ಲೋಕದಲ್ಲಿ ಅತ್ಯಂತ ಅಮೂಲ್ಯವಾದ ದ್ರವ
ರಕ್ತ ಪೂರಣಗಳನ್ನು ಹೆಚ್ಚಾಗಿ ಲೋಭದ ಕೈಗಾರಿಕೆಯ ಅಪಾಯಕಾರಿ ಮತ್ತು ಅನಾವಶ್ಯಕ ಉತ್ಪನ್ನಗಳೆಂದು ತಳ್ಳಿಹಾಕಬಹುದಾದರೂ, ಯೆಹೋವನ ಸಾಕ್ಷಿಗಳು ಅವನ್ನೇಕೆ ನಿರಾಕರಿಸುತ್ತಾರೆಂದು ಅದಿನ್ನೂ ವಿವರಿಸುವುದಿಲ್ಲ. ಅವರ ಕಾರಣಗಳು ಪೂರಾರೀತಿಯಲ್ಲಿ ಬೇರೆಯಾಗಿವೆ ಮತ್ತು ಎಷ್ಟೋ ಹೆಚ್ಚು ಮಹತ್ವದ್ದು. ಅವು ಯಾವುವು?
ರಕ್ತದ ಒಂದು ತಟಕನ್ನು ಹಗುರವೆಂದು ಎಣಿಸುವದು ಬಹು ಸುಲಭ. ಪರಚಿದಾಗ ಇಲ್ಲವೇ ಸೂಜಿ ಚುಚ್ಚಿದಾಗ, ಹೊಳೆಯುವ ಚಿಕ್ಕ ಕೆಂಪು ಗೋಲವಾಗಿ ಅದು ಹೊರಚಿಮ್ಮುತ್ತದೆ ಮತ್ತು ನಾವದನ್ನು ತೊಳೆದು ತೆಗೆಯುತ್ತೇವೆ ಇಲ್ಲವೇ ಯಾವ ಪರವೆಯೂ ಇಲ್ಲದೆ ಒರಸಿಬಿಡುತ್ತೇವೆ.
ಆದರೆ ಒಂದುವೇಳೆ ನಾವು ನಮ್ಮನ್ನು ಅತಿ ಚಿಕ್ಕವರಾಗಿ ಸಂಕುಚಿಸಿಕೊಂಡು ಈ ಗೋಲವು ನಮ್ಮ ಮೇಲೆ ಬೆಟ್ಟದಾಕಾರದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದಲ್ಲಿ, ಅದರ ರಕ್ತವರ್ಣದಾಳದಲ್ಲಿ ವಿಸ್ಮಯಕರವಾದ ಸಂಕೀರ್ಣತೆ ಮತ್ತು ಕ್ರಮಬದ್ಧತೆಯ ಜಗತ್ತನ್ನೇ ಕಾಣುವೆವು. ಆ ಒಂದೇ ಒಂದು ತಟಕಿನೊಳಗೆ ಕಣಸಮೂಹದ ಮಹಾ ಸೇನೆಯೇ ತುಳುಕುತ್ತದೆ: 25,00,00,000 ಕೆಂಪು ರಕ್ತ ಕಣಗಳು, 4,00,000 ಬಿಳಿ ರಕ್ತ ಕಣಗಳು, ಮತ್ತು 1,50,00,000 ಕಿರುಫಲಕಗಳು ಎದುರಿನ ಸಾಲಿನಲ್ಲಿರುವವುಗಳು. ರಕ್ತ ಪ್ರವಾಹದಲ್ಲಿ ಕಾರ್ಯಕ್ಕಿಳಿಸಲ್ಪಟ್ಟಾಗ, ಪ್ರತಿಯೊಂದು ಸೇನೆಯು ತನ್ನ ಪ್ರತ್ಯೇಕ ಪ್ರತ್ಯೇಕ ಕೆಲಸಕ್ಕೆ ತಟ್ಟನೆ ಇಳಿಯುತ್ತದೆ.
