ಇಂದಿನ ಯುವಜನರು ಅವರ ಎದುರಿಗಿರುವ ಪಂಥಾಹ್ವಾನಗಳು
“ಹದಿಹರೆಯ ಜೀವನದ ಅತ್ಯಂತ ಗಲಿಬಿಲಿಗೊಳಿಸುವ ಮತ್ತು ಒತ್ತಡ ತರುವ ಸಮಯವೆಂಬುದು ನಿಸ್ಸಂಶಯವೆಂದು ಸಂಶೋಧನೆ ತೋರಿಸುತ್ತದೆ.” ಹೆಲ್ಪಿಂಗ್ ದ ಟೀನೇಜರ್ ಡೀಲ್ ವಿದ್ ಸ್ಟ್ರೆಸ್ ಎಂಬ ಪುಸ್ತಕದಲ್ಲಿ ಡಾ. ಬೆಟಿ ಬಿ. ಯಂಗ್ಸ್ ಹಾಗೆ ಬರೆದರು. ಗತಕಾಲಗಳಲ್ಲಿ ಯುವಜನರಿಗೆ ಕೇವಲ ಯೌವನವನ್ನು ನಿಭಾಯಿಸುವುದೇ ಕೈತುಂಬಿದ ಕೆಲಸವಾಗಿತ್ತು. ಆದರೆ ಈಗ ಅವರು ತಾರುಣ್ಯದ ಕಷ್ಟಗಳನ್ನಲ್ಲದೆ 1990ಗಳ ಜೀವನದ ಬಲಾಢ್ಯ ವಯಸ್ಕ ಒತ್ತಡವನ್ನೂ ನಿಭಾಯಿಸಬೇಕು.
ವರ್ಲ್ಡ್ ಹೆಲ್ತ್ ಪತ್ರಿಕೆಯಲ್ಲಿ ಡಾ. ಹರ್ಬರ್ಟ್ ಫ್ರೀಡ್ಮೆನ್ ಬರೆದುದು: “ಹಿಂದೆಂದೂ, ಲೋಕ ಜನಸಂಖ್ಯೆಯಲ್ಲಿ ವಿಪರೀತ ಅಭಿವೃದ್ಧಿ, ಅದರೊಂದಿಗೆ ವೃದ್ಧಿಯಾದ ನಗರೀಕರಣ ಮತ್ತು ಯಾವುದು ಹಿಂದೆಂದೂ ಕಂಡಿರದ ಪರಿಸ್ಥಿತಿಗಳನ್ನು ಸುಮಾರು ರಾತ್ರಿ ಹಗಲಾಗುವುದರೊಳಗೆ ಸೃಷ್ಟಿಸಿದೆಯೊ ಅಂಥ ಸಂಪರ್ಕ ಮತ್ತು ಪ್ರಯಾಣಗಳ ಯಂತ್ರಕಲಾ ವಿಪ್ಲವಗಳ ಇಂಥ ನಾಟಕೀಯ ಬದಲಾವಣೆಯ ಸಮಯದಲ್ಲಿ ಬಾಲ್ಯಾವಸ್ಥೆಯಿಂದ ವಯಸ್ಕತನಕ್ಕೆ ಪರಿವರ್ತನೆ ನಡೆದದ್ದಿಲ್ಲ.”
ಹದಿಹರೆಯದ ಕ್ಯಾಥಿ ಎಂಬ ಹುಡುಗಿ ಹೇಳುವುದು: “ನಮ್ಮ ಕಾಲದಂಥ ಸಮಯಗಳಲ್ಲಿ ಬೆಳೆಯುವುದು ಕಷ್ಟಕರ.” ಅಮಲೌಷಧ ಚಟ, ಆತ್ಮಹತ್ಯ, ಮದ್ಯದ ದುರುಪಯೋಗ—ಇವು ಈ “ಕಠಿನ ಕಾಲಗಳ” ನಿರ್ಬಂಧ ಮತ್ತು ಒತ್ತಡಗಳಿಗೆ ಕೆಲವು ಯುವಜನರ ಪ್ರತಿವರ್ತನೆ.—2 ತಿಮೊಥಿ 3:1.
