ಯುವ ಜನರು ಪ್ರಶ್ನಿಸುವುದು . . .
ನನ್ನ ಹೆತ್ತವರು ನನ್ನನ್ನು ಪೇಚಾಟದಲ್ಲಿ ಸಿಕ್ಕಿಸುವುದೇಕೆ?
ಬಯಾಲಜಿ ಕ್ಲಾಸಿನ ಮಧ್ಯೆ, ನೀವು ಕಾಯಿಲೆ ಬೀಳುತ್ತೀರಿ. ನಿಮಗೆ ಸಂಕಟವಾದರೂ, ಶಾಲೆಯಿಂದ ಮನೆಗೆ ಸುದ್ದಿ ಹೋಗುತ್ತದೆ. ಸ್ವಲ್ಪದರಲ್ಲಿ, ನಿಮ್ಮ ತಾಯಿ, ಮನೆಯ ಮೆಟ್ಟು, ಎಳೆಗೆಂಪು ಬಣ್ಣದ ಕೂದಲು ಗುಂಗುರಾಗಿಸುವ ಸಾಧನ, ಮತ್ತು ಆ ಭಯಂಕರ ಕೆಂಪು ಬಣ್ಣದ ಮನೆಯಲ್ಲಿ ಧರಿಸುವ ಪ್ಯಾಂಟು ಧರಿಸಿಕೊಂಡು ಬರುತ್ತಾರೆ. ನೀವು ತುಂಬ ಕಷ್ಟದಲ್ಲಿದ್ದೀರೆಂದು ನಂಬಿ, ತನ್ನ ತೋರಿಕೆಯನ್ನು ತೀರಾ ಅಲಕ್ಷ್ಯ ಮಾಡುತ್ತಾ ತಾಯಿ ನಿಮ್ಮ ಬಳಿಗೆ ಧಾವಿಸಿ ಬಂದಿದ್ದಾರೆ. ಆದರೆ ತಾಯಿಯ ಈ ರಕ್ಷಣಾ ಪ್ರಯತ್ನವನ್ನು ನೀವು ಏನೂ ಗಣ್ಯ ಮಾಡುವುದಿಲ್ಲ. ನಿಮ್ಮ ತಾಯಿ ಆ ಉಡುಪಿನಲ್ಲಿ ಎಷ್ಟು ಹೊಲಸಾಗಿ ಮತ್ತು ಶೋಚನೀಯವಾಗಿ ಕಾಣುತ್ತಾರೆಂದೇ ನಿಮ್ಮ ಯೋಚನೆ. ಮತ್ತು ಸಹಪಾಠಿಗಳ ಮುಂದೆ ನಿಮಗೆ ಅವರು ಸಡಗರದ ಗಮನ ಕೊಡುವಾಗ ನೀವು ಅದೃಶ್ಯವಾಗಿ ಹೋಗುತ್ತಿದ್ದರೆ ಒಳ್ಳೇದಿತ್ತು ಎಂದು ನಿಮಗೆನಿಸುತ್ತದೆ. ನೀವು ತೀರಾಪೇಚಾಟದಲ್ಲಿ ಸಿಕ್ಕಿಕೊಳ್ಳುತ್ತೀರಿ!
ಇಂಥ ಸಂಭವಗಳು ಪ್ರೇಕ್ಷಕರಿಗೆ ಹಾಸ್ಯಾಸ್ಪದವಾಗಿ ಕಂಡು ಬರಬಹುದು. ಆದರೆ ನಿಮಗೆ ನಗೆ ಬರುವುದಿಲ್ಲ. ನಿಮಗೆ ತೊಡಕಿನ ಅನಿಸಿಕೆ ಬಂದು, ಎಷ್ಟು ದೊಡ್ಡ ಒತ್ತಡ ಉಂಟಾಗುತ್ತದೆಂದರೆ ನೀವು ಸಾಯಲು ಸಹ ಸಿದ್ಧರಾಗುತ್ತೀರಿ. ಹೌದು, ‘ನಾಚಿಕೆಯಿಂದ ಸಾಯುವುದು’ ಎಂಬ ಹೇಳಿಕೆಯೇ ಇದೆ. ಮತ್ತು ಹೀಗೆ ಅನಿಸಿದವರಲ್ಲಿ ನೀವು ಪ್ರಥಮರಲ್ಲ. ದೃಷ್ಟಾಂತಕ್ಕೆ, ಪೂರ್ವಕಾಲದ ಯೆಹೂದ್ಯರು ನಾಚಿಕೆಯಿಂದ ಪೇಚಾಟಪಡುವುದರ ಧ್ವಂಸಕಾರಕ ಸಾಮರ್ಥ್ಯವನ್ನು ಒಪ್ಪಿಕೊಂಡರು. ಹಿಬ್ರೂ ಟ್ಯಾಲ್ಮಡ್, ಒಬ್ಬ ವ್ಯಕ್ತಿಯನ್ನು ಬಹಿರಂಗವಾಗಿ ನಾಚಿಕೆಗೊಳಪಡಿಸುವುದನ್ನು ಅವನ ರಕ್ತ ಸುರಿಸೋಣಕ್ಕೆ ಹೋಲಿಸುತ್ತದೆ!
