ಇಂದಿನ ಯುವಜನರು ಒಂದು ಲೋಕವ್ಯಾಪಕ ಭಾವಚಿತ್ರ
ಜನಪ್ರಿಯ ಪತ್ರಿಕೆಗಳು ಹದಿಹರೆಯದವರನ್ನು ಅಮಲೌಷಧ ಉನ್ಮತ್ತರಾದ ಅಧಿಕಾರವಿರೋಧಿಗಳು, ಬರಿದಾದ ತಲೆಯವರು, ಸ್ವವಿಚಾರಾಸಕ್ತರು, ಸೋಮಾರಿಗಳು, ಮತ್ತು ಮನಸ್ಸಿನಲ್ಲಿ ಉಡುಪು, ಟೀವೀ ಮತ್ತು ಲೈಂಗಿಕ ವಿಚಾರಗಳಲ್ಲದೆ ಇನ್ನೇನೂ ಇಲ್ಲದವರೆಂದು ಚಿತ್ರಿಸುತ್ತವೆ. ಆದರೂ ಯುವಜನರ ವಿಷಯದಲ್ಲಿರುವ ಈ ನಕಾರಾತ್ಮಕ ನೋಟವು ಜನರಲ್ಲಿ ಅಧಿಕಸಂಖ್ಯಾಕರಿಗೆ ನಿಜತ್ವದಿಂದ ಅತಿ ದೂರವಾಗಿರುವಂತೆ ಕಾಣುತ್ತದೆ.
ಸೈಖಾಲಜಿ ಟುಡೇ ಪತ್ರಿಕೆಯಲ್ಲಿ ವರದಿಯಾದ ಒಂದು ಸರ್ವೆಯು ‘ಸರ್ವೆಯಾದವರಲ್ಲಿ ಸುಮಾರು ಮುಕ್ಕಾಲು ಉತ್ತಮವಾಗಿ ಹೊಂದಿಕೆಯಾದವರಂತೆ ಕಂಡುಬಂದರು. ಅವರು ಸಾಮಾನ್ಯವಾಗಿ ಸಂತುಷ್ಟರೂ ಆತ್ಮಸಂಯಮಿಗಳೂ ಪರಚಿಂತನೆ ಮಾಡುವವರೂ ತಮ್ಮ ವರ್ತನೆಗಳ ಫಲವನ್ನು ಚಿಂತಿಸುವವರೂ ಆಗಿದ್ದರು.’ ಹೆಚ್ಚಿನ ಯುವಜನರು ತಮ್ಮ ಹೆತ್ತವರಿಂದ ದೂರವಾಗಿರುವ ಬದಲಿಗೆ “ತಮ್ಮ ಕುಟುಂಬಗಳ ಕಡೆಗೆ ತೀರಾ ಸಕಾರಾತ್ಮಕ ಮನೋಭಾವವನ್ನಿಡುತ್ತಾರೆ” ಎಂದು ತೋರಿಸಿತು.
ಇತರ ಸರ್ವೆಗಳು ಸಹ ಇಂದಿನ ಯುವಜನರ ನಿರೀಕ್ಷೆ, ಹಾರೈಕೆ ಮತ್ತು ಭಯಗಳಲ್ಲಿ ಅನೇಕ ಸಂಗತಿಗಳು ಸ್ವಸ್ಥವಾದ, ಸಮತೂಕದ ಆಲೋಚನೆಗಳನ್ನು ಪ್ರತಿಬಿಂಬಿಸುತ್ತವೆಂದು ತೋರಿಸುತ್ತವೆ. 1985ರಲ್ಲಿ ಯುನೆಸ್ಕೊ ಕೂರಿಯರ್ ಪತ್ರಿಕೆ 41 ದೇಶಗಳ ಯುವಜನರನ್ನು “ಇಂದಿನ ಎಲ್ಲಾ ಯುವಜನರಿಗೆ ಅತ್ಯಂತ ಚಿಂತೆ ತರುವ ಸಮಸ್ಯೆ ಯಾವುದು?” ಎಂದು ಪ್ರಶ್ನಿಸಿತು. “ಯುದ್ಧ ಮತ್ತು ಶಾಂತಿಯ ಸಮಸ್ಯೆಗಳು” (50 ಸೇಕಡ) “ನಿರುದ್ಯೋಗ ಮತ್ತು ಕೆಲಸ” (30 ಸೇಕಡ) ಮತ್ತು “ಭವಿಷ್ಯತ್ತು” (10 ಸೇಕಡ) ಎಂಬಿವೇ ಮೊದಲಾದ ಆಲೋಚನಾಪರ ಉತ್ತರಗಳನ್ನು ಪತ್ರಿಕೆ ಪಡೆಯಿತು.