ಕುಟುಂಬದಲ್ಲಿ ಕ್ರಾಂತಿ
ಡಾ.ಯಂಗ್ಸ್ ನೆನಪಿಸಿಕೊಳ್ಳುವುದು: “ನಮ್ಮ ಹೆತ್ತವರು ನಮಗೆ ಸಮಯ ಕೊಡುತ್ತಿದ್ದರು. ನಮ್ಮಲ್ಲಿ ಅನೇಕರಿಗೆ ಮಕ್ಕಳನ್ನು ಬೆಳೆಸುವುದನ್ನೇ ಪೂರ್ಣ ಸಮಯದ ಕೆಲಸವನ್ನಾಗಿ ಮಾಡಿದ್ದ ತಾಯಂದಿರಿದ್ದರು.” ಆದರೆ ಇಂದು, “ಅನೇಕ ಸ್ತ್ರೀಯರಿಗೆ ಮನೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ ಅಥವಾ ಅವರು ಮನೆಯಲ್ಲಿದ್ದು ಮಕ್ಕಳನ್ನು ಪೂರ್ಣ ಸಮಯ ಬೆಳೆಸಲು ಮನಸ್ಸು ಮಾಡುವುದಿಲ್ಲ. ಅವರು ಕೆಲಸ ಮಾಡಿ ಉದ್ಯೋಗ ಮತ್ತು ಕುಟುಂಬಗಳ ಮಧ್ಯೆ ಕಣ್ಕಟ್ಟು ತೋರಿಸಬೇಕಾಗುತ್ತದೆ. ದಿವಸದಲ್ಲಿ ಸಾಕಷ್ಟು ಗಂಟೆಗಳಿಲ್ಲದರ್ದಿಂದ ಯಾವುದನ್ನಾದರೂ ಬಲಿ ಕೊಡಬೇಕಾಗುತ್ತದೆ. ಹೆಚ್ಚು ಸಲ ಬಲಿಕೊಡಲ್ಪಡುವ ವಿಷಯವು ಹೆತ್ತವರು ಮಗುವಿಗೆ ಕೊಡುವ ಸಮಯ ಮತ್ತು ಬೆಂಬಲವೇ. ಜೀವನದ ಅತಿ ಸುಲಭಭೇದ್ಯ ಸಮಯದಲ್ಲಿ ತನ್ನ ಶಾರೀರಿಕ. ಮಾನಸಿಕ ಮತ್ತು ಭಾವಾವೇಶದ ಬದಲಾವಣೆಗಳನ್ನು ಹದಿಹರೆಯದವರು ತಾವೇ ನಿಭಾಯಿಸುವಂತೆ ಬಿಡಲ್ಪಡುತ್ತಾರೆ.”—ಹೆಲ್ಪಿಂಗ್ ಯುವರ್ ಟೀನೇಜರ್ ಡೀಲ್ ವಿದ್ ಸ್ಟ್ರೆಸ್.
1990ಗಳಲ್ಲಿ ಕುಟುಂಬ ರಚನೆಗಳು ವಿವಾಹವಿಚ್ಛೇದ (ಅಮೆರಿಕದಲ್ಲಿ ವಿವಾಹಗಳಲ್ಲಿ 50 ಪ್ರತಿಶತ ವಿಚ್ಛೇದಗೊಳ್ಳುತ್ತವೆ), ಜಾರಜ ಮಕ್ಕಳು ಮತ್ತು ಅವಿವಾಹಿತರು ಜೊತೆಯಾಗಿ ಜೀವಿಸುವ ಬೆಳೆಯುತ್ತಿರುವ ಪ್ರವೃತ್ತಿ—ಇವುಗಳಿಂದ ನಾಟಕೀಯವಾಗಿ ಬದಲಾವಣೆಯಾಗುತ್ತಾ ಹೋಗುವವೆಂಬುದು ನಿಸ್ಸಂಶಯ. ಅಮೆರಿಕದಲ್ಲಿ ಈಗಾಗಲೆ ಸುಮಾರು 4 ಕುಟುಂಬಗಳಲ್ಲಿ 1ರ ತಲೆ ಇಬ್ಬರಲ್ಲ, ಒಬ್ಬ ಹೆತ್ತವರಾಗಿದ್ದಾರೆ. ಕುಟುಂಬಗಳು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಪುನರ್ವಿವಾಹದಿಂದ ರಚಿಸಲ್ಪಟ್ಟ ಮಲಕುಟುಂಬಗಳಾಗುತ್ತಾ ಇವೆ.