ಕೆಂಪು ಕಣಗಳು ನರವ್ಯೂಹದ ಜಟಿಲವಾದ ಜಾಲಬಂಧದೊಳಗೆ ಧಾವಿಸುತ್ತಾ, ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಪ್ರತಿ ಕಣಕ್ಕೆ ಒಯ್ಯುತ್ತವೆ ಮತ್ತು ಆಂಗಾರಾಮ್ಲವನ್ನು ಹೊರಗೆಳೆಯುತ್ತವೆ. ಈ ಕಣಗಳು ಎಷ್ಟು ಚಿಕ್ಕವೆಂದರೆ ಇವುಗಳಲ್ಲಿ 500ರ ಒಂದು ರಾಶಿಯು ಬರೇ 0.1 ಸೆಂಟಿಮೀಟರ್ ಎತ್ತರವಿರುವದು. ಆದರೂ, ನಿಮ್ಮ ದೇಹದಲ್ಲಿರುವ ಎಲ್ಲಾ ಕೆಂಪು ಕಣಗಳನ್ನು ಒಟ್ಟಿಗೆ ರಾಶಿ ಮಾಡುವದಾದರೆ, ಅದು 50,000 ಕಿಲೊಮೀಟರುಗಳಷ್ಟು ಮೇಲೇರುವದು! ಸುಮಾರು 120 ದಿನಗಳ ತನಕ ದಿನಕ್ಕೆ 1,440 ಸಾರಿ ದೇಹದಲ್ಲೆಲ್ಲೂ ಸಂಚಾರ ಮಾಡಿದ ಬಳಿಕ ಕೆಂಪು ರಕ್ತಕಣವು ಉದ್ಯೋಗದಿಂದ ನಿವೃತ್ತಿಯಾಗುತ್ತದೆ. ಅದರ ಕಬ್ಬಿಣ-ಸಾರವುಳ್ಳ ತಿರುಳು ಪರಿಣಾಮಕಾರಿಯಾಗಿ ಮರುಚಕ್ರೀಕರಿಸಲ್ಪಡುತ್ತದೆ ಮತ್ತು ಉಳಿದದ್ದು ತೆಗೆಯಲ್ಪಡುತ್ತದೆ. ಪ್ರತಿ ಸೆಕೆಂಡಿನಲ್ಲಿ ಮೂರು ಮಿಲಿಯ ಕೆಂಪು ಕಣಗಳು ತೆಗೆಯಲ್ಪಡುತ್ತವೆ ಮತ್ತು ಅಷ್ಟೇ ಸಂಖ್ಯೆಯಲ್ಲಿ ಹೊಸ ಕಣಗಳು ಮಜ್ಜೆಯಲ್ಲಿ ತಯಾರಿಸಲ್ಪಡುತ್ತವೆ. ಕೆಂಪು ಕಣಗಳು ನಿವೃತ್ತಿಯಾಗುವ ಯೋಗ್ಯ ಪ್ರಾಯವನ್ನು ತಲಪಿವೆಂದು ದೇಹಕ್ಕೆ ತಿಳಿಯುವದು ಹೇಗೆ? ವಿಜ್ಞಾನಿಗಳನ್ನೇ ಅದು ದಿಗ್‌ಭ್ರಮೆಗೊಳಿಸಿದೆ. ಆದರೆ ಈ ಹಳೇ ಕೆಂಪು ಕಣಗಳ ಸ್ಥಾನಪಲ್ಲಟ ವ್ಯವಸ್ಥೆಯ ಇಲ್ಲದಿರುತ್ತಿದ್ದರೆ, ಒಬ್ಬ ರಸಾಯನ ವಿಜ್ಞಾನಿಗನುಸಾರ, “ನಮ್ಮ ರಕ್ತವು ಕೆಲವೇ ವಾರಗಳಲ್ಲಿ ಜಲ್ಲಿಗಾರೆಯಷ್ಟು ದಪ್ಪವಾಗುವದು.”