ಇಂಥ ಪೇಚಾಟಕ್ಕೆ ಅನೇಕ ಕಾರಣಗಳಿವೆಯಾದರೂ, ತಮ್ಮ ಸ್ವಂತ ಹೆತ್ತವರಿಗಿಂತ ಬೇರೆ ದೊಡ್ಡ ಕಾರಣ ಇನ್ನಾವುದೂ ಇಲ್ಲವೆಂದು ಅನೇಕ ಯುವಜನರು ಒಪ್ಪುತ್ತಾರೆ. ನಿಮಗೆ ಅಪಮಾನ ತರಲು ಹೆತ್ತವರು ಮಾಡಸಾಧ್ಯವಿರುವ ವಿಷಯಗಳ ಪಟ್ಟಿ ಅನಂತವೆಂದು ತೋರುತ್ತದೆ: ಬಹಿರಂಗವಾಗಿ ಮಮತೆ ತೋರಿಸುವುದು, ನೀವು ಸಾಧಿಸಿರುವ ಕೆಲಸಗಳನ್ನು ಹೊಗಳುವುದು, ನಿಮ್ಮ ಮಿತ್ರರ ಮಧ್ಯೆ ಮಕ್ಕಳಂತೆ ವರ್ತಿಸುವುದು, ಅತಿಥಿಗಳ ಎದುರು “ಪ್ರದರ್ಶಿಸು” ವಂತೆ ಕೇಳುವುದು. ಅಷ್ಟೇ ಅಲ್ಲ, ನಿಮ್ಮ ಹೆತ್ತವರ ತೆರಿಕೆ ಸಹ ನಿಮಗೆ ನಾಚಿಕೆಯನ್ನುಂಟು ಮಾಡೀತು! ಆದುದರಿಂದ, ಕೆಲವು ಯುವಜನರು ತಮ್ಮ ಹೆತ್ತವರೊಂದಿಗೆ ಕಂಡುಬರುವುದಕ್ಕೆ ಮುದುಡುವುದರಲ್ಲಿ ಆಶ್ಚರ್ಯವಿಲ್ಲ.
ಆದರೆ, ನಿಮ್ಮ ಹೆತ್ತವರು ನಿಮ್ಮನ್ನು ಇಷ್ಟೊಂದು ಪೇಚಾಟಕ್ಕೆ ಸಿಕ್ಕಿಸುವುದು ಯಾಕಾಗಿರಬಹುದು? ‘ಅವರಿಗೆ ಅದಕ್ಕಿಂತ ಹೆಚ್ಚಿನ ಜ್ಞಾನವಿಲ್ಲವೇ?’ ಎಂದು ನೀವು ಯೋಚಿಸಬಹುದು.