ಇಂಥ ಕುಟುಂಬಗಳಲ್ಲಿರುವ ಮಕ್ಕಳಿಗೆ ಭಾವಾವೇಶದ ಯಾ ಮನಶಾಸ್ತ್ರ ಸಂಬಂಧವಾದ ಹಾನಿಯಾಗುವ ಸಂಭವವಿದೆಯೆ? ಕೆಲವರು ದೃಷ್ಟಾಂತಕ್ಕೆ, ಏಕಹೆತ್ತವರಿರುವ ಕುಟುಂಬಗಳ ಮಕ್ಕಳು ಸಾಂಪ್ರದಾಯಿಕ ಕುಟುಂಬಗಳಲ್ಲಿ ಬೆಳೆದ ಮಕ್ಕಳಿಗಿಂತ ಹೆಚ್ಚು ಒಂಟಿಗತನ, ದುಃಖ ಮತ್ತು ಅಭದ್ರತೆಯ ಪ್ರವೃತ್ತಿಯುಳ್ಳವರು ಎಂದು ವಾದಿಸುತ್ತಾರೆ. ಹೌದು, ಅನೇಕ ಏಕಹೆತ್ತವರಿರುವ ಕುಟುಂಬಗಳು ಮತ್ತು ಮಲಕುಟುಂಬಗಳು ಮಕ್ಕಳಿಗೆ ಯಾವ ಹಾನಿಯನ್ನೂ ತರದಂತೆ ಕಂಡುಬಂದು ಕೆಲಸ ನಡಿಸುತ್ತವೆಂಬುದು ನಿಜ. ಆದರೂ ಇಬ್ಬರು ಹೆತ್ತವರು ಮಕ್ಕಳನ್ನು ಬೆಳೆಸುವುದೇ ದೇವರ ಉದ್ದೇಶವಾಗಿತ್ತೆಂದು ಶಾಸ್ತ್ರವು ತಿಳಿಸುತ್ತದೆ. (ಎಫೆಸ 6:1,2) ಈ ಸಮಂಜಸವಾದ ಪರಿಸ್ಥಿತಿಯಿಂದ ಅಗಲುವಿಕೆಯು ಹೆಚ್ಚು ಒತ್ತಡ ಮತ್ತು ಪ್ರಯಾಸವನ್ನು ತರುವುದು ಖಂಡಿತ.
ಅನೇಕ ವಿಕಾಸಹೊಂದುತ್ತಿರುವ ದೇಶಗಳಲ್ಲಿ ಸಹ ಕುಟುಂಬ ಜೀವನದಲ್ಲಿ ಕ್ರಾಂತಿಯೊಂದು ನಡೆಯುತ್ತಾ ಇದೆ. ಅಲ್ಲಿ ಕುಟುಂಬದ ಸಾಂಪ್ರದಾಯಿಕ ರಚನೆಯಾದ ವಿಸ್ತರಿತ ಕುಟುಂಬದಲ್ಲಿ ಎಲ್ಲಾ ವಯಸ್ಕ ಸದಸ್ಯರಿಗೆ ಮಕ್ಕಳನ್ನು ಬೆಳೆಸುವುದರಲ್ಲಿ ಪಾಲಿತ್ತು. ಆದರೆ ನಗರೀಕರಣ ಮತ್ತು ಕೈಗಾರಿಕೀಕರಣ ಪದ್ಧತಿಗಳು ಈ ವಿಸ್ತರಿತ ಕುಟುಂಬ ಸಂಬಂಧವನ್ನು—ಮತ್ತು ಯುವಜನರಿಗೆ ಬೇಕಾಗಿರುವ ಬೆಂಬಲವನ್ನು— ವೇಗದಿಂದ ಕಡಿಯುತ್ತಾ ಇವೆ.