ಈ ಮಧ್ಯೆ, ಬಿಳಿ ಕಣಗಳು ದೇಹವನ್ನು ಹೊಂಚುತ್ತಾ, ಬೇಕಾಗದ ಆಕ್ರಮಣಗಾರರನ್ನು ಹುಡುಕಿ, ನಾಶಪಡಿಸುತ್ತವೆ. ಎಲ್ಲಿ ಗಾಯವಾಗುತ್ತದೋ ಅಲ್ಲಿ ಕಿರುಫಲಕಗಳು ಆ ಕೂಡಲೇ ಧಾವಿಸಿ, ಹೆಪ್ಪುಗಟ್ಟಿಸುವ ಮತ್ತು ಬಿರುಕನ್ನು ಮುಚ್ಚುವ ಕಾರ್ಯಗತಿಗೆ ತೊಡಗುತ್ತವೆ. ಈ ಎಲ್ಲಾ ಕಣಗಳು ಒಂದು ತಿಳಿಯಾದ, ದಂತವರ್ಣದ ದ್ರವವಾದ ರಕ್ತರಸದಲ್ಲಿ ಕೂಡಿರುತ್ತವೆ, ರಕ್ತರಸವು ತಾನೇ ನೂರಾರು ತರದ ಅಂಗಾಂಶಗಳಿಂದ ಮಾಡಲ್ಪಟ್ಟಿದ್ದು, ಅವುಗಳಲ್ಲಿ ಹೆಚ್ಚಿನವು ರಕ್ತದ ಕೆಲಸಗಳ ದೀರ್ಘ ಪಟ್ಟಿಯನ್ನು ನಿರ್ವಹಿಸುವದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ.
ವಿಜ್ಞಾನಿಗಳು ತಮ್ಮೆಲ್ಲಾ ಸಂಯೋಜಿತ ಬುದ್ಧಿಶಕ್ತಿಯಿಂದ, ರಕ್ತದ ದ್ವಿಪ್ರತಿಯನ್ನು ಮಾಡುವದಂತೂ ಬಿಡಿ, ಅದು ಮಾಡುವ ಕಾರ್ಯಗತಿಯೆಲ್ಲವನ್ನು ತಿಳುಕೊಳ್ಳಲೂ ಅಸಮರ್ಥರಾಗಿರುತ್ತಾರೆ. ಈ ಆಶ್ಚರ್ಯಕರವಾದ ಸಂಕೀರ್ಣ ದ್ರವವು ಚತುರ ಶಿಲ್ಪಿಯೊಬ್ಬನ ಕೈಕೆಲಸವೇ ಆಗಿರಬಹುದೋ? ಮತ್ತು ಈ ಅತಿಮಾನುಷ ನಿರ್ಮಾಣಿಕನಿಗೆ ತನ್ನ ನಿರ್ಮಿತಿಗಳನ್ನು ಹೇಗೆ ಕ್ರಮಪಡಿಸಬೇಕೆಂಬ ಎಲ್ಲಾ ಹಕ್ಕಿದೆಯೆಂಬದು ವಿವೇಚನೆಗೆ ಯೋಗ್ಯವಲ್ಲವೇ?
ಯೆಹೋವನ ಸಾಕ್ಷಿಗಳು ಯಾವಾಗಲೂ ಹಾಗೆಂದು ನೆನಸಿರುತ್ತಾರೆ. ಅವರು ಬೈಬಲನ್ನು, ಶಕ್ಯವಾದ ಅತ್ಯುತ್ತಮ ಜೀವನವನ್ನು ನಡಿಸಲು ಬೇಕಾದ ಮಾರ್ಗದರ್ಶಕಗಳು ಒಳಗೂಡಿರುವ ನಮ್ಮ ನಿರ್ಮಾಣಿಕನ ಪತ್ರವಾಗಿ ವೀಕ್ಷಿಸುತ್ತಾರೆ; ರಕ್ತದ ಈ ವಿಷಯದಲ್ಲಿ ಅದು ಮೌನವಾಗಿರುವ ಗ್ರಂಥವಲ್ಲ. ಯಾಜಕಕಾಂಡ 17:14 (NW) ಹೇಳುವುದು: “ಪ್ರತಿ ದೇಹಿಯ ಆತ್ಮವು ಅದರ ರಕ್ತದಲ್ಲಿದೆ”—ಅಕ್ಷರಶಃವಾಗಿ ಅಲ್ಲ, ಯಾಕಂದರೆ ಜೀವಿಸುವ ಅಂಗಾಂಶಗಳು ಸ್ವತಃ ಒಂದು ಆತ್ಮವಾಗಿದೆ ಎಂದು ಬೈಬಲು ಹೇಳುತ್ತದೆ. ಬದಲಿಗೆ, ಆತ್ಮಗಳ ಜೀವವೆಲ್ಲವೂ ಅವರಲ್ಲಿರುವ ರಕ್ತದಿಂದ ಎಷ್ಟು ಜಟಿಲವಾಗಿ ಹೆಣೆಯಲ್ಪಟ್ಟಿವೆ ಮತ್ತು ಪೋಷಿತವಾಗಿವೆಯೆಂದರೆ, ಜೀವವನ್ನು ಪ್ರತಿನಿಧಿಸುವ ಒಂದು ಪವಿತ್ರ ದ್ರವವಾಗಿ ರಕ್ತವನ್ನು ಯುಕ್ತವಾಗಿಯೇ ಪರಿಗಣಿಸಲಾಗುತ್ತದೆ.