ಅವರು ನಿಮ್ಮನ್ನು ಪೇಚಾಟಕ್ಕೊಳಪಡಿಸುವ ಕಾರಣ
ಈ ಸಂಬಂಧದಲ್ಲಿ ನಿಮ್ಮ ಸ್ವಂತ ಅನಿಸಿಕೆಗಳನ್ನು ನಾವು ವಿಶೇಷ್ಲಿಸೋಣ. ಯುವ ವ್ಯಕ್ತಿಯಾಗಿರುವ ನೀವು, ನಿಮ್ಮ ಹತ್ತಿರದ ಕುಟುಂಬವಲ್ಲದೆ ಲೋಕದಲ್ಲಿ ಇನ್ನೂ ಹೆಚ್ಚು ಜನರಿದ್ದಾರೆಂಬ ಹೆಚ್ಚುತ್ತಿರುವ ಪ್ರಜ್ಞೆಯ ಕಾರಣ ಇಂಥ ನಾಚಿಕೆಗೆ ವಿಶೇಷವಾಗಿ ಭೇದ್ಯರು. ನಿಮಗೆ ಇತರರ—ವಿಶೇಷವಾಗಿ ನಿಮ್ಮ ಸಮಾನಸ್ಥರ—ಒಪ್ಪಿಗೆ ಪಡೆಯಬೇಕೆಂಬ ಮನಸ್ಸಿರುವುದರಿಂದ ನೀವು “ಸರಿಯಾಗಿ” ವರ್ತಿಸಲು ಕಠಿಣ ಪ್ರಯತ್ನಿಸುತ್ತೀರಿ. ಮತ್ತು, ಸ್ವಾಭಾವಿಕವಾಗಿ, ಈ ಒಪ್ಪಿಗೆಯನ್ನು ನಿಮ್ಮ ಹೆತ್ತವರ ನಾಚಿಕೆಗೊಳಪಡಿಸುವ ವರ್ತನೆ ಶಿಥಿಲಗೊಳಿಸಬಾರದೆಂದು ನಿಮ್ಮ ಮನಸ್ಸು. ಲಿಂಡ ಎಂಬ ಯುವತಿ ಹೇಳಿದ್ದು: ‘ನಿಮ್ಮನ್ನು ನಾಚಿಕೆಗೊಳಪಡಿಸುವ ಯಾವುದನ್ನೋ ಹೆತ್ತವರು ಮಾಡುವಲ್ಲಿ: “ನನ್ನ ಮಿತ್ರರು ನನ್ನ ಕುರಿತು ಏನು ತಿಳಿದಾರು?” ಎಂದು ನೀವು ಚಿಂತಿಸುತ್ತೀರಿ.’ ಹಾಗಾದರೆ, ನಿಮ್ಮ ಹೆತ್ತವರು ನಿಮ್ಮ ಅನಿಸಿಕೆಗಳ ಕುರಿತು ಏಕೆ ಹೆಚ್ಚು ಚಿಂತಿತರಾಗುವುದಿಲ್ಲ?
ಮನಶ್ಶಾಸ್ತ್ರಜ್ಞೆ ಬರ್ನಿಸ್ ಬರ್ಕ್, ಒಬ್ಬ ತಾಯಿ ತನ್ನ ವಿಶೇಷವಾಗಿ ಸೂಕ್ಷ್ಮಸಂವೇದಿಯಾದ ಹದಿಪ್ರಾಯದ ಮಗನಿಗೆ ಹೀಗೆ ಹೇಳಿದಳೆಂದು ಹೇಳುತ್ತಾರೆ: “ಹಾಗೆ ನಾಚಿಕೆಗೊಳಪಡಿಸುವುದು ನನ್ನ ಕೆಲಸ. ನನ್ನ ತಾಯಿ ನನ್ನನ್ನು ನಾಚಿಕೆಗೊಳಪಡಿಸುತ್ತಿದ್ದರು, ಮತ್ತು ನೀನು ನಿನ್ನ ಮಕ್ಕಳನ್ನು ಅಂಥ ಪೇಚಾಟಕ್ಕೆ ಸಿಕ್ಕಿಸಬೇಕು.” ಈ ಒರಟಾದ ಹೇಳಿಕೆಯಲ್ಲಿ ಸುಮಾರಾಂಶ ಸತ್ಯವಿದೆ. ನಾಚಿಕೆಗೊಳಪಡಿಸುವುದು ಪಿತ್ರಾರ್ಜಿತವೆಂದಲ್ಲ, ಬದಲಾಗಿ, ಇನ್ನಾವುದೋ ಅಂದರೆ, ಅಪೂರ್ಣತೆ ಪಿತ್ರಾರ್ಜಿತವೆಂದೇ.