ಒಬ್ಬ ಆಫ್ರಿಕನ್ ಯುವತಿ ಬರೆಯುವುದು: “ಬೆಳೆಯುವುದರ ಅರ್ಥವನ್ನು ತಿಳಿಸಿ ಬುದ್ಧಿಹೇಳಲು ನನಗೆ ಅತ್ತೆಗಳಾಗಲಿ ಇನ್ನಿತರ ಸಂಬಂಧಿಗಳಾಗಲಿ ಇಲ್ಲ. ಹೆತ್ತವರು ಈ ಪಾಠವನ್ನು ಶಾಲೆಯು ಕಲಿಸುವಂತೆ ಬಿಡುವಾಗ ಶಾಲೆ ಅದನ್ನು ಹೆತ್ತವರಿಗೆ ಹಿಂದೆ ಬಿಡುತ್ತದೆ. ಮಕ್ಕಳು ಸಮಾಜಕ್ಕೆ ಸಂಬಂಧಪಟ್ಟವರು ಎಂಬ ಪ್ರಜ್ಞೆ ಈಗ ಇರುವುದಿಲ್ಲ.”a
ಆರ್ಥಿಕ ಕಳವಳಗಳು
ಯುವಜನರು ಜಗತ್ತಿನ ಕೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ವಿಷಯದಲ್ಲೂ ಹೆಚ್ಚು ಕಳವಳಗೊಳ್ಳುತ್ತಾರೆ. ವಾಸ್ತವವೇನಂದರೆ, 5ರಲ್ಲಿ 4 ಜನ ಯುವಜನರು ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ಜೀವಿಸುತ್ತಿದ್ದು ಇಡೀ ಆಯುಷ್ಕಾಲದ ಬಡತನ ಮತ್ತು ನಿರುದ್ಯೋಗವನ್ನು ಎದುರು ನೋಡುತ್ತಾ ಇದ್ದಾರೆ. ಭಾರತದ 17 ವಯಸ್ಸಿನ ಲವ್ ಹೇಳುವುದು: “ನಮ್ಮ ದೇಶದ ಯುವಜನರಲ್ಲಿ ಈಗ ತುಂಬ ನಿರುದ್ಯೋಗವಿದೆ. ಹೀಗಿರುವಾಗ ಯುವಜನರು ರೋಗಿಗಳೂ ಅಸಂತುಷ್ಟರೂ ಆಗಿ, ಚಟಗಳಿಗೆ ಬಲಿಬಿದ್ದು, ಮನೆಯಿಂದ ಓಡಿಹೋಗಿ ಆತ್ಮಹತ್ಯೆಯನ್ನೂ ಮಾಡಿಕೊಳ್ಳುವುದರಲ್ಲಿ ಆಶ್ಚರ್ಯವಿದೆಯೆ?”
ಸಮೃದ್ಧಿಯಿರುವ ಪಾಶ್ಚಿಮಾತ್ಯ ಯುವಜನರಿಗೂ ಅವರದ್ದೇ ಆದ ಹಣದ ಚಿಂತೆಯಿದೆ. ಉದಾಹರಣೆಗೆ, ಚಿಲ್ಡ್ರನ್ ಟುಡೇ ಪತ್ರಿಕೆಯಲ್ಲಿ ವರದಿಯಾದ ಅಮೆರಿಕದ ಹದಿಹರೆಯದವರ ಒಂದು ಸರ್ವೆಯನ್ನು ಪರಿಗಣಿಸಿರಿ:“ಅವರನ್ನು ವ್ಯಾಕುಲಗೊಳಿಸಿದ ನಿರ್ದಿಷ್ಟ ವಿಷಯಗಳ ಕುರಿತು ಪ್ರಶ್ನಿಸಲಾಗಿ ಹದಿಪ್ರಾಯದವರು ಹಣ ಮತ್ತು ಭವಿಷ್ಯತ್ತಿನ ಪ್ರಶ್ನೆಗಳ ಕುರಿತು ಮಾತಾಡುವ ಪ್ರವೃತ್ತಿಯುಳ್ಳವರಾಗಿದ್ದರು.” ಇವರ ಮೊದಲಿನ ಹತ್ತು ಚಿಂತೆಗಳಲ್ಲಿ, “ಕಾಲೇಜ್ ವಿದ್ಯಾಭ್ಯಾಸಕ್ಕೆ ಕೊಡಬೇಕಾದ ಹಣ”, “ದೇಶ [ಆರ್ಥಿಕ] ಕುಸಿತದ ಪಥದಲ್ಲಿ ಹೋಗುತ್ತಿರುವುದು”, ಮತ್ತು “ಸಾಕಷ್ಟು ಸಂಪಾದಿಸದೆ ಇರುವುದು” ಸೇರಿದ್ದವು.
