ಅವಿಚಾರಾಭಿಪ್ರಾಯವಿರ ಸಾಧ್ಯವುಳ್ಳವರು. ಈ ಕಾರಣದಿಂದಲೇ, ವಿಷಯನಿಷ್ಠೆಯ ವ್ಯಕ್ತಿಯು, ತನಗೆ ಸಪ್ರಮಾಣವಾದ, ದೈವಿಕವಾಗಿ ಪ್ರೇರಿತವಾದ ದಾಖಲೆಯಿಲ್ಲದಿರುವಲ್ಲಿ ಅಧಿಕಾರಯುಕ್ತವಾಗಿ ಮಾತಾಡುವುದರಿಂದ ಹಿಂಜರಿಯುವುದು ಉತ್ತಮ.
ನಿಜತ್ವಗಳ ಕುರಿತು ತಜ್ಞರು ಅನೇಕ ವೇಳೆ ಅಸಮ್ಮತಿ ವ್ಯಕ್ತಪಡಿಸುವುದರಿಂದ, ಧಾರ್ಮಿಕ ಇತಿಹಾಸದ ಕುರಿತು ಬರೆಯುವುದೂ ಇದೇ ವಿಧದ ಸಮಸ್ಯೆಗಳನ್ನು ತರುತ್ತದೆ. “ಧರ್ಮದ ಭವಿಷ್ಯ, ಅದರ ಗತಕಾಲದ ನೋಟದಲ್ಲಿ” ಎಂಬ ಲೇಖನಮಾಲೆಯಲ್ಲಿ, ಎಚ್ಚರ! ಪತ್ರಿಕೆ ಸಪ್ರಮಾಣವಾದ ನಿಜತ್ವಗಳನ್ನು ನೀಡಲು ಪ್ರಯತ್ನಿಸಿದೆಯಾದರೂ, ಸದ್ಯ ನಮಗೆ ಕೆಲವು ವಿಷಯಗಳ ಕುರಿತು ಏನೂ ತಿಳಿದಿಲ್ಲವೆಂದು ನಾವು ಒಪ್ಪಿಕೊಳ್ಳಲೇ ಬೇಕು. ದೃಷ್ಟಾಂತಕ್ಕೆ, ಅಂಧಕಾರ ಯುಗಗಳಲ್ಲಿ ಮತ್ತು ಆ ನಂತರ ಕ್ರೈಸ್ತರೆಂದು ಹೇಳಿಕೊಂಡ ಗುಂಪುಗಳು ನಿಜ ಕ್ರೈಸ್ತತ್ವಕ್ಕೆ ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದರು?
ಈ ಪಂಥಗಳ ಕುರಿತು, ಚರ್ಚ್ ಇತಿಹಾಸದ ಪ್ರೊಫೆಸರ್, ಎ. ಎಮ್. ರೆನಿಕ್ವ್ ಗಮನಿಸಿದ್ದು: “ಆ ಅನೇಕ ಮಂಡಲಿಗಳ ಸತ್ಯ ಕಥೆ ಮತ್ತು ದೇವಜ್ಞಾನಸಂಬಂಧವಾದ ಸ್ಥಾನವೇನೆಂದು ಕಂಡುಹಿಡಿಯಲು ಇನ್ನೂ ತುಂಬಾ ಐತಿಹಾಸಿಕ ಸಂಶೋಧನೆಯು ಅವಶ್ಯ.” ರೆನಿಕ್ವ್ ಅವರಿಗನುಸಾರ, “ಗತಕಾಲಗಳಲ್ಲಿ, ಇತಿಹಾಸಗಾರರು ಈ ಭಿನ್ನಾಭಿಪ್ರಾಯದ ಗುಂಪುಗಳ ಬೋಧನೆ ಮತ್ತು ನೀತಿಬೋಧೆಗಳ ಬೆಲೆಕಟ್ಟಲು ಈ ಗುಂಪುಗಳ ವೈರಿಗಳ ಹೇಳಿಕೆಗಳ ಮೇಲೆ ವಿಪರೀತ ಹೊಂದಿಕೊಂಡಿರುತ್ತಾರೆ.” ಹೌದು, ಅವರ ಮಿತ್ರರ ಹೇಳಿಕೆಗಳ ಮೇಲೆ ವಿಪರೀತವಾಗಿ ಹೊಂದಿಕೊಳ್ಳುವುದೂ ಓರೆ ವೀಕ್ಷಣವಾಗಿ ಪರಿಣಮಿಸಬಹುದೆಂಬುದು ನಿಜ. ಹೀಗೆ, ತುಂಬಾ ಐತಿಹಾಸಿಕ ಸಂಶೋಧನೆಯನ್ನು ಮಾಡಿದ ಮೇಲೆಯೂ, ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆಯದಿರುವ ಸಾಧ್ಯತೆಯಿದೆ.