ವೈಯಕ್ತಿಕ ಹೆಬ್ಬಯಕೆಗಳ ಮೇಲೆ ಬೆಳಕು ಹರಿಸುವಾಗಲೂ ಯುವಜನರು ಪುನಃ ಆಶ್ಚರ್ಯಕರವಾಗಿ ವ್ಯಾವಹಾರಿಕ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. “ಹದಿನಾಲ್ಕರಿಂದ ಇಪ್ಪತ್ತೊಂದು ವಯಸ್ಸಿನ ರಾಷ್ಟ್ರೀಯವಾಗಿ ಪ್ರತಿನಿಧೀಕರಿಸಲ್ಪಟ್ಟಿದ್ದ [ಯು.ಎಸ್.] ತರುಣ, ತರುಣಿಯರನ್ನು” ಪ್ರಶ್ನಿಸಿದ ಬಳಿಕ, ಸೆವೆಂಟೀನ್ ಪತ್ರಿಕೆ ಅದರ ವಾಚಕರಿಗೆ ಹೀಗೆಂದಿತು: “ಎಲ್ಲಕ್ಕೂ ಮಿಗಿಲಾಗಿ, ನೀವು ಮದುವೆಯಾಗಿ ಮಕ್ಕಳನ್ನು ಬಯಸುತ್ತೀರಿ. ಎರಡನೆಯದಾಗಿ, ನಿಮಗೊಂದು ಉದ್ಯೋಗ ಯಾ ಜೀವನೋಪಾಯ ಬೇಕು. ನಿಮಗೆ ಹಣದ ಮತ್ತು ವಿದ್ಯೆಯ ಚಿಂತೆಯೂ ಇದೆ. ಆದರೆ ನಿಮ್ಮಲ್ಲಿ 60 ಪ್ರತಿಶತಕ್ಕೂ ಹೆಚ್ಚು ಮಂದಿ, ಈ ಲೋಕದ ಸಮಸ್ಯೆಗಳು ಸುಧಾರಿಸಲು ನಿಮ್ಮ ಸಂತತಿಗೆ ತೀರಾ ದೊಡ್ಡದಾದ ವಿಷಯವೆಂದು ನಂಬುವುದಿಲ್ಲ.”
ಹಾಗಾದರೆ ಸಾಮಾನ್ಯವಾಗಿ, ಲೋಕವ್ಯಾಪಕವಾಗಿ ಯುವಜನರು ತಮ್ಮ ಹಿರಿಯರು ಹುಡುಕುವ ವಿಷಯಗಳನ್ನೇ ಅಂದರೆ ಸಂತೋಷ, ಭದ್ರತೆ ಮತ್ತು ನಿಕಟವಾಗಿರುವ ಕುಟುಂಬಗಳನ್ನೇ ಹುಡುಕುತ್ತಾರೆ. ಅವರಿಗೆ ತಾವು ಜೀವಿಸುವ ಜಗತ್ತಿನ ಚಿಂತೆಯೂ ಅದನ್ನು ಸುಧಾರಿಸುವ ಯಥಾರ್ಥ ಬಯಕೆಯೂ ಇದೆ. ಆದರೂ ಈ ಭಾವಚಿತ್ರಕ್ಕೆ ಕರಿದಾದ ಪಕ್ಕವೊಂದಿದೆ.