ಕೆಲವರಿಗಾದರೋ ಇದನ್ನು ತಿಳುಕೊಳ್ಳಲು ಕಷ್ಟವಾಗಿದೆ. ಕೊಂಚವೇ ವಸ್ತುಗಳು ಪವಿತ್ರವಾಗಿ ಪರಿಗಣಿಸಲ್ಪಡುವ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. ಜೀವವನ್ನು ಹೇಗೆ ಬೆಲೆಯುಳ್ಳದ್ದೆಂದು ಪರಿಗಣಿಸಬೇಕೋ ಹಾಗೆ ಎಣಿಸಲ್ಪಡುವುದು, ಬಹಳ ಅಪರೂಪ. ಹೀಗಿರಲಾಗಿ, ರಕ್ತವನ್ನು ಬೇರೆ ಯಾವುದೇ ಸರಕಿನಂತೆ ಮಾರುವುದು ಮತ್ತು ಕೊಳ್ಳುವದರಲ್ಲಿ ಏನೂ ಆಶ್ಚರ್ಯವಿಲ್ಲ. ಆದರೆ, ನಿರ್ಮಾಣಿಕನ ಇಷ್ಟಗಳನ್ನು ಗೌರವಿಸುವವರು ಅದನ್ನು ಆ ರೀತಿಯಲ್ಲಿ ಉಪಚರಿಸುವದಿಲ್ಲ. ‘ನೀವು ರಕ್ತವನ್ನು ತಿನ್ನಬಾರದು’ ಎಂಬ ಆಜ್ಞೆಯನ್ನು ನೋಹನಿಗೆ ಮತ್ತು ಅವನ ಸಂತತಿಯವರಿಗೆ—ಮಾನವ ಕುಲದ ಎಲ್ಲರಿಗೆ ಕೊಡಲಾಗಿದೆ. (ಆದಿಕಾಂಡ 9:4) ಎಂಟು ಶತಮಾನಗಳ ಅನಂತರ ಆತನು ಆ ಆಜ್ಞೆಯನ್ನು ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ತನ್ನ ನಿಯಮದಲ್ಲಿ ಸೇರಿಸಿದನು. ಮತ್ತು ಹದಿನೈದು ಶತಕಗಳು ಕಳೆದ ಮೇಲೆ ಅತನು ಪುನೊಮ್ಮೆ ಕ್ರೈಸ್ತ ಸಭೆಗೆ ಅದನ್ನು ದೃಢೀಕರಿಸಿದನು: ‘ರಕ್ತವನ್ನು ವರ್ಜಿಸಿರಿ.’—ಅ.ಕೃ. 15:20.
ಯೆಹೋವನ ಸಾಕ್ಷಿಗಳು ಆ ನಿಯಮವನ್ನು ಮುಖ್ಯವಾಗಿ ಪಾಲಿಸುವದು ಯಾಕೆಂದರೆ ತಮ್ಮ ನಿರ್ಮಾಣಿಕನಿಗೆ ವಿಧೇಯರಾಗಲು ಅವರು ಬಯಸುವದರಿಂದಲೇ. ತನ್ನ ಸ್ವಂತ ಪ್ರಿಯ ಕುಮಾರನ ಯಜ್ಞಾರ್ಪಿತ ಮರಣದ ಮೂಲಕ ಆತನು ಮಾನವ ಕುಲಕ್ಕೆ ಜೀವರಕ್ಷಕ ರಕ್ತವನ್ನು ಒದಗಿಸಿದ್ದಾನೆ. ಅದು ಜೀವದಾಯುಷ್ಯವನ್ನು ಕೇವಲ ಕೆಲವು ತಿಂಗಳು ಅಥವಾ ವರ್ಷಗಳಿಗಾಗಿ ಅಲ್ಲ, ಸದಾಕಾಲಕ್ಕಾಗಿ ಹೆಚ್ಚಿಸುವದು.—ಯೋಹಾನ 3:16; ಎಫೆ. 1:7.