ಬೈಬಲಿನ ವಿಷಯವೇನು? ಸ್ವಲ್ಪ ಮಟ್ಟಿಗೆ ಧಾರ್ಮಿಕ ಇತಿಹಾಸವನ್ನೊಳಗೊಂಡ ದೈವಪ್ರೇರಿತವಾದ ಈ ಗ್ರಂಥವು, ತಾನು ಹೇಳುವ ಪ್ರತಿಯೊಂದು ಸಂಗತಿಯಲ್ಲಿಯೂ ನಂಬಲರ್ಹವಾದ ಗ್ರಂಥ. ಆದರೆ ಅಸ್ತಿತ್ವದಲ್ಲಿದ್ದ ಸುಳ್ಳು ಧರ್ಮದ ಸಕಲ ರೂಪಗಳ ವಿಷಯದಲ್ಲಿ ಅದು ಕೇವಲ ಕೊಂಚವನ್ನೇ ತಿಳಿಸುತ್ತದೆ. ಇದು ಗ್ರಹಿಸಸಾಧ್ಯವಾದ ವಿಷಯ, ಏಕೆಂದರೆ ಇದನ್ನು ಸತ್ಯಧರ್ಮದ ಪಠ್ಯಪುಸ್ತಕವಾಗಿ ಒದಗಿಸಲಾಗಿದೆಯೇ ಹೊರತು ಸುಳ್ಳು ಧರ್ಮದ ಪುಸ್ತಕವಾಗಿ ಅಲ್ಲ.
ಸತ್ಯ ಧರ್ಮದ ವಿಷಯದಲ್ಲೂ, ಬೈಬಲು ಎಲ್ಲವನ್ನೂ ನಮಗೆ ತಿಳಿಸುವುದಿಲ್ಲ. ಸತ್ಯ ಧರ್ಮವನ್ನು ಯಶಸ್ವಿಯಾಗಿ ಗುರುತಿಸಲು ಅದು ಸಾಕಷ್ಟು ಮಾಹಿತಿಯನ್ನು ಕೊಟ್ಟರೂ, ಕೆಲವು ಸಲ ವಿವರಗಳನ್ನು ಕೊಡುವುದಿಲ್ಲ. ಈ ವಿವರಗಳು ತಿಳಿಯಲು ಮೋಹಕವೂ ರಸಕರವೂ ಆದರೂ, ಸದ್ಯಕ್ಕೆ ಅವು ಮಹತ್ವದ್ದಾಗಿರುವುದಿಲ್ಲ.
ಇದಲ್ಲದೆ, ಬೈಬಲಿನಲ್ಲಿ ಸಮಯದ ಅಂತರಗಳಿವೆ. ದೃಷ್ಟಾಂತಕ್ಕೆ, ಸಾಮಾನ್ಯವಾಗಿ ಹಳೆಯ ಒಡಂಬಡಿಕೆಯೆಂದು ಕರೆಯಲ್ಪಡುವ ಹೀಬ್ರು ಶಾಸ್ತ್ರಗ್ರಂಥಗಳು ಮುಗಿಸಲ್ಪಟ್ಟ ಮೇಲೆ, ಯೇಸುವಿನ ಆಗಮನದ ವರೆಗೆ ಕಳೆದ 400 ಕ್ಕೂ ಹೆಚ್ಚು ವರ್ಷಗಳಲ್ಲಿ ಏನಾಯಿತು ಎಂಬ ವಿಷಯದಲ್ಲಿ ಅದು ಮೌನವಾಗಿದೆ. ಮತ್ತು ಬೈಬಲು ಪೂರ್ಣಗೊಂಡ ಮೇಲೆ ಈಗ ಸುಮಾರು 1,900 ವರ್ಷಗಳು ಗತಿಸಿವೆ.