ಹೆತ್ತವರು ಅಪೂರ್ಣರು. (ರೋಮಾಪುರ 3:23) ಅವರು ಫಾಷನ್ ಮಾಡೆಲ್ಗಳ ಹಾಗೆ ಕಾಣಬೇಕೆಂದು ನಾವು ನಿರೀಕ್ಷಿಸಬಾರದು ಮತ್ತು ನಿಮ್ಮ ಹಾಗೆಯೇ ಅವರಿಗೂ ತಾವು ಹೇಳುವ ಮತ್ತು ಮಾಡುವ ಪ್ರತಿಯೊಂದು ವಿಷಯ ಸದಾ ಅವರ ನಿಯಂತ್ರಣದಲ್ಲಿರುವುದಿಲ್ಲ. ಅವರಿಗೂ ಆಗಾಗ್ಗೆ ವಿಶ್ರಮಿಸುವ ಮತ್ತು ವಿನೋದ ಮಾಡುವ ಹಕ್ಕು ಇದೆ. ಒಮ್ಮೊಮ್ಮೆ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ—ಅಥವಾ ತೀರಾ ಮೂರ್ಖರಂತೆ—ನಟಿಸುವುದು, ತಮಗೆ ವಯಸ್ಸಾಗುತ್ತಿರುವುದನ್ನು ನಿಭಾಯಿಸುವ ಅವರ ವಿಧವಾಗಿರಬಹುದು. ಇದರಿಂದ ನಿಮ್ಮ ಮೇಲೆ ಆಗಬಹುದಾದ ಪರಿಣಾಮವನ್ನು ಮರೆತು ನಿಮ್ಮ ತಾಯಿ ನಿಮ್ಮ ಮಿತ್ರರೊಂದಿಗೆ ಅತ್ಯಾಧುನಿಕ ಕುಣಿತಗಳನ್ನು ಕುಣಿದು ನಿಮ್ಮನ್ನು ಅಪಮಾನಕ್ಕೊಳಪಡಿಸಬಹುದು; ನಿಮ್ಮ ತಂದೆ ಹದಿಪ್ರಾಯದವರೊಂದಿಗೆ ತಾನೂ ಬಾಸ್ಕೆಟ್ ಬಾಲ್ ಆಡಿ ಸ್ಪರ್ಧಿಸಬಲ್ಲೆನು ಎಂದು ತೋರಿಸಲು ಪ್ರಯತ್ನಿಸಬಹುದು. ಇದು ನಾಚಿಕೆಗಾಸ್ಪದವೋ? ಪ್ರಾಯಶಃ. ಆದರೆ, ಅವರಿಗೆ ಇದರಲ್ಲಿ ನಿಮ್ಮನ್ನು ನೋಯಿಸುವ ಮನಸ್ಸು ನಿಶ್ಚಯವಾಗಿಯೂ ಇಲ್ಲ.
ನಿಮ್ಮ ಹೆತ್ತವರಿಗೆ ನಿಮ್ಮ ಸುಹಿತ ಹೃದಯದಲ್ಲಿದೆ, ಮತ್ತು ಅಪೂರ್ಣತೆಯ ಕಾರಣ, ನಿಮ್ಮ ಹಿತಕ್ಕೆ ಅಪಾಯವಿದೆಯೆಂದು ತಿಳಿಯುವಾಗ ಅವರು ವಿಪರೀತ ಪ್ರತಿಕ್ರಿಯೆ ತೋರಿಸಬಹುದು. ದೃಷ್ಟಾಂತಕ್ಕೆ, ಬೈಬಲ್ ಲೇಖಕ ಲೂಕನು, ಯೇಸು 12 ವಯಸ್ಸಿನಲ್ಲಿ ತನ್ನ ಕುಟುಂಬದೊಂದಿಗೆ ಪಸ್ಕಕ್ಕೆ ಯೆರೂಸಲೇಮಿಗೆ ಹೋದ ಸಮಯದ ಕುರಿತು ಹೇಳುತ್ತಾನೆ. ಅವನ ಹೆತ್ತವರು ಹಿಂದೆ ಬರುತ್ತಿದ್ದಾಗ ಯೇಸು ಕಾಣೆಯಾಗಿರುವುದ ಅವರಿಗೆ ತಿಳಿದುಬಂತು. ಅವರು ಶ್ರಮದಿಂದ ಅವನನ್ನು ಹುಡುಕಿ, “ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ ಇದ್ದನು.” ಯೇಸು ತನಗಿಂತ ಎಷ್ಟೋ ಹೆಚ್ಚು ವಯಸ್ಸಿನ ಪುರುಷರೊಂದಿಗೆ ಸಂಭಾಷಣೆಯಲ್ಲಿ ಆನಂದಿಸುತ್ತಿದ್ದನೆಂಬುದು ನಿಸ್ಸಂಶಯ. ಆದರೂ, ಅವನ ತಾಯಿ ಬಂದಾಗ, ಪ್ರಾಯಶಃ ರಾಷ್ಟ್ರದ ಆ ಮುಖ್ಯಸ್ಥರ ಸರಿ ಎದುರಿನಲ್ಲಿ, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಕೇಳಿದಳು.—ಲೂಕ 2:41-48.