ಆದರೆ ಹಾಸ್ಯವ್ಯಂಗ್ಯವಾಗಿ, ಹಣದ ಕೊರತೆಯಿಲ್ಲದ ಯುವಜನರೂ ಕಟ್ಟಕಡೆಗೆ ತೊಂದರೆ ಪಡುವರೆಂದು ಕೆಲವು ಪರಿಣತರ ಅಭಿಪ್ರಾಯ. ನ್ಯೂಸ್ವೀಕ್ ಪತ್ರಿಕೆ ಗಮನಿಸಿದ್ದು: “80ಗಳೊಳಗೆ, [ಅಮೆರಿಕದ] ಹೈಸ್ಕೂಲ್ ಸೀನ್ಯರ್ಗಳಲ್ಲಿ ನಾಲ್ಕರಲ್ಲಿ ಮೂವರು ವಾರಕ್ಕೆ ಸರಾಸರಿ 18 ತಾಸು ಕೆಲಸಮಾಡಿ ತಿಂಗಳಿಗೆ 200 ಡಾಲರ್ ಸಂಪಾದಿಸುತ್ತಿದ್ದರು.” ಇದು ಪ್ರಾಯಶಃ, ಅವರ ಹೆತ್ತವರಿಗಿದ್ದ ಕೈವೆಚ್ಚದ ಹಣಕ್ಕಿಂತ ಹೆಚ್ಚಾಗಿತ್ತು! ಈ “ಸಂಪಾದನೆಯನ್ನು ಅವರು ಒಡನೆ ಕಾರ್, ಬಟ್ಟೆಬರೆ, ಸ್ಟೀರಿಯೊ ಮತ್ತು ಯುವಜೀವನದ ಇತರ ಹಿತಕರ ವಸ್ತುಗಳನ್ನು ಪಡೆಯಲು ಉಪಯೋಗಿಸಿದರು.”
ಲೇಖಕ ಬ್ರೂಸ್ ಬಾಲ್ವ್ಡಿನ್ ಗಮನಿಸುವಂತೆ, ಇಂಥ ಯುವಜನರು, “ತಾವು ಸ್ವಂತ ಜವಾಬ್ದಾರಿ ಮತ್ತು ಸಾಧನಾಪ್ರೇರಣೆಯನ್ನು ಬೆಳೆಸಲಿ, ಬೆಳೆಸದಿರಲಿ, ಒಳ್ಳೆಯ ಜೀವನ ಬೇಕಾದಾಗ ತಮಗೆ ದೊರೆಯುತ್ತದೆ. . . ಎಂಬ ಹಾರೈಕೆಯಿಂದ ಬೆಳೆಯುತ್ತಾರೆ.” ಆದರೆ, “ಮನೆಬಿಟ್ಟು ಹೋಗುವಾಗ ಅವರಿಗೆ ಒರಟಾಗಿ ನಿದ್ರೆಯಿಂದ ಎಬ್ಬಿಸಲ್ಪಟ್ಟ ಅನುಭವವಾಗುತ್ತದೆ. ಕೃತಕ ಗೃಹ ಪರಿಸರವು ಮಾರ್ಕೆಟ್ಟಿನ ನಿಜ ನಿರೀಕ್ಷೆಗಿಂತ ಮತ್ತು ಪಕ್ವತೆಯ ವಯಸ್ಕ ಕೆಲಸ ನಡಿಸುವಿಕೆಗಿಂತ ಎಷ್ಟು ದೂರ ಸರಿದಿರಬಹುದೆಂದರೆ ಅವರಿಗೆ ಅದರಿಂದಾಗಿ ಸಂಸ್ಕೃತಿ ಅಕರ್ಮಣ್ಯತೆಯಂಥ ಅನುಭವವಾಗಬಹುದು.”