ಹೀಗೆ, 18 ಶತಕಗಳ ಅಧಿಕಾಂಶದಲ್ಲಿ, ನಮಗೆ ಕ್ರೈಸ್ತತ್ವದ ಯಾವ ಪ್ರೇರಿತ ದಾಖಲೆಯೂ ಇಲ್ಲ. ಲೇಖಕ ರೆನಿಕ್ವರು ಹೇಳಿರುವಂತೆ, ಕ್ರೈಸ್ತರೆಂದು ಹೇಳಿಕೊಳ್ಳುವ ಕೆಲವರ ಕುರಿತು ಸಂದೇಹವನ್ನುಂಟುಮಾಡುವುದು ಇದೇ. ಆದರೂ, ಶತಮಾನಗಳಲ್ಲಿ ಕಡಮೆ ಪಕ್ಷ ಕೆಲವು ವ್ಯಕ್ತಿಗಳಾದರೂ ಆದಿ ಕ್ರೈಸ್ತತ್ವಕ್ಕೆ ಅಂಟಿಕೊಂಡಿದ್ದರೆಂಬುದು ವ್ಯಕ್ತ. ಆದರೆ, ಗತಕಾಲಗಳ ಕೆಲವು ವ್ಯಕ್ತಿಗಳ ಉದ್ದೇಶ ಹಾಗೂ ಯಥಾರ್ಥತೆಯ ಶಕ್ಯತೆಯ ಸಂಬಂಧದಲ್ಲಿ ಅನಿರ್ಧಾರಿತ ಪ್ರಶ್ನೆಗಳಿವೆ. ಕೆಲವು ಸುಧಾರಣಾ ನಾಯಕರುಗಳ ವಿಷಯವೇನು? ಹಾಗೆ ನೋಡುವುದಾದರೆ, ಕನ್ಫ್ಯೂಷಿಯಸ್ ಮತ್ತು ಮೊಹಮ್ಮದ್, ಇಂಥ ಪುರುಷರ ವಿಷಯವೇನು? ಈಗಿನ ಧಾರ್ಮಿಕ ವ್ಯವಸ್ಥೆಗಳನ್ನು ಅವುಗಳ ಧಾರ್ಮಿಕ ಫಲದ ಆಧಾರದ ಮೇರೆಗೆ ನ್ಯಾಯತೀರಿಸಬಹುದಾದರೂ, ವ್ಯಕ್ತಿಗಳನ್ನು—ವಿಶೇಷವಾಗಿ ಅವರು ಸತ್ತು ದೀರ್ಘಕಾಲವಾಗಿರುವಲ್ಲಿ—ಅನೇಕ ವೇಳೆ ಹಾಗೆ ನ್ಯಾಯತೀರಿಸಸಾಧ್ಯವಿಲ್ಲ.
ಆದರೆ, ದೇವರ ನೂತನ ಜಗತ್ತಿನಲ್ಲಿ, ಚರಿತ್ರೆಯ ಪುಸ್ತಕಗಳನ್ನು—ಧಾರ್ಮಿಕ ಇತಿಹಾಸವನ್ನು ಸೇರಿಸಿ— ಪುನಃ ಬರೆಯುವುದು ಸೃಷ್ಟಿಕರ್ತನ ಚಿತ್ತವಾಗಿರುವಲ್ಲಿ, ಇದರ ಸಾಧ್ಯತೆಯಿರುವುದು. ಇದು, ಸತ್ಯ ಧರ್ಮದ ಇನ್ನೊಂದು ಸೌಂದರ್ಯದ—ಮೃತರು ಪುನರುತ್ಥಾನಗೊಳಿಸಲ್ಪಡುವರೆಂಬ ಆಶ್ವಾಸನೆಯ— ಕಾರಣದಿಂದಲೆ.-ಯೋಹಾನ 5:28, 29; ಅಪೊಸ್ತಲರ ಕೃತ್ಯಗಳು 24:15.