ದುಃಖಿತರೂ ಸ್ವವಿನಾಶಕಾರಿಗಳೂ ಆದ ಯುವಜನರು
ಈ ಮೇಲಿನ ಅಧ್ಯಯನ ಈ ಕೆಳಗಿನ ಕರಾಳ ಕಂಡುಹಿಡಿತವನ್ನು ಮಾಡಿತು:“ತರುಣರಲ್ಲಿ ಕಾಲು ಭಾಗ ತಾವು ಪದೇ ಪದೇ ದುಃಖಿತರೆಂದೂ ಒಂಟಿಗರಾಗಿದ್ದೇವೆಂದೂ ಭಾವಾತ್ಮಕವಾಗಿ ಬರಿದಾಗಿದ್ದೇವೆಂದೂ ಜೀವನದ ಸಮಸ್ಯೆಗಳಿಂದಾಗಿ ಮುಳುಗಿ ಹೋಗಿದ್ದೇವೆಂದೂ ಹೇಳಿದರು. ಕೆಲವರಿಗೆ ಆತ್ಮಹತ್ಯೆಯ ಭಾವನೆಗಳೂ ಪ್ರವೃತ್ತಿಗಳೂ ಇದ್ದವು.” ಹಲವು ದೇಶಗಳಲ್ಲಿ ಯುವಜನರು ಕೇವಲ ಯೋಚಿಸುವುದನ್ನು ಮೀರಿ ಹೋಗುತ್ತಾರೆ. ಅಮೇರಿಕದಲ್ಲಿ ಬೆಳೆದ ಹದಿಹರೆಯದವರ ಮಧ್ಯೆ ಆತ್ಮಹತ್ಯಗಳು ಕಳೆದ ಇಪ್ಪತ್ತು ವರ್ಷಗಳಲ್ಲಿ ಇಮ್ಮಡಿಯಾದವು.a
ಮಹಾ ಚಿಂತೆಗೆ ಇನ್ನೊಂದು ಕಾರಣವು ಹದಿಹರೆಯದವರ ಅಮಲೌಷಧ ಅಂದರೆ, ಮಾರಿವಾನ, ಹಿರೋಯಿನ್, ಕೊಕೇಯ್ನ್ ಮತ್ತು ಕೊಕೇಯ್ನಿನ ಇನ್ನೊಂದು ರೂಪವಾದ ಕ್ರ್ಯಾಕ್ ಮುಂತಾದವುಗಳ ಸೇವನೆಯಲ್ಲಿ ಲೋಕವ್ಯಾಪಕ ವೃದ್ಧಿಯೇ. ಅಮೆರಿಕದ 14 ವಯಸ್ಸಿನ ಹುಡುಗಿಯೊಬ್ಬಳು ಮಾರಿವಾನ ಸೇದುವಿಕೆಯ ಕುರಿತು ಹೇಳಿದ್ದು: “ಇದು ಈಗ ಶೈಲಿಯೂ ಆಗಿರುವುದಿಲ್ಲ. ಇದು ಈಗ ಹೆಚ್ಚುಕಡಿಮೆ ಪ್ರತಿಯೊಬ್ಬರ ಜೀವನದ ಭಾಗವಾಗಿದೆ.”
ವಿಕಾಸ ಹೊಂದುತ್ತಿರುವ ದೇಶಗಳೂ ಈ ಸಮಸ್ಯೆಯಿಂದ ಪಾರಾಗಿರುವುದಿಲ್ಲ. ಇಂಥ ಅನೇಕ ದೇಶಗಳಲ್ಲಿ ಯುವಜನರು ಕೋಕ ಪೇಸ್ಟ್ ಮೊದಲಾದ ವಸ್ತುಗಳನ್ನು ಸೇದುವ ದೃಶ್ಯ ಸಾಮಾನ್ಯ. ವಿಶ್ವ ಸಂಘದ ಸೆಕ್ರೆಟರಿ ಜನರಲ್ ಜೇವಿಯರ್ ಪೆರೆಸ್ ಡಿಕುಯರ್ ಹೇಳಿದಂತೆ ಅಮಲೌಷಧದ ನ್ಯಾಯವಿರುದ್ಧವಾದ ಸಾಗಣೆ ಮತ್ತು ದುರುಪಯೋಗವು “ಈಗಿನ ಮತ್ತು ಮುಂದಿನ ಸಂತತಿಗಳಿಗೆ ಹಿಂದಿನ ಯುಗಗಳಲ್ಲಿ ಲೋಕದ ಅನೇಕ ಭಾಗಗಳಲ್ಲಿ ಪ್ಲೇಗ್ ರೋಗ ಮಾರಕವಾಗಿದ್ದಷ್ಟೆ ಅಪಾಯಕರವಾಗಿದೆ.”