ಬದಲಾಗುತ್ತಿರುವ ನೈತಿಕ ನಿಯಮಗಳು ಮತ್ತು ಮೌಲ್ಯಗಳು
ನೈತಿಕತೆ ಮತ್ತು ಇತರ ಮೌಲ್ಯಗಳಲ್ಲಿ ಆಗಿರುವ ನಾಟಕೀಯ ಬದಲಾವಣೆಯೂ ಯುವಜನರ ಗಲಿಬಿಲಿಗೆ ಕಾರಣವಾಗಿದೆ. ಶ್ರೀಲಂಕದ ರಮಣಿ ಎಂಬ ಯುವತಿ ಹೇಳುವುದು: “ನನ್ನ ಅಜಿಯ್ಜ ಯೌವನದಲ್ಲಿ . . . ಸಂಭೋಗ ಎಂಬುದು ಕೇಳಿಲ್ಲದ ಪದವಾಗಿತ್ತು. ವಿವಾಹದಲ್ಲಿ ಸಂಭೋಗ ಕುಟುಂಬದಲ್ಲಿ ಯಾ ಡಾಕ್ಟರರೊಂದಿಗೆ ಚರ್ಚಿಸಲ್ಪಡುತ್ತಿರಲಿಲ್ಲ ಮತ್ತು ವಿವಾಹಬಾಹ್ಯ ಸಂಭೋಗ ಅಸ್ತಿತ್ವದಲ್ಲೆ ಇರಲಿಲ್ಲ.” ಆದರೆ ಈಗ ಈ ಹಳೆಯ ನಿಷೇಧಗಳು ಹೆಚ್ಚುಕಡಿಮೆ ಇಲ್ಲದೆ ಹೋಗಿವೆ. “ಹದಿಪ್ರಾಯದವರ ಮಧ್ಯೆ ಸಂಭೋಗ ಈಗ ಸುಮಾರಾಗಿ ಜೀವನರೀತಿಯೆ ಆಗಿದೆ” ಎನ್ನುತ್ತಾಳೆ ಆಕೆ.
ಅಮೆರಿಕದ 510 ಹೈಸ್ಕೂಲ್ ವಿದ್ಯಾರ್ಥಿಗಳ ಒಂದು ಸರ್ವೆಯಲ್ಲಿ ಅವರ ಎರಡನೆಯ ನಂಬ್ರದ ಚಿಂತೆ “ತಮಗೆ ಏಯ್ಡ್ಸ್ ತಟ್ಟಬಹುದು” ಎಂಬುದಾಗಿತ್ತು ಎಂಬುದರಲ್ಲಿ ಆಶ್ಚರ್ಯವಿಲ್ಲ! ಆದರೆ ಈಗ ಈ ದ್ವಾರ ತೀರಾ ತೆರೆಯಲ್ಪಟ್ಟಿರುವಾಗ ಅದನ್ನು ಏಕಪತ್ನಿತದ್ವಿಂದಾಗಲಿ, ಮದುವೆಯ ತನಕ ಕಾಯುವುದರಿಂದಾಗಲಿ ಮುಚ್ಚುವ ಗಂಭೀರ ರೀತಿಯ ಮಾತುಕತೆಯ ಮನಸ್ಸಿರುವ ಯುವಜನರು ಕೇವಲ ವಿರಳವೆಂದು ಕಾಣುತ್ತದೆ. ಒಬ್ಬ ಫ್ರೆಂಚ್ ಯುವಕ ಕೇಳಿದ್ದು: “ನಮ್ಮ ಈ ವಯಸ್ಸಿನಲ್ಲಿ ನಾವು ಪೂರ್ತಿ ಜೀವನದಲ್ಲಿ ನಂಬಿಗಸ್ತರಾಗಿರಲು ವಚನ ಕೊಡಬಹುದೇ?” ಏಯ್ಡ್ಸ್ ಮತ್ತು ಇತರ ಸಂಭೋಗ ರವಾನಿತ ರೋಗಗಳು ಹೀಗೆ ಅನೇಕ ಯುವಜನರ ಜೀವ ಮತ್ತು ಆರೋಗ್ಯಕ್ಕೆ ಅಪಾಯವನ್ನು ತರುತ್ತಾ ಮುಂದುವರಿಯುವುವು.