ಚರಿತ್ರೆ ಪುಸ್ತಕಗಳಲ್ಲಿ ಹೀಗೀಗೆ ಮಾಡಿದರೆಂದು ನಾವು ಯಾರ ವಿಷಯ ಓದಿದ್ದೇವೊ ಅಂಥ, ಪುನರುತ್ಥಾನ ಹೊಂದಿ ಬಂದಿರುವ ಮಾನವರೊಂದಿಗೆ ಮಾತನಾಡಿ, ನಮ್ಮ ಪ್ರಶ್ನೆಗಳಿಗೆ ನಿಷ್ಕೃಷ್ಟ ಉತ್ತರಗಳನ್ನು ಪಡೆಯುವುದರಲ್ಲಿರುವ ಆನಂದದ ಕುರಿತು ಭಾವಿಸಿರಿ. ಬಿಟ್ಟುಹೋಗಿರುವ ವಿವರಗಳನ್ನು, ಅಂದರೆ, ಕೆಂಪು ಸಮುದ್ರದಲ್ಲಿ ಸತ್ತ ಫರೋಹನ ಹೆಸರು ಮತ್ತು ಐಗುಪ್ತದ ಮೇಲೆ ಬಂದ ವ್ಯಾಧಿಯನ್ನು ಅನುಭವಿಸಿದವರು, ಇವೇ ಮೊದಲಾದ ವಿವರಗಳನ್ನು ತುಂಬಿಸುವ ಸಾಧ್ಯತೆಯ ಕುರಿತು ಯೋಚಿಸಿರಿ.
ಇಂಥ ದಾಖಲೆ ಯಾವಾಗಲಾದರೂ ಬರೆಯಲ್ಪಡುವಲ್ಲಿ, ಅದು ಸತ್ಯ ಧರ್ಮದ ಸ್ಥಾಪಕನಾದ ಯೆಹೋವ ದೇವರ ಮಹಿಮೆಗಾಗಿಯೂ ಆತನ ಶಾಶ್ವತ ನಿರ್ದೋಷೀಕರಣಕ್ಕಾಗಿಯೂ ಬರೆಯಲ್ಪಡುವುದು. ಇದರ ವಿಷಯ ಯಾವ ಸಂಶಯವೂ ಇಲ್ಲ. ಆದರೆ, ಉಳಿದಿರುವ ಪ್ರಶ್ನೆ ಇದಾಗಿದೆ: ಅದನ್ನು ಓದಲು ನೀವು ಅಲ್ಲಿರುವಿರೋ?
ಶ್ಲಾಘನೆಯೇ ಸಾಲದು
ಸತ್ಯ ಧರ್ಮದ ಶಾಶ್ವತ ಸೌಂದರ್ಯಗಳನ್ನು, ಈ ಲೇಖನದ ಮೊದಲಲ್ಲಿ ಉಲ್ಲೇಖಿಸಿರುವ ಕೂಪರನ ಮಾತು ಸೂಚಿಸುವಷ್ಟೇ ಸುಲಭವಾಗಿ ಸದಾ ನೋಡಲಾಗುವುದಿಲ್ಲ. ಆದುದರಿಂದಲೇ, ಅನ್ಸ್ ವಾಚ್ಟವರ್ ಆ್ಯಂಡ್ ಹೆರಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ ಪತ್ರಿಕೆಯ ಮೊದಲನೆಯ ಸಂಚಿಕೆಯು 110 ವರ್ಷಗಳಿಗೆ ಮೊದಲು ಈ ಕೆಳಗಿನ ಅಭಿಪ್ರಾಯವನ್ನು ಸೂಚಿಸಿತ್ತು: “ಸತ್ಯವನ್ನು, ಜೀವನದ ಅರಣ್ಯದಲ್ಲಿರುವ ಒಂದು ಸಾದಾ ಹೂವಿನಂತೆ, ತಪ್ಪಿನ ಕಳೆಗಳ ಹುಲುಸಾದ ಬೆಳೆಯು ಆವರಿಸಿ ಹೆಚ್ಚು ಕಡಮೆ ಅದುಮಿ ಬಿಟ್ಟಿದೆ. ಅದು ನಿಮಗೆ ಸಿಕ್ಕಬೇಕಾದರೆ ನೀವು ಅದನ್ನು ಸದಾ ಹುಡುಕುತ್ತಿರಬೇಕು. ಅದರ ಸೊಗಸನ್ನು ನೀವು ನೋಡಬೇಕಾದರೆ, ತಪ್ಪಿನ ಕಳೆಗಳನ್ನು ಮತ್ತು ಮತಾಂಧತೆಯ ಮುಳ್ಳುಪೊದೆಗಳನ್ನು ನೀವು ಬದಿಗೆ ತಳ್ಳಬೇಕು. ಅದನ್ನು ನಿಮ್ಮ ಸೊತ್ತಾಗಿ ಮಾಡಿಕೊಳ್ಳಬೇಕಾದರೆ, ನೀವು ಅದನ್ನು ಹೆಕ್ಕಲು ಬಗ್ಗಬೇಕು.”