ಯೋಚಿಸಲು ಇರುವ ಇನ್ನೊಂದು ವಿಷಯವೇನಂದರೆ ನಿಮ್ಮ ಹೆತ್ತವರಿಗೆ ತಮ್ಮದೇ ಆದ, ನಿಮಗೆ ಗೊತ್ತಿಲ್ಲದೆ ಇರುವ ಕೆಲವು ಸಮಸ್ಯೆಗಳಿರಬಹುದು. ಪ್ರಾಯಶಃ ಹಣದ ಚಿಂತೆ, ಅಸ್ವಸ್ಥ ಯಾ ಇತರ ಒತ್ತಡಗಳು ಅವರ ವರ್ತನೆಗೆ ಕಾರಣವಾಗಿರಬಹುದು.
ಅಂತಿಮವಾಗಿ, ಹೆಚ್ಚಿನ ಹೆತ್ತವರಿಗೆ ತಮ್ಮ ಮಕ್ಕಳಲ್ಲಿ ಅಭಿಮಾನವಿದೆ. ಅವರನ್ನು ಇತರರಿಗೆ ಪ್ರದರ್ಶಿಸುವುದರಲ್ಲಿ ಅವರು ಆನಂದಿಸುತ್ತಾರೆ. ಆದರೆ ಇದು, ಅವರನ್ನು ಗಾಬರಿಗೊಳಿಸುವ ಅನೇಕ ಪರಿಸ್ಥಿತಿಗಳಿಗೆ, ಅಂದರೆ, ನಿಮ್ಮ ತಾಯಿಯ ಸ್ನೇಹಿತೆಯರ ಮುಂದೆ ಪಿಯಾನೊ ಬಾಜಿಸುವುದು ಯಾ ನಿಮ್ಮ ತಂ, ಕೇಳುವ ಎಲ್ಲರ ಮುಂದೆ ನೀವೆಷ್ಟು “ತೇಜಸ್ವಿ” ಎಂದು ಹೇಳುವುದನ್ನು ಸಹಿಸುವುದು, ಇವೇ ಮೊದಲಾದ ಪರಿಸ್ಥಿತಿಗಳಿಗೆ ನಡಿಸೀತು.
ನಿಭಾಯಿಸಲು ಕಲಿಯುವುದು
ಹೆತ್ತವರು ನಾಚಿಕೆಗೊಳಪಡಿಸುವಾಗ “ನನ್ನ ಮುಖ ಕೆಂಪೇರುತ್ತದೆ” ಎನ್ನುತ್ತಾಳೆ, ಟಾನ್ಯ ಎಂಬ ಯುವತಿ. ಇದು ಸ್ವಾಭಾವಿಕ ಪ್ರತಿಕ್ರಿಯೆ ಆಗಿರಬಹುದಾದರೂ ನಿಭಾಯಿಸಲು ಹೆಚ್ಚು ಉತ್ಪನ್ನಕಾರಕ ವಿಧಗಳಿವೆ. ಇದುವರೆಗೆ ಕೊಡಲಾಗಿರುವ ಸೂಚನೆಗಳನ್ನು ಕೇವಲ ಜ್ಞಾಪಿಸಿಕೊಳ್ಳುವುದೇ ನಮ್ಮ ಸುಖಾಭಾವವನ್ನು ತಣಿಸಲು ಸಹಾಯ ಮಾಡಬಹುದು. (ಜ್ಞಾನೋಕ್ತಿ 19:11) ಈ ಕೆಳಗಿನ ಸೂಚನೆಗಳನ್ನೂ ಪರಿಗಣಿಸಿರಿ:
ಚಿಂತಿಸುವುದನ್ನು ನಿಲ್ಲಿಸಿರಿ: ನೀವು ಎಷ್ಟು ಚಿಂತೆ ಮಾಡಿದರೂ ಅದು ವಿಷಯವನ್ನು ಹೆಚ್ಚು ಬದಲಾಯಿಸಲಿಕ್ಕಿಲ್ಲ. (ಮತ್ತಾಯ 6:27 ಹೋಲಿಸಿ.) ಎಷ್ಟೆಂದರೂ, ನೀವು ನಿಮ್ಮ ಹೆತ್ತವರಿಗೆ ಜವಾಬ್ದಾರರಲ್ಲ; ನೀವು ಪ್ರತ್ಯೇಕ ವ್ಯಕ್ತಿ. ‘ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊರಬೇಕು’ ಎನ್ನುತ್ತದೆ ಗಲಾತ್ಯ 6:5. ಅಲ್ಲದೆ, ನಿಮ್ಮ ಬಿಕ್ಕಟ್ಟು ನೀವು ಭಾವಿಸುವಷ್ಟು ಕೆಟ್ಟದ್ದಾಗಿರಲಿಕ್ಕಿಲ್ಲ. ‘ನಾಚಿಕೆಗೊಳಗಾಗಿರುವ ಪ್ರತಿಯೊಬ್ಬ ಹದಿಪ್ರಾಯದ ವ್ಯಕ್ತಿ ತನ್ನನ್ನು ಒಂದು ಜನಸಮೂಹ ಪ್ರೇಕ್ಷಿಸುತ್ತಿದೆ ಎಂದು ಭಾವಿಸುತ್ತಾನೆ’ ಎನ್ನುತ್ತಾರೆ ಡಾ. ಜಾಯ್ಸ್ ಎಲ್. ವೆಡ್ರಲ್. ಆದರೂ ಹೆಚ್ಚಿನ ಜನರಿಗೆ ಅದರಲ್ಲಿ ಅಷ್ಟು ಆಸಕ್ತಿಯಿಲ್ಲ. ವೆಡ್ರಲ್ ಮುಂದುವರಿಸುವುದು: “ಅಧಿಕಾಂಶ ಜನರಿಗೆ ನಿಮ್ಮ ಇಡೀ ಕುಟುಂಬದ ಇತಿಹಾಸಕ್ಕಿಂತ ತಮ್ಮ ಮೂಗಿನಲ್ಲಿರುವ ಮೊಡವೆಯ ವಿಷಯ ಹೆಚ್ಚು ಚಿಂತೆ ಇದೆ.” ಅಲ್ಲದೆ, ನಿಮ್ಮ ಸಮಾನಸ್ಥರಿಗೂ ಅವರ ಹೆತ್ತವರು ಮಾಡುವ ಅಭಿಪ್ರಾಯದ ಚಿಂತೆಯಿದೆ ಎಂಬುದು ಜ್ಞಾಪಕವಿರಲಿ!
ಕೆಟ್ಟ ಪರಿಸ್ಥಿತಿಯನ್ನು ಹೆಚ್ಚು ಕೆಟ್ಟದಾಗಿಸಬೇಡಿ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಎನ್ನುತ್ತದೆ ಜ್ಞಾನೋಕ್ತಿ 27:12. ನಿಮ್ಮ ಕಡೆಗೆ ಗಮನ ಸೆಳೆಯತ್ತಾ, ‘ಓ, ಅಮ್ಮಾ!’ ಎಂದು ಕರೆಯುವುದು ಪರಿಸ್ಥಿತಿಯನ್ನು ವಿಷಮಗೊಳಿಸುತ್ತದೆ. ಏನೂ ಹೇಳದೆ ‘ಅಡಗಿಕೊಳ್ಳುವುದು’ ವಿವೇಕವಾಗಿರಬಹುದು.—ಪ್ರಸಂಗಿ 3:7.