ಮದ್ಯ ಮತ್ತು ಹೊಗೆಸೊಪ್ಪುಗಳಂಥ ಶಾಸನಬದ್ಧ ಅಮಲೌಷಧಗಳೂ ಪರಿಣತರನ್ನು—ಮತ್ತು ಹೆತ್ತವರನ್ನು—ಚಿಂತೆಗೊಳಪಡಿಸಿದೆ. ಯುಎನ್ ಕ್ರಾನಿಕ್ಲ್ ವರದಿ ಮಾಡುವುದು: “ಗತಿಸಿದ 30ರಿಂದ 40 ವರ್ಷಗಳಲ್ಲಿ, ಲೋಕಾರೋಗ್ಯ ಸಂಘಕ್ಕನುಸಾರವಾಗಿ, ಮಕ್ಕಳು ಮತ್ತು ತರುಣರು ವೃದ್ಧಿಯಾಗುತ್ತಿರುವ ಸೇಕಡಾ ಸಂಖ್ಯೆಯಲ್ಲಿ ಮದ್ಯ ಕುಡಿಯಲು ಆರಂಭಿಸಿದ್ದಾರೆ; ಅವರ ಸೇವನೆಯ ಪರಿಮಾಣ ಮತ್ತು ವೇಗದಲ್ಲಿಯೂ ವೃದ್ಧಿ ಇದೆ; ಮತ್ತು ಕುಡಿಯುವವರು ಆರಂಭಿಸುವ ವಯಸ್ಸು ಕೆಳಗಿಳಿದಿದೆ.”
ಖಿನ್ನರಾಗಿರುವ ಯಾ ಸ್ವವಿನಾಶಕಾರಕ ನಡತೆಯಿರುವ ಯುವಜನರು ಅಲ್ಪಸಂಖ್ಯಾಕರು ಎಂದು ಒಪ್ಪಿಕೊಳ್ಳೋಣ. ಆದರೂ ಲೋಕವ್ಯಾಪಕವಾಗಿ ಹೀಗೆ ಕಠಿಣ ಸಮಸ್ಯೆ ಇರುವವರ ಸಂಖ್ಯೆ ಕೋಟಿಗಳಾಗುತ್ತವೆ. ನಾವು ಮುಂದೆ ನೋಡಲಿರುವಂತೆ, ಯುವಜನರು ಇಂದು ನಾವು ಜೀವಿಸುತ್ತಿರುವ ಸಮಯಕ್ಕೆ ವಿಶಿಷ್ಟವಾಗಿರುವ ನಿರ್ಬಂಧ ಮತ್ತು ಒತ್ತಡಗಳಿಗೆ ಬಲಿಬೀಳುತ್ತಿದ್ದಾರೆ. (g90 9/8)
[ಅಧ್ಯಯನ ಪ್ರಶ್ನೆಗಳು]
a ಹೆಲ್ಪಿಂಗ್ ಯುವರ್ ಟೀನೇಜರ್ ಡೀಲ್ ವಿದ್ ಸ್ಟ್ರೆಸ್ ಎಂಬ ಪುಸ್ತಕಕ್ಕನುಸಾರ, “ಆತ್ಮಹತ್ಯೆ ಮಾಡಿಕೊಳ್ಳುವ ಪ್ರಾಯದ ಯುವಜನರು ಅನೇಕ ವೇಳೆ ಉಪಯೋಗಿಸುವ ಒಂದು ವಿಧಾನ ಕಾರ್ ಅಪಘಾತವೇ” ಎಂದು ಕೆಲವರ ನಂಬಿಕೆ. ವಾಹನ ಅಪಘಾತಗಳನ್ನು ಸಾಮಾನ್ಯವಾಗಿ ಆತ್ಮಹತ್ಯವಾಗಿ ಲೆಕ್ಕಿಸದರ್ದಿಂದ ಹದಿಹರೆಯದವರ ಆತ್ಮಹತ್ಯದ ಸಂಖ್ಯೆ ಕಡಿಮೆಯಾಗಿ ಕಾಣಬಹುದು.