“ಧರ್ಮದ ಭವಿಷ್ಯ, ಅದರ ಗತಕಾಲದ ನೋಟದಲ್ಲಿ” ಎಂಬ ಲೇಖನಮಾಲೆ, ನಮ್ಮ ವಾಚಕರು “ತಪ್ಪಿನ ಕಳೆಗಳನ್ನು ಮತ್ತು ಮತಾಂಧತೆಯ ಮುಳ್ಳುಪೊದೆಗಳನ್ನು ಬದಿಗೆ” ತಳ್ಳಿ ಸತ್ಯ ಧರ್ಮದ ಶಾಶ್ವತ ಸೌಂದರ್ಯಗಳನ್ನು ಹೆಚ್ಚು ಪೂರ್ಣವಾಗಿ ಗಣ್ಯಮಾಡುವಂತೆ ಸಹಾಯ ಮಾಡಿದೆಯೆಂದು ನಿರೀಕ್ಷಿಸಲಾಗುತ್ತದೆ.
ಆದರೆ ಗಣ್ಯತೆಯೇ ಸಾಲದು. ಈ ಚೈನೀಸ್ ನಾಣ್ಣುಡಿ ಸಮಂಜಸ: “ಕಿವಿಯನ್ನು ಪ್ರವೇಶಿಸಿ ಹೃದಯಕ್ಕೆ ಹೋಗದ ಬೋಧನೆ ಸ್ವಪ್ನದಲ್ಲಿ ತಿಂದ ಊಟದ ಹಾಗೆ.” ಸತ್ಯ ಧರ್ಮದ ಶಾಶ್ವತ ಸೊಗಸಿನಿಂದ ನಾವು ವ್ಯಕ್ತಿಪರವಾಗಿ ಪ್ರಯೋಜನ ಪಡೆಯಬೇಕಾದರೆ—ಕೇವಲ ಅವುಗಳ ಕನಸು ಕಾಣುವುದಲ್ಲ—ನಾವು ಕಲಿತ ವಿಷಯಗಳು ಕೇವಲ ಕಿವಿಗಳನ್ನಲ್ಲ, ಹೃದಯವನ್ನು ಮುಟ್ಟುವುದು ಮಹತ್ವದ್ದು.
“ನಿಮ್ಮ ಧರ್ಮವನ್ನು ಸತ್ಯವೋ ಸುಳ್ಳೋ ಎಂದು ಗುರುತಿಸುವುದು” ಎಂಬ ಶೀರ್ಷಿಕೆಯ ಬಾಕ್ಸನ್ನು ಜಾಗರೂಕತೆಯಿಂದ ಓದಿರಿ. ಆ ಬಳಿಕ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿರಿ: ‘ಸುಳ್ಳು ಧರ್ಮದ ಲೋಕವ್ಯಾಪಕ ಸಾಮ್ರಾಜ್ಯದ ಸಂಬಂಧದಲ್ಲಿ, ವಾಲ್ಟೇರನು ಧರ್ಮವನ್ನು “ಮಾನವಕುಲದ ಶತ್ರು” ವೆಂದು ಕರೆದುದು ಸರಿಯೆಂದು ನಾನು ಒಪ್ಪುತ್ತೇನೊ? ಧಾರ್ಮಿಕ ಇತಿಹಾಸದ ಮೇಲೆ ಹಾಕಿದ ಈ ಕ್ಷಣದೃಷ್ಟಿ, ಸತ್ಯ ಧರ್ಮವನ್ನು ನಾನು ಗುರುತಿಸುವಂತೆ ಸಹಾಯ ಮಾಡಿದೆಯೇ, ಮತ್ತು ಮಾನವ ವಿಚಾರಗಳ ಈ ಅಂತಿಮ ಹಂತದಲ್ಲಿ, ಅದು ಎಲ್ಲಿ ದೊರೆಯಬಹುದೆಂದು ನನಗೆ ತಿಳಿದಿದೆಯೇ? ತಿಳಿದಿದೆಯಾದರೆ, 18 ನೆಯ ಶತಕದ ಲಘುಲೇಖಕ ಜೋಸೆಫ್ ಸೂಬರ್ಟ್ ವರ್ಣಿಸಿದ, “ಅದರಲ್ಲಿ ತನ್ನ ಅನಂದವನ್ನೂ ತನ್ನ ಕರ್ತವ್ಯವನ್ನೂ ಕಂಡುಕೊಳ್ಳುವ” ವ್ಯಕ್ತಿಯಂತೆ ನಾನಿರಲು ಇಚ್ಛಿಸುತ್ತೇನೊ?’