ಬೇಕಾಗಿರುವ ಶಿಸ್ತನ್ನು ಅಂಗೀಕರಿಸಿರಿ: ಬಹಿರಂಗ ತಿದ್ದುಪಾಟು ನಿಮ್ಮನ್ನು ನಾಚಿಕೆಗೊಳಪಡಿಸಬಹುದು. ಆದರೆ, ಅನೇಕ ವೇಳೆ ಶಿಸ್ತು ಯೋಗ್ಯವಾಗಿಯೇ ಕೊಡಲ್ಪಡುತ್ತದೆ ಮತ್ತು ನಾಚಿಕೆಯ ಪೇಚಾಟ ಅದರ ಭಾಗ. (ಇಬ್ರಿಯ 12:11) ಆದರೆ, ಶಿಸ್ತು ಅಗತ್ಯವಿಲ್ಲದ್ದು ಎಂದು ತೋರಿಬರುವಲ್ಲಿ? ತಾಯಿ ಅಡ್ಡ ಬಂದಾಗ ಯೇಸು ಅದನ್ನು ಹೇಗೆ ನಿಭಾಯಿಸಿದನೆಂದು ಜ್ಞಾಪಿಸಿರಿ. ಅವನು ಶಾಂತಚಿತ್ತನಾಗಿದ್ದು, ತನ್ನ ಸನ್ನಿವೇಶವನ್ನು ವಿವರಿಸಿದನು. ಹೌದು, ಅವನು ತನ್ನ ಹೆತ್ತವರಿಗೆ “ಅಧೀನ” ನಾಗಿ ಮುಂದುವರಿದನೆಂದು ಬೈಬಲು ಹೇಳುತ್ತದೆ. (ಲೂಕ 2:49, 51) ಹಾಗೆಯೇ ಮಾಡಲು ಏಕೆ ಪ್ರಯತ್ನಿಸಬಾರದು?
ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ: ದಯೆ ಮತ್ತು ಗೌರವಪೂರ್ವಕವಾಗಿ ನಿಮ್ಮನ್ನು ಯಾವುದು ಪೇಚಾಟಕ್ಕೊಳಪಡಿಸುತ್ತದೆಂದು ಅವರಿಗೆ ಹೇಳಿರಿ. ಇದು ಕಾರ್ಯಸಾಧಕ! “ನಿಮಗೆ ಹೇಗನಿಸುತ್ತದೆಂದು ನೀವು ಅವರಿಗೆ ತಿಳಿಸುವಲ್ಲಿ, ಮತ್ತು ಅದು ಅವರಿಗೆ ಉಚಿತವೆಂದು ಕಾಣುವಲ್ಲಿ ಅವರು ಸಾಮಾನ್ಯವಾಗಿ ತಮ್ಮನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ.” ನಿಮ್ಮ ಹೆತ್ತವರು ಈ ಪ್ರಶ್ನೆಯಲ್ಲಿ ನಿಮ್ಮ ಪಕ್ಷವನ್ನು ನೋಡುವಂತೆ ಸಹಾಯ ಮಾಡುವ ಒಂದು ವಿಧವು ಅವರು ಚಿಕ್ಕವರಾಗಿದ್ದಾಗ ಅವರಿಗಾಗಿದ್ದ ಪೇಚಾಟದ ಅನುಭವಗಳನ್ನು ಕೇಳುವುದೇ ಆಗಿದೆ. ಇದು ನಿಮ್ಮ ಸನ್ನಿವೇಶವನ್ನು ಅವರು ಯೋಚಿಸುವಂತೆ ಸಹಾಯ ಮಾಡೀತು.
ಸಹಾನುಭೂತಿ ತೋರಿಸಿರಿ: ನೀವು ನಿಮ್ಮ ಹೆತ್ತವರನ್ನು ನಾಚಿಕೆಗೊಳಪಡಿಸಿದ ಎಲ್ಲಾ ಸಮಯಗಳ ಕುರಿತು ಚಿಂತಿಸಿರಿ! ನೀವು ಹಗೆಸಾಧನೆಯಿಂದ ಇದನ್ನು ಮಾಡಿದಿರೋ? ಇಲ್ಲ! ಹಾಗಾದರೆ, ನಿಮ್ಮ ಹೆತ್ತವರು ಬೇಕೆಂದು ನಿಮ್ಮನ್ನು ಪೇಚಾಟದಲ್ಲಿ ಸಿಕ್ಕಿಸಲಿಕ್ಕಾಗಿ ಹೂಟ ಹೂಡುತ್ತಾರೆಂದು ನೀವು ಏಕೆ ಎಣಿಸಬೇಕು?
ವಿನೋದ ಪ್ರವೃತ್ತಿಯನ್ನು ಎಂದಿಗೂ ಕಳೆದುಕೊಳ್ಳಬೇಡಿರಿ: ಒಬ್ಬ ಹದಿ ಹರೆಯದವನು ಒಪ್ಪಿಕೊಂಡದ್ದು: “ಕೆಲವು ಸಂಗತಿಗಳನ್ನು ನೋಡಿ ನೀವು ನಗಬೇಕಾಗುತ್ತದೆ; ಆ ಬಳಿಕ ಅದು ವಿನೋದಾಸ್ಪದವಾಗುತ್ತದೆ.” ಹೌದು, ಒಂದು ದುರ್ಘಟನೆಯನ್ನು ಏಕೆ ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು? “ನಗುವ ಸಮಯ” ವೊಂದಿದೆಯೆಂದು ನೆನಪಿರಲಿ, ಮತ್ತು ಕೆಲವು ಬಾರಿ ವಿನೋದ ಪ್ರವೃತ್ತಿಯು ಅಪಮಾನದ ಬೇನೆಯನ್ನು ತೆಗೆದುಬಿಡುತ್ತದೆ.— ಪ್ರಸಂಗಿ 3:4.