ಅದಲ್ಲದೆ, ರಕ್ತಪೂರಣಗಳನ್ನು ವರ್ಜಿಸುವ ಮೂಲಕ ಸಾಕ್ಷಿಗಳು ಹಲವಾರು ತರದ ಅಪಾಯಗಳಿಂದ ರಕ್ಷಿಸಲ್ಪಟ್ಟಿದ್ದಾರೆ. ಯೆಹೋವನ ಸಾಕ್ಷಿಗಳಲ್ಲದೆ ಬೇರೆ ಅನೇಕಾನೇಕ ಜನರೂ ಈಗ ರಕ್ತ ಪೂರಣಗಳನ್ನು ನಿರಾಕರಿಸುತ್ತಿದ್ದಾರೆ. ನಿಧಾನವಾಗಿ ವೈದ್ಯಕೀಯ ಸಮಾಜವು ಪ್ರತಿಕ್ರಿಯೆ ತೋರಿಸುತ್ತಾ, ತನ್ನ ರಕ್ತದುಪಯೋಗವನ್ನು ಕಡಿಮೆಗೊಳಿಸುತ್ತಾ ಇದೆ. ಸರ್ಜರಿ ಅನ್ಯುವಲ್ ಹೇಳಿದ ಹಾಗೆ: “ವ್ಯಕ್ತವಾಗಿ, ಕೊಡದೇ ಇದ್ದ ಪೂರಣವೇ ಅತ್ಯಂತ ಸುರಕ್ಷಿತ ಪೂರಣ.” ಯೆಹೋವನ ಸಾಕ್ಷಿಗಳು ಬಹಳ ಕಾಲದಿಂದ ರಕ್ತಪೂರಣಗಳು ಉಪಯುಕ್ತ ಚಿಕಿತ್ಸೆಯಲ್ಲವೆಂದು ಒತ್ತಿಹೇಳಿದ್ದಾರೆ ಎಂದು ಪೆಥಾಲಜಿ ಪತ್ರಿಕೆಯು ಗಮನಿಸಿದೆ. ಅದು ಕೂಡಿಸಿದ್ದು: “ಅವರ ವಾದವನ್ನು ಬೆಂಬಲಿಸಲು ಗಮನಾರ್ಹ ರುಜುವಾತು ಅಲ್ಲಿದೆ, ರಕ್ತನಿಧಿಗಳವರ ಪ್ರತಿವಾದಗಳು ಅದಕ್ಕೆ ಪ್ರತಿಕೂಲವಾಗಿದ್ದರೂ.”
ನೀವು ಯಾರಲ್ಲಿ ಹೆಚ್ಚು ಭರವಸವಿಡುವಿರಿ? ರಕ್ತವನ್ನು ರಚಿಸಿದಾತನಾದ ಸರ್ವಜ್ಞಾನಿಯಲ್ಲೋ ಅಥವಾ ರಕ್ತ ವಿಕ್ರಯವನ್ನು ಒಂದು ದೊಡ್ಡ ವ್ಯಾಪಾರವಾಗಿ ಮಾಡಿರುವ ಜನರಲ್ಲೋ? (g90 10/22)
[ಪುಟ 15 ರಲ್ಲಿರುವಚಿತ್ರ]
ಮನುಷ್ಯನ ರಕ್ತ ಪರಿಚಲನಾಂಗ ವ್ಯೂಹದಲ್ಲಿ, ಲೋಮನಾಳ (ಒಳಸೇರಿಕೆ)ಗಳು ಎಷ್ಟು ಸೂಕ್ಷ್ಮವಾಗಿವೆಯೆಂದರೆ, ರಕ್ತಕಣಗಳು ಅವುಗಳ ಮೂಲಕ ಒಂದರಹಿಂದೊಂದರಂತೆ ಸಾಲಾಗಿ ಹೋಗುವಂತೆ ನಿರ್ಬಂಧಿಸಲ್ಪಡುತ್ತವೆ