ಈ ಮೇಲಿನ ಪ್ರಶ್ನೆಗಳಿಗೆ ಹೌದೆಂದು ಉತ್ತರಿಸುವ ಸರ್ವರೂ ಎಚ್ಚರ! ಮತ್ತು ಅದರ ಜೊತೆ ಸಾಹಿತ್ಯಗಳನ್ನು ಓದಿ ಪ್ರಯೋಜನ ಪಡೆಯುತ್ತಾ ಮುಂದುವರಿಯುವಂತಾಗಲಿ. ಮೇಲೆ ಹೇಳಿರುವ ಅನ್ಸ್ ವಾಚ್ಟವರ್ ನೀಡಿದ ವಿವೇಕದ ಬುದ್ಧಿವಾದವನ್ನು ಅನುಸರಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ: “ಸತ್ಯದ ಒಂದು ಹೂವಿನಲ್ಲಿ ತೃಪ್ತಿ ಪಡೆಯಬೇಡಿರಿ. ಒಂದು ಸಾಕಾಗುತ್ತಿದ್ದರೆ ಬೇರೆ ಇರುತ್ತಿರಲಿಲ್ಲ. ಸದಾ ಒಟ್ಟೈಸಿರಿ, ಹೆಚ್ಚನ್ನು ಹುಡುಕಿರಿ.”
ಹೌದು, ಒಟ್ಟುಗೂಡಿಸುತ್ತಾ ಮುಂದುವರಿಯಿರಿ, ಹುಡುಕುತ್ತಾ ಹೋಗಿರಿ—ಸತ್ಯ ಧರ್ಮದ ಇನ್ನೂ ಹೆಚ್ಚು ಶಾಶ್ವತ ಸೌಂದರ್ಯಗಳನ್ನು ಹುಡುಕಿರಿ! (g89 12/22)
[ಪುಟ 19ರಲ್ಲಿರುವಚೌಕ]
ನಿಮ್ಮ ಧರ್ಮವು ಸತ್ಯವೋ ಸುಳ್ಳೋ ಎಂದು ಗುರುತಿಸುವುದು
▪ ಸತ್ಯ ಧರ್ಮವು ತನ್ನ ಆರಾಧಕರಲ್ಲಿ ರಾಷ್ಟ್ರೀಯ ಮೇರೆಗಳಿಂದ ತಟ್ಟಲ್ಪಡದ, ಮುರಿಯಲಾಗದ ಪ್ರೀತಿ ಮತ್ತು ಏಕತೆಯನ್ನು ಹುಟ್ಟಿಸುತ್ತದೆ. (ಯೋಹಾನ 13:35) ಸುಳ್ಳು ಧರ್ಮ ಇಂಥ ಪ್ರೀತಿಯನ್ನು ಹುಟ್ಟಿಸುವುದಿಲ್ಲ. ಬದಲಿಗೆ, ಕಾಯಿನನನ್ನು ಅನುಕರಿಸುತ್ತಾ, ಅದರ ಸದಸ್ಯರು ಹೋಗಿ ಅಂತರಾಷ್ಟ್ರೀಯ ಯುದ್ಧಗಳಲ್ಲಿ ಒಬ್ಬರನ್ನೊಬ್ಬರು ಹತಿಸುತ್ತಾರೆ.—1 ಯೋಹಾನ 3:10-12.