ಆದರೆ, ನೀವೆಷ್ಟೇ ಪ್ರಯತ್ನಿಸಿರಿ, ಪೇಚಾಟದ ಪರಿಸ್ಥಿತಿಯಿಂದ ಪೂರ್ತಿ ತಪ್ಪಿಸಿಕೊಳ್ಳಲಾರಿರಿ. ಆದರೆ, ಈ ಮೇಲಿನ ವಿಷಯಗಳನ್ನು ಅನ್ವಯಿಸಿಕೊಳ್ಳುವಲ್ಲಿ, ನೀವು ಇಂಥ ನಾಚಿಕೆಗೊಳಪಡಿಸುವ ಪರಿಸ್ಥಿತಿಗಳನ್ನು ವೀಕ್ಷಿಸುವ ವಿಧವನ್ನು ಬದಲಾಯಿಸಲು ನಿಮಗೆ ಸಾಧ್ಯವಾದೀತು.
ಉದಾಹರಣೆಗೆ, ಲೇಖಕಿ ಜೇಮಿ ಬರ್ನಾರ್ಡ್ ಹೇಳುವುದು: “ರಸ್ತೆ ದಾಟುವಾಗ ನನ್ನ ತಾಯಿ ಯಾವಾಗಲೂ, ನಾನು ದೊಡ್ಡವಳಾದಾಗಲೂ, ನಾನು ಅವರ ಕೈ ಹಿಡಿದು ದಾಟುವಂತೆ ಮಾಡುತ್ತಿದ್ದರು. ಒಂದು ದಿನ ನಾನು ಕೈ ಹಿಂದೆ ಎಳೆದು, ‘ನನಗೆ ಇನ್ನು ಅದು ಬೇಡ ಅಮ್ಮಾ,’ ಎಂದು ಕೂಗಿದೆ. ಆಗ ಅಮ್ಮ ನನ್ನ ಕಡೆ ತಿರುಗಿ, ‘ನನಗೆ ಬೇಕು’ ಎಂದು ಹೇಳಿದರು. ತನಗೆ ಸಹಾಯಕ್ಕಾಗಿ ನಾನು ಬೇಕು ಎಂಬ ಅರ್ಥದಲ್ಲಿ ಹೇಳಿದರೋ, ನಾನು ಅವರ ‘ಮಗು’ ವಾಗಿದ್ದ ಸಮಯವನ್ನು ತನಗೆ ಈಗ ಇಲ್ಲವಾಗಿದೆ ಎಂಬ ಅರ್ಥದಲ್ಲಿ ಹೇಳಿದರೋ ಯಾ ನನ್ನನ್ನು ಮುಟ್ಟಿ ಸಂಪರ್ಕ ಬೆಳೆಸಲು ಅವರಿಗೆ ಮನಸ್ಸಿದ್ದರೂ ಅದನ್ನು ಹೇಗೆ ಮಾಡಬೇಕೆಂದು ತಿಳಿಯದೆ ಹಾಗೆ ಹೇಳಿದರೋ ನನಗೆ ತಿಳಿಯದು. ಆದರೆ ಈಗ ನಾನು ರಸ್ತೆ ದಾಟುವ ಸಮಯದಲ್ಲಿ ಅವರ ಕೈ ಹಿಡಿಯುವಾಗ ನನಗೆ ಬೆಚ್ಚಗೆನ ಅನುಭವದ—ಪೇಚಾಟದ ನಾಚಿಕೆಯದ್ದಲ್ಲ, ಪ್ರೀತಿಯ ಅನುಭವದ—ಬಿಸುಪೇರುತ್ತದೆ.”—ಸೆವೆಂಟೀನ್ ಮ್ಯಾಗಸಿನ್, ಡಿಸೆಂಬರ್ 1985. (g90 2/22)