ಯಾವ ವಿಧದ ಭವಿಷ್ಯ?
ಯುವಜನರನ್ನು ಕಾಡುತ್ತಿರುವ ಇನ್ನೊಂದು ಚಿಂತೆಯಿದೆ. ಹಾಳಾಗಿರುವ ಭೂಮಿಯನ್ನು,—ಓಸೋನ್ ಕಡಿಮೆಯಾಗಿರುವ, ಭೂವ್ಯಾಪಕವಾದ ಹಸುರುಮನೆಯ ಪರಿಣಾಮದಿಂದಾಗಿ ಉಷ್ಣವೇರಿರುವ, ಹುಲುಸಾದ ಕಾಡುಗಳು ಬರಿದಾಗಿರುವ, ವಾಯು ಮತ್ತು ನೀರು ಉಸಿರಾಡಲು ಅನರ್ಹವಾಗಿರುವ ಭೂಮಿಯನ್ನು—ಬಾಧ್ಯತೆಯಾಗಿ ಪಡೆಯುವ ಚಿಂತೆ ಅನೇಕ ಯುವಕರಿಗಿದೆ. ಪ್ರಸ್ತುತ ಕಮ್ಮಿಯಾದರೂ, ನ್ಯೂಕ್ಲಿಯರ್ ಯುದ್ಧಭಯವು, ಕೆಲವರು ಮಾನವಸಂತತಿಗೆ ಭವಿಷ್ಯ ಇದ್ದೀತೇ ಎಂದು ಕೇಳುವಂತೆ ಮಾಡುತ್ತದೆ!
ಹಾಗಾದರೆ, ಯುವಜನರ ಎದುರು ಭಾರೀ ಪಂಥಾಹ್ವಾನವಿದೆ ಎಂಬುದು ಸ್ಪಷ್ಟ. ಸಹಾಯ, ನಿರ್ದೇಶನ ಮತ್ತು ಮಾರ್ಗದರ್ಶನವಿಲ್ಲದಿರುವಲ್ಲಿ ಅವರ ಈಗಿನ ಮತ್ತು ಭಾವೀ ಸಂತೋಷಕ್ಕೆ ಗಂಭೀರವಾದ ಅಪಾಯವಿದೆ. ಮತ್ತು, ಭಾವೀ ನಿರೀಕ್ಷೆ ಇಲ್ಲದಿರುವಲ್ಲಿ ಭದ್ರತೆಯ ಅನುಭವವನ್ನು ಪಡೆಯ ಸಾಧ್ಯವಿಲ್ಲ. ಆದರೆ, ಸುಭಾಗ್ಯವಶಾತ್, ಇಂದಿನ ಯುವಜನರಿಗೆ ಸಹಾಯ ಸುಲಭ್ಯವಾಗಿದೆ. (g90 9/8)
[ಅಧ್ಯಯನ ಪ್ರಶ್ನೆಗಳು]
a ವಿಕಾಸಗೊಳ್ಳುತ್ತಿರುವ ದೇಶಗಳ ಯುವಜನರ ಈ ಮತ್ತು ಇತರ ಉಲ್ಲೇಖಗಳನ್ನು ಮಾರ್ಚ್ 1989ರ ವರ್ಲ್ಡ್ ಹೆಲ್ತ್ ಪತ್ರಿಕೆಯಿಂದ ತೆಗೆಯಲಾಗಿದೆ.
[ಪುಟ 6 ರಲ್ಲಿರುವಚಿತ್ರ]
ವಿವಾಹ ವಿಚ್ಛೇದನೆ ಮತ್ತು ಗಂಡಹೆಂಡಿರ ಪ್ರತ್ಯೇಕವಾಸದ ಮೂಲಕ ಕುಟುಂಬಗಳು ಒಡೆಯುವದರಿಂದ ಅನೇಕ ಯುವ ಜನರಿಗೆ ಅವಶ್ಯವಾಗಿರುವ ಹೆತ್ತವರ ಬೆಂಬಲವು ಅಪಹರಿಸಲ್ಪಟ್ಟಿದೆ