▪ ಸತ್ಯ ಧರ್ಮವು ಮಾನವ ರಾಜಕೀಯದಿಂದ ಸ್ವತಂತ್ರವಾಗಿದ್ದು ಸೃಷ್ಟಿಕರ್ತನು ತನ್ನ ರಾಜ್ಯ ಸರಕಾರದ ಮೂಲಕ ಲೋಕ ಸಮಸ್ಯೆಗಳನ್ನು ಬಗೆಹರಿಸುವಂತೆ ನೋಡುತ್ತದೆ. ಸುಳ್ಳು ಧರ್ಮ ಬಾಬೆಲ್ ಗೋಪುರದಲ್ಲಿ ನಡೆದ ನಿಮ್ರೋದನ ಮಾದರಿಯನ್ನು ಅನುಸರಿಸುತ್ತದೆ. ಅದು ರಾಜಕೀಯದೊಂದಿಗೆ ಸೇರುತ್ತದೆ, ತಾನು ಯಾರ ವಿಚಾರಗಳಲ್ಲಿ ತಲೆ ಹಾಕುತ್ತದೋ ಆ ರಾಜಕೀಯ ದೇವರುಗಳಲ್ಲಿ ಭರವಸೆಯಿಡುತ್ತದೆ, ಮತ್ತು ಹೀಗೆ, ತನ್ನ ಸ್ವಂತ ನಾಶಕ್ಕೆ ಆಧಾರ ನೀಡುತ್ತದೆ.—ದಾನಿಯೇಲ 2:44; ಯೋಹಾನ 18:36; ಯಾಕೋಬ 1:27.
▪ ಸತ್ಯ ಧರ್ಮ ಯೆಹೋವ ದೇವರನ್ನು, ಆತನೊಬ್ಬನೇ ದಬ್ಬಾಳಿಕೆಯಿಂದ ರಕ್ಷಿಸಬಲ್ಲ ಸತ್ಯ ದೇವರೆಂದು ಒಪ್ಪುತ್ತದೆ. ಪುರಾತನದ ಐಗುಪ್ತದಲ್ಲಿ ಮತ್ತು ಗ್ರೀಸಿನಲ್ಲಿ ಆಚರಿಸಲ್ಪಡುತ್ತಿದ್ದ ರೀತಿಯ ಸುಳ್ಳು ಧರ್ಮವು, ದೊಡ್ಡ ಸಂಖ್ಯೆಯಲ್ಲಿ ಅರ್ಹತೆಯೇ ಇಲ್ಲದ ಸಹಾಯಶೂನ್ಯ, ಕಾಲ್ಪನಿಕ ದೇವರುಗಳನ್ನು ಒದಗಿಸುತ್ತದೆ.—ಯೆಶಾಯ 42:5; 1 ಕೊರಿಂಥ 8:5, 6.
▪ ಸತ್ಯ ಧರ್ಮ ಭೂಮಿಯ ಮೇಲೆ ಸಂತೋಷದ ನಿತ್ಯಜೀವವನ್ನು ವಾಗ್ದಾನಿಸುತ್ತದೆ. ಸುಳ್ಳುಧರ್ಮ—ಉದಾಹರಣೆಗೆ, ಬೌದ್ಧ ಧರ್ಮ—ಭೂಜೀವನವನ್ನು ಅದು ಅನಪೇಕ್ಷಿತವೆಂದೂ ಅನಿಶ್ಚಿತ ಭಾವೀ ಜೀವನಕ್ಕಾಗಿ ವಿಮೋಚಿಸಲ್ಪಡಬೇಕಾದ ಒಂದು ವಿಷಯವೆಂದೂ ವೀಕ್ಷಿಸುತ್ತದೆ.—ಕೀರ್ತನೆ 37:29; ಪ್ರಕಟನೆ 21:3, 4.
▪ ಸತ್ಯ ಧರ್ಮವು, ಅದರ ಪವಿತ್ರ ಗ್ರಂಥವಾದ ಬೈಬಲಿನ ಮೂಲಕ ಜನರಲ್ಲಿ ಕದಲಿಸಲಾಗದ ನಂಬಿಕೆಯನ್ನು ಹುಟ್ಟಿಸುತ್ತದೆ; ಅದು ಅವರಿಗೆ ಖಾತರಿ ನಿರೀಕ್ಷೆಯನ್ನು ಕೊಟ್ಟು, ಅವರು ದೇವರ ಮತ್ತು ನೆರೆಯವನ ಕಡೆಗೆ ನೈಜ ಪ್ರೀತಿಯಿಂದ ವರ್ತಿಸುವಂತೆ ಪ್ರೇರಿಸುತ್ತದೆ. (2 ತಿಮೊಥಿ 3:16, 17) ಆದರೆ ಸುಳ್ಳು ಧರ್ಮ, ಪವಿತ್ರ ಗ್ರಂಥಗಳಿದ್ದರೂ, ಇಂಥ ವಿಷಯಗಳಲ್ಲಿ ಅಧಿಕಾಂಶವಾಗಿ ಅಸಮರ್ಥವಾಗಿದೆ.—1 ಯೋಹಾನ 5:3, 4.
▪ ಸತ್ಯ ಧರ್ಮ ನಮ್ರರಾದ ಮೇಲ್ವಿಚಾರಕರಿಂದ ಗುರುತಿಸಲ್ಪಡುತ್ತದೆ. ಆದರೆ ಸುಳ್ಳು ಧರ್ಮವು ಹೆಬ್ಬಯಕೆಯ, ಸ್ವತಂತ್ರ ಮನಸ್ಸಿನ, ಸತ್ಯವನ್ನು ತಿರುಚಿ ರಾಜಕೀಯ ಯಾ ಲೌಕಿಕ ಲಾಭವನ್ನು ಪಡೆಯುವ ನಾಯಕರುಗಳಿಗೆ ಪ್ರಸಿದ್ಧವಾಗಿದೆ.—ಅಪೊಸ್ತಲರ ಕೃತ್ಯಗಳು 20:28, 29; 1 ಪೇತ್ರ 5:2, 3.
▪ ದೇವರಿಗೆ ನಿಜ ಅಧೀನತೆಯ ಮಾರ್ಗವಾದ ಸತ್ಯ ಧರ್ಮ, ಅಕ್ಷರಾರ್ಥದ ಖಡ್ಗವನ್ನಲ್ಲ, ಆತ್ಮಿಕ ಖಡ್ಗವನ್ನು ಬಳಸುತ್ತದೆ. ಆದರೆ ಸುಳ್ಳು ಧರ್ಮವು ಸತ್ಯ ತತ್ವದೊಂದಿಗೆ ರಾಜಿ ಮಾಡಿ, ಕ್ರೈಸ್ತ ತಾಟಸ್ಥ್ಯವನ್ನು ಮುರಿದು, ದೈವಿಕ ಹಿತಾಸಕ್ತಿಗಿಂತ ಹೆಚ್ಚು, ಮಾನವ ಆಸಕ್ತಿಗಳನ್ನು ಬೆನ್ನಟ್ಟುತ್ತದೆ.—2 ಕೊರಿಂಥ 10:3-5.
▪ ಸತ್ಯ ಧರ್ಮ, ಸತ್ಯ ದೇವರ ಆರಾಧನೆಗೆ ಅವಿಶ್ವಾಸಿಗಳ ಹೃದಯಗಳನ್ನು ಗೆಲ್ಲುತ್ತದೆ. ಆದರೆ ಸುಳ್ಳು ಧರ್ಮ, ಸಂದೇಹವಾದ, ಸ್ವತಂತ್ರ ವಿಚಾರ, ವಿಚಾರ ವಾದ, ಮತ್ತು ಐಹಿಕತೆಯ ವಾತಾವರಣವನ್ನು ಪೋಷಿಸುತ್ತದೆ.—ಲೂಕ 1:17; 1 ಕೊರಿಂಥ 14:24, 25.
▪ ಯೆಹೋವನ ಸಾಕ್ಷಿಗಳು ಹಿಂಬಾಲಿಸುವ ಸತ್ಯ ಧರ್ಮ, ಆತ್ಮಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ಸಮೃದ್ಧಿಯಾಗುತ್ತಿದೆ. ಆದರೆ ಲಂಗಗಳು ರಕ್ತಮಯವಾಗಿರುವ ಸುಳ್ಳು ಧರ್ಮ, ಆತ್ಮಿಕ ನ್ಯೂನಪೋಷಣೆ ಮತ್ತು ಕುಂದುತ್ತಿರುವ ಬೆಂಬಲವನ್ನು ಅನುಭವಿಸುತ್ತಾ ಇದೆ.—ಯೆಶಾಯ 65:13, 14.
ಹಾಗಾದರೆ, ಗತಕಾಲದ ನೋಟದಲ್ಲಿ ಧರ್ಮದ ಭವಿಷ್ಯವೇನು? ಸುಳ್ಳು ಧರ್ಮಕ್ಕೆ ಭವಿಷ್ಯವೇ ಇಲ್ಲ. ಅದನ್ನು ತೊರೆಯಿರಿ! (ಪ್ರಕಟನೆ 18:4, 5) ಸತ್ಯ ಧರ್ಮಕ್ಕೆ ತಿರುಗಿರಿ. ಅದೇ ಸದಾಕಾಲ ಬಾಳುವುದು.